ಸ್ವಪ್ನ ಲೋಕದಲ್ಲೂ ಒಂಟಿ!

22 ಏಪ್ರಿಲ್ 12

ತಪ್ಪು ಒಪ್ಪುಗಳ ವಿಮರ್ಶೆಯಲ್ಲಿ ಜೀವನವೇ ಸವೆದುಹೋಯ್ತು
ತಪ್ಪಾದಾಗಲೂ ಒಪ್ಪಿಸಿಕೊಂಡು ಹೊಂದಾಣಿಕೆ ನಡೆಸಿದ್ದಾಯ್ತು

ಗಾಯಗೊಂಡ ಅಂಗಗಳಿಗೆ ಮುಲಾಮು ಹಚ್ಚಿ ನೋಡಿದ್ದಾಯ್ತು
ಕಳಚಿದ ಅಂಗಗಳು ದೇಹದ ಅಸ್ಥಿತ್ವವನ್ನೇ ಅಲುಗಿಸಿದಂತಾಯ್ತು

ದೇಹವಿದೆ, ಬರಿಯ ಉಸಿರಿದೆ, ಕೆಚ್ಚು, ಹುಮ್ಮಸ್ಸೆಲ್ಲಾ ನಾಶವಾಯ್ತು
ಯಾರೋ ಹಿರಿಯರು ತನ್ನೆಡೆಗೆ ಕರೆಯುತಿರುವಂತೆ ಭಾಸವಾಯ್ತು

ಕರೆದವರ ಸೇರುವ ಯತ್ನದಲ್ಲಿ ಇತ್ತಲಿನ ಸಂಪರ್ಕ ಕಡಿದುಹೋಯ್ತು
ದಾರಿಯದ್ದಕ್ಕೂ ಒಮ್ಮೆಗೇ ಕತ್ತಲು ಕವಿದು ತಲೆ ಸುತ್ತಿ ಬಂದಂತಾಯ್ತು

ಸಾವರಿಸಿಕೊಂಡೆದ್ದು ಕಣ್ಣು ಹಾಯಿಸಿದಾಗ ಒಂಟಿತನದನುಭವವಾಯ್ತು
ರಾತ್ರಿ ಬೆಳಗಾಗುವುದರೊಳಗೆ ಲೋಕವೆಲ್ಲಾ ಸುತ್ತಾಟವಾದಂತಾಯ್ತು

ಕನಸು ಸತ್ಯದ ಮಾತಲ್ಲವಾದರೂ ಈ ಮನವನ್ನು ಕಲಕಿ ಇಟ್ಟಂತಾಯ್ತು
ಎಚ್ಚರಿಸಿದೆ ನನ್ನನ್ನು ಸ್ವಪ್ನ ಲೋಕದಲ್ಲೂ ನಾನು ಒಂಟಿ ಎಂಬ ಮಾತು!!
**************************************


ನಂಬಿಕೆಯೇ ಬಾರದು ಅನ್ಯರ ಮೇಲೆ!

21 ಏಪ್ರಿಲ್ 12

ಸಖೀ,
ನೀನು ಅರಿತಿರುವ ಮಾತುಗಳನ್ನೆಲ್ಲಾ ನಾನು ಅರಿತಿರಲೇ ಬೇಕೆಂದೇನೂ ಇಲ್ಲ
ನೀನಾಡುವ ಮಾತುಗಳಿಗೆ ಕೊಡುವ ಕಾರಣಗಳು ನಿನಗಷ್ಟೇ ಗೊತ್ತು ನನಗಲ್ಲ

ಕಾರಣಗಳನ್ನು ನನಗೆ ತಿಳಿಸಿ ಮಾತನಾಡಿದರೆ ಮಾತಿನ ಅರ್ಥ ನನಗಾದೀತು
ಏಕೆ ಹೀಗೆ ಮಾತನಾಡುತಿರುವೆ ಎಂದರಿಯದೇ ನನಗೆಲ್ಲಾ ಅಪಾರ್ಥವಾದೀತು

ಮಾತಿಗೆ ಮಾತು ಬೆಳೆದು ವಾತಾವರಣ ಬಿಸಿಯೇರುವುದು ಸರ್ವೇ ಸಾಮಾನ್ಯ
ವಾತಾವರಣವ ತಿಳಿಯಾಗಿಸಿ ಮುನ್ನಡೆಯುವುದನು ಬಿಟ್ಟರೆ ಇಲ್ಲ ಮಾರ್ಗ ಅನ್ಯ

ನಿನ್ನೆ ತನಕ ನಿನಗೆ ನನ್ನ ಮೇಲಿದ್ದ ಆದರಾಭಿಮಾನಕ್ಕೆ ಜವಾಬ್ದಾರಳು ನೀನಷ್ಟೇ
ಇಂದು ಅದು ಬದಲಾಗಿದ್ದರೆ ನಿಜವಾಗಿ ನೀನೇ ಜವಾಬ್ದಾರಳು ಅದಕೆ ನಿನ್ನೆಯಷ್ಟೇ

ಮಳೆ ಬಂದಾಗ ಛತ್ರಿಯನು ಬಳಸಿ ಮಳೆಯಿಂದ ಬಚಾವಾಗಿ, ಮುಂದೆ ಸಾಗಬೇಕು
ಬಿಸಿಲಿನ ಝಳಕ್ಕೆ ಬಾಯಾರಿದಾಗ ನೀರು ಕುಡಿದು ಅದನು ಪರಿಹರಿಸಿಕೊಳ್ಳಬೇಕು

ಇಲ್ಲಿ ಎಲ್ಲವೂ ಕ್ಷಣಿಕ, ವಿಷಯ, ವಸ್ತು, ಮಾತು, ಕೋಪ, ಹಾಗೇ ಮನುಷ್ಯರೂ ಕೂಡ
ಆದರೆ ಸದಾ ಸಾಗುತ್ತಾ ಇರುವುದು ನಮ್ಮ ಜೊತೆಗೆ ನಮ್ಮಲ್ಲಿನ ಪ್ರೀತಿಯಷ್ಟೇ ನೋಡ

ಪ್ರೀತಿಸಿದವರೇ ಕೈಕೊಟ್ಟು ದೂರವಾದರೆ ಮತ್ತೀ ಒಂಟಿ ಜೀವನ ಕಾಡುವುದು ಬಿಡದೇ
ನಂಬಿಕೆ ಬಾರದು ಅನ್ಯರ ಮೇಲೆ, ಬಾಳಬೇಕಾಗಬಹುದು ಯಾರೊಂದಿಗೂ ಸೇರದೇ!

***************************