ಕತೆ-ವ್ಯಥೆ!

19 ಆಗಸ್ಟ್ 13

 

ಸಖೀ, ಎಂದೋ 
ಜೊತೆಗಿದ್ದವರನ್ನು
ನೆನೆನೆನೆದು
ಇಂದಿರುವವರಲ್ಲಿ
ಹುಡುಕುವುದೇ
ಈ ಬಾಳಿನ ಕತೆ,
ಒಮ್ಮೊಮ್ಮೆ ವ್ಯಥೆ!


ಆ ಭೇಟಿ ಬೇಡವಿತ್ತು!

19 ಆಗಸ್ಟ್ 13

“ನಿಮ್ಮೂರಿನಲ್ಲಿರುವ ನನ್ನ ಮಗಳ ಪೀಜಿ ರೂಮಿಗೆ ಹೊರಟಿದ್ದೇನೆ. ನೀನೂ ಊರಿಗೆ ಬಂದಿದ್ದಿ. ಅವಳ ರೂಮಿನ ಹತ್ತಿರ ಬರಲು ಸಾಧ್ಯವೇ ನಿನಗೆ? ನೀನು ಬಂದರೆ ಭೇಟಿ ಆಗಬಹುದಿತ್ತು. ನಿನ್ನನ್ನೊಮ್ಮೆ ಭೇಟಿ ಆಗಬೇಕೆನ್ನುವ ಬಯಕೆ ಇದೆ ಕಣೋ.  ಗಜಾನನ ಬಸ್ಸಿನಲ್ಲಿದ್ದೇನೆ. ಈಗ ಕುಡುಮಲ್ಲಿಗೆ ದಾಟಿ ಬೆಜ್ಜವಳ್ಳಿ ಹತ್ತಿರ ಸಾಗುತ್ತಾ ಇದೆ ಬಸ್ಸು.  ಶಿವಮೊಗ್ಗ ತಲುಪುವಾಗ ಆರು ಘಂಟೆ ಆಗಬಹುದು. ಶಿವಮೊಗ್ಗದ ಬಸ್ ಸ್ಟಾಂಡಿಂದ ಅರ್ಧ ಕಿಮೀ ಹಿಂದೆ ಆಲದ ಮರದ ಸ್ಟಾಪ್ ಇದೆಯಲ್ಲಾ ಅಲ್ಲಿ ಇಳಿದುಕೊಳ್ತೇನೆ. ಅವಳ ರೂಮಿಗೆ ಅಲ್ಲಿಂದ ಅಡ್ಡ ರಸ್ತೆಯಲ್ಲಿ ಒಂದು ಕಿಮೀ ದೂರ ಹೋಗಬೇಕು. ಬರ್ತೀಯಾ? ನಮ್ಮೀರ್ವರಿಗೂ ಇನ್ನು ಇಂತಹ ಅವಕಾಶ ಕೊಡಲಾರ ಆ ದೇವರು”.

“ಹೌದು ಕಣೇ, ಊರಿಗೆ ಬರುವ ಮೊದಲು ನನಗೂ ಬಯಕೆ ಇತ್ತು. ನೀನು ನಮ್ಮೂರಿಗೆ ಬಂದರೆ ನಿನ್ನನ್ನು ಭೇಟಿ ಆಗಬಹುದು ಎನ್ನುವ ವಿಚಾರ ನನ್ನ ತಲೆಯಲ್ಲೂ ಬಂದಿತ್ತು. ಆದರೆ ಈಗ ಯಾಕೋ ಅಳುಕು. ಒಂದು ತರಹದ ಭಯ. ನಾನು ಈ ಸಮಾಜಕ್ಕೆ ಹೆದರುತ್ತಿದ್ದೇನೆ ಅಂತ ಅನಿಸ್ತಾ ಇದೆ. ಏನು ಮಾಡಲಿ? ತಪ್ಪು ಮಾಡಿದವರಿಗೆ ಯಾವ ಭಯವೂ ಇಲ್ಲ. ತಪ್ಪು ಮಾಡದ ನನ್ನಲ್ಲಿ ಅದೇಕೋ ಅಳುಕು ಕಣೇ”

“ಬೇಡ ಬಿಡು. ನಾನು ಹೆಣ್ಣು ಹೆಂಗಸು. ನಿನ್ನನ್ನು ಭೇಟಿ ಆಗಲು ತಯಾರಿದ್ದೇನೆ. ನಿನಗೆ, ಒಂದು ಗಂಡಸಿಗೆ, ಕಷ್ಟ ಆಗ್ತಿದೆ. ಸರಿ, ಬೇಡ ಬಿಡು. ನಾನು ಬಯಸಿದ್ದೇ ತಪ್ಪಾಯ್ತು ನೋಡು”.

*****

ಆಲದ ಮರದ ಸ್ಟಾಪಿನ ಬಳಿ ಬಸ್ಸು ನಿಂತಾಗ, ಎರಡೂ ಕೈಗಳಲ್ಲಿ ಎರಡು ಬ್ಯಾಗುಗಳನ್ನು ಹಿಡಿದುಕೊಂಡು ಆಕೆ ನಿಧಾನವಾಗಿ ಬಸ್ಸಿನಿಂದ ಇಳಿದಳು. ಎದುರುಗಡೆ ಒಂದು ಸ್ಕೂಟರನ್ನು ನಿಲ್ಲಿಸಿಕೊಂಡು ಆತ ಕಾಯ್ತಾ ಇದ್ದಾನೆ. ಆಕೆಯನ್ನು ನೋಡಿದವನು ಸ್ಕೂಟರ್ ಸ್ಟಾರ್ಟ್ ಮಾಡಿ, “ಬಾ ಕೂತುಕೋ…” ಅಂದ. ಆಕೆಯೂ ಮಾತಾಡಲಿಲ್ಲ. ಆತನ ಹಿಂಬದಿಯ ಸೀಟಿನಲ್ಲಿ ಕುಳಿತುಕೊಂಡಳು. ಹಾಸ್ಟೇಲಿನ ಮಾರ್ಗ ಮಧ್ಯೆ ಸ್ಕೂಟರ್ ನಿಲ್ಲಿಸಿ, “ಏನು ಮಾತಾಡಲಿಕ್ಕಿದೆ ಎಲ್ಲಾ ಇಲ್ಲೇ ಮಾತಾಡು. ನಿನ್ನ ಮಗಳ ಮುಂದೆ ನನಗೂ ಕಷ್ಟ. ನಿನಗೂ ಕಷ್ಟ” ಅಂದ. ಆಕೆಗೆ ಮಾತೇ ಹೊರಡಲಿಲ್ಲ. ಕಣ್ತುಂಬ ನೋಡಿದಳು. ತನ್ನ ಕಣ್ತುಂಬಿಕೊಂಡಳು. ಆತನೂ ಆಕೆಯನ್ನು ಕಣ್ತುಂಬಿಕೊಂಡ. ಸಾಕು ಬಿಡು, ಅಂದವನು ಸ್ಕೂಟರ್ ಸ್ಟಾರ್ಟ್ ಮಾಡಿದ. ಮತ್ತೆ ಏರಿ ಕೂತಳು ಆಕೆಯೂ.

*****

ಮಗಳ ರೂಮಿನ ಬಳಿ ಆಕೆಯನ್ನು ಬಿಟ್ಟು, ಆಕೆಯ ಮಗಳಿಗೂ ಹಾಯ್ ಹೇಳಿ, ಆತ ವಾಪಸಾದ.

*****

ನಾಲ್ಕಾರು ದಿನಗಳಿಂದ ಆತನ ಸಂದೇಶವೂ ಇಲ್ಲ. ಕರೆಯೂ ಇಲ್ಲ.

*****

ದಿನಪತ್ರಿಕೆಯ ಪುಟಗಳನ್ನು ತಿರುವು ಹಾಕುತ್ತಿದ್ದವಳಿಗೆ ಆತನ ಭಾವಚಿತ್ರ ಕಂಡಂತಾಯ್ತು. ತೆರೆದು ಓದಿದಳು. ಕಣ್ಣುಗಳನ್ನು ನಂಬದಾದಳು. ಆತ ಇನ್ನಿಲ್ಲ. ಆಕೆಯನ್ನು ಮಗಳ ರೂಮಿನ ಬಳಿ ಬಿಟ್ಟು ಹೋದ ದಿನವೇ ರಸ್ತೆ ಅಪಘಾತವೊಂದರಲ್ಲಿ ಇಹಲೋಕ ತ್ಯಜಿಸಿದ್ದ.

***

ಏನಿದು ವಿಧಿಲೀಲೆ?

ಎಲ್ಲಿಯದೀ ಬಂಧ?

*****

ಆತ ತನ್ನ ಬ್ಲಾಗ್‍ನಲ್ಲಿ ಪ್ರಕಟಿಸುತ್ತಿದ್ದ ಸ್ವರಚಿತ ಚಿತ್ರಗಳನ್ನು ಸದಾ ಮೆಚ್ಚಿ ಪ್ರತಿಕ್ರಿಯಿಸುತ್ತಿದ್ದ ಆಕೆಗೆ ಈಗ ಎರಡು ತಿಂಗಳ ಹಿಂದೆ ಆತನೇ ಒಮ್ಮೆ ಸಂದೇಶ ಕಳುಹಿಸಿ, “ತಮ್ಮ ಅಭಿಮಾನಕ್ಕಾಗಿ ಧನ್ಯವಾದಗಳು, ಸದಾ ನನ್ನ ಚಿತ್ರಗಳನ್ನು ಮೆಚ್ಚಿ ಪ್ರತಿಕ್ರಿಯಿಸುತ್ತಾ ಇದ್ದೀರಿ” ಅಂದಿದ್ದ.

ಅಲ್ಲಿಂದ ಸ್ನೇಹ ಶುರುವಾಗಿತ್ತು. ಗಂಭೀರವಾಗಿ ಒಂದೋ ಎರಡೋ ಮಾತುಗಳು ಅಷ್ಟೇ. ಆದರೂ ದಿನಕ್ಕೊಮ್ಮೆ ಕರೆ ಮಾಡಿ ಮಾತನಾಡುತಿದ್ದರು.

ಭೇಟಿ ಆಗಬೇಕೆಂಬ ಆಸೆ ಇಲ್ಲ ಅಂತ ಇಬ್ಬರೂ ಅಂದಿದ್ದರು.

ಆದರೆ, ಭೇಟಿ ಆಗುವ ಬಯಕೆಯನ್ನು ಪರಸ್ಪರರಲ್ಲಿ ವ್ಯಕ್ತಪಡಿಸಿದ್ದರು.

ಬೇಡ ಬೇಡ ಅನ್ನುತ್ತಾ ಭೇಟಿಯೂ ಆಯ್ತು.

ಆದರೆ ಈಗ?

ಇನ್ನು ಮುಂದೆ?

ಬರೀ ನೆನಪು ಅಷ್ಟೇ.

ಆ ಭೇಟಿ ಬೇಡವಿತ್ತು.

ಆತನನ್ನು ಆಕೆ ಭೇಟಿ ಆಗದೇ ಇದ್ದಿದ್ದರೇ ಚೆನ್ನಾಗಿರುತ್ತಿತ್ತು ಅಂತ ಆಕೆಗೆ ಅನಿಸತೊಡಗಿತ್ತು.

ತಾನು ಕರೆದಿದ್ದೇ ತಪ್ಪಾಯ್ತೇ?

ಛೇ!

*****


ಅನಿತಾ ಕುಮಾರಸ್ವಾಮಿಯವರಲ್ಲಿ ಕೆಲವು ಪ್ರಶ್ನೆಗಳು!

18 ಆಗಸ್ಟ್ 13

“ನಮ್ಮ ಯಜಮಾನರು ಸರಿಯಾಗಿ ನಿದ್ದೆ ಆಹಾರ ಇಲ್ಲದೇ ಒಂಟಿಯಾಗಿ ಸತತ ಹೋರಾಟ ನಡೆಸುತ್ತಾ ಇದ್ದಾರೆ”, 

ಅಂತ ಹೋದಲ್ಲೆಲ್ಲಾ ಹೇಳಿ ಕಣ್ಣೀರಿಳಿಸುತ್ತಿರುವ ಶ್ರೀಮತಿ ಅನಿತಾ ಕುಮಾರಸ್ವಾಮಿಯವರಲ್ಲಿ ಕೆಲವು ಪ್ರಶ್ನೆಗಳು: 

“ತಮ್ಮ ಯಜಮಾನರಿಗೆ ಈ ಹೋರಾಟಮಾಡಿ ಅಂತ ಯಾವ ವೈದ್ಯರಿಂದಾದರೂ ಸಲಹೆ ದೊರೆತಿದೆಯೇ? (Is he medically advised to keep his so called struggle on?)

ತಮ್ಮ ಯಜಮಾನರು ಹೋರಾಟ ಮಾಡುತ್ತಿರುವುದು ಯಾರಿಗಾಗಿ? 

ಆ ಹೋರಾಟದ ಅಂತಿಮ ಗುರಿ ಏನು? ಉದ್ದೇಶ ಏನು?

ಅವರು ಒಂದು ಐದು ವರುಷ ಹೋರಾಟ ಮಾಡದೇ ಸುಮ್ಮನಿದ್ದರೆ, ಈ ಕರ್ನಾಟಕ ರಾಜ್ಯ ಗತಿಕೆಟ್ಟು ಹೋಗುತ್ತದೆಯೇ? 

ತಮ್ಮ ಯಜಮಾನರು ಈ ರಾಜ್ಯಕ್ಕೆ ಅನಿವಾರ್ಯ ಅನ್ನುವ ರೀತಿ ಮಾತಾಡುತ್ತಾ ಇದ್ದೀರಲ್ಲಾ? 

ರಾಜಕೀಯ ತಮ್ಮ ಯಜಮಾನರಿಗೆ ಮತ್ತು ಅವರ ಕುಟುಂಬದವರಿಗೆ ಅನಿವಾರ್ಯ ಅಲ್ಲವೇ?

ಈ ನಾಡಿನ ರಾಜಕೀಯಕ್ಕೆ ಅಥವಾ ನಮ್ಮಲ್ಲಿ ಯಾರಿಗಾದರೂ ತಮ್ಮ ಕುಟುಂಬ ಅನಿವಾರ್ಯ ಆಗಿದೆಯೇ?

ತಮ್ಮ ಯಜಮಾನರು ರಾಜಕೀಯಕ್ಕೆ ಬರುವ ಮೊದಲು, ಈ ರಾಜ್ಯದಲ್ಲಿ ಸರಕಾರಗಳು ಒಳ್ಳೆಯ ಅಧಿಕಾರ ನಡೆಸಿಯೇ ಇಲ್ಲವೇ? 

ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುವಾಗ ಗ್ರಾಮವಾಸ್ತವ್ಯ ಮಾಡುತ್ತಿದ್ದವರು, ಮುಖ್ಯಮಂತ್ರಿ ಸ್ಥಾನ ಜಾರಿಹೋದಾಗ ಗ್ರಾಮವಾಸ್ತವ್ಯವನ್ನು ಮುಂದುವರಿಸದೇ ನಿಲ್ಲಿಸಿದ್ದು ಯಾಕೆ? 

ಅಧಿಕಾರ ಇದ್ದರೆ ಮಾತ್ರ, ಜನಸೇವೆಯೇ?”


ನಿನಗೂ ಹೀಗೇ ಏನು?

17 ಆಗಸ್ಟ್ 13
ನಾನು ಕರೆದಾಗಲೆಲ್ಲಾ ನೀನು
ನೀನು ಕರೆದಾಗಲೆಲ್ಲಾ ನಾನು
ಬಂದು ಮಾತಿಗಿಳಿಯುತ್ತಿದ್ದೆವು
ನಿನಗಿನ್ನೂ ನೆನಪಿದೆಯೇನು?

ಈಗೀಗ ನನ್ನ ನೆನಪಲ್ಲಿ 
ಕರೆಯದೇ ಬಂದರೂ ನೀನು 
ನಿನ್ನ ನೆನಪಿಸಿಕೊಂಡರೂ ನಾನು
ಕರೆಯುತ್ತವೆ… ಕಂಬನಿಗರೆಯುತ್ತವೆ
ಈ ಕಂಗಳು, ನಿನಗೂ ಹೀಗೇ ಏನು?


ಧನ್ಯತೆ!

17 ಆಗಸ್ಟ್ 13
ಸಖೀ,
ಶಿಲ್ಪಿ ಶಿಲ್ಪಕ್ಕೆ 
ಅಂಟಿಕೂರುವುದಿಲ್ಲ, 
ಜವಾಬ್ದಾರಿಯಿದೆ 
ಆತನಿಗನ್ಯ;

ಶಿಲೆಯ ಶಿಲ್ಪವಾಗಿಸಿ 
ಕಲೆಯನ್ನು 
ಮೆರೆಸುವುದರಲ್ಲೇ 
ಆತ ಧನ್ಯ!


ಕೇಳಿ ಬರೆಯಲಾಗದು!

17 ಆಗಸ್ಟ್ 13

 

ಸಖೀ,
ಹಾಗಿಲ್ಲ ಹೀಗಿಲ್ಲ
ಎನ್ನುವವರನ್ನು
ಹೇಗಿದೆಯೆಂದರೆ
ಹೇಳಲರಿಯರು;

ಅವರಿವರನ್ನು
ಕೇಳಿ ಎಂದೂ
ಬರೆಯಬಾರದು
ಬರಹಗಾರರು!


ದೃಷ್ಟಿಬೊಟ್ಟು!

17 ಆಗಸ್ಟ್ 13
ಸಖೀ,
ನಿನ್ನ ಕಣ್ಣಂಚಿನಿಂದ
ನಿನಗೆ ಅರಿವಿಲ್ಲದೇ
ಕಾಡಿಗೆಯ ನಾ ಕದ್ದಿದ್ದೆ;

ನಿನ್ನ ಕೆಂಪು ಕೆನ್ನೆಯ 
ಮೇಲೆ ಚುಕ್ಕೆಯನಿಟ್ಟು
ನಿನ್ನ ಮೇಲೆ ಅನ್ಯರ
ಕೆಟ್ಟದೃಷ್ಟಿ ಬೀಳದಿರಲಿ
ಎಂದು ಬೇಡಿಕೊಂಡಿದ್ದೆ!


ಒಳಗಿತ್ತು ಒಲವು!

17 ಆಗಸ್ಟ್ 13
ನಿನ್ನ ನಾ ಮರೆತಿದ್ದೆ
ನಿನ್ನ ನಾ ತೊರೆದಿದ್ದೆ
ನೀನು ನನ್ನವಳಲ್ಲ
ನೀನು ನನ್ನೊಳಗಿಲ್ಲ
ನಿನ್ನ ನೆನಪಿಸುವುದಿಲ್ಲ
ನಿನ್ನ ನೆನಪೂ ನನಗಿಲ್ಲ
ಎಂದೆಲ್ಲಾ ನಾನು ಸಾರಿ 
ಸಾರಿ ಹೇಳಿಕೊಂಡಿದ್ದೆನಲ್ಲಾ;

ಇಂದು ನೀನು ಒಮ್ಮೆಗೇ
ನನ್ನೆದುರು ಬಂದು ನಿಂತಾಗ
ನಾನು ನನ್ನನ್ನೇ ಮರೆತು 
ನಿನ್ನನ್ನು ನನ್ನ ಬಾಹುಗಳಲಿ
ಬಂಧಿಯಾಗಿಸಿಬಿಟ್ಟೆನಲ್ಲಾ!?


ಸಿದ್ಧ-ರಾಮರಾಜ್ಯ!

17 ಆಗಸ್ಟ್ 13
ಸಖೀ,
ಈಗ ಎಲ್ಲವೂ ಸಿಗುತ್ತವೆ ಸಿದ್ಧ
ಶ್ರಮಪಡಬೇಕಾದ ಅಗತ್ಯವಿಲ್ಲ
ಸಿಗುತ್ತವೆ ಸಿದ್ಧ ತಿನಿಸುಗಳು
ಸಿದ್ಧ ಉಡುಗೆ ತೊಡುಗೆಗಳು
ಅಂತೆಯೇ ನಮ್ಮ ನಾಡಿಗೆ
ದಕ್ಕಿದ ರಾಮರಾಜ್ಯವೂ ಸಿದ್ಧ
ಹೂಂ… ಸಿದ್ದ-ರಾಮರಾಜ್ಯ!

ನಿನ್ನ ಸಾನ್ನಿಧ್ಯ!

17 ಆಗಸ್ಟ್ 13
ಸಖೀ,
ಜನ ಹೊಗಳಿ ಅದೆಷ್ಟು ಎತ್ತರಕ್ಕೆ ಏರಿಸಿದರೂ
ಅದ್ಯಾವ ಮಹಾಸಭೆಯಲ್ಲೆನ್ನನ್ನು ಕೂರಿಸಿದರೂ
ನನ್ನ ಈ ಮನಸ್ಸಿಗೆ ಕಿಂಚಿತ್ತೂ ಸಮಾಧಾನವಿಲ್ಲ
ನಿನ್ನ ಸಾನ್ನಿಧ್ಯಕ್ಕೆ ಸಮಾನ ಇಲ್ಲಾವುದೂ ಇಲ್ಲ!