ಬದಲಿಸಲಾಗದು!

25 ಆಗಸ್ಟ್ 14

ಸಖೀ,
ನಾ ಯುದ್ಧ ಸಾರಬೇಕಾಗಿಲ್ಲ, ನಾ ನಂಬದ ಆಚಾರಗಳ ವಿರುದ್ಧ
ನಾನವನ್ನು ನಂಬದಿದ್ದು, ಅಗಿರುತ್ತೇನೆ ಸದಾ ನನಗೆ ನಾ ಬುದ್ಧ
ಅವರಿವರ ನಂಬಿಕೆಗಳನ್ನು ಬದಲಿಸಲಾಗದು ಯಾವುದೇ ಯುಕ್ತಿ
ನನ್ನ ನಂಬಿಕೆಗಳನ್ನು ಬದಲಿಸಿದ್ದು ಹೊರಗಿನದ್ದಲ್ಲ, ಒಳಗಿನ ಶಕ್ತಿ!

Advertisements

ಅತಿಶಯೋಕ್ತಿ ಭೂಷಣವಲ್ಲ!

25 ಆಗಸ್ಟ್ 14

ಸಖೀ,
ಅತಿಶಯೋಕ್ತಿಗಳು ಕಿರಿಕಿರಿ ಉಂಟು ಮಾಡುವುದು ನಿಜ
ಹೊಗಳುವಾಗಲಷ್ಟೇ ಅಲ್ಲ ತೆಗಳುವಾಗಲೂ ಇದು ಸಹಜ
ಬಳಸುವ ಪದಗಳೇ ಭೂಷಣ ಮಾತಿಗೆ, ಮಾತುಗಾರರಿಗೆ
ಅತಿಯಾದರೆ ಕಾರಣವಾಗುತ್ತವೆ ಅವೇ ಅವರಧೋಗತಿಗೆ!


ಜಾಯಮಾನ!

24 ಆಗಸ್ಟ್ 14

ಸಖೀ,
ಗೊಂದಲ ತುಂಬಿದ ಮನಕ್ಕೆ
ಸದಾ ಕಾಡುತ್ತಾ ಇರುತ್ತದೆ
ಒಂದಿಲ್ಲೊಂದು ಅನುಮಾನ;

ಎಲ್ಲರೂ ತನ್ನ ಬಗ್ಗೆಯೇ
ಮಾತಾಡ್ತಾರೆ ಅನ್ನುವುದೇ
ಅದರ ಜಾಯಮಾನ!

 


ಅಣಿಯಾಗುವ ಮೊದಲು!

24 ಆಗಸ್ಟ್ 14

ಸಖೀ,
ಅರ್ಧ ಕೊಳೆನೀರು ತುಂಬಿರುವ ಕೊಡದೊಳಗೆ
ಶುದ್ಧನೀರನ್ನದೆಷ್ಟು ತುಂಬಿದರೇನು ಪ್ರಯೋಜನ
ಮೊದಲು ಈ ಮನಸ್ಸನ್ನು ಖಾಲಿ ಮಾಡಿಕೊಂಡು
ಹೊಸ ವಿಚಾರಗಳನ್ನು ಸ್ವೀಕರಿಸಲಣಿಯಾಗೋಣ!


ಜೊಳ್ಳು ತುಸುವೇ ಇರಲಿ!

23 ಆಗಸ್ಟ್ 14

ಸಖೀ,
ಸೃಜನಶೀಲೆಯಾಗಿರು ಸದಾ ಹೊಸಹೊಸತು ಹುಟ್ಟಿಬರುತಿರಲಿ
ಕಣ್ಣಿಗೆ ಕಂಡಿದ್ದು ಮನವ ತಟ್ಟಿದ್ದು ನಿನ್ನ ನರನಾಡಿಗಳನ್ನು ಸೇರಲಿ;

ಅಂತರ್ಮುಖಿಯಾಗಿ ಮಂಥನಗೈ ಒಡಲಾಳದಿಂದ ಸೃಜಿಸಿ ಬರಲಿ
ಭಾವಶ್ರೀಮಂತವಾಗಿ ಪದ ಓದುವ ಮನಕೆ ಮುದನೀಡುವಂತಿರಲಿ:

ಪ್ರೌಢತಕ್ಕಡಿಯಲ್ಲಿ ತೂಗುವಾಗ ಭಾವಭಾರದಿಂದ ಮೇಲೇಳದಿರಲಿ
ಬೀಸುಗಾಳಿಗೆ ಸಿಲುಕಿ ಬೇರೆಯಾಗುವ ಜೊಳ್ಳು ತುಸುವಷ್ಟೇ ಇರಲಿ!


ಕಂಗಳು ಸಾಕಷ್ಟಿವೆ!

23 ಆಗಸ್ಟ್ 14

ಸಖೀ,
ತಮ್ಮೊಳಗೆ ತೋರಿಸಿಕೊಳ್ಳಲು ಏನೂ ಇಲ್ಲದಾಗ
ಸದಾ ಇತರರಲ್ಲಿ ಇರುವುದನ್ನು ತೋರಿಸುತ್ತಾರೆ,

ಇತರರ ಒಳ್ಳೆಯದನ್ನು ತೋರಿಸಲು ಸಂಕುಚಿತ
ಮನ ಒಪ್ಪದಾಗ ಕೆಟ್ಟದನ್ನಷ್ಟೇ ತೋರಿಸುತ್ತಾರೆ;

ನಮಗೆ ನಮ್ಮಲ್ಲಿರುವುದನ್ನೇ ತೋರಿಸಲು ಉಳಿದ
ದಿನಗಳು ನೋಡಿನ್ನು ಬಹು ಕಡಿಮೆ ಸಂಖ್ಯೆಯಲ್ಲಿವೆ,

ಬಿಟ್ಟುಬಿಡು, ನಮ್ಮೊಳಗಿನ ನಮ್ಮನ್ನು ನಾವು ಇಲ್ಲಿ
ತೋರಿಸೋಣ, ನೋಡುವ ಕಂಗಳು ಸಾಕಷ್ಟಿವೆ!


ಸಾವಿಲ್ಲದವರು!

22 ಆಗಸ್ಟ್ 14

ಸಖೀ,
ನನಗೆ,
ದುಃಖ ಇಲ್ಲ
ಅಳು ಇಲ್ಲ
ಇದು ಸತ್ಯ;
ಆದರೆ,
ಸಂತಸವಿಲ್ಲ,
ಏಕೆಂದರೆ,
ನಾನು ಕೂಡ
ಹೋದವರಂತೆ
ಮಾನವನಲ್ಲಾ?

ಅವರು ಚಿರಂಜೀವಿ,
ಅವರ ಕೃತಿಗಳು
ಇಲ್ಲಿ ಅಜರಾಮರ,
ಸಾಹಿತಿಗಳಿಗೆ,
ಕಲಾವಿದರಿಗೆ,
ಎಂದಿಗೂ ಸಾವಿಲ್ಲ,
ನನ್ನಂಥವರು
ಕಾಲವಾದ ಮೇಲೆ
ಇಲ್ಲಿ ಕೇಳುವವರಿಲ್ಲ!