ಅಸಹಾಯಕ ನಗು!

28 ಜುಲೈ 13

ಸಖೀ,
ನೀನು ನಗುತ್ತಾ ಇರುವಾಗಲೆಲ್ಲಾ
ನಿನ್ನ ಕಣ್ಣುಗಳಲ್ಲಿದ್ದ ಆ ನೋವನ್ನು
ನಾನು ಕಂಡರಿತುಕೊಳ್ಳುತ್ತಿದ್ದೇನೆ;

ಏನೂ ಮಾಡಲಾಗದ ಅಸಹಾಯಕ
ಸ್ಥಿತಿಯಿಂದ ಒಳಗೊಳಗೇ ಅಳುತ್ತಾ
ನಾನೂ ನಿನ್ನೊಂದಿಗೆ ನಗುತ್ತಿದ್ದೇನೆ!


ನೋವು ಉಳಿದುಬಿಡುವುದು!

28 ಜುಲೈ 13

 

ಸಖೀ,
ಮನನೋಯಿಸಿದವರ
ಪಟ್ಟಿ ದೊಡ್ಡದೋ?
ನನ್ನಿಂದ
ಮನನೊಂದವರ
ಪಟ್ಟಿ ದೊಡ್ಡದೋ?
ಈ ಪಟ್ಟಿಯಿಂದಾಗಿ
ಆ ಪಟ್ಟಿ ಬೆಳೆಯಿತೋ?
ಆ ಪಟ್ಟಿಯಿಂದಾಗಿ
ಈ ಪಟ್ಟಿ ಬೆಳೆಯಿತೋ?
ಗೊತ್ತಿಲ್ಲ, ಸುಲಭದಲಿ
ಗೊತ್ತಾಗುವುದೂ ಇಲ್ಲ;

ನನ್ನ ಮಟ್ಟಿಗೆ
ನಾನು ಸರಿ
ಅವರ ಮಟ್ಟಿಗೆ
ಅವರೂ ಸರಿ;
ಸರಿ ತಪ್ಪುಗಳ
ತಿಕ್ಕಾಟಗಳಲ್ಲಿ
ಈ ಕಾಲವೇ
ಸರಿದುಹೋಗುವುದು;

ಕಾಲನ ಜೊತೆಗೆ
ನಾ ನಡೆದು
ಹೋದಮೇಲೆನ್ನ
ನೋಯಿಸಿದವರ
ಹಾಗೂ ನನ್ನಿಂದ
ಮನನೊಂದವರ
ಮನಗಳಲ್ಲಿ,
ಒಂದು ನೋವು
ಉಳಿದುಬಿಡುವುದು!
**********


ಒಲವಿನ ಸೆಳೆತ!

28 ಜುಲೈ 13

ಸಖೀ,
ನಿನ್ನ ಒಲವಿನ ಸೆಳೆತಕ್ಕೆ ಒಳಗಾಗುವ
ತನಕ ನಾನು ನಾನಾಗಿ ಇದ್ದಿರಲಿಲ್ಲ
ನಿನ್ನ ಒಲವಿನಲ್ಲಿ ಬಂಧಿಯಾದ ಮೇಲೂ
ನಾನು ನಾನಾಗಿಲ್ಲವೇ ಇಲ್ಲ!

ನಿನ್ನ ಒಲವಿನ ಸೆಳೆತಕ್ಕೆ ಸಿಕ್ಕಿ ನಾನದೆಲ್ಲೋ
ಕಳೆದುಹೋಗಬಹುದೆಂಬ ಭಯ
ನಿನ್ನಿಂದ ದೂರವಿದಷ್ಟೂ ನಿನ್ನೊಂದಿಗೇ
ಇದ್ದನುಭವ, ಆದರೀ ಮನಕ್ಕಿಲ್ಲ ಭಯ!


ಚಿಂಗಾರೀ ಕೋಯೀ …!

28 ಜುಲೈ 13

(ಭಾವಾನುವಾದದ ಯತ್ನ)

ಕಿಡಿಯೊಂದು ಹೊತ್ತಿ ಉರಿದರೆ ಸೋನೆ ಸುರಿದದನು ನಂದಿಸಬಹುದು
ಸೋನೆಯೇ ಕಿಚ್ಚು ಹಚ್ಚಿದರೆ ಅದನ್ನು ನಂದಿಸುವವರು ಇನ್ನಾರು?

ಗ್ರೀಷ್ಮ ತಾ ಹೂದೋಟವ ಕೆಡಿಸಿದರೆ ಚೈತ್ರ-ವಸಂತ ಅದನು ಚಿಗುರಿಸಬಹುದು
ಚೈತ್ರ ವಸಂತಗಳೇ ಹೂದೋಟದಂದ ಕೆಡಿಸಿದರೆ ಚಿಗುರಿಸುವವರು ಇನ್ನಾರು?

ಕೇಳದಿರು ನನ್ನನ್ನು ಕನಸಿನ ದೇಗುಲ ಚೂರಾಯ್ತು ಹೇಗೆಂದು
ಊರಿನವರ ಕತೆಯೇನಲ್ಲ ಕಣೇ ನನ್ನವರಿಂದಾದ ವ್ಯಥೆ ಇದು
ಶತ್ರು ಘಾಸಿಗೊಳಿಸಿದ ಮನವನ್ನು ಸ್ನೇಹಿತರು ವಾಸಿ ಮಾಡಿಯಾರು
ನನ್ನೊಲವು ಘಾಸಿಗೊಳಿಸಿದ ಮನವ ವಾಸಿ ಮಾಡುವವರು ಯಾರು?

ಏನಾಗುತ್ತಿತ್ತೋ ಯಾರಿಗೆ ಗೊತ್ತು ಏನು ಮಾಡುತ್ತಿದ್ದೆನೋ ಗೊತ್ತಿಲ್ಲ
ಮಧುಪಾನದಿಂದ ಜೀವನವಿದೆ, ಇಲ್ಲದಿದ್ದರೆ ಜೀವಂತ ಇರುತ್ತಿರಲಿಲ್ಲ
ಸಮಾಜ ನನ್ನಲ್ಲಿ ತುಂಬುವ ದಾಹವನು ಶರಾಬು ತಣಿಸುತಿಹುದು
ಶರಾಬು ನನ್ನಲ್ಲಿ ದಾಹ ತುಂಬಿದರೆ ಅದನು ತಣಿಸುವವರು ಯಾರು?

ಬಿರುಗಾಳಿಯ ಮುಂದೆ ಯಾರದ್ದೇನೂ ನಡೆಯುವುದಿಲ್ಲ ಗೊತ್ತು
ಅಲೆಗಳ ತಪ್ಪೆನ್ನಲಾರೆ ನಾ, ಬೇರಾರದೋ ತಪ್ಪು ಅದೂ ಗೊತ್ತು
ನಡುನೀರಿನಲ್ಲಿ ನಾವೆ ಮುಳುಗಿದರೆ ನಾವಿಕ ದಡಸೇರಿಸುತ್ತಾನೆ
ನಾವಿಕನೇ ಮುಳುಗಿಸಿದರೆ ದಡ ಸೇರಿಸಲು ಅಲ್ಲಿಹರು ಯಾರು?


ಫೇಸ್‍ಬುಕ್ ಚಾಳಿಯಿಂದಾಗಿ!

28 ಜುಲೈ 13

 

ಸಖೀ,
ನಿನ್ನ ಕಿವಿಗಳಲ್ಲುಸುರಿದ ಮಾತುಗಳನ್ನು ಗೋಡೆಯ ಮೇಲಂಟಿಸಿ ಪ್ರತಿಕ್ರಿಯೆಗಾಗಿ ಕಾದು ಕುಳಿತೆ,
ಅನ್ಯರ ಪ್ರತಿಕ್ರಿಯೆಗಳಿಗಾಗಿ ಕಾಯುವುದರಲ್ಲಿ, ನಿನ್ನ ಪ್ರತಿಕ್ರಿಯೆಯನ್ನೇ ನಾನು ಅರಿಯಲು ಮರೆತೆ;

ನಿನ್ನ ಮೈನವಿರೇಳಿಸಿ ಒಲವಿಗಣಿಗೊಳಿಸಿ ಅರ್ಧದಲ್ಲೇ ಬಿಟ್ಟು ಇತ್ತ ಬಂದು ನಾನನ್ಯರಿಗೆ ಕಿವಿಯಾದೆ
ನನ್ನ ಬರುವಿಕೆಗಾಗಿ ಕಾದು ಕೂತ ನೀನು ವಿರಹದಲಿ ಬೆಂದು ಬಳಲಿದುದನ್ನು ನಾನು ಅರಿಯದಾದೆ!


ಭಯ ನನಗೆ!

28 ಜುಲೈ 13

ಸಖೀ,
ನಿನ್ನ ಮನದ ಒಳಗಿನ
ಅನಿಸಿಕೆಗಳು ಸರಿಯಲ್ಲ
ಅನ್ನುವುದನ್ನು ನಿನ್ನಲ್ಲಿ
ಅರುಹಲೂ ಭಯ ನನಗೆ

ನನ್ನ ಪ್ರತಿ ಮಾತಿಗೆ ಅರ್ಥ
ಕಂಡುಕೊಳ್ಳುವ ಮೊದಲೇ
ಅಪಾರ್ಥಮಾಡಿಕೊಳ್ಳುವ
ಕೆಟ್ಟ ಅಭ್ಯಾಸ ಇದೆ ನಿನಗೆ

ಇನ್ನೂ ಖಿನ್ನತೆಗೆ ತಳ್ಳುವ
ಇಚ್ಛೆ ನನಗಿಲ್ಲ ಇದು ಸತ್ಯ
ನನ್ನ ಮೌನಕ್ಕೆ ನೀನೀಡುವ
ಈ ಅರ್ಥಗಳೆಲ್ಲವೂ ಮಿಥ್ಯ!


ಹೀಗೊಂದಾಸೆ!

20 ಜುಲೈ 13

ಅವಳು ಅವಳಲ್ಲ
ನಾನು ನಾನಲ್ಲ
ಅವಳಲ್ಲದ ಅವಳನ್ನು
ನಾನಲ್ಲದ ನಾನು
ನಾವರಿಯದ ಊರಲ್ಲಿ
ಇನ್ನಾರೂ ಅರಿಯದಂತೆ
ಮೊಟ್ಟ ಮೊದಲ ಬಾರಿ
ಭೇಟಿ ಆಗುತಿರುವಂತೆ
ಭೇಟಿ ಆಗಬೇಕಿದೆಯಂತೆ!


ನನ್ನ ಒಳಗಿದ್ದೆ!

20 ಜುಲೈ 13

ಸಖೀ,
ನನ್ನ ಬಳಿ
ನೀನಿರುವಾಗ
ನಾ ನಿನ್ನ ಬಳಿ ಇದ್ದೆ;

ನಿನ್ನಿಂದ ನಾನು
ದೂರವಾದಂತೆಲ್ಲಾ,
ನೀನು ನನ್ನ ಒಳಗಿದ್ದೆ!


ಏಕಾಂತ ಕಾಡಲು!

20 ಜುಲೈ 13

ಸಖೀ,
ನಿನ್ನ ಮನದಂಗಳದಲ್ಲಿ ನಾನೂ ಇದ್ದೆ
ಸಹಮನಸ್ಕನಾಗಿ ನಾನೂ ಬೆರೆತಿದ್ದೆ
ಈಗಲ್ಲಿ ಹಕ್ಕಿಗಳ ಹಿಕ್ಕೆ ಜಾಸ್ತಿಯಾಯ್ತು
ನಾನು ಜಾಗ ಖಾಲಿಮಾಡಬೇಕಾಯ್ತು

ಹಕ್ಕಿಗಳನ್ನೋಡಿಸುವ ಧೈರ್ಯ ನನಗಿಲ್ಲ
ಹೊಸ ಹಕ್ಕಿಗಳು ನನಗಿಂತ ಇಷ್ಟವಲ್ಲಾ?
ಕಾಯುತ್ತೇನೆ ನಾನು ಅಂಗಳದ ಹೊರಗೆ
ನಿನಗೇಕಾಂತ ಕಾಡಲು ಬರುವೆ ಒಳಗೆ!


ನೀನೇನಾ… ನೀನೇನಾ?

20 ಜುಲೈ 13

||ನಿನ್ನ ಉಸಿರಲೇ ನನ್ನ ಉಸಿರು ಎಂದವಳು ನೀನೇನಾ
ನನ್ನ ಹೆಸರಲೇ ನಿನ್ನ ಹೆಸರು ಎಂದವಳು ನೀನೇನಾ
ನಡುನೀರಲಿ ನನ್ನನೇ ತೊರೆದು ಹೋದವಳು ನೀನೇನಾ||

ಬಾಳಲಿತ್ತು ಹೊಸ ಉತ್ಸಾಹ ನಿನ್ನಿಂದ
ಮನದಲಿತ್ತು ಹೊಸ ಹುಮ್ಮಸ್ಸು ನಿನ್ನಿಂದ
ನನ್ನ ಬಾಳಲಿ ಹೊಸತನವ ತಂದವಳು ನೀನೇನಾ
ನಡುನೀರಲಿ ನನ್ನನೇ ತೊರೆದು ಹೋದವಳು ನೀನೇನಾ

||ನಿನ್ನ ಉಸಿರಲೇ ನನ್ನ ಉಸಿರು ಎಂದವಳು ನೀನೇನಾ
ನನ್ನ ಹೆಸರಲೇ ನಿನ್ನ ಹೆಸರು ಎಂದವಳು ನೀನೇನಾ
ನಡುನೀರಲಿ ನನ್ನನೇ ತೊರೆದು ಹೋದವಳು ನೀನೇನಾ||

ಬಾಳ ಬಾನಲಿ ಕವಿದಿದೆ ಮೋಡ ಇಂದೇಕೋ
ಈ ಬಾಳ ನೌಕೆ ಮುಳುಗೇಳುತಿದೆ ಇಂದೇಕೋ
ನನ್ನ ಬಾಳಲಿ ಬಿರುಗಾಳಿ ತಂದವಳು ನೀನೇನಾ
ನಡುನೀರಲಿ ನನ್ನನೇ ತೊರೆದು ಹೋದವಳು ನೀನೇನಾ

||ನಿನ್ನ ಉಸಿರಲೇ ನನ್ನ ಉಸಿರು ಎಂದವಳು ನೀನೇನಾ
ನನ್ನ ಹೆಸರಲೇ ನಿನ್ನ ಹೆಸರು ಎಂದವಳು ನೀನೇನಾ
ನಡುನೀರಲಿ ನನ್ನನೇ ತೊರೆದು ಹೋದವಳು ನೀನೇನಾ||