ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!

28 ಫೆಬ್ರ 11

ನಡೆಯಲರಿಯದವರ ಕೈಹಿಡಿದುಕೊಂಡು
ನಡೆಯ ಕಲಿಸಿ, ಎಲ್ಲರಿಗೂ ಸದಾ ನೀತಿ ಪಾಠ ಮಾಡುತ್ತಿದ್ದರೂ
ಅವರ ಮುಂದೆಯೇ ಬೋರಲಾಗಿ ಬಿದ್ದು, ಗೌರವಕ್ಕೇ ಅಪಾತ್ರರೆನಿಸಿಕೊಂಡರು

ಮನದ ತುಂಬೆಲ್ಲಾ ತುಂಬಿಕೊಂಡು
ಅಭಿಮಾನದಿಂದ ತಲೆಯ ಮೇಲೆತ್ತಿಕೊಂಡು ಸುತ್ತಾಡಿದರೂ
ಕೊನೆಗೆ ತಮ್ಮೆಲ್ಲಾ ಅನಾಚಾರಗಳಿಂದಾಗಿ ನಮ್ಮ ಕಣ್ಮುಂದೆಯೇ ಬೆತ್ತಲಾದರು

ಸಾರ್ವಜನಿಕವಾಗಿ ಮೇಲೇರಿಕೊಂಡು
ತಾನೆಷ್ಟೇ ಸಾಚಾ ಎಂದು ಜಗದ ಮುಂದೆಲ್ಲಾ ತಾ ಮೆರೆದರೂ
ತನ್ನ ಒಳಉಡುಪುಗಳನ್ನೆಲ್ಲಾ ನಡುಬೀದಿಯಲಿ ಒಗೆದು ನಗೆಪಾಟಲಿಗೀಡಾದರು

ಗೌರವ ಸ್ಥಾನಗಳನ್ನು ಸ್ವೀಕರಿಸಿಕೊಂಡು
ಸಾಗುತ್ತಿರುವಾಗ ನಾವು ಅದೆಷ್ಟೇ ದೊಡ್ಡ ಸೌಧವನು ಕಟ್ಟಿದರೂ
ಸೌಧದ ಕಿಟಕಿ ಬಾಗಿಲುಗಳು ಸದಾ ತೆರೆದುಕೊಂಡಿರುವುದೆಂಬುದನೇ ಮರೆತರು

ತಾನು ನುಡಿದಂತೆ ನಡೆಯಿರಿಸಿಕೊಂಡು
ಬಾಳುವುದು ನಿಜದಿ ಬಹು ಸುಲಭಸಾಧ್ಯವಲ್ಲವೆಂದು ಅರಿತಿದ್ದರೂ
ತನ್ನ ನುಡಿಯಂತೆ ನಡೆಯಿರಿಸಿಕೊಂಡು ಬಾಳಿದವರೇ ನಿಜದೀ ಜಗದಿ ಆದರಣೀಯರು!

*****************************************


ನೆಲೆಯೊಂದ ಹುಡುಕುತಿಹೆ… ಗೂಡೊಂದ ಹುಡುಕುತಿಹೆ!

25 ಫೆಬ್ರ 11

 

ಈ ನಗರದಲ್ಲಿ ಒಂಟಿಯಾಗಿ, ಹಗಲಿರುಳೂ ನಾ ಅಲೆಯುತಿಹೆ
ನೆಲೆಯೊಂದ ಹುಡುಕುತಿಹೆ, ನಾ ಗೂಡೊಂದ ಹುಡುಕುತಿಹೆ||

ದಿನವು ಖಾಲಿ ಪಾತ್ರೆಯಂತಿದೆ, ರಾತ್ರಿಯು ಕತ್ತಲು ತುಂಬಿಹ ಬಾವಿಯಂತಿದೆ
ಕತ್ತಲುಗಟ್ಟಿರುವ ನನ್ನೀ ಕಣ್ಣುಗಳಿಂದ ಕಣ್ಣೀರಿನ ಬದಲು ಹೊಗೆ ಹೊಮ್ಮುತಿದೆ
ಬದುಕಬೇಕೇಕೆಂದೇ ತಿಳಿಯದಿರಲು, ಸಾಯಲು ನೆಪದ ನಾ ಹುಡುಕುತಿಹೆ||

||ಈ ನಗರದಲ್ಲಿ ಒಂಟಿಯಾಗಿ, ಹಗಲಿರುಳೂ ನಾ ಅಲೆಯುತಿಹೆ||

ಆಯುಷ್ಯಕ್ಕಿಂತಲೂ ಉದ್ದಗಿನ ಈ ರಸ್ತೆಗಳು ಗುರಿ ತಲುಪಿದುದ ನಾ ಕಂಡಿಲ್ಲ
ಹುಡುಕಾಡುತ್ತಾ ತಡಕಾಡುತ್ತಾ ಇರುವ ಇವು ವಿರಮಿಸಿದುದನೇ ನಾ ಕಂಡಿಲ್ಲ
ಈ ಅಪರಿಚಿತ ನಗರದಲ್ಲಿ ನಾನೀಗ ಪರಿಚಿತ ಮುಖವೊಂದ ಹುಡುಕುತಿಹೆ||

||ಈ ನಗರದಲ್ಲಿ ಒಂಟಿಯಾಗಿ, ಹಗಲಿರುಳೂ ನಾ ಅಲೆಯುತಿಹೆ||
*******************************

ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದ

ಚಿತ್ರ: ಘರೋಂಡಾ
ಗಾಯಕ: ಭೂಪೀಂದರ್
ಸಾಹಿತ್ಯ: ಗುಲ್ಝಾರ್
ಸಂಗೀತ:
ಜಯದೇವ್

ಏಕ್ ಅಕೇಲಾ ಇಸ್ ಶಹರ್ ಮೆ, ರಾತ್ ಮೆ ಔರ್ ದೋಪಹರ್ ಮೆ
ಆಬೂದಾನಾ ಡೂಂಡ್‍ತಾ ಹೈ, ಆಶಿಯಾನಾ ಡೂಂಡ್‍ತಾ ಹೈ

ದಿನ್ ಖಾಲೀ ಖಾಲೀ ಬರ‍್ತನ್ ಹೈ ಔರ್ ರಾತ್ ಹೈ ಜೈಸೆ ಅಂಧಾ ಕುಂವಾ
ಇನ್ ಸುನೀ ಅಂಧೇರೀ ಆಂಖೋಂ ಸೆ ಆಂಸೂ ಕೀ ಜಗಹ್ ಆತಾ ಹೈ ಧುಂವಾ
ಜೀನೇ ಕಿ ವಜಹ್ ತೋ ಕೋಯೀ ನಹೀಂ ಮರ‍್ನೇ ಕ ಬಹಾನಾ ಡೂಂಡ್‍ತಾ ಹೈ
ಏಕ್ ಅಕೇಲಾ ಇಸ್ ಶಹರ್ ಮೆ|

ಇನ್ ಉಮ್ರ್ ಸೆ ಲಂಬೀ ಸಡ್‍ಕೋಂ ಕೋ ಮಂಜಿಲ್ ಪರ್ ಪಹುಂಚ್‍ ತಾ ದೇಖಾ ನಹೀಂ
ಬಸ್ ಡೂಂಡ್‍ ತೇ ಫಿರ್ ತೇ ರಹ್‍ತೇ ಹೈಂ ಹಮ್‍ ನೇ ತೋ ಠೆಹರ‍್ ತೇ ದೇಖಾ ನಹೀಂ
ಇಸ್ ಅಜ್‍ನಭೀ ಸೆ ಶಹರ್ ಮೆ ಜಾನಾ ಪೆಹ್‍ಚಾನಾ ಡೂಂಡ್‍ತಾ ಹೈ
ಏಕ್ ಅಕೇಲಾ ಇಸ್ ಶಹರ್ ಮೆ|


ಎದೆಯಲ್ಲಿ ಉರಿತ… ಕಂಗಳಲ್ಲಿ ಚಂಡಮಾರುತ!

24 ಫೆಬ್ರ 11

 

||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆ
ಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||

ಹೃದಯವಿದ್ದವರು ಮಿಡಿತಕ್ಕೆ ಕಾರಣ ಹುಡುಕಿಕೊಳ್ಳಬೇಕಿತ್ತು
ಪ್ರತಿ ಜೀವವೂ ಗರಬಡಿದ ನಿರ್ಜೀವ ಕಲ್ಲಂತೆ ಅದೇಕಾಯ್ತು

||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆ
ಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||

ಸ್ನೇಹಿತರೇ, ಹೇಳಿ ಏಕಾಂತದ ಈ ತಾಣ ಯಾವುದಿಹುದು
ನನ್ನ ದೃಷ್ಟಿ ಹೋದೆಡೆಯೆಲ್ಲಾ ಅದೇಕೆ ನಿರ್ಜನವಾಗಿಹುದು

||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆ
ಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||

ನನ್ನಲ್ಲಿ ಇಂದು ಏನಾದರೂ ಹೊಸತನವು ಕಂಡುಬರುತಿಹುದೇ
ನನ್ನನ್ನು ಕಂಡ ಕನ್ನಡಿಯೂ ಅದೇಕೆ ಈ ಪರಿ ಸುಸ್ತಾದಂತಿದೆ

||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆ
ಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||
****************************

ಇದೂ ಒಂದು ಹಿಂದೀ ಚಲನ ಚಿತ್ರ ಗೀತೆಯ ಭಾವಾನುವಾದ.

ಚಿತ್ರ: ಗಮನ್
ಸಂಗೀತ: ಜಯದೇವ್
ಗಾಯಕರು: ಸುರೇಶ್ ವಾಡೇಕರ್

ಮೂಲ ಗೀತೆ:

ಸೀನೇ ಮೆ ಜಲನ್ ಆಂಖೋಂ ಮೆ ತೂಫಾನ್ ಸಾ ಕ್ಯೋಂ ಹೈ
ಇಸ್ ಶಹರ್ ಮೆ ಹರ್ ಶಕ್ಸ್ ಪರೇಶಾನ್ ಸಾ ಕ್ಯೋಂ ಹೈ

ದಿಲ್ ಹೈ ತೊ ದಢಕ್ ನೇ ಕಾ ಬಹಾನಾ ಕೋಯೀ ಡೂಂಡೇ
ಪತ್ಥರ್ ಕಿ ತರಹ್ ಬೇಹಿಸಾ ಬೇಜಾನ್ ಸಾ ಕ್ಯೋಂ ಹೈ

ತನ್ ಹಾಯಿ ಕೀ ಏ ಕೌನ್ ಸಾ ಮಂಜಿಲ್ ಹೈ ರಫೀಕೋಂ
ತಹದ್ದೇ ನಝರ್ ಏಕ್ ಬಯಾಬಾನ್ ಸಾ ಕ್ಯೋಂ ಹೈ

ಕ್ಯಾ ಕೋಯೀ ನಯೀ ಬಾತ್ ನಝರ್ ಆತೀ ಹೈ ಹಮ್ ಮೆ
ಆಯಿನಾ ಹಮೇ ದೇಖ್ ಕೆ ಹೈರಾನ್ ಸಾ ಕ್ಯೋಂ ಹೈ

********************************


ಒಡಹುಟ್ಟಿದವರು!

23 ಫೆಬ್ರ 11

ಆಗ:

ಒಡಹುಟ್ಟಿದವರು
ಅಮ್ಮ ಎಂದಷ್ಟೇ ನುಡಿಯುತ್ತಿದ್ದಾಗ
ಅನ್ಯ ಪದಗಳನ್ನೂ ಕಲಿಸಿದವರು

ಒಡಹುಟ್ಟಿದವರು
ಅಂಬೆಗಾಲಿಕ್ಕಿ ಮುಗ್ಗರಿಸುತ್ತಿದ್ದಾಗ
ಕೈಹಿಡಿದು ನಡೆಯ ಕಲಿಸಿದವರು

ಒಡಹುಟ್ಟಿದವರು
ನಾ ಮಳೆಯಲ್ಲಿ ನೆನೆದು ಬಂದಾಗ
ನನ್ನೊದ್ದೆ ಬಟ್ಟೆಯ ಬದಲಿಸಿದವರು

ಒಡಹುಟ್ಟಿದವರು
ನಿದ್ದೆಯಲಿ ಬೆದರಿ ಕನವರಸಿದಾಗ
ಮೈ ತಟ್ಟಿ ಮತ್ತೆ ಮಲಗಿಸಿದವರು

ಒಡಹುಟ್ಟಿದವರು
ಕಾಗದದ ದೋಣಿ ಒದ್ದೆಯಾದಾಗ
ತಮ್ಮ ದೋಣಿಯನೇ ನೀಡಿದವರು

ಒಡಹುಟ್ಟಿದವರು
ಕಣ್ಣಾ ಮುಚ್ಚಾಲೆ ಆಡುತ್ತಿರುವಾಗ
ತಾವಾಗೇ ಸೋತು ನಗಿಸಿದವರು

ಒಡಹುಟ್ಟಿದವರು
ಪಥ್ಯ ಮಾಡಲು ಒಪ್ಪದೇ ಇದ್ದಾಗ
ಮುದ್ದಿನಿಂದ ಶುಶ್ರೂಷೆ ನೀಡಿದವರು

ನಂತರ:

ಒಡಹುಟ್ಟಿದವರು
ನಾನು ನನ್ನ ಕಾಲ ಮೇಲೆ ನಿಂತಾಗ
ಒಳಗೆ ಮತ್ಸರವ ತುಂಬಿಕೊಂಡವರು

ಒಡಹುಟ್ಟಿದವರು
ತಪ್ಪು ಒಪ್ಪುಗಳ ವಿಮರ್ಶೆಗೆ ಹೋದಾಗ
ಸಂಬಂಧವನೇ ಮುರಿದು ಹೋದವರು

ಒಡಹುಟ್ಟಿದವರು
ಕುಡಿತಕ್ಕೆ ಮಾರುಹೋಗದಿರಿಯೆಂದಾಗ
ಅಮಲಿನಲ್ಲೇ ಜರೆದು ನೋಯಿಸಿದವರು

ಒಡಹುಟ್ಟಿದವರು
ನಾ ಒಂಟಿಯೇ ಎಂದು ಗಾಬರಿಯಲ್ಲಿದ್ದಾಗ
ಮುಖವಾಡವ ಧರಿಸಿ ನಾಟಕ ಆಡಿದವರು

ಈಗ:

ಒಡಹುಟ್ಟಿದವರು
ಮೊದಲು ಸಂಬಂಧಗಳ ಸರಿಪಡಿಸಿಯೆಂದಾಗ
ಸಂಬಂಧವ ಮರೆತು ಆಸ್ತಿಯ ಮಾತೆತ್ತಿದವರು

ಒಡಹುಟ್ಟಿದವರು
ಸುಧಾರಣೆಯ ಹಾದಿ ಮುಚ್ಚದಿರಿಯೆಂದಾಗ
ಕುಡುಕರ ಮಾತಿಗೇ ಸೊಪ್ಪು ಹಾಕಿದವರು

ಒಡಹುಟ್ಟಿದವರು
ಇವರಾದರೂ ನನ್ನವರೇ ಎಂದು ನಂಬಿದ್ದಾಗ
ಬೆನ್ನಲ್ಲಿ ಇರಿದೆನ್ನ ಜೀವಂತ ಸಾಯಿಸಿದವರು
*********************


ಗೊತ್ತಾಯ್ತೇನೇ…?

21 ಫೆಬ್ರ 11

 

ಸಖೀ,
ಹೌದು, ಬಹಳವಾಯ್ತು
ನನ್ನ ತುಂಟಾಟ,
ನಿನಗೋ ಸದಾ
ನನ್ನಿಂದ ಪೇಚಾಟ,
ಹೊತ್ತಲ್ಲದ ಹೊತ್ತಿನಲಿ
ಕಾಡುತಿಹೆ ನಾ ನಿನ್ನ
ಅದು ನನಗೆ ಗೊತ್ತು,
ಅದಕ್ಕೇ ಹೇಳುತ್ತಿದ್ದೇನೆ
ನಾನೇ ಬಾಯ್ಬಿಟ್ಟು
ಕೇಳು ನೀನೀ ಹೊತ್ತು;
ನಾನಿನ್ನು ಸಂದೇಶಗಳನು
ರವಾನಿಸುವುದಿಲ್ಲ,
ನಾನಿನ್ನು ನಿನಗೆ
ಕರೆ ಮಾಡುವುದಿಲ್ಲ,
ನಾನಿನ್ನು ನಿನಗುಪದ್ರವ
ಕೊಡುವುದೇ ಇಲ್ಲ,
ನಾನಿನ್ನು ನಿನ್ನ ನೆನಪು
ಮಾಡುವುದೇ ಇಲ್ಲ,
ನಾನಿನ್ನು ನಿನ್ನನ್ನು
ಪ್ರೀತಿಸುವುದೇ ಇಲ್ಲ,
ಅಂತೆಲ್ಲಾ
ಹೇಳಬೇಕೆನಿಸಿದರೂ,
ಅದನ್ನೆಲ್ಲಾ ನನ್ನಿಂದ
ಹೇಳಲಾಗುವುದೇ ಇಲ್ಲ,
ಗೊತ್ತಾಯ್ತೇನೇ?
**********


ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ…!

18 ಫೆಬ್ರ 11

 

ಚಿತ್ರಗಳಲ್ಲೆಲ್ಲೋ ಬಂಧಿಸಿ ಸ್ಥಬ್ಧವಾಗಿರಿಸಿದರೇನು
ನೀರ ಮೇಲಿನಲೆ ತರಂಗಗಳು ನಿಲ್ಲುವುದೇನು?

ಚಿತ್ರದಲಿ ಬಂಧಿಸಿ ನನ್ನ ಸ್ಥಬ್ಧವಾಗಿರಿಸಿದರೇನು
ಮನದ ತಲ್ಲಣಗಳರಿವು ತಮಗಾಗುವುದೇನು?

ಮನದೊಳಗೆ ಕೆರೆಯ ನೀರ ಮೇಲಿನಲೆಗಳಂತೆ
ತಲ್ಲಣದ ತರಂಗಗಳು ಸದಾ ಕಾಡುತಿರುವವಂತೆ

ಬಂಧಿಸಲು ನಾವೆಷ್ಟೇ ಯತ್ನಿಸಿ ಸೋತರೇನಂತೆ
ಕಣ್ಣ ಮುಚ್ಚಾಲೆಯಾಟ ಸದಾ ಸಾಗುತಿರುವುದಂತೆ

ಜೀವನದೀ ಏರು ಪೇರುಗಳು ದಾಖಲಾಗದಿವೆಲ್ಲೂ
ನಗು ಮುಖದ ಸೋಗು ಪ್ರತಿಯೊಂದು ಚಿತ್ರದಲ್ಲೂ

ಸಂತಸವಿರಲಿ ನಮ್ಮ ಚಿತ್ರಗಳ ಕಂಡವರ ನೆನಪಲ್ಲೂ
ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ
**************************

 

ಚಿತ್ರ ಕೃಪೆ: ಇಟ್ಟಿಗೆ ಸಿಮೆಂಟು (ಪ್ರಕಾಶ ಹೆಗಡೆಯವರ ಬ್ಲಾಗ್)


ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?

17 ಫೆಬ್ರ 11

 

ಹಗಲಿಡೀ ಶ್ರಮಪಟ್ಟು ದುಡಿದು ಬರುವ ಮಗನನ್ನು ವಿಚಾರಿಸದೇ
ಕಂಠಮಟ್ಟ ಕುಡಿದು ಬರುವ ಮಗನ ನೀವು ವಿಚಾರಿಸುವುದೇಕೆ?

ನಿಮ್ಮ ಸುಖನಿದ್ದೆಗಾಗಿ ಸದಾ ತುಡಿಯುವ ಜೀವಗಳ ಪರಿಗಣಿಸದೇ
ಕುಡಿದು ಜ್ಞಾನಕಳೆದು ಬಿದ್ದವರ ಮೈಹೊದಿಕೆ ಸರಿಪಡಿಸುವುದೇಕೆ?

ನಿಮ್ಮನ್ನು ಹೊತ್ತು ಊರೆಲ್ಲಾ ತಿರುಗಲು ತಯಾರಿರುವವರ ಲಕ್ಷಿಸದೇ
ಕೊಲ್ಲಲು ಕಲ್ಲೆತ್ತಿಕೊಂಡು ಬರುವವರ ಬಗ್ಗೆ ನಿಮಗೆ ಮರುಕವದೇಕೆ?

ನಿಮ್ಮ ಬಳಿ ಇದ್ದು ಸೇವೆಗೈವ ಸೊಸೆಯ ಮೇಲೆ ಅಕ್ಕರೆಯ ತೋರದೇ
ದೂರದೂರಲ್ಲಿರುವ ಮಗಳ ಮೇಲೆ ನಿಮ್ಮ ಮಮತೆಯ ಮಳೆ ಅದೇಕೆ?

ಬಹುಷ: ಇವಕ್ಕೆಲ್ಲಾ ಉತ್ತರ ನಾ ಅರಿತುಕೊಳ್ಳಬೇಕು ನೀವು ನೀಡದೇ
ಅಮ್ಮನ ಮನದ ಒಳಗುಟ್ಟು ಯಾರಿಗೂ ಸುಲಭದಲಿ ಅರಿವಾಗದೇಕೆ?

********************


ವರ್ಷರಾಣಿ ಎಡೆಬಿಡದೇ ಸುರಿ ನೀ!

16 ಫೆಬ್ರ 11

ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ

ಈಗ ತಾನೇ ಬಂದಳು
ಈಗ ಹೊರಟೆ ಎಂಬಳು
ಬಿಡದೆ ಸುರಿ ನೀ, ಕಾಡುತಿರು ನೀ, ಇಲ್ಲೇ ಇರಲಿ ನನ್ನವಳು

||ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ||

ಮೋಡಗಳೇ ಕೊಂಚ ಕೇಳಿರಿ
ಮಿಂಚಿನ ಜೊತೆಗೊಮ್ಮೆ ಗುಡುಗಿರಿ
ಭಯದಿ ನನ್ನ ಸಖಿಯು ಎನ್ನ ಅಪ್ಪಿಕೊಂಬಂತೆ ಮಾಡಿರಿ

||ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ||
***************************

 

ದಿ. ಮುಕೇಶ್ ಹಾಡಿರುವ “ಭರಕಾ ರಾಣಿ ಜರಾ ಜಮ್ ಕೇ ಬರ್ಸೋ ..”
ಎಂಬ ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದ!

ಇದೀಗ ವಿವಿಧ ಭಾರತಿಯಲ್ಲಿ ಕೇಳಿಬಂದ ಈ ಹಾಡನ್ನು ಹಾಗೆಯೇ ಭಾವಾನುವಾದ ಮಾಡಿ ಪ್ರಕಟಿಸಿದ್ದೇನೆ.

Movie : SABAK
Singer(s): MUKESH
Cast(s): SHATRUGHAN SINHA , POONAM DHILLON
 
Hindi Lyrics:
Barkha Rani, Jara Jhamke Barso
Mera Dilbar Jaa Na Pahey
Jhumkar Barsoh
Barkha Rani

Yeh Abhi Toh Aaye Hain
Kahetey Hain Hum Jaye Hain
Tu Baras, Barson Baras
Yeh Umra Bar Na Jaaye Re
Barkha Rani

Mast Sawan Ki Ghata
Bijliyan Chamka Jara
Pyar Mera Darke Mere
Sinhey Se Lag Jaye Re
Barkha Rani, Jara Jham Ke Barso
Mera Dilbar Jaa Na Pahey
Jhum Kar Barson
Barkha Rani


ಹೌದು, ನಾನು ನಾನಾಗಿಯೇ ಇರಬೇಕು!

15 ಫೆಬ್ರ 11

 

ಕೆಲವೊಮ್ಮೆ ನಾನು ನನ್ನ ಸಾಮಾನ್ಯ ಮನೋಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡು ಬಿಡುತ್ತೇನೆ. ನಂತರ ನನಗೇ ಆಶ್ಚರ್ಯವುಂಟಾಗುತ್ತದೆ. ಜೊತೆಗೇ ಖೇದವೂ.ಯಾವುದೋ ಮಾತಿಗೆ ಮಾತು ಬೆಳೆದಾಗ ಮಾನಸಿಕ ಒತ್ತಡದಿಂದಾಗಿ ಕೋಪ ಬರುತ್ತದೆ. ಕೋಪ ಬಂದಾಗ ಮನಸ್ಸು ಬುದ್ಧಿಯ ಹಿಡಿತದಲ್ಲಿ ಇರುವುದಿಲ್ಲ. ಹಾಗಾಗಿ ಬಾಯಿಯಿಂದ ಏನೇನೋ ಮಾತುಗಳನ್ನು ಹೊರಹಾಕುತ್ತದೆ ನನ್ನ ಮನಸ್ಸು. ನಂತರ ಮನಸ್ಸು ಶಾಂತವಾದಾಗ, ಬುದ್ಧಿ ಮನಸ್ಸಿನ ಮೇಲೆ ಮರು ಹಿಡಿತ ಸ್ಥಾಪಿಸಿದಾಗ, “ಛೇ… ಎಂಥಾ ಕೆಲಸವಾಯ್ತು ನನ್ನಿಂದ…” ಎನ್ನುವ ಭಾವನೆ ಬಿಡದೇ ಕಾಡತೊಡಗುತ್ತದೆ. ನಾನು ಆಡಿದ ಮಾತುಗಳು, ಆ ವ್ಯಕ್ತಿಗೆ ಸಲ್ಲಬಾರದ ಮಾತುಗಳಾಗಿರುವುದಿಲ್ಲ, ಆದರೆ, ನನ್ನ ವ್ಯಕ್ತಿತ್ವಕ್ಕೆ ಸಲ್ಲದವಾಗಿರುತ್ತವೆ. ಇದರಿಂದ ಅತೀವ ಕೊರಗು ಮನವನ್ನು ಆವರಿಸಿಕೊಂಡುಬಿಡುತ್ತದೆ. ಹೆಚ್ಚು ಕಡಿಮೆ ಇಪ್ಪತ್ತನಾಲ್ಕು ಘಂಟೆ ನನ್ನನ್ನು ಸತಾಯಿಸ ನಂತರವೇ ವಿರಮಿಸುವುದದು. ಆ ನಡುವೆ, ಆಹಾರ ರುಚಿಸದು, ಮಾತುಗಳೂ ಹಿಡಿಸವು, ನಿದ್ದೆಯೂ ಸರಿಯಾಗಿ ಬಾರದು.

ನಿನ್ನೆಯೂ ಹಾಗಾಯ್ತು. ಅಮ್ಮನವರಿಗೆ ಕರೆ ಮಾಡಿ ಮಾತಾಡುತ್ತಿದ್ದೆ. ಮಾತು ಮುಂದುವರಿಯುತ್ತಿದ್ದಾಗ ಅತ್ತಲಿಂದ ಮೌನ. ಕೊಂಚ ಹೊತ್ತು ಕಳೆದು, ಬೇರೊಬ್ಬ ವ್ಯಕ್ತಿಯ ಸ್ವರ ಕೇಳಿತು. ಅಮ್ಮ ಮತ್ತು ನಾನು ಆ ವ್ಯಕ್ತಿಯ ಬಗ್ಗೆಯೇ ಮಾತಾಡುತ್ತಿದ್ದೆವು. ದೂರವಾಣಿಯ ಸ್ವರ ಜೋರಾಗಿತ್ತು. ಹಾಗಾಗಿ ಮಾತುಗಳನ್ನು ಕೇಳಿಸಿಕೊಂಡ ಆವ್ಯಕ್ತಿ, ಚರವಾಣಿಯನ್ನು ಅಮ್ಮನಿಂದ ಕಸಿದುಕೊಂಡು ತನ್ನ ಕಿವಿಗೆ ಇಟ್ಟುಕೊಂಡಿದ್ದರು. ಆ ವ್ಯಕ್ತಿಗೂ ನನಗೂ ತೀರ ಆತ್ಮೀಯ ರಕ್ತ ಸಂಬಂಧ ಇದ್ದಿತ್ತಾದರೂ, ಈಗ್ಗೆ ಎರಡು ಮೂರು ವರುಷಗಳಿಂದ ಸಂಬಂಧದ ನಡುವೆ ಬಿರುಕುಮೂಡಿತ್ತು. ಹಾಗಾಗಿ, ನಾನೊಂದು ತೀರ ನೀನೊಂದು ತೀರ ಅನ್ನುವಂತಿದ್ದೆವು. ಯಾವುದೇ ರೀತಿಯ ಸಂಪರ್ಕವೂ ಇದ್ದಿರಲಿಲ್ಲ. ದೂರವಾಣೀಯಲ್ಲಿ ಮಾತನ್ನು ಕದ್ದಾಲಿಸಿದ್ದೂ ಅಲ್ಲದೇ, ಅಮ್ಮನಿಂದ ಕಸಿದುಕೊಂಡು ಮಾತಿಗಿಳಿದು ನನ್ನನ್ನು ಬೈಯ್ಯಲು ಶುರುಮಾಡಿದಾಗ, ಅದ್ಯಾಕೋ, ನನ್ನ ಬುದ್ಧಿಗೆ  ನನ್ನ ಮನಸ್ಸಿನ ಮೇಲಿದ್ದ ಹಿಡಿತ ಜಾರಿ ಹೋಗಿತ್ತು. ಮನ ಬಯಸಿದಂತೆ ಬೈದು ಬಿಟ್ಟೆ. ಬಹುಶಃ ಒಂದೆರಡು ಅವಾಚ್ಯ ಪದಗಳೂ ಹೊರಬಂದವು. ಅಲ್ಲದೇ, ನನಗಿಂತ ಹಿರಿಯರಾದ ಆ ವ್ಯಕ್ತಿಯೊಂದಿಗೆ, ನೇರವಾಗಿ ಏಕವಚನಕ್ಕೆ ಇಳಿದು ಬಿಟ್ಟಿದ್ದೆ.

ಮಾತು ಮುಗಿಸಿ ಅರೆ ಗಳಿಗೆ ಕಳೆದಾಗ, ಮನಸ್ಸಲ್ಲಿ ಮರುಧ್ವನಿಯಾಗುತ್ತಿದ್ದುದು “ನನ್ನ ಜೊತೆಗೆ ಏಕವಚನದಲ್ಲಿ ಮಾತಾಡ್ತಾ ಇದೀಯಾ…” ಎನ್ನುವ ಆ ವ್ಯಕ್ತಿಯ ಮಾತುಗಳು. ತಾನು ಎಷ್ಟೇ ಕೆಟ್ಟವನಾದರೂ, ತಾನು ಜೀವನದಲ್ಲಿ ಏನೇ ಮಾಡಿದ್ದರೂ, ಆ ವ್ಯಕ್ತಿಗೆ, ನಾನು ಬದಲಾಗುವುದು ಇಷ್ಟವಿಲ್ಲ. ನನ್ನಿಂದ ಅಂಥ ಧಾಟಿಯ ಮಾತುಗಳು ಆತನಿಗೆ ತೀರ ಅನಿರೀಕ್ಷಿತ. ಹಾಗಾಗಿ ಆತ ನನ್ನನ್ನು ಪ್ರಶ್ನಿಸಿದ್ದ, ಆ ಪರಿ ನನ್ನ ಕಿವಿಗಳಲ್ಲಿ ಮಾರ್ದನಿ ಮೂಡಿಸುತ್ತಿತ್ತು. ರಾತ್ರಿ ನಿದ್ದೆ ಬಾರದೇ ಒದ್ದಾಡಿದೆ. ಏಕೇ ಹೀಗೆ? ಆ ವ್ಯಕ್ತಿ ಮತ್ತು ಅವರಂಥವರು, ಏನೆಲ್ಲಾ ನಡೆದರೂ ಆರಾಮದ ಜೀವನ ನಡೆಸುತ್ತಿರುತ್ತಾರೆ. ಆದರೆ, ನನಗೆ ಮತ್ತು ನನ್ನಂಥವರಿಗೆ ಏಕೆ ಈ ರೀತಿಯ ಕೊರಗು ಕಾಡುತ್ತದೆ?

ಹೌದು, ನನಗೆ ನನ್ನದೇ ಆದ ಮನೋಧರ್ಮವಿದೆ. ನಾನು ಬಾಳಿ ಬಂದ ಶೈಲಿ ಇದೆ. ನಾನು ನಂಬಿಕೊಂಡು ಬಂದ ನನ್ನದೇ ತತ್ವಾದರ್ಶಗಳಿವೆ. ನಾನು ಅದರಿಂದ ವಿಮುಖನಾಗುವುದು ನನಗೇ ಪಥ್ಯವಲ್ಲ. ನಾನು ನಾನಾಗಿಯೇ ಇರಬೇಕು. ಅನ್ಯರು ಯಾವ ರೀತಿ ಬದಲಾದರೂ ನಾನು ಬದಲಾಗಬಾರದು. ಸಾಧ್ಯವಾದರೆ ಮೌನಕ್ಕೆ ಶರಣಾಗಬೇಕು. ಅದನ್ನು ಬಿಟ್ಟು, ವಾದ ವಿವಾದಗಳಿಗೆ ಇಳಿಯಬಾರದು. ಅದರಿಂದ ಅನ್ಯರಿಗೆ ನೋವಾಗುತ್ತದೋ ಇಲ್ಲವೋ ಅನ್ನುವುದಕ್ಕಿಂತಲೂ ಹೆಚ್ಚಾಗಿ, ನಾನೇ ನೋವು ಅನುಭವಿಸುತ್ತಾ ಕೊರಗಬೇಕಾಗುತ್ತದೆ. ನನ್ನಿಂದ ಅನ್ಯರಿಗೆ ನೋವಾದಾಗಲೂ ಅನ್ಯರಿಗಿಂತ ಹೆಚ್ಚಾಗಿ ನಾನೇ ನೋಯಿಸಿಕೊಂಡು ಕೊರಗುತ್ತಿರುತ್ತೇನೆ, ಅನ್ನುವುದು ನಾನು ಕಂಡುಕೊಂಡ ಸತ್ಯ. ನನ್ನಿಂದ ನೊಂದವರು ನನ್ನನ್ನು ಕ್ಷಮಿಸುತ್ತಾರೋ ಇಲ್ಲವೋ, ಆದರೆ, ನನ್ನನ್ನು ನಾನೇ ಕ್ಷಮಿಸಲಾಗದೇ ಒದ್ದಾಡುತ್ತಿರುತ್ತೇನೆ. ಸದಾ ನನ್ನನ್ನು ಕಾಡುವ ಕೊರಗು, ಆ ಒಳಗಿನ ನೋವು ನನ್ನನ್ನು ನಾನೇ ಕ್ಷಮಿಸಲು ಬಿಡುವುದಿಲ್ಲ.

ಹೌದು, ನಾವು ನಾನಾಗಿಯೇ ಇರಬೇಕು.

ನಾನು ನನ್ನಂಥೆಯೇ ಇರಬೇಕು.

ಅವರಿವರು ಬದಲಾದರೂ ನಾನು ಬದಲಾಗಬಾರದು, ನಾನೇಕೆ ಬದಲಾಗಬೇಕು?

ಅಲ್ಲವೇ?
*******


“ಮೇರೇ ನೈನಾ ಸಾವನ್ ಭಾದೋಂ”-ಈ ಕಂಗಳಲಿ ವರ್ಷಾಧಾರೆ!

15 ಫೆಬ್ರ 11

೧೯೭೦ರ ದಶಕದ ಬಹು ಪ್ರಸಿದ್ಧ ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದದ ಯತ್ನ ಇಲ್ಲಿದೆ:

ಈ ಕಂಗಳಲಿ ವರ್ಷಾಧಾರೆ
ಮನದಲಿ ತಣಿಯದ ದಾಹ||

ಮನವಿದು ಮರುಳೇನೋ
ಆಟವಿದೇನೇನೋ
ನೋವನು ತುಂಬಿಹ
ಹಾಡೇಕೆ ಈ ದಿನ
ತುಟಿಗಳಲಿ ಬಂತೇನೋ
ನಮ್ಮನ್ನೊಯ್ಯುವುದು ಎಲ್ಲಿಗೇನೋ
ಮರೆತೆಯಾ ನೀನು, ಮರೆತರೂ ಇಹುದು
ನನಗೆ ಒಂದಿಷ್ಟು ನೆನಪು
ಮನದಲಿ ತಣಿಯದ ದಾಹ||

||ಈ ಕಂಗಳಲಿ ವರ್ಷಾಧಾರೆ
ಮನದಲಿ ತಣಿಯದ ದಾಹ||

ಮಾತಿದು ಹಳೇದೇನೋ
ಅದೆ ಒಂದು ಕತೆಯೇನೋ
ಈಗ ನಿನಗೆ ನೆನಪಿಲ್ಲವಾದರೂ
ನಾ ಮರೆತಿಲ್ಲಾ ದಿನವಾ ಆ ಮುಂಗಾರಿನ ಮಳೆಯಾ
ಋತು ಬರುತಿಹುದು, ಋತು ಮರಳುವುದು
ಉಳಿಸಿ ಹುಸಿ ಆಶಾಭಾವ
ಮನದಲಿ ತಣಿಯದ ದಾಹ||

||ಈ ಕಂಗಳಲಿ ವರ್ಷಾಧಾರೆ
ಮನದಲಿ ತಣಿಯದ ದಾಹ||

ವರುಷಗಳೇ ಸರಿದವು
ಬೇರಾಗಿ ನಾವು
ಮಿಂಚಿನಂತೆ ಗಗನದಿ ಮಿಂಚಿತು
ತಂದಿತು ಆ ನೆನಪನ್ನೂ,
ಕಂಡೆ ನಾ ನಿನ್ನ ಮೊಗವನ್ನು
ಮನದೊಂದಿಗಾಡಿದೆ ಕಣ್ಣಾ ಮುಚ್ಚಾಲೆ
ಆಶಾ ನಿರಾಶಾ ಭಾವ
ಮನದಲಿ ತಣಿಯದ ದಾಹ||

||ಈ ಕಂಗಳಲಿ ವರ್ಷಾಧಾರೆ
ಮನದಲಿ ತಣಿಯದ ದಾಹ||

 

ಚಿತ್ರ: ಮೆಹಬೂಬಾ
ಗಾಯಕ: ಕಿಶೋರ್ ಕುಮಾರ್
ಸಂಗೀತ: ರಾಹುಲ್ ದೇವ್ ಬರ್ಮನ್
ಗೀತೆ ರಚನೆ: ಆನಂದ್ ಭಕ್ಷಿ

ಮೂಲ ಗೀತೆ:

mere nainaa saavan bhaadon
phir bhi meraa man pyaasaa.

ai dil deevaane, khel hai kyaa jaane
dard bharaa ye, geet kahaaN se
in honThon pe aaye-ey-ey, door kahin le jaaye
bhool gayaa kyaa, bhool ke bhi hai
mujhko yaad zaraa saa.., phir bhi meraa man pyaasaa

baat puraani hai, ek kahaani hai
ab sochooN tumhen, yaad nahin hai
ab sochooN nahin bhoole-ey-ey, vo saavan ke jhoole
rut aaye rut jaaye deke
jhooThaa ek dilaasaa.., phir bhi meraa man pyaasaa

barson beet gaye, hamko mile bichhDe
bijuri bankar, gagan pe chamki
beete samay ki rekhaa-aa-aa, main ne tum ko dekhaa
man sang aaNkh-michauli khele
aashaa aur niraashaa.., phir bhi meraa man pyaasaa
mere nainaa saavan bhaadon
phir bhi meraa man pyaasaa