ಹತ್ತು ರೂಪಾಯಿಗಳಿಗೊಂದು!

20 ಮೇ 15

ಸಖೀ,
ಉದ್ದುದ್ದದ ಲೇಖನಿ
ಮಾರುವ ಹುಡುಗ
ಹತ್ತು ರೂಪಾಯಿಗಳಿಗೊಂದು ಅನ್ನುತ್ತಿದ್ದ;

ಎರಡು ಕೊಡು ಅಂದು
ಇಪ್ಪತ್ತು ರೂಪಾಯಿಗಳ
ಒಂದು ನೋಟು ನೀಡೆ ಪಡೆದು ನಗುತ್ತಲಿದ್ದ;

ಲೇಖನಿಯ ಬಳಸದೇ
ಅವೆಷ್ಟು ವರುಷಗಳು
ಕಳೆದುಹೋದವೋ ನನಗಂತೂ ಗೊತ್ತಿಲ್ಲ;

ಬೇಡವಾಗಿದ್ದರೂ ಕೊಂಡೆ
ಸೋಮಾರಿಯಲ್ಲ ನೋಡು
ಹುಡುಗ ಇಷ್ಟವಾದ ಅದ್ಯಾಕೋ ಗೊತ್ತಿಲ್ಲ!
*******


ಅಸೆ ಇದೆ ಮನದೊಳಗೆ!

19 ಮೇ 15

ಸಖೀ,
ಹೇಳಿಯಾಗಿದೆ ನಾನಂದು,
ನಾನೆಂದೂ ನಿನ್ನನ್ನು
ಪ್ರಶ್ನಿಸುವುದೇ ಇಲ್ಲವೆಂದು;

ಈಗ ನೋಡು, ನೀನದೆಷ್ಟೇ
ಮುಚ್ಚಿಡಲು ಯತ್ನಿಸಿದರೂ,

“ನೀನು ಪ್ರಶ್ನಿಸಬೇಕು
ನಾನು ಉತ್ತರಿಸಬೇಕು”

ಅನ್ನುವ ನಿನ್ನ ಮನದೊಳಗಿನ
ಆಸೆ ತಂತಾನೇ ನನ್ನ ಅರಿವಿಗೆ
ಬರುತ್ತಲಿಹುದು, ಇದು ಸುಳ್ಳಲ್ಲ!
*****