ಸಭಾಂಗಣದ ಪಕ್ಕ!

31 ಮಾರ್ಚ್ 14

 

ಒಂದು ಸಮಾರಂಭದಲ್ಲಿ ವೇದಿಕೆಯ ಮೇಲೆ ಅಧ್ಯಕ್ಷರು ಅಥವಾ ಅತಿಥಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ, ಹೊರಗಿನ ಜಗಲಿಯಲ್ಲಿ ನಿಂತು ಲೋಕಾಭಿರಾಮ ಮಾತನಾಡುತ್ತಾ ಇರುವವರಿಗೆ, ಸಭಾಂಗಣದ ಒಳಗೆ ಮಾತನಾಡುವ ಹಾಗೂ ಅವರ ಮಾತುಗಳನ್ನು ಆಲಿಸುವ ಮಂದಿಗೆ ಆಗುವ ಕಿರಿಕಿರಿಯ ಅರಿವೇ ಇರುವುದಿಲ್ಲ. 

ನಿನ್ನೆ ಹಾಗೆಯೇ ಆಯ್ತು.

ಮೊದಲ ಸಾಲಿನಲ್ಲಿ ಕೂತಿದ್ದ ಸಭಿಕರೊಬ್ಬರು, ಕೊನೆಗೆ ಎದ್ದು ಬಾಗಿಲನ್ನು ಮುಚ್ಚಬೇಕಾಗಿ ಬಂದುದು ದೌರ್ಭಾಗ್ಯದ ಸಂಗತಿ.

ಇಂತಹ ಸಾರ್ವಜನಿಕ ಸಭೆಗಳಲ್ಲಿ, ನಮ್ಮ ನಡತೆಗಳು ಅನ್ಯರಿಗೆ ಉಪದ್ರವ ನೀಡದಂತಿದ್ದರೆ ಅದೆಷ್ಟು ಚೆನ್ನ!


ನೀನೇ ಬರೆಸುತ್ತಲಿರುವೆ ನನ್ನಿಂದ!

29 ಮಾರ್ಚ್ 14

ನಿನ್ನ ಪ್ರೀತಿ, ನಿನ್ನ ಮುನಿಸು, ನಿನ್ನ ಕರುಣೆ, ನಿನ್ನ ಸೇವೆ, ಇವುಗಳೇ ಬರೆಸಿದ್ದು ನನ್ನಿಂದ
ನಿನ್ನ ಬೆಳಗು ನಿನ್ನ ಬೈಗು, ನಿನ್ನ ಧಗೆ, ನಿನ್ನ ತಂಪು, ಇವುಗಳೇ ಬರೆಸುತ್ತಿದ್ದವು ನನ್ನಿಂದ
ನಾನಿನ್ನ ಮೊರೆಹೋದೆ, ನನ್ನೊಳಗೆ ನೀನೊಂದಾದೆ, ಜಗವ ಕಂಡೆ ನಾ ನಿನ್ನ ಕಣ್ಣಿಂದ
ನಾನೆಲ್ಲಿ ಬರೆದೆ, ನಾನೇನ ಬರೆದೆ, ನನ್ನ ಒಳಗಿರುವ ನೀನೇ ಬರೆಸುತ್ತಲಿರುವೆ ನನ್ನಿಂದ


ನಾನೇನ ಹೇಳಲಿ ಹೆಣ್ಣೇ?

29 ಮಾರ್ಚ್ 14

 

ನನ್ನನ್ನು ಕಂಡಾಗಲೆಲ್ಲಾ ನಿನ್ನ ಆ 
ಕಣ್ಣಲ್ಲಿ ಹಾದುಹೋಗುವ ಮಿಂಚು;
ಕೆಂಪು ಕೆಂಪಗಾಗುವ ನಿನ್ನ ಕೆನ್ನೆ;
ಮಾತು ಹೊರಡದೇ ಬಿಟ್ಟ ಬಾಯಿ
ಬಿಟ್ಟಂತೇ ನೋಡುತಿರುವೆ ನನ್ನನ್ನೇ;
ಕಿವಿಗೆ ಗಾಳಿಹೊಕ್ಕ ಕರುವಿನಂತೆ
ನಿಂತಲ್ಲಿ ನಿಲಲಾಗದೇ ಮಿಡುಕುವ 
ಈ ಪರಿಗೆ ನಾನೇನ ಹೇಳಲಿ ಹೆಣ್ಣೇ?


ಉಪಾಯ ಅಷ್ಟೇ!

29 ಮಾರ್ಚ್ 14

 

“ಹಿಂದೆಲ್ಲಾ ದಿನವೂ ಕರೆಮಾಡಿ ಮಾತನಾಡುತ್ತಿದ್ದೆ, ಮಾತನಾಡಿಸುತ್ತಿದ್ದೆ
ಈಗ ಕರೆಗಳೂ, ಸಂದೇಶಗಳೂ ಇಲ್ಲ, ನನ್ನವಕ್ಕೂ ಇರುವೆ ಉತ್ತರಿಸದೇ”

“ಹೂಂ, ಕ್ಷಮಿಸು, ಪುರುಸೊತ್ತಿಲ್ಲ ಬಿಡುವಿಲ್ಲದ ದಿನಚರಿ ಈಗ ನನ್ನದಾಗಿದೆ
ಅರಿತಿಲ್ಲವೇ ನೀನು ಕರೆ, ಸಂದೇಶಗಳಿಗೂ ಮೀರಿದ ಸ್ನೇಹ ನಮ್ಮದಾಗಿದೆ”

“ಓಹ್, ಅಂದು ಪುರುಸೊತ್ತಿನಲ್ಲಿ ಕಾಲಹರಣಕ್ಕೆ ನಾನೊಂದು ವಸ್ತುವಾಗಿದ್ದೆ
ನಮ್ಮ ಸ್ನೇಹಕ್ಕೆಲ್ಲಿ ಬೆಲೆ ಈ ಅಧ್ಯಾತ್ಮದ ಮಾತುಗಳೀಗ ಉಪಾಯವಾಗಿದೆ!”


ಶ್ರೀಕೃಷ್ಣ ಮಾತಾಡಿದ್ದು ಮತಗಳ ಬಗ್ಗೆಯೋ?

29 ಮಾರ್ಚ್ 14

ಮುಂಜಾನೆ (ಆರೂವರೆಯಿಂದ ಏಳು ಘಂಟೆಯವರೆಗೆ) “ಹೆಡ್‍ಲೈನ್ಸ್ ಟುಡೇ”ಯ ಕಾರ್ಯಕ್ರಮವೊಂದರಲ್ಲಿ, ಬ್ರಹ್ಮಕುಮಾರೀಸ್‍ನ ಓರ್ವ ಮಹಿಳೆ, ಅಧ್ಯಾತ್ಮದ ಬಗ್ಗೆ ಮಾತಾಡುತ್ತಾರೆ.

ಅವರು ನಿನ್ನೆ ಹೇಳಿದ ಮಾತುಗಳು:

“ಶ್ರೀಕೃಷ್ಣ ಹೇಳಿದ್ದಾರೆ “ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ…”

ಅಂದರೆ ಈ ದೇಶದಲ್ಲಿ ಧರ್ಮದ “ಗ್ಲಾನಿ” ಆದಾಗಲೆಲ್ಲಾ, ಅಂದರೆ ಧರ್ಮ ಅಧೋಗತಿಗೆ ಹೋದಾಗಲೆಲ್ಲಾ, ಧರ್ಮದ ಮರು ಸ್ಥಾಪನೆಗಾಗಿ ನಾನು ಜನ್ಮ ತಾಳುತ್ತೇನೆ.

ದ್ವಾಪರ ಯುಗದಲ್ಲಿ ಧರ್ಮ ಇದ್ದಿರಲಿಲ್ಲ. ಅದಕ್ಕೆ ಹಿಂದೆಯೂ ಇದ್ದಿರಲಿಲ್ಲ. ಈ ಹಿಂದೂ, ಕ್ರೈಸ್ತ, ಮುಸ್ಲಿಂ ಧರ್ಮಗಳು ಆಗ ಇದ್ದಿರಲಿಲ್ಲ. ಈ ಧರ್ಮಗಳು ದ್ವಾಪರಾದ ನಂತರದ ಕಲಿಯುಗದಲ್ಲಿ ಬಂದವು. ಅವು ಈಗ ಅಧೋಗತಿಗೆ (ಗ್ಲಾನಿ) ಹೋಗುತ್ತಿವೆ. ಅವು ಇನ್ನೂ ಪೂರ್ತಿ ಕೆಟ್ಟುಹೋದಾಗ ಭಗವಂತ ಬರುತ್ತಾನೆ. ಧರ್ಮ ಸ್ಥಾಪನೆಗಾಗಿ”.

ಧರ್ಮ – ಅಧರ್ಮ ಅನ್ನುವ ವಿಷಯವನ್ನು ಬಿಟ್ಟು, ಶ್ರೀಕೃಷ್ಣ ಆಡಿದ ಆ “ಧರ್ಮ” ಅಂದರೆ ಈ ಹಿಂದೂ, ಮುಸ್ಲಿಂ, ಕ್ರೈಸ್ತ ಮತಗಳೆಂದು ತಿಳಿದುಕೊಂಡಿರುವ ಈ ಅಧ್ಯಾತ್ಮ ಮಾತೆಗೆ ಏನನ್ನಬೇಕು?

ನಗಬೇಕೋ? ಅಳಬೇಕೋ?


ಹೃದಯ ಸ್ಪರ್ಶಿಸಿದವರು!

29 ಮಾರ್ಚ್ 14

 
ಕೆಲವರು ಕೆಲ ಸನ್ನಿವೇಶಗಳಲ್ಲಿ ಮಾತ್ರ ನಮಗೆ ನೆನಪಾಗುತ್ತಾರೆ
ಆ ಸನ್ನಿವೇಶಗಳು ಬದಲಾದಾಗ ನೆನಪಿನಿಂದ ಮರೆಯಾಗುತ್ತಾರೆ
ಆದರೆ ಹೃದಯವನು ಸ್ಪರ್ಶಿಸಿದವರು ಸದಾ ನೆನಪಿನಲ್ಲಿ ಇರುತ್ತಾರೆ
ಮರೆವೆವೆಂದರೂ ಮರೆಯಾಗದೇ ನೆನಪಿನಲ್ಲಿ ಹಸಿರಾಗಿ ಇರುತ್ತಾರೆ!


ಇನ್ನೂ ಬಹಳಷ್ಟಿದೆ!

29 ಮಾರ್ಚ್ 14

 

ಣ್ಣು ಕೋರೈಸುವಂಥ ಬೆಳಕಿನ ಹಿಂದೆಯೂ ಕತ್ತಲಿದೆ
ಕಣ್ಣಿಗೆ ಕಾಣುವುದಕ್ಕಿಂತಲೂ ಕಾಣದುದು ಬಹಳಷ್ಟಿದೆ;
ನಮ್ಮನ್ನರಿತ ಮಂದಿ ನಮ್ಮಲ್ಲರಿಯದುದು ಸಾಕಷ್ಟಿದೆ
ನಾವರಿತ ಮಂದಿಯಲ್ಲೂ ನಾವರಿಯಲು ಬಹಳಷ್ಟಿದೆ!


ಪ್ರಪಂಚ ಚಿಕ್ಕದಾಗಿದೆ!

29 ಮಾರ್ಚ್ 14

 

ಕತೆಯ ಹಂದರ ಬಿಡಿಸಿಡುತ್ತಿದ್ದವರು ಕವಿತೆ ಹೆಣೆಯುತ್ತಿದ್ದಾರೆ
ಕವಿತೆ ಹೆಣೆಯುತ್ತಿದ್ದವರೀಗ ಹಾಯ್ಕುಗಳ ಮೊರೆಹೋಗಿದ್ದಾರೆ
ನನ್ನಂಥವರು ಹೀಗೇಕಾಯ್ತು ಅನ್ನುವ ಪ್ರಶ್ನೆಯನು ಕೇಳುತಿರೆ
ಯಾರೋ ಪ್ರಪಂಚ ಚಿಕ್ಕದಾಗಿದೆ ಅನ್ನೋ ಸಬೂಬು ನೀಡ್ತಾರೆ!


ಕಣ್ಣಿಟ್ಟಿರುತ್ತಾರೆ!

23 ಮಾರ್ಚ್ 14

 

ಹೃದಯಕ್ಕೇ ಚೂರಿಹಾಕಿ
ಘಾಸಿಗೊಳಿಸಿಹೋದವರೂ
ಕಿಟಕಿಯ ಮೂಲಕ ನಮ್ಮನ್ನು
ಇಣುಕುತ್ತಾ ಇರುತ್ತಾರೆ,
ನಮ್ಮ ಇರವನ್ನು ಖಾತ್ರಿ
ಪಡಿಸಿಕೊಂಡು ಸದಾ
ನಮ್ಮ ನಡೆನುಡಿಗಳ
ಮೇಲೆ ಕಣ್ಣಿಟ್ಟಿರುತ್ತಾರೆ!


ದೂರವಾಗುವ ಸಹಪಾಠಿಗಳು!

23 ಮಾರ್ಚ್ 14

 

ನಮ್ಮ ಮನೆಗಳೇ ನಮ್ಮ ಮೊದಲ ಪಾಠಶಾಲೆಗಳಂತೆ
ಸಹಪಾಠಿಗಳು ಅಲ್ಲೂ ಹೊರಗಿನ ಶಾಲೆಗಳಲ್ಲಿರುವಂತೆ
ಶಾಲೆಯ ಸಹಪಾಠಿಗಳು ನಮ್ಮಿಂದ ದೂರವಾಗುವಂತೆ
ಮನೆಯ ಸಹಪಾಠಿಗಳೂ ನೋಡಿ ದೂರವಾಗುವರಂತೆ!