ಸ್ನೇಹ ಮುರಿಯಬೇಡ!

28 ಜೂನ್ 12

ಸಖೀ,
ಅವರಿವರ 
ಮಾತುಗಳಿಗೆ
ಕಿವಿಗೊಟ್ಟು 
ಸ್ನೇಹವನೇ
ಮುರಿಯುವ
ಮಾತನ್ನು ನೀ
ಬಿಟ್ಟುಬಿಡು;

ನನ್ನೊಂದಿಗೆ
ಈ ಸ್ನೇಹ
ಬೆಳೆಸುವ
ಮೊದಲು ನೀ
ಅವರಾರನ್ನೂ
ಕೇಳಿರಲಿಲ್ಲ 
ನೋಡು!
*****


ಪ್ರಭೆ-ಪ್ರತಿಭೆ!

26 ಜೂನ್ 12

ಸಖೀ,

ನನ್ನ ಕವನಗಳನ್ನು,
ನನ್ನ ಬರಹಗಳನ್ನು,
ನೀನು ಓದಿ, ಮೆಚ್ಚಿ,
ನನ್ನ ಪ್ರತಿಭೆಯನ್ನು
ಎಷ್ಟು ಹೊಗಳಿದರೂ,
ನಿಜ ಏನೆಂಬುದು,
ನನ್ನಂತೆಯೇ
ನಿನಗೂ ಗೊತ್ತು;

ನಿನ್ನ ಸಾಮಿಪ್ಯದ
ಈ ಸೌಭಾಗ್ಯ ಸದಾ
ಇರುವ, ನನ್ನೊಳಗಿನ
ಪ್ರತಿಭೆಯು ಹೊರ
ಹೊಮ್ಮುವುದು, ನಿನ್ನ
ಒಲವಿನ ಪ್ರಭೆಯ
ಪ್ರಭಾವದಿಂದಾಗಿ
ಮಾತ್ರ, ಯಾವತ್ತೂ!
**********


ಒಂದು ಹೊತ್ತಿನ ಊಟವಿದೆ!

24 ಜೂನ್ 12

ಅಪ್ಪಯ್ಯ ಹೇಳಿದ್ದ ಕತೆ-೦೨

ಅದೊಂದು ಸಣ್ಣ ಊರು. ಆ ಊರಿನಲ್ಲಿ ಎಲ್ಲಾ ಮತ ಧರ್ಮದವರೂ ಸಾಮರಸ್ಯದ ಜೀವನ ನಡೆಸುತ್ತಿದ್ದರು. ಅಲ್ಲಿ ದೇವಸ್ಥಾನ, ಕ್ರೈಸ್ತ ಪ್ರಾರ್ಥನಾ ಮಂದಿರಗಳಿದ್ದಂತೆಯೇ, ಒಂದು ಮಸೀದಿ ಕೂಡ ಇತ್ತು. ಆ ಮಸೀದಿಯಲ್ಲೋರ್ವ ಧರ್ಮಗುರು ಇದ್ದರು. ಆ ಧರ್ಮಗುರುವಿಗೋರ್ವ ಮಗನಿದ್ದ.

ಆ ಧರ್ಮಗುರುವಿಗೆ ವಯಸ್ಸಾಗಿತ್ತು. ತನ್ನ ಅಂತಿಮ ಕಾಲ ಸನ್ನಿಹಿತವಾಗುತ್ತಿದೆ ಎನ್ನುವುದನ್ನು ಅರಿತ ಆತ, ಒಂದು ದಿನ ತನ್ನ ಮಗನನ್ನು ಕರೆದು: “ಮಗನೇ ನಿನಗೆ ನಾನು ಮಸೀದಿಯ ವಿಧಿ ವಿಧಾನಗಳನ್ನೆಲ್ಲಾ ಕಲಿಸಿಕೊಟ್ಟಿರುತ್ತೇನೆ, ಇನ್ನು ಮುಂದೆ ನನ್ನಂತೆಯೇ ನೀನು ಇಲ್ಲಿನ ಧರ್ಮ ಗುರುವಾಗಿ ಕಾರ್ಯ ನಿರ್ವಹಿಸಿಕೊಂಡು ಹೋಗಬೇಕು. ಈ ಊರಿನಲ್ಲಿ ಎಲ್ಲಾ ಮತದವರೂ ಇದ್ದಾರೆ. ಎಲ್ಲರೊಂದಿಗೂ ಪ್ರೀತಿಯಿಂದ ವ್ಯವಹರಿಸುತ್ತಾ ಇರು. ಇಲ್ಲಿನ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವುದಕ್ಕೆ ಸದಾ ಸಹಕರಿಸುತ್ತಾ ಇರು. ಇನ್ನೊಂದು ಮಾತು ಈ ಊರಿನಲ್ಲಿರುವ ಪ್ರತಿ ಮನೆಯಲ್ಲೂ, ನಿನಗೊಂದು ಹೊತ್ತಿನ ಊಟ ಇದೆ. ಅದನ್ನು ಯಾವತ್ತೂ ಹಾಳು ಮಾಡಿಕೊಳ್ಳಬೇಡ. ನಿನಗೆ ಒಳ್ಳೇದಾಗಲಿ ಮಗನೇ” ಎಂದು ಕಿವಿಮಾತುಗಳನ್ನು ನುಡಿದು ಶುಭ ಹಾರೈಸಿದರು.

ಸ್ವಲ್ಪ ದಿನಗಳ ನಂತರ ಆ ಧರ್ಮಗುರು ವಿಧಿವಶರಾದರು ಹಾಗೂ ಅಂದಿನ ನಿಯಮದಂತೆ ಆತನ ಪುತ್ರ ಆ ಮಸೀದಿಯಲ್ಲಿನ ಧರ್ಮಗುರುವಾಗಿ ನಿಯುಕ್ತರಾದರು. ಊರಿನ ಎಲ್ಲಾ ಜನರೂ ಆ ಹೊಸ ಧರ್ಮಗುರುವನ್ನು ಅಭಿನಂದಿಸಿದರು ಹಾಗೂ ಶುಭ ಕೋರಿದರು. ಧರ್ಮ ಭೇದವಿಲ್ಲದೇ, ಎಲ್ಲಾ ಮನೆಯವರೂ ಆ ಧರ್ಮಗುರುವನ್ನು ತಮ್ಮ ತಮ್ಮ ಮನೆಗಳಿಗೆ ಭೋಜನಕ್ಕಾಗಿ ಆಹ್ವಾನಿಸಿದರು. ಆಗ ಆ ಧರ್ಮಗುರುವಿಗೆ ತನ್ನ ತಂದೆಯವರು ತಮ್ಮ ಕೊನೆ ದಿನಗಳಲ್ಲಿ ನುಡಿದಿದ್ದ ಮಾತಿನ ನೆನಪಾಯ್ತು. “ … ಈ ಊರಿನಲ್ಲಿರುವ ಪ್ರತಿ ಮನೆಯಲ್ಲೂ, ನಿನಗೊಂದು ಹೊತ್ತಿನ ಊಟ ಇದೆ. ಅದನ್ನು ಯಾವತ್ತೂ ಹಾಳು ಮಾಡಿಕೊಳ್ಳಬೇಡ”.

“ಓ…ಹೌದು… ಹೌದು… ನನ್ನ ತಂದೆಯವರ ಮಾತನ್ನು ನಾನು ಪಾಲಿಸಲೇ ಬೇಕು. ಯಾವ ಮನೆಯ ಕರೆಯನ್ನೂ ನಾನು ನಿರ್ಲಕ್ಷಿಸಲಾಗದು. ನಿರ್ಲಕ್ಷಿಸಿದರೆ, ಆ ಮನೆಯ ಊಟವನ್ನು ನಾನು ಹಾಳುಮಾಡಿಕೊಂಡಂತಾಗುತ್ತದೆ ಹಾಗೂ ನನ್ನ ತಂದೆಯವರ ಮಾತನ್ನು ನಾನು ಧಿಕ್ಕರಿಸಿದಂತಾಗುತ್ತದೆ”. ಹೀಗೆಂದು ಯೋಚಿಸಿದ ಆ ಧರ್ಮಗುರು, ಒಂದೊಂದು ಹೊತ್ತು ಒಂದೊಂದು ಮನೆಯಲ್ಲಿ ಭೋಜನ ಸ್ವೀಕರಿಸಲು ಆರಂಭಿಸುತ್ತಾನೆ. ನೂರು ಮತ್ತಷ್ಟು ಮನೆಗಳಿದ್ದ ಆ ಊರಿನ ಎಲ್ಲಾ ಮನೆಗಳಿಗೂ ಭೇಟಿ ಇತ್ತು, ಅಲ್ಲಿ ಅವರು ನೀಡಿದ ಭೋಜನವನ್ನು ಸ್ವೀಕರಿಸುತ್ತಾನೆ.

ದಿನಗಳು ತಿಂಗಳುಗಳಾದವು, ತಿಂಗಳುಗಳು ವರ್ಷಗಳಾದವು. ಆರಂಭದ ದಿನಗಳಲ್ಲಿ ಆತನನ್ನು ಕಂಡಲ್ಲೆಲ್ಲಾ ಗೌರವ ನೀಡುತ್ತಿದ್ದ ಆ ಊರಿನ ಜನರು, ದಿನಗಳೆದಂತೆ, ಆತನನ್ನು ಕಂಡರೆ ಗುರುತಿಸುವುದನ್ನೂ ಕಡಿಮೆ ಮಾಡಿದರು. ಆತನನ್ನು ನೋಡಿದರೂ ನೋಡದವರಂತೆ ಮುಖಮರೆಸಿ ಹೋಗುವ ಜನರನ್ನೂ ಆತ ಕಾಣತೊಡಗಿದ. ಆತನ ಕಷ್ಟಕ್ಕೂ ಯಾರೂ ಸ್ಪಂದಿಸದಾದರು. “ಇದೇಕೆ ಹೀಗಾಯ್ತು?” ಎಂದು ಯೋಚಿಸತೊಡಗಿದ ಆತನಿಗೆ, ತನ್ನ ತಂದೆಯವರ ನೆನಪಾಯ್ತು. ಅವರು ನುಡಿದಿದ್ದ, ಆ ಮಾತಿನ ನಿಜವಾದ ಅರ್ಥ ಏನಾಗಿತ್ತೆಂದು ನಿಧಾನವಾಗಿ, ಅರಿವಾಗತೊಡಗಿತು.

“ಈ ಊರಿನಲ್ಲಿರುವ ಪ್ರತಿ ಮನೆಯಲ್ಲೂ, ನಿನಗೊಂದು ಹೊತ್ತಿನ ಊಟ ಇದೆ. ಅದನ್ನು ಯಾವತ್ತೂ ಹಾಳು ಮಾಡಿಕೊಳ್ಳಬೇಡ. ಎಂದು ನನ್ನ ತಂದೆಯವರು ನುಡಿದಿದ್ದರು. ಆದರೆ, ನಾನು ನನಗೆ ಅದರ ಅಗತ್ಯ ಇಲ್ಲವಾಗಿದ್ದಾಗಲೂ, ಎಲ್ಲರ ಮನೆಯ ಭೋಜನವನ್ನೂ ಸ್ವೀಕರಿಸಿ ಹಾಳುಮಾಡಿಕೊಂಡುಬಿಟ್ಟಿದ್ದೇನೆ. ಜೊತೆಗೆ ಈ ಊರಿನ ಜನರಿಗೆ ನನ್ನ ಮೇಲಿದ್ದ ಗೌರವವನ್ನೂ ಕಳೆದುಕೊಂಡಿದ್ದೇನೆ”, ಎಂದು ಮರುಗಿದ.

*****


ಸೊಸೈಟಿ ಅಕ್ಕಿ!

17 ಜೂನ್ 12

ಅಪ್ಪಯ್ಯ ಹೇಳಿದ್ದ ಕತೆ- ೦೧

ಒಂದು ಹಳ್ಳಿ. ಅಲ್ಲಿನ ಓರ್ವ ಗೃಹಸ್ಥರ ಮನೆಗೆ ರಾತ್ರಿ ಹೊತ್ತು ಓರ್ವ ಸಾಧು ಭೇಟಿ ನೀಡುತ್ತಾರೆ. ಪಾದಚಾರಿಯಾಗಿ ಒಂದೂರಿನಿಂದ ಇನ್ನೊಂದೂರಿಗೆ ಸಾಗುತ್ತಿದ್ದ ಅವರು ಆ ರಾತ್ರಿಯನ್ನು ಆ ಮನೆಯಲ್ಲಿ ಕಳೆಯುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಅದಕ್ಕೆ ಒಪ್ಪಿದ ಗೃಹಸ್ಥರು, ಅವರಿಗೆ ಊಟದ ಹಾಗೂ ಮಲಗುವ ವ್ಯವಸ್ಥೆ ಮಾಡಿಕೊಡುತ್ತಾರೆ. ಮುಂಜಾನೆ ಸಾಧುಗಳಿಗೆ ಸ್ನಾನ ಮಾಡಲು ಬಿಸಿ ನೀರು ತುಂಬಿದ ಬಾಲ್ದಿ ಹಾಗೂ ಒಂದು ಕಂಚಿನ ತಂಬಿಗೆ ನೀಡುತ್ತಾರೆ. ಆ ಸಾಧು ಸ್ನಾನ ಮುಗಿಸಿ ಬಂದು, ಚಹಾ ಸೇವನೆ ಮಾಡಿ, ಆ ಗೃಹಸ್ಥರಿಗೆ ಮತ್ತವರ ಮನೆಯವರಿಗೆಲ್ಲಾ ಕೃತಜ್ಞತೆಗಳನ್ನು ತಿಳಿಸಿ, ಮುಂದಿನ ಊರಿಗೆ ಪಯಣ ಬೆಳೆಸುತ್ತಾರೆ. 

ಅರ್ಧ – ಒಂದು ಘಂಟೆಯ ನಂತರ ಆ ಸಾಧು ಮರಳಿ ಆ ಗೃಹಸ್ಥರ ಮನೆಯ ಬಾಗಿಲಲ್ಲಿ ನಿಂತು ಆ ಗೃಹಸ್ಥರನ್ನು ಕರೆಯುತ್ತಿರುತ್ತಾರೆ. ಗೃಹಸ್ಥರು ಓಡೋಡಿ ಬಂದು, “ಏನಾಯ್ತು ಸ್ವಾಮಿಗಳೇ, ನಮ್ಮಿಂದ ಏನಾದರೂ ಅನಾಚಾರ ಆಯ್ತೇ?” ಎಂದು ಕೇಳಿದರು. ಅದಕ್ಕೆ ಆ ಸಾಧು “ಏನಿಲ್ಲ, ತಾವು ನೀಡಿದ್ದ ಕಂಚಿನ ತಂಬಿಗೆಯನ್ನು, ನಾನು ನನಗರಿವಿಲ್ಲದಂತೆಯೇ ನನ್ನ ಜೋಳಿಗೆಯಲ್ಲಿ ಇರಿಸಿಕೊಂಡು ತೆರಳಿದ್ದೆ, ಅಲ್ಲೆಲ್ಲೋ ನದೀ ತೀರದಲ್ಲಿ, ಮಲವಿಸರ್ಜನೆ ಮುಗಿಸಿದ ನನಗೆ ಥಟ್ಟನೇ ಅರಿವಾಯ್ತು. ಹಾಗಾಗಿ ಅದನ್ನು ತಮಗೆ ಒಪ್ಪಿಸಲು ಮರಳಿ ಬಂದೆ”. ಅಂದರು. ಆ ಗೃಹಸ್ಥರು “ಪರವಾಗಿಲ್ಲ ಬಿಡಿ ಅದರಲ್ಲೇನಂತೆ” ಎಂದು ಮರುನುಡಿದರು. 

ಆಗ ಆ ಸಾಧು “ತಾವು ಅನ್ನಕ್ಕೆ ಬಳಸಿದ ಅಕ್ಕಿ ಎಲ್ಲಿಯದು. ಯಾರ ಸಂಪಾದನೆ ಹೇಳ್ತೀರಾ?” ಎಂದು ಕೇಳಿದಾಗ, ತಬ್ಬಿಬ್ಬಾದ ಆ ಗೃಹಸ್ಥ “ನನ್ನ ಹಿರಿಯ ಮಗ ಇಲ್ಲೇ ಪಟ್ಟಣದಲ್ಲಿ ಸೊಸೈಟಿಯಲ್ಲಿ ಕೆಲಸ ಮಾಡುತ್ತಾನೆ. ಅಕ್ಕಿ ಗೋಧಿ ಸಕ್ಕರೆ ಎಲ್ಲಾ ಆತನೇ ತರುವುದು ನಮ್ಮ ಮನೆಗೆ” ಅಂದರು. “ಹೂಂ.. ಯಜಮಾನರೇ ಅದಕ್ಕೇ ನೋಡಿ, ಲೆಕ್ಕ ತಪ್ಪಿಸಿ ತಂದಿರುವ ಅಕ್ಕಿಯಿಂದ ತಯಾರಿಸಿದ ಭೋಜನ ಸ್ವೀಕರಿಸಿದ ನನಗೂ ಕಳ್ಳಬುದ್ಧಿ ಬಂದು ಬಿಡ್ತು, ತಮ್ಮ ತಂಬಿಗೆಯನ್ನೇ ಕೊಂಡೊಯ್ದಿದ್ದೆ, ಮಲ ವಿಸರ್ಜನೆಯಾದ ಮೇಲೆ ತಪ್ಪಿನ ಅರಿವಾಯ್ತು” ಅಂದರು. 

ಅಗ ಆ ಗೃಹಸ್ಥರಿಗೆ ತಮ್ಮ ತಪ್ಪಿನ ಅರಿವಾಯ್ತು. ಆ ಸಾಧುಗಳ ಕ್ಷಮೆ ಕೋರಿ, ಇನ್ನೆಂದೂ ಅಂತಹ ಅಕ್ರಮಕ್ಕೆ ಬೆಂಬಲ ಕೊಡುವುದಿಲ್ಲ. ನನ್ನ ಮಗನಿಗೆ ಇಂದೇ ಬುದ್ಧಿ ಹೇಳುತ್ತೇನೆ” ಎಂದು ಪಶ್ಚಾತ್ತಾಪ ಪಟ್ಟರು.

*****

 


ಅಧ್ಯಾತ್ಮ!

16 ಜೂನ್ 12

ಸಖೀ,
ನನ್ನ ಮಾತು ಕೇಳು, ಈ ವೇದ,
ಪುರಾಣ, ಪ್ರವಚನ, ಅಧ್ಯಾತ್ಮ,
ಇವನ್ನು ಕ್ಲಿಷ್ಟಗೊಳಿಸದೇ ಈ ಎರಡು
ವಾಕ್ಯಗಳಲ್ಲಿ ಕಟ್ಟಿದರೆ ಎಲ್ಲರಿಗೂ ಪಥ್ಯ

ನಿಸ್ವಾರ್ಥ ಪ್ರೀತಿ ಇರುವಲ್ಲೆಲ್ಲಾ 
ನೆಲೆಯೂರಿ ನಿಂತಿರುವುದು ದೈವತ್ವ,
ದೈವತ್ವ ಜಾಗೃತವಾಗಿರುವಲ್ಲೆಲ್ಲಾ
ಅಧರ್ಮವಿರದೆ ಧರ್ಮದ್ದೇ ಅಧಿಪತ್ಯ!
*****************


ಮುಂಗಾರು, ಅಂದು – ಇಂದು!

16 ಜೂನ್ 12

ಸಖೀ,

ಹಿಂದಿನ ಕಾಲದ ಮುಂಗಾರು ಅಂದರೆ,
ಅಂದಿನ ಹಿರಿಯರು ನೋಡಿ ನಿರ್ಧರಿಸಿ
ನೆರವೇರಿಸುತ್ತಿದ್ದ ಮದುವೆ ಸಂಬಂಧದಂತೆ,

ಅಡ್ಡಿ ಆತಂಕಗಳಿಲ್ಲದೇ, ಸದಾಕಾಲ ಇಳೆಯ
ತಂಪಾಗಿರಿಸಿ, ಬಸಿರಾಗಿಸಿ, ಹಸಿರಾಗಿಸಿ,
ಮಳೆಗಾಲವಿಡೀ ಸಂತಸ ತುಂಬುತ್ತಿತ್ತಂತೆ;

ಇಂದಿನ ಕಾಲದ ಮುಂಗಾರು ನೋಡು,
ಹದಿಹರೆಯದ ಹುಡುಗ ಹುಡುಗಿಯರ
ಪ್ರೇಮ ಕತೆಗಳಂತೆ, ಎಲ್ಲೂ ನಿಲ್ಲದಂತೆ,

ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಸುರಿಸಿ, ಹುಸಿ
ಬಸಿರಾಗಿಸಿ, ಹಸಿರಾಗಿಸಿ, ಮತ್ತಾರದೋ
ನೆನಪಾದಂತೆ ಕಣ್ಮರೆಯಾಗಿಬಿಡುವುದಂತೆ!
***********************


ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೇ?

08 ಜೂನ್ 12

ಸಖೀ,
ಇಂದು ಇಲ್ಲಿ, ನಮ್ಮನ್ನು ಕಾಡುವವು ಅವರ ನೆನಪುಗಳು
ನಾಳೆ ಇನ್ನೆಲ್ಲೋ, ಇನ್ನಾರಿಗೋ ನಮ್ಮಯ ನೆನಪುಗಳು;

ಬದುಕಿದವರದೂ ಅಷ್ಟೇ, ಇಲ್ಲಿ ಬಾಳಿದವರದೂ ಅಷ್ಟೇ
ಆದರೂ, ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೇ?

ಏನೂ ಮಾಡದೇ ಅಳಿದವರೂ ನೆನಪಾಗುತ್ತಾರೆ
ಹೆಸರು ಮಾಡಿ ಮಡಿದವರೂ ನೆನಪಾಗುತ್ತಾರೆ;

ನೆನಪಾಗುವಾಗ ಒಳ್ಳೆಯವರು ಕೆಟ್ಟವರು ಎಂಬ
ಭೇದವೇ ಇಲ್ಲದಂತೆ ಎಲ್ಲರೂ ನೆನಪಾಗುತ್ತಾರೆ;

ನೆನಪುಗಳು ನಮ್ಮನ್ನು ಕಾಡಿಸುತ್ತವೆ, ಪೀಡಿಸುತ್ತವೆ,
ನಮ್ಮ ಮನಗಳಿಗೆ ಒಮ್ಮೊಮ್ಮೆ ಮುದ ನೀಡುತ್ತವೆ;

ಒಳ್ಳೆಯವರ ನೆನಪುಗಳಿಗಿಂತಲೂ ಒಮ್ಮೊಮ್ಮೆ
ಕೆಟ್ಟವರ ನೆನಪುಗಳು ಜಾಸ್ತಿ ನೋವು ತರುತ್ತವೆ;

ನಮ್ಮೊಂದಿಗೆ ಇಲ್ಲಿ ಇದ್ದು, ಮುಂದೆ ನಡೆದು ಹೋದ 
ಎಲ್ಲರೂ ಮೆರವಣಿಗೆಯಲ್ಲಿ ಸಾಗುತ್ತಾ ಇರುತ್ತಾರೆ;

ನನ್ನನ್ನು ಕಂಡು ಅದ್ಯಾಕೋ ಅವರೆಲ್ಲಾ ಒಳಗೊಳಗೆ
ಮುಸಿ ಮುಸಿ ನಗುತ್ತಾ ಇರುವಂತೆ ಭಾಸವಾಗುತ್ತಾರೆ;

ಬದುಕಿದವರೂ ಅಷ್ಟೇ, ಇಲ್ಲಿ ಬಾಳಿದವರೂ ಅಷ್ಟೇ,
ಆದರೂ, ನಿಜ ಹೇಳು
ನಮ್ಮ ಹಾರಾಟ… ಹೋರಾಟ… ಇಲ್ಲಿ ಇನ್ನು ಅದೆಷ್ಟೇ?
****************************


ನೀವೇನಂತೀರಿ?

02 ಜೂನ್ 12


ನಿಲ್ದಾಣದಲ್ಲಿ

ನಿಂತು ಬಸ್ಸಿಗಾಗಿ
ಕಾಯುತ್ತಿದ್ದವನು,

ಬಸ್ ಬಂದಾಗ
ಬಿಟ್ಟು ಹೋಗಲು
ಮನಬಾರದೇ
ನಿಲ್ದಾಣವನ್ನು,

ಅಳುತ್ತಾ ಕೂತು
ಏರದೇ ಮುಂದೆ
ಹೋಗಲು ಬಿಟ್ಟರೆ
ಆ ಬಸ್ ಅನ್ನು,

ನೀವೇನಂತೀರಿ?

ನಮ್ಮಲ್ಲಿ ಕೆಲವರ 
ಜೀವನವೂ ಕೂಡ
ಹೀಗೆಯೇ ಅಂದ್ರೊಮ್ಮೆ
ಆತ್ಮಾವಲೋಕನ
ಮಾಡಿಕೊಳ್ತೀರಿ!
*********


ಕತೆ ಹೇಳುತ್ತಾರೆ … ಮನಗಳನ್ನು ಬಿಚ್ಚಿಡುತ್ತಾರೆ!

02 ಜೂನ್ 12


ಕತೆ ಹೇಳುತ್ತಾರೆ, ತಮ್ಮ ಮುಂದೆ ಕೂರಿಸಿಕೊಂಡು ತಮ್ಮ ಮನಗಳನ್ನು ಬಿಚ್ಚಿಡುತ್ತಾರೆ
ಕಂಡವಂತೆಯೇ, ಬರೇ ಕೇಳಿದವರೂ ಅಷ್ಟೇ ಕರೆಮಾಡಿ ಮನದೊಳಗಿಳಿದುಬಿಡುತ್ತಾರೆ

ಕೇಳಿದ ಕತೆಗಳಿಗೆ ಲೆಕ್ಕವಿಟ್ಟಿಲ್ಲ, ಇಟ್ಟಿದ್ದರೂ ಬಹುಶಃ ಲೆಕ್ಕಕ್ಕೆ ಸಿಗಲಾರದಷ್ಟು ಕತೆಗಳು
ಬರಹಗಾರನೀತ, ಬಹಿರಂಗಗೊಳಿಸಬಹುದು ಎನ್ನುವ ಅಳುಕಿಲ್ಲದ ಆತ್ಮೀಯರ ಕತೆಗಳು

ಎಲ್ಲರ ಕತೆಗಳೂ ನೆನಪಿವೆ, ಒಮ್ಮೊಮ್ಮೆ ಮನಪಟಲದ ಮೇಲೆ ಮೆರವಣಿಗೆ ನಡೆಸುತ್ತವೆ
ಒಮ್ಮೊಮ್ಮೆ ನನ್ನ ಅರ್ಹತೆಯೇನೆಂದು ನನ್ನನ್ನೇ ನಾನು ಪ್ರಶ್ನಿಸಿಕೊಂಬಂತೆ ಮಾಡುತ್ತವೆ

ಬರೆಯಲು ಕೂತರೆ ಒಬ್ಬೊಬ್ಬರದೂ ಒಂದೊಂದು ಕಾದಂಬರಿಯಾಗಿ ಹೊಮ್ಮಬಹುದು
ಬರೆದರೆ ನನ್ನವರೆಲ್ಲರ ಖಾಸಗಿ ವಿಷಯಗಳು ಅನಾವರಣಗೊಂಡು ನೋವಾಗಬಹುದು

ನಮ್ಮೆಲ್ಲಾ ನಿರ್ಧಾರಗಳನ್ನೂ ಸಕಾಲದಲ್ಲಿ ಸಕಾರಣಗಳೊಂದಿಗೇ ತೆಗೆದುಕೊಂಡರೆ ಚೆನ್ನ
ತರಾತುರಿಯಲ್ಲಿ ಎಲ್ಲವನ್ನೂ ಬಿಚ್ಚಿಟ್ಟರೆ, ಎಲ್ಲರೊಂದಿಗೆ ನಾನನಿಸಿಕೊಳ್ಳಬಹುದು ಕೃತಘ್ನ!
*****************************************************