ಪಾವಲಿಯಾಟ!

20 ನವೆಂ 12

ಸಖೀ,
“ನೀನು ನನಗೆ
ಮುತ್ತಿಟ್ಟಾಗಲೆಲ್ಲಾ
ಐದು ರೂಪಾಯಿಯ
ಪಾವಲಿ ನೀಡಬೇಕು”
ಅಂತ ಅಂದಿದ್ದಳು
ಅವಳು!

“ಸರಿ,
ನೀನು ನನಗೆ
ಬೈದಾಗಲೆಲ್ಲಾ
ಐದು ರೂಪಾಯಿಯ
ಪಾವಲಿ ನನಗೆ
ನೀಡಬೇಕು”
ಅಂತ ಅಂದಿದ್ದನು
ಅವನು,

ಈಗ ಆತ ತನಗೆ
ಮುತ್ತಿಡುವಂತಹ
ವಾತಾವರಣವನ್ನು
ಸತತ ಸೃಷ್ಟಿಸುತ್ತಾ
ಸಾಗಿದ್ದಾಳೆ ಅವಳು,
ಆತನ ಮೇಲಿನ
ಪ್ರೀತಿಯಿಂದಲ್ಲ,

ಆತನಿಗೆ ನೀಡಲು
ಆಕೆಯ ಬಳಿ ಐದು
ರೂಪಾಯಿ ಪಾವಲಿಯ
ಕೊರತೆ ಕಾಡುತ್ತಿದ್ದೆಯಲ್ಲಾ!
**************


ಮುಂಬಯಿ ಜನತೆಗೆ ಅಭಿವಂದನೆಗಳು!

20 ನವೆಂ 12
ಅಲ್ಲಿ ಯಾರಿಂದಲೂ ಭಾವೋದ್ವೇಗದ
ಆಟಾಟೋಪಗಳು ಇದ್ದಿರಲೇ ಇಲ್ಲವಲ್ಲ

ಅಲ್ಲಿ ಯಾವುದೇ ತೆರನಾದ ವಿಧ್ವಂಸಕ
ಕೃತ್ಯಗಳು ಕಂಡು ಬಂದಿರಲೇ ಇಲ್ಲವಲ್ಲ

ರಸ್ತೆ ಬದಿಯ ಕಟ್ಟಡಗಳ ಗಾಜುಗಳತ್ತ

ಕಲ್ಲು ತೂರಾಟ ನಡೆದ ಸುದ್ದಿಯೂ ಇಲ್ಲ

ಯಾರ ಮನದಲ್ಲೂ ಶಾಂತಿ ಇದ್ದಿರಲಿಲ್ಲ
ಆದರೂ ಶಾಂತ ವಾತಾವರಣ ಅಲ್ಲಿತ್ತಲ್ಲ

ದುಃಖ ಕಟ್ಟೆಯೊಡೆದು ಕಣ್ಣೀರಾಗಿ ಹರಿದ
ದೃಶ್ಯಗಳಿನಿತೂ ನಾಟಕೀಯವಾಗಿರಲಿಲ್ಲ

ಕಂಠ ಮಟ್ಟ ಕುಡಿದು ತೂರಾಡುತ್ತಾ ಬಸ್ಸು
ಟ್ರಕ್ಕುಗಳಿಗೆ ಬೆಂಕಿ ಹಚ್ಚುವವರೂ ಇರಲಿಲ್ಲ

ಕ್ಯಾಮೆರಾಗಳ ಮುಂದೆ ಪೌರುಷ ತೋರಿದ
ಒಂದು ಉದಾಹರಣೆಯೂ ಕಂಡು ಬಂದಿಲ್ಲ

ಮನೆಯೊಳಗೆ ಕೂತವರನ್ನು ರಸ್ತೆಗೆ ಎಳೆದು
ಒಯ್ಯುವವರು ಎಲ್ಲೂ ಯಾರೂ ಇದ್ದಿರಲಿಲ್ಲ

ಏಕೆಂದರೆ ಹಾದಿಯುದ್ದಕ್ಕೂ ಇದ್ದ ಮನೆಗಳ
ಒಳಗೆ ನಿನ್ನೆ ಸುಮ್ಮನೇ ಕೂತಿದ್ದವರೇ ಇಲ್ಲ

ಅಗಲಿದ ಮಹಾನ್ ನಾಯಕನ ಆ ಅಂತಿಮ
ಯಾತ್ರೆಯ ಭಾಗವಾಗಿದ್ದವರೇ ಅಲ್ಲಿ ಎಲ್ಲಾ

“ಜನ ಸೇರಿದಲ್ಲಿ ದೊಂಬಿ ಇದ್ದದ್ದೇ” ಎನ್ನುವ
ಬೆಂಗಳೂರಿಗರಿಗೆ ಪಾಠ ಮಾಡಿದಂತಿತ್ತಲ್ಲ

ಮಿಲಿಯಗಟ್ಟಲೆ ಜನಸೇರಿದರೂ ಶಿಸ್ತಿನಿಂದ
ಇರಬಹುದೆಂಬುದನ್ನು ತೋರಿಸಿಕೊಟ್ಟರಲ್ಲ

ಮುಂಬಯಿಯ ಜನತೆಯ ಭಾವಸ್ಪಂದನದ
ಪರಿಯ ಮೆಚ್ಚದೇ ನನ್ನಿಂದ ಇರಲಾಗುತ್ತಿಲ್ಲ!
************************


ಮುಖವಾಡವೇಕೆ?

18 ನವೆಂ 12

ಸಖೀ,
ಅಸು ನೀಗಿ
ನಮ್ಮಿಂದ
ದೂರವಾದವರ
ವೃತ್ತಾಂತವನ್ನು
ಬಯಲಿಗೆಳೆದು
ಸಾಂತ್ವನವ
ನಿರೀಕ್ಷಿಸುವ
ನಾವು,

ಮುರಿದುಹೋದ
ಸಂಬಂಧಗಳನ್ನು
ಈ ಸಮಾಜದಿಂದ
ಮುಚ್ಚಿಡುವುದೇಕೆ?

ಸಂಬಂಧಗಳನ್ನು
ಕೂಡಿಸಿದ ಕ್ಷಣದಲ್ಲಿ
ಸಾಕ್ಷಿಯಾಗಿ ನಿಂತು
ಹರಸಿದವರಿಗೆಲ್ಲಾ
ಈಗ ಅದು ಹೇಗಿದೆ
ಎಂದು ಅರಿಯುವ
ಹಕ್ಕು ಎಳ್ಳಷ್ಟೂ
ಇಲ್ಲವೆನ್ನುವೆಯೇಕೆ?

ಸಮಾಜದ ಮುಂದೆ
ಸದಾ ಈ ಪರಿ ಹುಸಿ
ಮುಖವಾಡವೇಕೆ?
**********


ನಿಜ ಮನುಜ!

18 ನವೆಂ 12

ಸಖೀ,
ನಮ್ಮಲ್ಲೀ
ಕ್ಷಮೆಯ
ಮಾತೇನು?
ಇಂದು ನೀನು
ನಾಳೆ ನಾನು

ತಪ್ಪುಗಳು ಸಹಜ
ತಿದ್ದಿಕೊಂಡು ಮತ್ತಾ
ತಪ್ಪು ಆಗದಂತೆ
ಮುನ್ನಡೆಯುವ
ಮನವಿರುವವನೇ
ನಿಜ ಮನುಜ!
******


ರಸ್ತೆ ಬದಿಯ ಮರ!

18 ನವೆಂ 12
ಎಲ್ಲೋ ಯಾರೋ ನೀರು ನೀಡಿ
ಜೀವ ತುಂಬಿದ್ದ ನನ್ನನ್ನಿನ್ನಾರೋ
ತಂದು ಬೇರೂರಿಸಿದರು ಈ
ರಸ್ತೆಯ ಬದಿಯಲ್ಲಿ

ಸ್ವಲ್ಪ ದಿನ ನನ್ನ ಸುತ್ತಲೂ ಇತ್ತು
ತಂತಿಯ ಮುಳ್ಳು ಬೇಲಿ ಹಾಗೂ
ವಾರಕ್ಕೊಮ್ಮೆ ನೀರಿನ ಸಿಂಚನವೂ
ಇತ್ತು ನನ್ನ ಭಾಗ್ಯದಲ್ಲಿ

ಗಾಳಿ, ಮಳೆ ಮತ್ತು ಆ ಸೂರ್ಯನ
ಬೆಳಕಿನಿಂದಲೇ ಬಂದಿತ್ತು ನನ್ನಲ್ಲೂ
ಸಾಕಷ್ಟು ಕೊಬ್ಬು ಹಾಗಾಗಿ ಬೆಳೆದು
ನಿಂತೆ ನಾ ಬಲಿಷ್ಟಳಾಗಿ

ಬೇಲಿಯನ್ನಾರೋ ಕಿತ್ತು ಕದ್ದೊಯ್ದರು
ರೆಂಬೆಗಳನ್ನಾರೋ ಕಡಿದು ತೆಗೆದರು
ಆದರೂ ಬೆಳೆದು ನಿಂತೆ ನೋಡಿ
ನಾನೂ ಇಲ್ಲಿ ಹೆಮ್ಮರವಾಗಿ

ವಾಹನಗಳ ಮೈಸೋಕಿದರೆ ನನ್ನ
ರೆಂಬೆಗಳ ಕಡಿದುಹಾಕುವರೆಂಬ
ಅರಿವು ಆಗಿತ್ತು ನನಗೆ ಹಾಗಾಗಿ
ಸ್ವಲ್ಪ ನೇರವಾಗಿ ಬೆಳೆದೆ

ಈಗ ಯಾರೂ ಮುಟ್ಟುವುದಿಲ್ಲ ನನ್ನನ್ನು
ನಾ ವಾಹನಗಳಿಗಿಂತೆತ್ತರಕ್ಕೆ ಬೆಳೆದು
ಮನಬಂದಕಡೆಗೆ ರೆಂಬೆಗಳನ್ನು ಚಾಚಿ
ನಿಂತಿದ್ದೇನೆ ಚಿಂತೆ ಇಲ್ಲದೆ!
**************


ಮಥನ ನಡೆದಿದೆ ಮನದೊಳಗೆ!

17 ನವೆಂ 12
ಸಖೀ,

ಬರೆಯಬಾರದೆಂದು ಸುಮ್ಮನಿದ್ದರೂ ಸುಮ್ಮನಿರಲು ಆಗುವುದಿಲ್ಲ
ಏನಾದರೂ ಬರೆಯೋಣ ಎಂದು ಕೂತಾಗ ಬರೆಯಲಾಗುವುದಿಲ್ಲ

ಮನದೊಳಗೆ ಸಮುದ್ರ ಮಥನ ಏಕೆ ನಡೆಯುತಿರುವಂತಿಹುದೋ
ಅಮೃತ ಹೊರಬರುವ ಮೊದಲದು ಏನೇನನ್ನೆಲ್ಲಾ ಕಕ್ಕಲಿಹುದೋ

ಮೆರವಣಿಗೆಯಲ್ಲಿ ಸಾಗುತ್ತಿದ್ದೆ ಜನರ ದಂಡು ಇತ್ತು ಅಕ್ಕ ಪಕ್ಕದಲ್ಲಿ
ಕತ್ತು ತಿರುಗಿಸಿ ನೋಡಿದರೆ ಬೆಚ್ಚಿ ಬೀಳುತ್ತೇನೆ ಯಾರೂ ಇಲ್ಲ ಇಲ್ಲಿ

ನಿನ್ನ ಜೊತೆಯೂ ಶಾಶ್ವತವಲ್ಲ ನನ್ನ ಭಾವಸ್ಪಂದನ ಇರುವತನಕ
ಕಲ್ಪನೆಯ ಸಖಿ ನೀನು ನಿನ್ನಿರುವು ನನ್ನ ಕಲ್ಪನಾಶಕ್ತಿ ಇರುವತನಕ

ಶಿಖರವನ್ನು ಏರುವ, ಚಂದ್ರನ ಮೆಟ್ಟಿ ನಿಂತು ತೋರಿಸುವಾಸೆ ಇಲ್ಲ
ನನ್ನೀ ಜೀವನದ ಅರ್ಥ ನಾಲ್ಕು ಜನರಿಗೆ  ಆದರೆ ಅದಷ್ಟೇ ಸಾಕಲ್ಲ!
****


ಆವಳಿ ಬೇಡ!

12 ನವೆಂ 12

ಸಖೀ,

ಹಣತೆಯ ಹಚ್ಚೋಣ ಬಾ
ದೀಪವ ಬೆಳಗೋಣ ಬಾ

ಆವಳಿ ಬೇಡ ನಮಗೊಂದೇ
ಒಂದು ದೀಪವಿದ್ದರೆ ಸಾಕು

ನಮ್ಮ ಮನದೊಳಗೂ ಬೆಳಕ
ಹರಡಿ ಬೆಳಗಿತಾದರೆ ಸಾಕು

ಅನುಮಾನದ ಕತ್ತಲೆಯನ್ನು
ಕಿತ್ತು ಒಗೆಯಿತಾದರೆ ಸಾಕು

ಮೌನದಲೇ ಮನದ ಮಾತ
ಹೊರ ಹಾಕಿತಾದರೆ ಸಾಕು

ಮಾತಿನ ಸದ್ದು ಬೇಡ ಇಂದು
ಬೆಳಕು ನೆರಳಿನಾಟವೇ ಸಾಕು

ಹಬ್ಬದಾಚರಣೆ ಅನ್ಯರ ಮುಂದೆ
ಪ್ರದರ್ಶನವಾಗಬೇಕಿಲ್ಲ ನೋಡು

ನಮ್ಮೊಲವಿನ ದೀಪ ಸದಾ ಕಾಲ
ಬೆಳಗಿರೆ ಮನವೇ ದೀಪದ ಗೂಡು!
**********


ಕುರುಹುಗಳಿರಲಿ!

11 ನವೆಂ 12
ಸಖೀ,
ಅದಾವ
ಮಟ್ಟದ
ಸೃಜನಶೀಲನಾದರೂ,
ಬೆಲೆ ಇರುವುದು
ಆತನ
ಕೃತಿಗಳಿಗೆ
ಅಷ್ಟೇ; 

ಅಳಿದ
ವ್ಯಕ್ತಿ
ಮುಖ್ಯನಾಗುವುದಿಲ್ಲ,
ಆತ
ಇಲ್ಲಿ
ಬಿಟ್ಟು
ಹೋಗಿರುವ
ಕುರುಹುಗಳು
ಅಷ್ಟೇ!
****


ಬಿಟ್ಟುಬಿಡು!

11 ನವೆಂ 12

ಸಖೀ,

ಅಂದು ನನ್ನನ್ನು
ತೊರೆದು ಹೋದವರು
ಅರಸಿ ಬಂದಿಹರು
ನನ್ನ ಸನಿಹ ಇಂದು;

ಇನ್ನೇಕೆ ವಿಮರ್ಶೆ?
ಇನ್ನೇಕೆ ತುಲನೆ?
ಬಿಟ್ಟುಬಿಡು,

ಸಾಗೋಣ ಇನ್ನು 
ಜೊತೆ ಜೊತೆಗೆ,
ಮುಂದೂ!
******


ದೀಪಾವಳಿ ಹಾವಳಿ ಆಗದಿರಲಿ!

11 ನವೆಂ 12
 ಸದ್ದುಗದ್ದಲವಿಲ್ಲದ ಹಬ್ಬ ನಮ್ಮೀ ಕಣ್ಮನಗಳಿಗಿರಲಿ
ಹೊಗೆ ತುಂಬಿ ಕೆಡಿಸುವ ಸುಡುಮದ್ದು ದೂರವಿರಲಿ

ದೀಪದ ಹಾವಳಿಯಲ್ಲ ಬರಿ ದೀಪಾವಳಿಯಾಗಿರಲಿ
ಮನೆ ಮನಗಳಲ್ಲೂ ಜ್ಞಾನದ ದೀಪ ಬೆಳಗುತಿರಲಿ

ನಮ್ಮ ಸಂತಸವು ಅನ್ಯರಿಗೆ ಕಿರಿಕಿರಿ ಆಗದಂತಿರಲಿ
ಇತಿಮಿತಿಯ ಆಚರಣೆ ಎಲ್ಲರಿಗೂ ಖುಷಿಯ ತರಲಿ

ಒಂದು ಜ್ಯೋತಿಯಿಂದ ಇನ್ನೊಂದು ಜ್ಯೋತಿಯನು
ಬೆಳಗಿ ಈ ನಾಡೆಲ್ಲಾ ಬೆಳಕಿನಲೇ ತುಂಬಿ ಹೋಗಲಿ

ಒಂದು ಹೃದಯದಿಂದ ಇನ್ನೊಂದು ಹೃದಯಕ್ಕೆ ಪ್ರೀತಿ
ಹರಿದು ಈ ಜಗವೆಲ್ಲಾ ಒಂದು ಕುಟುಂಬದಂತಾಗಿರಲಿ
******************************