ಮಕ್ಕಳ ಪಾಲಿಗೆ ಅಪ್ಪ ಅಂದರೆ ಒಂದು ಬೆದರುಬೊಂಬೆಯೇ?

30 ನವೆಂ 09
ತಮ್ಮ ತಂದೆ ತಾಯಿಯರ ಬಗ್ಗೆ ಮಕ್ಕಳ ಮನದಲ್ಲಿ ತಮ್ಮದೇ ಆದ ಭಾವನೆಗಳು, ಅಭಿಪ್ರಾಯಗಳು ಮನೆ ಮಾಡಿರುತ್ತವೆ. ತಂದೆ ತಾಯಿಯರು ತುಂಬಾ ಗಂಭೀರವಾಗಿ ಶಿಸ್ತುಬದ್ಧವಾದ ಕಟ್ಟುಪಾಡಿನ ದಿನಚರಿಯನ್ನು ಮಕ್ಕಳ ಮೇಲೆ ಹೇರಿದ್ದರೂ, ಮಕ್ಕಳು ಅವರ ಜೊತೆಗೆ ತೀರ ಸಲುಗೆಯಿಂದ ವರ್ತಿಸುವ ಮಕ್ಕಳೂ ಇರಬಹುದು. ಅದೇ ತರಹ, ತೀರ ಸಲುಗೆಯ ಮಾತಾ ಪಿತರ ಜೊತೆಗೆ  ಗಂಭೀರವಾಗಿ ನಡೆದು ಕೊಳ್ಳುವ ಮಕ್ಕಳೂ ಕಂಡು ಬರಬಹುದು. ಮಕ್ಕಳು ಯಾವ ವಿಷಯಗಳ ಪ್ರಸ್ತಾಪವನ್ನು ತಮ್ಮ  ತಂದೆ ತಾಯಿಯರ ಮುಂದಿಡುತ್ತಾರೋ ಆ ವಿಷಯಗಳ ಗಾಂಭೀರ್ಯಕ್ಕೆ ಅನುಗುಣವಾಗಿ ತಮ್ಮ ಪ್ರಸ್ತಾಪದಲ್ಲೂ ಗಾಂಭೀರ್ಯವನ್ನು ತುಂಬಿಕೊಳ್ಳುತ್ತಾರೆ.
ನಾನು ಚಿಕ್ಕವನಿದ್ದಾಗ, ನನ್ನ ಅಕ್ಕ ಮತ್ತು ಅಣ್ಣಂದಿರು ತಮ್ಮ ಬೇಡಿಕೆಗಳನ್ನು ಅಪ್ಪಯ್ಯನವರ ಮುಂದಿಡಲು ನನ್ನನ್ನು ಬಳಸಿಕೊಳ್ಳುತ್ತಿದ್ದರು. ನಾನು ಅವರಿವರ ಬೇಡಿಕೆಗಳನ್ನು ಅಪ್ಪಯ್ಯನವರ ಮುಂದಿಡುವಾಗ ಯಾವ ಭಯವೂ ಇರುತ್ತಿರಲಿಲ್ಲ. ಅಪ್ಪಯ್ಯನವರ ಆ ಹೊತ್ತಿನ ಮನೋಸ್ಥಿತಿಗನುಗುಣವಾಗಿ ಹತ್ತು ಹಲವು ಬಾರಿ ಬೈಸಿಕೊಂಡದ್ದೂ ಇದೆ. ಹಾಗೆ ಬೈಸಿಕೊಂಡಾಗ ನಾನು ನೊಂದುಕೊಳ್ಳುತ್ತಿರಲಿಲ್ಲ. ಏಕೆಂದರೆ, ಆ ಬೇಡಿಕೆಗಳು ತಿರಸ್ಕೃತವಾದರೆ ನನಗೇನೂ ತೊಂದರೆ ಇರುತ್ತಿರಲಿಲ್ಲ. ಆದರೆ ನನ್ನದೇ ವೈಯಕ್ತಿಕ ಬೇಡಿಕೆಗಳನ್ನು ಅಪ್ಪಯ್ಯನವರ ಮುಂದಿಡಲು ನಾನು ಭಯ ಪಡುತ್ತಿದ್ದೆ. ಸ್ವರವೇ ಬರುತ್ತಿರಲಿಲ್ಲ. ಅಂಜುತ್ತಾ ಅಂಜುತ್ತಾ ಹೇಳುವಾಗ ಮೈಬೆವರಿಸಿಕೊಳ್ಳುತ್ತಿದ್ದೆ. 
ಬಾಲ್ಯದಲ್ಲಿನ ನನ್ನ ಈ ತೆರನಾದ ಅನುಭವಗಳಿಂದಾಗಿ, ನಾನು ನನ್ನ ಮಗಳು ಸ್ಮಿತಾಳನ್ನು ಚಿಕ್ಕಂದಿನಿಂದಲೇ ವಿಭಿನ್ನವಾಗಿ ಬೆಳೆಸುವ ಪ್ರಯತ್ನ ಮಾಡಿದೆ. ಒಂದನೇ ತರಗತಿಯಿಂದಲೇ, ಆಕೆಗೆ ಆಕೆಯಿಂದಲೇ ತಯಾರಿಸಲ್ಪಟ್ಟ, ಆಕೆಯದೇ ಆದ ದಿನಚರಿಯ ವೇಳಾಪಟ್ಟಿ ಇರುತ್ತಿತ್ತು. ಅದರಲ್ಲಿ ಊಟ, ತಿಂಡಿ, ದೂರದರ್ಶನ ವೀಕ್ಷಣೆ, ನಿದ್ದೆ, ಸ್ನಾನ, ಹೀಗೆ ಎಲ್ಲದಕ್ಕೂ ನಿರ್ದಿಷ್ಟ ಸಮಯ ಇರುತ್ತಿತ್ತು. ಶಾಲಾದಿನಗಳಿಗೊಂದು. ರಜಾದಿನಗಳಿಗೊಂದು. ಆಕೆ ದೂರದರ್ಶನ ವೀಕ್ಷಿಸುತ್ತಿದ್ದರೆ ಆಕೆಯ ವೇಳಾಪಟ್ಟಿಯಲ್ಲಿ ಅದು ಇದೆ ಎಂದು ನಂಬಿರುತ್ತಿದ್ದೆ. ಆ ನಂಬಿಕೆಯೊಂದಿಗೇ ಆಕೆಯನ್ನು ಬೆಳೆಸಿದೆ. ಆಕೆಗೆ ನಾನೆಂದೂ ಭಾಷಣ, ಪ್ರಬಂಧ ಬರೆದುಕೊಟ್ಟುದಿಲ್ಲ, ಚಿತ್ರ ಬಿಡಿಸಿಕೊಟ್ಟುದಿಲ್ಲ. ಆಕೆಯಿಂದಲೇ ಬರೆಸುತ್ತಿದ್ದೆ. ಆಮೇಲೆ ಅದನ್ನು ನಾನು ೯೯ ಪ್ರತಿಶತ ಬದಲಾಯಿಸಿದ್ದಿರಲೂಬಹುದು. ಆದರೆ ಆಕೆಗೆ ಅದು ಆಕೆ ಬರೆದದ್ದು ಎನ್ನುವ ಭಾವನೆ ಹುಟ್ಟಿಸಿ ಆಕೆಯಲ್ಲಿ ಸ್ವಾಭಿಮಾನ ಹುಟ್ಟಿಸುವುದಕ್ಕೆ ಸದಾ ಸಹಕರಿಸಿದ್ದೆ. ಆ ಸ್ವಾಭಿಮಾನದಿಂದಾಗಿ,  ಆಕೆ ವಿವಿಧ ಸ್ಪರ್ಧೆಗಳಲ್ಲಿ ಗೆದ್ದು, ಮನೆಗೆ ಹೊತ್ತು ತರುತ್ತಿದ್ದ ಬಹುಮಾನಗಳು, ಪ್ರಮಾಣ ಪತ್ರಗಳು, ಈಗ ಇಲ್ಲಿ ನಮ್ಮ ಕಣ್ಮನ ತುಂಬುತ್ತಿರುತ್ತವೆ.  ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿರುವ ಭಾರತೀಯ ವಾಯುಸೇನೆಯ ಪ್ರೌಢಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾಗ, ಆಕೆ ಎರಡು ಬಾರಿ ಸೋನಿ ದೂರದರ್ಶನದ “ಬೋರ್ನ್‍ವಿಟಾ ಕ್ವಿಜ್  ಕಂಟೆಸ್ಟ್” ನಲ್ಲಿ ಭಾಗವಹಿದ್ದಳು. ಅದಕ್ಕಾಗಿ ಡೆಹ್ರಾಡೂನ್ ಮತ್ತು ಕಲ್ಕತ್ತಾ ನಗರಗಳಿಗೆ ಪಯಣ ಮಾಡಿದ್ದಳು ಕೂಡ.
ಈ ಭಯದ ಮಾತಿನ ಬಗ್ಗೆ ಹೇಳಬೇಕೆಂದರೆ, ಆಕೆಗೆ ನಾನು ಚಿಕ್ಕಂದಿನಲ್ಲೇ ಹೇಳಿದ್ದೆ. ಆಕೆ ಯಾವುದೇ ಬೇಡಿಕೆಗಳನ್ನು ನನ್ನ ಮುಂದಿಡುವಾಗಲೂ ಯಾವುದೇ ರೀತಿಯ ಭಯ ಪಡುವ ಅವಶ್ಯಕತೆ ಇಲ್ಲ. ನಿನ್ನ ಬೇಡಿಕೆಗಳನ್ನು ನಾನು ಪೂರೈಸಲು ಶಕ್ತನೆಂದಾದರೆ ಅವುಗಳನ್ನು ಪೂರೈಸಿಯೇ ತೀರುತ್ತೇನೆ. ಇಲ್ಲವಾದರೆ ಇಲ್ಲ. ಆದರೆ ನೀನು ಮುಂದಿಡುವ ಯಾವುದೇ ಬೇಡಿಕೆಗಳಿಗೆ ನಿನಗೆ ಬೈಗುಳ ದೊರೆಯದು. ಅದು ಹಾಗೇಯೇ ನಡೆದುಕೊಂಡು ಬಂದಿತ್ತು ಕೂಡಾ. ಆಕೆಯ ಅಮ್ಮನಿಂದ ತಿರಸ್ಕೃತವಾದ ಬೇಡಿಕೆಗಳನ್ನೂ, ನನ್ನ ಮುಂದಿಟ್ಟು ಪೂರೈಸಿಕೊಂಡದ್ದೂ ಇದೆ. ಆಕೆಗೆ ನನ್ನೊಂದಿಗೆ ಪ್ರೀತಿಭರಿತ ತೀರ ಸಲುಗೆ ಕೂಡ ಇದೆ.
ಇಷ್ಟೆಲ್ಲಾ ಇದ್ದರೂ, ಆಕೆಯ ಮನದ ಒಂದು ಮೂಲೆಯಲ್ಲಿ ನನ್ನ ಬಗ್ಗೆ ಒಂದು ಭಯ ಇದೆ ಎನ್ನುವ ಅರಿವು ನನಗೆ ಹಲವು ಬಾರಿ ಆಗಿದೆ. ತೀರ ಇತ್ತೀಚೆಗಿನ ಉದಾಹರಣೆಯೊಂದು ಈ ಬರಹಕ್ಕೆ ಕಾರಣವಾಯ್ತು.
ಸದ್ಯ ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಆಕೆ  ವಿದ್ಯಾಲಯದ ವಿದ್ಯಾರ್ಥಿನಿ ನಿಲಯದಲ್ಲಿ ಉಳಿದುಕೊಂಡಿರುತ್ತಾಳೆ. ಬಕ್ರೀದ್ ಪ್ರಯುಕ್ತ ೨೮ ನವಂಬರ್ ೨೦೦೯ರ ಶನಿವಾರದ ರಜೆ ಮತ್ತು ಭಾನುವಾರದ ರಜೆ ಸೇರಿ ಎರಡು ದಿನಗಳ ರಜೆ ಒಟ್ಟಿಗೇ ಸಿಕ್ಕಿತ್ತಾದ್ದರಿಂದ, ಶುಕ್ರವಾರದಂದು ಮಂಗಳೂರಿನಿಂದ ನಮ್ಮೂರು ಉಡುಪಿಗೆ ಹೋಗುವ ಬಗ್ಗೆ ನಮ್ಮ ಅನುಮತಿಯನ್ನು ಮೊದಲೇ ಪಡೆದುಕೊಂಡು ಹೊರಟು ಬಿಟ್ಟಿದ್ದಳು.
ಆಕೆಯ ಮಂಗಳೂರಿನಿಂದ ಉಡುಪಿ ತನಕದ ಒಂದೂವರೆ ಘಂಟೆಗಳ ಪ್ರಯಾಣದ ಅವಧಿಯಲ್ಲಿ ಎರಡು ಮೂರು ಬಾರಿ ದೂರವಾಣಿ ಕರೆ ಮಾಡಿ ವಿಚಾರಿಸಿಕೊಳ್ಳುತ್ತಲೇ ಇದ್ದ ನನಗೆ, ಆಕೆ, ತನ್ನ ಸೋಮವಾರದ ಮೊದಲನೇ ಪಾಠ ಎಂಟು ಘಂಟೆಗೆ ಆರಂಭ ಆಗುತ್ತಿದೆಯಾದ್ದರಿಂದ ತಾನು ಭಾನುವಾರ ಸಂಜೆಯೇ ಮಂಗಳೂರಿಗೆ ವಾಪಸು ಬರಬೇಕಾಗಿದೆಯಾಗಿದೆ ಎಂದು ತಿಳಿಸಿದ್ದಳು. ನಾನೂ ಕೂಡ, ಮುಂಜಾನೆ ಐದೂವರೆ ಆರು ಘಂಟೆಯ ಒಳಗೆಲ್ಲಾ ಪ್ರಯಾಣ ಮಾಡೊದು ಬೇಡ ಭಾನುವಾರವೇ ಹಿಂದಿರುಗಿ ಬಿಡು ಅಂದಿದ್ದೆ.
ಆದರೆ ಆಕೆ ತನ್ನ ತಾಯಿಯಲ್ಲಿ ಬೇರೆಯೇ ಬೇಡಿಕೆಯನ್ನು, ನನ್ನ ಒಪ್ಪಿಗೆಗಾಗಿ ಮುಂದಿಟ್ಟಿದ್ದಳು ಎನ್ನುವ ವಿಚಾರ ನಾನು ಶುಕ್ರವಾರ ಕಚೇರಿಯ ಕೆಲಸ ಮುಗಿಸಿ ಮನೆಗೆ ತೆರಳಿದಾಗಲೇ ನನ್ನ ಗಮನಕ್ಕೆ ಬಂದದ್ದು. ಸೋಮವಾರದಂದು ಎಂಟು ಘಂಟೆಯ ಮೊದಲ ಪಾಠಕ್ಕೆ ಹೆಚ್ಚಿನೆಲ್ಲಾ ವಿದ್ಯಾರ್ಥಿಗಳು ಗೈರುಹಾಜರಾಗುವ ಸಾಧ್ಯತೆ ಇದೆಯಾದ್ದರಿಂದ, ತಾನೂ ಕೂಡ, ಸೋಮವಾರ ಮುಂಜಾನೆಯೇ ಉಡುಪಿಯಿಂದ ಹೊರಡುತ್ತೇನೆ ಹಾಗೂ ಒಂಭತ್ತು ಘಂಟೆಯ ಪಾಠಕ್ಕೆ ಹಾಜರಾಗುತ್ತೇನೆ. ಇದಕ್ಕೆ ಅಪ್ಪನವರ ಒಪ್ಪಿಗೆ ಪಡೆದು ತಿಳಿಸಿ ಅಂದಿದ್ದಳಂತೆ.
ಯಾವನೇ ಒಬ್ಬ ತಂದೆಗೆ ಇಂತಹ ಮಾತುಗಳು ಕಿವಿಗೆ ಬಿದ್ದಾಗ, ಕೋಪ ಬರುವ ಸಾಧ್ಯತೆ ಇರಬಹುದೇನೋ. ಕೋಪಿಸಿಕೊಂಡವನು “ಬೇಡ… ಆಕೆ ಎಂಟು ಘಂಟೆಯ ಪಾಠಕ್ಕೆ ಹಾಜರಾಗಲೇ ಬೇಕು” ಅನ್ನಬಹುದು. ಕೋಪಿಸಿಕೊಳ್ಳದವನು, “ಇರಲಿ ಬಿಡು ಆಕೆಗೆ ಇಷ್ಟ ಬಂದ ಹಾಗೆ ಮಾಡಲಿ..” ಅನ್ನಬಹುದು.
ನನಗೆ ಕೋಪವೂ ಬರಲಿಲ್ಲ. ಸುಮ್ಮನಿದ್ದು ಬಿಡುವಂತೆಯೂ ಇರಲಿಲ್ಲ. ಆದರೆ ಮನಸ್ಸಿಗೆ ಸ್ವಲ್ಪ ಬೇಸರ ಆಯ್ತು. ಜೊತೆಗೆ ಮನದಲ್ಲಿ ಪ್ರಶ್ನೆಗಳು ಎದ್ದವು. ಆಕೆಯೊಂದಿಗೆ ಮಾತಾಡಿ ಆ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಬೇಕೆಂದಿದ್ದೆ.
ಅಂದು ರಾತ್ರಿ ಆಕೆಗೆ ಕರೆ ಮಾಡಿದಾಗ ಆಕೆ ಮತ್ತು ನನ್ನ ನಡುವೆ ನಡೆದ ಸಂಭಾಷಣೆ ಹೀಗಿತ್ತು:
ನಾನು: “ಸಿಮಿ, ನೀನು ಈ ವಿಚಾರವನ್ನು ನನ್ನಲ್ಲಿ ಹೇಳದೇ, ಅಮ್ಮನ ಮುಖಾಂತರ ಹೇಳಿಸಿದ್ದು ಯಾಕೆ?”
ಸಿಮಿ: “ಅಪ್ಪಾ…ನೀವು ಬೈತೀರಿ ಅನ್ನೋ ಭಯ ನನಗೆ”
ನಾನು: “ನಾನು ನಿನಗೆ ಸುಮ್ಮ ಸುಮ್ಮನೇ ಬೈಯೋದಿದೆಯೇ?”
ಸಿಮಿ: “ಇಲ್ಲ”
ನಾನು: “ಮತ್ಯಾಕೆ ಈ ಭಯ?”
ಸಿಮಿ: ಮೌನ.
ನಾನು: “ನಾನು ನಿನ್ನನ್ನು ಮಂಗಳೂರಿನಲ್ಲಿ ಬಿಟ್ಟು ಬರುವಾಗಲೇ ತಿಳಿಸಿದ್ದೆ. ನಿನ್ನ ವಿದ್ಯಾಭ್ಯಾಸದ ಬಗ್ಗೆ ನಿನಗೆ ನೀನೇ ತೀರ್ಪುಗಾರ್ತಿ. ಯಾವ ಪಾಠಕ್ಕೆ ಹಾಜರಾಗಬೇಕು, ಯಾವುದಕ್ಕೆ ಹಾಜರಾಗಬೇಕಿಲ್ಲ ಅನ್ನುವುದು ನಿನಗೆ ಬಿಟ್ಟ ವಿಚಾರ. ನಾವ್ಯಾರೂ ನಿನ್ನನ್ನು ಯಾವುದೇ ಕಾರಣಕ್ಕೂ ರಜೆ ಹಾಕು ಅನ್ನುವಂತಿಲ್ಲ. ಅಲ್ಲದೆ ನಿನಗೆ ಬೇಡವೆಂದೆನಿಸಿದಾಗ ಹೋಗು ಅನ್ನುವಂತೆಯೂ ಇಲ್ಲ. ನಿನ್ನ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಮಾತ್ರ ನಮಗೆ. ಓದು, ಪರೀಕ್ಷೆ, ಫಲಿತಾಂಶ, ಪದವಿ, ಇವೆಲ್ಲದರ ಜವಾಬ್ದಾರಿ ನಿನ್ನದು ಅಂತ ಆಗಲೇ ಹೇಳಿದ್ದೆ. ಇಂದೂ ಕೂಡ ಅದನ್ನೇ ಹೇಳುತ್ತಿದ್ದೇನೆ. ಅಲ್ಲಿನ ವಸ್ತುಸ್ಥಿತಿಯ ಅರಿವು ನಮಗೆ ಇರುವುದಿಲ್ಲ. ನನಗೆ ನನ್ನ ಮೇಲಿರುವ ನಂಬಿಕೆಗಿಂತಲೂ ಜಾಸ್ತಿಯಾದ ನಂಬಿಕೆ ನಿನ್ನ ಮೇಲೆ ಇದೆ. ಹಾಗಾಗಿ, ನಿನ್ನ ಯಾವುದೇ ನಿರ್ಣಯದ ಬಗ್ಗೆ ನನ್ನ ಅಭ್ಯಂತರ ಇರದು. ಆದರೆ, ನಿನಗೆ ಮಾರ್ಗದರ್ಶನ ಬೇಕೆಂದು ನೀನು ಕೇಳಿದಾಗ ಮಾರ್ಗದರ್ಶನ ಮಾಡಲು ನಾನು ಸದಾ ಸಿದ್ಧನಿದ್ದೇನೆ. ಅದಲ್ಲದೆ, ನಿನ್ನ ದಿನಚರಿಯಲ್ಲಿ ಅನವಶ್ಯಕ ಮೂಗು ತೂರಿಸಲಾರೆ. ನೀನು ವಿದ್ಯಾಭ್ಯಾಸದ ಹಾದಿಯಿಂದ ವಿಚಲಿತಳಾಗಿದ್ದಿ ಎನ್ನುವುದು ನನ್ನ  ಅರಿವಿಗೆ ಬಂದರೆ ಮಾತ್ರ, ನಾನು ನನ್ನ ವಿಚಾರಗಳನ್ನು ನಿನ್ನ ಮೇಲೆ ಹೇರಿ ಸರಿದಾರಿಗೆ ತರುವ ಪ್ರಯತ್ನ ಮಾಡುತ್ತೇನೆ, ಅಷ್ಟೇ. ನಿನ್ನ ಅಪ್ಪ ನಾನು, ಹೊಲಗದ್ದೆಗಳಲ್ಲಿ ನಿಲ್ಲಿಸಿಡುವ ಬೆದರುಬೊಂಬೆ ಅಲ್ಲ. ನೀನು ಭಯ ಪಡುವ ಅವಶ್ಯಕತೆಯೇ ಇಲ್ಲ. ನಿನ್ನ ಬೇಡಿಕೆಯನ್ನು ನನ್ನ ಮುಂದಿಡು. ನನಗೊಪ್ಪಿಗೆಯಾದರೆ ಒಪ್ಪಿಗೆ. ಇಲ್ಲಾಂದ್ರೆ ಒಪ್ಪೋಲ್ಲ, ಅಷ್ಟೇ. ನೀನು ಸೋಮವಾರದ ಎಂಟು ಘಂಟೆಯ ಪಾಠಕ್ಕೆ ಹಾಜರಾಗದಿರುವ  ಬಗ್ಗೆ ನನ್ನ ಅಭ್ಯಂತರ ಇಲ್ಲ. ನೀನು ಸೋಮವಾರದ ಮುಂಜಾನೆಯೇ ವಿದ್ಯಾಲಯಕ್ಕೆ ಹಿಂದಿರುಗಬಹುದು.
ನೀನು ಅಂದು  “ಟೀನೇಜರ್” ಎಂಬ ಹಣೆ ಪಟ್ಟಿ ಹೊತ್ತುಕೊಂಡ ನಿನ್ನ ಹದಿಮೂರನೇ ಜನ್ಮದಿನದಂದು ನಾನು ಬರೆದ ಪತ್ರದಲ್ಲಿ ಹೀಗೆ ಬರೆದಿದ್ದೆ ಗೊತ್ತೆ. – ಇಂದಿನಿಂದ ನೀನು ಸರ್ವ ರೀತಿಯಲ್ಲೂ ಸ್ವತಂತ್ರಳು. ನಾವಿಬ್ಬರೂ ಸ್ನೇಹಿತರಂತೆ ಇರಬೇಕು. ನಿನ್ನ ಸ್ವಾತಂತ್ರ್ಯದ ಪರಿಧಿಯಲ್ಲಿ ಸದಾ ನಾನಿರುತ್ತೇನೆ ಅಷ್ಟೇ. ಆದರೆ ನಿನಗೆ ಯಾವುದೇ ಭಯ ಇರಬಾರದು. ನೀನು ಯಾವುದೇ ಕೆಲಸ ಮಾಡುವಾಗಲೂ ನೀನು ಯಾರು ಮತ್ತು ಯಾರ ಮಗಳು ಅನ್ನುವುದನ್ನು ಗಮನದಲ್ಲಿಟ್ಟುಕೊಂಡು ಮಾಡು. ಅಷ್ಟು ಸಾಕು –  ನಿನಗದರ ನೆನಪಿದೆಯೇ?” ಅಂದೆ.
ಸಿಮಿ: “ಹೌದು ಅಪ್ಪ, ನನಗೆ ಅದಿನ್ನೂ ನೆನಪಿದೆ. ಅಲ್ಲದೆ…ಇನ್ನು ಮುಂದೆ ನಾನು ಹಾಗೇಯೇ ಮಾಡುತ್ತೇನೆ…ಆದರೂ ಒಮ್ಮೊಮ್ಮೆ ನೀವು ಬೈತೀರೇನೊ ಅನ್ನುವ ಭಯ ಇರುತ್ತದೆ ನನಗೆ ಅಷ್ಟೆ…” ಅಂದು ನಕ್ಕಳು.
ನನ್ನ ಮಗಳು ಹಾಗೆ ನಡೆದುಕೊಂಡಾಗ ನನ್ನಲ್ಲೇನೋ ಕೊರತೆ ಇದೆಯೇನೋ,  ನಾನು ಬೆದರುಬೊಂಬೆ ಆಗಿ ಬಿಟ್ಟಿದ್ದೆನೇನೋ ಅನ್ನುವ ಅನುಮಾನ  ಮೂಡುತ್ತದೆ.
ಈ ಮಕ್ಕಳು ಯಾಕೆ ಹೀಗೆ? ಮಕ್ಕಳಲ್ಲಿ ಈ ರೀತಿಯ ಭಯ ಯಾಕೆ ಇರುತ್ತದೆ. ಅಪ್ಪನಿಗಿಂತಲೂ ಹೆಚ್ಚಾಗಿ ಅಮ್ಮನಿಂದಲೇ ಬೈಸಿಕೊಂಡಿರುವ ಮಕ್ಕಳೂ ಅಪ್ಪನೆಂದರೆ ಭಯ ಪಡುವುದೇಕೆ? ಅಪ್ಪಂದಿರು ಎಷ್ಟು ಸಲುಗೆಯಿಂದ ಇದ್ದರೂ ಅವರ ಮನದೊಳಗೆ ಅಪ್ಪ ಬೈತಾರೇನೋ ಅನ್ನುವ ಭಯ ಯಾಕೆ? ಅಮ್ಮನನ್ನು ಚಾಣಾಕ್ಷತನದಿಂದ ಒಪ್ಪಿಸಿಕೊಳ್ಳುವ ಮಕ್ಕಳಲ್ಲಿ ಅಪ್ಪಂದಿರನ್ನು ಒಪ್ಪಿಸಲು ಹಿಂಜರಿತ ಏಕೆ? ಅವರೊಳಗಿನ ಈ ಭಯ ಸೂಕ್ತವೇ?
– ಆತ್ರಾಡಿ ಸುರೇಶ್ ಹೆಗ್ಡೆ.

ಶಿಲ್ಪಾಳನ್ನಿನ್ನು ನಮ್ಮವಳೆಂದು ಕರೆಯುವಂತಿಲ್ಲ!!!

23 ನವೆಂ 09

ಬೆಡಗಿ ಶಿಲ್ಪಾ ನಿನ್ನೆ ಶೆಟ್ಟಿಯಿಂದ ಕುಂದ್ರಳಾಗಿ ಹೋದಳು

ನಮ್ಮೂರ ಬಂಟ ಚೆಲುವೆ ನಿನ್ನೆಯಿಂದ ಪಂಜಾಬಿಯಾದಳು

 

ಇನ್ನು ಆಕೆಯನ್ನು ನಾ ಕರಾವಳಿಯ ಕನ್ನಡಿತಿ ಎನ್ನುವಂತಿಲ್ಲ

ಇನ್ಮುಂದೆ ನಮ್ಮೂರ ಬಂಟರ ಕನ್ಯೆ ಎಂದೂ ಅನ್ನುವಂತಿಲ್ಲ

 

ಕಳೆದು ಹೋದಳು ಆ ಮಾಯಾ ಲೋಕದ ಬೆಳಕಿನ ನಡುವೆ

ತೊಟ್ಟು ಮೈತುಂಬಾ ಕೋಟಿ ಕೋಟಿ ರೂಪಾಯಿಗಳ ಒಡವೆ

 

ಕರಾವಳಿಯ ಬೆಡಗಿಯರೆಲ್ಲಾ ಅನ್ಯರ ಪಾಲಾಗುವುದೆಂದರೇನು

ಕರಾವಳಿ ಬಂಟ ಸಮಾಜದಲಿ ಹುಡುಗರ ಕೊರತೆ ಇದೆಯೇನು

 

ಐಶ್ವರ್ಯಾ ಬಚ್ಚನನ ಮನೆ ಸೇರಿ ಕೊಂಡಳು ಕಳೆದ ವರುಷ

ರಾಧಿಕಾ ಮನೆ ಕಟ್ಟಿಸಿಕೊಂಡಳು ನೀಡಿ ಇನ್ನಾರಿಗೋ ಹರುಷ

 

ಈಗ ಈ ಶಿಲ್ಪಾ ದೂರದೂರಿನ ಆ ಕುಂದ್ರನ ತೆಕ್ಕೆ ಸೇರಿದಳಲ್ಲಾ

ನಮ್ಮೂರಿನ ಬಂಟ ಹುಡುಗರು ಇವರ ಕಣ್ಣಿಗೆ ಕಾಣದುಳಿದರಲ್ಲಾ

 

ಅವರಾರನ್ನೂ ಇನ್ನು ನಾವು ನಮ್ಮವರೆಂದು ಕರೆಯುವಂತಿಲ್ಲ

ಏಕೆಂದರೆ ಸೋನಿಯಾಳನ್ನು ವಿದೇಶೀ ಎಂದು ಹೇಳುವಂತಿಲ್ಲ

****************************************


ಕನ್ನಡವನೇ ಮರೆಸುವಂತಿದೆ ವಿಜಯ ಕರ್ನಾಟಕದ ಹೊಸ ರೂಪ!!!

20 ನವೆಂ 09

ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು

ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು

 

ವಿಜಯ ಕರ್ನಾಟಕದ ತುಂಬೆಲ್ಲಾ ಈಗ ಆಂಗ್ಲ ಪದಗಳ ದಾಳಿ

ಕನ್ನಡವನೇ ಮರೆಸುವಂತಿದೆ ಅದೀಗ ಹೊಸ ರೂಪವ ತಾಳಿ

 

ಲವಲvk ಎಂಬ ಹೊಸ ಪತ್ರಿಕೆ ಕಾದಿಹುದು ನೋಂದಣಿಗಾಗಿ

ಪ್ರತಿಭಟಿಸಲೇ ಬೇಕು ಕನ್ನಡವ ಕೊಲ್ಲುವವರನು ನಾವೊಂದಾಗಿ

 

ಮೊದಲೇ ತಪ್ಪುಗಳ ರಾಶಿಯಲಿ ಕನ್ನಡ ಕುಲಗೆಟ್ಟು ಹೋಗಿತ್ತು

ಈಗ ಆಂಗ್ಲ ಪದಗಳ ಬೆರಕೆಯಿಂದ ಸತ್ಯನಾಶ ಆದಂತಾಯ್ತು

 

ಯಾವ ಸಾಧನೆಗಾಗಿ ಈ ಪರಿಯ ಹುಚ್ಚಾಟವೋ ನಾನರಿಯೇ

ಹೆತ್ತ ತಾಯಿಯಿಂದಲೇ ಕ್ಯಾಬರೇ ಕುಣಿಸುವ ಮಹದಾಸೆಯೇ

 

ಟೈಮ್ಸ್ ಆಫ್ ಇಂಡಿಯಾವನಾಗಲೇ ಕಂಗ್ಲೀಷೀಕರಿಸಿಯಾಗಿದೆ

ಈಗ ನೋಡಿ ವಿ.ಕ. ವಿಚಿತ್ರ ಕರ್ನಾಟಕವಾಗಿ ಮಾರ್ಪಾಡಾಗಿದೆ

 

ಅಪ್ಪಟ ಕನ್ನಡವನು ನಮ್ಮ ಪತ್ರಿಕೆಗಳಲ್ಲಾದರೂ ಕಾಣಬಹುದಿತ್ತು

ಇದೀಗ ಈ ಹೊಸ ತಲೆಗೆಡುಕತನದಿಂದ ಅದಕೂ ಬಂತೇ ಕುತ್ತು

 

ಸರ್ಕಾರೀ ಮದ್ಯದ ಅಂಗಡಿಗಳಲ್ಲಿದ್ದವು ಕೆಂಪು ನಾಮ ಫಲಕಗಳು

ದಿನಪತ್ರಿಕೆಗಳಲೀಗ ಮತ್ತೇರಿಸುವ ಕೆಂಪು ಬಣ್ಣದ ತಲೆ ಬರಹಗಳು

 

ಇನ್ನಾದರೂ ಎಚ್ಚೆತ್ತು ಮರಳಿ ಬಂದು ಬಿಡಿ ನಮ್ಮ ಸವಿಗನ್ನಡಕೆ

ನಮ್ಮದು ಸದಾ ಚೆನ್ನ ಇವೆಲ್ಲಾ ಏನಿದ್ದರೂ ಬರೇ ನಾಲ್ಕು ದಿನಕೆ

 

ಹೊಗಳಿ ಬರೆದ ನೂರಾರು ಪತ್ರಗಳು ಬೆಳಕ ಕಂಡವು ವಿ.ಕ.ದಲ್ಲಿ

ನನ್ನ ಮಾತುಗಳು ಕಂಡಿಲ್ಲ ಹಾಗಾಗಿ ಪ್ರಕಟಿಸುತ್ತಿದ್ದೇನೆ ನಾನಿಲ್ಲಿ

*****************************************


ರಾಜ್ಯದ ಅರಾಜಕತೆ ಕೊನೆಗೊಳಿಸಲು ಇಲ್ಲಿದೆ ಸೂತ್ರ!!!

17 ನವೆಂ 09

ನಮ್ಮ ನಾಡಿನೀ ಅರಾಜಕತೆಗೆ ಇಲ್ಲಿದೆ ಒಂದು ಸೂತ್ರ

ಇದನೊಪ್ಪಿ ನಡೆದರೆ ಚುನಾವಣೆವರೆಗೆ ಎಲ್ಲಾ ಸುಸೂತ್ರ

 

ಕರುಣಾಕರ ರೆಡ್ಡಿಯ ಮಾಡಿರೀ ರಾಜ್ಯದ ಮುಖ್ಯಮಂತ್ರಿ

ಅವರ ಒಬ್ಬೊಬ್ಬ ಬೆಂಬಲಿಗನೂ ಆಗಿ ಬಿಡಲಯ್ಯ ಮಂತ್ರಿ

 

ಅಭಿವೃದ್ದಿಯ ಮಾತ ಬಿಡಿ ಈಗಲೂ ಇಲ್ಲ ಏನೂ ಅಭಿವೃದ್ಧಿ

ಅವರೆಲ್ಲ ನೆಮ್ಮದಿಯಿಂದ ಇದ್ದರೆ ರಾಜ್ಯದಲ್ಲೆಲ್ಲೂ ನೆಮ್ಮದಿ

 

ತಾನು ಸಾಚಾ ಎಂದು ಕೊಳ್ಳುವವರಿಗೆಲ್ಲ ಇದ್ದಾರೆ ಕಳ್ಳ ಮಕ್ಕಳು

ಹೊರತಲ್ಲ ಇದಕೆ ಸಾಚಾ ಎನಿಸಿದ್ದ ಎಂಪಿ ಪ್ರಕಾಶರ ಮಕ್ಕಳೂ

 

ನಮಗೆ ಗೌಡರೇನು, ಯಡ್ಡಿಯೇನು ಅಲ್ಲಾ ಆ ರೆಡ್ಡಿಗಳಾದರೇನು

ಈ ಕರುನಾಡಿನ ಉದ್ಧಾರ ಯಾರು ಬಂದರೂ ಆಗಲಿಕ್ಕುಂಟೇನು

 

ಒಮ್ಮೆ ಎಲ್ಲ ಲೂಟಿ ಹೊಡೆದು ಖಾಲಿ ಮಾಡಿ ಬಿಡಲಿ ಖಜಾನೆ

ಆಮೇಲೆ ರಾಜ್ಯಭಾರ ನಡೆಸಲು ಬೇಕು ಒಬ್ಬ ನಿಷ್ಠಾವಂತನೇ

 

ಮುಂದಿನ ಚುನಾವಣೆಯಲ್ಲಿ ನಿಷ್ಠಾವಂತನಿಗೆ ಹಾಕೋಣ ಮತ

ಯಾರು ನಿಸ್ವಾರ್ಥನಾಗಿ ಕಾಪಾಡುತ್ತಾನೋ ಈ ನಾಡಿನ ಹಿತ

****************************************


ಹತ್ತು ಕಳೆದಿದೆ – ಹೊತ್ತು ಹರಿದಿದೆ!!!

16 ನವೆಂ 09

ತನ್ನ ಸ್ವತಂತ್ರ ವಕೀಲಿ ವೃತ್ತಿಗೆ ಹತ್ತು ವರುಷ ತುಂಬಿದ ಸಂದರ್ಭದಲ್ಲಿ,

 (ಗಣೇಶ ಚತುರ್ಥಿಯಂದು),  ನನ್ನ ಅನುಜ ಪೃಥ್ವಿರಾಜ್,

ಬರೆದು, ನನಗೆ ರವಾನಿಸಿದ್ದ  ಕವನ:

 

ಹತ್ತು ಕಳೆದಿದೆ

ಹೊತ್ತು ಹರಿದಿದೆ

ಕೈಬೀಸಿ ಕರೆದಿದೆ

ಕರ್ಮಭೂಮಿಯ

ಕಲ್ಲ ಮಂಚಕೆ

 

ಕಲ್ಲ ಮಂಚವೇ

ಸುದೃಢ ಮಂಚವು

ನಿತ್ಯ ನಿಶ್ಚಲ ಭದ್ರವು

ಮಧುರ ಗಾನವ

ಪಾಡಿ ಸೆಳೆಯುತ

ಮನಕೆ ಮುದವನೇ

ನೀಡಿದೆ

ಮುತ್ತನಿತ್ತಿದೆ

ಪ್ರೇಮ ಬೆಸೆದಿದೆ

ತಾಣ ಸುಂದರವೆಸೆದಿದೆ

 

ಅಧೈರ್ಯ ತೊಲಗಿದೆ

ವೇಗ ಹೆಚ್ಚಿದೆ

ಗುರಿಯೆಡೆಗೆ

ದೃಷ್ಟಿಯು ನೆಟ್ಟಿದೆ

 

ಎನಗೆ ನೀನು

ನಿನಗೆ ನಾನು

ಎಂಬ ಮೌನ ವಾಣಿಗೆ

ಕಿವಿ ನಿಮಿರ್ದುದು

ಕಣ್ ಕನಲ್ದುದು

ಮನಕೆ ಸತ್ಯವು

ತಿಳಿವ ಕಾಲಕೆ

ಬೆರೆವ ಕೈ

ಜಡವಾದುದು!!!


ಎಲ್ಲರೂ ಒಂದೊಂದು ತರಹದ ತಾಜ್ ಮಹಲ್ ಇದ್ದಂತೆ!!!

16 ನವೆಂ 09

ನನ್ನ ತಮ್ಮ ಪೃಥ್ವಿರಾಜ್ ಮತ್ತು ನನ್ನ ನಡುವೆ ನಿನ್ನೆ ಸಾಯಂಕಾಲ ನಡೆದ ಸಂದೇಶಗಳ ವಿನಿಮಯ ಹೀಗಿತ್ತು:

 

ನಾನು:

ತಮ್ಮಾ,

ಇತ್ತೀಚೆಗಿನ ದಿನಗಳಲ್ಲಿ ನಿನ್ನ ಮನದಲ್ಲಿ ಏನೋ ಗೊಂದಲ ಇರುವಂತೆ ಅನಿಸುತ್ತಿದೆ ನನಗೆ

ಈ ಗೊಂದಲಕ್ಕೆ ಕಾರಣ ನಾನಾಗಿದ್ದೇನೋ ಎಂಬ ಗೊಂದಲ ನನ್ನ ಮನದಲ್ಲಿದೆ.

ಪೃಥ್ವಿ:

ಇದು ನಿಮ್ಮ ತಪ್ಪು ಕಲ್ಪನೆ.

ಸಂದೇಶ ಕಂಡು ಆಶ್ಚರ್ಯ ಆಯ್ತು

ಆದರೆ ಒಂದು ನಿಜ, ಮನಸ್ಸು ಲೌಕಿಕತೆಗಿಂತ ಪಾರಮಾರ್ತಿಕತೆಯ ಬಗ್ಗೆ ಹೆಚ್ಚು ಆಲೋಚಿಸುತ್ತದೆ.

ವ್ಯಯಸಾಯದಂತೆ ಇದೂ ಸ್ವಾಭಾವಿಕ ಅಂತ ತಿಳಿದಿದ್ದೇನೆ.

ಇದಕ್ಕೆ ಯಾರೂ (ನೀವೂ) ಕಾರಣರಲ್ಲ.

ಹಾಗೇನಾದರೂ ನಿಮಗೆ ಅನಿಸಿದ್ದರೆ ಕ್ಷಮಿಸಿ.

ನಾನು:

ಸಂಪರ್ಕ ವಿರಳ ಆದಾಗ, ಅನುಮಾನ ಮೂಡುವುದು ಮತ್ತು ತನ್ನದೇ ಕಾರಣ ಕೊಡುವುದು ಸ್ವಾಭಾವಿಕ ಮತ್ತು ಅದು ಪರರ ಸಹಾಯದಿಂದ ನಡೆಸುವ ಆತ್ಮ ವಿಮರ್ಶೆಯೂ ಹೌದು.

ಆಧ್ಯಾತ್ಮಿಕ ಚಿಂತನೆ ಒಳ್ಳೆಯದು, ಆದರೆ ಒಂದು ಇನ್ನೊಂದಕ್ಕೆ ಪೂರಕ ಆಗಿದ್ದರೆ ಚೆನ್ನ, ಅದು ಭೌತಿಕತೆ ಮತ್ತು ಲೌಕಿಕತೆಗೆ ಮಾರಕ ಆಗದಂತೆ ಜಾಗ್ರತೆ ವಹಿಸು ತಮ್ಮಾ…

ಪೃಥ್ವಿ:

ಪ್ರಪಂಚದ ಪ್ರತಿಯೊಂದು ಆಗು ಹೋಗುಗಳೂ ಪೂರ್ವ ನಿರ್ಣಯಿತ.

ಎಲ್ಲವೂ ಕರ್ಮಾಧೀನ ಎಂಬುದು ಮತ್ತು ತಪ್ಪು ಮಾಡಿದವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬುದು ಶತಸಿದ್ಧ.

ಕೋರ್ಟು, ಪೋಲೀಸು ಸ್ಟೇಷನ್, ಇವೆಲ್ಲಾ ನಿಮಿತ್ತ ಮಾತ್ರ. ಇವುಗಳಿಂದ ಸರಕಾರ ನಡೆಯಬಹುದೇನೋ, ಆದರೆ ಪ್ರಪಂಚ ನಡೆಯುವುದಿಲ್ಲ.

ನಾನು:

ಅದು ನಿಜವಾದ ಮಾತು. ಅದನ್ನು ನಾನೂ ನಂಬುತ್ತೇನೆ ಮತ್ತು ಒಪ್ಪುತ್ತೇನೆ.

ಆದರೆ ಕೆಲವೊಮ್ಮೆ ಮನುಜ ಸಹಜವಾದ ಕೋಪ ಮತ್ತು ಬೇಸರ ಮನದಲ್ಲಿ ಸುಳಿಯುವುದೂ ನಿಜ.

ಪೃಥ್ವಿ:

ಅನ್ಯರಿಂದ ನಿರೀಕ್ಷಿಸುವುದಕ್ಕಿಂತ ಅನ್ಯರನ್ನು ಅವಲೋಕಿಸುವುದು ಹೆಚ್ಚು ಆರೋಗ್ಯಕರ.

ಎಲ್ಲರೂ ಒಂದೊಂದು ತರಹದ ತಾಜ್ ಮಹಲ್ ಇದ್ದಂತೆ.

ನಾವು ಅವರನ್ನು ಅವಲೋಕಿಸೋಣ.

ನಾನು:

🙂


ನನ್ನೂರು ಆತ್ರಾಡಿ-ಬಾಲ್ಯದ ನೆನಪುಗಳು!!!

13 ನವೆಂ 09

 

 

ಎಲ್ಲಾ ಊರುಗಳ ಹಾಗೆಯೇ ಇತ್ತು  ನಮ್ಮ ಊರು

ನಾನು ಹುಟ್ಟಿ ಆಡಿ ಬೆಳೆದ ಆ ನನ್ನ ಮೆಚ್ಚಿನ ಊರು

 

ತುಳುನಾಡಿನ ನೂರಾರು ಊರುಗಳಲ್ಲಿ ಅದೂ ಒಂದು

ಆತ್ರಾಡಿ ನನ್ನೂರು ಈ ನನ್ನ ಮನದೊಳಗಿದೆ ಇಂದೂ

 

ಅಲ್ಲಿ ಆಗೆಲ್ಲಾ ದೊಡ್ಡ ದೊಡ್ದ ಮನೆಗಳು ಇದ್ದಿರಲೇ ಇಲ್ಲ

ಸಣ್ಣ ಸಣ್ಣ ಮನದವರು ನಿಜಕ್ಕೂ ಅಲ್ಲಾರೂ ಇದ್ದಿರಲಿಲ್ಲ

 

ಬಾಲ್ಯದಿಂದಲೂ ನೆನಪಾದಗಲೆಲ್ಲಾ ನೀಡುವುದು ನೋವು

ಎರಡು-ಮೂರು ವರ್ಷ ಪ್ರಾಯದಾ ನನ್ನ ತಮ್ಮನಾ ಸಾವು

 

ನನಗಾಗ ಇದ್ದಿರಬಹುದು ನಾಲಕ್ಕೋ ಐದರದೋ  ಪ್ರಾಯ

ನಾನು ಅಳುತ್ತಿದ್ದೆ  ಕೊಂಡೊಯ್ಯುವಾಗ ಆ ತಮ್ಮನ ಕಾಯ

 

ದೊಡ್ಡಣ್ಣ ಸೇರಿಸಿದರು ನನ್ನ ಅಂಜಾರು ಪ್ರಾಥಮಿಕ ಶಾಲೆಗೆ

ಯಶೋದ ಮತ್ತು ಕಲಾವತಿ ಟೀಚರುಗಳಿಬ್ಬರೇ ಅಲ್ಲೆಮಗೆ

 

ಕನ್ನಡ ಅಕ್ಷರ ಕಲಿಸಿದರಲ್ಲಿ ಯಶೋದ ಟೀಚರಂದು ನಮಗೆ

ಕಣ್ಣಲ್ಲಿ ನೀರಿತ್ತು ಕಲಾವತಿ ಟೀಚರರ ಆ ಪುಣ್ಯಕೋಟಿ ಕತೆಗೆ

 

ಯಶೋದ ಟೀಚರ ಭೇಟಿಯ ಭಾಗ್ಯ ಇಂದಿಗೂ ಇದೆಯೆನಗೆ

ಕಲಾವತಿ ಟೀಚರು ಆಗಲೇ ತೆರಳಿ ಆಗಿದೆ ದೇವರಾ ಮನೆಗೆ

 

ಸುತ್ತ ಹೊಲ, ತೋಟ, ಬೈಲು, ಹರಿವ ನೀರಿನಾ ತೋಡು

ನಾವೆಲ್ಲ ದಿನಕ್ಕೊಮ್ಮೆಯಾದರೂ  ಭೇಟಿ ನೀಡುತ್ತಿದ್ದ ಕಾಡು

 

ಕಾಡಿನ ಹಾದಿಯಲ್ಲಿ ಕಾಲಡಿಯಲ್ಲಿ ಸಿಗುತ್ತಿದ್ದ ಆ ಹಾವುಗಳು

ಭಯದಿಂದ ಕಣ್ಮುಚ್ಚಿಕೊಂಡೇ ಓಡುತ್ತಿದ್ದೆವು ಆಗ ನಾವುಗಳು

 

ಸವಿರುಚಿಯ ಗೇರು, ಮಾವು, ಹಲಸು ಮತ್ತು ಆ ಬಾಳೆ ಹಣ್ಣು

ಹಗಲೆಲ್ಲಾ ತಿಂದು ಸುತ್ತಾಡಿ ಕುಣಿದು ಕೈಮೈ ತುಂಬೆಲ್ಲಾ ಮಣ್ಣು

 

ಅಣ್ಣ ಮಾಡಿ ಕೊಟ್ಟಿದ್ದ ಬಣ್ಣದ ಗಾಳಿಪಟ ಒಮ್ಮೆ ಕಾಣೆಯಾಗಿ

ಬರಿಗೈಲಿ ಮನೆಗೆ ಮರಳುವಾಗ ಕಣ್ಣುಗಳಿದ್ದವು ತೇವವಾಗಿ

 

ಲಗೋರಿ, ಕಣ್ಣು ಮುಚ್ಚಾಲೆ ಮತ್ತು ಕುಟ್ಟಿ ದೊಣ್ಣೆಯಾಟ

ಬಾರದೇ ಇದ್ದರೂ ಆಡುತ್ತಿದ್ದ ಆ ಕ್ರಿಕೆಟ್ಟು, ಕಬಡ್ಡಿಯಾಟ

 

ಪಂಜರದಲಿ ಸಾಕಿದ್ದೆವು ಗಿಳಿಗಳನು ಬಾಳೆ ಹಣ್ಣುಗಳ ತಿನಿಸಿ

ದಾಸು ನಾಯಿಗೆ ವಾರ ವಾರವೂ ಸ್ನಾನ ತಣ್ಣೀರಲ್ಲಿ ನೆನೆಸಿ

 

ಚಿಕ್ಕಮ್ಮನ ಮಗನೊಮ್ಮೆ ನಮ್ಮಂಗಳಕೆ ಕಾಲಿಟ್ಟು ಗದರಲು

ಹಾರಿ ಹೋದ ಗಿಳಿಗಳು ಮನಸ್ಸು ಮಾಡಲೇ ಇಲ್ಲ ಮರಳಲು

 

ದಾಸು ನಾಯಿಗೆ ವಿಷವುಣ್ಣಸಿದರು ಯಾರೋ ನಿಶಾಚರರು

ಆತ ಕೊರಗಿ ಸತ್ತಾಗ ನಮ್ಮ ಮನೆಯಲ್ಲೆಲ್ಲರೂ ಮರುಗಿದರು

 

ಮದಗದ ತಿಳಿ ನೀರಲ್ಲಿ ಕೋಣಗಳ ಜೊತೆಗೆ ನಮಗೂ ಸ್ನಾನ

ಸಿಪಿಸಿ ಬಸ್ಸು ಬಡಿದಾಗ ಒಂದು ಕೋಣದ ಹಠಾತ್ ಅವಸಾನ

 

ನೆನಪುಗಳಿಗೇನೂ ಕೊರತೆ ಇಲ್ಲ ಅವು ಹರಿವ ನೀರಿನಂತೆ

ಕಟ್ಟೆಯೊಡೆದು ಬರಬೇಕು ಅದಕೆ ನಾನೀಗ ಕಾದು ನಿಂತೆ !!!

***************************************


ಮಂತ್ರಿಯಾಗುವಾಸೆ ಬೀದಿ ನಾಯಿಗಳಿಗೇಕೆ???

13 ನವೆಂ 09

 

 

ನೆರೆ ಪರಿಹಾರದ ಕೆಲಸಕ್ಕೆ ಖರ್ಚಾಗಲಿವೆ ಸಾವಿರಾರು ಕೋಟಿ ರೂಪಾಯಿಗಳು

ಅದಕ್ಕೇ ಮನದಲ್ಲಿ ಮಂತ್ರಿಯಾಗುವಾಸೆ ತುಂಬಿಕೊಂಡಿವೆ ಬೀದಿ ನಾಯಿಗಳು

 

ಅಲ್ಲಿನ ಸಾವಿರ ಸಾವಿರದಲ್ಲಿ ಒಂದೆರಡು ತಮ್ಮ ಕಿಸೆಗೆ ಸೇರಿಸಿಕೊಂಡರೂ ಸಾಕು

ಮುಂದಿನ ಐದಾರು ತಲೆಮಾರೂ ನಿಶ್ಚಿಂತೆಯಿಂದ ನಡೆಸಬಹುದು ತಮ್ಮ ಬದುಕು

 

ಸಭಾಪತಿಯಂತಹ ಗೌರವಾನ್ವಿತ ಹುದ್ದೆಯೂ ಯಾರಿಗೂ ಬೇಡವಾಗಿದೆ ಇಂದು

ಗೌರವ ಬೇಕಿಲ್ಲ ಎಲ್ಲರೂ ಕೇಳುವುದು ದುಡ್ಡು ಮಾಡಲಾಗೋ ಹುದ್ದೆ ಬೇಕೆಂದು

 

ಜನತೆಗೆ ಸಮೀಪವಾಗಿ ಸ್ಪಂದಿಸಿದಷ್ಟೂ ಕಿಸೆಗೆ ಕಾಸು ಸೇರುತ್ತಾ ಇರುತ್ತದೆ ಸರಾಗ

ಕಾಸು ಮಾಡಿಕೊಂಡರೆ ತಾನೇ ಮಂದಿನ ಚುನಾವಣೆಯಲ್ಲಿ ಗೆಲ್ಲಬಹುದು ನೀವಾಗ

 

ಶೋಭ ಇದ್ದಿದ್ದರೆ ಕಾಸು ಮಾಡಲಾಗುತ್ತಿರಲಿಲ್ಲ ಎನ್ನುವುದೆಲ್ಲರಾಡುವ ಪಿಸುಮಾತು

ಆದರೆ ಯಡ್ಡಿ ಮಕ್ಕಳೂ ಇದರಲ್ಲಿ ಕಡಿಮೆ ಇಲ್ಲ ಎನ್ನುವುದೀಗ ಬೀದಿ ಬೀದಿ ಮಾತು

 

ದೇವರಾಣೆ ಹಾಕಿ ಮತ್ತೆ ಮಗನನ್ನು ಸಂಸದನನ್ನಾಗಿಸಿದ ಯಡ್ಡಿಯ ಆ ಮಹಾ ತಪ್ಪು

ಸಾರ್ವಜನಿಕವಾಗಿ ಕಣ್ಣೀರಿಳಿಸುವಂತೆ ಮಾಡಿತೀಗ ಮೋರೆಗೆ ಬಳಿದಂತೆ ಮಸಿ ಕಪ್ಪು

**********************************************


ನನ್ನ ಆ ಅಪರಿಚಿತ “ಫ್ಯಾನು”

12 ನವೆಂ 09
 
 
ಪದೇ ಪದೇ ಸಂದೇಶ ಕಳುಹಿಸಿ

ಕುಶಲೋಪರಿ ವಿಚಾರಿಸುತ್ತಿದ್ದ

ಜಂಗಮ ದೂರವಾಣಿ ಸಂಖ್ಯೆಗೆ

ಸಂದೇಶ ರವಾನಿಸಿ ಕೇಳಿದೆ ಹೀಗೆ: 

 

“ಯಾರ್ರೀ ನೀವು ಅಪರಿಚಿತರು

ಹೀಗೆ ನನ್ನ ಕುಶಲವನ್ನು

ಸುಖಾ ಸುಮ್ಮನೇ

ವಿಚಾರಿಸ್ತೀರಲ್ಲಾ?

ಉತ್ತರಿಸಲು ನನಗೆ

ನಿಮ್ಮ ಪರಿಚಯ ಆಗಬೇಕಲ್ಲಾ”

 

“ನಾನು ನಿಮ್ಮ “ಆಸುಮನ” ದ

ಓದುಗೆ, ಅಲ್ಲದೆ ಆಗಿದ್ದೇನೆ

ನಾನೀಗ ನಿಮ್ಮ “ಫ್ಯಾನು”

 

“ನನಗೇಕೋ ಚಳಿ ಆಗ್ತಿದೆ

ಸದ್ಯಕ್ಕೆ ನಿಲ್ಲಿಸಿ ಬಿಡ್ತೀರಾ

ನನಗೇನೂ ಬೇಕಾಗಿಲ್ಲರೀ

ಈ ಅಪರಿಚಿತ “ಫ್ಯಾನು”

 

“ಬೇಡವೆಂದರೆ ಹೇಗೆ

ನೀವ್ಯಾರು ಬೇಡವೆನ್ನಲು?”

 

“ಸರಿ ನಿಮ್ಮಿಷ್ಟ, ಆದರೆ

ನಿಜಕ್ಕೂ ಮನಸ್ಸಿಲ್ಲ ಕಣ್ರೀ

ನನಗೆ ಅಪರಿಚಿತರೊಂದಿಗೆ

ಹೀಗೆಲ್ಲಾ ಸಂಭಾಷಿಸುತಿರಲು”


ಯಡ್ಡಿಗಳೇ ದಯವಿಟ್ಟು ರಾಜೀನಾಮೆ ನೀಡಿ!!!

12 ನವೆಂ 09

ಯಡ್ಡಿಗಳೇ ಘನಸ್ತಿಕೆಯನ್ನು ಉಳಿಸಿಕೊಂಡು ಕೂಡಲೇ ರಾಜೀನಾಮೆ ನೀಡಿ

ನಿಮ್ಮದಲ್ಲದೇ ಇದ್ದರೂ ಹುದ್ದೆಯ ಘನಸ್ತಿಕೆ ಬಗ್ಗೆ ಕೊಂಚ ಯೋಚಿಸಿ ನೋಡಿ

 

ಮುಖ್ಯಮಂತ್ರಿಯನ್ನುಳಿದು ಎಲ್ಲರೂ ಬೇಕಾಬಿಟ್ಟಿ ಮಾತಾಡುವವರೇ ಈಗ

ನಿಮ್ಮ ಬಾಯಿಗೆ ಮಾತ್ರ ಹೈಕಮಾಂಡ್ ಜಡಿದಿದ್ದಾರೇನೋ ದೊಡ್ಡ ಬೀಗ

 

ಸರಕಾರಕ್ಕೆ ಸೇರುವವರು ಯಾರೆಂಬ ಬಗ್ಗೆ ಹೇಳುತ್ತಾನೆ ರೇಣೂಕಾಚಾರ್ಯ

ಎಲ್ಲರೂ ಮನಬಂದಂತೆ ನಡೆದು ಕೊಳ್ಳುತ್ತಿರಲು ನಿಮ್ಮದೇನಿದೆಯೋ ಕಾರ್ಯ

 

ಗೂಂಡಾಗಳ ಗುಂಪಿನಲ್ಲೂ ಕೆಲವು ನಿಯಮಗಳಿವೆ ಎಂದು ಎಲ್ಲರಿಗೂ ಗೊತ್ತು

ನಿಯಮಗಳೇ ಇಲ್ಲದ ಗೂಂಡಾ ಮಂತ್ರಿಗಳಿಗೆ ನೀವಾಗಿದ್ದೀರೀಗ ಬರೀ ತೊತ್ತು 

 

ಗ್ರೆಗ್ ಚಾಪೆಲ ಎಂಬ ತರಬೇತುದಾರ ಅಂದು ಅಂಟಿಕೊಂಡಿದ್ದನಲ್ಲ ತನ್ನ ಹುದ್ದೆಗೆ

ತಂಡದ ಸದಸ್ಯರೆಲ್ಲಾ ತನ್ನ ವಿರುದ್ಧವಾಗಿದ್ದರೂ ಇದ್ದು ಬಿಟ್ಟ ತಾನು ತನ್ನ ಪಾಡಿಗೆ

 

ಮುಂದೊಂದು ದಿನ ಹೇಳ ಹೆಸರಿಲ್ಲದೆ ಗ್ರೆಗ್ ಚಾಪೆಲ ಚಾಪೆ ಮಡಿಸಿಟ್ಟು ಹೊರಟ

ನೀವೂ ಎಚ್ಚೆತ್ತು ಕೊಳ್ಳದಿದ್ದರೆ ನಿಮ್ಮ ಕೈಗೂ ನೀಡುತ್ತಾರೆ ಮುಂದೊಮ್ಮೆ ಕರಟ

 

ಸಮಾಜ ಸೇವೆ ಮಾಡುವುದಕ್ಕೆ ಹಲವು ಮಾರ್ಗಗಳಿವೆ ಚಿಂತೆಯೇ ಬೇಡ ನಿಮಗೆ

ನಿಮ್ಮ ಮಗನಿದ್ದಾನೆ ಕೊಳ್ಳೆ ಹೊಡೆಯುವುದಕ್ಕೆ ನೀವು ಸದ್ಯ ಹೊರಟು ಬಿಡಿ ಮನೆಗೆ