ತೃಪ್ತಿ!

31 ಮಾರ್ಚ್ 15

ಸಖೀ,
ಹುಸಿಯನಾಡುವ ಮಂದಿಗೆ
ಕರೆದು ಗೈವರೆಲ್ಲಾ ಸನ್ಮಾನ,

ಸದಾ ದಿಟವ ನುಡಿವವರಿಗೆ
ಹೆಜ್ಜೆಹೆಜ್ಜೆಗೂ ಅವಮಾನ,

ಪುರಸ್ಕಾರಕ್ಕಾಗಿ ಹಾಡುವ
ಮಂದಿಯದೊಂದು ವರ್ಗ,

ಆತ್ಮತೃಪ್ತಿಗಾಗಿ ಗೇಯದಲ್ಲಿ
ಮಗ್ನ ಇಹುದೊಂದು ವರ್ಗ,

ಅರ್ಥೈಸಿಕೊಳ್ಳದೇ ಮೆಚ್ಚುತ್ತಾ
ಕೊಂಡಾಡಿದರೆ ಅವರಿಗೆ ತೃಪ್ತಿ,

ತಾ ಬಿತ್ತಿದ ಭಾವಬೀಜವೆಲ್ಲೋ
ಮೊಳಕೆಯೊಡೆದರಿವಗೆ ತೃಪ್ತಿ!
*******


ಸ್ಪಂದಿಸುವವರು!

30 ಮಾರ್ಚ್ 15

ಸಖೀ,
ಹಲವರಿದ್ದಾರೆ ನಮ್ಮ ಮಾತುಗಳವರ
ಕಣ್ಣಿಗೆ ಬಿದ್ದಾಗಲೆಲ್ಲಾ ಸ್ಪಂದಿಸುವವರು;

ಹಲವರಿದ್ದಾರೆ ನಮ್ಮ ಮಾತುಗಳವರಿಗೆ ಇಷ್ಟವಾದಾಗಲಷ್ಟೇ ಸ್ಪಂದಿಸುವವರು;

ಕೆಲವರಿದ್ದಾರೆ ನಮ್ಮ ಮಾತುಗಳವರಿಗೆ
ಇಷ್ಟವಾಗದಿದ್ದಾಗಷ್ಟೇ ಸ್ಪಂದಿಸುವವರು!


ಸಮಾನತೆ!

30 ಮಾರ್ಚ್ 15

ಸಖೀ,
ಅವರೆತ್ತರಕ್ಕೆ ಅವರು ನಮ್ಮನ್ನೆತ್ತಲಿಕ್ಕೆ
ಬಂದರೆ ನಾವು ಖುಷಿ ಪಡುವುದಿಲ್ಲ;

ನಮ್ಮ ಮಟ್ಟಕ್ಕೆ ಅವರು ಇಳಿದರೆ ಮಾತ್ರ
ನಾವು ಖುಷಿ ಪಡುತ್ತೇವೆ ಇದು ಸುಳ್ಳಲ್ಲ!


ಜೈ ಭಗವಾನ್!

30 ಮಾರ್ಚ್ 15

ತನ್ನ ಗಂಡ ಎಲ್ಲಿ, ಯಾರೊಂದಿಗೆ, ಎಷ್ಟು ಮದ್ಯಸೇವನೆ ಮಾಡಿಕೊಂಡು ಬಂದಿದ್ದಾನೆ ಅನ್ನುವುದರ ಅರಿವು ಹೆಂಡತಿಗೆ ಹಾಗೂ ತಾನು ಕೆಲಸದಲ್ಲಿದ್ದಾಗ ತನ್ನ ಹೆಂಡತಿ ಎಲ್ಲಿಗೆ ಹೋಗ್ತಾಳೆ, ಏನು ಮಾಡ್ತಾಳೆ ಅನ್ನುವುದರ ಅರಿವು ಗಂಡನಿಗೆ, ಆಗದೇ ಇರುವ ಈ ದಿನಗಳಲ್ಲಿ ಐದಾರು ಸಾವಿರ ವರುಷಗಳ ಹಿಂದೆ ಜೀವಿಸಿದ್ದ ಎಂದು ನಂಬಲಾಗಿರುವ ಶ್ರೀರಾಮ, ಆಗ ಯಾವ ಆಹಾರ ಸೇವಿಸುತ್ತಿದ್ದ ಹಾಗೂ ಯಾವ ಪಾನೀಯ ಸೇವಿಸುತ್ತಿದ್ದ ಅನ್ನುವುದರ ಅರಿವು ಇಂದು ಯಾರಿಗಾದರೂ ಇದೆಯೆಂದಾದರೆ, ಆತ “ಭಗವಾನ”ನೇ ಆಗಿರಬೇಕು!

ಜೈ ಭಗವಾನ್!


ನಿನ್ನಿಂದಾಗಿ!

30 ಮಾರ್ಚ್ 15

ಸಖೀ,
ನೀನು ಒಂದು ವೇಳೆ ನನ್ನ ಸಂಗಾತಿಯಾಗಿಲ್ಲ
ಎಂದಿದ್ದರೆ ನನ್ನ ಗೀತೆ ಗೀತೆಯಾಗಿರುತ್ತಿರಲಿಲ್ಲ;

ನೀನು ನಿನ್ನ ನಗುವಿನಿಂದ ರಂಗು ತುಂಬಿರಲಿಲ್ಲ
ಎಂದಿದ್ದರೆ ನನ್ನ ಕನಸು ಕನಸಾಗಿರುತ್ತಿರಲಿಲ್ಲ


ಬಿದ್ದಂತಿದೆ ಆಕಾಶ!

30 ಮಾರ್ಚ್ 15

ಸಖೀ,
ಮೌನವನ್ನೇ ನೀನು ರೂಢಿ ಮಾಡಿಕೋ
ಮಾತುಗಳಿಗಿನ್ನು ಇರದು ಅವಕಾಶ,

ಎಂದು ಹೇಳುವಂತಿದೆ ನಿನ್ನ ಈ ಮೌನ,
ಈ ತಲೆಯ ಮೇಲೆ ಬಿದ್ದಂತಿದೆ ಆಕಾಶ!


ಅನಿವಾರ್ಯ!

29 ಮಾರ್ಚ್ 15

ಸಖೀ,
ಕೆಲವರಿಂದಾಗಿ ಬದುಕುವುದು
ಅನಿವಾರ್ಯವಾಗಿರುತ್ತದೆ,

ಕೆಲವರೊಂದಿಗೆ ಬದುಕುವುದು
ಅನಿವಾರ್ಯವಾಗಿರುತ್ತದೆ;

ಕೆಲವರು ನಮ್ಮ ಬದುಕಿನಲ್ಲಿ
ಅನಿವಾರ್ಯರು ಎಂದೆಣಿಸುತ್ತೇವೆ,

ಕೆಲವರ ಬದುಕಿನಲ್ಲಿ ನಾವೇ
ಅನಿವಾರ್ಯವಾಗಿ ಇದ್ದುಬಿಡುತ್ತೇವೆ;

ಕೆಲವರಿಂದ ದೂರವಾಗಿರುವುದು
ನಮಗೆ ಅನಿವಾರ್ಯವಾಗಿ ಇರುತ್ತದೆ,

ಕೆಲವರ ಜೊತೆಯಲ್ಲಿ ಇರುವುದು
ನಮಗೆ ಅನಿವಾರ್ಯವಾಗಿ ಇರುತ್ತದೆ!


ಇದೂ ಸತ್ಯವಾಗಿರಬೇಕು!

28 ಮಾರ್ಚ್ 15

ಸಖೀ,
ಅವರಿಲ್ಲದ ಬದುಕು ದುಸ್ತರವೆಂದು ಎಣಿಸಿದ್ದೆ
ಅವರಿಲ್ಲದ ಬದುಕಿನಲ್ಲಿ ಗತಿ ಇರದೆಂದೆಣಿಸಿದ್ದೆ
ಹಾಗಾಗಿಲ್ಲ ದಿನದಿಂದ ದಿನಕ್ಕೆ ಏಳಿಗೆಯಾಯ್ತು
ಮಗಳಲ್ಲಿ ಅಪ್ಪಯ್ಯನ ಇರವು ಕಂಡಂತಾಯ್ತು

ಹನ್ನೆರಡು ವರುಷಗಳು ಹೇಗೇಗೋ ಕಳೆದವು
ಎಲ್ಲ ಕ್ಷಣಗಳೂ ಅವರ ನೆನಪಿನಲ್ಲೇ ಕಳೆದವು
ಹೊರಗಿದ್ದವರೀಗೊಳಗೆ ಮನೆ ಮಾಡಿದಂತಿದೆ
ನನ್ನೊಳಗಿನಿಂದಲೇ ಶಕ್ತಿ ತುಂಬುತಿರುವಂತಿದೆ

ಪರಮಾತ್ಮ ನಮ್ಮನ್ನು ಆಲಿಸುವನೆಂಬ ನಂಬಿಕೆ
ನನಗೆ ಆತ್ಮ ಆತ್ಮವನಾಲಿಸುವುದೆಂಬ ನಂಬಿಕೆ
ಅದು ಸತ್ಯವಾಗಿದ್ದರೆ ಇದೂ ಸತ್ಯವಾಗಿರಬೇಕು
ಅಪ್ಪಯ್ಯನವರಾತ್ಮ ಇಂದೂ ಆಲಿಸುತಿರಬೇಕು

ಮರೆಯಾಲಾಗುವುದಿಲ್ಲ ಮರೆತಂತೆ ನಟನೆಯಷ್ಟೇ
ಏಕಾಂತದಲ್ಲಿ ನೆನಪಿಸಿಕೊಂಡು ಕೊರಗುವೆನಷ್ಟೇ
ಅಗಲಿದ ಅವರು ಎಂದೂ ನನ್ನಿಂದ ದೂರವಾಗಿಲ್ಲ
ನನ್ನೊಳಗಿನ ಬೆಳಕಾಗಿ ದಾರಿ ತೋರುತಿಹರಲ್ಲಾ?
******


ನೆನಪುಗಳು!

26 ಮಾರ್ಚ್ 15

ಸಖೀ,
ಮಾತುಗಳು ಮರೆತುಹೋಗುತ್ತವೆ;
ನೆನಪುಗಳು ಸದಾ ಸತಾಯಿಸುತ್ತವೆ

ಹೌದು ಆ ಮಾತುಗಳೆಲ್ಲಾ ಮರೆತಿವೆ
ನೆನಪುಗಳು ಮಾತ್ರ ಸತಾಯಿಸುತ್ತಿವೆ!


ವ್ಯಾಕುಲ ಮನ!

26 ಮಾರ್ಚ್ 15

ಸಖೀ,
ತುಂಬು ಹರೆಯದ ಸಂಜೆಯೊಂದೀಗ
ಸುಂದರ ನಿಶಾರಾಣಿಯಾಗಿ ಬದಲಾಗಿದೆ;

ನೀನೆಲ್ಲಿರುವೆ ಎಂದು ಬರುವೆ ಅನ್ನುವ
ಸುದ್ದಿಯಿಲ್ಲದೇ ಮನ ವ್ಯಾಕುಲಗೊಂಡಿದೆ