ಜನರು ಏನೇನೋ ಮಾತಾಡ್ತಾರೆ!

28 ಆಕ್ಟೋ 10

ಅಮರ್ ಪ್ರೇಮ್ ಎನ್ನುವ ಹಿಂದೀ ಚಲನಚಿತ್ರದ ಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ.

ಜನ ಏನೇನೋ ಮಾತಾಡ್ತಾರೆ, ಮಾತಾಡ್ತಾ ಇರುವುದೇ ಅವರ ಕೆಲಸ
ಬಿಡು, ವ್ಯರ್ಥದ ಈ ಮಾತುಗಳಲ್ಲಿ ಕಳೆಯದಿರಲೀ ರಾತ್ರಿಯ ಪ್ರತಿ ನಿಮಿಷ

ಈ ಜಗದ ಕೆಲ ನಿಯಮಗಳೇ ಹೀಗೆ, ಪ್ರತೀ ಮುಂಜಾನೆಯೂ ಕತ್ತಲಾಗಿ ಕರಗಿಹೋಗಿದೆ
ನೀನ್ಯಾರು, ನಿನಗಾವ ಹೆಸರಿದೆ, ಆ ಸೀತಾಮಾತೆಗೂ ಇಲ್ಲಿ ಅವಮಾನವಾಗಿದೆ
ಮತ್ಯಾಕೆ ಸಾಂಸಾರಿಕ ಮಾತುಗಳಿಂದ ನಿನ್ನೀ ಕಣ್ಣು ತೇವಗೊಂಡಿದೆ?

ನಾವು ಮೋಜುಮಸ್ತಿಯಲ್ಲೇ ಮೈಮರೆತಿಹೆವೆಂದು ನಮ್ಮನ್ನು ತೆಗಳುವುದ ಕೇಳಿದ್ದೇವೆ
ಆದರೆ ತೆಗಳುವವರೇ ಕದ್ದು ಮುಚ್ಚಿ ಇದೇ ಬೀದಿಯಲ್ಲಿ ಅಡ್ಡಾಡುವುದನ್ನೂ ನೋಡಿದ್ದೇವೆ
ಇದು ಸುಳ್ಳಲ್ಲ ನಿಜವಾದ ಮಾತು, ನೀನೇ ಹೇಳೀಗ, ಈ ಮಾತು ನಿಜವಲ್ಲವೇ?
*****

Hindi Lyrics:
kuchh to log kahenge, logaane kaa kaam hain kahanaa
chhodo, bekaar kee baato mein , kahee beet naa jaaye rainaa

kuchh reet jagat kee ayesee hai
har yek subah kee shaam huyee
too kaun hai, teraa naam hain kyaa
seetaa bhee yahaa badanaam huyee
fir kyo sansaar kee baaton se
bheeg gaye tere nainaa

hum ko jo taane dete hai
hum khoye hain in rang raliyon me
hum ne un ko bhee chhup chhup ke
aate dekhaa in galiyon me
ye sach hain zoothhee baat nahee
tum bolo ye sach hain naa

**********


ಕಡ್ಡಾಯ ಮತದಾನವೇ ಪರಿಹಾರವಲ್ಲ!

27 ಆಕ್ಟೋ 10

 

ಇಂದಿನ ಈ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಆಗಬೇಕಾದರೆ ಕಡ್ಡಾಯ ಮತದಾನದ ಕಾನೂನು ಜಾರಿಯಾಗಬೇಕು ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕೇಳಿಬರುತ್ತಿವೆ. ಆದರೆ, ಕಡ್ಡಾಯ ಮತದಾನದಿಂದ, ಈ  ಕುಲಗೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಕಿಂಚಿತ್ತಾದರೂ ಬದಲಾವಣೆ ಆದೀತೆನ್ನುವುದು ಕನಸಿನ ಮಾತು. ವಿದ್ಯಾವಂತರು ಮತನೀಡದೇ ಉಳಿಯುವುದರಿಂದ, ಯೋಗ್ಯ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತು, ಅಯೋಗ್ಯರು ಗೆದ್ದುಬಂದಿದ್ದಾರೆನ್ನುವುದು ಸತ್ಯಕ್ಕೆ ದೂರವಾದ ಮಾತು.

ಅದು, ಸದ್ಯಕ್ಕೆ ನಮ್ಮ ಮುಂದಿರುವ ಸಮಸ್ಯೆಯೇ ಅಲ್ಲ. ಮುಖ್ಯ ಸಮಸ್ಯೆಯೆಂದರೆ, ಯೋಗ್ಯ ಅಭ್ಯರ್ಥಿಗಳೇ ರಾಜಕೀಯ ಕಣಕ್ಕೇ ಧುಮುಕುತ್ತಿಲ್ಲ ಎನ್ನುವುದು. ಪಕ್ಷಭೇದವಿಲ್ಲದೇ ಎಲ್ಲಾ ಪಕ್ಷಗಳಿಂದಲೂ ಚುನಾವಣಾ ಕಣಕ್ಕೆ ಇಳಿಸಲ್ಪಡುತ್ತಿರುವ ಅಭ್ಯರ್ಥಿಗಳು ಒಂದೋ ರಟ್ಟೆ ಬಲವುಳ್ಳವರು ಅಥವಾ ಹಣಬಲವುಳ್ಳವರು. ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಕನಿಷ್ಠ ಅರ್ಹತೆ ಅಥವಾ ಯೋಗ್ಯತೆಯ ಪರಿಗಣನೆ ಇರುವುದೇ ಇಲ್ಲ. ಯಾವನೇ ಅಭ್ಯರ್ಥಿ ಆಯಾ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಯಾಗಿರಬೇಕು. ಅಲ್ಲದೇ ಗೆಲ್ಲುವುದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುವವನಾಗಿರಬೇಕು. ಅಂಥ ಅಭ್ಯರ್ಥಿಗಳು ಪೈಪೋಟಿಗೆ ನಿಂತವರಂತೆ ತಮ್ಮಿಂದಾದಷ್ಟು ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ಗೆದ್ದು ಬಂದನಂತರ ತಾನು ಖರ್ಚು ಮಾಡಿದ ಹಣದ ಹತ್ತರಷ್ಟು ಸಂಪಾದನೆ ಮಾಡುವುದೊಂದೇ ಆತನ ಮೂಲ ಉದ್ದೇಶವಾಗಿರುತ್ತದೆ. ಅದು ನ್ಯಾಯವೇ ಆಗಿದೆ. ಯಾವೊಬ್ಬನೂ ತಾನು ಖರ್ಚುಮಾಡಿದ್ದನ್ನು ವಾಪಾಸು ಗಳಿಸುವ ಪ್ರಯತ್ನ ಮಾಡದೇ ಉಳಿದರೆ ದಡ್ದನೆನಿಸಿಕೊಳ್ಳುತ್ತಾನೆ. ವಿದ್ಯಾವಂತ ಮತದಾರನ ಮಂದೆ ಹೆಚ್ಚಿನ ಆಯ್ಕೆಗಳೇ ಇಲ್ಲ. ಆತನ ಪಾಲಿಗೆ ಎಲ್ಲರ ಮುಖಗಳೂ ಒಂದೇ ತೆರನಾಗಿರುತ್ತವೆ. ಎಲ್ಲಾ ಪಕ್ಷಗಳೂ ಒಂದೇ ಆಗಿರುತ್ತವೆ. ಆತ ಯಾರಿಗೆ ಮತ ನೀಡಿದರೂ ಆತನ ಜೀವನ ಶೈಲಿಯಲ್ಲಿ ಹೆಚ್ಚಿನ ಬದಲಾವಣೆಯ ನಿರೀಕ್ಷೆಯೇ ಇರುವುದಿಲ್ಲ. ಇನ್ನು ಅವಿದ್ಯಾವಂತ ಮತದಾರರ ಪಾಲಿಗೂ ಆಯ್ಕೆಗಳಿಲ್ಲ. ಅವರ ಪಾಲಿಗೆ ಇರುವುದು ತಮ್ಮ ಕೈಗೆ ಸಿಕ್ಕಿದ ನೋಟಿನ ಮತ್ತು ಆ ನೋಟು ನೀಡಿದವರ ಗುರುತು ಮಾತ್ರ. ಪಕ್ಷ ಮತ್ತು ಅಭ್ಯರ್ಥಿ ಇವೆಲ್ಲ್ಲಾ ಅವರ ಪಾಲಿಗೆ ಗೌಣ.

ಹಾಗಾದರೆ ಇಂದಿನ ಆವಶ್ಯಕತೆ ಏನು? 

ನಮ್ಮ ನಾಡಿನಲ್ಲಿ ಮಾಮೂಲಿ ಜವಾನನಿಂದ ಮತ್ತು ಸೈನಿಕನಿಂದ ಹಿಡಿದು, ಯಾವುದೇ ಉನ್ನತ ದರ್ಜೆಯ ಕೆಲಸಕ್ಕೆ ಸೇರಬೇಕಾದರೂ ಕನಿಷ್ಟ ವಿದ್ಯಾರ್ಹತೆಯ ಅಗತ್ಯ ಇದೆ. ಹಾಗಾಗಿ ಯಾವುದೇ ಚುನಾವಣೆಯಲ್ಲಿ  ಅಭ್ಯರ್ಥಿಯಾಗಲೂ ಕನಿಷ್ಠ ವಿದ್ಯಾರ್ಹತೆ ನಿರ್ಧರಿತವಾಗಬೇಕು. ಅಂತೆಯೇ ನಿವೃತ್ತಿಗೂ ವಯಸ್ಸು ನಿರ್ಧರಿತವಾಗಬೇಕು. ಹತ್ತಾರು ಪಕ್ಷಗಳ ಪ್ರಸ್ತುತ ಪದ್ಧತಿಗಿಂತ ದ್ವಿಪಕ್ಷ ಪದ್ಧತಿ ಜಾರಿಯಾಗಬೇಕು. “ಒಂದೋ ಇಲ್ಲಿರು. ಇಲ್ಲಾ ಅಲ್ಲಿರು. ಎರಡೂ ಇಲ್ಲಾಂದ್ರೆ ತೆಪ್ಪಗೆ ತನ್ನ ಮನೆಯಲ್ಲಿರು”, ಅನ್ನುವ ಪದ್ಧತಿ ಬರಬೇಕು . ಚುನಾವಣೆಯಲ್ಲಿ ಒಂದು ಪಕ್ಷದಿಂದ ಸ್ಪರ್ಧಿಸಿದ ಅಭ್ಯರ್ಥಿ, ಕನಿಷ್ಟ ಮುಂದಿನ ಮಹಾ ಚುನಾವಣೆಯ ತನಕ ಅದೇ ಪಕ್ಷದ ಸದಸ್ಯನಾಗಿರಬೇಕು. ಆರಿಸಿ ಹೋದ ಅಭ್ಯರ್ಥಿ ತನ್ನ ಕ್ಷೇತ್ರದ ಜನರ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡುವವನಾಗಿರಬೇಕು. ತನ್ನ ಕ್ಷೇತ್ರ ಮತ್ತು ಪಕ್ಷಕ್ಕೆ ನಿಷ್ಠಾವಂತನಾಗಿರಬೇಕು. ಮುಂದಿನ ಮಹಾಚುನಾವಣೆಯ ತನಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬಾರದು. ಹಾಗೊಮ್ಮೆ ನೀಡಿದರೆ ಮುಂದಿನ ಮೂರು ಮಹಾಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳಬೇಕು. ಇನ್ನೊಂದು ಪ್ರಮುಖವಾದ ಆವಶ್ಯಕತೆ ಏನೆಂದರೆ ಯಾವುದೇ  ಚುನಾವಣೆಗಳಲ್ಲಿ, ಯಾರಿಗೂ ಮತನೀಡದೇ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಸೌಲಭ್ಯವನ್ನು ಮತದಾರನಿಗೆ ಒದಗಿಸಿರಬೇಕು. ಹಾಗೆ ತನ್ನ ಕ್ಷೇತ್ರದ ಮತದಾರರಿಂದ ತಿರಸ್ಕೃತರಾದ ಅಭ್ಯರ್ಥಿಗಳು ಮುಂದಿನ ಮೂರು ಮಹಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳಬೇಕು. ಓರ್ವ ಸದಸ್ಯ ಹಠಾತ್ ನಿಧನಾರಾದಾಗ ಅಥವಾ ಅನಾರೋಗ್ಯಪೀಡಿತನಾಗಿ ರಾಜಕೀಯ ನಿವೃತ್ತನಾದಾಗ, ಆತನ ಸಂಬಂಧಿಕರಿಗೆ ಅವಕಾಶವನ್ನು ಕಲ್ಪಿಸುವಾಗಲೂ ಅರ್ಹತೆಯ ಮಾನದಂಡವನ್ನು ಉಪಯೋಗಿಸಿರಲೇಬೇಕು. ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ಆಸ್ತಿಪಾಸ್ತಿಗಳ ವಿವರವನ್ನು ಪ್ರತಿ ವರ್ಷ ಆಯಾ ಕ್ಶೇತ್ರದ ಮತದಾರರ ಮುಂದೆ, ಸೂಕ್ತ ದಾಖಲೆಗಳ ಸಮೇತ  ಬಹಿರಂಗಪಡಿಸಬೇಕು.

ಈ ಎಲ್ಲಾ ವ್ಯವಸ್ಥೆ ಜಾರಿಯಾದ ನಂತರ ಕಡ್ಡಾಯ ಮತದಾನದ ಕಾನೂನು ಕೂಡ ಜಾರಿಯಾಗಬೇಕು. ಮತದಾನ ಮಾಡದವರಿಗೆ ಶಿಕ್ಷೆ ವಿಧಿಸಬೇಕು. ಆಗಲಷ್ಟೇ, ಮತದಾನ ಮಾಡದ ವಿದ್ಯಾವಂತ ಮತದಾರರನ್ನು ಸಾರಸಗಟಾಗಿ ಎಲ್ಲರೂ ದೂರಬಹುದು. ಎಲ್ಲಿಯ ತನಕ ಈ ಭ್ರಷ್ಟ ರಾಜಕೀಯ ವ್ಯವಸ್ಥೆ ಹೀಗೆಯೇ ಮುಂದುವರಿಯುತ್ತದೆಯೋ, ಅಲ್ಲಿಯತನಕ, ಮತದಾನ ಮಾಡದ ವಿದ್ಯಾವಂತ ಮತದಾರರನ್ನು ಸುಖಾಸುಮ್ಮನೇ ದೂರಿ ಏನೂ ಪ್ರಯೋಜನವಿರದು.

*****

ಈ ಬರಹ ಉದಯವಾಣಿಯ ಮಣಿಪಾಲ, ಹುಬ್ಬಳ್ಳಿ ಮತ್ತು ಮುಂಬಯಿ ಆವೃತ್ತಿಗಳಲ್ಲಿ,

ಬುಧವಾರ, ೨೭ ಅಕ್ಟೋಬರ್ ೨೦೧೦ ರಂದು ಪ್ರಕಟಗೊಂಡಿರುತ್ತದೆ.


ನಾನು ಏನು ಮಾಡಲಿ, ಹೇಳೋ…!

22 ಆಕ್ಟೋ 10

ಇಲ್ಲ ಕಣೇ, ಇನ್ನು ನನ್ನಿಂದ ಆಗೋಲ್ಲ. ಎಷ್ಟು ದಿನ ಅಂತ ಹೀಗೆಯೇ ತಡೆದುಕೊಂಡಿರಲಿ ಹೇಳು. ಇದರಿಂದ ನನಗೂ ಕಷ್ಟ,  ನಿನಗೂ ಕಷ್ಟ. ಹೇಳೋಣ. ಹೇಳಿ ಬಿಡೋಣ. ಒಂದೋ ನೀನೇ ಹೇಳು. ಇಲ್ಲಾಂದ್ರೆ ನಾನೇ ಹೇಳ್ತೇನೆ. ನಮ್ಮ ಮನೆಯಲ್ಲಂತೂ ಯಾವ ವಿರೋಧವೂ ಇರೋಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ಯಾಕಂದ್ರೆ ನಿನ್ನ ಕಂಡ್ರೆ ನನ್ನ ಅಮ್ಮ, ಅಪ್ಪ, ಅಣ್ಣ, ಅಕ್ಕ ಎಲ್ಲರಿಗೂ ಇಷ್ಟ. ಅದು ನಿನಗೂ ಗೊತ್ತಲ್ವಾ? ನಿಮ್ಮ ಮನೆಯಲ್ಲೂ ಸಮಸ್ಯೆ ಹುಟ್ಟಿಕೊಳ್ಳೋ ಸಾಧ್ಯತೆಗಳೇ ಇಲ್ಲ. ಒಂದೇ ಜಾತಿಯವರಾದ್ದರಿಂದ, ಜಾತಿಯ ಸಮಸ್ಯೆಯೂ ಎದುರಾಗುವುದಿಲ್ಲ. ಅಲ್ಲದೇ, ನನ್ನ ಮೇಲೆ ನಿಮ್ಮ ಮನೆಯವರಿಗೆ ಅಭಿಮಾನ ಇದೆ ಅಂತ ನಮ್ಮಿಬ್ಬರಿಗೂ ಗೊತ್ತು.

ನಿಮ್ಮ ಮತ್ತು ನಮ್ಮ ಮನೆಯವರಿಗೆ ಪರಸ್ಪರ ಪರಿಚಯವೂ ಇದೆ. ಮತ್ಯಾಕೆ ನಾವು ಕಾಯುತ್ತಾ ಇರಬೇಕು? ಯಾರಾದ್ರೂ ಅವರಾಗಿಯೇ ಬಂದು ನಮ್ಮನ್ನು, “ನೀವಿಬ್ಬರೂ ಮದುವೆ ಆಗ್ತೀರಾ?”, ಅಂತ ಕೇಳ್ತಾರೇನೇ?  ಬೇಕಿದ್ರೆ ನನ್ನ ರಜೆಯನ್ನು ಒಂದು ತಿಂಗಳ ವಿಸ್ತರಿಸುವಂತೆ ಈಗಲೇ “ಈ ಮೇಲ್” ಮೂಲಕ ಅರ್ಜಿ ಕಳಿಸ್ತೇನೆ. ರಜೆಯ ಬಗ್ಗೆ ಸಮಸ್ಯೆಯೇ ಇಲ್ಲ ಕಣೇ. ಮದುವೆ ಮುಗಿಸಿಕೊಂಡು, ನಿನ್ನನ್ನು ಕರೆದುಕೊಂಡೇ ಹೋಗ್ತೇನೆ. ಯಾಕೆ ಬೇಡಾ ಅಂತೀಯಾ? ನಿನ್ನ ಮನಸ್ಸಿನಲ್ಲಿ ಏನಿದೆ ಅಂತಾದ್ರೂ ಹೇಳೇ…

***

ಇಲ್ಲ ಕಣೋ… ಅವಸರ ಮಾಡಬೇಡ. ನಿನಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ ಅಂತ ನನಗೂ ಗೊತ್ತು, ನನ್ನಮ್ಮನಿಗೂ ಗೊತ್ತು. ಅಲ್ಲದೇ ನಮ್ಮಿಬ್ಬರ ಪ್ರೀತಿಯ ವಿಷಯ ನಿನ್ನ ಅಕ್ಕನಿಗೂ ಗೊತ್ತು. ಸಮಸ್ಯೆ ಅದಲ್ಲ. ಸ್ವಲ್ಪ ದಿನ ತಾಳು. ಎಲ್ಲಾ ಸರಿಹೋಗುತ್ತೆ. ಈ ಸಾರಿ ಹೋಗು. ಮುಂದಿನ ಸಾರಿ ಮೇ ತಿಂಗಳಲ್ಲಿ ನೀನು ರಜೆಯಲ್ಲಿ ಊರಿಗೆ ಬರುವ ಮೊದಲೇ ನಾನು ಎಲ್ಲರಿಗೂ ಹೇಳಿ, ಎಲ್ಲರನ್ನೂ ತಯಾರಾಗಿ ಇರಿಸಿದ್ರೆ ಸಾಕು ತಾನೆ. ನೆಮ್ಮದಿಯಿಂದ ಹೋಗ್ಬಿಟ್ಟು ಬಾ.

***

ಅಂದು ನಾನು, ಬೇಡ ಬೇಡ, ಅವಸರ ಬೇಡ ಮದುವೆಗೆ ಅಂತ ಅಂತಿದ್ದದ್ದು ಯಾಕೆ ಅಂತ ನನಗೇ ಗೊತ್ತಿರಲಿಲ್ಲ ಕಣೋ…

ನಿನ್ನನ್ನು ನಾನು ಅಂದು ಕೊನೆಯ ಬಾರಿಗೆ ಬೀಳ್ಕೊಡುತ್ತಿದ್ದೆ ಎನ್ನುವುದರ ಅರಿವು ನನಗಿತ್ತೇ? ಛೇ… ಇಲ್ಲ ಕಣೋ… ಹಾಗಿರಲು, ಹೇಗೆ ಸಾಧ್ಯ ಹೇಳು

ನಾನು ನಿನ್ನ ವಿಧವೆಯಾಗಿ ಬಾಳಬೇಕಾಬಹುದೇನೋ ಅನ್ನುವ ಭಯ ಅಥವಾ ಅನುಮಾನವಾದ್ರೂ ನನಗಿತ್ತೇ? ಛೆ… ಇಲ್ಲ ಕಣೋ ಹಾಗೇ ಯಾರಾದ್ರೂ ಮದುವೆಗೆ ಮುಂಚೇನೇ ಯೋಚಿಸ್ತಾರೇನೋ…

ಮತ್ಯಾಕೆ, ನೀನೆಷ್ಟು ಗೋಗರೆದರೂ ನಾನು ಒಪ್ಪಿಕೊಳ್ಳದೇ ಉಳಿದುಬಿಟ್ಟೆ?

ನಾನು ನಿನ್ನನ್ನು ಅಂದು ಮದುವೆಯಾಗಿ ನಿನ್ನ ಜೊತೆಗೆ ತೆರಳಿದ್ದರೆ, ಈ ನತದೃಷ್ಟ ವಿಮಾನದಲ್ಲಿ, ನೀನಾಗಲೀ, ನಿನ್ನ ಜೊತೆಗೆ ನಾನಾಗಲೀ, ಮೊನ್ನೆ ಊರಿಗೆ ಬರುತ್ತಲೇ ಇದ್ದಿರಲ್ಲವೇನೋ… ಅಲ್ವೇನೋ?

ನನಗೆ ಪ್ರೀತಿ ಅಂದರೆ ಏನು ಅನ್ನೋದು ಗೊತ್ತಾಗಿದ್ದೇ ನಿನ್ನಿಂದ ಕಣೋ…

ಆದರೆ ಅದರಿಂದ ನನಗೇನು ಪ್ರಯೋಜನವಾಯ್ತು ಹೇಳು.

ನನಗೆ ಪ್ರೀತಿ ಪಾಠ ಹೇಳ್ಕೊಟ್ಟವನೇ ಆ ವಿಮಾನದೊಂದಿಗೇ ಸುಟ್ಟು ಕರಕಲಾಗಿ ಈ ಲೋಕದಿಂದ ತೆರಳಿಬಿಟ್ಟೆ.

ಇನ್ನು ನಾನು ಯಾರನ್ನು ಪ್ರೀತಿಸಲಿ?  ಹೇಗೆ ಪ್ರೀತಿಸಲಿ?

ನನಗೀಗ ಪ್ರೀತಿ ಅನ್ನೋದು ಏನೆಂದು ಗೊತ್ತಿದೆಯಾದರೂ, ನನ್ನಿಂದ, ಇನ್ನು ಇನ್ನೊಬ್ಬನನ್ನು ಪ್ರೀತಿಸಲು ಸಾಧ್ಯವೇ ಹೇಳು…

ಮದುವೆಯಾಗದೇ ಉಳಿದು ಬಿಡಲೇ ನಾನು…?

ನನ್ನ ಅಮ್ಮನಿಗೆ ಮತ್ತು ನಿನ್ನ ಅಕ್ಕನಿಗೆ ಅದರ ಕಾರಣ ಗೊತ್ತಿದೆಯಾದರೂ, ಅವರು ಯಾರ ಮುಂದೆಯೂ ಬಾಯಿ ಬಿಡೋಲ್ಲ ಕಣೋ. ಬಾಯಿಬಿಟ್ಟರೆ ನನ್ನ ಮುಂದಿನ ಜೀವನ ನೀರಸವಾಗಿ, ಅರ್ಥಹೀನವಾಗಿ ಉಳಿದು ಬಿಡುತ್ತದೆ ಎನ್ನುವ ಭಯ ಅವರಿಬ್ಬರಿಗೂ ಇರಬಹುದು. ಅಲ್ಲದೆ, ಹಾಗೊಂದು ವೇಳೆ, ಅವರಲ್ಲಿ ಆ ಭಯ ಇದ್ದರೂ, ಅದು ನಿಜವೇ ಅಲ್ವೇನೋ.

ಇಲ್ಲಾ, ನನ್ನ ಅಮ್ಮ ಅಪ್ಪ ತೋರಿಸಿದ ಗಂಡನ್ನು ಮದುವೆಯಾಗಿ ಆತನ ಮನೆಗೆ ತೆರಳಲೇ ನಾನು …?

ನಿನ್ನಿಂದ ಕಲಿತಿದ್ದ ಪ್ರೀತಿಯನ್ನು, ನಾನು ಅಲ್ಲಿ, ಆತನಿಗೆ ತೋರಿಸಲಾಗದೆ, ಆತನ ಪ್ರೀತಿಯನ್ನು ಮನಬಿಚ್ಚಿ ಸ್ವೀಕರಿಸಲೂ  ಆಗದೆ,  ಈ ಜನ್ಮಪೂರ್ತಿ ನಿರ್ಭಾವುಕತೆಯಿಂದ ಜೀವನ ಸಾಗಿಸಲೇ?

ನಾನು ಜೀವಚ್ಛವವಾಗಿ ಬಾಳುತ್ತಿರಲೇ…?

ಇಲ್ಲಾ… ನಿನ್ನನ್ನು ಸೇರಲು ನಾನೂ ಬಂದು ಬಿಡಲೇ…?

ಹೇಳೋ… ಹೇಳೋ…

ಏನು ಮಾಡಲಿ ನಾನು?

ಒಂದೇ ಒಂದು ಬಾರಿ ಬಂದು, ನನ್ನ ಕಿವಿಯಲ್ಲಿ ಹೇಳಿ ಹೋಗೋ… ಹೇಳೋ…ಹೇಳೋ…ಬಾರೋ… ಹೇಳೋ…
***************


ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ!

22 ಆಕ್ಟೋ 10

 

ಇನ್ನೊಂದು ಹಿಂದೀ ಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ.

ಚಿತ್ರ: ಮಾಸೂಮ್ (೧೯೮೩)
ನಿರ್ದೇಶಕ: ಶೇಖರ್ ಕಪೂರ್
ಸಾಹಿತ್ಯ: ಗುಲ್ಝಾರ್
ಸಂಗೀತ: ರಾಹುಲ್ ದೇವ್ ಬರ್ಮನ್
ಹಾಡಿದವರು: ಅನೂಪ್ ಘೋಶಾಲ್

ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ
ಆಚ್ಚರಿಗೊಂಡಿಹೆನು ನಾನು
ಆಚ್ಚರಿಗೊಂಡಿಹೆನು ನಾನು

ನಿನ್ನ ಮುಗ್ಧ ಪ್ರಶ್ನೆಗಳಿಂದ
ನಾ ಸೋತುಹೋಗಿಹೆನು
ನಿಜಕೂ ನಾ ಸೋತುಹೋಗಿಹೆನು

ಯೋಚಿಸಿರಲೇ ಇಲ್ಲ, ಜೀವಿಸಲು ನೋವುಗಳ ಹೊರೆ ಹೊರಬೇಕಾದೀತೆಂದು
ನಕ್ಕರೆ, ಆ ನಗುವಿನ ಋಣವನ್ನೂ ತೀರಿಸಬೇಕಾದೀತೆಂದು
ನಕ್ಕಾಗಲೆಲ್ಲಾ ಅನಿಸುತ್ತಿದೆ, ಈ ತುಟಿಗಳ ಮೇಲೆ ಋಣಭಾರ ಹೊತ್ತಿರುವೆನೆಂದು

ಇಂದು ಈ ಕಂಗಳು ತುಂಬಿವೆಯಾದರೆ ಹನಿಗಳ ಮಳೆಯಾಗಬಹುದು
ನಾಳೆ ಈ ಕಂಗಳು ಇವುಗಳ ನಿರೀಕ್ಷೆಯಲ್ಲಿಯೇ ಕಾಯುತಿರಬಹುದು
ಅದೆಲ್ಲಿ ಕಾಣೆಯಾಯ್ತೋ
ಅದೆಲ್ಲಿ ಕಳೆದುಹೋಯ್ತೋ
ಕಣ್ಣೀರ ಒಂದು ಹನಿಯ ನಾ ಬಚ್ಚಿಟ್ಟಿದ್ದೆನಲ್ಲಾ …

ಜೀವನದ ನೋವುಗಳು ಅರ್ಥೈಸಿದವೆನಗೆ ಹೊಸ ಸಂಬಂಧಗಳನ್ನು
ಸುಡುಬಿಸಿಲಿನಲ್ಲಿ ಸಿಕ್ಕವರೂ ನೀಡಿದರು ನನಗೆ ತಂಪಾದ ನೆರಳನ್ನು

ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ
ಆಚ್ಚರಿಗೊಂಡಿಹೆನು ನಾನು
ಆಚ್ಚರಿಗೊಂಡಿಹೆನು ನಾನು

ನಿನ್ನ ಮುಗ್ಧ ಪ್ರಶ್ನೆಗಳಿಂದ
ನಾ ಸೋತುಹೋಗಿಹೆನು
ನಿಜಕೂ ನಾ ಸೋತುಹೋಗಿಹೆನು
******************

ಮೂಲ ಸಾಹಿತ್ಯ:
tujhase naaraaz nahi zindagi,
hairaan hoon main o hairaan hoon main
tere masoom savalon se pareshaan hooN main o pareshaan hoon main

jeene ke liye socha hi na tha, dard sambhalane honge
muskuraoon to, muskurane ke karz utaarne honge
muskuraoon kabhi to lagata hai jaise hontonn pe karz rakhaa hai
tujhase …

aaj agar bhar ayi hai, boondein baras jaayengi
kal kya pata inke liye aakhen taras jayengi
jaane kahan gum kahan khoya ek aansu chhupake rakha tha
tujhase …

zindagi tere gum ne hamain rishte naye samajhaye
mile jo hamain dhoop main mile chhaanv ke thande saaye
o tujhase …


ನಾವು ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು…?!

20 ಆಕ್ಟೋ 10

೧೯೮೦ರ ದಶಕದ ಆದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ರೇಖಾ ನಟಿಸಿರುವ ಸಿಲ್‍ಸಿಲಾ ಚಿತ್ರದ, ಬಹು ಪ್ರಸಿದ್ಧಿಗೊಂಡಿದ್ದ, ಸಂಭಾಷಣೆಗಳನ್ನೊಳಗೊಂಡ ಒಂದು ಹಾಡಿನ ಭಾವಾನುವಾದದ ಒಂದು ಪ್ರಯತ್ನ ಇಲ್ಲಿದೆ:

ನಾಯಕ:

ನನ್ನೀ ಏಕಾಂತ ಮತ್ತು ನಾನು ಸತತ ಸಂಭಾಷಣೆಯಲ್ಲಿ ನಿರತವಾಗಿರುತ್ತೇವೆ…,
ನೀನು ಇದ್ದಿದ್ದರೆ ಹೇಗಿರುತ್ತಿತ್ತು, ನೀನು ಆ ಮಾತಾಡುತ್ತಿದ್ದೀ, ನೀನು ಈ ಮಾತಾಡುತ್ತಿದ್ದೀ…,
ನೀನೀ ಮಾತಿನಿಂದ ಎಷ್ಟು ನೊಂದಿರುತ್ತಿದ್ದೀ, ನೀನಾ ಮಾತಿನಿಂದ ಎಷ್ಟೊಂದು ನಕ್ಕಿರುತ್ತಿದ್ದೀ…,
ನೀನು ಇದ್ದಿದ್ದರೆ ಹೀಗಾಗುತ್ತಿತ್ತು, ನೀನು ಇದ್ದಿದ್ದರೆ ಹಾಗಾಗುತ್ತಿತ್ತು
ನನ್ನೀ ಏಕಾಂತ ಹಾಗೂ ನಾನು ಸತತ ಸಂಭಾಷಣೆಯಲ್ಲಿ ನಿರತವಾಗಿರುತ್ತೇವೆ…,

ನಾಯಕಿ:

ಹೀಗೇ ಜೊತೆ ಜೊತೆಯಲಿ ಸಾಗುತ್ತಾ
ನಾವು ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು
ನಿನ್ನ ಬಾಹುಗಳಲ್ಲಿ ಬಂಧಿಯಾಗಿರುವ ನನ್ನ
ದೇಹ-ಪ್ರಾಣಗಳೆರಡೂ ಕರಗಿಹೋಗುತಿಹುದಿಂದು

ನಾಯಕ:

ಇದು ರಾತ್ರಿಯೋ ಯಾ ಬಿಡಿಸಿಟ್ಟ ನಿನ್ನ ಕೇಶರಾಶಿಯೋ?
ಇದು ಬೆಳದಿಂಗಳೋ ಯಾ
ನಿನ್ನ ಕಂಗಳ ಹೊಳಪಿಂದ ನನ್ನೀ ರಾತ್ರಿ ತೊಳೆಯಲ್ಪಟ್ಟಿದೆಯೋ
ಇದು ಚಂದಿರನೋ ಯಾ ನಿನ್ನ ಕೈಗಳಲಿ ಹೊಳೆವ ಬಳೆಗಳೋ
ನಕ್ಷತ್ರಗಳ ರಾಶಿಯೋ ಯಾ ನಿನ್ನ ಸೆರಗಿನಲ್ಲಿನ ಚಿತ್ತಾರವೋ
ತಂಗಾಳಿಯ ತಂಪೋ ಯಾ ಇದು ನಿನ್ನ ದೇಹದ ಕಂಪೋ
ಈ ತರಗೆಲೆಗಳ ಸದ್ದೂ ಗುಟ್ಟಾಗಿ ನನ್ನಲ್ಲೇನೋ ನುಡಿಯುವಂತಿಹುದು

ನೀನು ಇಲ್ಲ, ನೀನು ಎಲ್ಲೂ ಇಲ್ಲ ಎನ್ನುವ ಸತ್ಯದ ಅರಿವಿನ
ಮೆಲುಕಿನಲ್ಲಿ ನಾನು ಮೌನಿಯಾಗಿ ಆಲೋಚಿಸುತ್ತೇನಾದರೂ
ನನ್ನ ಈ ಮನವೇಕೆ ಸದಾ ನುಡಿಯುತಿಹುದು
ನೀನು ಇಲ್ಲೇ ಇರುವೆ, ಇಲ್ಲೆಲ್ಲೋ ಇರುವೆಯೆಂದು?

ನಾಯಕಿ:

ನೀನು ದೇಹವಾದರೆ ನಾನಿನ್ನ ನೆರಳಿನಂತೆ
ನೀನಿಲ್ಲವಾದರೆ ನಾನೆಲ್ಲಿ ಹೇಗೆ ಇರುವೆ
ನನ್ನನ್ನು ಪ್ರೀತಿಸುವ ಓ ನನ್ನ ನಲ್ಲನೇ
ನೀನೆಲ್ಲಿರುವೆಯೋ ನಾನಲ್ಲೇ ಇರುವೆ
ಈ ಹಾದಿಯಲ್ಲೇ ಮಂದುವರಿದು ನಮ್ಮೀ
ಮಿಲನ ಆಗಲೇಬೇಕಾಗಿತ್ತು ಇನಿಯಾ

ಹೀಗೇ ಜೊತೆ ಜೊತೆಯಲಿ ಸಾಗುತ್ತಾ
ನಾವು ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು

ನನ್ನ ಉಸಿರು ಪ್ರತಿ ಉಸಿರೂ ಘಮ್ಮೆನ್ನುತ್ತಿದೆ
ಸುಗಂಧವನ್ನು ಸೂಸುವ ಶ್ರೀಗಂಧದಂತೆ
ನಿನ್ನ ಪ್ರೀತಿಯೇ ನನಗೆ ಬೆಳದಿಂಗಳಂತೆ
ನನ್ನ ಮನವೇ ಆ ಬೆಳಕಿಗಂಗಳದಂತೆ
ಈ ಸಂಜೆ ಇನ್ನೂ ಮಧುರವಾಯಿತು
ಕೊನೆಗೊಳ್ಳುತ್ತಾ ಬರುತ್ತಿದ್ದಂತೆ

ಹೀಗೇ ಜೊತೆ ಜೊತೆಯಲಿ ಸಾಗುತ್ತಾ
ನಾವು ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು

ನಾಯಕ:

ನಿಸ್ಸಹಾಯಕ ಸ್ಥಿತಿ ಇಲ್ಲೂ ಇದೆ ಅಲ್ಲೂ ಇದೆ
ಏಕಾಂತದ ಈ ರಾತ್ರಿ ಇಲ್ಲೂ ಇದೆ ಅಲ್ಲೂ ಇದೆ
ನುಡಿಯಲೇ ಬೇಕಾದ ಮಾತುಗಳಿವೆ ನೂರು,
ಆದರೆ ಯಾರಲ್ಲಿ ನುಡಿಯಲಿ?
ಅದೆಲ್ಲಿಯತನಕ ಮೌನಿಯಾಗಿ ಸಹಿಸಿಕೊಂಡಿರಲಿ?
ಈ ಮನಸ್ಸು ಹೇಳುತ್ತಿದೆ ಇಂದು ಈ ಸಮಾಜದ
ಎಲ್ಲಾ ಕಟ್ಟಳೆಗಳನ್ನೂ ಮೀರಿ ಬಿಡೋಣವೆಂದು
ನಮ್ಮ ನಡುವಿರುವ ಈ ಗೋಡೆಯ ಕೆಡವಿಬಿಡೋಣವೆಂದು
ಏಕೆ ಮನದೊಳಗೇ ಬೇಯುತ್ತಲಿರಬೇಕು?
ಈ ಜನರಿಗೆಲ್ಲಾ ಹೇಳಿ ಬಿಡೋಣ ಇಂದು
ಹಾಂ… ನಾವು ಪ್ರೀತಿಸ್ತೇವೆ …
ನಾವು ಪ್ರೀತಿಸ್ತೇವೆ … ಪ್ರೀತಿಸ್ತೇವೆ …
ಈಗ ನಮ್ಮ ಮನಗಳಲ್ಲೂ ಇದೇ ಮಾತು
ಇಲ್ಲೂ ಇದೆ ಅಲ್ಲೂ ಇದೆ.

ನಾಯಕಿ:

ಹೀಗೇ ಜೊತೆ ಜೊತೆಯಲಿ ಸಾಗುತ್ತಾ
ನಾವು ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು

Lyrics –MALE–
Main Aur Meri Tanhaai Aksar Yeh Baatein Karte Hain
Tum Hoti To Kaisa Hota, Tum Yeh Kehti, Tum Voh Kehti
Tum Is Baat Pe Hairaan Hoti, Tum Us Baat Pe Kitni Hansti
Tum Hoti To Aisa Hota, Tum Hoti To Vaisa Hota
Main Aur Meri Tanhaai Aksar Yeh Baatein Karte Hain

–FEMALE–
Yeh Kahan Aa Gaye Hum
Yunhi Saath Saath Chalte
Teri Baahon Mein Hai Jaanam
Mere Jism-o-jaan Pighalte
Yeh Kahan Aa Gaye Hum
Yunhi Saath Saath Chalte

–MALE–
Yeh Raat Hai, Yeh Tumhaari Zulfein Khuli Hui Hai
Hai Chaandni Ya Tumhaari Nazrein Se Meri Raatein Dhuli Hui Hai
Yeh Chaand Hai Ya Tumhaara Kangan
Sitaarein Hai Ya Tumhaara Aanchal
Hawa Ka Jhonka Hai Ya Tumhaare Badan Ki Khushboo
Yeh Pattiyon Ki Hai Sarsaraahat Ke Tumne Chupke Se Kuch Kaha Hai
Yeh Sochta Hoon Main Kab Se Gumsum
Ke Jab Ki Mujhko Bhi Yeh Khabar Hai
Ke Tum Nahin Ho, Kahin Nahin Ho
Magar Yeh Dil Hai Ke Keh Raha Hai
Ke Tum Yahin Ho, Yahin Kahin Ho

–FEMALE–
O, Tu Badan Hai Main Hoon Chhaaya
Tu Na Ho To Main Kahan Hoon
Mujhe Pyaar Karne Waale
Tu Jahan Hai Main Vahan Hoon
Hamein Milna Hi Tha Hamdam
Issi Raah Pe Nikalte
Yeh Kahan Aa Gaye Hum
Yunhi Saath Saath Chalte
Mm, Meri Saans Saans Maheke
Koi Bheena Bheena Chandan
Tera Pyaar Chaandni Hai
Mera Dil Hai Jaise Aangan
Koi Aur Bhi Mulaayam
Meri Shaam Dhalte Dhalte
Yeh Kahan Aa Gaye Hum
Yunhi Saath Saath Chalte

–MALE–
Majboor Yeh Haalaat, Idhar Bhi Hai Udhar Bhi
Tanhaai Ki Ek Raat, Idhar Bhi Hai Udhar Bhi
Kehne Ko Bahut Kuch Hai, Magar Kisse Kahe Hum
Kab Tak Yunhi Khaamosh Rahe Aur Sahe Hum
Dil Kehta Hai Duniya Ki Har Ek Rasm Utha De
Deevaar Jo Hum Dono Mein Hai, Aaj Gira De
Kyoon Dil Mein Sulagte Rahe, Logon Ko Bata De
Haan Humko Mohabbat Hai, Mohabbat Hai, Mohabbat
Ab Dil Mein Yehi Baat, Idhar Bhi Hai Udhar Bhi

–FEMALE–
Yeh Kahan Aa Gaye Hum
Yunhi Saath Saath Chalte
Yeh Kahan Aa Gaye Hum


ನಾವು ಎಂಬ ಭಾವ ಮೂಡಿಸುವ ಸಂದೇಶಗಳು…

20 ಆಕ್ಟೋ 10

ನಾನು,
ನನ್ನವರು
ಎಂದುಕೊಂಡ
ಅಷ್ಟೂ ಮಂದಿಗೆ,
ಪ್ರತಿ ದಿನ
ಶುಭೋದಯದ,
ಶುಭರಾತ್ರಿಯ,
ಪುಟ್ಟ ಪುಟ್ಟ
ಸಂದೇಶಗಳನ್ನು
ರವಾನಿಸಿದರಷ್ಟೇ
ನನಗೆ ನೆಮ್ಮದಿ;

ಆ ಅಷ್ಟೂ
ಮಂದಿಯ
ಮೊಗಗಳಲ್ಲಿ
ಹುಸಿಯಾದರೂ
ಒಂದು ನಗು
ಮೂಡಿಸಿದ,
ಜೊತೆಗೇ
ಅವರಿಗೆಲ್ಲಾ
ನನ್ನ ನೆನಪು
ಮಾಡಿಸಿದ
ಸಂತೃಪ್ತಿ ನಿಜದಿ ;

ಸಂದೇಶಗಳ
ಆಯ್ಕೆಯ ಕೆಲಸ
ಸುಲಭದ್ದೇನಲ್ಲ
ಅವರಿವರ
ಸಂದೇಶಗಳನ್ನು
ಇದ್ದ ಹಾಗೆಯೇ
ನಾನು ಮತ್ತೆ
ರವಾನಿಸಿದರೆ
ಅವುಗಳಲ್ಲಿ
ನಿಜವಾಗಿಯೂ
ನನ್ನತನವಿರದು;

ಓದುವವನನ್ನು
ಗುರಿಯಾಗಿಸಿ
ಹೇಳುವಂತಹ
ಉಪದೇಶದ
ಮಾತಾಗಿ ಅಲ್ಲ,
ನಾವು ಎಂಬ
ಭಾವ ಮೂಡಿಸಿ
ನಮಗೆ ನಾವೇ
ಹೇಳುವಂತಾಗಿಸಿ
ರವಾನಿಸದಿರೆ
ನೆಮ್ಮದಿಯಿರದು!
********


ಆಕೆ ಅಮ್ಮಳಾಗಿಹಳು!

19 ಆಕ್ಟೋ 10

ನನ್ನ ಕಣ್ಮುಂದೆ ನುಡಿ ನಡೆಯ ಕಲಿತಿದ್ದವಳು,
ಚಿತ್ರ ಬಿಡಿಸಿ ತಂದು ನನಗೆ ಒಪ್ಪಿಸುತ್ತಿದ್ದವಳು,
ನನ್ನಿಂದ ಕೈಹಿಡಿಸಿಕೊಂಡು ಬರೆಯ ಕಲಿತ್ತಿದ್ದವಳು,
ತನ್ನ ನೃತ್ಯಕ್ಕೆ ನನ್ನನ್ನು ಸಾಕ್ಷಿಯಾಗಿಸುತ್ತಿದ್ದವಳು,
ಅಕ್ಕರೆಯಿಂದ ತೊಡೆಗಳನೇರಿ ಕೂರುತ್ತಿದ್ದವಳು,
ನನ್ನೆಲ್ಲಾ ಕತೆಗಳಿಗೆ ಕಿವಿಯಾಗಿ ಆಲಿಸುತ್ತಿದ್ದವಳು,
ಇಂದು ತನ್ನದೇ ಕಂದಮ್ಮನಿಗೆ ತಾಯಿಯಾಗಿ,
ಅಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಹಳು;

ಅಬ್ಬಬ್ಬಾ ಕಾಲದ ಮಹಿಮೆಯೇ!
ಅಬ್ಬಬ್ಬಾ ಈ ಕಾಲದ ವೇಗವೇ!


ವಾಯುಸೇನೆಯಲ್ಲಿ ನನ್ನ ಜೊತೆಗಿದ್ದ,
ನಮ್ಮ ಆತ್ಮೀಯ ಸ್ನೇಹಿತರಾದ
ನಾಣಯ್ಯ-ಹೇಮಕ್ಕನವರ ಮಗಳು,
ನಮ್ಮ ಪಾಲಿಗೂ ಆಕೆ ಮಗಳೇ ಆಗಿರುವವಳು,
ಕಣ್ಮುಂದೆ ಬೆಳೆದು ಆಯುರ್ವೇದ ವೈದ್ಯೆಯಾಗಿ,
ವರುಷದ ಹಿಂದೆ ಸುಂದರನೋರ್ವನ ಪತ್ನಿಯಾಗಿ,
ಈ ಭಾನುವಾರ ಪುಟ್ಟಮ್ಮನಿಗೆ ಅಮ್ಮನಾಗಿಹಳು;

ನಾನು ನಿಂತಲ್ಲೇ ಇದ್ದೇನೆ,
ಇದ್ದ ಹಾಗೆಯೇ ಇದ್ದೇನೆ,
ಎಂಬುದು ಬರಿಯ ಭ್ರಮೆ ನನ್ನೊಳಗೆ,
ಬದಲಾಗಿದೆ ಕಾಲ,
ಬದಲಾಗಿಹರು ನನ್ನವರು,
ಎನ್ನುವುದಷ್ಟೇ ವಾಸ್ತವದರಿವಿನ ಹಾಗೆ!
******************


ಈ ಜೀವನ ಇಷ್ಟೇನಾ… ಅಷ್ಟೇನಾ…?

18 ಆಕ್ಟೋ 10

 

“ಸಖೀ,

ಈ ಜೀವನ

ಇಷ್ಟೇನೇ

ಈ ಜೀವನ

ಅಷ್ಟೇನೇ

ಅನ್ನದಿರು

ಸುಮ್ಮನೇ

ನಿಜವಾಗಿ

ಹೇಳು

ಈ ಜೀವನ

ನಿನಗಿಷ್ಟಾನಾ?”

 

“ಇಷ್ಟೇ ಆಗಲೀ

ಅಷ್ಟೇ ಆಗಲೀ

ನಿಜವಾಗಿಯೂ

ನೀ ಜೊತೆಗಿರಲು

ಈ ಜೀವನವೂ

ನನಗಿಷ್ಟಾನೇ,

ನೀ ಹೇಳು

ಈ ಜೀವನ

ನಿನಗಿಷ್ಟಾನಾ?”

 

“ಈ ಜೀವನ

ನಿನಗಿಷ್ಟ

ಅನ್ನುವ

ನೀನು ನನಗಿಷ್ಟ,

ನನಗಿಷ್ಟಳಾದ

ನೀನು ನನ್ನ

ಜೊತೆಗಿರಲು,

ನಿಜವಾಗಿಯೂ

ಸಖೀ,

ಈ ಜೀವನವೂ

ನನಗಿಷ್ಟಾನೇ!”

****


ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ!

15 ಆಕ್ಟೋ 10

 

ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ,
ನಿನ್ನ ಕೇಶರಾಶಿಯ ನೆರಳಿನಲ್ಲಿ ನನ್ನ ಪಯಣ ಸಾಗಿದ್ದಲ್ಲಿ,
ನನ್ನೀ ಜೀವನ ಇಷ್ಟೊಂದು ನೀರಸವಾಗಿರದೇ ಇರುತ್ತಿತ್ತೇನೋ…
ಮನವ ಮುಸುಕಿರುವ ಈ ನಿರಾಸೆಯ ಛಾಯೆ ಮರೆಯಾಗುತ್ತಿತ್ತೇನೋ…

ಆದರೆ, ಅದೊಂದೂ ನಾನೆಣಿಸಿದಂತೆ ಆಗಲೇ ಇಲ್ಲ,
ಈಗ, ಏಕಾಂಗಿಯಾದ ನನ್ನ ಪರಿಸ್ಥಿತಿ ಹೇಗಾಗಿದೆಯೆಂದರೆ,
ನನಗೆ ನಿನ್ನ ಜೊತೆಯೂ ಇಲ್ಲ, ನಿನ್ನ ದುಃಖವೂ ಇಲ್ಲ,
ಅಲ್ಲದೇ, ನನ್ನಲ್ಲಿ ನಿನ್ನ ನಿರೀಕ್ಷೆಯೂ ಇಲ್ಲವಾಗಿದೆ…

ಈ ಜೀವನದ ಪಯಣ ಎಷ್ಟೊಂದು ನೀರಸವಾಗಿದೆಯೆಂದರೆ,
ನನ್ನಲ್ಲಿ ಇದೀಗ ಯಾರೊಬ್ಬರ ಆಸರೆಯ ನಿರೀಕ್ಷೆಯೂ ಇಲ್ಲ,
ಇಲ್ಲಿ ಹಾದಿಯೂ ಇಲ್ಲ, ಗಮ್ಯವೂ ಇಲ್ಲ, ಬೆಳಕಿಂಡಿಯೂ ಇಲ್ಲ,
ನನ್ನ ಬದುಕು ಕತ್ತಲಿನಲ್ಲಿ ವಿಚಲಿತಗೊಂಡು ಅಲೆಯುತ್ತಿದೆ…

ಮುಂದೊಮ್ಮೆ, ಇದೇ ಕತ್ತಲಿನಲ್ಲೇ ಕಳೆದುಹೋಗುತ್ತೇನೆ ನಾನು,
ಎಂದೆಂಬ ಅರಿವು, ನನಗೆ ಸದಾ ಇದೆಯಾದರೂ, ಸಖೀ,
ಮೇಲಿಂದ ಮೇಲೆ ನನ್ನ ಮನದಲ್ಲಿ ಈ ಭಾವ ಹುಟ್ಟುತ್ತಿರುತ್ತದೆ…
***

ದಿ. ಸಾಹಿರ್ ಲೂಧಿಯಾನ್ವಿಯವರಿಂದ ರಚಿತವಾಗಿದ್ದ, ೧೯೭೫ರ  “ಕಭೀ ಕಭೀ” ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಆಡುವ, ಈ ಮಾತುಗಳು ನನಗೆ ಬಹಳ ಇಷ್ಟ.
ಇದು ಆ ಮಾತುಗಳ ಭಾವಾನುವಾದದ ಚಿಕ್ಕ ಪ್ರಯತ್ನ ಅಷ್ಟೇ.

ಮೂಲ ಹಿಂದೀ ರೂಪ ಇಲ್ಲಿದೆ:

कभी कभी मेरे दिल मैं ख्याल आता हैं
कि ज़िंदगी तेरी जुल्फों कि नर्म छांव मैं गुजरने पाती
तो शादाब हो भी सकती थी।
यह रंज-ओ-ग़म कि सियाही जो दिल पे छाई हैं
तेरी नज़र कि शुओं मैं खो भी सकती थी।

मगर यह हो न सका और अब ये आलम हैं
कि तू नहीं, तेरा ग़म तेरी जुस्तजू भी नहीं।

गुज़र रही हैं कुछ इस तरह ज़िंदगी जैसे,
इससे किसी के सहारे कि आरझु भी नहीं.

न कोई राह, न मंजिल, न रौशनी का सुराग
भटक रहीं है अंधेरों मैं ज़िंदगी मेरी.

इन्ही अंधेरों मैं रह जाऊँगा कभी खो कर
मैं जानता हूँ मेरी हम-नफस, मगर यूंही

कभी कभी मेरे दिल मैं ख्याल आता है.
***


ಈ ರಾಜ್ಯದ ಸಂಸತ್ ಸದಸ್ಯರಲ್ಲಿ ನಂದೊಂದು ಬಿನ್ನಹ!

15 ಆಕ್ಟೋ 10

ರಾಜ್ಯದ ಸಂಸತ್ ಸದಸ್ಯರಲ್ಲಿ ನನ್ನದೊಂದು ಬಿನ್ನಹ, ನಮ್ಮೆಲ್ಲರ ಶಾಂತಿಗಾಗಿ,
ನಮ್ಮನ್ನು ಇಲ್ಲಿ ನಮ್ಮಷ್ಟಕ್ಕೆ ಬಿಟ್ಟು, ದೆಹಲಿಯಲ್ಲೇ ಕೆಲಸಮಾಡಿ ಈ ರಾಜ್ಯಕ್ಕಾಗಿ;

ರಾಜ್ಯದಲ್ಲಿ ನಾವು ಆರಿಸಿ ಕೂರಿಸಿರುವ ಸರಕಾರ ಇರುವುದು ನಮ್ಮೆಲ್ಲರಿಗಾಗಿ,
ಆ ಸರಕಾರ ತನ್ನ ಅವಧಿ ಪೂರ್ತಿ ಕೆಲಸಮಾಡಲು ಬಿಡಿ, ರಾಜ್ಯದ ಏಳಿಗೆಗಾಗಿ;

ದಿನ ಬೆಳಗಾದರೆ, ಹೊಸ ಹೊಸ ಕೀಟಲೆ ಕೊಡುವುದನ್ನು ಇನ್ನಾದರೂ ನಿಲ್ಲಿಸಿ,
ಈ ನಾಡಿನ ಜನತೆಯ ಶಾಂತಿಗಾಗಿ, ನೀವೂ ದಯವಿಟ್ಟು ಕೊಂಚ ಸಹಕರಿಸಿ;

ರೋಸಿ ಹೋಗಿದ್ದಾರೆ ಜನತೆ, ನಿಮ್ಮ ಈ ಪುರುಸೊತ್ತಿನ ದೊಂಬರಾಟಗಳಿಂದ,
ನಿಮಗಾದರೆ ಅದುವೇ ಕಾಯಕ, ನಮಗೆ ದಿನವೂ ಬರೀ ಕಿರಿಕಿರಿ ಅವುಗಳಿಂದ;

ಕಳೆದ ಎರಡೂವರೆ ವರ್ಷಗಳಲ್ಲಿ ನಾವು ಅನುಭವಿಸಿದ್ದು, ನಿಜಕ್ಕೂ ನಿಮ್ಮಿಂದಾಗಿ,
ನಿಮ್ಮನ್ನು ಆರಿಸಿದ್ದು ದೆಹಲಿಯಲ್ಲಿ ಕಾರ್ಯ ಮಾಡಲು, ನಮ್ಮ ಪ್ರತಿನಿಧಿಗಳಾಗಿ;

ಕೆಲಸವಿಲ್ಲದ ಆಚಾರಿ ಮಗುವಿನ ಅಂಡನ್ನು ಕೆತ್ತಿದನೆಂಬುದು ಹಳೇ ಗಾದೆಮಾತು,
ನೀವು ಆಡಿದ ಆಟವೂ ರಾಜ್ಯಕ್ಕೆ ಬಲು ನಷ್ಟಮಾಡಿದೆ, ಇದೂ ಸತ್ಯವಾದ ಮಾತು;

ಏನೂ ಅಭಿವೃದ್ಧಿಯಾಗಿಲ್ಲ ಎನ್ನುವುದಕ್ಕೆ ಮೊದಲು, ಮಾಡಲು ಬಿಟ್ಟಿದ್ದೀರಾ ಹೇಳಿ,
ನಿಮ್ಮ ತಂತ್ರಗಳಿಗೆ ಪ್ರತಿತಂತ್ರ ಹೂಡುವುದರಲ್ಲೇ ಕಾಲ ಕಳೆದು ಹೋಯ್ತು ಕೇಳಿ;

ನೀವು ಹೀಗೇ ಆಡುತ್ತಿದ್ದರೆ, ನಿಮ್ಮೆಲ್ಲರ ಭವಿಷ್ಯವನ್ನೂ ಈ ಜನರೇ ನಿರ್ಧರಿಸುತ್ತಾರೆ,
ಇಂದಿನ ಸದಸ್ಯತ್ವ ಖಾಯಂ ಅಲ್ಲ, ಮುಂದಿನ ಬಾರಿ ನಿಮ್ಮನ್ನೂ ಸೋಲಿಸುತ್ತಾರೆ!
*********