ನಲವತ್ತೊಂಬತ್ತರಲ್ಲಿ ವಿಶೇಷವೆನಿಸಿದ ಆ ಮೂರು ದಿನಗಳು!

 

ಭಾರತೀಯ ವಾಯುಸೇನೆಯ ಸೇವೆಯಲ್ಲಿದ್ದ ದಿನಗಳವು. ಆಗ ಹರ್ಯಾಣಾದ ಅಂಬಾಲಾ ಎನ್ನುವ ಊರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ನನ್ನ ಪತ್ನಿಯೊಂದಿಗೆ ವಾಸವಾಗಿದ್ದೆ.
 
ಒಂದು ಮುಂಜಾನೆ ಗಾಢ ನಿದ್ದೆಯಲ್ಲಿದ್ದ ನನಗೆ, ಬಾಗಿಲು ಬಡಿದ ಸದ್ದಿನಿಂದಾಗಿ ಎಚ್ಚರವಾಯ್ತು. ಸಮಯ ನೋಡಿದರೆ ಮುಂಜಾವಿನ ಐದು ಘಂಟೆ.
 
ಆ ಅನಿರೀಕ್ಷಿತವಾದ ಬಾಗಿಲ ತಟ್ಟುವಿಕೆಯಿಂದ ಭಯ, ಆಶ್ಚರ್ಯ ಎರಡೂ ಆಯ್ತು.
 
ಬಾಗಿಲು ತೆರೆದು ನೋಡಿದರೆ ಕೈಯಲ್ಲಿ ಬಿಸಿ ಬಿಸಿ “ಕೇಕ್” ಒಂದನ್ನು ಹಿಡಿದು ಹೇಮಕ್ಕ ನಿಂತಿದ್ದಾರೆ.
ಜೊತೆಗೇ “ಹ್ಯಾಪಿ ಬರ್ತ್‍ಡೇ ಟು ಯೂ…ಸುರೇಶಣ್ಣಾ…” ಎನ್ನುವ ಹಾರೈಕೆ.
 
ಅಂದು ೧೬ ಜುಲಾಯಿ ೧೯೯೦. ನನ್ನ ೨೯ ನೇ ಜನ್ಮದಿನ. ಬಹುಶಃ ನನ್ನ ಜೀವನದಲ್ಲಿ ತೀರ ಭಿನ್ನವಾಗಿ ಆಚರಿಸಲ್ಪಟ್ಟ ಮೊದಲ ಜನ್ಮದಿನ ಅದು. ಅಂದು ನಾನು ಅನುಭವಿಸಿದ ಆನಂದ ಬಣ್ಣಿಸಲಾಗದ್ದು.
 
ಆ ಹೇಮಕ್ಕ ಯಾರು ಅಂತೀರಾ? ವಾಯುಸೇನೆಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಮಂಗಳೂರಿನವರಾದ ಶ್ರೀಯುತ ಡಿ.ಸಿ. ನಾಣಯ್ಯನವರ ಧರ್ಮಪತ್ನಿ. ಅವರು ನಾವು ವಾಸವಾಗಿದ್ದ ಬಾಡಿಗೆ ಮನೆಯ, ಎದುರುಗಡೆ ಮನೆಯಲ್ಲಿ ವಾಸಿಸುತ್ತಿದ್ದರು.
 
ಮುಂಜಾನೆ ನಾಲ್ಕು ಘಂಟೆಗೆಲ್ಲಾ ಎದ್ದು, ಪತಿ ಪತ್ನಿಯರು ಸೇರಿ ತಯಾರಿಸಿದ್ದ ಕೇಕ್‍ನ ಸವಿಗಿಂತ ಅದರಲ್ಲಿ ಅಡಗಿದ್ದ ಅವರೀರ್ವರ ಪ್ರೀತಿ, ಅಭಿಮಾನ, ಆತ್ಮೀಯತೆಯೇ ಅಧಿಕವಾಗಿತ್ತು. ಸದ್ಯ ಉಡುಪಿಯಲ್ಲಿ ನೆಲೆಸಿರುವ ಅವರ ಮತ್ತು ನನ್ನ ನಡುವಣ ಸ್ನೇಹ, ಇಪ್ಪತ್ತು ವರುಷಗಳ ನಂತರವೂ, ಹಾಗೆಯೇ ಇದೆ.
 
* * * * *
 
ಸರಿಯಾಗಿ ಒಂಭತ್ತು ವರುಷಗಳ ನಂತರ ಅಂದರೆ ೧೬ ಜುಲಾಯಿ ೧೯೯೯. ಆಗ ನಾನು ಬೆಂಗಳೂರಿನಲ್ಲಿ ವಾಯುಸೇನೆಯ ಸೇವೆಯಲ್ಲಿ ಇದ್ದೆ ಅಲ್ಲದೇ ಸಂತ ಜೋಸೇಫ್ ಸಂಧ್ಯಾ ಕಾಲೇಜಿನಲ್ಲಿ “ಪಿಜಿಡಿಸಿಎ” ಅಭ್ಯಾಸ ನಡೆಸುತ್ತಿದ್ದೆ. ಅಂದು ಕಾಲೇಜಿಗೆ ಹೋಗುವಾಗ ಎರಡು ಕಿಲೋ ಸಿಹಿತಿಂಡಿ ತೆಗೆದುಕೊಂಡು ಹೋಗಿದ್ದೆ. ಅಂದು ನನ್ನ ಜನ್ಮದಿನವೆಂದು ಹೇಳಿ ಸಿಹಿತಿಂಡಿ ಹಂಚಿ ಎಲ್ಲರಿಗೂ ಅಶ್ಚರ್ಯಪಡಿಸೋಣ ಎನ್ನುವ ಉದ್ದೇಶ ನನ್ನದಾಗಿತ್ತು.
 
ಆದರೆ ಅಲ್ಲಿ ಆಶ್ಚರ್ಯಪಡುವ ಸರದಿ ನನ್ನದಾಗಿತ್ತು.  ತರಗತಿಯಲ್ಲಿದ್ದ ಅಷ್ಟೂ ಮಂದಿ ತಮ್ಮ ಹಸ್ತಾಕ್ಷರಗಳನ್ನು ಹಾಕಿದ್ದ, ಒಂದು ಸುಂದರವಾದ ಶುಭಾಶಯ ಪತ್ರವನ್ನು ನನಗಾಗಿ ತಯಾರಾಗಿ ಇಟ್ಟುಕೊಂಡು ಕಾಯುತ್ತಿದ್ದರು. ನಾನು ತರಗತಿಯನ್ನು ಪ್ರವೇಶಿಸುತ್ತಿದ್ದಂತೆಯೇ ಎಲ್ಲರೂ ಒಕ್ಕೊರಲಿನಿಂದ “ಹ್ಯಾಪೀ ಬರ್ತ್ ಡೇ ಟು ಯೂ…” ಎಂದು ಹಾಡ ತೊಡಗಿದರು.
 
ಕಂಪ್ಯೂಟರ್ ತರಬೇತಿ ಕೇಂದ್ರದ ಡೀನ್‍ರಿಂದ ನನ್ನ ಜನ್ಮ ದಿನಾಂಕ ತಿಳಿದು, ಆತನೂ ಸೇರಿಕೊಂಡು, ನಾಗೇಂದ್ರ ಪ್ರಸಾದ್, ಕವಿತಾ, ಮೀನಾ ಡಿಸೋಜಾ, ಸೆಲ್ವಮ್ಮ, ಬಸವರಾಜ್, ಸುಗಂಧಿ, ಸೌರವ್, ಎನ್ನುವ ಹಲವೇ ಮಂದಿ ಸೇರಿ ಯೋಜಿಸಿದ ಕಾರ್ಯವದಾಗಿತ್ತು. ಅಂದೂ ನನಗೆ ಆದ ಸಂತಸ ಅಷ್ಟಿಷ್ಟಲ್ಲ. ಎಲ್ಲರಿಗೂ ಸಿಹಿತಿಂಡಿ ಹಂಚಿ ತುಂಬು ಮನದಿಂದ ಧನ್ಯವಾದಗಳನ್ನು ತಿಳಿಸಿದ್ದೆ.
 
* * * * *
 
ಅಲ್ಲಿಂದ ಸರಿಯಾಗಿ ಹನ್ನೊಂದು ವರುಷಗಳ ನಂತರ, ಅಂದರೆ, ಕಳೆದ ೧೬ ಜುಲಾಯಿ ೨೦೧೦ರಂದು ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಆತ್ಮೀಯರಾದ ರಾಘವೇಂದ್ರ ನಾವಡರು, ನಾನು ಕಛೇರಿಯನ್ನು ತಲುಪುವ ಮೊದಲೇ, ಹೊರನಾಡಿನಿಂದ ಕರೆಮಾಡಿ ಶುಭ ಹಾರೈಸಿದ್ದಲ್ಲದೇ, “ಹರೀಶ ಆತ್ರೇಯರು ಸಂಪದದಲ್ಲಿ ತಮ್ಮ ಬಗ್ಗೆ ಸುಂದರವಾದ ಲೇಖನ ಬರೆದು ಶುಭ ಹಾರೈಸಿದ್ದಾರೆ” ಅನ್ನುವ ಸುದ್ದಿಯನ್ನೂ ತಲುಪಿಸಿದ್ದರು. ಕಛೇರಿಗೆ ಬಂದು ಸಿರಿಗನ್ನಡ ಸಂಪದ ತೆರೆದು ನೋಡಿದರೆ ಹರೀಶ ಆತ್ರೇಯರ ಶುಭಾಶಯ ಲೇಖನ ನನ್ನನ್ನು ಮಂತ್ರ ಮುಗ್ಧನನ್ನಾಗಿಸಿಬಿಟ್ಟಿತ್ತು. ಅಷ್ಟೊಂದು ದೀರ್ಘವಾದ ಲೇಖನ, ನನ್ನ ಬಗ್ಗೆ ಅಷ್ಟೊಂದು ವಿಚಾರ ಸಂಗ್ರಹಮಾಡಿಕೊಂಡು, ಬಹುಶಃ ನನ್ನನ್ನು ನನಗಿಂತಲೂ ಚೆನ್ನಾಗಿ ಅರಿತವರಂತೆ ಬರೆದಿದ್ದ ಶೈಲಿ, ನನ್ನನ್ನು ಮೌನಕ್ಕೆ ತಳ್ಳಿ ಬಿಟ್ಟಿತ್ತು. ಅಂದಿನ ದಿನವೂ ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿಯದ ದಿನವಾಗಿ ಮಾರ್ಪಟ್ಟು ಬಿಟ್ಟಿತು. ಆ ನೆನಪನ್ನು ಇನ್ನೂ ಭದ್ರಪಡಿಸಲು ನೆರವಾದದ್ದು ಆತ್ಮೀಯ ಸಂಪದಿಗರಾದ ರಾಘವೇಂದ್ರ ನಾವಡ, ಭಾಗ್ವತ ಮತ್ತು ಗೋಪಾಲ ಮಾ ಕುಲಕರ್ಣಿಯವರು ಅಂದು ನನಗಾಗಿ ಬರೆದು ಪ್ರಕಟಿಸಿದ ಕವನಗಳು ಮತ್ತು ಅಲ್ಲಿನ ಪುಟಗಳಲ್ಲಿ ಪ್ರತಿಕ್ರಿಯೆಗಳ ಮೂಲಕ ನನಗೆ ಶುಭ ಹಾರೈಸಿ ಅಭಿಮಾನ, ಪ್ರೀತಿ ವಿಶ್ವಾಸಗಳ ಮಹಾಪೂರವನ್ನೇ ಹರಿಸಿದ ಸಹೃದಯಿ ಸಂಪದಿಗರು (ಸಿರಿಗನ್ನಡ ಸಂಪದ ಅಂತರ್ಜಾಲ ತಾಣದ ಸದಸ್ಯರು).
 
* * * * *
ನನ್ನ ಜೀವನದಲ್ಲಿ ಬಂದು ಹೋದ ನಲವತ್ತೊಂಭತ್ತು ಜನ್ಮದಿನಗಳ ಪೈಕಿ, ಈ  ಮೂರು ಜನ್ಮದಿನಗಳ ನೆನಪು ನನ್ನ ಮನದಲ್ಲಿ ಸದಾ ಹಸಿರಾಗೇ ಇದೆ ಮತ್ತು ಇರುತ್ತದೆ. ಜೊತೆಗೇ, ನಾನು ಹೀಗೆ, ವಿಭಿನ್ನ ರೀತಿಯಲ್ಲಿ ಜನರ ಆತ್ಮೀಯತೆ ಮತ್ತು ಅಭಿಮಾನ ಗಳಿಸುವುದಕ್ಕೆ, ಕಾರಣವಾದರೂ ಏನಿದ್ದಿರಬಹುದು ಎಂದು ನನ್ನ ಮನಸ್ಸು ಸುದೀರ್ಘ ಚಿಂತನೆಗೆ ಒಳಗಾಗುತ್ತದೆ.
 
 
ನಾನು ಇದಕ್ಕೆಲ್ಲಾ ಅರ್ಹನೇ ಎನ್ನುವ ಪ್ರಶ್ನೆಯೂ ಕಾಡುತ್ತದೆ.
 
 
ಬಹುಶಃ ಇದಕ್ಕೆ ಉತ್ತರ ಹುಡುಕುವುದು ಕಷ್ಟ.

*************************

6 Responses to ನಲವತ್ತೊಂಬತ್ತರಲ್ಲಿ ವಿಶೇಷವೆನಿಸಿದ ಆ ಮೂರು ದಿನಗಳು!

 1. bhadravathi ಹೇಳುತ್ತಾರೆ:

  ಶತಕಾರ್ಧದ ಹೊಸ್ತಿಲಲ್ಲಿ ನಿಂತಿರುವ,
  ಯುವ ಹೃದಯಿಗೆ ಶುಭವಾಗಲಿ.
  ಮತ್ತೊಂದು, ಮಗುದೊಂದು “ಗಾರ್ಡ್” ಗಳನ್ನು ತೆಗೆದುಕೊಳ್ಳುತ್ತಾ ನೂರ್ಕಾಲ ಬಾಳಿ ಸುರೇಶ್

 2. ಹೇಮಕ್ಕಾ, ನಾಣಯ್ಯ ಹಾಗೂ ಶ್ಯಾಮಲ,

  ಹೃತ್ಪೂರ್ವಕ ಅಭಿವಂದನೆಗಳು ನಿಮ್ಮೂವರಿಗೂ

 3. Shamala ಹೇಳುತ್ತಾರೆ:

  ಮತ್ತೊಮ್ಮೆ ಓದಿದಾಗ ಇನ್ನೆರಡು ಸಾಲು ಬರೆಯಬೇಕೆನಿಸಿತು…. ನಾನು ಅರ್ಹನೇ ಎಂದು ಯೋಚಿಸುವ ಅಗತ್ಯವಿಲ್ಲ ಎಂದು ನನ್ನ ಅಭಿಪ್ರಾಯ. ಯಾವುದು ನಮಗೆ ಲಭ್ಯವಿಲ್ಲವೋ, ಯಾವುದಕ್ಕೆ ನಾವು ಅರ್ಹರಲ್ಲವೋ ಅದು ನಮಗೆ ಸಿಕ್ಕುವುದೇ ಇಲ್ಲ!!! ಈಗ ನಾವು ಅನುಭವಿಸುತ್ತಿರುವುದೆಲ್ಲಾ ಆಗಲೇ ನಾವು ಮುಂಗಡವಾಗಿ ಸೇರಿಸಿಟ್ಟುಕೊಂಡಿದ್ದೇ ಅಲ್ಲವೇ……? ಅದೆಲ್ಲಾ ಬಿಟ್ಟು… ಇನ್ನೂ ಉತ್ತಮ ಕವನಗಳನ್ನು ಬರೆದು, ಪ್ರಕಟಿಸಿ….. 🙂 ಓದಲು ಕಾಯುತ್ತಿರುತ್ತೇವೆ…..

  ಶ್ಯಾಮಲ

 4. Shamala ಹೇಳುತ್ತಾರೆ:

  ನಮಸ್ಕಾರ ಸುರೇಶ್….
  ಎಂಥಹ ಹೃದಯಸ್ಪರ್ಶೀಯ ಮಾತುಗಳು ಬರೆದಿದ್ದಾರೆ ನಿಮ್ಮನ್ನು ಮೆಚ್ಚುವ ನಿಮ್ಮ ಸ್ನೇಹಿತರು!!!. ನೀವು ಅವರನ್ನು ಸ್ಮರಿಸಿರುವ ರೀತಿಯೂ ಅಷ್ಟೇ ಮುದ್ದಾಗಿದೆ…. ಹೇಮಕ್ಕ (ನಾನೂ ಅವರನ್ನು ಹಾಗೆ ಕರೆಯಬಹುದೆಂಬ ನಂಬಿಕೆಯಿಂದ..) ಹೇಳಿರುವಂತೆ… ನಮ್ಮ ವ್ಯಕ್ತಿತ್ವವನ್ನು ನಾವೇ ತುಲನೆ ಮಾಡಿ, ನೋಡಿ… ಏನೂ ನಿರ್ಧರಿಸಲಾಗುವುದಿಲ್ಲ….. ನಮ್ಮನ್ನು ಇನ್ನೊಬ್ಬರ ಕಣ್ಣಿನಲ್ಲಿ ಕಾಣುವುದೇ ಜೀವನ ಅಲ್ವಾ ಸುರೇಶ್….. ಇರುವವರೆಗೂ ನಮ್ಮಿಂದ ಸಾಧ್ಯವಾದಷ್ಟೂ ಪ್ರೀತಿಯನ್ನು, ವಿಶ್ವ ಪ್ರೇಮವನ್ನೂ ಹಂಚುವುದೇ ನಮ್ಮ ಹವ್ಯಾಸವಾಗಿಸಿಕೊಂಡಲ್ಲಿ…. ನಿಜವಾಗಲೂ ನಮ್ಮ ಬದುಕೂ, ಜೊತೆಗಿರುವವರ ಬಾಳೂ, ಪ್ರಪಂಚವೂ ಎಲ್ಲವೂ ಸುಂದರವಾಗಿರತ್ತೆ….. ಒಳ್ಳೆಯ ಸಹೃದಯವಂತ ಸ್ನೇಹಿತರನ್ನು ಹೊಂದಿರುವ ನಿಮಗೆ ಭಗವಂತ ನೆಮ್ಮದಿ, ಸಂತೋಷ, ಇನ್ನೂ ಹೆಚ್ಚು ಹೆಚ್ಚು ಸ್ನೇಹಿತರ ಬಳಗ ಎಲ್ಲಾ ಕೊಡಲಿ ಎಂದು ಹಾರೈಸುತ್ತೇನೆ. ನಿಜಕ್ಕೂ ನನ್ನ ಮನದ ತುಂಬಾ ಹರುಷ ತುಂಬಿತು ಇದೆಲ್ಲಾ ಓದಿ….. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು…..

  ಶ್ಯಾಮಲ

 5. Nanaiah D C ಹೇಳುತ್ತಾರೆ:

  Most of the people may not remember,
  Some may remember,but, may not submit,
  A Few may remember, and submit in person;

  But, you are the rare one to remember, to submit and
  appreciate the good things, in front of everybody.
  We have a lot of things to learn from you.

  Thank you Dear!

 6. ಹೇಮ ನಾಣಯ್ಯ ಹೇಳುತ್ತಾರೆ:

  ಹಾಯ್ ಸುರೇಶಣ್ಣಾ,
  ಲೇಖನ ಓದಿ ವಾಯುಸೇನೆಯ ದಿನಗಳನ್ನು ನೆನಪಿಸಿದ ಹಾಗಾಯ್ತು. ಕೆಲವೊಮ್ಮೆ ನಮ್ಮ ವ್ಯಕ್ತಿತ್ವ ನಮಗೇ ತಿಳಿದಿರುವುದಿಲ್ಲ. ಇನ್ನೊಬ್ಬರಿಂದ ತಿಳಿಯಬೇಕಾಗುತ್ತದೆ. ಇದಕ್ಕೆ ನೀವು ಅರ್ಹರು. ನೀವು ಸ್ಮರಿಸಿದ ರೀತಿ ನಿಜಕ್ಕೂ ಅಭಿನಂದನಾರ್ಹ ಮತ್ತು ಅಭಿವಂದನಾರ್ಹ. ನಾವು ಮಾಡಿದ್ದು ಏನೂ ಇಲ್ಲ. ಆದರೆ ನೀವು ನೆನಪಿಟ್ಟುಕೊಂಡಿರುವುದು ಬಹಳ ದೊಡ್ಡ ವಿಷಯ. ಉಪಕಾರ ಸ್ಮರಣೆ ಮೆಚ್ಚುವಂಥದ್ದು.
  – ನಿಮ್ಮ ಹೇಮಕ್ಕ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: