ಪೈಪೋಟಿ ಇಲ್ಲ!

31 ಡಿಸೆ 13

 

ಸಖೀ,
ನನ್ನ ಪೈಪೋಟಿ ಸದಾ ನನ್ನೊಂದಿಗೇ
ಇಂದಿನ ಪೈಪೋಟಿ ನಿನ್ನೆಯೊಂದಿಗೇ
ಸಾಧ್ಯವಿಲ್ಲ ಇನ್ನಾರೊಂದಿಗೂ ಜಗದಿ
ನನ್ನಂಥವರಿಲ್ಲ ಇಲ್ಲಿ ಯಾರೂ ನಿಜದಿ

ನನ್ನಮ್ಮ ಅಪ್ಪನಂಥವರಾರಿಗೂ ಇಲ್ಲ
ನನ್ನಣ್ಣ ತಮ್ಮಂದಿರು ಇಲ್ಲಾರಿಗೂ ಇಲ್ಲ
ನನ್ನಕ್ಕ ತಂಗಿಯಂಥವರಾರೂ ಇಲ್ಲಿಲ್ಲ
ನನ್ನ ಪತ್ನಿ ಮಗಳನ್ನು ಹೋಲುವವರಿಲ್ಲ

ಯಾವ ಕೋನದಿಂದಲೂ ಸಮಾನರಿಲ್ಲ
ಹಾಗಾಗಿ ಪೈಪೋಟಿ ಎಂದೆಂದಿಗೂ ಸಲ್ಲ!


ಪ್ರಾರ್ಥನೆ!

31 ಡಿಸೆ 13

ಆಂಗ್ಲ ಹೊಸ ವರುಷ ೨೦೧೪ರಲ್ಲಿ 
ನನ್ನ ಮಾತುಗಳಲ್ಲಿ ಆಂಗ್ಲಭಾಷೆಯ
ಪದಗಳನಗತ್ಯ ಬೆರಕೆಯಾಗದಂತೆ 
ಜಾಗ್ರತೆ ವಹಿಸುತ್ತೇನೆಂಬ ನನ್ನ ಈ 
ನಿರ್ಣಯಕ್ಕೆ ತುಂಬು ಮನಸ್ಸಿನಿಂದ
ತಥಾಸ್ತು ಅನ್ನಿ ಓ ತಾಯಿ ಸರಸ್ವತಿ;
ಎಲ್ಲವೂ ನನ್ನಿಂದಲೇ ಎಂಬಹಂಕಾರ
ತುಂಬಿಕೊಂಡರೆನ್ನ ಸ್ಥಿತಿ ಅಧೋಗತಿ!


ನಿರ್ಣಯ!

31 ಡಿಸೆ 13

 

ಸಖೀ,
ನಿನ್ನೆಯ ಹಾಗೆಯೇ ಇಂದು
ಇಂದಿನ ಹಾಗೆಯೇ ನಾಳೆ
ದಿನಾಂಕಪಟ್ಟಿಯಲ್ಲಿ ಬದಲು
ಆಗಬಹುದು ಒಂದು ಹಾಳೆ
ನಾನಿದ್ದಂತೆಯೇ ಇರುತ್ತೇನೆ
ಬದಲಾದರೀ ಬಾಳು ಗೋಳೇ!


ನಂದಿಲ್ಲ ತಪ್ಪು!

31 ಡಿಸೆ 13

 

ಸಖೀ,
ನೀನೇ ನನ್ನನ್ನು ನೆನಪಿಸಿಕೊಂಡು
ನೋವುಗಳನ್ನೆಲ್ಲಾ ನುಂಗಿಕೊಂಡು
ವಿರಹದಲಿ ಕೊರಗುತಿರುವುದಕ್ಕೆಲ್ಲಾ
ನೆನಪಾಗುವ ನನ್ನ ದೂರುವೆಯಲ್ಲಾ?


೨೦೧೪!

31 ಡಿಸೆ 13
ಸಖೀ,
ಬರಲಿದೆಯಂತೆ
ಎರಡು ಸಾವಿರದ
ಹದಿನಾಲ್ಕು;ನಮ್ಮದಾಗಿರಲಿ
ಎರಡೂ ಸಾವಿರದ
ಸುಖೀ ಬದುಕು;

ನೀನಿರು ಜೊತೆಗೆ
“ವರಿ”ಯಿಂದಾರಂಭಿಸಿ
ಬರದವರೆಗೆ;

ನಾನಿರುವೆ ನಿನಗಾವ
“ವರಿ” ಇರದಂತೆ ,
“ಬರ” ಬಾರದಂತೆ!


ಅಂದಿನ ಅಂದವ ಕಂಡು…!

30 ಡಿಸೆ 13

 
old_photo

 

ಸಖೀ,
ಅಂದಿನ ಅಂದವ ಕಂಡು ಬಾಯಿ ಬಿಟ್ಟೆಯಲ್ಲೇ
ಇಂದು ಒಂದೆರಡಾದರೂ ಮಾತನಾಡು ನಿಲ್ಲೇ

ನಾಳೆ ಏಕಾಂತದಲಿ ಕೂತು ನೆನೆಯಲು ಬೇಕು
ಮನಬಿಚ್ಚಿ ಆಡುವ ಒಂದೆರಡು ಮಾತು ಸಾಕು!


ಮಡಿಲಲ್ಲಿ ತಲೆಯಿರಿಸಿ!

28 ಡಿಸೆ 13

(ಹಿಂದೀ ಚಿತ್ರಗೀತೆಯ ಭಾವಾನುವಾದದ ಯತ್ನ)

ನಿನ್ನಯ ಮಡಿಲಲ್ಲಿ ತಲೆಯನ್ನಿರಿಸಿ ರೋದಿಸಿದೆ
ನನ್ನ ನೋವಿನ ಕತೆಯ ಕೇಳಿಸುತ್ತಾ ರೋದಿಸಿದೆ

ಈ ಜೀವನ ನನ್ನಲ್ಲಿ ಬೇಸರ ತುಂಬಿದಾಗಲೆಲ್ಲಾ
ಭಯದಿಂದ ನಿನ್ನ ಸನಿಹವೇ ಬಂದು ನಿಂತೆನಲ್ಲಾ
ತಗ್ಗಿಸಿದ ತಲೆಯ ತಗ್ಗಿಸಿಕೊಂಡೇ ನಾ ರೋದಿಸಿದೆ

ಈ ಸಂಜೆ ಕಣ್ಣೀರಿಳಿಸುತ್ತಾ ಬಳಿ ಬಂದಾಗಲೆಲ್ಲಾ
ಸುತ್ತಲೂ ನೋವಿನ ಛಾಯೆ ಆವರಿಸಾದಗಲೆಲ್ಲಾ
ನೆನಪಿನ ದೀಪವನು ಬೆಳಗಿ ನಾನು ರೋದಿಸಿದೆ

ವಿರಹದ ನೋವನ್ನು ನನ್ನಿಂದ ಸಹಿಸಲಾಗುವುದಿಲ್ಲ
ನಿನ್ನನ್ನು ಅಗಲಿ ನನ್ನಿಂದ ಇನ್ನು ಬಾಳಲಾಗುವುದಿಲ್ಲ
ಒಲವಿನಲ್ಲಿ ಅದೇನನ್ನೆಲ್ಲಾ ಸಹಿಸಿಕೊಂಡು ರೋದಿಸಿದೆ

(ಆಪ್ ಕೇ ಪೆಹಲೂಂ ಮೆ ಆಕರ್ ರೋದಿಯೇ)


ಕತ್ತಲೂ ಬೆಳ್ಳಗೇ!

28 ಡಿಸೆ 13

 

ಸಖೀ,
ಬೆಳಕಿನಂತೆಯೇ 
ಬೆಳ್ಳಗೇ ಇರುತ್ತದೆ
ಕಣೆ, ಕತ್ತಲೂ;

ಅಸಾಧ್ಯವಾದರೆ 
ಈ ಮಾತನ್ನು
ನಿನ್ನಿಂದ ನಂಬಲು;

ಕತ್ತಲಿನ ಮೇಲೆ ಒಮ್ಮೆ
ಬೆಳಕು ಚೆಲ್ಲಿ ನೋಡು
ಆಮೇಲೆ ಹೇಳು!


ತಕ್ಕಡಿ!

28 ಡಿಸೆ 13

 

ಸಖೀ,
ಇಲ್ಲಿ ಸೇರಿಕೊಂಡಷ್ಟೇ ದೂರವಾಗುತ್ತಾರೆ
ಹೊಗಳಿದಷ್ಟೇ ಮಂದಿ ತೆಗಳುತ್ತಿರುತ್ತಾರೆ
ಜೀವನತಕ್ಕಡಿಯಲ್ಲಿ ಏರುಪೇರೆನ್ನುವುದಿಲ್ಲ
ಖುಷಿ ಸಿಕ್ಕಷ್ಟೇ ದುಃಖವೂ ದಕ್ಕುವುದಲ್ಲಾ?


ಸಾಮ್ಯ!

28 ಡಿಸೆ 13

 

ಸಖೀ,
ಒಂದೊಮ್ಮೆ ತುಂಬಿ ತುಳುಕುತ್ತಿದ್ದ
ನಮ್ಮೂರ ಮನೆ ಈಗ ಖಾಲಿ ಖಾಲಿ;
ದಪ್ಪನೆಯ ಕೂದಲುಗಳಿದ್ದ ನನ್ನ ಈ
ತಲೆಯೂ ಈಗ ಆಗಿದೆಯಲ್ಲಾ ಖಾಲಿ!