ಅನುಮಾನ ಸಲ್ಲ!

28 ಜನ 12

ಸಖೀ,
ನಾನು
ಪ್ರೀತಿಸುತ್ತಿರುವ,
ನನ್ನನ್ನು
ಪ್ರೀತಿಸುತ್ತಿರುವ,
ನಿನ್ನ
ಹೃದಯವನ್ನು
ಸದಾ
ಕಾಯುತ್ತಾ
ಕೂರುವುದಿಲ್ಲ
ನಾನು;

ಹಾಗೆ
ಮಾಡಿದರೆ
ನಿನ್ನ
ಹೃದಯವನ್ನು
ಅರಸಿ
ಬರುವವರನ್ನಷ್ಟೇ
ಅಲ್ಲ,
ನಿನ್ನನ್ನೇ
ಅನುಮಾನಿಸಿದಂತೆ
ನಾನು!
****


ತಮಗೂ ಹೀಗೇನಾ..?

26 ಜನ 12


ಸುದ್ದಿಗಳಿಗೆ ಏನಂತೆ
ಬಂದು ಅಪ್ಪಳಿಸುತ್ತಾ
ಇರುತ್ತವೆ ಈ ಕಿವಿಗಳನ್ನು
ದಡಕ್ಕೆ ಬಂದಪ್ಪಳಿಸುವ
ಸಮುದ್ರದ ತೆರೆಗಳಂತೆ

ಎಲ್ಲೋ ಮಗುವೊಂದು
ಜನ್ಮ ತಾಳಿದ ಸಿಹಿ ಸುದ್ದಿ
ಇನ್ನೆಲ್ಲೋ ಆತ್ಮೀಯರಿಗಾದ
ಮಾತೃ ವಿಯೋಗದ ಸುದ್ದಿ

ಮನವಿಂದು ಮರೆತಂತಿದೆ
ಪ್ರತಿಸ್ಪಂದನದ ಪರಿಯನ್ನು
ಸ್ವೀಕರಿಸುತ್ತಾ ಸಾಗುತ್ತಿದೆ
ಬರುವೆಲ್ಲಾ ಸುದ್ದಿಗಳನ್ನೂ

ನೋವು ನಲಿವುಗಳಿಗೆಲ್ಲಾ
ಸ್ಪಂದಿಸದೇ ಇರುವುದೇಕೆ
ಬಿಡುವಿಲ್ಲದ ದಿನಚರಿಯಲ್ಲಿ
ಸದಾ ಮುಳುಗಿರುವುದೇಕೆ?

ಇದು ಬರಿ ನನ್ನೋರ್ವನ
ಅವಸ್ಥೆಯೇ ಹೇಳಿ ಸ್ನೇಹಿತರೇ
ತಮ್ಮಲ್ಲೂ ನನ್ನೀ ಅನಿಸಿಕೆಯ
ತನ್ನದೂ ಎಂಬವರು ಇಹರೇ?


ಅಲ್ಲಿ ನನ್ನತನವಿತ್ತೇನೆ?

25 ಜನ 12

ಸಖೀ,
ನನ್ನಂತೆ
ನುಡಿಯುವವರನ್ನು,
ನನ್ನಂತೆ
ಬರೆಯುವವರನ್ನು,
ನನ್ನಂತೆ
ಪ್ರೀತಿಸುವವರನ್ನು,
ಕೇಳಿರಬಹುದು,
ಓದಿರಬಹುದು,
ಅರಿತಿರಬಹುದು,
ನೀನು;

ಆದರೆ,
ಒಂದು
ಮಾತು
ಮುಚ್ಚುಮರೆ
ಇಲ್ಲದೇ
ಹೇಳಿಬಿಡು
ನೀನು,
ಅವರಲ್ಲಿ,
ನನ್ನತನವ
ಕಂಡಿದ್ದೆಯೆಂದರೆ
ನಿನ್ನಾಣೆಗೂ
ಒಪ್ಪುತ್ತೇನೆ
ನಾನು!
****


ಇಷ್ಟವಾಗುತ್ತದೆ!

24 ಜನ 12

 

ಬೇಸಿಗೆಯ
ಸುಡುಬಿಸಿಲಿಗೆ
ಕಾದ ನೆಲದ ಮೇಲೆ
ಮೊದಲ ಮಳೆಯ
ಹನಿಗಳು ಬಿದ್ದಾಗ
ನಾಸಿಕವನ್ನು
ತಾಕುವ ಆ
(ಸು)ವಾಸನೆ
ಬೇಡ ಬೇಡವೆಂದರೂ
ಇಷ್ಟವಾಗುತ್ತದೆ;

ಬಿಡುವಿಲ್ಲದ
ದಿನಚರಿಯಲ್ಲಿ
ಬಸವಳಿದು
ಸುಸ್ತಾಗುವ
ನನ್ನೀ ಮನಸ್ಸಿಗೆ
ನಡು ನಡುವೆ
ಆಗಾಗ ಕಾಡುತ್ತಾ
ಮುದ ನೀಡುವ
ನಿನ್ನ ನೆನಪು
ಬೇಕು ಬೇಡಗಳಿಗೂ
ಮೀರಿ ಇಷ್ಟವಾಗುತ್ತದೆ!
*************


ನನಗೀಗ ಅರಿವಾಯ್ತು!

23 ಜನ 12

 

ಸೂರ್ಯನಿಗೆ
ತಾವರೆ
ಮುಗಿಲಿಗೆ
ನವಿಲು
ಚಂದಿರನಿಗೆ
ನೈದಿಲೆ
ಎನಗೆನ್ನ
ನಲ್ಲೆ
ಎಂದು
ನಾನು
ಎಣಿಸಿದ್ದೇ
ದೊಡ್ಡ
ತಪ್ಪಾಯ್ತು!


ಜೋಡಿಗಳೆಲ್ಲಾ
ಸದಾಕಾಲ
ಎಂದಿಗೂ
ಜೊತೆಯಾಗಿ
ಇರುವುದಿಲ್ಲ
ಎನ್ನುವ
ಸತ್ಯದ
ಅರಿವು
ನನಗೂ
ಈಗ
ಆಯ್ತು!


ನಾನು ಒಂಟಿಯಲ್ಲ!

22 ಜನ 12

ಎಲ್ಲರಿಗೂ

ಅನುಮಾನ

ಎಲ್ಲರದೂ

ಒಂದೇ ಪ್ರಶ್ನೆ

“ಯಾಕೀತ

ಇರುತ್ತಾನೆ

ಸದಾ

ಒಂಟಿಯಾಗಿ?”

 

ಅವರಿಗೇನು

ಗೊತ್ತು,

ನಾನು

ಒಂಟಿಯಾಗಿ

ಇರುವಾಗಲೆಲ್ಲಾ

ನನ್ನೊಳಗೆ

ಸಖೀ

ನೀನೂ

ಇರುತ್ತೀಯೆಂದು

ನನ್ನ

ಜೊತೆಯಾಗಿ!

*******


ರೂಢಿಯಾಗಬೇಕಿದೆ ಅಮ್ಮನಿಲ್ಲದ ಮನೆಯೂ!

01 ಜನ 12

ಕಳೆದ ಭಾನುವಾರ ಮುಂಜಾನೆ ಆತ್ರಾಡಿಯ ಮನೆಯೊಳಗೆ
ನಾನು ಕಾಲಿಡುವಾಗ ಅಲ್ಲಿ ಇಲ್ಲವೆಂದು ಅರಿತಿದ್ದರೂ ಈ ನನ್ನ
ಕಣ್ಣುಗಳು ಅರಸುತ್ತಿದ್ದವು ನನ್ನನ್ನು ಸ್ವಾಗತಿಸುವ ಅಮ್ಮನನ್ನು

ಉದ್ಯೋಗ ನಿಮಿತ್ತ ನಾನು ಊರು ಬಿಟ್ಟ ನಂತರದ ಈ ಮೂರು
ದಶಕಗಳಲ್ಲಿ ನನ್ನ ಪ್ರತಿ ಭೇಟಿಯಲ್ಲೂ ಸ್ವಾಗತ ಕೋರುತಿದ್ದಮ್ಮ
ಈ ಬಾರಿ ಇರಲಿಲ್ಲ ಸ್ವಾಗತ ಕೋರಿ ಬರಮಾಡಿಕೊಳ್ಳಲು ನನ್ನನ್ನು

ಹೊಸದಕ್ಕೆ ಹೊಂದಿಕೊಳ್ಳಲು ಮನಸ್ಸಿಗೆ ಬೇಕು ಕೊಂಚ ಕಾಲ
ಎಂದರಿತಿದ್ದರೂ ಸೂಜಿ ಚುಚ್ಚಿದಂತೆ ಚುಚ್ಚುತ್ತಲೇ ಇತ್ತು ನಾನು
ಅದೆಷ್ಟು ಅದುಮಿಟ್ಟುಕೊಳ್ಳಲು ಯತ್ನಿಸಿದರೂ ಈ ಕಸಿವಿಸಿಯನ್ನು

ಒಂಭತ್ತು ವರುಷಗಳ ಹಿಂದೆ ಅಪ್ಪಯ್ಯನವರು ಇಹದ ಪಯಣವನ್ನು
ಮುಗಿಸಿ ತೆರಳಿದ ನಂತರವೂ ಅವರ ಗೈರು ಆ ಮನೆಯಲ್ಲಿ ಸತತ
ಕಾಡುತಿತ್ತು ನಾನದೆಷ್ಟು ಸಮಾಧಾನ ಪಡಿಸಿದರೂ ಈ ಮನಸ್ಸನ್ನು

ವರುಷಗಳು ಉರುಳಿದ ಮೇಲೆ ಅದೂ ಕೂಡ ರೂಢಿಯಾಗಿ ಹೋಯ್ತು
ಇದೀಗ ಅವರಗಲಿಕೆಯ ನೋವು ಮರೆಯಾಗಿಲ್ಲವಾದರೂ ಮೊದಲಿನ
ತೀಕ್ಷ್ಣತೆ ಕಡಿಮೆಯಾಗಿ ಕಾಡುವುದಿಲ್ಲ ಹೆಚ್ಚಾಗಿ ಅವರ ಗೈರು ನನ್ನನ್ನು

ಬಹುಶಃ ಅಮ್ಮನಿಲ್ಲದ ಮನೆಯ ವಾಸವೂ ನನಗೆ ಈಗಿಂದಲೇ ರೂಢಿ
ಆಗಲೆಂಬ ಇಚ್ಛೆ ಆ ಭಗವಂತನಿಗೆ ಇರಬೇಕು ಅಂತನಿಸುತ್ತಿದೆ ಹಾಗಾಗಿ
ತಿಂಗಳಿಂದೀಚೆಗೆ ಇನ್ನೋರ್ವ ಪುತ್ರನ ಮನೆಯಲ್ಲಿರಿಸಿದ್ದಾನೆ ಅಮ್ಮನನ್ನು!
*****