ನನಗೆ ನಾಯಿ ಕಲಿಸಿದ ಪಾಠ!

23 ಮಾರ್ಚ್ 12

ನಾನು ಅಂದು ಸಂಜೆ, ಆತ್ರಾಡಿಯ ನಮ್ಮ ಮನೆಯಂಗಳದಲ್ಲಿ ಸುಮ್ಮನೆ ಕೂತಿದ್ದೆ ಕುರ್ಚಿಯ ಮೇಲೆ.

ನಮ್ಮ ಮನೆಯ ನಾಯಿ ಬಾಲ ಅಲ್ಲಾಡಿಸುತ್ತಾ ಬಂತು ಕೂತಿತು ನನ್ನ ಪಕ್ಕದಲ್ಲೇ.
ನನ್ನತ್ತ ಮುಗ್ಧ  ನೋಟ ಬೀರುತ್ತಾ, ತನ್ನ ಮುಂಗಾಲನ್ನು ಎತ್ತಿ ನೀಡಿತು… ಸ್ನೇಹ ಹಸ್ತ ಚಾಚಿತು, ಹಸ್ತ ಲಾಘವ ನಿರೀಕ್ಷಿಸುವವರಂತೆ.
ನಾನು ಅಂಗೈಯನ್ನಗಲಿಸಿ ಚಾಚಿದೆ. ತನ್ನ ಮುಂಗಾಲನ್ನು ನನ್ನ ಹಸ್ತದ ಮೇಲಿರಿಸಿತು… ಕ್ಷಣಕಳೆದು ಕೆಳಗಿರಿಸಿತು!
ಅದ್ಯಾಕೋ,  ಆ ನಾಯಿಯ ಸ್ನೇಹಭಾಷ್ಯ ನನ್ನ ಮನಕೆ ಮುದ ನೀಡಿತು…
ನನ್ನ ಬಂಧುಗಳ ಎಚ್ಚರಿಕೆಯ ನುಡಿಗಳ ನಡುವೆಯೇ, ನಾನು ನನ್ನ ಹಸ್ತವ ಮತ್ತೆ ಚಾಚಿದೆ.

ದುರುಗುಟ್ಟಿಕೊಂಡು ನೋಡುತ್ತಲೇ ಇತ್ತು ಪ್ರತಿಸ್ಪಂದಿಸದೇ… ಮತ್ತೆ ಮತ್ತೆ ಬಾಯ್ಬಿಟ್ಟು ಕೇಳಿದೆ … 
ರೋಸಿಹೋದ ಆ ನಾಯಿ ಗಬಕ್ಕನೇ ನನ್ನ ಮುಂಗೈಗೆ ಬಾಯಿಹಾಕಿ
ತನ್ನ ಮುಂದಿನ ಹಲ್ಲನ್ನು, ಕೈಯೊಳಗೆ ಒತ್ತಿ, ರಕ್ತದ ಓಕುಳಿ ಹರಿಸಿತು…
ನಾನು ನೋವಿನಿಂದ ಕಿರುಚಲು, ಅದು ಎದ್ದು ಎತ್ತಲೋ ಓಡಿ ಹೋಯಿತು!

ಅಂದು ಆ ನಾಯಿ ನನಗೆ ಕಲಿಸಿದ ಪಾಠ:

ಅತಿಯಾದ ಮುದ್ದು, ಈಗ ನಾಯಿಗಳಿಗೂ ಬೇಡವಾಗಿದೆ, ಕಣ್ರೀ!


ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

23 ಮಾರ್ಚ್ 12

ಒಂದು ಯುಗಾದಿ ಮತ್ತೊಂದು ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆ

ಈ ಜೀವನಪಯಣದಲ್ಲಿ ಜೊತೆಯಾದ ಸ್ನೇಹಿತರ ಹೊಸ ಹೊಸ ಸ್ನೇಹವಿದೆ

 

ಅಳಿದು ಹೋದವರ ಕಹಿನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ ಘಾಸಿ

ಹೊಸ ಬಂಧು-ಮಿತ್ರರು ತಮ್ಮ ಹೊಸತನದಿ ಮಾಡುತಿಹರು ನೋವ ವಾಸಿ

 

ಬೇವು ಬೆಲ್ಲಕ್ಕೆ ಇಂದಷ್ಟೇ ಅಲ್ಲ ದಿನ ಪ್ರತಿದಿನ ನಮ್ಮೆಲ್ಲರ ಬಾಳಿನಲ್ಲಿದೆ ಪಾಲು

ಪ್ರತಿ ಹೆಜ್ಜೆಯಲ್ಲೂ ಮಿಶ್ರ ಅನುಭವ ನೀಡುತ್ತಲೇ ಇರುತ್ತದೆ ನಮಗೆ ಈ ಬಾಳು

 

ಸಿಹಿ-ಕಹಿ ಹಂಚಿಕೊಂಡು ಬಾಳುವ ಸಮಚಿತ್ತ ಇಂದಿಗಷ್ಟೇ ಸೀಮಿತವಾಗದಿರಲಿ

ಬಾಳಿನ ಏಳು ಬೀಳುಗಳನ್ನು ಸ್ಥೈರ್ಯದಿಂದ ಎದುರಿಸುವ ಸಮಚಿತ್ತ ಸದಾ ಇರಲಿ

 

ನಂದನನಾಮ ಸಂವತ್ಸರ ನಿಮ್ಮ ನಮ್ಮೆಲ್ಲರ ಬಾಳನ್ನು ನಂದನವನವನ್ನಾಗಿಸಲಿ

ಹೊಸ ವರುಷವಿಡೀ ನಿಮ್ಮ ನಮ್ಮೆಲ್ಲರ ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

************************


ನಾವೇ ಏಣಿಯಾಗೋಣ!

22 ಮಾರ್ಚ್ 12


ಸಖೀ,
ಜೀವನವಿಡೀ
ಪರರ ಕೈ ಹಿಡಿದು
ನಡೆದದ್ದು ಸಾಕು,

ಪರರ ನೆರವಿಗಾಗಿ
ಕಾದದ್ದೂ ಸಾಕು,

ಇನ್ನೊಬ್ಬರನ್ನು
ಏಣಿಯಾಗಿಸಿಕೊಂಡು
ಮೇಲೇರಿದ್ದೂ ಸಾಕು.

ಬಾ ಸಖೀ,
ನಾವಿನ್ನು ಪರರಿಗಾಗಿ
ಬಾಳೋಣ,

ಅಳುವವರ ನೋವನಳಿಸಿ
ಅವರ ನಗಿಸೋಣ,

ನಡೆಯಲಾಗದವರಿಗೆ ನಾವೇ
ಊರುಗೋಲಾಗೋಣ,

ದೃಷ್ಟಿಹೀನರ ಕಣ್ಣ
ಜ್ಯೋತಿಯಾಗೋಣ,

ಕೇಳಲಾಗದವರಿಗೆ
ನಾವೇ ಕಿವಿಗಳಾಗೋಣ,

ಜೀವನದಲಿ ಏರಲಾಗದವರಿಗೆ
ನಾವೇ ಏಣಿಯಾಗೋಣ,

ಅಲ್ಲಿ – ಇಲ್ಲಿ -ಎಲ್ಲಿ
ಎಂದು ಹುಡುಕುವುದ ಬಿಟ್ಟು,
ನಮ್ಮ ನೆರೆಹೊರೆಯವರಲ್ಲೇ
ಆ ದೇವರ ದರುಶನವ ಮಾಡೋಣ.

ತಂತಾನೇ,
ನಿರಾಯಾಸವಾಗಿ ತುಂಬುತಿರುವ
ನಮ್ಮ ಪಾಪದ ಕೊಡವ
ಸರಿತೂಗಿಸಲು,
ಪುಣ್ಯದ ಕೊಡವ ನಾವೇ
ಕೈಯ್ಯಾರೆ ತುಂಬಿಸಲೆತ್ನಿಸೋಣ.

ಬಾ ಸಖೀ,
ಪರರಿಗೆ ನಾವೇ
ಏಣಿಯಾಗೋಣ!
*-*-*-*-*-*


ಏನಾಗಿರಬಹುದು?

21 ಮಾರ್ಚ್ 12


ನನ್ನನ್ನು ಕರೆ ಕರೆದು
ಮಾತನಾಡಿಸುತ್ತಿದ್ದವರು
ಒಮ್ಮೆಗೇ ಮೌನಿಯಾದಾಗ,

ಅತ್ತಲಿಂದ ದಿನ ಪ್ರತಿದಿನ
ಬರುತ್ತಿದ್ದ ಕರೆಗಳು
ತಿಂಗಳಾದರೂ ಬಾರದಿದ್ದಾಗ,

ಏನ ತಿಳಿಯಲಿ ನಾನು?

ಅವರು ಕಂಡಿರಬಹುದು ನನ್ನಲ್ಲಿ
ಏನೋ ಬದಲಾವಣೆಯನೆಂದೇ?

ಅಲ್ಲಾ… ಅವರೇ
ನಿಜದಿ ಈಗ ಬದಲಾಗಿಹರೆಂದೇ?

ಅಲ್ಲಾ…ಅವರೀಗ ತಮ್ಮ 
ನಿಜ ರೂಪವ ತೋರುತಿಹರೆಂದೇ? 
*********


ನೆನಪಷ್ಟೇ ಉಳಿದಿದೆ

20 ಮಾರ್ಚ್ 12

ಕಳೆದು ಹೋದವರ ನೆನಪಲ್ಲಿ ಕೂತು ಸದಾ ಅಳಲಾಗುವುದಿಲ್ಲ,

ಕಳೆದು ಹೋದವರ ಮರೆತು ನೆಮ್ಮದಿಯಾಗಿರಲೂ ಆಗುವುದಿಲ್ಲ;

ನೆನಪಿನ ಮೆರವಣಿಗೆಯ ನಡುನಡುವೆ ಮರೆವಿನಾಟಗಳೂ ಸಾಗಿವೆ,

ಮರೆತಿಹ ಮನದಂಗಳದಲ್ಲಿ ನೆನಪಿನ ಹೆಜ್ಜೆಗಳು ಮೂಡಿ ಕಾಡಿವೆ;

ಮರೆತೆವೆಂದವರನ್ನು ನಿಜದಿ ನಾವೆಂದಿಗೂ ಮರೆಯಲಾಗುವುದಿಲ್ಲ,

ಮರೆಯಲೇ ಆಗದು ಎಂದವರನ್ನೇ ಮರೆತು ನಾವು ಬಾಳುತಿಹೆವಲ್ಲ?

ಕಾಲಚಕ್ರದಲ್ಲಿ ಎಲ್ಲವೂ ಮರುಕಳಿಸುವುದು ಎಂಬೊಂದು ಮಾತಿದೆ,

ಆದರೆ ಕಾಲಚಕ್ರದಲ್ಲಿ ಅಗಲಿಹೋದವರ ಮುಖ ಮತ್ತೆಲ್ಲಿ ಕಂಡಿದೆ?

ನೀನಿಲ್ಲದೇ ಕಷ್ಟ ಎಂದವರ ಗೋರಿಯ ಮೇಲೆ ಈ ಜೀವನ ಸಾಗಿದೆ,

ಎಂದಿಗೂ ನಿನ್ನನ್ನಗಲಲಾರೆ ಎಂದವರ ನೆನಪಷ್ಟೇ ಈಗ ಉಳಿದಿದೆ!

***************

 


ನಾನೂ ಶೂನ್ಯ!

05 ಮಾರ್ಚ್ 12


ಮನ ಮರ್ಕಟನಂತಾಗಿ
ಆಡಿಸಿದೆಲ್ಲ ಆಟವ ಬಿಡದೇ
ನಾನಾಡಿದ ಮೇಲೆ ಸೋತು 
ಅಂತರ್ಮುಖಿಯಾಗಿ ಕೂತು
ಇಂದೀಗ ಯೋಚಿಸುವಾಗ,
ಸೂರ್ಯನ ಬೆಳಕಿನಲ್ಲಿ ನನ್ನ
ನಾನೇ ಕಂಡರಿತುಕೊಂಬಾಗ
ಏನಿದೆ ಇಲ್ಲಿ ಎಲ್ಲವೂ ಶೂನ್ಯ
ಅಳಿದವರ ಗೋರಿಯ ಮೇಲೆ
ಹತ್ತಿ ಕೂತವನಾದ ನಾನೂ 
ಅಳಿಯುವವನೇ, ಅಲ್ಲ ಅನ್ಯ!

ಚಿತ್ರ ಕೃಪೆ: ಪ್ರಕಾಶ್ ಹೆಗಡೆ 


ಮನೆಯಂಗಳದಿಂದ ನೆನಪಿನಂಗಳಕ್ಕೆ!

03 ಮಾರ್ಚ್ 12

ಶ್ರೀಮತಿ  ಅಂಬಾ ಚಂದ್ರಶೇಖರ್

ಪಯಣ: ೨೧ ಜನವರಿ ೧೯೩೧ ರಿಂದ ೧ ಮಾರ್ಚ್ ೨೦೧೨

ನಮ್ಮ ಮನೆಯಂಗಳದಿಂದ  ನನ್ನ ನೆನಪಿನಂಗಳಕ್ಕೆ ಸರಿದುಹೋದರು ನನ್ನ ಅಮ್ಮ

ಅಮ್ಮನಿಲ್ಲದ ಮನೆಯನ್ನು ಇಂದು ಹೊಕ್ಕಿ ಕೂತಂತಿದೆ ಹೆಜ್ಜೆ ಹೆಜ್ಜೆಗೂ ಬೆದರಿಸುವ ಗುಮ್ಮ!