ಪ್ರತಿಕ್ರಿಯೆಗಳಿಲ್ಲದೆಯೇ…!!!

29 ಜುಲೈ 09
 

ಹತ್ತಿಪ್ಪತ್ತು ಪ್ರತಿಕ್ರಿಯೆಗಳ ಜೊತೆಗೆ

ಮೂರು ನಾಲ್ಕುನೂರು ಪೆಟ್ಟು ತಿಂದ

ಬರಹಗಳಿಗಿಂತ ಪ್ರತಿಕ್ರಿಯೆಗಳಿಲ್ಲದೆಯೇ

ನೂರಾರು ಪೆಟ್ಟುಗಳ ತಿಂದ ಬರಹವೇ

ಬಹು ಪಾಲು ಲೇಸೆಂದ ಈ ಅಲ್ಪಜ್ಞ!!!

 

(“ಪೆಟ್ಟು ತಿಂದ” ಅನ್ನುವ ಪದಗಳನ್ನು “hits ಪಡೆದ” ಅನ್ನುವ ಪದಗಳಿಗೆ ಪರ್ಯಾಯವಾಗಿ ಬಳಸಿದ್ದೇನೆ )

🙂


ಪ್ರತಿಮೆಯ ಸ್ಥಾಪಿಸುವುದೇಕೆ ಪರಭಾಷಿಗರ ನೆಲದಿ!!!

28 ಜುಲೈ 09
ನಮ್ಮವ್ವನ ಮೂರ್ತಿಯನು ನೆರೆಮನೆಯಂಗಳದಿ ಸ್ಥಾಪಿಸಿಲೇ
ನಮ್ಮವ್ವನ ನೆರೆಮನೆಯವರು ಗೌರವಿಸಲೆಂದು ನಾ ಆಶಿಸಲೇ

ನಾನೇ ನನ್ನವ್ವಗೆ ಕೊಡಲಾಗದಿದ್ದೊಡೆ ಕೈಯಾರೆ ಮರ್ಯಾದೆ
ನೆರೆಮನೆಯವರು ಅಗೌರವ ತೋರೆ ಮಾಡಬಹುದೇ ತಗಾದೆ

ಸರ್ವಜ್ಞನ ವಚನಗಳ ನೆನಪು ಕನ್ನಡಿಗರಿಗೇ ಸಾಕಷ್ಟಿಲ್ಲ ನಿಜದಿ
ಆತನ ಪ್ರತಿಮೆಯನು ಸ್ಥಾಪಿಸುವುದೇಕೆ ಪರ ಭಾಷಿಗರ ನೆಲದಿ

ಅನ್ಯ ಭಾಷೆಯಲಿ ಬರೆದು ಹೆಸರುವಾಸಿಯಾದರೆ ನಮಗೇನು
ಅವರ ಮೂರ್ತಿಗಳನು ನಾವಿಲ್ಲಿ ಸ್ಥಾಪಿಸಿ ಮೆರೆಸಲೇ ಬೇಕೇನು

ಕಾವೇರಿ ಹರಿಯದಿದ್ದಾಗ ಅಲ್ಲಿ ಸರ್ವಜ್ಞನ ಕಾಪಾಡುವರು ಯಾರು
ಹೊಗನೇಕಲ್ ಹೊಗೆ ಕಾರಿದರೆ ತಿರುವಳ್ಳುವರ‍್ರಿಗೆ ಇಲ್ಲಿ ಯಾರು

ವ್ಯಕ್ತಿ ನೀಡಿದ ಉಪದೇಶಗಳನು ಮರೆತು ಬಾಳುವವರೇ ನಾವೆಲ್ಲ
ಆದರೆ ವ್ಯಕ್ತಿಯನೇ ಹಗಲೆಲ್ಲಾ ಪೂಜಿಸುವ ಹುಚ್ಚು ನಮಗಿದೆಯಲ್ಲ

ಮಹಾತ್ಮನ ತತ್ವಗಳನು ದೂರಿ ಆತನನೇ ಅಲ್ಲ ಎಂಬರು ಸಾಧಕ
ಆದರೆ ಮಹಾತ್ಮಾಗಾಂಧೀ ರಸ್ತೆಗಳ ಸಂಖ್ಯೆ ಇಲ್ಲಿ ನೂರಕ್ಕೂ ಅಧಿಕ

ಶ್ರೀರಾಮನನು ದೇವರೆಂದು ಕೊಂಡಾಡುವ ನಮ್ಮ ಈ ನಾಡಿನಲ್ಲಿ
ಅಪ್ಪನನು ಕೊಲ್ಲುವ ಮಕ್ಕಳು ಸಿಗುತ್ತಾರೆ ಪ್ರತಿಯೊಂದು ಊರಿನಲ್ಲಿ

ಏನು ಹೇಳಿ ಹೋದರು ಎಂಬುವುದು ಮುಖ್ಯ ಆಗಿರಬೇಕು ನಿಜದಿ
ಆದರೆ ಯಾರು ಹೇಳಿದರು ಎನ್ನುವುದೇ ಮುಖ್ಯ ಆಗಿದೆ ಈ ಜಗದಿ
************************************


ಸಂಬಂಧಗಳು!!!

27 ಜುಲೈ 09
ಸಖೀ,

ಪರಾಮರ್ಶಿಸಿ ನೋಡಿದರೆ
ಈ ಸಂಬಂಧಗಳೇ ಹೀಗೆ
ಬೆಳೆದು ಬಿಡುತ್ತವೆ ಎಲ್ಲಾದರೂ
ಮನ ಬಂದ ಹಾಗೆ

ಹಲವರೊಡನೆ
ನಾವು ಎಷ್ಟೇ ಬಯಸಿದರೂ
ಅವು ಗಾಢವಾಗುವುದೇ ಇಲ್ಲ

ಕೆಲವರೊಡನೆ ತಂತಾನೆ
ಬೆಳೆದು ನಮ್ಮನದೆಂತು
ಬಂಧಿಸಿಯೇ ಬಿಡುವುದಲ್ಲ

ನೂರು ಮೈಲಿಗಳಾಚೆ ಇದ್ದರೂ
ನೆನೆಸಿದಾಗಲೆಲ್ಲ ಮನ ಮಿಡಿದು
ನೋಯಿಸಿಕೊಳ್ಳುವುದು ಇದೆ

ಒಂದೇ ಸೂರಿನಡಿ ವರ್ಷಾನುವರ್ಷ
ಇದ್ದರೂ ಪರಸ್ಪರರ ಅರ್ಥೈಸಿಕೊಳ್ಳದೇ
ಕೊರಗಿ-ಕೊರಗಿಸುವುದೂ ಇದೆ

ಒಂದೇ ತಾಯಿಯ ಮಕ್ಕಳು
ಬೆಳೆದು ಕಡು ವೈರಿಗಳಾಗಿ
ಕಾದಾಡುವುದನು ಕಂಡದ್ದಿದೆ

ಬಾಳ ಬಟ್ಟೆಯಲಿ ಎದುರಾದ
ಅಪರಿಚಿತರು ಮನವ ಹೊಕ್ಕು
ನಮ್ಮವರೆಂದೆನಿಸಿಕೊಂಡುದಿದೆ

ಒಂದೆಡೆ ನಾವು ಅದೆಷ್ಟೇ
ಪ್ರಯತ್ನಿಸಿದರೂ
ಬೆಳೆಯದೇ ಇರುವ ಸಂಬಂಧ

ಇನ್ನೊಂದೆಡೆ ತಂತಾನೆ ಬೆಳೆದು
ನಮ್ಮನ್ನು ಆವರಿಸಿ ಗಾಢವಾಗುತಿರುವ
“some” ಬಂಧ

ಪರಾಮರ್ಶಿಸಿ ನೋಡಿದರೆ
ಈ ಸಂಬಂಧಗಳೇ ಹೀಗೆ
ಬೆಳೆದು ಬಿಡುತ್ತವೆ ಎಲ್ಲಾದರೂ
ಮನ ಬಂದ ಹಾಗೆ
**********


ಮರೆಯಬೇಕು ಕೆಟ್ಟ ಗಳಿಗೆಗಳ!!!

22 ಜುಲೈ 09
ಸಖೀ,

ನಗುವುದಕೇ
ನಕ್ಕು ನಗಿಸುವುದಕೇ
ಸಮಯ ಸಾಲದಿರುವಾಗ
ದುಡುಕು ಬಿಗುಮಾನಗಳಲೇಕೆ
ವ್ಯರ್ಥ ವ್ಯಯಿಸುವೆ ಜೀವನದ
ಈ ಅಮೂಲ್ಯ ಕ್ಷಣಗಳನು

ಮರೆತು ಬಿಡು ವ್ಯಥೆಯ
ನಿನ್ನೆಯ ಆ ಹಳೆ ಕತೆಯ

ಮರೆತಿಲ್ಲವೇ ಆ ಸೂರ್ಯ
ಗ್ರಹಣ ಹಿಡಿಸಿದ ಚಂದ್ರನನು

ಕ್ಷಮಿಸಿ ಬೆಳಗುತಿಲ್ಲವೇ ತನ್ನ
ಪ್ರಭೆಯಿಂದಲೇ ಆತನನು

ಮರೆತಿಲ್ಲವೇ ಆ ಶಶಿ
ಸೂರ್ಯನಿಗೆ ಅಡ್ಡ
ನಿಂತಿದ್ದ ಭೂಮಿಯನು

ಚೆಲ್ಲುತಿಲ್ಲವೇ ಸದಾ
ಭೂಮಿಯುದ್ದಗಲಕೂ
ಬೆಳದಿಂಗಳನು

ಮರೆಯಬೇಕು
ಕೆಟ್ಟ ಗಳಿಗೆಗಳ
ದುಃಖದ ಕತೆಗಳ

ಮನ್ನಿಸಬೇಕು
ಮನ್ನಿಸಿ ಬೆರೆಯಬೇಕು

ರಾತ್ರಿ ಕಳೆದ ಮೇಲೆ
ಬೆಳಕು ಹರಿಯುವಂತೆ
ದುಃಖವದು ಅಳಿದ ಮೇಲೆ
ಸುಖದ ಆಗಮನವಂತೆ
*-*-*-*-*-*-*-*


ನಿಮ್ಮಾತ್ಮವನು ತನ್ನಲ್ಲಿ ಲೀನವಾಗಿಸದಿರಲಿ ಪರಮಾತ್ಮ!!!

21 ಜುಲೈ 09
(ಇಂದು ನಿಧನರಾದ ಸಂಗೀತ ವಿದುಷಿ, ಸಂಗೀತ ಸಾಮ್ರಾಜ್ಞಿ, ಪದ್ಮ ವಿಭೂಷಣ ಗಂಗೂಬಾಯಿ ಹಾನಗಲ್ ಅವರಿಗೆ ನನ್ನ ನಮನಗಳು)
 
 
ಗಾನ ವಿದುಷಿ ನಿಮ್ಮ ಸಂಗೀತವೆಂದೂ ಸಾಯುವುದಿಲ್ಲ
ಸಂಗೀತ ಸಾಮ್ರಾಜ್ಞಿ ನಿಮ್ಮ ನೆನಪೆಂದೂ ಅಳಿಯುವುದಿಲ್ಲ
 
ನಿಮ್ಮ ಜೀವನ ನಿಜಕೂ ಒಂದು ಸಂಗೀತ ಸುಧೆಯಂತೆ
ಸಂಗೀತಕೆ ನಿಮ್ಮಿಂದಲೇ ಹೊಸ ಅರ್ಥ ಬಂದಿಹುದಂತೆ
 
ಸಂಗೀತವನ್ನೇ ಜೀವನವನ್ನಾಗಿಸಿಕೊಂಡವರು ನೀವು
ಜೀವನವನ್ನೊಂದು ತಪಸ್ಸನ್ನಾಗಿಸಿಕೊಂಡವರು ನೀವು
 
ನಿಮ್ಮ ಸ್ವರ ಕೇಳಿ ರೋಮಾಂಚನಗೊಳ್ಳದವರೇ ಇಲ್ಲ
ನಿಮ್ಮ ಸ್ವರವ ಮತ್ತೆ ಮತ್ತೆ ಕೇಳಬೇಕೆನಿಸಿದವರೇ ಎಲ್ಲ
 
ಕಾಲಗರ್ಭದಲಿ ಸೇರಿ ಹೋಗುವವರು ನಿಮ್ಮಂತೆ ನಾವೂ
ಅಮರರು ನೀವು ಆದರಿಲ್ಲಿ ಇದ್ದೂ ಸತ್ತಂತಿರುವೆವು ನಾವು
 
ನಿಮ್ಮ ಆತ್ಮವನು ತನ್ನಲ್ಲಿ ಲೀನವಾಗಿಸದಿರಲಿ ಪರಮಾತ್ಮ
ಮತ್ತೆ ನಮ್ಮೀ ನಾಡಲ್ಲೇ ಹುಟ್ಟಿ ಬರಲಿ ನಿಮ್ಮಾ ಪಾವನಾತ್ಮ

ಕನ್ನಡ ಕಾಪಾಡುವ ಬದಲು ಹಿಂದಿಯ ಓಲೈಕೆಯಂತೆ!!!

20 ಜುಲೈ 09

ದಿಲ್ಲಿಗೆ ಹೋದ ಕನ್ನಡಿಗ ಹಿಂದಿ ಕಲಿಯಲೇ ಬೇಕು
ವ್ಯವಹಾರಕ್ಕಾಗಿ ಅಲ್ಲಿನ ಭಾಷೆ ಬಂದಿರಲೇ ಬೇಕು

ದಿಲ್ಲಿಯವನು ಇಲ್ಲಿಗೆ ಬಂದರಾತಗೆ ಕಷ್ಟ ಏನಿಲ್ಲ ಇಲ್ಲಿ
ಬೆಂಗಳೂರು ನಗರವನಾತ ಮಾಡಿಬಿಡುತ್ತಾನೆ ದಿಲ್ಲಿ

ನಮ್ಮ ಕನ್ನಡಿಗರೂ ಕಡಿಮೆ ಏನಿಲ್ಲ ಅತಿಥಿ ಸತ್ಕಾರದಲ್ಲಿ
ಅವರೊಂದಿಗೆ ಮಾತಾಡುತ್ತಾರೆ ಅವರದೇ ಭಾಷೆಗಳಲ್ಲಿ

ಕನ್ನಡವನು ಇಲ್ಲಿ ಯಾರೂ ಕಲಿಯಯಬೇಕೆಂದೇನಿಲ್ಲ
ಅನ್ಯ ಭಾಷೆಯ ಚಟ ನಮ್ಮಲ್ಲಿ ಎಲ್ಲರಿಗೂ ಇದೆಯಲ್ಲ

ಬಸ್ಸುಗಳಲ್ಲಿನ್ನು ಹಿಂದಿಯಲಿ ಘೋಷಣೆ ಮಾಡ್ತಾರಂತೆ
ಕನ್ನಡ ಕಾಪಾಡುವ ಬದಲು ಹಿಂದಿಯ ಓಲೈಕೆಯಂತೆ

ಅಂಗವಿಕಲರಿಗೆ ನಮ್ಮ ಬಸ್ಸಿನಲಿ ಬೇಕಾದ ವ್ಯವಸ್ಥೆಗಳಿಲ್ಲ
ಆದರೆ ಹಿಂದೀ ಭಾಷಿಗರಿಗೆ ಮರ್ಯಾದೆ ಭಾರೀ ಇದೆಯಲ್ಲ

ಮುಖ್ಯಮಂತ್ರಿ ಚಂದ್ರು ಕನ್ನಡಕ್ಕಾಗಿ ಭಾಷಣಗಳ ಬಿಗಿದರೆ
ನಮ್ಮ ಸರ್ಕಾರದ ಅಧಿಕಾರಿಗಳು ಕನ್ನಡವನು ಮರೆವವರೇ


ಕೊಡೆಗಳಿವೆ ಜಗದಿ!!!

20 ಜುಲೈ 09

ರಕ್ಷಿಸುವ ಕೊಡೆಗಳಿವೆ ಸಾಕಷ್ಟು ಕೊಡೆಗಳಿಗೇನೂ ಇಲ್ಲಿ ಬರವಿಲ್ಲ
ಆದರೀಗ ರಕ್ಷಣೆಯ ಕೊಡೆಗಳ ಅರಸಿ ಯಾರೂ ಹೋಗುವವರಿಲ್ಲ

ಕೊಡೆಗಳು ಎಂದಿಗೂ ಬಾರವು ತಂತಾನೇ ನಾವು ಇರುವೆಡೆಗೆ
ತಾವೇ ಅರಳಿ ರಕ್ಷಣೆಯ ನೀಡವು ನಮ್ಮ ಸುಡುತಿರುವ ತಲೆಗಳಿಗೆ

ಕೊಡೆಯ ಕೊಂಡುಕೊಂಬ, ಇಟ್ಟುಕೊಂಬ ರೂಢಿ ನಮ್ಮಲ್ಲಿರಬೇಕು
ನಾವು ಹೇಗಾದರೂ ಇದ್ದರೆ ಆಯ್ತೆಂಬ ನಮ್ಮ ಚಾಳಿಯ ಬಿಡಬೇಕು

ದುರಾಲೋಚನೆಗಳ ಮಳೆಯಲ್ಲೇ ತೊಯ್ದು ಕೊಚ್ಚಿ ಹೋಗುವ
ಹಂಬಲ ಈ ಮನಕೆ ಇರುವತನಕ ನಮ್ಮನ್ನು ಯಾರು ಕಾಯುವ

ದುಷ್ಟ ಆಲೋಚನೆಗಳಿಂದ ನಮ್ಮ ರಕ್ಷಿಸುವ ಕೊಡೆಗಳುಂಟು ನಿಜದಿ
ದುರಾಲೋಚನೆಗಳ ಬಿಟ್ಟು ಬಾಳಬೇಕೆಂಬ ಚಿತ್ತ ಯಾರಿಗುಂಟು ಜಗದಿ


ಹೂವಿನ ಚಿತ್ರ ಕಳಿಸಿಹೆ ನಿನಗೆ!!!

17 ಜುಲೈ 09

ನಲವತ್ತೊಂದು ವರುಷಗಳ ಹಿಂದಿನ ಒಂದು ಪ್ರಖ್ಯಾತ ಹಿಂದೀ ಚಲನ ಚಿತ್ರ ಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ. ಗೀತೆಯ ಮೂಲ ದಾಟಿಯನ್ನು ಕಾಯ್ದುಕೊಳ್ಳುವ ಪ್ರಯತ್ನ ಕೂಡ ಮಾಡಿರುತ್ತೇನೆ

ಚಿತ್ರ: ಸರಸ್ವತೀ ಚಂದ್ರ
ಗಾಯಕರು: ಮುಕೇಶ್ ಹಾಗೂ ಲತಾ ಮಂಗೇಶ್ಕರ್
ಸಾಹಿತ್ಯ: ಇಂದೀವರ್
ಸಂಗೀತ: ಕಲ್ಯಾಣ್ ಜೀ ಆನಂದ್ ಜೀ
ವರ್ಷ: ೧೯೬೮

ಹೂವಿನ ಚಿತ್ರ ಕಳಿಸಿಹೆ ನಿನಗೆ ಹೂವಲಿ ನನ್ನ ಪ್ರೀತಿಯಿದೆ
ಪ್ರಿಯತಮ ನೀನು ತಿಳಿಸು ನಿನಗೆ ನನ್ನೀ ಪ್ರೀತಿ ಸ್ವೀಕೃತವೇ

ಪ್ರೀತಿ ತುಂಬಿದೆ ಈ ಪತ್ರದಲಿ ಮುತ್ತುಗಳಿರುವಷ್ಟು ಸಾಗರದಲ್ಲಿ
ನಿನ್ನಾ ಕೈಗಳ ನಾ ಚುಂಬಿಸುತ್ತಿದ್ದೆ ನೀನಿರುತ್ತಿದ್ದರೆನ್ನ ಬಳಿಯಲ್ಲಿ

ನಿನಗೆ ನಿದ್ರೆ ಬರುತಿರಬಹುದು, ಕನಸೇನ ಕಂಡಿಹೆ ನೀನು
ಕಣ್ತೆರದಾಗ ಒಂಟಿ ನಾನು ನನಸಾಗಲೇ ಇಲ್ಲಾ ಕನಸು
ಒಂಟೀ ತನವನು ನೀಗುವೆ ನಾನು ತಾಳೀ ಕಟ್ಟಲು ಬಾ ನೀನು
ಪ್ರೀತಿಸಿ ನನ್ನ ಮರೆಯದಿರು ನೀ, ಪ್ರೀತಿಯ ಕಲಿಸಿದವಳು ನೀನು

ಹೂವಿನ ಚಿತ್ರ ಕಳಿಸಿಹೆ ನಿನಗೆ ಹೂವಲಿ ನನ್ನ ಪ್ರೀತಿಯಿದೆ
ಪ್ರಿಯತಮ ನೀನು ತಿಳಿಸು ನಿನಗೆ ನನ್ನೀ ಪ್ರೀತಿ ಸ್ವೀಕೃತವೇ

ಪ್ರೀತಿ ತುಂಬಿದೆ ಈ ಪತ್ರದಲಿ ಮುತ್ತುಗಳಿರುವಷ್ಟು ಸಾಗರದಲ್ಲಿ
ನಿನ್ನಾ ಕೈಗಳ ನಾ ಚುಂಬಿಸುತ್ತಿದ್ದೆ ನೀನಿರುತ್ತಿದ್ದರೆನ್ನ ಬಳಿಯಲ್ಲಿ

ಪತ್ರಗಳಿಂದ ತೃಪ್ತಿಯೇ ಇಲ್ಲ ಭೇಟಿಯ ಹಂಬಲ ಮನದಲ್ಲೀ
ಚಂದಿರ ಅಂಗಳಕ್ಕಿಳಿದು ಬರಲೀ ಅಂತಹ ರಾತ್ರಿ ನಮದಿರಲೀ
ಭೇಟಿ ಆಗುವ ಪರಿ ಹೇಗೆಂದು ನೀನೇ ನನಗೆ ಬರೆದು ಬಿಡು
ನಿನ್ನ ದಾರಿಯ ಕಾಯುತಲಿರುವೆ ಎಂದು ಬರುವೆ ನೀ ತಿಳಿಸಿ ಬಿಡು

ಹೂವಿನ ಚಿತ್ರ ಕಳಿಸಿಹೆ ನಿನಗೆ ಹೂವಲಿ ನನ್ನ ಪ್ರೀತಿಯಿದೆ
ಪ್ರಿಯತಮ ನೀನು ತಿಳಿಸು ನಿನಗೆ ನನ್ನೀ ಪ್ರೀತಿ ಸ್ವೀಕೃತವೇ

ಪ್ರೀತಿ ತುಂಬಿದೆ ಈ ಪತ್ರದಲಿ ಮುತ್ತುಗಳಿರುವಷ್ಟು ಸಾಗರದಲ್ಲಿ
ನಿನ್ನಾ ಕೈಗಳ ನಾ ಚುಂಬಿಸುತ್ತಿದ್ದೆ ನೀನಿರುತ್ತಿದ್ದರೆನ್ನ ಬಳಿಯಲ್ಲಿ

 


ಜೀವನದ ಪಯಣದಲಿ ಮತ್ತೊಂದು ವರುಷ!!!

16 ಜುಲೈ 09

ಜೀವನದ ಪಯಣದಲಿ ಈಗ ಮತ್ತೊಂದು ವರುಷ
ಕಳೆದು ಹೋದುದಕ್ಕಾಗಿ ನಾನು ಪಡಬೇಕೆ ಹರುಷ

ಹುಟ್ಟುವಾಗಿರಲಿಲ್ಲ ಅನ್ಯರಿಗಿಂತ ಭಿನ್ನವಾಗಿ ನಾನು
ಅಳುತ್ತಾ ಹುಟ್ಟಿರಬಹುದು ಎಲ್ಲರಂತೆ ಅಂದು ನಾನು

ನಕ್ಕು ನಲಿದಿರಬಹುದು ಅಲ್ಲಿ ನನ್ನನುಳಿದವರೆಲ್ಲರೂ
ಹುಟ್ಟಿದ ಮಗುವಿನಳುವನ್ನು ಯಾರೂ ಅಲ್ಲಿ ಕೇಳರು

ಬೆಳೆದಂತೆಲ್ಲಾ ನಾನ್ಯಾಕೋ ಅನ್ಯರಿಗಿಂತ ಭಿನ್ನನಾದೆ
ಸಾಕಷ್ಟು ನಕ್ಕು ನಲಿದೆ  ನಡು ನಡುವೆ ನಾ ಖಿನ್ನನಾದೆ

ವಯಸ್ಸಿಗೆ ಮೀರಿದ ಚುರುಕುತನ ನನ್ನಲ್ಲಿತ್ತು ದೈವದತ್ತ
ಹೊಗಳಿಸಿಕೊಂಡುದಕೂ ಜಾಸ್ತಿ ನಾ ಬೈಸಿಕೊಂಡೆನತ್ತ

ಹೊಗಳಿಕೆ ತೆಗಳಿಕೆಗಳಿಗೆ ಯಾವಾಗಲೂ ಇದೆ ಸಮಚಿತ್ತ
ನನ್ನ ಗಮನವಿತ್ತು ಸದಾ ನನ್ನ ಆಂತರಿಕ ಬೆಳವಣಿಗೆಯತ್ತ

ಕಂಡು ಕಂಡದ್ದನೆಲ್ಲಾ ವಿಮರ್ಶಿಸಿ ಅರಿವ ಭಿನ್ನವಾದ ಬುದ್ಧಿ
ಇದೇ ನನ್ನ ಕೆಟ್ಟ ಗುಣ ಅಂತಾಳೆ ಸದಾ ನನ್ನ ಸಖೀ ಪೆದ್ದಿ

ಗಳಿಸಿದ್ದು ಬಹಳಿಲ್ಲ ಸಹೃದಯರ ಸ್ನೇಹವೇ ನನ್ನ ಆಸ್ತಿ
ನಿಸ್ವಾರ್ಥ ಸ್ನೇಹಕ್ಕೆಂದೂ ನಾ ಕೊಡುವೆ ಬೆಲೆ ಜಾಸ್ತಿ

ಚಿಕ್ಕಂದಿನಲಿ ಅಪ್ಪಯ್ಯನವರಿಗೆ ತಕ್ಕ ಮಗನಾಗುವಾಸೆ
ಇಂದು ಇರುವ ಓರ್ವ ಮಗಳ ಭವ್ಯ ಭವಿಶ್ಯದ ಆಸೆ

ಮಗಳ ಭವ್ಯ ಭವಿಷ್ಯವೊಂದೇ ಈಗ ಈ ಮನದ ಕನಸು
ನನ್ನ ಆರೋಗ್ಯ ಇರಲೆಂದೂ ನನಸಾಗುವರೆಗೆ ಆ ಕನಸು

ನನ್ನ ಆತ್ಮೀಯರ ಶುಭ ಹರಕೆಗಳೇ ಸದಾ ನನಗೆ ಶ್ರೀರಕ್ಷೆ
ಆಗಿರಲು ನಾನು ಎದುರಿಸಬಲ್ಲೆ ಧೈರ್ಯದಿ ವಿಧಿಯ ಪರೀಕ್ಷೆ


ಮೌನ ಬೇಡ!!!

14 ಜುಲೈ 09
ಸಖೀ,
ಬೂದಿ ಮುಚ್ಚಿದ
ಕೆಂಡದಂತೆ ಆಡುತಿರಬೇಡ

ಸದಾ ಒಳಗೊಳಗೇ
ಬುಸುಗುಟ್ಟುತಿರಬೇಡ

ನನ್ನ ಮೇಲಿರುವ
ಸಿಟ್ಟನ್ನು ಇನ್ನಿತರರ
ಮೇಲೆ ಬರಿದೇ
ಹಾಯ ಬಿಡಬೇಡ

ಒಳಗಿರುವ ಕ್ರೋಧವನು
ಕಾರಿಬಿಡು ಒಮ್ಮೆಗೇ
ನಾ ನಾಶವಾದರೂ ಚಿಂತೆಯಿಲ್ಲ
ಉರಿದುಕೊಂಡು ಧುತ್ತನೇ

ಆದರೆ
ನಿನ್ನ ಈ ಮೌನದಿಂದ
ಉಸಿರುಗಟ್ಟಿಸಿಕೊಂಡು
ಪ್ರತಿಕ್ಷಣವೂ ಸಾಯುತಿರಲು
ಸಖೀ ನಿಜಕೂ
ನಾನು ಸಿದ್ಧನಿಲ್ಲ!
*-*-*-*-*-*-*