ನಿನ್ನ ಬಾಳು ಎನ್ನದಿರು!

30 ನವೆಂ 13

(ಭಾವಾನುವಾದ)

||ನನ್ನೊಲವೇ, 
ನನ್ನನ್ನೇ ನಿನ್ನ ಬಾಳು ಎಂದು ಕರೆಯದಿರು, 
ನನ್ನೊಲವೇ||

ಅರಿವಿಲ್ಲದವರಂತೆ
ನನ್ನನ್ನೇ ನಿನ್ನ ಬಾಳು ಎಂದು ಕರೆಯದಿರು
ಸದಾ ಎಲ್ಲಿ ಉಳಿಯುವುದು ಈ ಬಾಳು?
ಅರಿವಿಲ್ಲದವರಿಗೆ ಏನು ಗೊತ್ತು, ಬಿಡು,
ಆದರೆ ಅರಿತೂ ಹೋಗುವವರು ಯಾರು 
ತೊರೆದು ಈ ಬಾಳನ್ನು?

||ನನ್ನೊಲವೇ, 
ನನ್ನನ್ನೇ ನಿನ್ನ ಬಾಳು ಎಂದು ಕರೆಯದಿರು, 
ನನ್ನೊಲವೇ||

ನನ್ನೀ ಒಣಗಿದ ಕಣ್ಣುಗಳು 
ಸುರಿಸಿದ್ದವೆಷ್ಟೋ ಬಾರಿ ಸೋನೆಯನ್ನು
ಆದರೆ ಈ ನೆನೆದ ಕಣ್ರೆಪ್ಪೆಗಳು ಬಿಟ್ಟಿರಲಿಲ್ಲ 
ಜಾರಲೆಂದೂ ಎರಡು ಹನಿಗಳನ್ನು

||ನನ್ನೊಲವೇ, 
ನನ್ನನ್ನೇ ನಿನ್ನ ಬಾಳು ಎಂದು ಕರೆಯದಿರು, 
ನನ್ನೊಲವೇ||

ತುಟಿಗಳು ಬಾಗಿವೆ ತುಟಿಗಳ ತಾಕಿವೆ 
ಉಸಿರು ಉಸಿರಲಿ ಸೇರಿ ಒಂದಾದಂತಿದೆ
ನುಡಿದು ಬಿಡು ನೀನು ಕಣ್ಣುಗಳಿಂದ 
ಈ ಎರಡು ಜೋಡಿ ತುಟಿಗಳ ಮಾತುಗಳನ್ನು

||ನನ್ನೊಲವೇ, 
ನನ್ನನ್ನೇ ನಿನ್ನ ಬಾಳು ಎಂದು ಕರೆಯದಿರು, 
ನನ್ನೊಲವೇ||


ಯಾವುದರ ಹಿಂದೆ?

30 ನವೆಂ 13

 

ಸಖೀ,
ನಲಿವು ನೀಡುವ ನೋವು
ನೋವು ನೀಡುವ ನೋವು
ನೋವು ನೀಡುವ ನಲಿವು
ನಲಿವು ನೀಡುವ ನಲಿವು
ಯಾವುದರ ಹಿಂದೆ ನಾವು?


ಅರಿವಿನ ಸಂಗ!

24 ನವೆಂ 13

 

ಸಖೀ,
ಅರಿವು ಮೂಡುವವರೆಗೆ ಒಂದು ಸಂಗ, 
ಅರಿವು ಮೂಡಿದ ಮೇಲೊಂದು ಸಂಗ,
ಅರಿವಿಲ್ಲದವಗೆ ಬೇಕರಿವಿರುವವರ ಸಂಗ, 
ಅರಿವಿದ್ದವಗಿರಲಿ ಅರಿವಿಲ್ಲದವರ ಸಂಗ,
ಅರಿವು ನಿಂತ ನೀರಾಗದೆ ಹರಿಯುತಿರಲಿ 
ಸದಾ ಕಾಲದ ಸಂಗ!


ಭ್ರಮಾಲೋಕ!

24 ನವೆಂ 13

 

ಸಖೀ,
ಭ್ರಮಾಲೋಕದಲ್ಲಿ
ವಿಹರಿಸುವವರಿಗೆ
ವಾಸ್ತವಲೋಕ
ಹಿಡಿಸುವುದಿಲ್ಲ;

ವಾಸ್ತವದಲ್ಲಿ
ಜೀವಿಸುವವರನ್ನು
ಭ್ರಮಾಲೋಕ
ಸೆಳೆಯುವುದಿಲ್ಲ!


ರಜನೀಶನಾಟ!

23 ನವೆಂ 13

 

ಸಖೀ,
ಎಳೆ ಎಳೆಯಾಗಿ ಬಿಚ್ಚಿಡುತ್ತಾಳೆ ಇಳೆ
ರಾತ್ರಿ ರಜನೀಶ ಆಡಿದ ಆಟಗಳನ್ನು
ಮೊದಲರಾತ್ರಿ ಕಳೆದ ಮೇಲೆ ಕೋಣೆ
ವಿವರಿಸುವಂತೆ ಒಲವಿನಾಟಗಳನ್ನು!


ಮರು-ಭೇಟಿ!

23 ನವೆಂ 13

 

ಸಖೀ,
ಒಂದು ದಿನ ಹಠಾತ್ತನೇ ಮತ್ತೆ ಭೇಟಿ ಅಯಿತು
ಕಣ್ಣುಗಳು ಒಂದಾದವು ಮೌನ ಮಾತಾಯಿತು
ಅವರ ಮಾತರ್ಧಕ್ಕೇ ನಿಂತಿತು ದೂರುಗಳಾಗಿ
ಬೆನ್ನುಹಾಕಿ ಹೊರಟರು ಮತ್ತೆ ಅಪರಿಚಿತರಾಗಿ!


ಉದ್ಧರಣೆ!

23 ನವೆಂ 13

 

ಸಖೀ,
ಇತರರ ಮಾತುಗಳನ್ನು ಉದ್ಧರಿಸುವುದರ ಜೊತೆಗೆ
ನಮ್ಮ ಮಾತಾಪಿತರ ಮಾತುಗಳನ್ನು ಉದ್ಧರಿಸೋಣ;

ನಮ್ಮ ನಡೆನುಡಿಯ ಮೂಲಕವಾದರೂ  ನಾವು ನಮ್ಮ
ಮಾತಾಪಿತರನ್ನು ಆದಷ್ಟು ಜೀವಂತವಾಗಿರಿಸೋಣ!


ಜಂಜಾಟ!

23 ನವೆಂ 13

 

ಸಖೀ,
ಲೋಕದ ಜಂಜಾಟಗಳಿಗೆ ಕಣ್ಣು-ಕಿವಿಯಾಗಿದ್ದರೂ,
ನಮ್ಮಿಂದಾದಷ್ಟೂ ನಿರ್ಲಿಪ್ತರಾಗಿ ಇರೋಣ ನಾವು;
ಆದರೆ ಕಿಸೆಯಲ್ಲಿ ಸಣ್ಣ ಚಾಕು ಇಟ್ಟುಕೊಂಡಿರೋಣ
ಆತ್ಮರಕ್ಷಣೆಗೆ ಸದಾಕಾಲ ಸಿದ್ಧರಾಗಿರೋಣ ನಾವು!


ಸಂಸ್ಕಾರದ ವರ್ಗಾವಣೆ!

23 ನವೆಂ 13

ಅನುವಂಶೀಯವಾಗಿ ಹರಿದುಬರುವ ಸಂಸ್ಕಾರಕ್ಕಿಂತಲೂ, ಮಗುವಿಗೆ ಮಾತಾಪಿತರ, ಅದರಲ್ಲೂ ಹೆಚ್ಚಾಗಿ ಮಾತೆಯ, ಸಂಸ್ಕಾರ ವರ್ಗಾವಣೆಯಾಗುವುದು ಅದರ ಐದು ವರ್ಷ ಪ್ರಾಯದ ಒಳಗೆ ಅನ್ನುವ ಮಾತಿದೆ.

ತಾಯಿ ಮಗುವಿಗೆ ನೀಡುವ ಬಿಸಿಅಪ್ಪುಗೆಯಲ್ಲಿ, ಕೈತುತ್ತಿನಲ್ಲಿ, ಸ್ನಾನ ಮಾಡಿಸುವಾಗ, ಜೋಗುಳ ಹಾಡಿ ಮಲಗಿಸುವಾಗ ಸಂಸ್ಕಾರ ತಂತಾನೇ ವರ್ಗಾವಣೆಯಾಗುತ್ತಿರುತ್ತದೆ. 

ಆದರೆ, ಹುಟ್ಟಿದ ಆರುತಿಂಗಳಿಗೇ ಅದ್ಯಾವುದೋ ಹಿನ್ನೆಲೆಯುಳ್ಳ ಕೆಲಸದಾಕೆಯ ಅಥವಾ ಶಿಶುವಿಹಾರ ಕೇಂದ್ರದ ವಶವಾಗುವ ಮಗು ಯಾವ ಹಾಗೂ ಯಾರ ಸಂಸ್ಕಾರ ಪಡೆದು ಬೆಳೆಯುತ್ತದೆ ಅನ್ನುವುದನ್ನು ಯೋಚಿಸಲಾದೀತೇ? 

ಅಷ್ಟು ಸಂಸ್ಕಾರವಂತ ಮಾತಾಪಿತರಿಗೆ ಇಂತಹ ಮಗನಾ/ಮಗಳಾ ಎಂದು ಮೂಗಿನ ಮೇಲೆ ಬೆರಳಿರಿಸಿ ಪ್ರಶ್ನಿಸುವ ಸಂದರ್ಭಗಳು ಮುಂದೆ ಎದುರಾದರೆ, ಅದಕ್ಕೆ ಕಾರಣಗಳೇನೆಂದು ಅರಿಯಲಾದೀತೇ?


ನಿರ್ಲಿಪ್ತ!

23 ನವೆಂ 13

 

ಸಖೀ,
ಮಾರ್ಗದಬದಿಯ ಮೈಲಿಗಲ್ಲಾದರೂ
ಗರ್ಭಗುಡಿಯಲ್ಲಿ ಪೂಜೆಸಿಕೊಂಡರೂ
ಶಿಲೆ ತಾನು ಶಿಲೆಯೇ, ಸದಾ ನಿರ್ಲಿಪ್ತ;

ಮಾರ್ಗದರ್ಶಿಯಾದಾಗ ಧನ್ಯತಾ ಭಾವ
ಪೂಜಿಸುವ ಮಂದಿಯದು ಭಕ್ತಿಯ ಭಾವ
ಶಿಲೆ ತಾನು ಶಿಲೆಯೇ, ಸದಾ ನಿರ್ಲಿಪ್ತ

ಮಂದಿರವ ಕೆಡವಿ ಬಹುಮಹಡಿಯ ಕಟ್ಟಲು
ಆ ಕಟ್ಟಡದ ಅಡಿಗಲ್ಲಾಗಿ  ಬಿದ್ದಿರುವಾಗಲೂ
ಶಿಲೆ ತಾನು ಶಿಲೆಯೇ, ಸದಾ ನಿರ್ಲಿಪ್ತ!