ಕೊನೆಯಲ್ಲೇ ಬೆಲೆ!

08 ಜೂನ್ 14

 

ಸಖೀ,
ಆರಂಭದಲಿದ್ದರೆ ಶೂನ್ಯಕ್ಕೆ ಬೆಲೆ ಇಲ್ಲಿ ಎಲ್ಲಿಹುದು
ಕೊನೆಯಲ್ಲಿ ಇದ್ದರಷ್ಟೇ ಶೂನ್ಯಕ್ಕೆ ಬೆಲೆ ಬರುವುದು
ಅದಕ್ಕೇ ಶೂನ್ಯ ಬಾಳಿನ ಕೊನೆಯಲ್ಲಿ ಬರುವುದು
ನಾವಿಲ್ಲದಾಗ ಮಂದಿ ನಮಗೆ ಬೆಲೆ ಕೊಡುವುದು!


ಈ ಬೆಲೆಗೆ ಬಹಳಿಲ್ಲ ಬೆಲೆಯು!

08 ಜೂನ್ 14

ಸಖೀ,
ನನ್ನ ಮಾತಿಗೆ ಬೆಲೆಯಿಲ್ಲವೆಂದು ಇನ್ನಾರದೋ ಮಾತುಗಳಿಗೆ ನನ್ನ ಹೆಸರಿನ ಪಟ್ಟಿ ಹಚ್ಚಲೇಕೆ?
ಬೆಲೆ ಪಡೆಯುವುದೇ ಉದ್ದೇಶವಲ್ಲ, ನನ್ನ ಅಂತರ್ಯವನು ಅರಿಯುವ ಹಂಬಲ ಇರಬಾರದೇಕೆ?
ಇಲ್ಲಿ ಪಡೆವ ಬೆಲೆಗೆ ಬಹಳಿಲ್ಲ ಬೆಲೆಯು ಸಚ್ಚಿದಾನಂದನ ಸನ್ನಿಧಿಯಲ್ಲೆನಗೆ ಬೆಲೆ ಬಾರದಿರಲೇಕೆ?
ನನ್ನ ಮತಿ ಎಚ್ಚರದಿಂದ ಅಂತರ್ಮುಖಿಯಾಗಿ ಚಿಂತನೆಗೈಯುತಿರೆ ಸದ್ವಿಚಾರ ಹೊಮ್ಮಿಬರದೇಕೆ?


ಅಧಿಕಾರ ಸಲ್ಲ!

08 ಜೂನ್ 14

ಸಖೀ,
ಸ್ನೇಹದ ಸೋಗಿನಲಿಲ್ಲಿ ಅಧಿಕಾರ ಚಲಾಯಿಸುವವರಿಹರು
ತಮ್ಮನಿಸಿಕೆಗಳನು ನಮ್ಮ ಮೇಲೆ ಹೇರುವವರೂ ಇಹರು
ಸ್ನೇಹಬಂಧವದು ಸರಿ ಅಧಿಕಾರದ ಬಂಧನವ ನಾನೊಲ್ಲೆ
ಸ್ನೇಹದಲಿ ಸೋಲಿಸಲಿ ಅಧಿಕಾರದಲಿ ಗೆಲ್ಲಲು ಬಿಡಲೊಲ್ಲೆ!


ನೀನಾನೋ ನಾನೀನೋ?

08 ಜೂನ್ 14

ಸಖೀ,
ನನ್ನೆಲ್ಲಾ ಮಾತುಗಳಿಗೆ ಮೊದಲ ಸ್ಪಂದನ ನಿನ್ನದೇ
ನಿನ್ನೆಲ್ಲಾ ಮಾತುಗಳಿಗೆ ಮೊದಲ ಸ್ಪಂದನ ನನ್ನದೇ
ಇರಲಾರದು ನೋಡುವವರಿಗನುಮಾನ ಕಾಡದೇ
ನೀನಾನೋ, ನಾನೀನೋ ತಿಳಿಯದಿಲ್ಲಿ ನೋಡದೇ!


ಫೇಸ್‍ಬುಕ್ ಭವಿಷ್ಯ!

08 ಜೂನ್ 14

ಸತ್ತವರ ಸುದ್ದಿಚಿತ್ರವನೂ ಮೆಚ್ಚುವಲ್ಲಿ ಮೊದಲಿಗನಾಗು ಅನ್ನುವುದು
ಪ್ರಾಣಿಗಳ ಚಿತ್ರವನು ಪ್ರಕಟಿಸಿದರೂ ನಮ್ಮ ಚಿತ್ರವೆಂದು ಅನ್ನುವುದು,

ಈ ಫೇಸ್‍ಬುಕ್‍ನ ಮಾತಿಗೆ ತಲೆತೂಗುತ್ತಾ ಬಂದರೆ ನಮಗೆ ನಾವಿಲ್ಲ
ಇನ್ನು ಸ್ವಲ್ಪ ದಿನಗಳ ನಂತರ ಇದಕೆ ನಮ್ಮ ಅಗತ್ಯವೂ ಇರುವುದಿಲ್ಲ,

ನಮ್ಮ ಭಾವಗಳಿಗೆ ಸೂಕ್ತ ಚಿತ್ರ, ಬರಹಗಳನ್ನು ಆರಿಸಿಕೊಳ್ಳಬಹುದು
ನಮಗರಿವಿಲ್ಲದೆಯೇ ಗೋಡೆಯ ಮೇಲೆ ತಾನೇ ಪ್ರಕಟಿಸಲೂಬಹುದು,

ನಮಗೆ ಬೇಸರವಾದ ಸುಳಿವು ಸಿಕ್ಕರೆ ತಾನೇ ಬರೆದುಕೊಳ್ಳಬಹುದು
“ನಾನು ಬೇಸರದಲ್ಲಿದ್ದೇನೆ” ಜೊತೆಗೆ ಸೂಕ್ತ ಚಿತ್ರವನು ಹಾಕಬಹುದು,

ಹತ್ತು ಪ್ರತಿಕ್ರಿಯೆಗಳಿವೆ ನಲವತ್ತು ಲೈಕುಗಳಿವೆ ಎಂಬ ಸುದ್ದಿಯ ನೀಡಿ
ನಮ್ಮ ಬೇಸರವನ್ನು ದೂರ ಮಾಡುವ ದಿನಗಳು ದೂರವಿಲ್ಲ ನೋಡಿ!


ಹತಾಶೆ!

08 ಜೂನ್ 14

ಸಖೀ,
ನಮ್ಮೊಳಗಿನ 
ಹತಾಶೆಯೂ 
ಪರದೂಷಣೆಗೆ 
ಕಾರಣವಾಗುತ್ತದೆ;

ಅದು ಇತ್ತೀಚೆಗೆ
ನಮ್ಮ ಕಣ್ಮುಂದೆ
ಎಲ್ಲೆಲ್ಲೂ ಸದಾ
ಕಾಣಸಿಗುತ್ತಿದೆ;


ಸ್ವರ್ಗ!

08 ಜೂನ್ 14

ಸಖೀ,
ಸ್ವರ್ಗವನು ಕಂಡವರಾರೂ ಇಲ್ಲ
ಸ್ವರ್ಗದಿಂದ ಮರಳಿದವರೂ ಇಲ್ಲ
ಆದರೂ ಸ್ವರ್ಗದ ಮಾತಿಹುದಲ್ಲಾ

ನಮ್ಮದೇ ಕಲ್ಪನೆ ನಮ್ಮದೇ ಅರ್ಥ
ಇಲ್ಲಿಯ ಸುಖವೆಲ್ಲಾ ಬರಿದೇ ವ್ಯರ್ಥ
ಹೆಚ್ಚಾಯಿತಾದರೆ ಅಪಾರ್ಥ ಅನರ್ಥ!


ಮೂಗುಗಳಿವೆ!

08 ಜೂನ್ 14

 
ಸಖೀ,
ಹೆಣ್ಣು-ಗಂಡಿನ ಸಂಬಂಧಗಳ ಆಚೆಗೂ ಸಂಬಂಧಗಳಿವೆ
ಅವು ಆ ಹೆಣ್ಣು-ಗಂಡಿನ ನಡೆವೆಯೂ ಸದಾ ಇದ್ದಿರುತ್ತವೆ
ನಿನ್ನ ಮೂಗಿನ ನೇರಕ್ಕೆ ನೀನು ಯೋಚಿಸುವುದು ಸರಿಯೆ
ಹಾಗೆಯೇ ಈ ಸಮಾಜದಲ್ಲಿ ಇತರರಿಗೂ ಮೂಗುಗಳಿವೆ!


ಮಹಾಮಹಿಮ!

08 ಜೂನ್ 14

ಸಖೀ,
ಯಾರೋ ಅಪರಿಚಿತರಿಗೆ ನಾ ಪರಿಚಿತನಾಗಿಬಿಟ್ಟೆ
ನನ್ನವರ ನಡುವೆಯೇ ನಾ ಅಪರಿಚಿತನಾಗಿಬಿಟ್ಟೆ
ಕೂಡಿಸಿದಷ್ಟೇ ಕಳೆಯುವುದೂ ಈ  ಜಗದ ನಿಯಮ
ಎಲ್ಲದಕ್ಕ್ಕೂ ಕಾರಣ ನಾನಲ್ಲ, ಆ ಮಹಾಮಹಿಮ!


ಎಲ್ಲವೂ ಕಾಲಹರಣಕ್ಕಾಗಿ!

08 ಜೂನ್ 14

ಸಖೀ,
ಪ್ರೀತಿಸುತಿರುವಾಗ ಸದಾ ಮರೆಯಲ್ಲೇ ಗುಸುಗುಸು
ಮನ ಮುರಿದಾಗ ಗೋಡೆಗಳ ಮೇಲೆಲ್ಲಾ ಮುನಿಸು
ಪ್ರೀತಿಯ ಕತೆಗಳಿಲ್ಲಿ ಬೇಕಾಗಿಲ್ಲ ಯಾರಿಗೂ ಜಗದಿ 
ಮುನಿದಾಗ ವ್ಯಥೆಗೂ ಕಿವಿಕೊಡುವವರಾರಿಲ್ಲ ನಿಜದಿ

ಅದನ್ನೂ ಮೆಚ್ಚುತ್ತಾರೆ, ಇಲ್ಲೆಲ್ಲಾ ಮೆಚ್ಚುತ್ತಾರೆ ಇದನ್ನೂ 
ಅವರ ಕಾಲಹರಣಕ್ಕೆ ಬಳಸುತ್ತಾರೆಮ್ಮ ಮಾತುಗಳನ್ನು
ಪ್ರೀತಿಸುವವರ ಬಾಳು ಮುಂದೇನಾಯ್ತೆಂಬ ಚಿಂತೆಯಿಲ್ಲ
ಮುನಿದು ಕೂತವರನ್ನು ಸಂತೈಸಲು ಬರುವವರೂ ಇಲ್ಲ!