NEED OF THE HOUR!

30 ಸೆಪ್ಟೆಂ 10

 

Whether there existed a holy Temple or Babri Mosque,

For us, that very place was and would ever remain unique;

 

No other place has ever been in news for so long,

Nor any place has ever attracted feelings so strong;

 

To defeat others by intelligence and witness is not so great,

Need of the hour is to truly accept others with open heart;

 

Neither of the communities can accept a court verdict,

Acceptable need is to make it an all religion prayer spot;

 

Let every Indian go there and pray with an open mind,

Show the world that we Indians are one of our own kind!

**********


“ಸಿಲ್ಲೀ” ದೀಕ್ಷಿತ್!

29 ಸೆಪ್ಟೆಂ 10

ಯಾವ ಗಂಭೀರ ಸಮಸ್ಯೆಯನ್ನೂ ನೀವು ಗಂಭೀರವೆಂದೆನಲಾರಿರಿ,
ಎನೇ ಆದರೂ ಅದು ದಿಲ್ಲಿಯಲಿ ಸಾಮಾನ್ಯ ಎಂದು ತಳ್ಳಿ ಹಾಕುವಿರಿ;

ಕೋಟಿ ರೂಪಾಯಿ ಹೊತ್ತ ಲಾರಿ ನಡುರಸ್ತೆಯಲಿ ಹೋಗಿದ್ದರೂ ಹೂತು,
ಹಾವಿಗೂ, ಮುರಿದ ಮಂಚಕೂ, ಕುಸಿದ ಸೇತುವೆಗೂ, ಒಂದೇ ಮಾತು;

ದೇಶದ ಮಾನವೆಲ್ಲಾ ಬೇಕಾಬಿಟ್ಟಿ ಆಗುತ್ತಿದ್ದರೂ ಹರಾಜು ನಡುಬೀದಿಯಲ್ಲಿ,
ಅತೃಪ್ತ ಅತಿಥಿಗಳನೇ ದೂಷಿಸಿ, ನಿಮ್ಮೆಲ್ಲಾ ತಪ್ಪುಗಳ ಮುಚ್ಚಿಡುತಿದ್ದೀರಿಲ್ಲಿ;

ಯಾರೇನೇ ಅಂದರೂ ಎಲ್ಲದಕೂ ಉತ್ತರಿಸುತ್ತೀರಲ್ಲ ಒಂದೇ ದನಿಯಲೇ,
ಇದನ್ನು ಅಸಡ್ದೆಯ ಪರಾಕಾಷ್ಟೆ ಎನ್ನಲೇ, ತಾಳ್ಮೆಯ ಮೂರ್ತಿ ಎನ್ನಲೇ;

ಶೀಲಾ ದೀಕ್ಷಿತ್, ನಿಮಗೆ ಈಗ ಕಾಣುತ್ತಿದೆಯಲ್ಲಾ ಎಲ್ಲವೂ “ಸಿಲ್ಲಿ”ಯಾಗಿ,
ನಿಮ್ಮನ್ನೀಗ ಮರು ನಾಮಕರಣ ಮಾಡುತ್ತಿದ್ದೇನೆ, “ಸಿಲ್ಲಿ” ದೀಕ್ಷಿತ್ ಆಗಿ!
********


ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ!

28 ಸೆಪ್ಟೆಂ 10

ಸಖೀ,
ಕಿಟಕಿಯಿಂದ ಇಣುಕುತಿಹ ಚಂದಿರನು ಅರಿತಿಹನೆ
ಮನೆಯೊಳಗೆ ನನ್ನ ಸಖಿ ನೀನು ಇಲ್ಲವೆಂದು

ದಿನವೂ ನಡೆದಿರಬಹುದೀ ಕಣ್ಣು ಮುಚ್ಚಾಲೆಯಾಟ
ಸಿಕ್ಕಿಬಿದ್ದಿಹನಿಂದಾತ ಸಖೀ ನೀನು ಇಲ್ಲದಂದು

ನಾನು ಒಳಗೊಳಗೆ ಬರಿದೆ ಸಂತಸ ಪಡುತಲಿದ್ದೆ
ನನ್ನ ಜೊತೆಗಿರುವ ನೀನು ಬರೀ ನನ್ನವಳೆಂದು

ನಿನ್ನ ಮೇಲಧಿಕಾರ ನನಗಷ್ಟೇ ಎಂದು ನಾನು ತಿಳಿದಿದ್ದೆ
ಅರಿತೆ ನಿನ್ನ ಸೌಂದರ್ಯೋಪಾಸಕ ರಜನೀಶನಿರುವನೆಂದು

ಎಷ್ಟೇ ಮುಚ್ಚಿಟ್ಟು ಕೊಂಡರೂ, ಎಲ್ಲೇ ಅಡಗಿ ಕೂತಿದ್ದರೂ
ಆತನ ಕಣ್ಣುಗಳಿಂದ ಮರೆಯಾಗಿ ಇರಲಾರೆವೆಂದೂ

ಎಲ್ಲರದು ಅಧಿಕಾರ, ಎಲ್ಲರ ಮೇಲಿದ್ದರೂ ಏನಾದೀತಿಲ್ಲಿ
ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ
************


ಭಾರತರತ್ನ ಲತಾ ಮಂಗೇಶ್ಕರ‍್ಗೆ ಜನ್ಮದಿನದ ಶುಭಾಶಯಗಳು!

28 ಸೆಪ್ಟೆಂ 10

ಭಾರತರತ್ನ ಲತಾ ಮಂಗೇಶ್ಕರ್ ಎಂಬುದದು ಬರೀ ಒಂದು ಹೆಸರಲ್ಲ
ಅದು ಜೀವನವನೇ ತಪಸ್ಸಾಗಿಸಿದವರ ಉದಾಹರಣೆ ಎಂದರೆ ತಪ್ಪಲ್ಲ

ಯೌವನವ ಕಾಣುವ ಮೊದಲೇ ಹೊರಬೇಕಾಯ್ತು ಜವಾಬ್ದಾರಿಯ ಹೊಣೆ
ತನ್ನವರಿಗಾಗಿ ಚಿಕ್ಕಂದಿನಿಂದಲೇ ಈ ಪರಿ ದುಡಿದ ಅನ್ಯರನು ನಾ ಕಾಣೆ

ರಂಜಿತ ಕಥೆಗಳು ನೂರಾರು ಹುಟ್ಟಿಕೊಂಡರೂ ಚಂಚಲವಾಗದ ಮನಸ್ಸು
ಗಾಯನಕ್ಕಾಗಿಯೇ ಬಾಳಿದಾಕೆಯ ಜೀವನವೇ ನಿಜವಾಗಿ ಒಂದು ತಪಸ್ಸು

ಎಂಭತ್ತೊಂದು ವರುಷಗಳು ಪೂರ್ತಿ ಆದರೂ ಇನ್ನೂ ಉತ್ಸಾಹದ ಚಿಲುಮೆ
ಸ್ವರ ವಯಸ್ಸಿನ ಸೂಚನೆ ಕೊಡುತ್ತಿದ್ದರೂ ಆ ಮನಸ್ಸಿನಲ್ಲಿ ಅಳುಕು ಕಡಿಮೆ

ಆಕೆ ಇಂದಿನ ಯುವ ಪೀಳಿಗೆಗೆ ಹೀಗೆ ನಿರಂತರ ನೀಡುತ್ತಲೇ ಇರಲಿ ಸ್ಪೂರ್ತಿ
ಆರೋಗ್ಯವಂತಳಾಗಿ ಬಾಳುತ್ತಿರಲಿ ತುಂಬಿದ ಮೇಲೂ ವರುಷ ನೂರು ಪೂರ್ತಿ

ಇಂಥ ಗಾನಕೋಗಿಲೆಯ ಜೀವನ ಕಾಲದಲ್ಲೇ ಜನಿಸಿದ ನಾ ನಿಜಕ್ಕೂ ಧನ್ಯ
ಆಕೆಗೆ ಶುಭಾಶಯಗಳನ್ನು ಅರ್ಪಿಸುವುದನ್ನುಳಿದು ಏನ ಹೇಳಬಲ್ಲೆ ನಾ ಅನ್ಯ
***********************


ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ!

27 ಸೆಪ್ಟೆಂ 10

ನಾಡಿನ ಸ್ವಾತಂತ್ರ್ಯಕ್ಕೆ ಹೋರಾಡಿದವರ
ಸಂಖ್ಯೆ ಲಕ್ಷದಷ್ಟಿದ್ದರೂ ನೆನೆಸುವುದಿಲ್ಲ ನಾವು ಅವರೆಲ್ಲರ

ಮರೆವು ಮನುಜನಿಗೆ ವರದಂತೆ
ಅದಕೆ ನಮ್ಮೆಲ್ಲಾ ಸರ್ಕಾರಗಳ ಕೊಡುಗೆಯೂ ಅಪಾರವಂತೆ

ಆ ಗಾಂಧಿ ಜನಿಸಿದ ನಾಡಿನಲ್ಲಿ
ನಕಲಿ ಗಾಂಧಿಗಳೇ ತುಂಬಿಕೊಂಡಿಹರಲ್ಲಾ ಸದ್ಯಕ್ಕೀಗ ಇಲ್ಲಿ

ಗಾಂಧಿ ನೆಹರೂ ಅವರುಗಳನ್ನುಳಿದು
ಅನ್ಯರ ನೆನೆಸಿದರೆ ಈ ನಾಡಿನಲ್ಲಿ ಪಾಪವೆಂದೆನಿಸುವುದು

ಭಾರತರತ್ನನಾದ ಆರೋಪಿ ರಾಜೀವ ಗಾಂಧಿ
ನಾಡಿನ ಅನ್ಯ ವೀರ ಪುತ್ರರತ್ನರ ನೆನೆಯರು ನಮ್ಮ ಮಂದಿ

ಚಿತ್ರ ನಟರ ಜನ್ಮದಿನಕ್ಕೆ ಇಲ್ಲಿ ಮೆರವಣಿಗೆ
ವೀರಯೋಧರ ನೆನಪುಗಳು ಸೀಮಿತವಾಗಿವೆ ಬರವಣಿಗೆಗೆ

ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ
ಹುಟ್ಟಿದರೂ ಭ್ರಷ್ಟರ ನಡುವೆ ನಿಷ್ಟನಾಗಿ ಹೆಚ್ಚುದಿನ ಬಾಳಲಾರ

ವೀರರ ನೆನಪಿನಲಿಂದು ಕಂಬನಿ ಮಿಡಿದು
ನಾಡಿಗಾಗಿ ಹೋರಾಡುವೆವೆನ್ನೋಣ ಸ್ವಾರ್ಥವನೆಲ್ಲಾ ತೊರೆದು!

************

ಇಂದು ಭಗತ್ ಸಿಂಗ್ ಜೀವಿಸಿದ್ದಿದ್ದರೆ ಆತನಿಗೆ ೧೦೩ ವರುಷ ತುಂಬುತ್ತಿತ್ತು!

 


ಆಟಕ್ಕುಂಟು ಊಟಕ್ಕಿಲ್ಲ ಈ ನಾಡಿನಲ್ಲಿ!

23 ಸೆಪ್ಟೆಂ 10

 

ನಮ್ಮವರಿಗೇ ಹೆದರಿ ಬಾಗಿಲು ಮುಚ್ಚಿಕ್ಕೊಂಡು ಒಳಕೂರುವ ದೇಶ
ಶಾಲಾ ಕಾಲೇಜುಗಳಿಗೆ ರಜೆಸಾರಿ ತೋರಿಸುವರು ತಮ್ಮ ಆವೇಶ

ವಿದೇಶಿಯರು ದಂಡೆತ್ತಿ ಬಂದಿರುವಂತೆ ಆಡುತ್ತಿರುವುದಾದರೂ ಏಕೆ
ನಮ್ಮವರಿಂದ ನಮ್ಮವರಿಗೇ ರಕ್ಷಣೆ ಕೊಡಲಾಗದ ಸರಕಾರಗಳೇಕೆ

ಸಾವಿರ ಸಾವಿರ ಕೋಟಿ ಖರ್ಚು ಮಾಡಿ ಕ್ರೀಡಾಕೂಟ ನಡೆಸುವರು
ರೈತರ ಭೂಮಿ ಕಿತ್ತುಕೊಂಡು ಬದಲಿಗೆ ಪುಡಿಗಾಸನ್ನಷ್ಟೇ ನೀಡುವರು

ಸತ್ತ ಯೋಧರ ಸಂಸಾರಗಳಿಗೆ ಪರಿಹಾರ ಸಹಕಾರ ಭಾಷಣಗಳಲ್ಲೇ
ಚೆಂಡಿನಾಟದಲಿ ಗೆದ್ದವರಿಗೆ ಸನ್ಮಾನ ಬಹುಮಾನ ರಾಜಧಾನಿಯಲ್ಲೇ

ಚಿತ್ರನಟ, ಕ್ರಿಕೆಟ್ ಆಟಗಾರ, ರಾಜಕೀಯ ನಾಯಕನಾದರಷ್ಟೇ ಬಾಳು
ರೈತನಾಗಿ ಹುಟ್ಟಿದವನದು ಜೀವನಪೂರ್ತಿ ಬರೀ ಬೇಗುದಿಯ ಗೋಳು

ಆಟಕ್ಕುಂಟು ಆದರೆ ಊಟಕ್ಕಿಲ್ಲ ಎಂಬಂತಾಗಿದೆ ನಮ್ಮ ಈ ನಾಡಿನಲ್ಲಿ
ಆ ವಿದೇಶೀಯಳ ಕೈಕೆಳಗೆ ಭಾರತೀಯರೆಲ್ಲಾ ಬಂಧಿಗಳು ಈಗ ಇಲ್ಲಿ!

************


ಮಾನವೀಯತೆಯ ಮೆರೆದು ಪ್ರೀತಿಸುತ್ತಿದ್ದರೆ ನಾವೆಲ್ಲರೂ ಒಂದೇ!

23 ಸೆಪ್ಟೆಂ 10

ಅಯೋಧ್ಯೆ ಎಂಬ ಪುಣ್ಯಭೂಮಿ ಯಾರದ್ದಾಗಿತ್ತು ಎಂಬ ಜಟಿಲ ಪ್ರಶ್ನೆಗೆ
ಲಕ್ನೋ ನ್ಯಾಯಾಲಯ ತೀರ್ಪು ನೀಡಲಿದೆ ಶುಕ್ರವಾರ ಸಂಜೆಯ ಒಳಗೆ

ತೀರ್ಪು ಯಾವ ಪಕ್ಷಕ್ಕೇ ಖುಷಿ ನೀಡಿದರೂ ಸೋಲುವುದು ನಮ್ಮದೇ ನಾಡು
ನಾಯಕರ ಹೇಳಿಕೆಗಳಿಂದ ಕೆಡುತ್ತದೆ ನೋಡಿ ಇನ್ನು ನಾಡಿನ ಜನರ ಪಾಡು

ಮರ್ಯಾದ ಪುರುಷೋತ್ತಮನ ಭಕ್ತರು ಆತನ ಮರ್ಯಾದೆ ಕಾಪಾಡಬೇಕು
ಅಲ್ಲಾಹನಿಗೆ ಪ್ರಿಯವಾದ ನಡತೆ ಆತನನು ಪೂಜಿಸುವವರಲ್ಲಿ ಇದ್ದಿರಬೇಕು

ಪರಿಸ್ಥಿತಿಯು ವಿಕೋಪಕ್ಕೆ ಹೋಗದಂತೆ ಮನಗಳೊಳಗೆ ಅಂಕುಶವಿರಲಿ
ಜನರೇನೇ ಅಂದರೂ ಮನ ಮನಗಳ ನಡುವೆ ಸಾಮರಸ್ಯ ಉಳಿದಿರಲಿ

ನಾಯಕರುಗಳೆಲ್ಲಾ ಇರುತ್ತಾರೆ ಸದಾ ಸುರಕ್ಷಾ ಸಿಬ್ಬಂದಿಯ ರಕ್ಷಣೆಯಲ್ಲಿ
ಬೀದಿಗಿಳಿಯುವ ಜನರ ಪ್ರಾಣವನು ರಕ್ಷಿಸಲು ಬರುವವರಾರೂ ಇಲ್ಲ ಅಲ್ಲಿ

ಯಾರೇ ಗಾಯಗೊಂಡರೂ ಅಲ್ಲಿ ಹರಿಯುವುದು ಭಾರತೀಯನದೇ ನೆತ್ತರು
ಭಾರತಮಾತೆ ಅಳುತ್ತಾಳೆ ಪುತ್ರಶೋಕದಲ್ಲಿ ಅಲ್ಲಿ ಯಾರೇ ಮೃತನಾದರೂ

ನಮ್ಮ ದೇವರನು ಮನದ ಮಂದಿರದಲ್ಲಿ ಸ್ಥಾಪಿಸಿಕೊಂಡು ಪೂಜಿಸುತ್ತಿರೋಣ
ಸಾಧ್ಯವಾದರೆ ಮಾಡುತ್ತಲಿರೋಣ ಭಗವದ್ಗೀತ ಖುರಾನ್ ಬೈಬಲಿನ ಪಠಣ

ಗೀತೆ, ಗುರುಗ್ರಂಥ, ಬೈಬಲ್, ಖುರಾನ್ ಎಲ್ಲವೂ ಸಾರಿ ಹೇಳಿರುವುದೊಂದೇ
ಮಾನವೀಯತೆಯ ಮೆರೆದು ಪರಸ್ಪರರ ಪ್ರೀತಿಸುತ್ತಿದ್ದರೆ ನಾವೆಲ್ಲರೂ ಒಂದೇ!

*********


ಬೀಳದಂತೆ – ಬೀಳಿನಂತೆ!

17 ಸೆಪ್ಟೆಂ 10

ಸಖೀ,
ನಿನ್ನ ನಡೆ
ನನ್ನೀ ಮನಕೆ
ಮೋಹಕವೆನಿಸಿತ್ತಂದು
ಲತೆಯಂತೆ,

ನಿನ್ನ ಕುಡಿನೋಟದ
ಮುಗುಳ್ನಗುವೆನ್ನ
ಘಾಸಿಮಾಡಿತಂದು
ಬಾಣದಂತೆ,

ನಿನ್ನ ಸವಿನುಡಿಗಳು
ನನ್ನ ಕಿವಿಗಳಿಗೆ
ಕೇಳಿಬಂದವಂದು
ಕೋಗಿಲೆ ಗಾನದಂತೆ,

ಜಾಗೃತನಾಗಿದ್ದೆ
ನಾನು ನಿನ್ನ
ಪ್ರೀತಿಯಲೆಂದೂ
ಬೀಳದಂತೆ,

ಬಿದ್ದಾಯ್ತು,
ಇನ್ನು ಬಿಡುಗಡೆಯಿಲ್ಲ,
ನಾ ಬಂಧಿ, ನೀನು ಇರುವೆ ಇಂದು
ಮರವನಪ್ಪಿದ ಬಲಿಷ್ಟ ಬೀಳಿನಂತೆ!
**********


ಕಾಡುವ ಪ್ರಶ್ನೆಗಳು!

16 ಸೆಪ್ಟೆಂ 10

 

ಪರಿಪಕ್ವವಾದ
ತೊಂಬತ್ತರ
ಇಳಿವಯಸ್ಸಿನಲ್ಲಿ,

ಕಾಯುತ್ತಿದ್ದರೂ
ಯಮರಾಜ
ಮನೆ ಬಾಗಿಲಿನಲ್ಲಿ,

ಅದ್ಯಾವುದೋ
ಅವ್ಯಕ್ತ ಸೆಳೆತಕ್ಕೆ
ಒಳಗಾಗಿ,

ದಿಢೀರನೇ
ಆತ್ಮಹತ್ಯೆಗೆ
ಶರಣಾಗಿ,

ಇಹಲೋಕ
ತ್ಯಜಿಸಿದವರ
ನೆನೆದು ನಾ
ನಿಜದಿ ಏನನ್ನಲಿ?

ತೃಪ್ತನಾಗನು
ಮನುಜ
ಪರಿಪಕ್ವನಾದರೂ,

ಹತ್ತಿಕ್ಕಲಾರ ತನ್ನ
ಆಸೆಗಳ, ಎಲ್ಲವೂ
ಮುಗಿದಿದ್ದರೂ,

ತನ್ನದೇನಿಲ್ಲದಿದ್ದರೂ,
ಎಲ್ಲವೂ ತನ್ನದೇ
ಎಂಬ ಭಾವವಿಹುದು,

ಜವಾಬ್ದಾರನಲ್ಲದೇ
ಇದ್ದರೂ, ಎಲ್ಲದಕೂ
ಮನ ಮರುಗುತಿಹುದು,

ತಾನೆಣಿಸಿದಂತೆ
ತನ್ನವರಿಲ್ಲ ಎಂಬ
ಕೊರಗು ಕಾಡಿರಬಹುದೇ?

ತಾನೆಣಿಸಿದಂತೆ
ತಾನೇ ಬಾಳಿಲ್ಲ ಎಂದಾ
ಆತ್ಮ ತೆರಳಿರಬಹುದೇ?

ಕೆಲವು ಪ್ರಶ್ನೆಗಳು,
ಸದಾ ಪ್ರಶ್ನೆಗಳಾಗೇ
ಉಳಿದು ಬಿಡುವವು,

ನಾವು ಮರೆಯಲು
ಯತ್ನಿಸಿದಷ್ಟೂ ಸದಾ
ನಮ್ಮನ್ನು ಕಾಡುವವು!
***********


ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!

14 ಸೆಪ್ಟೆಂ 10

ಹಿಂದೆಂದೂ ಕಂಡರಿಯದ
ಸುದೀರ್ಘ ಅನಾವೃಷ್ಟಿ,
ಆಸುಮನದಲ್ಲಿ ಆಗುತ್ತಿಲ್ಲ
ಈಗೇನೂ ಹೊಸಸೃಷ್ಟಿ;

ಏನನ್ನು ಕಂಡರೂ ಈಗ
ಈ ಮನ ಸ್ಪಂದಿಸುತಿಲ್ಲ,
ಏನನ್ನು ಕೇಳಿದರೂ ಈಗ
ಈ ಮನ ಸ್ಪಂದಿಸುತ್ತಿಲ್ಲ;

ಭಾವನೆಗಳ ಬಾವಿಯೇ
ಬತ್ತಿ ಹೋಗಿರುವಂತಿದೆ
ಹೊಸ ಮಾತೇನೂ ಈ
ಮನದಿಂದ ಬಾರದಂತಿದೆ;

ತೋರುತಿದೆ ನಿರಾಸಕ್ತಿ
ಮನಸ್ಸು ಈಗ ಎಲ್ಲದಕೆ,
ಯಾರೋ ಕೈಯೆತ್ತಿ ಶಾಪ
ನೀಡಿದಂತಿದೆ ಈ ಮನಕೆ;

ಕ್ರಿಯೆಯೂ ಇಲ್ಲ, ಇಲ್ಲಿ
ಯಾವ ಪ್ರತಿಕ್ರಿಯೆಯೂ ಇಲ್ಲ,
ಯಾರು ಏನೆಂದರೂ ಇದು
ಹೊರಡಿಸುವುದೇ ಇಲ್ಲ ಸೊಲ್ಲ;

ಅದು ಯಾವುದೋ ಅವ್ಯಕ್ತ
ನಿರೀಕ್ಷೆ ಈ ಮನದೊಳಗೆ,
ಏನನ್ನೋ ಕೇಳಬಯಸುವ
ಆಸೆ ಇದೆ ನನ್ನೀ ಕಿವಿಗಳಿಗೆ;

ಅದು ಯಾವುದರ ನಿರೀಕ್ಷೆ
ಎಂಬುದರ ಅರಿವೇ ಇಲ್ಲ,
ಆದರೆನಗೆ ನಿರೀಕ್ಷೆ ಸದಾ
ಇದೆ ಈ ಮಾತು ಸುಳ್ಳಲ್ಲ;

ಹಾರಿ ಬಂದೀತು ಸಂದೇಶವನು
ಹೊತ್ತ ಪಾರಿವಾಳ ಸದ್ಯದಲೇ,
ಮನವ ತೆರೆದು ಸ್ಪಂದಿಸುವಂತೆ
ಮಾಡೀತು ನಾನು ಅರಿಯದಲೇ;

ಕಾಯುತ್ತೇನೆ ಆ ಶುಭಗಳಿಗೆಗೆ
ಚಾತಕ ಪಕ್ಷಿಯಂತೆ ಹಗಲಿರುಳು,
ಮತ್ತೆ ಕೇಳಿ ನೀವೀ ಆಸುಮನದಲ್ಲಿ
ದಿನವೂ ಹೊಸ ಹೊಸ ಮಾತುಗಳು!
*************