ಬರಬಾರದೇ ದೇವ?

28 ಡಿಸೆ 12

ದೇವಾ, ಧರ್ಮ ನಶಿಸಿ  ಹೋದಾಗ ಮತ್ತೆ ಸಂಭವಿಸುತ್ತೇನೆ,  ಮತ್ತೆ  ನಾನು ಅವತಾರ ಎತ್ತಿ ಬರುವೆನೆಂದವನು ನೀನು. ನಿನ್ನ ಅವತಾರಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲವೇ? 

ಈ ಭರತಭೂಮಿಯಲ್ಲಿ ಇನ್ನೂ ಏನೇನಾಗಬೇಕಿದೆ? ಭ್ರಷ್ಟಾಚಾರ ಪ್ರತಿಯೊಬ್ಬರ ರಕ್ತದ ಕಣಗಳಲ್ಲಿ ತುಂಬಿದೆ ಅತ್ಯಾಚಾರವೇ ಈಗ ಈ ಸಮಾಜದ ದಿನಚರಿಯಾಗಿದೆ ಅಧರ್ಮವೇ ಧರ್ಮದ ರೂಪ ತಾಳಿ ನಮ್ಮ ಕಣ್ಣುಕಟ್ಟುತ್ತಿದೆ.

ಇನ್ನೂ ಏಕೆ ಈ ಮೌನ?

ಇನ್ನಾದರೂ ನೀನು ಬರಬಾರದೇ ದೇವಾ?

ದೇವರು ಮತ್ತು ಮಾನವನ ನಡುವಿನ ಸಂಬಂಧದಲ್ಲಿ, ಮಾನವನ ಈ ನಡತೆಯೇ ಪ್ರಮುಖ ನಡತೆಯಲ್ಲವೇ? 

ನಮಗೇನಾಗುತ್ತಿದೆ ಅನ್ನುವುದನ್ನು ಸರ್ವಂತರ್ಯಾಮಿಯ ಸರ್ವವನ್ನೂ ಅರಿತಿರುವ, ಆತನ ಅರಿವಿಗೆ ತರುವ ಸತತ ಪ್ರಯತ್ನದಲ್ಲೇ ಇರುತ್ತೇವೆ  ಅಲ್ಲವೇ ನಾವು?

ಆತನ ಅರಿವಿನ ಮಟ್ಟವನ್ನು ನಮ್ಮರಿವಿನ ಮಟ್ಟಕ್ಕಿಂತಲೂ ಕೆಳಗಿಳಿಸಿ ಗೋಗರೆಯುತ್ತೇವೆ ನಾವು.

ಆದರೆ ಇನ್ನೊಂದು ಕೋನದಿಂದ ನೋಡಿದರೆ, ಮಗು ನೊಂದಾಗ ತನ್ನ ಮಾತಾಪಿತರನ್ನೇ ಕರೆದು, ಗೋಗರೆಯಬೇಕಲ್ಲವೇ?

ಹಾಗಾಗಿ ಆತನಿಗೇ ನನ್ನ ಮೊರೆ. ಬಾರೋ, ಬಂದು ಬದಲಾವಣೆಯ ತಾರೋ ದೇವಾ, ನನ್ನೊಳಗೂ, ನಮ್ಮವರೊಳಗೂ, ಹೊರಗೂ.

Advertisements

ಕೊಡುವ ಮನ!

28 ಡಿಸೆ 12

ಸಖೀ,
ಏನಾದರೂ 
ಕೊಡುವವರಿಗೆ 
ಮರಳಿ ಕೊಡಲು
ಅಂಗಡಿಯಲ್ಲಿಹ 
ಶೆಟ್ಟಿಯೇ ಸಾಕು;

ನಮಗೇನೂ 
ಕೊಡಲಾಗದೆ
ಇರುವವರಿಗೂ 
ಕೊಡಮಾಡುವ 
ಮನೋಭಾವ 
ನಮ್ಮಲ್ಲಿರಬೇಕು!


ಆತ್ಮತೃಪ್ತಿ ಕಾದಿದ್ದೇ!

28 ಡಿಸೆ 12

ಸಖೀ,
ಇಲ್ಲಿ ಈ ಊರಿನ ಮೂಲೆಯಲಿ ನಾನು
ಅಲ್ಲೆಲ್ಲೋ ದೂರದ ಊರಿನಲ್ಲಿ ಅವನು
ಅವನ ಮಾತುಗಳನ್ನೆಲ್ಲಾ ಓದಿ ಮೆಚ್ಚಿದ್ದೆ
ದಿನ ಕಳೆದಂತೆ ನಾ ಅಭಿಮಾನಿಯಾಗಿದ್ದೆ

ಪ್ರತಿ ಮಾತಿಗೂ ನಾನಲ್ಲಿ ಸೂಚಿಸುತ್ತಿದ್ದ
ಮೆಚ್ಚುಗೆಯ ಕಂಡು ತಾ ಸಂದೇಶ ಕಳಿಸಿ
‘ನನ್ನ ಮೇಲಿನಭಿಮಾನಕ್ಕೆ ಧನ್ಯ’ ಎಂದಿದ್ದ
ನನ್ನ ಕಂಗಳನ್ನೇ ನಾನು ನಂಬದಂಥಾಗಿದ್ದೆ

‘ನಿಮ್ಮೆಲ್ಲಾ ಬರಹಗಳ ಅಭಿಮಾನಿ ನಾನು’
ಅಂದೆ ಅದು ಅಲ್ಲೇ ತಪ್ಪರ್ಥ ನೀಡಿಯಾಗಿತ್ತು 
‘ಕ್ಷಮಿಸಿ ನನ್ನದಲ್ಲ ಬರಹಗಳ ಅಭಿಮಾನಿ’
ಅಂದಾಗ ನಾನು ನನ್ನ ತಪ್ಪನ್ನೂ ಅರಿತಿದ್ದೆ

ಪರಸ್ಪರರ ಕ್ಷಮೆ ಕೋರಿ ಮಾತು ಬೆಳೆದಿತ್ತು
ಒಂದರೆಗಳಿಗೆಯಲ್ಲಿ ಆತ್ಮೀಯತೆ ತುಂಬಿತ್ತು
ಇದೆಂಥ ಬಾಂಧವ್ಯವೋ ನಾನರಿಯದಾದೆ
ಹೊಸ ಪ್ರಪಂಚವೊಂದರಲ್ಲಿ ವಿಹರಿಸುತ್ತಲಿದ್ದೆ

ಈ ಅಂತರ್ಜಾಲದಲ್ಲಿನ ಸಹೃದಯರ ನಡುವೆ
ಬೆಳೆವ ನಿಸ್ವಾರ್ಥ ಸ್ನೇಹದ್ದು ಅದ್ಭುತ ಅನುಭವ
ಕೆಟ್ಟವರು ಬಹಳವಾದರೂ ಸಾವಿರದಲ್ಲಿ ಒಬ್ಬರು
ಸಿಕ್ಕರೂ ನಮಗೆ ನಿಜಕ್ಕೂ ಆತ್ಮತೃಪ್ತಿ ಕಾದಿದ್ದೇ!
*************************


ದೇವಮಾನವರು!

28 ಡಿಸೆ 12

ಸಖೀ,
ಮನುಜ ದೇವರನ್ನು ತನ್ನ ಅಧೀನದಲ್ಲಿ
ಬಂಧಿಸಿಟ್ಟು ಮನುಜನನ್ನಾಗಿಸುತ್ತಾನೆ
ದೇವರು ಕೆಲ ಮನುಜರನ್ನು ಬೇಕಾಬಿಟ್ಟಿ
ಬಿಟ್ಟು ದೇವಮಾನವರನ್ನಾಗಿಸುತ್ತಾನೆ!


ಮಹಾತ್ಮರನ್ನು ಕೊಂದದ್ದು ಗೋಡ್ಸೆಯಲ್ಲ!

28 ಡಿಸೆ 12

 

ಸಖೀ,
೧೯೪೮ರಲ್ಲಿ ನಿಧನರಾಗಿದ್ದು ಮಹಾತ್ಮರಲ್ಲ
ಮಹಾತ್ಮರ ನಿಧನ ೧೯೪೬ ರಲ್ಲೇ ಆಗಿತ್ತು
ಗೋಡ್ಸೆ ಕೊಲೆ ಮಾಡಿದ್ದು ಮಹಾತ್ಮರನ್ನಲ್ಲ
ಗೋಡ್ಸೆ ಕೊಲೆಮಾಡಿದ್ದು ಗಾಂಧಿಯನ್ನಾಗಿತ್ತು

ಮಾಹಾತ್ಮರ ಕೊಲೆ ಆಗಿದ್ದು ೧೯೪೬ ರಲ್ಲೇ
ಆ ಕೊಲೆ ಮಾಡಿದ್ದು ಜವಾಹರಲಾಲನಾಗಿತ್ತು
ನಂತರ ಉಸಿರಾಡುತಿದ್ದುದು ಗಾಂಧೀಜಿ ಅಷ್ಟೇ
ಅವರಿಗೆ ಸಾಯಲು ಒಂದು ಕಾರಣ ಬೇಕಾಗಿತ್ತು

ಧಿಕ್ಕಾರವಿರಲಿ ಇಂತಹ ಆಷಾಢಭೂತಿ ನಾಟಕಕ್ಕೆ
ಅಂತ್ಯವಿರಲಿ ಈ ಕುಟುಂಬದ ಸಾರ್ವಭೌಮತ್ವಕ್ಕೆ
ಶೊಕೀ ಜೀವನಕ್ಕೆ ಈ ನಾಡನ್ನೇ ಅಡವಿಟ್ಟರವರು
ಜನರ ರಕ್ತದಿಂದ ಹಾಸು ಕೆಂಪಾಗಿಸಿಕೊಂಡರವರು!

ಈ ಭಾಷಣವನ್ನೊಮ್ಮೆ ಕೇಳಿ:
http://www.youtube.com/watch?v=6OHcONciNRs


ಇಬ್ಬರೂ ಬಂಧಿಗಳೇ!

27 ಡಿಸೆ 12

ಸಖೀ,
ಅದೆಷ್ಟೋ ದೇವಸ್ಥಾನಗಳಿಗೆ 
ದಾನ ಮಾಡಿದರೂ ಆ ಪಾಪಿ 
ತನ್ನ ಪಾಪ ಕರ್ಮಗಳಿಂದಾಗಿ 
ಈಗ ಸೆರೆಮನೆ ಸೇರಿದ್ದಾನೆ;

ಪಾಪಿಗಳ ದಾನ ಸ್ವೀಕರಿಸುತ್ತಾ 
ಕೂತ ದೇವರೂ ದೇವಸ್ಥಾನಗಳ
ಒಳಗೆ ನೋಡಿದರೆ ಅದ್ಯಾಕೋ 
ಬಂಧಿಯಾಗಿ ಕೂರಿಸಲ್ಪಟ್ಟಿದ್ದಾನೆ!
******


ಅಧರಗಳಿಂದ ಸ್ಪರ್ಶಿಸು!

26 ಡಿಸೆ 12

||ಅಧರಗಳಿಂದ ಸ್ಪರ್ಶಿಸು 
ಅಕ್ಷಿಗಳಲ್ಲಿ ತುಂಬಿಕೋ ನನ್ನನ್ನು
ನಿನ್ನಿಂದಲೇ ಹೊಸ ಜನ್ಮ ಪಡೆದರೆ 
ನನ್ನ ನೆಲೆ ಕಂಡುಕೊಂಡೇನು ನಾನು||

ಎರಡು ದೇಹಗಳಂದು ಬೆಸೆದುಕೊಂಡು ಒಂದೇ 
ಮುಷ್ಟಿಯೊಳಗೆ ಬಂಧಿಯಾಗಿ ಸುಖನಿದ್ರೆಯಲ್ಲಿದ್ದಾಗ
ಹೇಳು ಆ ಕ್ಷಣ ನಾನೆಲ್ಲಿದ್ದೆ ಹೇಳು ಆ ಕ್ಷಣ ನೀನೆಲ್ಲಿದ್ದೆ

ನಾನನ್ನ ಬಯಕೆಗಳ ಬೇಗೆಯಲಿ ಕರಗುತ್ತಿದ್ದೆ ಅದೆಲ್ಲೋ
ನಿನ್ನ ದೇಹದ ಮೂಲಕವೇ ಹರಿದು ಹೋಗುತ್ತಿದ್ದೆ ಅದೆಲ್ಲೋ
ಅತಿ ಸುಂದರವಾಗಿತ್ತಾದರೂ ಆ ಹಾದಿಯಲಿ ತಪ್ಪೆಸಗಿದೆ ನಾನು

ನಿನ್ನಿಂದಲೇ ಹೊಸ ಜನ್ಮ ಪಡೆದರೆ 
ನನ್ನ ನೆಲೆ ಕಂಡುಕೊಂಡೇನು ನಾನು

||ಅಧರಗಳಿಂದ ಸ್ಪರ್ಶಿಸು 
ಅಕ್ಷಿಗಳಲ್ಲಿ ತುಂಬಿಕೋ ನನ್ನನ್ನು
ನಿನ್ನಿಂದಲೇ ಹೊಸ ಜನ್ಮ ಪಡೆದರೆ 
ನನ್ನ ನೆಲೆ ಕಂಡುಕೊಂಡೇನು ನಾನು||

ನಿನ್ನ ಜ್ವಾಲೆಯಲೇ ಉರಿದುಹೋಗುವ ಮಹದಾಸೆಯಲಿ ನಾನು
ಉರಿದುಹೋಗುತಿರುವಾಗ ನನಗೇ ಅಂಟಿಕೊಂಡು ನಾನು 
ಹೇಳು ಆ ಕ್ಷಣ ನಾನೆಲ್ಲಿದ್ದೆ ಹೇಳು ಆ ಕ್ಷಣ ನೀನೆಲ್ಲಿದ್ದೆ

ನಿನ್ನ ಕಂಗಳ ದಡದಿಂದ ದೂರದಲ್ಲೆಲ್ಲೋ 
ನಾನರಸುತ್ತಿದ್ದೆ ಸುಗಂಧ ಬೀರುವ ಜ್ಯೋತಿಯನ್ನು
ನಿನ್ನ ಹಾದಿ ಹಾದುಹೋಗುವೆಡೆಯಲ್ಲೇ ನಿಂತು ಕಾದಿರುವೆ ನಾನಿನ್ನೂ

ನಿನ್ನಿಂದಲೇ ಹೊಸ ಜನ್ಮ ಪಡೆದರೆ 
ನನ್ನ ನೆಲೆ ಕಂಡುಕೊಂಡೇನು ನಾನು

||ಅಧರಗಳಿಂದ ಸ್ಪರ್ಶಿಸು 
ಅಕ್ಷಿಗಳಲ್ಲಿ ತುಂಬಿಕೋ ನನ್ನನ್ನು
ನಿನ್ನಿಂದಲೇ ಹೊಸ ಜನ್ಮ ಪಡೆದರೆ 
ನನ್ನ ನೆಲೆ ಕಂಡುಕೊಂಡೇನು ನಾನು||

(ಭಾವಾನುವಾದ ಮಾಡುವ ಯತ್ನ ಇದು ಅಷ್ಟೇ)

https://www.youtube.com/watch?feature=player_embedded&v=ZcOZqFxZAos