ಅನ್ಯರಿಗಾಗಿ ಹೇಗೆ ಬರೆಯಲಿ?

12 ಆಗಸ್ಟ್ 12

ನಾ ಬರೆದುದನ್ನು ನನ್ನಿಂದ ನಿರೀಕ್ಷಿಸಿರಲಿಲ್ಲ ಅನ್ನುವವರಲ್ಲೊಂದು ವಿನಂತಿ
ನನ್ನಿಂದ ತಾವೇನನ್ನು ನಿರೀಕ್ಷಿಸುತ್ತೀರಿ ಅನ್ನುವುದನ್ನು ಮಾಡಿಕೊಡಿ ಪಟ್ಟಿ;

ನನ್ನನು ಹೀಗೆಯೇ ಇರಬೇಕೆಂದು ಬಯಸಿ ಹಾಕಿಬಿಡಬೇಡಿ ನನ್ನ ಸುತ್ತ ಚೌಕಟ್ಟು
ನನ್ನನ್ನು ನಾನು ಇರುವಂತೆಯೇ ಸ್ವೀಕರಿಸಿ, ನಾ ಬಿಡಲಾರೆ ಎಂದೂ ನನ್ನ ಪಟ್ಟು;

ತಾವು ಬಯಸಿದುದನ್ನು ಬರೆಯಲು ನಾನೇಕೆ ಬೇಕು? ತಾವೇ ಬರೆಯಬಹುದು
ತಮ್ಮ ಮನದಿಂಗಿತವನು ಅರಿತು, ಹೇಳಿ ನಾನೆಂತು ಇಲ್ಲಿ ಬರೆಯಲುಬಹುದು?

ನನ್ನ ಮಾತಿನ ಮೇಲೆ ನನಗೇ ದೃಢತೆ ಇಲ್ಲವಾದರೆ ಬರೆದು ಪ್ರರಯೋಜನವಿಲ್ಲ
ಬರೆಯುವ ಮೊದಲು ಹತ್ತು ಬಾರಿ ಯೋಚಿಸಿ ಬರೆಯುವೆನಿದು ನಿಜಕ್ಕೂ ಸುಳ್ಳಲ್ಲ;

ಆದರೂ ಬರೆದುದೆನ್ನ ಮನಕ್ಕೆ ಇಷ್ಟವಾಗದಿದ್ದಲ್ಲಿ, ನಂತರವೂ ಕಿತ್ತು ಹಾಕಬಹುದು
ನನ್ನ ಮನಕ್ಕೆ ಅರಿವಾಗಬೇಕು, ಬರೀ ಅನ್ಯರಿಗಾಗಿ ನಾನು ಹೇಗೆ ಬರೆಯಬಹುದು?

**************


ಬದುಕುವ ಕಲೆ!

12 ಆಗಸ್ಟ್ 12

ದುಬಾರಿಯಾದ
ಬದುಕುವ
ಕಲೆಯನ್ನು
ಕಲಿಯುತ್ತಾ
ಕಲಿಯುತ್ತಾ
ಕಿಸೆಯೆಲ್ಲಾ
ಖಾಲಿಯಾಯ್ತು,
ಖಾಲಿ
ಕಿಸೆಯವನ

ಮಡದಿ
ಮಕ್ಕಳ

ಬಾಳು 
ಬೀದಿ
ಪಾಲಾಯ್ತು!

ಕೊನೆಗೂ
ಕಲೆಯಂತೂ
ಕಲಿತಿದ್ದಾಯ್ತು
ಆದರೆ
ಬದುಕಲು
ಬಾಳೇ

ಇಲ್ಲದಂತಾಯ್ತು!
********

ಸಂದೇಶ ತಿನ್ನಿ!

12 ಆಗಸ್ಟ್ 12

 

ಅಕ್ಕಿ, ಗೋಧಿ 
ಸಕ್ಕರೆ, ಎಣ್ಣೆ 
ಬೇಳೆಗಳ
ಬೆಲೆಗಳು
ಗಗನಕ್ಕೇರಿ 
ಸಿಗದಿದ್ದರೆ
ಏನಂತೆ ಕೈಗೆ,

ಸರಕಾರ
ನೀಡಲಿದೆಯಂತೆ 

ಮೊಬೈಲು
ಪ್ರತಿ ಮನೆಗೆ,

ಬೇಕೆಂದಾಗ
ಹುಸಿ ಕರೆಯ
ಮಾಡಿಕೊಂಡಿದ್ದು
ಮೂರು ಹೊತ್ತೂ
ಹೊಸ ಹೊಸ 
ಸಂದೇಶಗಳನ್ನು
ತಿನ್ನಿ, ತಿನ್ನಿಸಿ
ಮಂದಿಗೆ!
******

 


ನಾ…ನಲ್ಲ!

12 ಆಗಸ್ಟ್ 12

ನಿನ್ನ
ಆದೇಶಗಳ
ಪಾಲಿಸುತ್ತಾ
ಪಾಲಿಸುತ್ತಾ
ಇದ್ದು,
ಇದೀಗ
ನನ್ನೊಳಗೇ 
ನಾನಿಲ್ಲ,

ಹೌದು ಕಣೇ
ನೀನು
ಅದೇನೇ

ಹೇಳು,
ಈಗ 
ನಾ…ನಲ್ಲ!
*****


ಸೂರ್ಯನಂತೆ!

12 ಆಗಸ್ಟ್ 12
ಸಖೀ,
ನಿನ್ನ

ಮಾತೂ
ಸತ್ಯ,
ರಾಜಕೀಯ
ಇದ್ದದ್ದೇ
ದಿನನಿತ್ಯ,
ಕತೆಗಳು
ಹೊಸತಾದರೂ
ಹಳಸಿ
ಹಳತಾದಂತೆ!

ನಮ್ಮೊಲವು
ಹಾಗಲ್ಲ,
ಎಷ್ಟೇ
ಹಳತಾದರೂ,
ದಿನ ದಿನವೂ
ಹೊಸತು;
ಮೂಡಣದಿ
ನಿತ್ಯ ಹೊಸ
ಆಶಯದೊಂದಿಗೆ
ಮೂಡುವ
ಸೂರ್ಯನಂತೆ!
********


ಆದೇಶಿಸಿದ್ದಾಳೆ!

12 ಆಗಸ್ಟ್ 12

ಬಿಟ್ಟು ಬಿಡು
ಸುಡುಗಾಡು
ರಾಜಕೀಯ,
ಅದು
ಬರಿದೆ
ಬರಿದಾಗಿಸುವುದು
ನಮ್ಮ
ಸಮಯ;
 

ನಿನಗಿದುವೇ
ಸೂಕ್ತ,
ನೀನಿದರಲ್ಲೇ
ನಿಸ್ಸೀಮ,
ಸದಾ
ತುಂಬುತ್ತಿರು
ನಿನ್ನ
ಕವಿತೆಗಳಲ್ಲಿ
ಪ್ರೇಮ!
*****


ಸಮಾಧಾನ – ಛಾಪು!

12 ಆಗಸ್ಟ್ 12
ಸಮಾಧಾನ!

ಸಖೀ,
ನಾನೇನ

ಬರೆದರೂ
ಅದ
ನೀನು
ಓದುವ
ತನಕ 
ನನಗೆ
ಇರದು
ಸಮಾಧಾನ!
*****

ಛಾಪು!

ಸಖೀ
ಅಲ್ಲೆಲ್ಲಾ ಎಲ್ಲೆಲ್ಲಾ

ನೋಡುವೆಯೇಕೆ
ಮೂಡಿಸುವೆಡೆ
ನನ್ನದೇ ನೆನಪು
ನಿಂತಲ್ಲೇ ನಿಂತು
ಕಣ್ಣಲ್ಲಿ ಕಣ್ಣಿಟ್ಟು
ನೋಡಿದರೆ
ನೋಡಬಲ್ಲೆ ನೀ
ನಿನ್ನದೇ ಛಾಪು!
******


ತೊರೆದು ಬಂದಿಹ ನನ್ನೂರೇ!

12 ಆಗಸ್ಟ್ 12

ತೊರೆದು ಬಂದಿಹ ನನ್ನ ಊರೇ
ದೂರವಾಗಿಹ ಮನೆಯಂಗಳವೇ
ನಿನಗರ್ಪಣವೀ ಹೃದಯವು
ನೀನೇ ನನ್ನ ಹಂಬಲವು
ನೀನೇ ನನ್ನ ಮಾನವು
ನೀನೇ ನನ್ನ ಪ್ರಾಣವು

ನನ್ನ ಊರನು ಬಳಸಿ ಬರುವ ಗಾಳಿಗೆ ವಂದಿಸುವೆನು
ನನ್ನ ಊರ ಹೆಸರ ನುಡಿವ ಮುಖಕೆ ನಾ ಮುತ್ತಿಡುವೆನು
ನನ್ನೂರ ಮುಂಜಾನೆ ಸೊಗಸು, 
ಸಂಜೆಗೆ ಸೋಲುವುದು ಮನಸು
ನಿನಗರ್ಪಣವೀ ಹೃದಯವು

ಅಮ್ಮನ ಹೃದಯದಂತೆನ್ನೆದೆಯ ಅಪ್ಪಿಕೊಳ್ಳುವೆ ನೀನು
ನನಗೆ ನನ್ನ ಮಗಳಿನಂತೆ ನೆನಪು ಆಗುತ್ತಿರುವೆ ನೀನು
ನನಗೆ ನೆನಪಾದಷ್ಟೂ ನೀನು,
ಬಿಡದೆ ಪರಿತಪಿಸುವೆನು ನಾನು
ನಿನಗರ್ಪಣವೀ ಹೃದಯವು

ಊರ ತೊರೆದಿಷ್ಟೊಂದು ದೂರ ನಾನೇನೋ ಬಂದಿಹೆ
ಅದರೂ ನಿನ್ನ ತೊರೆಗಳಾಣೆಗೂ ಈಗ ನಾ ನುಡಿದಿಹೆ
ನಾ ಜನಿಸಿದ ನನ್ನೂರಿನಲ್ಲೇ
ನನ್ನ ಉಸಿರು ತೊರೆಯಲೆನ್ನ
ನಿನಗರ್ಪಣವೀ ಹೃದಯವು
**************

ಇಂದು ಮುಂಜಾನೆ ದೂರದರ್ಶನದ ರಂಗೋಲಿ ಕಾರ್ಯಕ್ರಮದಲ್ಲಿ ಕೇಳಿದ ಈ ಹಾಡನ್ನು (Aye Mere Pyaare Vatan, Aye Mere Bichhade Chaman) ನನ್ನೂರಿನ ನೆನಪಿನ ಜೊತೆಗೆ, ನನ್ನದೇ ವಾಸ್ತವದ ಭಾವ ಸಂಯೋಜನೆಯೊಂದಿಗೆ, ಕನ್ನಡಕ್ಕೆ ಇಳಿಸಿದ್ದೇನೆ.

ಮರಣೋತ್ತರ ಪರೀಕ್ಷೆ ಬೇಡ!

12 ಆಗಸ್ಟ್ 12

ಸಖೀ,
ನಾನು ಆಡುವ ಮಾತುಗಳೆಲ್ಲಾ ನನ್ನವು
ಹಾಗೆಯೇ ನಿನ್ನ ಮಾತುಗಳೆಲ್ಲಾ ನಿನ್ನವು

ಈ ಭಾವ ಭಾವಗಳ ಬಂಧ ಬಿಗಿಯಾಗಿರಲು
ಸಂಬಂಧಗಳ ನಡುವೆ ಇರದು ಪರೀಕ್ಷೆಗಳು

ಮೌನ–ಮಾತು ಮಾತು-ಮೌನ ಹೀಗೆಯೇ
ಸಾಗುತ್ತಿರಬೇಕೀ ಜೀವನ ಎಂದಿನಂತೆಯೇ

ಆಡಿದ ಪ್ರತಿ ಮಾತಿನ ಮರಣೋತ್ತರ ಪರೀಕ್ಷೆ
ಮಾಡಿದರೆ ಈ ಜೀವನವೇ ಆದೀತೊಂದು ಶಿಕ್ಷೆ

ನನ್ನ ಭಾವಗಳಿಗೆ ನಾನೇ ಜವಾಬ್ದಾರ ನೀನಲ್ಲ
ನಿನ್ನನಿಸಿಕೆಗಳಿಗೆ ಜವಾಬ್ದಾರಳು ನೀ ನಾ…ನಲ್ಲ!
************************