ಬೇಳೆ ಬೇಯಬೇಕಂತೆ!

06 ನವೆಂ 14

ಸಖೀ,
ಕಾಣದ ದೇವರ ಮೇಲೆ ಇರುವ ನಂಬಿಕೆ ಕಣ್ಣಿದಿರು ಇರುವವರ ಮೇಲೆ ನನಗಿಲ್ಲ
ನಾನು ಅರಿತುದೇ ಸತ್ಯ ನಾನು ನುಡಿದುದೇ ಸತ್ಯ ನನಗಿಂತ ಅರಿತವರು ಇಲ್ಲಿಲ್ಲ;

ನಾನು ನಗ್ನನಾಗುತ್ತಾ ಸಾಗಿದರೂ ಪರವಾಗಿಲ್ಲ ಇತರರ ಬಟ್ಟೆಗಳನೆಳೆಯಬೇಕು
ನನ್ನ ಮರ್ಯಾದೆ ಹೋದರೇನಂತೆ ಇತರರ ಮಾನ ಮೂರಾಬಟ್ಟೆ ಮಾಡಬೇಕು;

ರಾಜಕೀಯ ದೊಂಬರಾಟದ ಸ್ನಾನಗೃಹದಲ್ಲಿ ಇರುವವರೆಲ್ಲರೂ ನಗ್ನರೇ ನೋಡು
ಕೊಚಹೊತ್ತು ಅತ್ತಸರಿದು ಇತ್ತಲಿನವರನ್ನು ನೋಡಿ ನಗುವವರು ಇಲ್ಲೆಲ್ಲಾ ನೋಡು;

ಜೈಕಾರ ಹಾಕುವವರಿಗೆ ಯಾರಾದರೇನಂತೆ ಅವರಿಗೂ ಜೈ ಇವರಿಗೂ ಜೈ ಅಂತೆ
ಹಿಂಬಾಲಕರತ್ತ ಗಮನ ನಾಯಕರಿಗೂ ಇಲ್ಲ ಅವರಿಗವರ ಬೇಳೆ ಬೇಯಬೇಕಂತೆ!


ತಾನಾಗೇ ನಂದಿತಾ?

03 ನವೆಂ 14

ಬೆಳಗಿ ಬೆಳಗುವ ಮುನ್ನವೇ ಆ ದೀಪ ನಂದಿತಾ?
ನಂದಿಸಿದರೇ, ತಾನೇ ನಂದಿಸಿದಳೇ ನಂದಿತಾ?

ನ್ಯಾಯಾಲಯವೇರುವ ಮುನ್ನ ಕಿಚ್ಚು ನಂದಿತಾ?
ನಂದಿಸಿದರೇ ಎಲ್ಲಾ ಸೇರಿ, ತಾನಾಗೇ ನಂದಿತಾ?

ನ್ಯಾಯದೇವತೆ ಕಣ್ಣಿದ್ದೂ ಕುರುಡಳೆಂದು ಅರಿತಿದ್ದೆವು,
ಆ-ರಕ್ಷಕರೂ ಕುರುಡರೆಂದು ಇಂದು ನಾವು ಅರಿತೆವು;

ತೀರ್ಪು ಕೊಟ್ಟಾಯ್ತು ಬಂಧಿಸದೇ ಆ ಆರೋಪಿಗಳನ್ನು
ಕೈತೊಳೆದುಕೊಂಡಾಯ್ತು ಬರೆದು ನಾಲ್ಕಕ್ಷರಗಳನ್ನು;

ವಿಷ ಸೇವಿಸಿದ ಹೆಣ್ಣು ಗೀಚಬಲ್ಲುದೇ ಆ ಅಕ್ಷರಗಳನ್ನು?
ಕೈನಡುಗಿರದೇ ನೆನೆದಾಗ ಅಮ್ಮ ಅಪ್ಪ ತಂಗಿಯನ್ನು?

ಕುಡಿಯುವ ಮೊದಲೇ ಬರೆದಿದ್ದರೆ ಕುಡಿದೆ ಎಂದಿರದು,
ಹದಿವಯಸ್ಸಿಗೆ ಅಂತಹ ಜಾಣ್ಮೆ, ನಿಜಕ್ಕೂ ಬಂದಿರದು!


ಪ್ರಾರ್ಥನೆ!

03 ನವೆಂ 14

ದೇವಾ,
ಜಗದಾಗುಹೋಗುಗಳನ್ನು ಗ್ರಹಿಸುವ ಸೂಕ್ಷ್ಮ ಇಂದ್ರಿಯಗಳನ್ನಿತ್ತೆ
ಅವುಗಳಿಗೆ ನಿಸ್ವಾರ್ಥವಾಗಿ ಸ್ಪಂದಿಸುವ ನಿರ್ಮಲ ಹೃದಯವನ್ನಿತ್ತೆ;

ಕರ್ಮದ ಮೇಲಲ್ಲದೇ ಕರ್ಮಫಲದ ಮೇಲೆ ಅಧಿಕಾರ ಇಲ್ಲವೆನ್ನುವ
ನಿರೀಕ್ಷೆ ಕೈಗೂಡದಾಗ ನಿರ್ಲಿಪ್ತವಾಗಿದ್ದುಬಿಡುವ ಮನವನ್ನೂ ಇತ್ತೆ;

ನಿನ್ನ ನಿರೀಕ್ಷೆಗಳೇನೋ ನಾನರಿಯೆ ನನ್ನ ಮನದಿಂಗಿತ ನೀನರಿತಿಹೆ
ನಿನ್ನಿಚ್ಛೆಯಂತೆ ನಡೆಸೆನ್ನನು ಎಂದು ನಿನ್ನಧೀನಕ್ಕೆ ನಾನನ್ನನ್ನೇ ಇತ್ತೆ!