ನಮ್ಮ ಸದ್ಗುಣಗಳ ಪ್ರಚಾರ ನಮ್ಮ ನಡೆನುಡಿಗಳ ಮುಖಾಂತರ, ಸದ್ಗುಣಿಗಳ ಮುಖಾಂತರ ತಂತಾನೆಯೇ ಆಗಬೇಕಲ್ಲದೇ, ಅದನ್ನು ನಾವೇ ಅಥವಾ ನಮ್ಮ ಪ್ರಿಯಪಾತ್ರರಿಂದ ಮಾಡಿಸಿಕೊಂಡು, ಮರೆಯಲ್ಲಿ ಕೂತು ತಮ್ಮಾತ್ಮಶ್ಲಾಘನೆಯ ರೋಗಕ್ಕೆ ಬಲಿಯಾಗುವುದು ಖೇದಕರ.
“ಪ್ರಚಾರ ಫಲಕಗಳನ್ನು” ಏರಿ ಅಲಂಕರಿಸಿಕೊಂಡು ಕುಳಿತವರತ್ತ ಹರಿವ ಸಮಾಜದ ದೃಷ್ಟಿಗಳು ಒಂದೇ ತೆರನಾಗಿರುವುದಿಲ್ಲ.
ತಮಗೇನೂ ಸಂಬಂಧ ಇಲ್ಲವೆಂದು ಸುಮ್ಮನಿರುವವರನ್ನುಳಿದು ಎರಡು ವರ್ಗಗಳಿರುತ್ತವೆ ಈ ಸಮಾಜದಲ್ಲಿ.
ಅವುಗಳಲ್ಲಿ ಮೊದಲನೆಯ ವರ್ಗ ನಗು ಚೆಲ್ಲಿ, ಹೂವಿನ ಹಾರಾರ್ಪಣೆ ಮಾಡಿ ಸನ್ಮಾನ ಮಾಡಬಹುದು.
ಎರಡನೇ ವರ್ಗ ಫಲಕಗಳತ್ತ ಕಲ್ಲು, ಮೊಟ್ಟೆ, ಚಪ್ಪಲಿ ಮತ್ತು ಸೆಗಣಿಯನ್ನು ಎಸೆಯಲೂಬಹುದು.
ಮೊದಲನೆಯ ವರ್ಗಕ್ಕೆ ಮುಖ ಕೊಟ್ಟು ನಗುವವರಿಗೆ ಎರಡನೆಯ ವರ್ಗವನ್ನು ಎದುರಿಸುವ ಧೈರ್ಯವೂ ಇರಬೇಕು.
ತಮ್ಮ ಮಟ್ಟವನ್ನು, ಗತ್ತುಗಾರಿಕೆಯನ್ನು, ಗಾಂಭೀರ್ಯವನ್ನು ಆ ಎರಡನೆಯ ವರ್ಗದವರ ಮಟ್ಟಕ್ಕೆ ಇಳಿಸದೇ, ಮೊದಲ ವರ್ಗದವರ ಅಭಿಮಾನಕ್ಕೆ ಧಕ್ಕೆಯಾಗದಂತೆ, ಉಳಿಸಿಕೊಳ್ಳುವುದು ಅವರ ಜವಾಬ್ದಾರಿ ಕೂಡ.
ಆದರೆ, ಸದಾಕಾಲ ಈ ಎರಡೂ ವರ್ಗಗಳಲ್ಲಿ ಸ್ವಾರ್ಥದ ಲೆಕ್ಕಾಚಾರವುಳ್ಳವರು ಹಾಗೂ ಪೂರ್ವಗ್ರಹಪೀಡಿತರು ಇದ್ದಾರೆ ಅನ್ನುವುದನ್ನು ಅರಿತುಕೊಂಡಿರಲೇಬೇಕು.