ವಾಲ್ ಮ್ಯಾಕೇ!

30 ಆಕ್ಟೋ 12

 

ಸಖೀ,

ರಾಮಾಯಣಕ್ಕೂ
ನನ್ನ ಬರಹಗಳಿಗೂ
ಸಾಮ್ಯತೆಯೇ ಇಲ್ಲ
ಎನ್ನುವೆಯೇಕೆ?

ರಾಮಾಯಣವನ್ನು
ಬರೆದವರು ವಾಲ್ಮೀಕಿ
ನಾನು ಬರೆಯುವುದೂ
ಈ  ಫೇಸ್‍ಬುಕ್
“ವಾಲ್”
ಮ್ಯಾಕೇ
*****

 


ಪರಿಶ್ರಮ ಸಾರ್ಥಕ!

30 ಆಕ್ಟೋ 12

ಸಖೀ,
ನಿಜ ಹೇಳಬೇಕೆಂದರೆ
ಎಲ್ಲವೂ ವಿಧಿ ಲಿಖಿತ
ನಾನು ಎಲ್ಲಿ ಹೇಗೆ
ಬರೆಯಬೇಕೆಂಬುದೂ
ಪೂರ್ವ ನಿರ್ಧರಿತ!

ಕೆಲವರಿಗೆ ಬರೀ ಮಸ್ತಕ,
ಕೆಲವರಿಗೆ ಹತ್ತಾರು ಪುಸ್ತಕ,
ಆದರೆ ಅಂತರ್ಜಾಲದ
ಗೋಡೆಯ ಮೇಲೆ ಬರೆದು
ನನ್ನ ಪರಿಶ್ರಮ ಸಾರ್ಥಕ!
 *************


ರೋಮಾಂಚನ!

30 ಆಕ್ಟೋ 12

ಪರದೇಶದ ಯಾವುದೋ

ಪತ್ರಿಕೆಯಲ್ಲಿ ನಮ್ಮೂರಿನ ಸುದ್ದಿ

ಪ್ರಕಟವಾದರೆ ಅದೇಕೆ

ನಮಗೆ ರೋಮಾಂಚನ?

ನಮ್ಮೂರಿನ ಪತ್ರಿಯೆಯಲ್ಲಿ

ಅಲ್ಲಿನ ಸುದ್ದಿ ಓದಿ

ರೋಮಾಂಚನ ಗೋಂಡಿದ್ದರೇ

ಹೇಳಿ ಅಲ್ಲಿಯ ಜನ?
************


ಜ್ಞಾನ-ವಿಜ್ಞಾನ!

30 ಆಕ್ಟೋ 12

ಜ್ಞಾನ ವಿಜ್ಞಾನದ ನಡುವೆ ಈ ತಿಕ್ಕಾಟ ಬೇಡ

ಅಜ್ಞಾನವೂ ಹಲವರಿಗೇ ಜ್ಞಾನವೇ ನೋಡಾ

ಅರಿಯ ಬೇಕಾಗಿಹುದಿಲ್ಲಿ ಬರೀ ನನ್ನ ಇರವನ್ನು

ನನ್ನ ಅರಿತಾದ ಮೇಲೆ ನನ್ನ ಒಳಗಿರುವವನನ್ನು!


ಬರುವೆಯಾ ನನ್ನ ಜೊತೆಗೆ ನೀನೂ?

30 ಆಕ್ಟೋ 12

ಸಖೀ,
ನನ್ನ ಬರಹ ಇಷ್ಟವಿಲ್ಲವೆಂದಾದರೆ ಒಮ್ಮೆ
ಹೇಳಿಬಿಡು ನೀ ನೇರವಾದ ನುಡಿಗಳಲ್ಲಿ
ಯಾಕೆ ನಾಟಕವಾಡುತಿಹೆ ಹೀಗೆ ಇಂದು
ಯಾರಿಗೂ ಅರಿವಾಗದಂತಹ ರೀತಿಯಲ್ಲಿ?

ನನ್ನಷ್ಟಕ್ಕೆ ಅದೆಲ್ಲೋ ಬರೆಯುತ್ತಲಿದ್ದವನ
ಕರೆದು ಸೇರಿಸಿ ಬರಹಗಾರರ ಗುಂಪಿನಲ್ಲಿ
ಇದೀಗ ಬರೆದುದೇ ಹೆಚ್ಚಾಯ್ತೆಂಬ ಮಾತ
ನುಡಿವೆ ಏಕೆ ಈ ರೀತಿ ಎಲ್ಲರೆದುರಿನಲ್ಲಿ?

ಗುಂಪಿನಲ್ಲಿ ಗೋವಿಂದ ನಾನಾಗಲಾರೆ
ಎಂದಾಗ ಕೇಳಲಿಲ್ಲ ನನಗೇ ಜೈ ಎಂದೆ
ಈಗ ನೋಡು ನನ್ನ ಮನದ ಅವಸ್ಥೆಯೇ
ನಿನ್ನದೂ, ಜನ ಬರೆದುದಿನ್ನು ಸಾಕೆಂಬೆ

ಶುರು ಶುರುವಿಗೆ ಎಲ್ಲವೂ ಸ್ವೀಕಾರಾರ್ಹ
ಮಾಡಿದೆಲ್ಲವೂ ಮನಕಾನಂದ ನೋಡು
ದಿನ ಕಳೆಯುತ್ತಾ ಹೋದಂತೆ ಕಳೆಗೆಟ್ಟು
ರೇಜಿಗೆ ಹುಟ್ಟಿಸಿದಂತಾಗಿ ಕಷ್ಟ ನೋಡು

ಪರೋಕ್ಷವಾಗಿಯಾದರೂ ನುಡಿದೆಯಲ್ಲಾ
ನನಗಷ್ಟೇ ಸಾಕು ಕಾಯುತ್ತಲಿದ್ದೆ ನಾನು
ಸರಿ ನನಗಿನ್ನು ಇಲ್ಲೇನಿದೆ ಕೆಲಸ ಹೊರಟೆ
ಬರುವೆಯಾ ಹೇಳು ನನ್ನ ಜೊತೆಗೆ ನೀನು?
 *************************


ಸಂಪರ್ಕ ಸಾಧನಗಳೇಕೆ?

30 ಆಕ್ಟೋ 12

 

 ಸಖೀ,

ನಾ ನಿನಗೆ ಬರೆದಿರುವ ಒಲವಿನ ಓಲೆ
ತಲುಪಿಲ್ಲವಾದರೂ ನಿನ್ನ ವಿಳಾಸವ
ನೀನದಾಗಲೇ ತೋರುತ್ತಿರುವೆಯಲ್ಲಾ
ಮುಖಾರವಿಂದದಲಿ ಮಂದಹಾಸವ

ನಮ್ಮ ನಡುವಣ ಸಂಬಂಧಕ್ಕೆ ಬೇಕಿಲ್ಲ
ಕಣೇ ನಮಗೀ ಸಂಪರ್ಕ ಸಾಧನಗಳು
ಹಗಲಿರುಳೂ ಸದಾ ನಡೆಯುತ್ತಿರುತ್ತವೆ
ನಮ್ಮ ನಡುವೆ ಈ ಸಂಭಾಷಣೆಗಳು!

ನೀನು ಅಲ್ಲಿ ನನ್ನ ನೆನೆವಾಗಲೆಲ್ಲಾ ನಾ
ಬಿಕ್ಕಳಿಕೆಯಿಂದ ಸ್ವೀಕೃತಿ ನೀಡುತ್ತೇನೆ
ಇಲ್ಲಿ ನನ್ನೊಳಗೇ ಮಾತ ಬೆಳೆಸಿದಾಗ
ನನ್ನ ಸನಿಹ ನಿನ್ನ ಭಾವಿಸಿಕೊಳ್ಳುತ್ತೇನೆ!
 **********


ಕವನ – ಹವನ!

30 ಆಕ್ಟೋ 12

ಭಾವ ತುಂಬಿರುವಾಗಲೂ ಕವನ

ಭಾವದ ಅಭಾವ ಇದ್ದರೂ ಕವನ

ಕವಿಗೆ ಕವನಗಳೇ ಬಾಳ ಹವನ!
****


ನೀನಿರದಾಗ!

30 ಆಕ್ಟೋ 12

 

ಸಖೀ,

ನೀನಿಲ್ಲದಾಗ ಜೊತೆಯಲ್ಲಿ
ಕವಿತೆ ಕವನಗಳೂ ಕೂಡ
ಸುಳಿಯುವುದಿಲ್ಲ ಮನದಲ್ಲಿ,

ಕಚಗುಳಿಯಿಟ್ಟು ಕೆರಳಿಸುತ್ತವೆ
ನನ್ನ ಭಾವವನ್ನು, ಇರುವಾಗ
ಮಾತ್ರ ನೀನನ್ನ ಜೊತೆಯಲ್ಲಿ!
 ******


ಭಾವ ತುಂಬು!

30 ಆಕ್ಟೋ 12

ಸಖೀ,
ನಿನ್ನೆಯಿಂದ ಯತ್ನಿಸಿ
ಸೋತಿದ್ದೇನೆ ನಾನು
ಬರೆಯಲೊಂದು ಕವನ

ಕದ್ದು ತರಲೇ ಪದಗಳನ್ನು
ಇಲ್ಲ ನಾನು ಪಡೆಯಲೇ
ಕೇಳಿ ಇವನ ಅವನ?

ಪದಗಳನ್ನು ನೀಡಿಯಾರು
ಭಾವವನ್ನೆಲ್ಲಿಂದ ತುಂಬಲಿ
ಖಾಲಿಯಾಗಿದೆ ಮನಸು

ನೀನೇ ಬಂದು ತುಂಬಬೇಕು
ಪದಗಳಲ್ಲಿ ಭಾವವನ್ನು ಒಮ್ಮೆ
ನಿನ್ನ ರೂಪವ ತೋರಿಸು!
 *********


ಅಳು-ಕಣ್ಣೀರು!

30 ಆಕ್ಟೋ 12

ಸಖೀ,
ನನ್ನ ಈ ಕಣ್ಣುಗಳು
ಕಣ್ಣೀರನ್ನು ಸುರಿಸಿದರೆ
ಮಾತ್ರ ನಾನು ಅತ್ತಂತೆ
ಎಂದು ಭಾವಿಸಬೇಕಿಲ್ಲ;

ನನ್ನ ಮನ ಅಳುವಾಗೆಲ್ಲಾ
ಈ ಕಣ್ಣುಗಳು ಕಣ್ಣೀರನ್ನು
ಸುರಿಸಬೇಕೆಂದೇನೂ ಇಲ್ಲ!
 ****************