ಕುಲಸಚಿವರ ಆಯ್ಕೆಗೊಂದು ಪ್ರಶ್ನೆ!

30 ಜುಲೈ 14

ನಮ್ಮ ಅಪ್ಪಯ್ಯನವರಿಂದ ಕೇಳಿದ್ದ ೧೯೫೦ರ ದಶಕದ ಒಂದು ಘಟನೆಯ ನೆನಪು.

ಆಗ ನಮ್ಮ ಅಪ್ಪಯ್ಯನವರು (ಡಾ.ಯು.ಚಂದ್ರಶೇಕರ) ಕುಡುಮಲ್ಲಿಗೆಯಲ್ಲಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದರು.

ಅವರ “ಕ್ಲಿನಿಕ್”ಗೆ (ಪ್ರೇಮಾ ಮೆಡಿಕಲ್ ಹಾಲ್) ಶ್ಯಾಮ ಶೆಟ್ಟಿ ಅನ್ನುವ ಹುಡುಗ ಆಗಾಗ ಬರುತ್ತಿದ್ದರು.

ಅಪ್ಪಯ್ಯನವರ ಸಹಕಾರದಿಂದ, ಪ್ರೌಢಶಾಲಾ ಶಿಕ್ಷಣ ಮುಗಿಸಿದ್ದ ಆತ, ಶಿಕ್ಷಕರ ಆಯ್ಕೆಗಾಗಿ ನಡೆವ ಮೌಖಿಕ ಪರೀಕ್ಷೆಗೆ ತೆರಳುವ ಮುನ್ನ ನಮ್ಮ ಅಪ್ಪಯ್ಯನವರಲ್ಲಿಗೆ ಬಂದು ತಮಗೆ ಆಶೀರ್ವದಿಸುವಂತೆ ಬೇಡಿದರಂತೆ.

ಅವರಿಗೆ ಶುಭಹಾರೈಸಿದ ಅಪ್ಪಯ್ಯನವರು, “ಒಂದು ವೇಳೆ, ಅಲ್ಲಿ ನಿನ್ನನ್ನು, ಕನ್ನಡದ ಮಹಾನ್ ಗ್ರಂಥ ಯಾವುದು ಹಾಗೂ ಅದನ್ನು ಬರೆದವರು ಯಾರು ಎಂದು ಕೇಳಿದರೆ, ಶ್ರೀರಾಮಾಯಣ ದರ್ಶನಂ ಹಾಗೂ ಕುವೆಂಪು ಎಂದು ಉತ್ತರ ನೀಡು”, ಎಂದು ಹೇಳಿ ಕಳುಹಿಸಿದ್ದರಂತೆ.

ಕಾಕತಾಳೀಯ ಅನ್ನುವಂತೆ ಆ ಪ್ರಶ್ನೆಯನ್ನು ಕೇಳಿದ್ದೂ ಆಗಿತ್ತು, ಆತ ಸಂತಸದಿಂದ ಉತ್ತರಿಸಿದ್ದೂ ಆಗಿತ್ತು. ಖುಷಿಯಿಂದ ಬಂದು ನಮ್ಮ ಅಪ್ಪಯ್ಯನವರಿಗೆ ವರದಿ ಸಲ್ಲಿಸಿದ್ದೂ ಆಗಿತ್ತು.

ನಂತರ ಶಿಕ್ಷಕರಾಗಿ ನಲವತ್ತು ವರುಷ ಸೇವೆ ಸಲ್ಲಿಸಿ ನಿವೃತ್ತರಾದುದೂ ಆಯ್ತು.

ಇಂದು ಅದೇಕೋ ಅಂದಿನ ಈ ಘಟನೆ ನೆನಪಾಯ್ತು.

ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರ ನೇಮಕ ಮಾಡುವಾಗ, ಅಭ್ಯರ್ಥಿಗಳಿಗೆ ಈ ಪ್ರಶ್ನೆಯನ್ನು ಕೇಳಿದ್ದರೆ, ಬಹುಶಃ ಇಂದು ಈ ಸನ್ನಿವೇಶ ನಿರ್ಮಾಣವಾಗಿರುತ್ತಲೇ ಇಲ್ಲ ಎಂದು ಅನಿಸುತ್ತಿದೆ.

Advertisements

ಮಾತೂ ಕಲೆ!

30 ಜುಲೈ 14

ಸಖೀ,
ಈ ಮಾತು ಅನ್ನುವುದೂ ಒಂದು ಕಲೆ
ಆಲಿಸಲು ಹಿತವಾಗಿದ್ದರೆ ಅದಕ್ಕೆ ಬೆಲೆ
ಕಂಡುಕೊಳ್ಳಬೇಕದು ಮನಗಳಲ್ಲಿ ನೆಲೆ
ಮಾಡಬಾರದು ಅಳಿಸಲೇ ಆಗದ ಕಲೆ!


ಗೌರವ ಮುಖ್ಯ!

30 ಜುಲೈ 14

ಸಖೀ,
ಹೊಸದಕ್ಕೆಲ್ಲಾ ಬೇಡಿಕೆ ಜಾಸ್ತಿ
ಹಳೆಯದಕ್ಕಿಲ್ಲಿ ಗೌರವ ಜಾಸ್ತಿ
ಚಿಂತಿಸಬೇಡ ನೀನಿಷ್ಟೊಂದು
ಹಳಬರಾಗುತ್ತಿದ್ದರೆ ನಾವಿಂದು!


ಅಳಿದಿದೆ!

29 ಜುಲೈ 14

ಸಖೀ,
ನಾನು ಸಾಯುವುದಿಲ್ಲ ಎಂದಂದುಕೊಂಡಿದ್ದೆ
ನಾನು ಈಗ ಸತ್ತಿದೆ ನಾವು ಜೀವಂತ ಆದಾಗ
ಅಹಂ ಅಳಿಯುವುದಿಲ್ಲ ಎಂದೇ ನಾ ತಿಳಿದಿದ್ದೆ
ಅಹಂ ಅಳಿದಿದೆ, ಪ್ರೀತಿ ಮನದೊಳಿಳಿದಾಗ!


ಮೂರನೆಯವರು ಬೇಕು!

27 ಜುಲೈ 14

ಸಖೀ,
ಮುನಿಸು ನನ್ನೊಳಗಿದೆ
ನೋಡು ನಿನ್ನಲ್ಲೂ ಇದೆ
ಕೇಳಿದರೆ ಕಾರಣವಿಲ್ಲಿಲ್ಲ
ಅಹಂ ಬಿಡುತ್ತಲೇ ಇಲ್ಲ;

ತಮಾಷೆಗೆ ಆರಂಭಿಸಿ
ಏರಿಸಿಕೊಂಡೆವೀ ಬಿಸಿ
ತಣಿಸುವ ಮಳೆ ಬೇಕು
ಮೂರನೇ ವ್ಯಕ್ತಿ ಬೇಕು;

ಒಮ್ಮೆ ಬಿಟ್ಟುಬಿಡೋಣ
ಹಿಂದಿನಂತೆ ಇರೋಣ
ಎಂದು ನನಗನಿಸಿದಂತೆ
ನಿನಗೂ ಅನಿಸದೇಕಂತೆ?


ಅಪಥ್ಯ!

27 ಜುಲೈ 14

ಸಖೀ,
ಹಾಸ್ಯವೂ ಪಥ್ಯ,  ವ್ಯಂಗ್ಯವೂ  ಪಥ್ಯ
ನಿಜವಾಗೆನಗೆ ವಿಡಂಬನೆಯೂ ಪಥ್ಯ
ನಿನ್ನ ಈ ಕೊಂಕು ಮಾತುಗಳ ದಾಳಿ,
ನಿನ್ನ ಮೇಲಾಣೆ, ನನಗೆಂದೂ ಅಪಥ್ಯ;

ನೀ ನನ್ನವಳೆಂಬ ಒಂದೇ ಕಾರಣದಿಂದ
ನನಗೆ ನಿನ್ನ ಮೇಲಿರುವ ಮೋಹದಿಂದ
ಇದಿರು ಮಾತನಾಡದೇ ಸಹಿಸುತಿರುವೆ
ನಿನ್ನೆಲ್ಲಾ ದಾಳಿಯನು ನಾ ಮೌನದಿಂದ!


ಎಲ್ಲಿದೆ ಆಸರೆ?

27 ಜುಲೈ 14

ಸಖೀ,
ನನ್ನ ಈ ಮನಸ್ಸು ನೊಂದಾಗಲೆಲ್ಲಾ
ನನಗೆ ನಿನ್ನಾಸರೆಯ ಭರವಸೆ ಇತ್ತು;
ನಿನ್ನಿಂದಲೇ ಮನವೀಗ ನೊಂದಿರಲು
ಎಲ್ಲಿದೆ ಆಸರೆ ಹೇಳು ನನಗೀ ಹೊತ್ತು?