ಮಗಳ ಭವಿಷ್ಯಕ್ಕಾಗಿ ನಿಮ್ಮ ಹಾರೈಕೆಗಳಿರಲಿ!!!

25 ಆಗಸ್ಟ್ 09
 

ಇನ್ನು ನಾಲ್ಕು ದಿನ ನಾ ಬರುವುದಿಲ್ಲ ಇಲ್ಲಿಗೆ
ಹೊರಟು ನಿಂತಿಹೆನು ಕರಾವಳಿಯ ಊರಿಗೆ
 
ಮಗಳೀಗ ತನ್ನ ಜೀವನದ ಹೊಸ ತಿರುವಿನಲ್ಲಿ
ಇನ್ನವಳು ಇರಬೇಕು ಇಲ್ಲಲ್ಲ ವಸತಿ ಗೃಹದಲ್ಲಿ
 
ಹೊಸ ಊರು ಹೊಸ ಜನರು ಹೊಸ ಹುಮ್ಮಸ್ಸು
ಹೊಸತೆಲ್ಲವನೂ ಬರಮಾಡಿಕೊಂಬ ಆ ವಯಸ್ಸು
 
ಪುಣ್ಯಕೋಟಿ ಕರುವನು ಬಿಟ್ಟು ಹೋದ ಆ ಕವಿತೆ
ನೆನಪಾದರೂ ಅಷ್ಟೇನೂ ಇಲ್ಲ ಈ ಮನದಿ ವ್ಯಥೆ
 
ನಾಳೆಯ ದಿನಗಳು ಹೇಗೋ ದೇವರಿಗೇ ಗೊತ್ತು
ಮನದ ತುಂಬ ಆಶಾ ಭಾವನೆಗಳಿವೆ ಈ ಹೊತ್ತು
 
“ಡಾಕ್ಟ್ರ” ಮಗನೆಂದು ಕರೆಸಿಕೊಂಡೇ ಬೆಳೆದವನು
“ಡಾಕ್ಟ್ರ” ಅಪ್ಪನೆಂದು ಕರೆಸಿಕೊಳ್ಳಲು ಕಾಯುವೆನು
 
ನನ್ನ ಒಳಗಿರುವ ಅಪೂರ್ಣ ಆಶಯಗಳನು ನಾನು
ಆಕೆಯ ಮುಖಾಂತರ ಪೂರೈಸ ಹೊರಟಿಹೆನೇನು
 
ನನ್ನದೋ ಅವಳದೋ ಆಶಯಗಳು ಪೂರೈಸಲಿ
ಅವಳ ಭವಿಷ್ಯಕ್ಕಾಗಿ ನಿಮ್ಮೆಲ್ಲರ ಹಾರೈಕೆಗಳಿರಲಿ

 


ಆದ್ವಾನಿಯವರೇ ಮಾತನಾಡಿ ಇಲ್ಲಾ ಪಕ್ಷ ಬಿಟ್ಟು ಹೊರಡಿ!!!

25 ಆಗಸ್ಟ್ 09

ಆದ್ವಾನಿಯವರೇ ಮಾತನಾಡಿ ಇಲ್ಲಾ ಪಕ್ಷ ಬಿಟ್ಟು ಹೊರಡಿ
ಮಾತನಾಡಲಾಗದಿದ್ದರೆ ಬೇರೆಯವರಿಗೆ ಜಾಗ ಖಾಲಿ ಮಾಡಿ

ಮುಂದಿನ ಮಹಾ ಚುನಾವಣೆಯಲಿ ಸ್ಪರ್ಧಿಸಲೇ ಬೇಕೆಂದೇನಿಲ್ಲ
ನೀವಿರದಿದ್ದರೂ ಭಾಜಪಾದಲ್ಲೊಳ್ಳೆಯ ನಾಯಕರು ಇದ್ದಾರಲ್ಲಾ

ನಿಮಗೆ ಪ್ರಧಾನಿಯಾಗುವ ಯೋಗ್ಯತೆ ಇತ್ತು ಇದು ನಿಜಕೂ ಸತ್ಯ
ಇನ್ನೈದು ವರ್ಷ ಕಾದರೆ ನಿಮ್ಮ ಆರೋಗ್ಯಕ್ಕೆ ಆಗಬಹುದು ಅಪಥ್ಯ

ಕುಟುಂಬದಲ್ಲಿನ ಓರ್ವ ಧೂರ್ತ ತಂದೆಯ ನೆನಪು ಮಾಡಿಸಿದಿರಿ
ಆತನಂತೆಯೇ ಕಿರಿಯರು ಮಾತನಾಡಲು ಆತನಿಗೇಕೋ ಕಿರಿಕಿರಿ

ಅಂದು ಜಿನ್ನಾನನ್ನು ಹೊಗಳಿ ಮತ್ತೆ ಕಣ್ಣೀರ ಹರಿಸಿ ಮೆಚ್ಚಿಸಿದಿರಲ್ಲ
ಇಂದು ಜಸ್ವಂತ್ ಅದನ್ನೇ ಬರೆದರೆ ಎಲ್ಲರೂ ಉಗಿಯುತಿಹರಲ್ಲಾ

ಅಸಹಾಯಕನಾದ ಭೀಷ್ಮನಂತೆ ಮೌನಿಯಾಗಿಯೇ ಉಳಿಯದಿರಿ
ನಿಮ್ಮ ಮೌನ ಪಕ್ಷಕ್ಕೆ ಮಾಡಬಹುದಾದ ಹಾನಿಯನ್ನು ನೀವರಿತಿರಿ

ಸಮಸ್ಯೆ ಪರಿಹಾರವಾಗದಿದ್ದರೆ ಪಕ್ಷವನು ಯಾರೂ ಉದ್ಧರಿಸಲಾರರು
ನೀವು ಮುಂದೆ ಪರಿತಪಿಸಿ ಗೋಗರೆದರೆ ಯಾರೂ ಕಿವಿಗೊಡಲಾರರು


Mr. Advani Speak Out…!!!

24 ಆಗಸ್ಟ್ 09
 
 
 
Mr. LK Advani you either speak out or just walk out
Please make way for others if you can’t speak out
 
It is not that you must have to fight another election
Without you also BJP would have a better selection
 
You deserved to be a Prime Minister we all do agree
To wait for five years now your health may disagree
 
You remind me of an old arrogant head of a family
Who would never like the youngsters speak openly
 
You prasied Jinnah and later shed tears to please all
When Jaswant writes every one in party is crying foul
 
You’re silent like Bhishma Pitamaha who was helpless
Your silence would badly affect the party in no way less
 
BJP would never regain power if this crisis is mishandled
Even if you regret your inaction your voice may not be heard

ಅಭಿವೃದ್ಧಿ ಅಸಾಧ್ಯ ಮುಖ್ಯಮಂತ್ರಿ ಆಗದಿದ್ದರೆ ನಿರ್ಭಯ!!!

24 ಆಗಸ್ಟ್ 09

ಆದ್ವಾನಿಯ ಹಳೇ ಮಾತನ್ನೇ ಬರೆದು ಪ್ರಕಟಿಸಿದರು ಜಸ್ವಂತ
ಪಕ್ಷ ಉಚ್ಚಾಟಿಸಿತು ಅಲ್ಲವೆಂದು ಹೇಳಿ ಯಾರೂ ಪಕ್ಷಕ್ಕೆ ಸ್ವಂತ

ಇಲ್ಲಿ ಯಡಿಯೂರಪ್ಪನವರಿಗೆ ಈಗೆಲ್ಲಾ ಬರೀ ನಿದ್ದೆಯಿಲ್ಲದ ರಾತ್ರಿ
ಕೇಂದ್ರದ ಭಾಜಪಾ ಒಡೆದರೆ ಇಲ್ಲೂ ಒಡೆಯುವುದಂತೂ ಖಾತ್ರಿ

ಸಂಪಂಗಿಯ ನಂತರ ಈಗ ಈ ಸುಧಾಕರ ರೆಡ್ಡಿಯ ಅವಾಂತರ
ಭ್ರಷ್ಟಾಚಾರದ ಸಮಸ್ಯೆಗಳು ಹೀಗೆ ಕಾಡುತ್ತಲೇ ಇವೆ ನಿರಂತರ

ವರುಷ ಕಳೆದರೂ ಒಂದು ದಿನವನ್ನೂ ನೆಮ್ಮದಿಯಿಂದ ಕಳೆದಿಲ್ಲ
ಮರಿ ಚುನಾವಣೆಯ ಫಲಿತಾಂಶವು ಎಳ್ಳಷ್ಟೂ ಹರುಷ ತರಲಿಲ್ಲ

ನಾನೇ ನಾನೆಂದ ಸೋಮಣ್ಣ ಹೀಗಲ್ಲಿ ಮಣ್ಣು ಮುಕ್ಕ ಬೇಕಾಯ್ತು
ಆತನನು ಮಂತ್ರಿ ಮಾಡಿದ ತಪ್ಪಿನರಿವು ಯಡ್ಡಿಗೆ ಈಗಷ್ಟೇ ಆಯ್ತು

ಮನತಣಿಸಲು ಸೋತ ಯೋಗೀಶನ ಮನೆಗೆ ಖುದ್ದು ಭೇಟಿ ನೀಡಿ
ತನಗಿರುವ ಅಭದ್ರತೆಯ ಭಯವ ಬಹಿರಂಗ ಪಡಿಸಿದರು ನೋಡಿ

ಮುಖ್ಯಮಂತ್ರಿಯಾದರೂ ಮನದ ತುಂಬಾ ಒಂದಿಲ್ಲೊಂದು ಭಯ
ಈ ನಾಡ ಅಭಿವೃದ್ಧಿ ಅಸಾಧ್ಯ ಮುಖ್ಯಮಂತ್ರಿ ಆಗದಿದ್ದರೆ ನಿರ್ಭಯ


ಅಳಲಾಗದು ಸಖೀ…!!!

13 ಆಗಸ್ಟ್ 09

ಸಖೀ, ಈ ಹಿರಿತನ ಏಕೆ ಬೇಕಿತ್ತು
ಅಂದಿನ ಆ ಬಾಲ್ಯ ಅದೆಷ್ಟು ಚೆನ್ನಿತ್ತು

ಅಂದು,
ಈ ಮನದಿ ನೋವುಗಳು ಇದ್ದಿಲ್ಲವೆಂದೇನಲ್ಲ;
ಆದರೆ, ಮನ ನೊಂದಾಗ ಎಲ್ಲಾದರಲ್ಲಿ ಕೂತು
ನಾವು ಮನಬಿಚ್ಚಿ ಬೇಕೆನಿಸಿದಷ್ಟು ಅಳುತ್ತಿದ್ದೇವಲ್ಲ
ಅತ್ತರೂ, ಆಗ ನಮ್ಮನಾರೂ ಕೇಳುವವರಿರಲಿಲ್ಲ
ಕೇಳಿದರೂ ಪುಸಲಾಯಿಸಿ ಸಮಾಧಾನ ಪಡಿಸಿ
ನಮ್ಮ  ನೋವ ಅರಿತುಕೊಂಡವರೇ ಅಲ್ಲಿ ಆಗೆಲ್ಲಾ
 
ಇಂದು,
ನೂರೆಂಟು ನೋವುಗಳು ತುಂಬಿವೆ ಮನದೊಳಗೆಲ್ಲಾ
ಈ ನೋವುಗಳ ಬಹಿರಂಗಪಡಿಸಲಾಗುವುದಿಲ್ಲ
ಒಳಗೊಳಗೇ ಕೊರಗುತಿರಬೇಕು ನಾವು ಹಗಲೆಲ್ಲಾ
 
ಅಳು ಬಂದಾಗ ಮನಬಿಚ್ಚಿ ಅಳಲೂ ಆಗುವುದಿಲ್ಲ
ಅತ್ತರೂ, ಕಂಡು ಹುಬ್ಬೇರಿಸುವ ಕಣ್ಣುಗಳೇ ಇಲ್ಲೆಲ್ಲ
ಈ ಮನದ ನೋವ ಅರಿತುಕೊಂಬವರಾರೂ ಇಲ್ಲಿಲ್ಲ
ಕರೆದು ಎರಡು ಸಾಂತ್ವನದ ಮಾತ ಆಡುವವರೇ ಇಲ್ಲ
 
ಅದಕ್ಕೇ ನನಗೆ ಬಾಲಕನಾಗುವ ಬಯಕೆ ಈಗೆಲ್ಲಾ
ಅಳಬಹುದು ಸಖೀ, ಅತ್ತು, ಈ ಮನದ ನೋವ
ನೀಗಿಸಿಕೊಳ್ಳಬಹುದು ಎಲ್ಲೆಂದರಲ್ಲಿ ನಾವು ಹಗಲೆಲ್ಲಾ!


ಇರಬಹುದೇ ಇದು ಪಂಜುರ್ಲಿ ಕಾಟ..?!

12 ಆಗಸ್ಟ್ 09

ಪ್ರಾಣಿ ಜಾತಿ ಮನುಜ ಕುಲದ ಮೇಲೆ ಹಗೆ ತೀರಿಸುವಂತಿದೆ
ಹಕ್ಕಿ ಜ್ವರ ಆಯ್ತು, ಈಗ ನೋಡಿದರೆ ಹಂದೀಜ್ವರ ಬಂದಿದೆ

ಸ್ವತಂತ್ರರಾಗಿ ಬದುಕಲು ಬಿಡದೆ ಹಿಡಿದು ತಿಂಬ ಮನುಜ
ಅದಕೆ ಈ ರೀತಿ ಸೇಡು ತೀರಿಸಿಕೊಳ್ಳುತ್ತಿರಬಹುದು ಸಹಜ

ಕೊಂದ ಪಾಪ ತಿಂದೂ ಪರಿಹಾರ ಆಗಿಲ್ಲದೇ ಇರಬಹುದು
ಸಸ್ಯಾಹಾರಿಗಳು ತಮ್ಮ ತಪ್ಪಿಲ್ಲದೇ ಅನುಭವಿಸಲುಬಹುದು

ಸಹವಾಸದಲಿ ಪರರ ಪಾಪ ಹಂಚಿಕೊಂಡು ಅನುಭವಿಸಬೇಕು
ಸಸ್ಯಾಹಾರಿಗಳಿಚ್ಛೆ ಇದರಿಂದ ಹೇಗಾದರೂ ಬಚಾವಾಗಬೇಕು

ಮನುಜನಿಗೂ ಪ್ರಕೃತಿಗೂ ನಡುವಿಹುದು ಸತತ ಪೈಪೋಟಿ
ಕಷ್ಟ ಅನುಭವಿಸಿದರೂ ಜಯಿಸುವೆನೆಂಬ ಮನುಜನೇ ಘಾಟಿ

ಎಲ್ಲದಕೂ ಉತ್ತರ ಹುಡುಕುವ ಜಾಣ್ಮೆ ಇರಬಹುದು ನಮ್ಮಲ್ಲಿ
ಆದರೂ ಅದಕೆ ಮೊದಲು ಕಾಣೆಯಾದರೆಷ್ಟು ಮಂದಿ ಜಗದಲ್ಲಿ

ಹಲವರು ಇನ್ನು ಅಂದರೂ ಅನಬಹುದು ಇದು ಪಂಜುರ್ಲಿ ಕಾಟ
ಪಂಜುರ್ಲಿ ಕೋಲದ ಹರಕೆ ಹೊತ್ತರೆ ಇರಲಾರದು ಈ ಸಂಕಟ
🙂

ಪಂಜುರ್ಲಿ: ತುಳುನಾಡಿನಲ್ಲಿ ಅರಾಧಿಸಲ್ಪಡುವ ಹಂದಿ ರೂಪದ ದೈವ.


ಕಲಸು ಮೇಲೋಗರ…!!!

10 ಆಗಸ್ಟ್ 09
 
 
 
ಅಂತೂ ಇಂತೂ ತಿರುವಳ್ಳುವರ್ ಪ್ರತಿಮೆಯ ಸ್ಥಾಪಿಸಿ
ಸರಕಾರ ನಗುತಿದೆ ನೋಡಿ ವಿಜಯ ಪತಾಕೆ ಹಾರಿಸಿ
 
ಕನ್ನಡ ಪರ ಸಂಘಟನೆಗಳು ಸೋತರೂ ಸೋತಂತಲ್ಲ
ಅವುಗಳ ಶಕ್ತಿ ಏನೆಂಬುದು ಎಲ್ಲರಿಗೂ ಗೊತ್ತಾಯಿತಲ್ಲಾ
 
*******************************
 
ಟೀವಿಯ ಸ್ವಯಂವರದಿ ಈಲೇಶನನು ವರಿಸಿದಳು ರಾಖಿ
ಉಳಿದ ಆಕಾಂಕ್ಷಿಗಳ ಕೈಗಳಿಗೆ ರಾಖಿ ಕಟ್ಟಿದಳೋ ರಾಖಿ
 
ಎಷ್ಟೇ ಆದರೂ ಒಪ್ಪಿ ಮೆಚ್ಚಲೇ ಬೇಕು ಆಕೆಯ ತಲೆಯನ್ನು
ಹಾಕಿಕೊಂಡಳಲ್ಲ ತನ್ನ ಬಲೆಗೆ ಭರ್ಜರಿ ತಿಮಿಂಗಿಲವನ್ನು
 
*******************************
 
ಮೃತಳಾದ ಪುಣೆಯ ಹೆಮ್ಮಗಳು ಜ್ವರ ಹರಡಿದಳೆಂಬುದೇಕೆ
ತಾನಾಗಿಯೇ ಸಾಯಬೇಕೆಂದೇನೂ ಬಯಸಿರಲಿಲ್ಲವಲ್ಲ ಆಕೆ
 
ಮಂತ್ರಿಯಾದರೇನು ಇರಬೇಕು ಮಾತಿನಲ್ಲಿ ಕೊಂಚ ಹಿಡಿತ
ಹೀಗೆಯೇ ಆಡಿದರೆ ತಿನ್ನಬೇಕಾದೀತಾತ ಜನರಿಂದ ಒದೆತ
 
********************************
 
ಯಾರಾದರೂ ಸೀನಿದರೆ ಕೆಮ್ಮಿದರೆ ನಿಮ್ಮೆದುರು ನಿಂದು
ಮುಖ ಮುಚ್ಚಿ ಕೊಳ್ಳಿ ಕೂಡಲೇ ಆ ಜ್ವರ ಹರಡದಿರಲೆಂದು
 
ಈ ಮಹಾಮಾರಿ ಇನ್ನೂ ಸಾಕಷ್ಟು ಜೀವಗಳ ತೆಗೆಯಲಿದೆ
ಸ್ವಲ್ಪ ಯಾಮಾರಿದರೂ ನಿಜದಿ ನಮ್ಮ ಜೀವ ಅಳಿಯಲಿದೆ
 
********************************

ಜಯಾದಿತ್ಯನ ಕಣ್ಣು ಮುಚ್ಚಾಲೆ ಆಟ..!!!

07 ಆಗಸ್ಟ್ 09

asu017

ಇಲ್ಲೇ ಈ ಕುರ್ಚಿಯ ಅಡಿಯಲ್ಲಿ ಅಡಗಿ ಕೊಳ್ತೀನಿ…

Let me hide myself here…

asu018

 

ಯಾರೋ ನೋಡ್ತಿರೋ ಹಾಗಿದೆ…!

Someone seems to be looking at me…!

asu019

ಅಯ್ಯೋ ಸಿಕ್ಕಿ ಬಿದ್ದೆ… ಬೈತಾರೇನೋ…?!

 Oh…I am caught…!

asu016

ನಾನು ಸುಮ್ನೆ ತಮಾಷೆಗೆ ಅಡಗಿದ್ದು…!!!

I was just kidding…!!!

🙂

(ಜಯಾದಿತ್ಯ: ನನ್ನ ತಮ್ಮ ದೀಪಕ್ ಮತ್ತು ದಿವ್ಯಾ ದಂಪತಿಗಳ ಸುಪುತ್ರ )

(He is Jayaditya,  son of my brother Deepak  & Divya)


ಕೈಗೆ ಚೊಂಬೇ ಗತಿಯೆಂದ ಈ ಅಲ್ಪಜ್ಞ!!!

07 ಆಗಸ್ಟ್ 09

ಅಲ್ಲಿ ಸರ್ಕಾರಕ್ಕೆ ಬೆಂಬಲ ತೋರಿಸಿ
ಜೈಕಾರ ಹಾಕಿದ ಸಾಹಿತಿಗಳ ದಂಡು
ಮುಂದೆ ಪ್ರಶಸ್ತಿಗಾಗಿ ಅರ್ಜಿ ಹಾಕಬಹುದೆಂದ ಈ ಅಲ್ಪಜ್ಞ

ಇನ್ನು ಕೆಲವರು ತಮ್ಮ ಮೂರ್ತಿಗಳ
ನೆರೆ ರಾಜ್ಯಗಳಲಿ ಸ್ಥಾಪಿಸಿ ಎನ್ನುವ
ಹೊಸ ಬೇಡಿಕೆ ಮುಂದೊಡ್ಡಬಹುದೇ ಎಂದ ಈ ಅಲ್ಪಜ್ಞ

ಸರ್ವಜ್ಞ ವಚನಗಳ ಪಾಲಿಸದೇ ತಮ್ಮ
ಮನಗಳಿಂದ ಮಾಡಿಯಾಗಿದೆ ದೂರ
ಈಗ ಅವರನ್ನೂ ಅಟ್ಟುತ್ತಿದ್ದಾರೆ ದೂರವೆಂದ ಈ ಅಲ್ಪಜ್ಞ

ಇಲ್ಲಾದರೋ ತಮಿಳರಿದ್ದಾರೆ ಸುತ್ತ
ತಿರುವಳ್ಳುವರ್ ಪ್ರತಿಮೆಯ ರಕ್ಷಣೆಗೆ
ಅಲ್ಲಿ ಸರ್ವಜ್ಞನ ಕಾಯುವುದಕೆ ಯಾರಿಹರೆಂದ ಈ ಅಲ್ಪಜ್ಞ

ಮೂರ್ತಿ ಕೆಡಹಿ ಕೆಳಗೆ ಹಾಕಿದರೆ
ನಾಳೆ | ಅದ ಮತ್ತೆ ಎತ್ತಿ ನಿಲ್ಲಿಸಲು
ನಮ್ಮ ಸರ್ಕಾರಕ್ಕೆ ಅಸಾಧ್ಯದ ಮಾತೆಂದ ಈ ಅಲ್ಪಜ್ಞ

ತಮಿಳರ ಮತ ಆ ನಿಧಿ ವಾಲಿರುವ
ಪಕ್ಷದ ಕಡೆಗೆ | ಇಲ್ಲಿ ಮೂರ್ತಿ ಸ್ಥಾಪಿಸಿ
ಓಲೈಸಿದವರ ಕೈಗೆ ಚೊಂಬೇ ಗತಿಯೆಂದ ಈ ಅಲ್ಪಜ್ಞ


ಈ ದಿನ ನನ್ನ ಸಹೋದರಿಯರಿಗಾಗಿ!!!

05 ಆಗಸ್ಟ್ 09
ಈ ದಿನ ನನ್ನ ಸಹೋದರಿಯರಿಗಾಗಿ
ಒಮ್ಮೊಮ್ಮೆ ನನಗಮ್ಮನಾದವರಿಗಾಗಿ
ಈ ಬೆರಳ ಹಿಡಿದು ನಡೆಸಿದವರಿಗಾಗಿ
ನನ್ನ ಬೆರಳ ಹಿಡಿದು ನಡೆದವರಿಗಾಗಿ
 
ಮನವ ಮುರಿದು ನಡೆದು ಬಿಟ್ಟವರಿಗಾಗಿ
ಮತ್ತೆ ಮರಳಿ ಬರಲು ಆಗದವರಿಗಾಗಿ
ಮರೆತರೂ ಮತ್ತೆ ನೆನಪಾಗುವವರಿಗಾಗಿ
ನೆನಪನ್ನೇ ಮಾಡಿಕೊಳ್ಳದಿರುವವರಿಗಾಗಿ
ಮರೆತಂತೆ ನಟಿಸುತ್ತಾ ಇರುವವರಿಗಾಗಿ
 
ಅಕ್ಕರೆಯಿಂದ ಮಾತನಾಡಿದವರಿಗಾಗಿ
ಮಮತೆಯಿಂದ ಮಾತಾಡಿಸಿದವರಿಗಾಗಿ
ಮನದೊಳಗೆ ಮನೆ ಮಾಡಿದವರಿಗಾಗಿ
ಇದ್ದಿಲ್ಲದ ನಂಟು ಬೆಸೆದು ಕೊಂಡವರಿಗಾಗಿ
ಹೊಸ ನಂಟು ಹುಟ್ಟು ಹಾಕಿಸಿದವರಿಗಾಗಿ
 
ಈ ದಿನ ಆ ನನ್ನ ಸಹೋದರಿಯರಿಗಾಗಿ
ಈ ದಿನ ಹೊಸದಾಗಿ ನನ್ನ  ಸಹೋದರಿಯರಾದವರಿಗಾಗಿ