ನಮ್ಮ ಸ್ನೇಹದ ಬಗ್ಗೆ ಮಾತಾಡಲಿ ಜನ!

14 ಜುಲೈ 10

ನಿನ್ನ ನನ್ನ ಭೇಟಿ ಬಸ್ಸಿನಲ್ಲಿ ಆಗುವ ಸಹಪ್ರಯಾಣಿಕರ ಭೇಟಿಯಂತಲ್ಲ

ಜೀವನ ಯಾತ್ರೆಯಲಿ ನಿನ್ನನ್ನಿಲ್ಲಿ ನನ್ನ ಜೊತೆಗೆ ಬಿಟ್ಟುಬಿಟ್ಟಿಹನಲ್ಲಾ?

 

ಕಾರಣವಿಲ್ಲದೇ ಇಲ್ಲಿ ಹುಲ್ಲುಕಡ್ಡಿಯೂ ಅಲುಗಾಡದು ಎಂಬ ಮಾತಿದೆ

ನಮ್ಮಿಬ್ಬರ ಸ್ನೇಹಕ್ಕೂ ಏನೋ ಕಾರಣವಿದೆ ಎಂಬ ನಂಬಿಕೆ ನನಗಿದೆ

 

ಯಾರೂ ಇನ್ನಾರಿಗಾಗಿ ಸುಖಾಸುಮ್ಮನೇ ತಲೆಕೆಡಿಸಿಕೊಳ್ಳುವುದಿಲ್ಲ

ಯಾರೂ ಪರರಿಗಾಗಿ ಕಾರಣವಿಲ್ಲದೇ ತಮ್ಮನ್ನೇ ಮರೆತುಬಿಡುವುದಿಲ್ಲ

 

ಕ್ಷಣಕ್ಷಣವೂ ಮನದೊಳಗೆ ನೆನೆನೆನೆದು ಪಡುವ ಸುಖಾನುಭವವದೇನು?

ತನ್ನ ಮನದ ಮಾತನ್ನೆಲ್ಲಾ ಸತತ ಹಂಚಿಕೊಳ್ಳಬೇಕೆಂಬ ತವಕವದೇನು?

 

ನಮ್ಮೀ ಸ್ನೇಹಬಂಧದ ಹಿಂದೆ ಆ ಭಗವಂತನಿಗಿರುವ ಉದ್ದೇಶ ಏನೆಂದರಿತಿಲ್ಲ

ಆದರೆ ಇದಕೇನೋ ಮಹತ್ವವಿದೆಯೆಂಬ ಅರಿವು ನಮ್ಮೀರ್ವರಿಗೂ ಇದೆಯಲ್ಲಾ?

 

ನಮ್ಮ ಸ್ನೇಹದಿಂದ ನಮಗಲ್ಲ ಈ ಸ್ನೇಹಕ್ಕೇ ಆಗುವಂತಾಗಲಿ ಪ್ರಯೋಜನ

ನಾವಳಿದ ಮೇಲೆಮ್ಮ ಸ್ನೇಹದ ಬಗ್ಗೆ ಮಾತಾಡುವಂತಾಗಲಿ ಇಲ್ಲಿಯ ಜನ!

*********************** 


ಮಾನ್ಯ ಯಡ್ಯೂರಪ್ಪನವರಿಗೊಂದು ಕಿವಿಮಾತು!

13 ಜುಲೈ 10

ಇದ್ಯಾವ ಮೋಹದ ಮಾಯೆ ನಿಮ್ಮನ್ನಾವರಿಸಿದೆ ಯಡ್ಯೂರಪ್ಪನವರೇ?

ನಿಮ್ಮನ್ನು ನೀವೇ ಈ ರೀತಿ ಬಲಿಕೊಡುತ್ತಿರುವುದೇಕೆ ಹೇಳಲಾರಿರೇ?

 

ಮೂರ್ನಾಲ್ಕು ದಶಕಗಳ ಹೋರಾಟದ ಆ ನಿಮ್ಮ ರಾಜಕೀಯ ಜೀವನ

ಗಣಿಧೂಳಿನೊಂದಿಗೆ ಬೆರೆತು ಮರೆಯಾಗುವುದ ಕಾಣದೇ ನಿಮ್ಮ ಕಣ್ಮನ?

 

ಯುವ ಪ್ರೇಮಿಗಳು ಹೆತ್ತವರ ಪ್ರೀತಿಯ ಮಾತನ್ನು ಕಡೆಗಣಿಸಿ ನಡೆವಂತೆ

ನೀವೂ ನಾಡಿನ ಜನತೆಯ ಮರೆತಿರಿ ಅದ್ಯಾವುದೋ ಸೆಳೆತದಲ್ಲಿರುವಂತೆ

 

ನಿಮ್ಮನ್ನು ಈ ರೀತಿ ಬಲಹೀನನಾಗಿಸಿಹ ಅದೃಶ್ಯ ಶಕ್ತಿ ಯಾವುದದು ಹೇಳಿ

ಸತ್ಯ ನುಡಿದರೆ ಇಡೀ ನಾಡೇ ನಿಮ್ಮ ಜೊತೆಗಿಹುದು ಸ್ವಲ್ಪ ಧೈರ್ಯ ತಾಳಿ

 

ಕೆಂಗಲ್, ಅರಸು, ನಿಜಲಿಂಗಪ್ಪ, ಹೆಗಡೆಯಂಥವರು ಕೂತಿದ್ದ ಘನ ಕುರ್ಚಿಯದು

ಅದರ ಘನತೆ ಕೆಡಿಸಿದರೆ ನಿಮಗೆ ಇಹ ಪರ ಎರಡೂ ಕಡೆ ನೆಮ್ಮದಿಯೇ ಸಿಗದು

 

ಕುರ್ಚಿಯ ಘನತೆಯನು ನೀವು ಉಳಿಸಿದರೆ ನಿಮ್ಮ ಘನತೆಯೂ ಉಳಿದೀತು

ಅದಕ್ಕೇ ಬೆಲೆ ನೀಡದಿದ್ದರೆ ಸದ್ಯದಲೇ ನಿಮ್ಮ ಬದುಕೂ ಮೂರಾಬಟ್ಟೆಯಾದೀತು

 

ನಾಳೆ ನೀವೊಂಟಿಯಾಗಿ ಅಳುವಾಗ ಬರಲಾರರ್ಯಾರೂ ಸಾಂತ್ವನ ಹೇಳಲು

ರಾಜಕೀಯದಲ್ಲಿ ಎಲ್ಲರ ಜೀವನ ಬಾಳೆಲೆಯಂತೆ ಬರೀ ಹಾಸ್ಯುಂಡು ಎಸೆಯಲು

 

ಇನ್ನಾದರೂನಿಮ್ಮ ನಿದ್ದೆಗೆಡಿಸುವ ನಿಮ್ಮದೇ ಮನದ ಮಾತನ್ನು ಕೇಳಿ ನೋಡಿ

ಮೈಕೊಡವಿ ಎದ್ದು ನಿಂತು ತೋರಿಸಿದರೆ ನಾಡ ಜನತೆ ಹೊಗಳುವರು ಕೊಂಡಾಡಿ

 

ರಾಜಕೀಯವೆಂದರೆ ಭ್ರಷ್ಟರ ಕೂಟ ಎಂದು ಇಂದು ಜನ ಆಡಿಕೊಂಡಿಹರು ನಿತ್ಯ

ಕೆಸರಿನಲ್ಲಿ ಕಮಲವೂ ಅರಳುವುದೆಂದು ತೋರಿಸಿಕೊಟ್ಟರೆ ನಿಮಗೆ ಬೆಲೆ ಸತ್ಯ

*************************************


ಸಂಬಂಧ – ಸ್ನೇಹಬಂಧ!

12 ಜುಲೈ 10

ಸಂಬಂಧಗಳಿಗಿಂತ ನಿಜಕ್ಕೂ ಸ್ನೇಹಬಂಧಗಳೇ ಶ್ರೇಷ್ಠ

ತೊರೆಯಬಹುದು ಸಂಬಂಧಿಗಳನು, ಸ್ನೇಹಿತರನ್ನು  ಕಷ್ಟ

 

ರಕ್ತ ಸಂಬಂಧವೇ ಶಾಶ್ವತ ಅನ್ನುವ ಮಾತು ನನಗೆ ಅಪಥ್ಯ

ಸ್ನೇಹಿತರೇ ಒಂದು ಕೈ ಮೇಲು ಅನ್ನುವುದು ನಿಜವಾಗಿ ಸತ್ಯ

 

ಸಂಬಂಧಗಳು ಕೂಡಿದಂತೆಲ್ಲಾ ಕಳಕೊಂಡೂ ಬಂದವಲ್ಲಾ?

ಸ್ನೇಹಿತರು ಕೂಡಿಕೊಂಡದ್ದೇ ಜಾಸ್ತಿ ಕಳೆದುಕೊಂಡದ್ದಷ್ಟಿಲ್ಲ

 

ಸಂಬಂಧಿಗಳ ನಡುವೆ ಸಂಪರ್ಕ ವಿರಳವಾದರೆ ಅದು ಕಷ್ಟ

ಸ್ನೇಹಿತರು ಅದೆಷ್ಟೇ ದೂರ ಇದ್ದರೂ ಅವರು ಮನಕೆ ಇಷ್ಟ

 

ಹೆತ್ತವರನ್ನೂ ಆಶ್ರಮಕ್ಕೆ ಅಟ್ಟುವ ಮಕ್ಕಳಿದ್ದಾರೆ ಈ ನಾಡಿನಲ್ಲಿ

ಒಳ್ಳೆಯ ಸ್ನೇಹಿತರನು ಕೈಬಿಡುವವರು ಯಾರಿದ್ದಾರೆ ಹೇಳಿ ಇಲ್ಲಿ

*****************************


ಭ್ರಷ್ಟರಿಂದ ಬಚಾವು ಮಾಡಲು ಬರುವವರು ಯಾರೋ?

10 ಜುಲೈ 10

ದೊಡ್ಡ ಗೌಡರಿಂದ ಹೇಳಿಸಿಕೊಳ್ಳಲಿ ನಮ್ಮ ಈ ಶಾಸಕರು ಪಾಠಗಳನ್ನು

ಸದನ ಇರುವುದು ನಿದ್ರಿಸಲು, ಬೀದಿಗಳಿವೆ ನಡೆಸಲು ಪ್ರತಿಭಟನೆಗಳನ್ನು

 

ಸದನದೊಳು ಕಾದಾಡುತ್ತಾರೆ ಜಗಜಟ್ಟಿಗಳಂತೆ ರಟ್ಟೆಬಲ ತೋರಿಸುತ್ತಾ

ಮತ್ತೆ ಎಲ್ಲೋ ಗ್ರಾಮವಾಸ್ತವ್ಯ ಹೂಡಿ ಕಾಲ ಕಳೆಯುತ್ತಾರೆ ನಿದ್ರಿಸುತ್ತಾ

 

ಸದನದೊಳಗೆ ನಿರ್ಲಜ್ಜೆಯಿಂದ ಹಾರಾಡಿ ನಾಡ ಜನತೆಗೆ ಬಗೆದು ದ್ರೋಹ

ಹೊರಗೆ ಬಂದು ಕ್ಷಮೆ ಯಾಚಿಸುತ್ತಾರೆ ತೀರಿಸಿಕೊಂಡಂತೆ ಮನದ ದಾಹ

 

ಅವರಲ್ಲ ಇವರು ನಮ್ಮವರು, ಇವರಲ್ಲ ಅವರು ನಮ್ಮವರು, ಎನ್ನುವಂತಿಲ್ಲ

ಈಗ ಎಲ್ಲರದೂ ಒಂದೇ ಉಡುಗೆ, ತೊಡುಗೆ, ಭಾಷೆ, ಅರಚಾಟಗಳೆಲ್ಲಾ

 

ಪ್ರಜಾಸತ್ತಾತ್ಮಕ ಆಡಳಿತ ಪದ್ಧತಿ ನಮ್ಮದು ಅದಕ್ಕಾಗೇ ಈಗ ಈ ದುರ್ದೆಸೆ

ಪ್ರಜೆಯದು ಇಲ್ಲಿ ಸತ್ತ ಆತ್ಮ, ಬೆಲೆಯಿಲ್ಲ ಬಹಿರಂಗ ಪಡಿಸಿದರೂ ಮನದಾಸೆ

 

ಮತ ನೀಡಲು ಮಾತ್ರ ಮತದಾರ ನಂತರ ಇವರ್ಯಾರೋ ಅವರ್ಯಾರೋ

ನಮ್ಮ ನಾಡನ್ನು ಈ ಭ್ರಷ್ಟರಿಂದ ಬಚಾವು ಮಾಡಲು ಬರುವವರು ಯಾರೋ?

**********************************


ಬಾರದವರಿಗಾಗಿ ಕೊರಗಬೇಕೇ…ಬರುವವರಿಗಾಗಿ ಮರುಗಬೇಕೇ?

10 ಜುಲೈ 10

ಸಖೀ,

ಸತ್ತು ಅಗಲಿದ ನನ್ನ ಅಪ್ಪಯ್ಯನವರನ್ನು

ನಾನು ನೆನೆನೆನೆದು ಮರುಗಿದರೆ, ನನ್ನ

ಒಳಗೊಳಗೆ ಕೊರಗಿದರೆ, ಈ ಸಮಾಜ

“ಯಾಕ್ರೀ ಸತ್ತವರಿಗಾಗಿ ಅಳ್ತೀರಿ?

ಬಾರದವರಿಗಾಗಿ ಮರುಗಿ ಫಲವಿಲ್ಲ…”

ಎಂಬ ಉಪದೇಶ ನೀಡುವುದು ನನಗೆ,

 

ನನ್ನಾಕೆ ತವರಿಗೆ ತೆರಳಿದಾಗ ನನ್ನನ್ನು

“ಏನ್ರೀ ಹೆಂಡತಿ ಇಲ್ಲದೇ ಬೇಸರಾನಾ…?”

ಎಂದು ವಿಚಾರಿಸುವವರಿಗೆ “ಇಲ್ಲಪ್ಪಾ…

ನನಗೆ ಕಿಂಚಿತ್ತೂ ಬೇಸರ ಇಲ್ಲ…

ನಾಲ್ಕು ದಿನ ಬಿಟ್ಟು ಬರುವವಳನು

ನಾ ನೆನೆದು ಮರುಗಲೇಕೆ ಹೇಳಿ…”

ಅಂತ ನಾನನ್ನಲು ಅದೇ ಸಮಾಜ

“ಯಾಕ್ರೀ ಜಗಳ ಮಾಡಿ ಹೋಗಿದಾರಾ…

ನೀವು ಯಾವ ತರಹ ಗಂಡಸೂ ರೀ…

ಹೆಂಡತಿ ಇಲ್ಲಾಂದ್ರೆ ಬೇಸರ ಆಗೋಲ್ವಾ..?”

ಎಂದು ಹುಬ್ಬೇರಿಸಿ ಕುಹಕ ನಗೆಬೀರಿ ಕೇಳುವ

ಪ್ರಶ್ನೆಗಳಿಂದ ಬಿಡುಗಡೆ ಇಲ್ಲವೆನಗೆ;

 

ನೀನೇ ಹೇಳು ಸಖೀ,

ನಾನು, ಬಾರದವರಿಗಾಗಿ ಕೊರಗಬೇಕೇ?

ಇಲ್ಲಾ, ಬರುವವರಿಗಾಗಿ ಮರುಗಬೇಕೇ?

********************


ಹೇಳು ಬೇರೇನು ಬೇಕು!

10 ಜುಲೈ 10

ಸಖೀ, 

 

ನಿನ್ನ ನಗುವಿನಲ್ಲಿ ಅದೇನೋ ಇದೆ ಹೊಸತು

ಆ ಕಣ್ಣುಗಳಲ್ಲಿ ನಿಜಕ್ಕೂ ಅದೇನೋ ಮಾತು

 

ನೀ ನನ್ನಲ್ಲಿ ಏನೇನೋ ನುಡಿಯುತಿರುವಂತೆ

ನಾನು ದೇಹವೆಲ್ಲಾ ಕಿವಿಯಾಗಿ ಆಲಿಸುವಂತೆ

 

ಎಲ್ಲಿ ಕಲಿತೆ ಕಣ್ಣುಗಳಲ್ಲೇ ಮಾತನಾಡೋ ವಿದ್ಯೆ?

ನಗುವಿನಲ್ಲೇ ನನ್ನ ಈ ತರಹ ಬಂಧಿಸಿಡುವ ವಿದ್ಯೆ?

 

ಬಯಸಿದರೂ ನನಗೆ ಈಗ ಮಾತೇ ಬರುವುದಿಲ್ಲ

ಆ ಮೊಗವ ನೋಡುವ ನನ್ನೀ ದೃಷ್ಟಿ ಕದಲುವುದಿಲ್ಲ

 

ಮಾತುಕತೆ ಒಂದೂ ಬೇಡ ನೋಟವೊಂದೇ ಸಾಕು

ನಿನ್ನ ಸನಿಹ ಇದ್ದರೆನಗೆ ಹೇಳು ಬೇರೆ ಏನು ಬೇಕು?

*************************


ಅಡುಗೆಮನೆಯಲ್ಲೂ ಭಾರತ್ ಬಂದ್!

06 ಜುಲೈ 10

ನಾನು ಮುಂಜಾನೆಯ ವಾಯು ವಿಹಾರ ಮುಗಿಸಿ

ಬಂದರೂ ಸಿಕ್ಕಿರಲಿಲ್ಲ ನಿನ್ನೆ ಮಾಮೂಲು ಚಹ

 

ಮನೆಯಲ್ಲಿ ನೀರವ ಮೌನ ನನ್ನವಳು ಇನ್ನೂ

ಸುಖ ನಿದ್ದೆಯಲ್ಲಿದ್ದಳು ಆ ನೋಟವೋ ಆಹಾ!

 

ಆಕೆಗೆ ನಿಜದಿ ಎಂದಿನಂತಲ್ಲದ ಮೂರುದಿನಗಳ

ಸುದೀರ್ಘ ವಾರಾಂತ್ಯದ ರಜೆಯ ಸುಖಾನುಭವ

 

ನನಗೋ ಆ ನಾಲ್ಕು ಗೋಡೆಗಳ ನಡುವೆ ನನ್ನನ್ನು

ಬಂಧಿಸಿಯೇ ಇಟ್ಟಿರುವಂತಹ ವಿಚಿತ್ರವಾದನುಭವ

 

“ಸರಿ ಘಂಟೆ ಎಂಟಾಯ್ತು ಇನ್ನಾದರೂ ನೀನು ಎದ್ದು

ತಿಂಡಿನೀಡಿದರೆ ಚುರುಗುಟ್ಟುವ ನನ್ನೀ ಹೊಟ್ಟೆಗೆ ತೃಪ್ತಿ”

 

ಎಂದು, ನಿದ್ದೆಯಿಂದ ಎಬ್ಬಿಸಿ ಕೂರಿಸಿದಾಗ ಆಕೆ, ತನ್ನ

ಕಣ್ಣುಗಳಿಂದಲೇ ತೋರಿದಳು ತನ್ನೊಳಗಿನ ಅತೃಪ್ತಿ

 

ರಾತ್ರಿ ಬೆಳಗಾಗುವುದರೊಳಗೆ ಏನಾಗಿದೆ ಈಕೆಗೆ?

ಏಕೀ ಮುನಿಸಿನ ಶುಭೋದಯದ ಸಂದೇಶ ನನಗೆ?

 

ರಮಿಸಿ ಕೇಳಿದಾಗ ಸಿಕ್ಕಿತು ಉತ್ತರ, ನಾ ದಂಗಾದೆ

“ಸ್ವಲ್ಪವೂ ಜವಾಬ್ದಾರಿ ಇಲ್ಲ ಅಲ್ವೇನ್ರೀ ನಿಮಗೆ?”

 

“ತಿಂಡಿ ಕೇಳುವುದರಲ್ಲಿ ಜವಾಬ್ದಾರಿಯ ಮಾತೇನು

ಬಿಡಿಸಿ ಹೇಳಬಾರದೇ ಈ ಒಗಟು ಮಾತುಗಳೇಕೆ?”

 

“ಇಂದು ಗೊತ್ತಲ್ವಾ ಭಾರತ್ ಬಂದ್ ಕಣ್ರೀ, ಹಾಗಾಗಿ

ನಮ್ಮೀ ಅಡುಗೆಮನೆಯಲ್ಲಿ ಕೆಲಸ ನಡೆಯಬೇಕೇಕೆ?

 

ಭಾರತಕ್ಕೆ ನಮ್ಮ ಮನೆಯೂ ಹೊರತಲ್ಲ ಹಾಗಾಗಿ,

ನಾನೂ ಇಂದು ಇಲ್ಲಿಯೇ ನಡೆಸುತ್ತೇನೆ ಪ್ರತಿಭಟನೆ

 

ನಿಮ್ಮ ಸಹಕಾರವೂ ಇರಲಿ, ಭಾಜಪದ ಬೇಡಿಕೆಗಳಿಗೆ

ಅಲ್ಲಿ, ಇರುವಂತೆ ಕಮುನಿಸ್ಟರ ಅನುಮೋದನೆ”

************************