ಒಂದು ಹೊತ್ತಿನ ಊಟವಿದೆ!

24 ಜೂನ್ 12

ಅಪ್ಪಯ್ಯ ಹೇಳಿದ್ದ ಕತೆ-೦೨

ಅದೊಂದು ಸಣ್ಣ ಊರು. ಆ ಊರಿನಲ್ಲಿ ಎಲ್ಲಾ ಮತ ಧರ್ಮದವರೂ ಸಾಮರಸ್ಯದ ಜೀವನ ನಡೆಸುತ್ತಿದ್ದರು. ಅಲ್ಲಿ ದೇವಸ್ಥಾನ, ಕ್ರೈಸ್ತ ಪ್ರಾರ್ಥನಾ ಮಂದಿರಗಳಿದ್ದಂತೆಯೇ, ಒಂದು ಮಸೀದಿ ಕೂಡ ಇತ್ತು. ಆ ಮಸೀದಿಯಲ್ಲೋರ್ವ ಧರ್ಮಗುರು ಇದ್ದರು. ಆ ಧರ್ಮಗುರುವಿಗೋರ್ವ ಮಗನಿದ್ದ.

ಆ ಧರ್ಮಗುರುವಿಗೆ ವಯಸ್ಸಾಗಿತ್ತು. ತನ್ನ ಅಂತಿಮ ಕಾಲ ಸನ್ನಿಹಿತವಾಗುತ್ತಿದೆ ಎನ್ನುವುದನ್ನು ಅರಿತ ಆತ, ಒಂದು ದಿನ ತನ್ನ ಮಗನನ್ನು ಕರೆದು: “ಮಗನೇ ನಿನಗೆ ನಾನು ಮಸೀದಿಯ ವಿಧಿ ವಿಧಾನಗಳನ್ನೆಲ್ಲಾ ಕಲಿಸಿಕೊಟ್ಟಿರುತ್ತೇನೆ, ಇನ್ನು ಮುಂದೆ ನನ್ನಂತೆಯೇ ನೀನು ಇಲ್ಲಿನ ಧರ್ಮ ಗುರುವಾಗಿ ಕಾರ್ಯ ನಿರ್ವಹಿಸಿಕೊಂಡು ಹೋಗಬೇಕು. ಈ ಊರಿನಲ್ಲಿ ಎಲ್ಲಾ ಮತದವರೂ ಇದ್ದಾರೆ. ಎಲ್ಲರೊಂದಿಗೂ ಪ್ರೀತಿಯಿಂದ ವ್ಯವಹರಿಸುತ್ತಾ ಇರು. ಇಲ್ಲಿನ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವುದಕ್ಕೆ ಸದಾ ಸಹಕರಿಸುತ್ತಾ ಇರು. ಇನ್ನೊಂದು ಮಾತು ಈ ಊರಿನಲ್ಲಿರುವ ಪ್ರತಿ ಮನೆಯಲ್ಲೂ, ನಿನಗೊಂದು ಹೊತ್ತಿನ ಊಟ ಇದೆ. ಅದನ್ನು ಯಾವತ್ತೂ ಹಾಳು ಮಾಡಿಕೊಳ್ಳಬೇಡ. ನಿನಗೆ ಒಳ್ಳೇದಾಗಲಿ ಮಗನೇ” ಎಂದು ಕಿವಿಮಾತುಗಳನ್ನು ನುಡಿದು ಶುಭ ಹಾರೈಸಿದರು.

ಸ್ವಲ್ಪ ದಿನಗಳ ನಂತರ ಆ ಧರ್ಮಗುರು ವಿಧಿವಶರಾದರು ಹಾಗೂ ಅಂದಿನ ನಿಯಮದಂತೆ ಆತನ ಪುತ್ರ ಆ ಮಸೀದಿಯಲ್ಲಿನ ಧರ್ಮಗುರುವಾಗಿ ನಿಯುಕ್ತರಾದರು. ಊರಿನ ಎಲ್ಲಾ ಜನರೂ ಆ ಹೊಸ ಧರ್ಮಗುರುವನ್ನು ಅಭಿನಂದಿಸಿದರು ಹಾಗೂ ಶುಭ ಕೋರಿದರು. ಧರ್ಮ ಭೇದವಿಲ್ಲದೇ, ಎಲ್ಲಾ ಮನೆಯವರೂ ಆ ಧರ್ಮಗುರುವನ್ನು ತಮ್ಮ ತಮ್ಮ ಮನೆಗಳಿಗೆ ಭೋಜನಕ್ಕಾಗಿ ಆಹ್ವಾನಿಸಿದರು. ಆಗ ಆ ಧರ್ಮಗುರುವಿಗೆ ತನ್ನ ತಂದೆಯವರು ತಮ್ಮ ಕೊನೆ ದಿನಗಳಲ್ಲಿ ನುಡಿದಿದ್ದ ಮಾತಿನ ನೆನಪಾಯ್ತು. “ … ಈ ಊರಿನಲ್ಲಿರುವ ಪ್ರತಿ ಮನೆಯಲ್ಲೂ, ನಿನಗೊಂದು ಹೊತ್ತಿನ ಊಟ ಇದೆ. ಅದನ್ನು ಯಾವತ್ತೂ ಹಾಳು ಮಾಡಿಕೊಳ್ಳಬೇಡ”.

“ಓ…ಹೌದು… ಹೌದು… ನನ್ನ ತಂದೆಯವರ ಮಾತನ್ನು ನಾನು ಪಾಲಿಸಲೇ ಬೇಕು. ಯಾವ ಮನೆಯ ಕರೆಯನ್ನೂ ನಾನು ನಿರ್ಲಕ್ಷಿಸಲಾಗದು. ನಿರ್ಲಕ್ಷಿಸಿದರೆ, ಆ ಮನೆಯ ಊಟವನ್ನು ನಾನು ಹಾಳುಮಾಡಿಕೊಂಡಂತಾಗುತ್ತದೆ ಹಾಗೂ ನನ್ನ ತಂದೆಯವರ ಮಾತನ್ನು ನಾನು ಧಿಕ್ಕರಿಸಿದಂತಾಗುತ್ತದೆ”. ಹೀಗೆಂದು ಯೋಚಿಸಿದ ಆ ಧರ್ಮಗುರು, ಒಂದೊಂದು ಹೊತ್ತು ಒಂದೊಂದು ಮನೆಯಲ್ಲಿ ಭೋಜನ ಸ್ವೀಕರಿಸಲು ಆರಂಭಿಸುತ್ತಾನೆ. ನೂರು ಮತ್ತಷ್ಟು ಮನೆಗಳಿದ್ದ ಆ ಊರಿನ ಎಲ್ಲಾ ಮನೆಗಳಿಗೂ ಭೇಟಿ ಇತ್ತು, ಅಲ್ಲಿ ಅವರು ನೀಡಿದ ಭೋಜನವನ್ನು ಸ್ವೀಕರಿಸುತ್ತಾನೆ.

ದಿನಗಳು ತಿಂಗಳುಗಳಾದವು, ತಿಂಗಳುಗಳು ವರ್ಷಗಳಾದವು. ಆರಂಭದ ದಿನಗಳಲ್ಲಿ ಆತನನ್ನು ಕಂಡಲ್ಲೆಲ್ಲಾ ಗೌರವ ನೀಡುತ್ತಿದ್ದ ಆ ಊರಿನ ಜನರು, ದಿನಗಳೆದಂತೆ, ಆತನನ್ನು ಕಂಡರೆ ಗುರುತಿಸುವುದನ್ನೂ ಕಡಿಮೆ ಮಾಡಿದರು. ಆತನನ್ನು ನೋಡಿದರೂ ನೋಡದವರಂತೆ ಮುಖಮರೆಸಿ ಹೋಗುವ ಜನರನ್ನೂ ಆತ ಕಾಣತೊಡಗಿದ. ಆತನ ಕಷ್ಟಕ್ಕೂ ಯಾರೂ ಸ್ಪಂದಿಸದಾದರು. “ಇದೇಕೆ ಹೀಗಾಯ್ತು?” ಎಂದು ಯೋಚಿಸತೊಡಗಿದ ಆತನಿಗೆ, ತನ್ನ ತಂದೆಯವರ ನೆನಪಾಯ್ತು. ಅವರು ನುಡಿದಿದ್ದ, ಆ ಮಾತಿನ ನಿಜವಾದ ಅರ್ಥ ಏನಾಗಿತ್ತೆಂದು ನಿಧಾನವಾಗಿ, ಅರಿವಾಗತೊಡಗಿತು.

“ಈ ಊರಿನಲ್ಲಿರುವ ಪ್ರತಿ ಮನೆಯಲ್ಲೂ, ನಿನಗೊಂದು ಹೊತ್ತಿನ ಊಟ ಇದೆ. ಅದನ್ನು ಯಾವತ್ತೂ ಹಾಳು ಮಾಡಿಕೊಳ್ಳಬೇಡ. ಎಂದು ನನ್ನ ತಂದೆಯವರು ನುಡಿದಿದ್ದರು. ಆದರೆ, ನಾನು ನನಗೆ ಅದರ ಅಗತ್ಯ ಇಲ್ಲವಾಗಿದ್ದಾಗಲೂ, ಎಲ್ಲರ ಮನೆಯ ಭೋಜನವನ್ನೂ ಸ್ವೀಕರಿಸಿ ಹಾಳುಮಾಡಿಕೊಂಡುಬಿಟ್ಟಿದ್ದೇನೆ. ಜೊತೆಗೆ ಈ ಊರಿನ ಜನರಿಗೆ ನನ್ನ ಮೇಲಿದ್ದ ಗೌರವವನ್ನೂ ಕಳೆದುಕೊಂಡಿದ್ದೇನೆ”, ಎಂದು ಮರುಗಿದ.

*****


ದೂರದಿಂದಾಡುವ ನಾಟಕವೇ ಮೆಚ್ಚು!

26 ಜುಲೈ 10

 
 
 ಆ ಅಮ್ಮ ಎಂಭತ್ತರ ಆಸುಪಾಸಿನ ಮುದಿ ಜೀವ

ಮನದಲ್ಲಿ ತುಂಬಿಕೊಂಡಿರುತ್ತಾರೆ ಸದಾ ನೋವ
 

ಆಕೆಗೆ ಎಲ್ಲಾ ಇದ್ದರೂ ಏನೂ ಇಲ್ಲ ಎಂಬ ಕೊರಗು

ನಿರೀಕ್ಷೆಯಲ್ಲೇ ಕಳೆಯುತ್ತಾರೆ ಆಕೆ ಬೆಳಗು ಬೈಗು

 

ಮನೆಯಲ್ಲಿ ಜೊತೆಗಿರುವ ಮಗ-ಸೊಸೆಯರ ದಿನಚರಿ

ಅವರ ನೌಕರಿಯ ನಡುವೆ ಅಮ್ಮನ ಸೇವೆಯಾ ಪರಿ

 

ಅಲ್ಲಿ ಯಾವುದಕ್ಕೂ ಕೊರತೆಯಿಲ್ಲ ಎಲ್ಲವೂ ಸೂಕ್ತ

ಆದರೆ ಆಕೆಗೆ ಬೇಕು ಮಾತಾಡುವವರು ಅಲ್ಲಿ ಮುಕ್ತ

 

ಊಟ ಔಷಧಿ ಎಲ್ಲದಕ್ಕೂ ಇದೆ ಶಿಸ್ತಿನ ವೇಳಾಪಟ್ಟಿ

ಹಗಲೆಲ್ಲಾ ಕೆಲಸದಾಕೆಯೊಂದಿಗೆ ಮನೆಯಲ್ಲಿ ಒಂಟಿ

 

ಆಗಾಗ ಕರೆಮಾಡಿ ವಿಚಾರಿಸುತ್ತಾರೆ ದೂರದವರು

ಅಪರೂಪಕ್ಕೆ ಬಂದು ಮಾತಾಡಿ ಹೋಗುತ್ತಾರವರು

 

ಆಕೆಯ ಮನಕೆ ಅವರೇ ನೋಡಿ ಇಷ್ಟವಾಗುವವರು

ಈ ಮಗ ಸೊಸೆಯರ ಮನದಿಂದ ದೂರ ಮಾಡಿಹರು

 

ಇಲ್ಲಿ ಇದ್ದು ಕರ್ತವ್ಯ ನಿಭಾಯಿಸುವವರಿಗಿಂತಲೂ ಹೆಚ್ಚು

ಕರೆಮಾಡಿ ವಿಚಾರಿಸುವವರ ಆ ಆತ್ಮೀಯತೆಯೇ ಮೆಚ್ಚು

 

ಏನು ಕೊರತೆಯಾಗಿದೆ ಎಂಬುದೇ ಪ್ರಶ್ನೆ ಈ ಮಗನಿಗೀಗಿಲ್ಲಿ

ಅಮ್ಮನ ಆರೈಕೆಯೇ ಆಗುತ್ತಿಲ್ಲ ಎಂಬ ದೂರು ಅನ್ಯರದು ಅಲ್ಲಿ

 

ಆತ್ಮೀಯತೆ ತೋರುವವರು ಇರುವುದೆಲ್ಲಾ ಬಹಳ ದೂರ

ಏನಾದರೂ ಅಗತ್ಯಕ್ಕೆ ಕರೆದರೆ ಒಬ್ಬನೂ ಸನಿಹ ಬಾರ

 

ಆದರೂ ಆಕೆಗ್ಯಾಕೋ ಅರಿವಾಗುತ್ತಿಲ್ಲ ಅವರ ಆ ನಾಟಕ

ಅವರನ್ನು ಕೊಂಡಾಡುತ್ತಾ ಈತನ ತೆಗಳುವುದು ಬೇಕಾ?

***************************

 


ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!

15 ಏಪ್ರಿಲ್ 10

ನಮ್ಮ ಕಷ್ಟ ಹೇಳಿಕೊಳ್ಳುವುದಕೆ ಯಾವ ದೇವರಾದರೇನು?
ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?

ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರುಂಟೇನು?
ನಮ್ಮ ಸಂಪಾದನೆಯ ಹಣಕ್ಕೆ ಯಾವುದೇ ಜಾತಿ ಉಂಟೇನು?

ಇಲ್ಲಿ ಹುಟ್ಟಿ ದೇವರು ಎನಿಸಿಕೊಂಡವರ ಪೂಜಿಸುವವರೇ ಎಲ್ಲ
ಆದರೆ ಅವರಾಡಿ ಹೋದ ಮಾತನಿಂದು ನೆನೆಸುವವರೇ ಇಲ್ಲ

ರಾಮ, ಕೃಷ್ಣ, ಅಲ್ಲಾಹ್, ಯೇಸು, ಎಲ್ಲರದೂ ಆಗಿತ್ತು ಒಂದೇ ಉಕ್ತಿ
ಪ್ರೀತಿಯಿಂದ ಬಾಳಿದರೆ ನಿಜದಿ ಅದುವೇ ಆ ದೇವರ ಮೇಲಿನ ಭಕ್ತಿ

ಯಾವ ದೇವರ ಪೂಜಿಸಿದರೂ ಹೇಳಿ ಬಡತನಕೆ ಅದು ಉತ್ತರವೇ?
ಮತ ಭೇದ ಇಲ್ಲದೆಯೇ ಬಡವರ ಉದ್ಧಾರ ನಿಜಕೂ ಅಸಾಧ್ಯವೇ?

ಇವರ ಹೊಟ್ಟೆ ತುಂಬಿಸುವುದಕ್ಕೆ ಬರೀ ಎರಡು ಹೊತ್ತಿನ ಊಟ
ಅಲ್ಲದೆ ವಿದ್ಯಾವಂತರನ್ನಾಗಿಸಲು ಮಕ್ಕಳಿಗೆಲ್ಲಾ ಪುಕ್ಕಟೆ ಪಾಠ

ನೀಡಿ ನೋಡಿ, ನಾಳೇ ನಿಮ್ಮನ್ನೇ ಪೂಜಿಸುವರಿವರು
ನಾಳೆ ನಮ್ಮೂರಲ್ಲಿ ನಿಜವಾಗಿಯೂ ನೀವೇ ದೇವರು!
******

ಅಮಾಯಕರು ಮತಾಂತರದ ಆಮಿಷಗಳಿಗೆ ಏಕೆ ಬಲಿಯಾಗುತ್ತಾರೆ  ಅನ್ನುವ ಬಗ್ಗೆ ಒಂದು ವಿಭಿನ್ನ ದೃಷ್ಟಿಕೋನದಿಂದ ನೋಡಲು ಯತ್ನಿಸಿದಾಗ ಆಸುಮನದಲ್ಲಿ ಮೂಡಿದ ಮಾತುಗಳು.