ಅಮ್ಮಾ, ನೀವೆನಗೆ ಮಾತೆ ಕೌಸಲ್ಯೆಯಂತೆ!

30 ಜುಲೈ 10

 

ಅಮ್ಮಾ, ನಾನು ಶ್ರೀರಾಮನಂಥ ಮಗನಲ್ಲದೇ ಇರಬಹುದು

ಆದರೆ ನೀವು ನನಗೆ ನಿಜವಾಗಿ ಆ ಮಾತೆ ಕೌಸಲ್ಯೆಯಂತೆ

 

ದೂರದಲ್ಲಿರುವಿಬ್ಬರು ನನಗೆ ಲಕ್ಷ್ಮಣ-ಶತ್ರುಘ್ನರಲ್ಲದಿರಬಹುದು

ಕೊನೆಯ ಸಹೋದರ ನನಗೆ ನಿಜವಾಗಿಯೂ ಆ ಭರತನಂತೆ

 

ನನ್ನ ವನವಾಸ ಇನ್ನೂ ಮುಗಿದಿಲ್ಲ ನಾನಿನ್ನೂ ನಿಮ್ಮಿಂದ ದೂರ

ಅದರಿಂದಾಗಿ ಆತನೇ ಹೊತ್ತಿದ್ದಾನೆ ನನ್ನ ಜವಾಬ್ದಾರಿಗಳ ಭಾರ

 

ನಿಮ್ಮ ಸೇವೆಯ ಭಾಗ್ಯವಿಲ್ಲವಲ್ಲ ಅನ್ನುವುದೇ ಈ ಮನದಿ ಪಿಡುಗು

ಆತನ ಮೇಲಿನ ನಂಬಿಕೆಯಿಂದ ಕಡಿಮೆ ಆಗುವುದೆನ್ನ ಕೊರಗು

 

ನೀವು ಅಲ್ಲಿ ನಗು ನಗುತ್ತಾ ಬಾಳುತ್ತಿದ್ದರೆ ನನಗೂ ನೆಮ್ಮದಿ ಇಲ್ಲಿ

ನೀವೇ ಮನ ನೋಯಿಸಿಕೊಳ್ಳುತ್ತಿದ್ದರೆ ಏನಿದೆ ನನ್ನೀ ಬಾಳಲ್ಲಿ?

 

ರಾಮನಿಗಷ್ಟೇ ಅಲ್ಲ ಭರತನಿಗೂ ನೀವಿರಬೇಕು ಕೌಸಲ್ಯೆಯಾಗಿ

ಬಿರುಕು ಮೂಡಿಸದಿರಿ ಸಹೋದರರ ಮನದಲ್ಲಿ ಕೈಕೇಯಿಯಾಗಿ

 

ದೂರದಲಿ ಕೂತವರು ಕರೆ ಮಾಡಿ ನಿಮ್ಮ ಮನ ಮೆಚ್ಚಿಸಬಹುದು

ಅಲ್ಲಿ ಜೊತೆಯಲ್ಲಿರುವವರಿಗೆ ಜವಾಬ್ದಾರಿಯ ಎಚ್ಚರ ಸದಾ ಇಹುದು

 

ಆಡಿ ಮರೆತುಬಿಡೋ ಮಾತುಕತೆಗಳಿಗಿಂತ ಭಾವನೆಗಳೇ ಮುಖ್ಯ

ಭಾವನೆಗಳೇ ಅರ್ಥ ಆಗದಿದ್ದರೆ ಅಪ್ರಯೋಜಕ ಯಾವುದೇ ಸಖ್ಯ

****************


ನೀ ಬೇಡವೆಂದರೂ ನಾನಿನ್ನ ಹಿಂದೆಯೇ ಇರುವೆ!

30 ಜುಲೈ 10

 

ಮಕ್ಕಳ ಮುಗ್ಧ

ಆಪಾದನೆಗಳಿಗೆಲ್ಲಾ ಅಪ್ಪಂದಿರು ಕೊರಗುವುದಿಲ್ಲ

 

ಅಪ್ಪನನೇ ಅಹಂಕಾರಿ

ಎಂದರೂ ಆತನ “ಅಹಂ” ಗೆ ಬಾಧೆಯಿಲ್ಲ

 

ಒಳಗೊಳಗೇ ನಗು

ನೀನಿನ್ನೂ ಮಗು ನಿನಗೆಲ್ಲಾ ಅರಿವಾಗುವುದಿಲ್ಲ

 

ಸಮಾಜದ ಕಾಟಗಳ

ಅರಿವು ಚೆನ್ನಾಗಿ ಇಹುದೆನಗೆ ಅದು ಸುಳ್ಳಲ್ಲ

 

ಅದನ್ನೆಲ್ಲಾ ಒಂದೊಂದಾಗಿ

ಬಿಡಿಸಿ ಹೇಳಲೂ ಮಗಳೇ ಇದು ಸಕಾಲವಲ್ಲ

 

ಬಿಸಿನೀರಿನಿಂದ ತನ್ನ

ಕೈಸುಟ್ಟುಕೊಂಡವ ತಣ್ಣೀರಿಗೆ ಭಯಪಡುವನಲ್ಲ?

 

ಹಾಗೆಯೇ ಎಲ್ಲರೂ

ಎಲ್ಲವನೂ ಅನುಭವಿಸಿಯೇ ಅರಿಯಬೇಕಾಗಿಲ್ಲ

 

ನಿನ್ನ ಆಸೆ ನಿನ್ನ ಛಲ

ಬೇಡವೆನ್ನಲಾರೆ, ಆದರೆನ್ನ ಮಾತನ್ನೊಮ್ಮೆ ಕೇಳಿ ಬಿಡು

 

ನೀ ಬೇಡವೆಂದರೂ ನಾನಿನ್ನ

ಹಿಂದೆಯೇ ಇರುವೆ, ಇನ್ನು ಹೇಳದಿರು “ಅಪ್ಪಾ … ದಾರಿ ಬಿಡು”!

**********************


ಮಗೂ, ಅಂದು ನಾ ದಾರಿ ಬಿಡುವೆ!

29 ಜುಲೈ 10
 
 “ನಿನ್ನ ಮೋಹದಿ ನನ್ನ ಬಂಧಿಸಿ

ಈ ಕತ್ತಲಲಿ ಕೂರಿಸದಿರು

ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು”

 

“ಸುಳ್ಳಲ್ಲ ಮಗು ನಿನ್ನ ಮಾತು

ಅಪ್ಪಂದಿರ ಆಂತರಿಕ ಆತಂಕ

ಇಂದಿನ ಮಗುವಿಗೆ ಹೇಗೆ ಅರಿವಾಗಬೇಕು

 

ಮಗೂ ಸ್ವಾತಂತ್ರ್ಯ ಬೇಕು

ಸ್ವತಂತ್ರರಿಗೂ ಬೇಲಿ ಬೇಕು

ಸ್ವಾತಂತ್ರ್ಯದ ಪರಿಧಿಯಲಿ ನಿನ್ನಪ್ಪನಿರಬೇಕು

 

ಎಲ್ಲವನೂ ಹರಿದೊಗೆದು

ಒದ್ದು ನಡೆದರೆ ಮುಂದೆ

ಸಮಾಜದ ಮುಂದೆ ಬತ್ತಲಾಗಿ ನಿಲಬೇಕು

 

ನಿನ್ನ ಅರಿವಿನ ಮಟ್ಟ

ನೀನರಿತದ್ದೇ ಅಲ್ಲ ಈ ಅಪ್ಪನೂ

ಅರಿಯಬೇಕು ಅರಿತಂದು ನಿನಗೀತ ದಾರಿ ಬಿಡಬೇಕು”

************************


ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!

29 ಜುಲೈ 10

 

 

ಸಖಿ, ನಂಬುಗೆಯೇ ದೀವಿಗೆಯು, ನಿನ್ನ ಆತ್ಮಬಲವು,

ಇರಲಿ ನಿನ್ನ ಬೆಂಬಲಕೆ ಸದಾ ನಿನ್ನೊಳಗಿನ ಛಲವು,

 

ಎಂದಿಗೂ ಶಾಶ್ವತವಲ್ಲ ಇಲ್ಲಿನವರಿವರ ಆಸರೆಯು,

ಎಷ್ಟೇ ಬಿಗಿಯಾಗಿ ಇದ್ದರೂ ನಿನ್ನ ಕೈಯ ಹಿಡಿತವು,

 

ಎದ್ದು ನಡೆ, ನೀ ಒದ್ದು ನಡೆ ಬಂಧನದ ಗೋಡೆಗಳ,

ಸದಾ ತೆರೆದಿಟ್ಟುಕೊಂಡಿರು, ನಿನ್ನ ಈ ಕಣ್ಣು ಕಿವಿಗಳ,

 

ಆತ್ಮಕ್ಕೆ ಪರಮಾತ್ಮನ ಆಸರೆಯೊಂದೇ ಶಾಶ್ವತವು,

ಪರಮಾತ್ಮ ಹೊರಗಿಲ್ಲ, ಬೇಕು ಇದನರಿವ ಮನವು,

 

ಇಲ್ಲಿ ಸಿಕ್ಕ ಸಿಕ್ಕವರೆಲ್ಲಾ ತೋರಬಹುದು ಅನುಕಂಪ,

ಮಧುರ ಮಾತುಗಳಿಂದ ನಿನ್ನ ಮನಕೆ ನೀಡಿ ತಂಪ,

 

ನಿನ್ನ ಬುದ್ದಿಯು ಚಂಚಲ ಮನಸಿನ ಬಂಧಿ ಆಗದಿರಲಿ,

ಆ ಮನಸ್ಸು ಸದಾ ಇರಲಿ ನಿನ್ನ ಬುದ್ಧಿಯ ಹಿಡಿತದಲಿ,

 

ತಪ್ಪು ಒಪ್ಪುಗಳ ವಿಮರ್ಶಾ ಶಕ್ತಿಯು ಬೆಳೆಯುತಿರಲಿ,

ಅದಕ್ಕಾಗಿ ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ,

 

ಬುದ್ಧಿಯನು ಒರೆಗೆ ಹಚ್ಚುವ ವಿಚಾರ ವಿನಿಮಯ ಬೇಕು,

ಜ್ಞಾನಾರ್ಜನೆಯೂ ಈ  ಜೀವನದ ಗುರಿ ಆಗಿದ್ದರೆ ಸಾಕು!

***************


ಆದರೂ ಪರವಾಗಿಲ್ಲ…

28 ಜುಲೈ 10

 

ಸತ್ಯವನ್ನಾಡಿ

ನೀನೆನ್ನ

ನೋಯಿಸಿದರೂ

ಪರವಾಗಿಲ್ಲ,

 

ಸುಳ್ಳು

ಮಾತುಗಳಿಂದ

ರಮಿಸದಿರು

ಸಖಿ!

 

ನನ್ನ

ಮಾತುಗಳ

ನೀ ಸುಳ್ಳೆಂದರೂ

ಪರವಾಗಿಲ್ಲ,

 

ಅನ್ಯರನು ನಂಬಿ

ನೀನು ಮೋಸ

ಹೋಗದಿರು

ಸಖಿ!

 

ನನ್ನ ನೋವಿಗೆ

ನೀನು

ಮರುಗದಿದ್ದರೂ

ಪರವಾಗಿಲ್ಲ,

 

ನಿನ್ನ ಮನದ

ನೋವುಗಳ ನನ್ನಿಂದ

ಮುಚ್ಚಿಡದಿರು

ಸಖಿ!

********


ದೂರದಿಂದಾಡುವ ನಾಟಕವೇ ಮೆಚ್ಚು!

26 ಜುಲೈ 10

 
 
 ಆ ಅಮ್ಮ ಎಂಭತ್ತರ ಆಸುಪಾಸಿನ ಮುದಿ ಜೀವ

ಮನದಲ್ಲಿ ತುಂಬಿಕೊಂಡಿರುತ್ತಾರೆ ಸದಾ ನೋವ
 

ಆಕೆಗೆ ಎಲ್ಲಾ ಇದ್ದರೂ ಏನೂ ಇಲ್ಲ ಎಂಬ ಕೊರಗು

ನಿರೀಕ್ಷೆಯಲ್ಲೇ ಕಳೆಯುತ್ತಾರೆ ಆಕೆ ಬೆಳಗು ಬೈಗು

 

ಮನೆಯಲ್ಲಿ ಜೊತೆಗಿರುವ ಮಗ-ಸೊಸೆಯರ ದಿನಚರಿ

ಅವರ ನೌಕರಿಯ ನಡುವೆ ಅಮ್ಮನ ಸೇವೆಯಾ ಪರಿ

 

ಅಲ್ಲಿ ಯಾವುದಕ್ಕೂ ಕೊರತೆಯಿಲ್ಲ ಎಲ್ಲವೂ ಸೂಕ್ತ

ಆದರೆ ಆಕೆಗೆ ಬೇಕು ಮಾತಾಡುವವರು ಅಲ್ಲಿ ಮುಕ್ತ

 

ಊಟ ಔಷಧಿ ಎಲ್ಲದಕ್ಕೂ ಇದೆ ಶಿಸ್ತಿನ ವೇಳಾಪಟ್ಟಿ

ಹಗಲೆಲ್ಲಾ ಕೆಲಸದಾಕೆಯೊಂದಿಗೆ ಮನೆಯಲ್ಲಿ ಒಂಟಿ

 

ಆಗಾಗ ಕರೆಮಾಡಿ ವಿಚಾರಿಸುತ್ತಾರೆ ದೂರದವರು

ಅಪರೂಪಕ್ಕೆ ಬಂದು ಮಾತಾಡಿ ಹೋಗುತ್ತಾರವರು

 

ಆಕೆಯ ಮನಕೆ ಅವರೇ ನೋಡಿ ಇಷ್ಟವಾಗುವವರು

ಈ ಮಗ ಸೊಸೆಯರ ಮನದಿಂದ ದೂರ ಮಾಡಿಹರು

 

ಇಲ್ಲಿ ಇದ್ದು ಕರ್ತವ್ಯ ನಿಭಾಯಿಸುವವರಿಗಿಂತಲೂ ಹೆಚ್ಚು

ಕರೆಮಾಡಿ ವಿಚಾರಿಸುವವರ ಆ ಆತ್ಮೀಯತೆಯೇ ಮೆಚ್ಚು

 

ಏನು ಕೊರತೆಯಾಗಿದೆ ಎಂಬುದೇ ಪ್ರಶ್ನೆ ಈ ಮಗನಿಗೀಗಿಲ್ಲಿ

ಅಮ್ಮನ ಆರೈಕೆಯೇ ಆಗುತ್ತಿಲ್ಲ ಎಂಬ ದೂರು ಅನ್ಯರದು ಅಲ್ಲಿ

 

ಆತ್ಮೀಯತೆ ತೋರುವವರು ಇರುವುದೆಲ್ಲಾ ಬಹಳ ದೂರ

ಏನಾದರೂ ಅಗತ್ಯಕ್ಕೆ ಕರೆದರೆ ಒಬ್ಬನೂ ಸನಿಹ ಬಾರ

 

ಆದರೂ ಆಕೆಗ್ಯಾಕೋ ಅರಿವಾಗುತ್ತಿಲ್ಲ ಅವರ ಆ ನಾಟಕ

ಅವರನ್ನು ಕೊಂಡಾಡುತ್ತಾ ಈತನ ತೆಗಳುವುದು ಬೇಕಾ?

***************************

 


ನಲವತ್ತೊಂಬತ್ತರಲ್ಲಿ ವಿಶೇಷವೆನಿಸಿದ ಆ ಮೂರು ದಿನಗಳು!

20 ಜುಲೈ 10

 

ಭಾರತೀಯ ವಾಯುಸೇನೆಯ ಸೇವೆಯಲ್ಲಿದ್ದ ದಿನಗಳವು. ಆಗ ಹರ್ಯಾಣಾದ ಅಂಬಾಲಾ ಎನ್ನುವ ಊರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ನನ್ನ ಪತ್ನಿಯೊಂದಿಗೆ ವಾಸವಾಗಿದ್ದೆ.
 
ಒಂದು ಮುಂಜಾನೆ ಗಾಢ ನಿದ್ದೆಯಲ್ಲಿದ್ದ ನನಗೆ, ಬಾಗಿಲು ಬಡಿದ ಸದ್ದಿನಿಂದಾಗಿ ಎಚ್ಚರವಾಯ್ತು. ಸಮಯ ನೋಡಿದರೆ ಮುಂಜಾವಿನ ಐದು ಘಂಟೆ.
 
ಆ ಅನಿರೀಕ್ಷಿತವಾದ ಬಾಗಿಲ ತಟ್ಟುವಿಕೆಯಿಂದ ಭಯ, ಆಶ್ಚರ್ಯ ಎರಡೂ ಆಯ್ತು.
 
ಬಾಗಿಲು ತೆರೆದು ನೋಡಿದರೆ ಕೈಯಲ್ಲಿ ಬಿಸಿ ಬಿಸಿ “ಕೇಕ್” ಒಂದನ್ನು ಹಿಡಿದು ಹೇಮಕ್ಕ ನಿಂತಿದ್ದಾರೆ.
ಜೊತೆಗೇ “ಹ್ಯಾಪಿ ಬರ್ತ್‍ಡೇ ಟು ಯೂ…ಸುರೇಶಣ್ಣಾ…” ಎನ್ನುವ ಹಾರೈಕೆ.
 
ಅಂದು ೧೬ ಜುಲಾಯಿ ೧೯೯೦. ನನ್ನ ೨೯ ನೇ ಜನ್ಮದಿನ. ಬಹುಶಃ ನನ್ನ ಜೀವನದಲ್ಲಿ ತೀರ ಭಿನ್ನವಾಗಿ ಆಚರಿಸಲ್ಪಟ್ಟ ಮೊದಲ ಜನ್ಮದಿನ ಅದು. ಅಂದು ನಾನು ಅನುಭವಿಸಿದ ಆನಂದ ಬಣ್ಣಿಸಲಾಗದ್ದು.
 
ಆ ಹೇಮಕ್ಕ ಯಾರು ಅಂತೀರಾ? ವಾಯುಸೇನೆಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಮಂಗಳೂರಿನವರಾದ ಶ್ರೀಯುತ ಡಿ.ಸಿ. ನಾಣಯ್ಯನವರ ಧರ್ಮಪತ್ನಿ. ಅವರು ನಾವು ವಾಸವಾಗಿದ್ದ ಬಾಡಿಗೆ ಮನೆಯ, ಎದುರುಗಡೆ ಮನೆಯಲ್ಲಿ ವಾಸಿಸುತ್ತಿದ್ದರು.
 
ಮುಂಜಾನೆ ನಾಲ್ಕು ಘಂಟೆಗೆಲ್ಲಾ ಎದ್ದು, ಪತಿ ಪತ್ನಿಯರು ಸೇರಿ ತಯಾರಿಸಿದ್ದ ಕೇಕ್‍ನ ಸವಿಗಿಂತ ಅದರಲ್ಲಿ ಅಡಗಿದ್ದ ಅವರೀರ್ವರ ಪ್ರೀತಿ, ಅಭಿಮಾನ, ಆತ್ಮೀಯತೆಯೇ ಅಧಿಕವಾಗಿತ್ತು. ಸದ್ಯ ಉಡುಪಿಯಲ್ಲಿ ನೆಲೆಸಿರುವ ಅವರ ಮತ್ತು ನನ್ನ ನಡುವಣ ಸ್ನೇಹ, ಇಪ್ಪತ್ತು ವರುಷಗಳ ನಂತರವೂ, ಹಾಗೆಯೇ ಇದೆ.
 
* * * * *
 
ಸರಿಯಾಗಿ ಒಂಭತ್ತು ವರುಷಗಳ ನಂತರ ಅಂದರೆ ೧೬ ಜುಲಾಯಿ ೧೯೯೯. ಆಗ ನಾನು ಬೆಂಗಳೂರಿನಲ್ಲಿ ವಾಯುಸೇನೆಯ ಸೇವೆಯಲ್ಲಿ ಇದ್ದೆ ಅಲ್ಲದೇ ಸಂತ ಜೋಸೇಫ್ ಸಂಧ್ಯಾ ಕಾಲೇಜಿನಲ್ಲಿ “ಪಿಜಿಡಿಸಿಎ” ಅಭ್ಯಾಸ ನಡೆಸುತ್ತಿದ್ದೆ. ಅಂದು ಕಾಲೇಜಿಗೆ ಹೋಗುವಾಗ ಎರಡು ಕಿಲೋ ಸಿಹಿತಿಂಡಿ ತೆಗೆದುಕೊಂಡು ಹೋಗಿದ್ದೆ. ಅಂದು ನನ್ನ ಜನ್ಮದಿನವೆಂದು ಹೇಳಿ ಸಿಹಿತಿಂಡಿ ಹಂಚಿ ಎಲ್ಲರಿಗೂ ಅಶ್ಚರ್ಯಪಡಿಸೋಣ ಎನ್ನುವ ಉದ್ದೇಶ ನನ್ನದಾಗಿತ್ತು.
 
ಆದರೆ ಅಲ್ಲಿ ಆಶ್ಚರ್ಯಪಡುವ ಸರದಿ ನನ್ನದಾಗಿತ್ತು.  ತರಗತಿಯಲ್ಲಿದ್ದ ಅಷ್ಟೂ ಮಂದಿ ತಮ್ಮ ಹಸ್ತಾಕ್ಷರಗಳನ್ನು ಹಾಕಿದ್ದ, ಒಂದು ಸುಂದರವಾದ ಶುಭಾಶಯ ಪತ್ರವನ್ನು ನನಗಾಗಿ ತಯಾರಾಗಿ ಇಟ್ಟುಕೊಂಡು ಕಾಯುತ್ತಿದ್ದರು. ನಾನು ತರಗತಿಯನ್ನು ಪ್ರವೇಶಿಸುತ್ತಿದ್ದಂತೆಯೇ ಎಲ್ಲರೂ ಒಕ್ಕೊರಲಿನಿಂದ “ಹ್ಯಾಪೀ ಬರ್ತ್ ಡೇ ಟು ಯೂ…” ಎಂದು ಹಾಡ ತೊಡಗಿದರು.
 
ಕಂಪ್ಯೂಟರ್ ತರಬೇತಿ ಕೇಂದ್ರದ ಡೀನ್‍ರಿಂದ ನನ್ನ ಜನ್ಮ ದಿನಾಂಕ ತಿಳಿದು, ಆತನೂ ಸೇರಿಕೊಂಡು, ನಾಗೇಂದ್ರ ಪ್ರಸಾದ್, ಕವಿತಾ, ಮೀನಾ ಡಿಸೋಜಾ, ಸೆಲ್ವಮ್ಮ, ಬಸವರಾಜ್, ಸುಗಂಧಿ, ಸೌರವ್, ಎನ್ನುವ ಹಲವೇ ಮಂದಿ ಸೇರಿ ಯೋಜಿಸಿದ ಕಾರ್ಯವದಾಗಿತ್ತು. ಅಂದೂ ನನಗೆ ಆದ ಸಂತಸ ಅಷ್ಟಿಷ್ಟಲ್ಲ. ಎಲ್ಲರಿಗೂ ಸಿಹಿತಿಂಡಿ ಹಂಚಿ ತುಂಬು ಮನದಿಂದ ಧನ್ಯವಾದಗಳನ್ನು ತಿಳಿಸಿದ್ದೆ.
 
* * * * *
 
ಅಲ್ಲಿಂದ ಸರಿಯಾಗಿ ಹನ್ನೊಂದು ವರುಷಗಳ ನಂತರ, ಅಂದರೆ, ಕಳೆದ ೧೬ ಜುಲಾಯಿ ೨೦೧೦ರಂದು ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಆತ್ಮೀಯರಾದ ರಾಘವೇಂದ್ರ ನಾವಡರು, ನಾನು ಕಛೇರಿಯನ್ನು ತಲುಪುವ ಮೊದಲೇ, ಹೊರನಾಡಿನಿಂದ ಕರೆಮಾಡಿ ಶುಭ ಹಾರೈಸಿದ್ದಲ್ಲದೇ, “ಹರೀಶ ಆತ್ರೇಯರು ಸಂಪದದಲ್ಲಿ ತಮ್ಮ ಬಗ್ಗೆ ಸುಂದರವಾದ ಲೇಖನ ಬರೆದು ಶುಭ ಹಾರೈಸಿದ್ದಾರೆ” ಅನ್ನುವ ಸುದ್ದಿಯನ್ನೂ ತಲುಪಿಸಿದ್ದರು. ಕಛೇರಿಗೆ ಬಂದು ಸಿರಿಗನ್ನಡ ಸಂಪದ ತೆರೆದು ನೋಡಿದರೆ ಹರೀಶ ಆತ್ರೇಯರ ಶುಭಾಶಯ ಲೇಖನ ನನ್ನನ್ನು ಮಂತ್ರ ಮುಗ್ಧನನ್ನಾಗಿಸಿಬಿಟ್ಟಿತ್ತು. ಅಷ್ಟೊಂದು ದೀರ್ಘವಾದ ಲೇಖನ, ನನ್ನ ಬಗ್ಗೆ ಅಷ್ಟೊಂದು ವಿಚಾರ ಸಂಗ್ರಹಮಾಡಿಕೊಂಡು, ಬಹುಶಃ ನನ್ನನ್ನು ನನಗಿಂತಲೂ ಚೆನ್ನಾಗಿ ಅರಿತವರಂತೆ ಬರೆದಿದ್ದ ಶೈಲಿ, ನನ್ನನ್ನು ಮೌನಕ್ಕೆ ತಳ್ಳಿ ಬಿಟ್ಟಿತ್ತು. ಅಂದಿನ ದಿನವೂ ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿಯದ ದಿನವಾಗಿ ಮಾರ್ಪಟ್ಟು ಬಿಟ್ಟಿತು. ಆ ನೆನಪನ್ನು ಇನ್ನೂ ಭದ್ರಪಡಿಸಲು ನೆರವಾದದ್ದು ಆತ್ಮೀಯ ಸಂಪದಿಗರಾದ ರಾಘವೇಂದ್ರ ನಾವಡ, ಭಾಗ್ವತ ಮತ್ತು ಗೋಪಾಲ ಮಾ ಕುಲಕರ್ಣಿಯವರು ಅಂದು ನನಗಾಗಿ ಬರೆದು ಪ್ರಕಟಿಸಿದ ಕವನಗಳು ಮತ್ತು ಅಲ್ಲಿನ ಪುಟಗಳಲ್ಲಿ ಪ್ರತಿಕ್ರಿಯೆಗಳ ಮೂಲಕ ನನಗೆ ಶುಭ ಹಾರೈಸಿ ಅಭಿಮಾನ, ಪ್ರೀತಿ ವಿಶ್ವಾಸಗಳ ಮಹಾಪೂರವನ್ನೇ ಹರಿಸಿದ ಸಹೃದಯಿ ಸಂಪದಿಗರು (ಸಿರಿಗನ್ನಡ ಸಂಪದ ಅಂತರ್ಜಾಲ ತಾಣದ ಸದಸ್ಯರು).
 
* * * * *
ನನ್ನ ಜೀವನದಲ್ಲಿ ಬಂದು ಹೋದ ನಲವತ್ತೊಂಭತ್ತು ಜನ್ಮದಿನಗಳ ಪೈಕಿ, ಈ  ಮೂರು ಜನ್ಮದಿನಗಳ ನೆನಪು ನನ್ನ ಮನದಲ್ಲಿ ಸದಾ ಹಸಿರಾಗೇ ಇದೆ ಮತ್ತು ಇರುತ್ತದೆ. ಜೊತೆಗೇ, ನಾನು ಹೀಗೆ, ವಿಭಿನ್ನ ರೀತಿಯಲ್ಲಿ ಜನರ ಆತ್ಮೀಯತೆ ಮತ್ತು ಅಭಿಮಾನ ಗಳಿಸುವುದಕ್ಕೆ, ಕಾರಣವಾದರೂ ಏನಿದ್ದಿರಬಹುದು ಎಂದು ನನ್ನ ಮನಸ್ಸು ಸುದೀರ್ಘ ಚಿಂತನೆಗೆ ಒಳಗಾಗುತ್ತದೆ.
 
 
ನಾನು ಇದಕ್ಕೆಲ್ಲಾ ಅರ್ಹನೇ ಎನ್ನುವ ಪ್ರಶ್ನೆಯೂ ಕಾಡುತ್ತದೆ.
 
 
ಬಹುಶಃ ಇದಕ್ಕೆ ಉತ್ತರ ಹುಡುಕುವುದು ಕಷ್ಟ.

*************************

ಸಿರಿಗನ್ನಡ ಸಂಪದ ತಾಣದಲ್ಲಿ ನನ್ನ ಜನ್ಮದಿನಾಚರಣೆ!

19 ಜುಲೈ 10

 

ಶುಕ್ರವಾರ, ೧೬ ಜುಲಾಯಿ ೨೦೧೦, ನನ್ನ ೪೯ನೇ ಜನುಮದಿನದಂದು ಸಿರಿಗನ್ನಡ ಸಂಪದ ಅಂತರ್ಜಾಲ ತಾಣವೆಂಬ ಸಮುದಾಯದಲ್ಲಿ (http://sampada.net), ಸಹೃದಯಿಗಳಾದ ನನ್ನ ಸಂಪದಿಗ ಮಿತ್ರರು ನನಗೆ ಪ್ರೀತ್ಯಾದರಗಳಿಂದ ಶುಭ ಹಾರೈಸಿದ ಪರಿಯನ್ನು ಕಂಡು, ನನ್ನ ಮನಸ್ಸು ಮುದಗೊಂಡು, ಕಣ್ಣುಗಳು ತುಂಬಿ ಬಂದಿದ್ದವು.

ಹಾರೈಕೆಗಳಿಂದ ತುಂಬಿದ ಆ ಬರಹಗಳ ಮತ್ತು ಆ ನಾಲ್ಕು ಆತ್ಮೀಯ ಬರಹಗಾರರ ಪರಿಚಯ ನಿಮಗೂ ಇರಲಿ, ಎಂಬ ಆಶಯದೊಂದಿಗೆ ಅವುಗಳ ಕೊಂಡಿಯನ್ನು ನೀಡುತ್ತಿದ್ದೇನೆ.

ಹರೀಶ ಆತ್ರೇಯರ ಆಸುಕವಿಗೆ ಶುಭಾಶಯಗಳು”     (ಪಿಡಿಫ್)

ಕೆ.ಎಸ್. ರಾಘವೇಂದ್ರ ನಾವಡರ ಆಸುಮನಕ್ಕೊಂದು ಅಭಿನಂದನೆ”    (ಪಿಡಿಎಫ್)

ಭಾಗ್ವತರ ಆಸುಹೆಗ್ಡೆಯವರಿಗೆ…”    (ಪಿಡಿಎಫ್)

ಗೋಪಾಲ ಮಾ. ಕುಲಕರ್ಣಿಯವರಆಸುಮನ ಕವಿಗಳಿಗೆ…”    (ಪಿಡಿಎಫ್)

ಸಹೃದಯಿ ಸಂಪದಿಗರಿಗೆಲ್ಲಾ ನಾನು, ನನ್ನದೇ ಶೈಲಿಯಲ್ಲಿ, ಸಲ್ಲಿಸಿದ ಕೃತಜ್ಞತೆಗಳು ಹೀಗಿದ್ದವು:

ಸಂಪದಿಗರೇ,

ಮುಂಜಾನೆಯೇ ಈ ಲೇಖನ ಓದಿ ಮನ ತುಂಬಿ ಬಂತು
ಯಾವ ರೀತಿ ಸ್ಪಂದಿಸಿದಲಿ ಎನ್ನುವ ಅನುಮಾನ ಬಂತು

ನನ್ನನ್ನು ನನಗಿಂತಲೂ ಚೆನ್ನಾಗಿ ಹರೀಶ ಅರಿತಿರುವಂತಿದೆ
ನನಗೋ ಇದೀಗ ಜನ್ಮ ಸಾರ್ಥಕವಾಯಿತೆಂದನಿಸುತಿದೆ

ಪದಗಳಲಿ ಬಣ್ಣಿಸಲಾಗದು ನನ್ನಿಂದ ನಿಮ್ಮೀ ಅಭಿಮಾನವನ್ನು
ನನ್ನ ಮನಕೀಗ ಹೊರೆ ಇದನು ನಾ ಹೊತ್ತು ನಡೆಯಬೇಕಿನ್ನು

ನನ್ನಿಂದ ಇದಕ್ಕೆ ಎಂದಿಗೂ ಯಾವುದೇ ಧಕ್ಕೆ ಬಾರದ ತೆರದಿ
ಬಾಳಿ ನಾನು ಕ್ರಮಿಸಬೇಕಾಗಿದೆ ಮುಂದಿನ ನನ್ನ ಬಾಳ ಹಾದಿ

ಇಲ್ಲಿಹವು ನಿಮಗಿದೋ ನನ್ನ ಮುಕ್ತ ಮನದ ಅಭಿವಂದನೆಗಳು
ನನಗೆ ಶುಭ ಹಾರೈಸಿದ ಎಲ್ಲಾ ಸಂಪದಿಗರಿಗೂ ಕೃತಜ್ಞತೆಗಳು

– ಆತ್ರಾಡಿ ಸುರೇಶ ಹೆಗ್ಡೆ


ನಿಮಗೆ ಸದಾ ನನ್ನ ನೆನಪನ್ನು ಮಾಡಿಸುತ್ತಿರಲಿ!

16 ಜುಲೈ 10

 

ಇಂದಿಗೆ ವರುಷಗಳು ಮುಗಿದುಹೋದರೂ ನಲವತ್ತ ಎಂಟು

ನಾ ಸಂಪಾದಿಸಿಲ್ಲ ಭೌತಿಕ ಆಸ್ತಿ, ನನ್ನಲ್ಲಿಲ್ಲ ದೊಡ್ಡ ಗಂಟು

 

ನನ್ನ ಜೊತೆಗಿದೆ ಆತ್ಮೀಯ ಸ್ನೇಹಿತರೊಂದಿಗಿನ ನಂಟು

ಇದುವೇ ನನ್ನಾಸ್ತಿ, ಹೇಳಿ ಇನ್ನೇಕೆ ಬೇಕು ಅನ್ಯ ಗಂಟು

 

ವರುಷ ಕಳೆದು ವರುಷಗಳು ಹೀಗೇ ಸಾಗುತ್ತಲೇ ಇವೆ

ತಲೆಯ ಮೇಲಿನ ಕೂದಲುಗಳೂ ಉದುರುತ್ತಲೇ ಇವೆ

 

ಹೊರಗೆ ಖಾಲಿಯಾದರೂ ತಲೆಯ ಒಳಗಿನದು ಇರಲಿ

ನನ್ನನ್ನು ಹುರಿದುಂಬಿಸುವ ನನ್ನವರ ಹಾರೈಕೆಗಳಿರಲಿ

 

ಸಂಬಂಧಿಗಳ ನಡುವಣ ಬಾಂಧವ್ಯ ಅದ್ಯಾಕೋ ಕುಂದಿ

ನೋವನ್ನೀಡಿದರೂ ಹೆಚ್ಚುತ್ತಿದ್ದಾರೆ ನನ್ನ ಸ್ನೇಹಿತ ಮಂದಿ

 

ಇಳೆಯೊಳಗೆ ಯಾವುದೂ ಶಾಶ್ವತ ಅಲ್ಲ ನನ್ನನ್ನೂ ಸೇರಿ

ತಲೆಕೆಡಿಸಿಕೊಳ್ಳಲಾರೆ ಹೋದರೂ ಸಂಬಂಧಗಳು ಜಾರಿ

 

ನನ್ನ ಪರಿಚಯ ಜಗಕೆ ಬರೀ ಇಲ್ಲಿರುವ ನನ್ನ ಮಾತುಗಳಿಂದ

ಪಡೆದೆ ನಾನೀ ಭಾಗ್ಯ ನನ್ನ ಹಿರಿಯರ ಆಶೀರ್ವಾದಗಳಿಂದ

 

ಆ ಅಜ್ಜಯ್ಯ, ಅಪ್ಪಯ್ಯ ಮತ್ತು ನಮ್ಮಮ್ಮ ಬಾಳಿ ನಡೆದ ಹಾದಿ

ತೋರಿದಾ ಬೆಳಕಿಂದ ಬೆಳಗಿಸುತಿಹೆ ನಾನಿಲ್ಲಿ ಬರೆದು ದ್ವಿಪದಿ

 

ಸದಾ ನಿಮ್ಮ ಶುಭ ಹರಕೆಗಳಿರಲಿಲ್ಲಿ ನನ್ನ ಬೆನ್ನು ತಟ್ಟುವುದಕೆ

ಅದುವೇ ಶಕ್ತಿ ನನ್ನ ಭಾವಗಳಿಗೆ ಇಲ್ಲಿ ಅಕ್ಷರರೂಪ ಕೊಡುವುದಕೆ

 

ಕಾಲಕಾಲಕ್ಕೂ ಆಸುಮನದ ಈ ಮಾತುಗಳು ಶಾಶ್ವತವಾಗಿರಲಿ

ಈ ಮಾತುಗಳು ನಿಮಗೆ ಸದಾ ನನ್ನ ನೆನಪನ್ನು ಮಾಡಿಸುತ್ತಿರಲಿ!

************************************


ತಂದೆ ನಮಗಾಗಿ ಬಿಟ್ಟು ಹೋಗಿದ್ದರು! (ಏ.ಕೆ.ರಾಮಾನುಜನ್ ಕವನ)

15 ಜುಲೈ 10

ಮೂಲ ಅಂಗ್ಲ: ಏ.ಕೆ.ರಾಮಾನುಜನ್

 

ಪುಸ್ತಕಗಳಿಂದ ತುಂಬಿದ್ದ ಮೇಜಿನ

ಮೇಲೆ ಒಂದಷ್ಟು ಧೂಳನ್ನು,

ಬೆಳೆದಿದ್ದ ಹೆಣ್ಣು ಮಕ್ಕಳನ್ನು,

ಬಾಕಿಯಿದ್ದ ಸ್ವಲ್ಪ ಸಾಲವನ್ನು,

 

ನಾಣ್ಯ ಚಿಮ್ಮಿಸಿ ತಮ್ಮದೇ

ನಾಮಧೇಯ ಹೊಂದಿದ್ದ

ಹಾಸಿಗೆ ಒದ್ದೆಮಾಡುವ,

ಪುಟ್ಟ ಮೊಮ್ಮಗನನ್ನು,

 

ವರ್ಷಾನುವರ್ಷ  ನಾವು

ಬೆಳೆದಂತೆಲ್ಲಾ ತಾನೂ ಬೆಳೆದು

ಕೈತೋಟದಲ್ಲಿ ವಾಲಿ ನಿಂತಿದ್ದ

ತೆಂಗಿನಮರದತ್ತ ವಾಲುತ್ತಲಿದ್ದ

ಈ ಮನೆಯನ್ನು, ನಮ್ಮ ತಂದೆ

ನಿಧನರಾದಾಗ ಬಿಟ್ಟು ತೆರಳಿದ್ದರು.

 

ಯಾವಾಗಲೂ ಕೋಪದಿಂದ

ಸುಡುತ್ತಲೇ ಇದ್ದವರು ಚಿತೆಯಲ್ಲೂ

ಚೆನ್ನಾಗಿಯೇ ಸುಟ್ಟು ಹೋಗಿದ್ದರು,

 

ಸರ್ವೇ ಸಾಮಾನ್ಯವಾಗಿ ಕಾಣುತ್ತಿದ್ದ

ಆ ಬೂದಿಯ ರಾಶಿಯಲ್ಲಿ ತನ್ನೆರಡು

ಕಣ್ಣುಗೊಂಬೆಗಳನ್ನು ಬಿಟ್ಟಗಲಿದ್ದರು

 

ಕರಕಲು ಇದ್ದಿಲಾಗಿದ್ದ ಹಲವು

ಬೆನ್ನಹುರಿಯ ಚಕ್ರಗಳನ್ನು,

ಪುರೋಹಿತರ ಆದೇಶದಂತೆ

ಪೂರ್ವಾಭಿಮುಖವಾಗಿ ನಿಂತು

ರೈಲು ನಿಲ್ದಾಣದ ಬಳಿಯಿರುವ

ತ್ರಿವೇಣಿ ಸಂಗಮದತ್ತ  ಎಸೆಯಲು

ತನ್ನ ಪುತ್ರರಿಗಾಗಿ ಬಿಟ್ಟು ತೆರಳಿದ್ದರು,

 

ತನ್ನ ಹೆಸರು ಮತ್ತು ಆ ಎರಡು

ದಿನಾಂಕಗಳ ಬಳಿ ಆವರಣದೊಳಗೆ,

ಬ್ರಾಹ್ಮಣ ಕುಟುಂಬವೊಂದರಲ್ಲಿ ಶಸ್ತ್ರ

ಚಿಕಿತ್ಸೆಯಿಂದ ಆದ ಜನನ,

ಹಣ್ಣಿನ ಸಂತೆಯಲ್ಲಿ ಹೃದಯ

ಸ್ಥಂಭನಗೊಂಡು ಆದ ಮರಣ,

ಇಂಥ  ಸ್ವಯಿಚ್ಛೆಯಿಂದ ಮಾಡಿರದ

ಆತನ ಘನಕಾರ್ಯಗಳ ಪಟ್ಟಿಯನ್ನು

ಹೊಂದಿರುವ, ಆಳೆತ್ತರಕ್ಕೆ ನಿಂತ

ಆತನ ಶಿಲಾ ಸ್ಮಾರಕವನ್ನೇನೂ

ಸ್ಥಾಪಿಸಿಲ್ಲ ನಮ್ಮ ಊರಿನಲ್ಲಿ,

 

ಪ್ರಕಟವಾಗಿ ನಾಲ್ಕೇ ವಾರಗಳಲ್ಲಿ

ರದ್ದಿ ಅಂಗಡಿ ಸೇರುವ, ರಾಜಧಾನಿಯ

ಅದ್ಯಾವುದೋ  ದಿನಪತ್ರಿಕೆಯಲ್ಲಿ

ಆತನ ಸಾವಿನ  ಬಗ್ಗೆಯೂ

ಎರಡು ಸಾಲುಗಳು ಬಂದಿದ್ದವೆಂದು

ನನಗೆ ಅದ್ಯಾರೋ ಅಂದಿದ್ದರು,

 

ದಿನಸಿ ಅಂಗಡಿಯಿಂದ ನಾನು

ಖರೀದಿಸುವ ಉಪ್ಪು, ಬೆಲ್ಲ

ಕೊತ್ತಂಬರಿಯನ್ನು ಕಟ್ಟಿ

ಕೊಟ್ಟಾಗ ನನ್ನ ಕೈಸೇರುತ್ತಿದ್ದ

ಆ ಪತ್ರಿಕೆಯ ಹರಿದ ಚೂರುಗಳನ್ನು,

ಮೊದಮೊದಲು ತಮಾಷೆಗಾಗಿ

ಆದರೆ ಇತ್ತೀಚೆಗೆ ಶ್ರದ್ಧಾಂಜಲಿಯ

ನಾಲ್ಕು ಸಾಲುಗಳ ನಿರೀಕ್ಷೆಯಲ್ಲಿ

ನಾನೂ ತಪ್ಪದೇ ಓದುತ್ತಲಿದ್ದೆ

 

ಅರಿವಿಲ್ಲದೇ ಬದಲಾಗಿದ್ದ ಅಮ್ಮನನ್ನು

ಮತ್ತು ವರ್ಷಕ್ಕೆ ಅದೆಷ್ಟೋ ಬಾರಿ

ನೆರವೇರಿಸಬೇಕಿದ್ದ ಶಾಸ್ತ್ರೋಕ್ತ

ವಿಧಿಗಳನ್ನು  ನಮ್ಮ ತಂದೆ

ನಮಗಾಗಿ ಬಿಟ್ಟು ಹೋಗಿದ್ದರು!

********************