ನನ್ನ ಕಣ್ತೆರೆಸಿದ!

27 ಫೆಬ್ರ 12


ರಾತ್ರಿ ಪ್ರಯಾಣದ ಹೊತ್ತು
ಬಸ್ಸಿನಲ್ಲಿದ್ದ ಆ ಸಹಪಯಣಿಗ
ಪದೇ ಪದೇ ನನ್ನ ಗೊರಕೆಯ 
ಸದ್ದಿನಿಂದಾಗಿ ಬಡಿದೆದ್ದು
ಮನಸಾರೆ ನನ್ನನ್ನು ಶಪಿಸುತ್ತಾ
ಮೊಣಕೈಯಿಂದ ತಿವಿದು ತಿವಿದು
ನನ್ನ ಒಳಗಣ್ಣನ್ನು ತೆರೆಸಿದ್ದ;

ಪ್ರತಿ ರಾತ್ರಿಯೂ ನನ್ನ
ಗೊರಕೆಯಿಂದ ಅದೆಷ್ಟು ಬಾರಿ
ತನ್ನ ನಿದ್ದೆಕೆಡಿಸಿಕೊಂಡರೂ
ಎಂದೂ ಮುನಿಸಿಕೊಳ್ಳದ 
ನನ್ನಾಕೆಯನ್ನಾತ ಆ ಪಯಣದ
ಉದ್ದಕ್ಕೂ ನನಗೆ ನೆನಪಿಸುತ್ತಲಿದ್ದ!

*****************


ನೀನು-ನಾನು ಅಷ್ಟೇ!

23 ಫೆಬ್ರ 12
ಕತ್ತಲಾವರಿಸಿದೆ
ಗತಕಾಲವನ್ನು
ಮತ್ತೆ ನೋಡಲಾಗದು
ಕಳೆದ ದಿನಗಳನ್ನು

ಭವಿಷ್ಯದ ಬಾನಿನಲ್ಲಿ
ಸೂರ್ಯೋದಯದ
ಸೂಚನೆಯಿರುವಂತಿದೆ
ಉಷೆ ಮುಖಾರವಿಂದವ
ತೊಳೆಯುತಿರುವಂತಿದೆ

ನಿಜದಿ ಇನ್ನಾವ 
ಭಯವೂ ಇಲ್ಲ
ಈ ನಿಟ್ಟುಸಿರೇ 
ಕೊನೆಯದಾಯ್ತಲ್ಲ
ನಿರೀಕ್ಷೆಯ ಕ್ಷಣಗಳು
ಮುಗಿದುಹೋದುವೆಲ್ಲ

ನಮ್ಮದು ಇನ್ನೇನಿದ್ದರೂ
ಸಂತಸದ ದಿನಗಳಷ್ಟೇ
ನಿನ್ನ ಆಗಮನವಾದರೆ
ಸಾಕು ಏಕಾಂತದಲಿ
ಬರೀ ನೀನು- ನಾನು ಅಷ್ಟೇ!
**************

ಚಿತ್ರ ಕೃಪೆ: ಪ್ರಕಾಶ್ ಹೆಗಡೆ 


ಅಗಲಿದ ಡಾ. ವಿ. ಎಸ್. ಆಚಾರ್ಯ

14 ಫೆಬ್ರ 12

ಈ ಅಪರಾಹ್ನ ನನ್ನ ತಮ್ಮನ
ಸಂದೇಶ ಬಂದಾಗ ನಂಬಲಾಗದೇ ಕರೆ
ಮಾಡಿ ದೃಢಪಡಿಸಿಕೊಂಡಿದ್ದೆ ಸುದ್ದಿಯನ್ನು 

ನಲವತ್ತು ವರುಷಗಳ ಹಿಂದೆ
ದೀಪದ ಗುರುತಿನ ಆಚಾರ್ಯರ ಹಿಂದೆ
ರಾಜಕೀಯದ ಅರಿವಿಲ್ಲದಿದ್ದರೂ ಓಡಾಡಿದವನು

ರಾಜಕೀಯದ ಗುಂಗು ನನ್ನೀ
ತಲೆಯೊಳಗೆ ತುಂಬಿಕೊಂಡ ದಿನದಿಂದಲೂ
ಆಚಾರ್ಯರ ಬಗ್ಗೆ ಗೌರವ ಇರಿಸಿಕೊಂಡವನು 

ತತ್ವ ನಿಷ್ಠ ರಾಜಕಾರಣಿಗಳಲ್ಲಿ
ಆಚಾರ್ಯರನ್ನು ಮೀರಿ ನಿಲುವವರು ಇಂದು
ಬಹುಷಃ ಯಾರೂ ಇಲ್ಲವೆಂದು ದೃಢವಾಗಿ ನಂಬಿರುವವನು 

ಹಠಾತ್ತನೇ ತನ್ನೆಡೆಗೆ ಸೆಳೆದುಕೊಂಡ
ಆ ದೇವ ಆಚಾರ್ಯರಾತ್ಮಕ್ಕೆ ಚಿರಶಾಂತಿ
ಕರುಣಿಸಲಿ ಎಂದು ನೊಂದ ಮನದಿಂದ ಹಾರೈಸುತಿಹೆನು

*****************************

ನಮ್ಮ ಮನಗಳೇ ಇಷ್ಟೊಂದು ನೊಂದಿರುವಾಗ
ಎಷ್ಟೊಂದು ನೊಂದಿರಬಹುದು ಆ ಹಿರಿಯ ಜೀವ?

ಬಹುಷಃ ಅವರಿಗೂ ಅನಿಸಿರಬಹುದು ಇನ್ನೇನು 
ಮಾಡಿಲಿದೆ ತಾನು ಇಲ್ಲಿ ಇರಿಸಿಕೊಂಡು ಜೀವ?

ಭಾಜಪಾದ ಕೆಸರಲ್ಲಿ ಕಮಲವಾಗಿಯೇ ಉಳಿದಿದ್ದವರು
ಕಮಲಧ್ವಜ ನೀಲಿಯಾದಾಗ ಸದ್ದಿಲ್ಲದೇ ನಡೆದಿಹರು!


ನಮ್ಮತನವಿರಲಿ!

13 ಫೆಬ್ರ 12

ಇರಲಿ ಪ್ರೀತಿ ಇರಲಿ,
ಪ್ರೀತಿ ಹರಿಯುತಲಿರಲಿ,
ಆದರೆ,
ಪ್ರೀತಿ ನಿಂತ ನೀರಾಗದಿರಲಿ;
ಇರಲಿ ಪ್ರೀತಿ ಇರಲಿ,
ಪ್ರೀತಿಯ ದಿನವೂ ಇರಲಿ,
ಆದರೆ, 
ದಿನ ದಿನವೂ ಪ್ರೀತಿ ಇರಲಿ;

ಪ್ರೀತಿಯ ದಿನಾಚರಣೆಯನ್ನು
ನಾವು ವಿರೋಧಿಸಬೇಕಾಗಿಲ್ಲ,
ಆಚರಣೆಯಲ್ಲಿ ಅಂತಹ ತಪ್ಪೂ ಇಲ್ಲ,

ವಿರೋಧಿಸಲು ಇನ್ನೂ ಇದೆಯಲ್ಲಾ?
ನಮ್ಮದೇ ಬೆಳಕಿನ ಹಬ್ಬ ದೀಪಾವಳಿ
ಇಂದೀಗ ಬರೀ ಸದ್ದು ಗದ್ದಲ
ಗೊಂದಲಗಳ ಆಚರಣೆಯಾಗಿದೆಯಲ್ಲಾ?

ಆಚರಿಸಿ, ಪ್ರೇಮಿಗಳ ದಿನವನಾಚರಿಸಿ
ನಿಜವಾಗಿ ನಮ್ಮ ಅಭ್ಯಂತರವೇನಿಲ್ಲ,
ಆದರೆ ಪ್ರೀತಿ ಪ್ರೇಮ ಒಲವು ನಲಿವಿನ
ಎಲ್ಲಾ ಆಚರಣೆಗಳಲ್ಲಿ ನಮ್ಮತನವಿರಲಿ,
ನಾವು ಸದಾ ನಾವೇ ಆಗಿರಲಿ, 
ನಮ್ಮತನ ಎಂದಿಗೂ ಕಳೆದುಹೋಗದಿರಲಿ!


ನಾ ಭಾಗ್ಯಶಾಲಿ ಕಣೇ!

10 ಫೆಬ್ರ 12

ನಿನ್ನ ಕಣ್ಣರೆಪ್ಪೆಗಳು ಕೂಡಲು ಅಲ್ಲೇ ನನ್ನ ಇರುಳು
ನನಗೆ ಮುಂಜಾವು ತೆರೆದಾಗ ನಿನ್ನ ಈ ಕಣ್ಣುಗಳು

ನಿನ್ನ ಕರಿ ಮುಂಗುರುಳ ಮೋಡಗಳ ಮರೆಯಿಂದ
ಸರಿದು ಬಂದಂತಿದೆ ಚಂದಿರ ಈ ಮುಖಾರವಿಂದ

ಮಾತು ಬೇಕಾಗಿಯೇ ಇಲ್ಲ ನಿನ್ನ ಮೌನಕ್ಕಿದೆ ಅರ್ಥ
ನಾನು ಮಾತನಾಡಿದರೂ ಎಲ್ಲಾ ಅನರ್ಥ ಅಪಾರ್ಥ

ಇದು ನನ್ನ ಸೌಭಾಗ್ಯವೋ ಅಲ್ಲಾ ಕನಸೋ ಕಾಣೆ
ನಿನ್ನ ಸನಿಹವಿದ್ದಷ್ಟು ಹೊತ್ತು ನಾ ಭಾಗ್ಯಶಾಲಿ ಕಣೇ

**************************

ಚಿತ್ರ ಕೃಪೆ: ಪ್ರಕಾಶ್ ಹೆಗಡೆ 


ನೆನಪೇ ನೆರಳು!

03 ಫೆಬ್ರ 12

ನನ್ನ
ಹಿಂದೆ
ಮುಂದೆ
ಅತ್ತ
ಇತ್ತ
ಸದಾ
ನನ್ನ
ಸುತ್ತಮುತ್ತ
ಇರುವ
ನೆರಳಿನಂತೆಯೇ
ನಿನ್ನ
ನೆನಪೂ
ಒಂದರೆಗಳಿಗೆ
ಬಿಟ್ಟಿರುವುದಿಲ್ಲ
ನನ್ನನ್ನು;

ಕತ್ತಲಾವರಿಸಿದಾಗ
ಮರೆಯಾಗುವ
ಈ ನೆರಳಿನಂತೆ
ಅಹಂಕಾರದ
ಕತ್ತಲೆ
ನನ್ನ
ಮನವನ್ನು
ಆವರಿಸಿದಾಗ
ತೊರೆಯುತ್ತದೆ
ನಿನ್ನ ನೆನಪೂ
ನನ್ನನ್ನು!
***

ಚಿತ್ರ ಕೃಪೆ: ಪ್ರಕಾಶ್ ಹೆಗಡೆ 


ಭಯ ನನಗೆ!

03 ಫೆಬ್ರ 12

ನನ್ನ ಸುತ್ತ ಸದಾ
ನಿನ್ನ ಪ್ರೀತಿಯ
ಬೆಳಕಿರಲೆಂಬ
ಆಸೆ ನನಗೆ,

ಬೆಳಕಿದ್ದಷ್ಟು
ಹೊತ್ತು
ನನ್ನ ನೆರಳ
ರೂಪದಲ್ಲಿ
ನೀನೇ ನನ್ನ
ಸುತ್ತ ಮುತ್ತ
ಸರಿದಾಡುತ್ತಿರುವ
ನಂಬಿಕೆ ನನಗೆ,

ಆದರೆ ಬೆಳಕು
ಮರೆಯಾದಾಗ
ಮರೆಯಾಗೋ
ಈ ನೆರಳಿನಂತೆ
ನೀನೂ ನನ್ನಿಂದ
ದೂರಾಗುವೆಯೆಂಬ
ಭಯ ನನಗೆ!

*******

ಚಿತ್ರ ಕೃಪೆ: ಪ್ರಕಾಶ್ ಹೆಗಡೆ