ಮುಡಿಪಾಗಿಟ್ಟೆ!

25 ಮೇ 13

ಮನದೊಳಗೆ ಅಳುವಿತ್ತು, ಅಧರಗಳ ಮೇಲೆ ನಗೆಯನಿಟ್ಟೆ
ನಾನು ಸದಾ ನಿಷ್ಠಾವಂತನಾಗಿ ಹೀಗೆಯೇ ಉಳಿದುಬಿಟ್ಟೆ;

ನನಗಾಗಿ ಒಂದರೆಗಳಿಗೆ ನೀಡಲಾಗದ ನಿನ್ನ ನಿರೀಕ್ಷೆಯಲಿ
ನಾನೋಡು ನನ್ನೀ ಜೀವನವನೇ ಈ ರೀತಿ ಮುಡಿಪಾಗಿಟ್ಟೆ!


ಇನ್ನು ಅವನಿಚ್ಛೆಯಂತೆ!

25 ಮೇ 13

 

ಮಾಡ ಹೊರಟೆ ನಾನು ಏನು ಮಾಡಬೇಕು ಎಂಬ ಒಂದು ಪಟ್ಟಿ
ನಾನು ಇನ್ನು ಏನೇನು ಮಾಡಬಾರದು ಎಂಬ ಇನ್ನೊಂದು ಪಟ್ಟಿ

ಎರಡನೇ ಪಟ್ಟಿ ಮುಗಿಯುತ್ತಿಲ್ಲ ಅವೆಲ್ಲಾ ಮಾಡಿದ್ದು ನನ್ನಿಚ್ಛೆಯಂತೆ
ಏನು ಮಾಡಬೇಕೆಂಬ ಪಟ್ಟಿಯಲಿ ಒಂದೇ ಪದ “ಅವನಿಚ್ಛೆಯಂತೆ”!


ರಾತ್ರಿಯ ನೀರವತೆಯಲಿ!

25 ಮೇ 13

 

ರಾತ್ರಿಯ ಈ ನೀರವತೆಯಲ್ಲಿ
ಮೌನವೂ ತಾ ಮೌನವಾಗಲು
ಉಸಿರಿನದಷ್ಟೇ ಮಾತುಕತೆ;

ರಾತ್ರಿಯ ಈ ನೀರವತೆಯಲ್ಲಿ
ಮೌನವೂ ಮಾತನಾಡಿದರೆ
ಶ್ರವಣಶಕ್ತಿಯುತ್ತುಂಗ ತಲುಪುತ್ತೆ!


ಸಾಧಿಸಿದ್ದೇನು?

25 ಮೇ 13

 

ಕೇಳಿ ನೀನು
ಅವರಿವರಾಡಿದ ಮಾತು
ಏನು ಸಾಧಿಸಿದೆ
ನೀ ಮೌನಿಯಾಗಿ ಕೂತು?

ಇಲ್ಲದ ಎಡೆಯಲ್ಲಿ
ಹುಡುಕಿ ಏನಾದರೂ ಹುಳುಕು
ಉಂಟು ಮಾಡುವರು
ನಮ್ಮ ಬಾಂಧ್ಯವ್ಯದಲಿ ಬಿರುಕು


ನೆಟ್ ಬಾಂಧವ್ಯ!

25 ಮೇ 13

ಮನೆ ದೂರ

ಮನ ಸನಿಹ
ಹೀಗೇ ಇರಲಿ;

ಮನೆ ಸನಿಹ
ಮನ ದೂರ
ಆಗದೇ ಇರಲಿ!


ಹಂಚಿಕೊಳ್ಳೋಣ!

25 ಮೇ 13
 

ಇಂದು ಮುಂಜಾನೆ ಓರ್ವ ಫೇಸ್ ಬುಕ್ ಮಿತ್ರರು ನನ್ನ ಚರದೂರವಾಣಿ ಸಂಖ್ಯೆ ಹಂಚಿಕೊಳ್ತೀರಾ ಎಂದು ಕೇಳಿದರು.ಹಂಚಿಕೊಂಡು, ಅದನಿನ್ನಾರ ಜೊತೆಗೂ  ಹಂಚಿಕೊಳ್ಳಬೇಡಿ ಅಂದೆ.

ಅತ್ತಲಿಂದ ಕರೆ ಬರಬಹುದೆಂಬ ನಿರೀಕ್ಷೆ ಇತ್ತು. ಉಹುಂ. ಇಲ್ಲ.ತನ್ನ ಚರದೂರವಾಣಿ ಸಂಖ್ಯೆ ನೀಡಿ ಸುಮ್ಮನಾದರು.ನಾನೇ ಕರೆಮಾಡಿದೆ.

“ನಮಸ್ಕಾರ ಸರ್”

“ನಮಸ್ಕಾರ, ಏನ್ರೀ ಉಪ್ಪಿನಕಾಯಿ ತಯಾರಿಸಿ ಮಳೆಗಾಲಕ್ಕೆ ಕಾದಿರಿಸ್ತಾರಲ್ಲಾ, ಹಾಗೆ, ನನ್ನ ಚರದೂರವಾಣಿ ಸಂಖ್ಯೆಯನ್ನು ಪಡೆದು ಮಳೆಗಾಲದಲ್ಲಿ ಬಳಕೆಗಾಗಿ ಉಳಿಸಿಕೊಂಡಿದ್ದೀರಾ?” ಅಂದೆ.

ನಕ್ಕು ಮಾತು ಮುಂದುವರೆಯಿತು.

ಹೀಗೆಯೇ ಮಾತನಾಡುತ್ತಾ, “ತಾವು ಬಹಳ ಚೆನ್ನಾಗಿ ಬರೆಯುತ್ತೀರಿ, ಸಾರ್. ನನಗೆ ತುಂಬಾ ಇಷ್ಟ” ಅಂದರು.

ನಾನಂದೆ, “ನನ್ನ ಅಪ್ಪಯ್ಯ ಹೇಳಿದ ಒಂದು ಮಾತು ನನಗೆ ನೆನಪಾಗುತ್ತಿದೆ.

ಒಂದು ಹೋಟೇಲಿನಲ್ಲಿ ಒಮ್ಮೆ ಓರ್ವ ಗಿರಾಕಿ ಊಟ ಮುಗಿಸಿ ತೆರಳುವಾಗ, ಹೋಟೇಲಿನ ಮಾಲೀಕರೊಂದಿಗೆ, ತಮ್ಮ ಹೋಟೇಲಿನ ಊಟ ಬಹಳ ರುಚಿ ಶುಚಿಯಾಗಿದೆ. ನನಗೆ ಬಹಳ ಇಷ್ಟ ಅಂದರಂತೆ. ಆಗ ಆ ಮಾಲೀಕರು, ಸ್ವಾಮಿ ನನ್ನ ಹೋಟೇಲಿನ ಅಡುಗೆಯ ಬಗ್ಗೆ ನನಗೆ ಗೊತ್ತಿದೆ. ಸಾಧ್ಯವಾದರೆ, ತಮ್ಮ ಪರಿಚಯದ ಹತ್ತು ಮಂದಿಗೆ ನಮ್ಮ ಹೋಟೇಲಿನ ಬಗ್ಗೆ ಹೇಳಿ. ಅದರಿಂದ ನನಗೆ ಪ್ರಯೋಜನವೂ ಆದೀತು ಅಂದರಂತೆ.

ಈಗ ಹೇಳಿ ತಮಗೆ ನನ್ನ ಬರಹ ಬಹಳ ಇಷ್ಟ ಅನ್ನುತ್ತಿದ್ದೀರಿ, ತಾವು ಎಷ್ಟು ಬಾರಿ ನನ್ನ ಬರಹಗಳನ್ನು ಪರರ ಓದಿಗಾಗಿ ತಮ್ಮ ಗೋಡೆಯ ಮೇಲೆ ಹಂಚಿಕೊಂಡಿದ್ದೀರಿ?

ತಾವು ಮಾತ್ರ ಅಲ್ಲ. ನಾನೂ ಇದಕ್ಕೆ ಹೊರತಾಗಿಲ್ಲ. ನಾವೆಲ್ಲರೂ ಅಷ್ಟೇ.

ನಾವು ನಮಗೆ ಪರಿಚಯ ಇಲ್ಲದವರ “ಕೋಟು”ಗಳನ್ನು ಅನ್ಯರೊಂದಿಗೆ ಹಂಚಿಕೊಂಡಷ್ಟು ಸುಲಭವಾಗಿ, ನಮ್ಮವರ ನಮಗಿಷ್ಟವಾದ ಮಾತುಗಳನ್ನು ಪರರೊಂದಿಗೆ ಹಂಚಿಕೊಳ್ಳುವುದಿಲ್ಲ., ಅಲ್ಲವೇ?”

ಮಾತು ನಂತರ ಎಲ್ಲೆಲ್ಲೋ ಸಾಗಿ ಮುಗಿಯಿತು. ಅದು ಅಮುಖ್ಯ ಇಲ್ಲಿ.

ಆದರೆ, ಇಂದು ನನ್ನಿಂದಲೇ ಹೊರಬಂದಿದ್ದ ಈ ಮಾತುಗಳು ಈಗಲೂ ನನ್ನ ಕಿವಿಗಳಲ್ಲಿ ಮರುದನಿಕೊಡುತ್ತಲೇ ಇವೆ. ಹಾಗಾಗಿ ತಮ್ಮೊಂದಿಗೆ ಹಂಚಿಕೊಂಡು, ಸುಧಾರಿಸೋಣ ಅನ್ನುವ ನಿರ್ಧಾರಕ್ಕೆ ಬಂದೆ.

ತಾವೇನಂತೀರಿ, ಹಂಚಿಕೊಳ್ಳುವ ಬಗ್ಗೆ?


ನಿಜವಲ್ಲ!

25 ಮೇ 13

 

 

ಸಖೀ, ಸ್ವಲ್ಪ ಮೌನವಾಗಿರಲು ಬಿಡು
ಈ ಮೌನಕ್ಕೂ ಅರ್ಥ ನೀಡಿ ನೋಡು
ನೀನಂದುಕೊಂಡುದೆಲ್ಲವೂ ನಿಜವಲ್ಲ
ಏಕೆಂದರೆ ನಾನೇನನ್ನೂ ಅಂದಿಲ್ಲವಲ್ಲ!


ನಾನರ್ಹನಲ್ಲ!

25 ಮೇ 13

“ನನ್ನ ಸ್ನೇಹಿತರ ಒತ್ತಾಯದ ಮೇರೆಗೆ ನನ್ನ ಮೊದಲ ಕವನ ಸಂಕಲನ ಮುದ್ರಿಸಿ ಬಿಡುಗಡೆ ಮಾಡುತ್ತಿದ್ದೇನೆ. ತಾವು ಅದಕ್ಕೊಂದು ಮುನ್ನುಡಿ ಬರೆದುಕೊಡಿ”. ಅನ್ನುವ ಒಂದು ಬೇಡಿಕೆ ಬಂದಿತ್ತು, ಇಲ್ಲಿನ ಕವಿಮಿತ್ರರಿಂದ, ಕೆಲವು ತಿಂಗಳುಗಳ ಹಿಂದೆ. 

“ನನಗೆ ಆ ಯೋಗ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಕವನಗಳನ್ನು ಕಳಿಸಿಕೊಡಿ ನೋಡುತ್ತೇನೆ” ಅಂದೆ.

ಕಳುಹಿಸಿಕೊಟ್ಟರು.

“ಓದಲು ಪುರುಸೊತ್ತಾಗಲಿಲ್ಲ. ವಾರಾಂತ್ಯದಲ್ಲಿ ಓದುತ್ತೇನೆ” ಅಂದೆ.

ವಾರಾಂತ್ಯದಲ್ಲಿ, ಆ ಕವನಗಳನ್ನು ಓದಲು ಆರಂಭಿಸುವ ಮೊದಲೇ ಒಂದು ಅಳುಕು ನನ್ನನ್ನು ಕಾಡತೊಡಗಿತು. ನನ್ನಲ್ಲಿ ಹಿಂಜರಿಕೆ ಮನೆಮಾಡಿತು.

ಅವರಿಗೆ ಸಂದೇಶ ಕಳುಹಿಸಿದೆ.

“ನನಗ್ಯಾಕೋ ಇದನ್ನು ಒಪ್ಪಲು ಮನಸ್ಸಾಗುತ್ತಿಲ್ಲ. ಮೊದಲ ಪುಸ್ತಕ ಪ್ರಕಟಿಸುತ್ತಿರುವ ತಮ್ಮ ಸಂಕಲನಕ್ಕೆ ನಾನು, ಇದುವರೆಗೆ ಒಂದು ಪುಸ್ತಕ ಮುದ್ರಿಸದವನು, ಇಲ್ಲೆಲ್ಲೋ ಬ್ಲಾಗಿನಲ್ಲಿ ಗೀಚುತ್ತಿರುವವನು ಮುನ್ನುಡಿ ಬರೆದರೆ ಬಹುಶಃ ಚೆನ್ನಾಗಿರದು”.

ಅವರಿಗೆ ಬೇಸರವೂ ಕೋಪವೂ ಜೊತೆಜೊತೆಗೆ ಬಂದಿತ್ತು ಅನ್ನುವುದು ಅವರ ಮಾತಿನಿಂದಲೇ ಗೊತ್ತಾಗಿತ್ತು.

“ನನ್ನ ಕವನಗಳನ್ನು ಓದಿ, ಅವುಗಳ ಮಟ್ಟ ಕಡಿಮೆ ಅನಿಸಿ ನಿರಾಕರಿಸುತ್ತಿದ್ದೀರಿ. ಪರವಾಗಿಲ್ಲ” ಅಂದರು.

“ನಾನು ಓದಿಲ್ಲ. ನನ್ನಿಂದ ಈ ಕೆಲಸ ಸಾಧ್ಯವಿಲ್ಲ. ಮನಸ್ಸು ಒಪ್ಪುತ್ತಿಲ್ಲ, ಅನ್ಯಥಾ ಭಾವಿಸದಿರಿ”, ಅಂದೆ.

ಕೃತಿಕಾರನಿಗಿಂತ ಮುನ್ನುಡಿ ಬರೆಯುವವನ ಅರ್ಹತೆ, ಯೋಗ್ಯತೆ ಸ್ವಲ್ಪವಾದರೂ ಹೆಚ್ಚಾಗಿರಬೇಕು ಅನ್ನುವುದು ನನ್ನ ನಂಬಿಕೆ, ಅಂದೂ ಇತ್ತು, ಇಂದೂ ಇದೆ.

ಆದರೂ ಇಂದೇಕೋ, ಅವರ ಮನಸ್ಸಿಗೆ ನನ್ನಿಂದ ನೋವಾಗಿದೆಯೇನೋ ಅನ್ನುವ ಅಪರಾಧಿ ಭಾವ ಕಾಡುತ್ತಿದೆ.

ಹಾಗಾಗಿ ಬಹಿರಂಗವಾಗಿ ಕ್ಷಮೆಯಾಚಿಸುತ್ತಿದ್ದೇನೆ.

ಆದರೆ ಒಂದು ಮಾತು.

ಅವರು ಇಂದು ಆ ಬೇಡಿಕೆ ಇಟ್ಟರೂ ನಾನು ಒಪ್ಪಿಕೊಳ್ಳುವುದಿಲ್ಲ.

ಏಕೆಂದರೆ, ಇಂದೂ ಕೂಡ, ನನಗೆ ಆ ಯೋಗ್ಯತೆ ಅಥವಾ ಅರ್ಹತೆ ಇದೆಯೆನ್ನುವುದನ್ನು ನನ್ನಿಂದ ಒಪ್ಪಲಾಗುತ್ತಿಲ್ಲ.


ನೆನಪಾಗಿ ಕಾಡುವ ಕೆಂಪಿ!

19 ಮೇ 13
ಇದು ಸರಿ ಸುಮಾರು ನಲವತ್ತು ವರುಷಗಳ ಹಿಂದಿನ ಕತೆ. ಅಂದೊಂದು ದಿನ ಮುಂಜಾನೆ ಹಿರಿಯಡಕ ಶಾಲೆಗೆ ಹೋಗುತ್ತಿರುವಾಗ ಹಾದಿಯಲ್ಲಿ ಹಠಾತ್ತನೇ ನನ್ನ ಕೆಂಪಿ ಎದುರಾಗಿದ್ದಳು. ಆಕೆಯನ್ನು ಕಂಡಾಗ ನನಗಾದ ನನ್ನ ಖುಷಿಗೆ ಪಾರವೇ ಇರಲಿಲ್ಲ.

ಹತ್ತಿರ ನಿಂತು ಮಾತಾಡಿಸಿದರೆ ಮರಳಿ ಮಾತೇ ಇಲ್ಲ. ಕಣ್ಣುಗಳಿಂದ ಬರೀ ಕಣ್ಣೀರ ಧಾರೆ. ಸರಿ ನೀನು ಮನೆಗೆ ಹೋಗಿರು. ನಾನು ಶಾಲೆಗೆ ಹೋಗಬೇಕು. ಸಾಯಂಕಾಲ ಬರ್ತೇನೆ ಎಂದು ಹೇಳಿ ಕಳುಹಿಸಿದ್ದೆ. ನಾನು ಶಾಲೆಗೆ ಹೋದರೂ ಹಗಲಿಡೀ ಕೆಂಪಿಯದೇ ಯೋಚನೆಗಳು. ಸಂಜೆ ತನಕ ಇರ್ತಾಳೋ ಇಲ್ವೋ? ನಮ್ಮನ್ನೆಲ್ಲಾ ಬಿಟ್ಟು ಹೋದವಳು ಹೀಗೆ ಹಠಾತ್ ಮರಳಿದ್ದೇಕೆ? ಇನ್ನು ನಮ್ಮ ಮನೆಯಲ್ಲೇ ಉಳಿಯುತ್ತಾಳೋ?

ಸಾಯಂಕಾಲ ಶಾಲೆ ಮುಗಿದ ಮೇಲೆ, ಮೂರು ಮೂರೂವರೆ ಕಿಲೋಮೀಟರುಗಳಷ್ಟು ದೂರದಲ್ಲಿದ್ದ ನಮ್ಮ ಮನೆಯನ್ನು ತಲುಪಲು ಮುಕ್ಕಾಲು ಗಂಟೆ ಬೇಕಾಗುತ್ತಿತ್ತು. ಜಾಸ್ತಿ ವೇಗವಾಗಿ ನಡೆಯಲೂ ಭಯ. ಮಧ್ಯಾಹ್ನ ಶಾಲೆಯಲ್ಲಿ ತಿಂದಿದ್ದ ಅಮೇರಿಕನ್ ಉಪ್ಪಿಟ್ಟು ಅದಾಗಲೇ ಜೀರ್ಣವಾಗಿದ್ದು, ಅದು ತನ್ನ ಕರಾಮತ್ತು ತೋರಿಸಿ ಬಿಡಬಹುದೆಂಬ ಅನುಮಾನ ಇರುತ್ತಿತ್ತು.

ಮನೆಗೆ ಬಂದರೆ ಕೆಂಪಿ ಇಲ್ಲ. ಅಮ್ಮನಲ್ಲಿ ಕೇಳಿದೆ. ಕೆಂಪಿ ಬಂದಿದ್ದು ಹೌದು. ಬಾಯಾರಿಕೆ ನೀಡಿದೆ. ಕುಡಿದಳು. ಆಮೇಲೆ ನಿನ್ನ ಅಪ್ಪಯ್ಯ ಅವರಿಗೆ ವಿಷಯ ತಿಳಿಸಿದ್ದರಿಂದ, ಅವರೇ ಬಂದು ಕರೆದುಕೊಂಡು ಹೋದರು.

ಏನು ಮಾಡಬಹುದಾಗಿತ್ತು ನಾನು. ಅಳು ಬಂತು. ಮನಸಾರೆ ಅತ್ತೆ. ಅಂದಿನ ದಿನದಿಂದ ಈ ನಡುವಿನ ಇಷ್ಟೊಂದು ವರುಷಗಳಲ್ಲಿ ಹಲವುಬಾರಿ ನೆನಪಾಗಿ ಕಾಡಿದ್ದಾಳೆ ಕೆಂಪಿ. ಅಳಿಸಿದ್ದಾಳೆ. ಈಗೀಗ ಅಳುವಿಲ್ಲವಾದರೂ ನೆನಪಾದಾಗ ಹೃದಯ ಭಾರವಾಗುವುದಂತೂ ನಿಜ.

ನಾನು ನಮ್ಮ ಮನೆಯಿಂದ ಒಂದು ಕಿಲೋಮೀಟರ್ ದೂರದ ಅಂಜಾರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ಸಮಯ ಅದು. ಆಗ ನನಗೊಂದು ಭಯಂಕರ ಖಾಯಿಲೆ ಕಾಡಿತ್ತು. ಸುಮಾರು ಏಳೆಂಟು ತಿಂಗಳು ನಾನು ಶಾಲೆಗೇ ಹೋಗಿಲ್ಲ. ನಮ್ಮ ಮೂರನೇ ತರಗತಿಯ ಬಗ್ಗೆ ನನಗೆ ಅಷ್ಟೊಂದು ನೆನಪು ಉಳಿದಿಲ್ಲದಿರಲು ಇದೇ ಕಾರಣ. ಆದರೂ ಭಡ್ತಿ ಸಿಕ್ಕಿತ್ತು ಆ ಮಾತು ಬೇರೆ. ಲಿವರ್ ಸಮಸ್ಯೆಯಿಂದಾಗಿ, ಮೈಯೆಲ್ಲಾ ಊತ ಉಂಟಾಗಿತ್ತು. ಉಪ್ಪು ಮತ್ತು ಖಾರ ತಿನ್ನುವಂತಿರಲಿಲ್ಲ. ಉಪ್ಪಿನಕಾಯಿಯ ಡಬ್ಬ ಕೈಗೆ ಸಿಕ್ಕರೆ ಕದ್ದು ತಿನ್ನುತ್ತಿದ್ದೆ. ನಿರ್ಬಂಧವಿದ್ದ ವಸ್ತುಗಳ ಮೇಲೆ ನನಗೆ ಅತೀವ ಆಸೆ ಆಗ. ಉಪ್ಪಿನಕಾಯಿ ಡಬ್ಬವನ್ನು ನನ್ನ ಕೈಗೆ ಸಿಗದಂತೆ, ಮೇಲೆ ಎಲ್ಲೋ ಅಡಗಿಸಿ ಇಡುತ್ತಿದ್ದರು. ನನ್ನಿಂದಾಗಿ ಮನೆಯವರೆಲ್ಲರಿಗೂ ಒಂದು ರೀತಿಯಲ್ಲಿ ಕಷ್ಟ. ನಾನು ತಿನ್ನಲಾಗದ ತಿನಿಸನ್ನು ಅವರು ತಿನ್ನುವಾಗ ಅವರಿಗೆಲ್ಲಾ ಬೇಸರ.

ವೈದ್ಯರಾಗಿದ್ದ ಅಪ್ಪಯನ್ನವರೂ ಕೈಸೋತಿದ್ದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಆಯುರ್ವೇದ ಆಸ್ಪತ್ರೆ, ಅಲ್ಲದೇ ಇನ್ನೂ ಅದೆಷ್ಟೋ ನಾಟಿ ವೈದ್ಯರುಗಳ ಔಷಧಿಗಳನ್ನು ಪ್ರಯೋಗಿಸಿದರೂ ಗುಣಮುಖ ನಾಗಿರಲಿಲ್ಲ. ನನ್ನ ಆಸೆಯನ್ನು ಕೈಬಿಡುವಂತೆ ವೈದ್ಯರುಗಳೇ ಸೂಚಿಸಿದ್ದರು. ಆ ದಿನದ ನಂತರ ಅಪ್ಪಯ್ಯ ನನಗೆ ಕದ್ದು ಮುಚ್ಚಿ ಮಸಾಲೆ ದೋಸೆ ತಂದು ತಿನ್ನಿಸಿದ್ದೂ ಇದೆ. ಅಮ್ಮ ಅದರಿಂದ ಕೊರಗಿದ್ದೂ ಇದೆ. ಆಗಿನ ದಿನಗಳಲ್ಲಿ, ನನ್ನನ್ನು ಖುಷಿಯಾಗಿ ಇರಿಸಲು, ರಾತ್ರಿ ಕ್ಲಿನಿಕಿನಿಂದ ಮರಳಿದ ಮೇಲೆ, ನನಗೆ ಒಂದು ರೂಪಾಯಿಯ ಪಾವಲಿ ನೀಡುವ ಅಭ್ಯಾಸ ಮಾಡಿಕೊಂಡಿದ್ದರು ಅಪ್ಪಯ್ಯ. ಅದನ್ನು ಒಂದು ಡಬ್ಬಿಯಲ್ಲಿ ಹಾಕಿ ಭದ್ರವಾಗಿ ಶೇಖರಿಸಿ ಇಡುತ್ತಿದ್ದೆ ನಾನು.

ಒಂದು ದಿನ ಅದ್ಯಾವುದೋ ಹಾರ್ಮೋನಿಯಂ ಮಾಸ್ಟರರೊಬ್ಬರು ನಮ್ಮ ಮನೆಗೆ ಬಂದಿದ್ದರು. ನನ್ನ ಖಾಯಿಲೆಯ ಬಗ್ಗೆ ತಿಳಿದ ಅವರು ಪಾಣಾಜೆಯಲ್ಲಿನ ಆಯುರ್ವೇದ ಪಂಡಿತರೋರ್ವರ ಹೆಸರನ್ನು ಸೂಚಿಸಿ, ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗಲು ಹೇಳಿದ್ದರು. ಆ ಪಂಡಿತರು, ಈಗಿನ ಖ್ಯಾತ ಪತ್ರಕರ್ತ ಶೀ ಈಶ್ವರ ದೈತೋಟರ ತೀರ್ಥರೂಪರು. ಅವರಲ್ಲಿಗೆ ನಾಲ್ಕಾರು ಭೇಟಿ ನೀಡಿ, ಅವರು ನೀಡಿದ ಔಷಧಿ ಸೇವಿಸಿ ನಾನು ಅಂದು ಮರುಜನ್ಮ ಪಡೆದಿದ್ದೆ. ನನಗೆ ಮರುಜನ್ಮ ನೀಡಿದವರು ಈಶ್ವರ ದೈತೋಟರವರ ತೀರ್ಥರೂಪರು.

ವಿಷಯ ಅದಲ್ಲ.

ನಾನು ಗುಣಮುಖನಾದ ನಂತರ, ನಾನು ಒಟ್ಟುಗೂಡಿಸಿದ್ದ, ಆ ಒಂದು ರೂಪಾಯಿಯ ಪಾವಲಿಗಳನ್ನು ಲೆಕ್ಕ ಹಾಕಿ ನೋಡಿದರೆ, ಸುಮಾರು ಇನ್ನೂರೈವತ್ತು ರೂಪಾಯಿಗಳಾಗಿದ್ದವು. ನಮ್ಮ ಅಪ್ಪಯ್ಯ, ಆ ದುಡ್ಡನ್ನು ತೆಗೆದುಕೊಂಡು ನನಗೊಂದು ಹಸುವನ್ನು ಖರೀದಿಸಿ ನಮ್ಮ ಹಟ್ಟಿಯಲ್ಲಿ ಕಟ್ಟಿದ್ದರು. ಆ ಹಸುವೇ ಕೆಂಪಿ. ಆಕೆ ನನ್ನ ಬಾಲ್ಯದ ಸಂಗಾತಿಯಾಗಿ ಬಿಟ್ಟಿದ್ದಳು.

ಆಕೆಯ ಸಕಲ ಆರೈಕೆ ನನ್ನದೇ. ಹಿರಿಯರ ಲೆಕ್ಕಾಚಾರ ನನ್ನ ಅರಿವಿಗೆ ಬಂದಿರಲೇ ಇಲ್ಲ. ಹಟ್ಟಿಯಲ್ಲಿರುವ ಆ ಹಸು ನನ್ನದಾಗುವುದು ಹೇಗೆ ಅನ್ನುವ ಪ್ರಶ್ನೆಯೇ ಎದ್ದಿರಲಿಲ್ಲ. ಹೊಲಗಳ ಅಂಚಿನಲ್ಲಿ ಬೆಳೆಯುವ ಹಸಿಹುಲ್ಲನ್ನು ತಂದು ಕೆಂಪಿಗೆ ತಿನ್ನಿಸುವ ಕೆಲಸವೂ ನಡೆಯುತ್ತಿತ್ತು. ಎರಡು ಮೂರು ವರುಷ ನಮ್ಮೊಂದಿಗೆ ಇದ್ದ ಕೆಂಪಿಯನ್ನು, ಒಂದು ದಿನ ನನಗೆ ತಿಳಿಸದೇ, ನನ್ನನ್ನು ಕೇಳದೇ ಮಾರಿಬಿಡಲಾಗಿತ್ತು. ಮನೆಯಿಂದ ದೂರದ ಒಂದು ಕೊಯ್ಲು ಎನ್ನುವ ಹೊಲದಲ್ಲಿ ಕೂಳೆ ಕೀಳಲು ಹೋಗಿದ್ದಾಗ, ಇತ್ತ ಕೆಂಪಿಯ ವ್ಯವಹಾರ ನಡೆಸಿ, ಹಿರಿಯಡಕದ ಲಕ್ಷ್ಮಣ ಆಚಾರಿ ಅನ್ನುವವರ ಮನೆಗೆ ಕರೆದೊಯ್ಯಲಾಗಿತ್ತು.

ಭತ್ತದ ಪೈರಿನ ಕಟಾವು ಆದನಂತರ ಹೊಲದಲ್ಲಿ ಉಳಿದಿರುವ ಅದರ ಬುಡವನ್ನು ಕೂಳೆ ಅನ್ನುತ್ತೇವೆ. ಅವುಗಳನ್ನು ಕಿತ್ತು ತಂದು ಹಸುಗಳಿರುವ ಹಟ್ಟಿಯಲ್ಲಿ ಹಾಸಲಾಗುತ್ತಿತ್ತು. ಹಾಗೆ ಅಂದು ಕೂಳೆ ಕಿತ್ತುಕೊಂಡು ಮರಳಿದಾಗ, ಹಟ್ಟಿಯಲ್ಲಿ ಕೆಂಪಿ ಇರಲಿಲ್ಲ. ಅಂದು ನಾನು ಅತ್ತು ಸುರಿಸಿದ ಕಣ್ಣೀರಿಗೆ ಕೊನೆಯಿರಲಿಲ್ಲ. ಬೇರೆ ಹಸು ಕೊಂಡಾಗ ಅದು ನಿನಗೇ ಕೊಡ್ತೇವೆ ಅನ್ನುವ ಅಮ್ಮನವರ ಸಮಾಧಾನದ ನುಡಿಗಳು ಅಂದು ವಿಫಲವಾಗಿದ್ದವು. ಆಮೇಲೆ ಮತ್ತೊಂದು ಹಸು ಬಂತು. ಹೋಯ್ತು. ಆದರೆ ಕೆಂಪಿಯಷ್ಟು ಆಪ್ತವಾಗಿದ್ದಿಲ್ಲ ಯಾರೂ.

ಅದಾಗಿ ಮೂರು ನಾಲ್ಕು ದಿನಗಳ ನಂತರ, ನಾನು ಹಿರಿಯಡಕದ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ಹಾದಿಯಲ್ಲಿ ನನಗೆ ಎದುರಾಗಿ ಕಣ್ಣೀರು ಸುರಿಸಿದ್ದ ಕೆಂಪಿ, ಆಗಾಗ ನನಗೆ ನೆನಪಾಗುವುದರಲ್ಲಿ ಅರ್ಥವಿಲ್ಲವೇ ಹೇಳಿ.

(ಕಾಗುಣಿತಗಳ ತಪ್ಪುಗಳು ಇರುವ ಸಾಧ್ಯತೆ ಇದೆ. ದಯವಿಟ್ಟು ತಿಳಿಸಿ ಉಪಕರಿಸಿ)


ಪ್ರದರ್ಶನ ಏಕೆ?

19 ಮೇ 13

 

ಸಖೀ,
ದೇವರನು ನಿದ್ದೆಯಿಂದೆಬ್ಬಿಸುವವರನ್ನು ಎಬ್ಬಿಸಿದವರಾರು
ದೇವರು ನಿದ್ರಿಸಿದರೆ ನಮ್ಮನ್ನು ಇಲ್ಲಿ ಕಾಯುವವರಾರು
ಆಸ್ತಿಕರಲ್ಲೂ ಸಂಪೂರ್ಣ ಆಸ್ತಿಕತೆಯ ನಾ ಕಾಣೆನಲ್ಲ ಇಲ್ಲಿ
ಅಪನಂಬಿಕೆಯನೇ ನಂಬಿಕೆಯೆಂಬ ಪ್ರದರ್ಶನ ಏಕೆ ಇಲ್ಲಿ?