“ಯಾಕೋ ಮಾರಾಯಾ ಈಗೀಗ ಸಾಯೋ ಮಾತಾಡ್ತೀರ್ತೀಯಾ… ಏನಾಗಿದೆ ನಿನಗೆ?”
“ನನ್ನನ್ನು ನಿನ್ನ ಮತ್ತು ನಿನ್ನ ಹೆಂಡತಿ ಮುಂದೆ, ಹಗಲೂ ರಾತ್ರಿ ದೂಷಿಸುತ್ತಿರುತ್ತಾರಲ್ಲಾ, ಅವರ ಕಣ್ಮುಂದೆ ಸಾಯಬೇಕು ಕಣೋ ನಾನು.
ನನ್ನನ್ನು ಈಗ ನಿಮ್ಮ ಮುಂದೆ ದೂಷಿಸುತ್ತಿರುವವರು ಅಲ್ಲಿ ನನ್ನ ಶವದ ಬಳಿ ಕೂತು ಅಳುತ್ತಾರಲ್ಲಾ…
ಅವರ ಆ ನಾಟಕವನ್ನು, ಆ ದೊಂಬರಾಟವನ್ನು, ನೀವು ನೋಡಬೇಕು ಕಣೋ…”
“ನೀನು ಸತ್ತರೆ ಅವರೂ ಅಳ್ತಾರಂತೀಯಾ…?”
“ಅಂತವರೇ ಅಳೋದು ಜಾಸ್ತಿ ಕಣೋ… ಹಿಂದುಗಡೆ ದೂರುವವರು ಮಾಡೋ ಕೆಲಸವೇ ಅದು… ಜೀವನವಿಡೀ ನಾಟಕ, ಬರೀ ದೊಂಬರಾಟ”
*****
ಮಾತಾಪಿತರು, ಮುದುಕರಾಗುತ್ತಾ ಬಂದಂತೆ ಮಕ್ಕಳಲ್ಲಿ ಹಿರಿಯರಾದವರು, ಅವರ ಸ್ಥಾನದಲ್ಲಿ ನಿಂತು, ಜವಾಬ್ದಾರಿಯುತರಾಗಿ, ಸಂಸಾರವನ್ನು ಒಂದಾಗಿಡುವ ನಿಟ್ಟಿನಲ್ಲಿ ಯತ್ನಿಸುತ್ತಾ ಇರಬೇಕು. ಅಂತಹ ಜವಾಬ್ದಾರಿ ವಹಿಸಿಕೊಂಡವರ ಹಿಂದೆ ಅನ್ಯರು ಒಂದಾಗಿ ನಿಲ್ಲಬೇಕು.
ಜವಾಬ್ದಾರಿ ರಹಿತ ಬಂಡಾಟಗಳೇ ಜಾಸ್ತಿಯಾದರೆ, ಮಾತಾಪಿತರ ಅಗಲುವಿಕೆಯಿಂದ, ಒಮ್ಮೆಗೇ ನಡುನೀರಿನ ಸುಳಿಯಲ್ಲಿ ಮುಳುಗೇಳುವ ನಾವೆಯಂತಾದೀತು ಸಂಸಾರ. ಸಂಸಾರನೌಕೆ, ಮತ್ತೆ ಹಿಡಿತಕ್ಕೆ ಸಿಗುವುದು ಕಷ್ಟ!
*****
“ರೀ… ಯಾಕ್ರೀ… ಒಂಥರಾ ಇದ್ದೀರಾ? ನಿಮ್ಮಲ್ಲೇ ನೀವಿಲ್ಲ ಅಂತ ಅನಿಸ್ತಾ ಇದೆ. ಎತ್ತಲೋ ದೃಷ್ಟಿ. ಭಾವರಹಿತ ನೋಟ… ಈ ಅಪರಾತ್ರಿಯಲ್ಲಿ ಏನು ಚಿಂತೆ ನಿಮಗೆ? ಯಾಕೆ ಏನಾಯ್ತು?”
“ಯೋಚಿಸ್ತಾ ಇದ್ದೆ ಕಣೇ… ನಾನು ಎಲ್ಲಿದ್ದೀನಿ ಅಂತ… ಅಪ್ಪ-ಅಮ್ಮಂದಿರ ಸೇವೆ ಮಾಡುವಾಗಲೆಲ್ಲಾ ನಾನಿರಲಿಲ್ಲ, ಒಡಹುಟ್ಟಿದವರಿಗಾಗಿ ತ್ಯಾಗಮಾಡುವಾಗಲೂ ನಾನಿರಲಿಲ್ಲ, ನಿನ್ನ ಒಂದೇ ನೋಟಕ್ಕೆ ನಾ ಮರುಳಾಗುವಾಗ ನಾನಿರಲಿಲ್ಲ, ಈಗ ನೀನು ನಿನ್ನ ಜೊತೆಗೆ ನಾನಿಲ್ಲ ಅಂದರೆ ಹೇಳಲೇನಿಲ್ಲ. ನಿಜ, “ನಾನು” ಇಲ್ಲದ ನಾನು, ಈಗ ನನಗಾಗಿಯೇ ಇಲ್ಲ!”
“ಅಂದರೆ… ಏನ್ರೀ… ಯಾಕೆ ಹೀಗೆ ಮಾತಾಡ್ತಾ ಇದ್ದೀರಿ?”
“ಇಲ್ಲಾ ಕಣೇ… ಮನುಷ್ಯನಲ್ಲಿ “ನಾನು” ಅನ್ನುವುದು ಇರಬಾರದು ಅಂತಾರೆ. ನಾನೂ ಅಂತಿರ್ತೀನಿ. ಆದರೆ, ನಮ್ಮೊಳಗೆ ಸ್ವಲ್ಪವಾದರೂ “ನಾನು” ಅನ್ನುವುದು ಇರಬೇಕು ಕಣೇ… ದುರಭಿಮಾನ ಬೇಡ, ಸ್ವಾಭಿಮಾನ ಅನ್ನುವುದು ಪ್ರತಿಯೊಬ್ಬರಲ್ಲೂ ಇರಬೇಕು”
“ಹೂಂ… ಹೌದು ಒಪ್ತೇನೆ… ನಾಳೆ ಮಾತಾಡೋಣ. ರಾತ್ರಿಯೇ ರಾತ್ರಿಗೆ ಶುಭರಾತ್ರಿ ಹೇಳುವ ಹೊತ್ತಾಯ್ತು… ಬನ್ನಿ ಮಲಗಿ”
*****
“ಅಪ್ಪಾ ಈ ದೇಶ ಉದ್ಧಾರ ಆಗೋಲ್ಲ ಕಣಪ್ಪಾ…?”
“ಯಾಕೋ ಹಾಗ್ಯಾಕ್ ಹೇಳ್ತಾ ಇದ್ದೀಯಾ?”
“ಅಲ್ಲಪ್ಪಾ… ಮದ್ಯ ಮಾರಿ ಸಂಪಾದಿಸಿದ ಹಣವನ್ನು ಮಕ್ಕಳ ವಿದ್ಯಾಭಾಸಕ್ಕೆ ಖರ್ಚು ಮಾಡುತ್ತಿದೆ ಸರಕಾರ. ಅಪ್ಪಂದಿರ ತಲೆಕೆಡಿಸಿ ಸಂಪಾದಿಸಿದ ಹಣದಿಂದ, ಮಕ್ಕಳ ಮಹಿಳೆಯರ ಕಲ್ಯಾಣ ಮಾಡಿದರೆ ಹೇಗಾದೀತು ಅಪ್ಪಾ…? ಈ ದೇಶ ಉದ್ಧಾರ ಆಗೋಲ್ಲ”
“ಏನ್ ಹೇಳ್ತೀಯೋ ನಿಂಗೇ ಗೊತ್ತು…ನನಗೆ ಬೇರೆ ಕೆಲಸ ಇದೆ ಕಣೋ…”
****ಅಪರಾಹ್ನ ಊಟ ಮುಗಿಸಿ, ದೇವಸ್ಥಾನದ ಆವರಣವನ್ನು ಹಾದುಕೊಂಡು ಶಾಲೆಗೆ ಮರಳುತ್ತಿದ್ದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೋರ್ವನನ್ನು ಅಲ್ಲಿನ ಅರ್ಚಕರಾದ ಶ್ರೀಕಾಂತ ಭಟ್ರು ಕೇಳ್ತಾರೆ:“ಏಯ್ ರಮೇಶಾ.. ನಿನ್ನ ಎಲ್ಲಾ ದೋಸ್ತಿಗಳು ದೇವಸ್ಥಾನದ ಒಳಗೆ ಹೋಗಿ ಸುತ್ತು ಬರ್ತಾರೆ? ಆದ್ರೆ ನೀನ್ಯಾಕೆ ಹೊರಗೆ ನಿಂತ್ಕೊಂಡು ಕಾಯ್ತಾ ಇರ್ತೀಯಲ್ಲಾ ಯಾಕೆ? ಯಾಕೆ ಅವರ ಜೊತೆಗೆ ಹೋಗುವುದಿಲ್ಲ ನೀನು?”“ದೇವರು ಸರ್ವಂತರ್ಯಾಮಿ ಅಂತಾರಲ್ಲಾ ಭಟ್ರೇ ಇದು ನಿಜಾನಾ?”“ಹೌದು. ದೇವರು ಇಲ್ಲದ ಜಾಗವೇ ಇಲ್ಲ ಅಂತ ಕನಕದಾಸರ ಬಾಳೆಹಣ್ಣಿನ ಕತೆಯಲ್ಲಿ ಹೇಳಿದ್ದಾರಲ್ವಾ?”“ಅದಕ್ಕೇ ನಾನು ಒಳಗೆ ಹೋಗಿ ಸುತ್ತು ಬರೋಲ್ಲ ಭಟ್ರೇ. ದೇವರು ಎಲ್ಲೆಲ್ಲೂ ಇದ್ದಾನೆ ಅಂತ ನೀವೇ ಹೇಳಿದ ಮೇಲೆ, ನಾನು ದಿನಾ ಹಗಲಿಡೀ ಮಾಡುವ ಸುತ್ತಾಟಗಳೆಲ್ಲಾ ಆತನಿಗೆ ಮಾಡುವ ಪ್ರದಕ್ಷಿಣೆಗಳೇ ಅಲ್ವೇ ಭಟ್ರೇ… ಒಳಗೆ ಒಮ್ಮೆ ಹೋಗಿದ್ದೆ ದೇವಸ್ಥಾನ ಹೇಗಿದೆ ಅಂತ ನೋಡಲು. ನೋಡುವುದಕ್ಕೆ ಒಮ್ಮೆ ಹೋದರೆ ಸಾಕಲ್ವಾ ಭಟ್ರೆ? ದಿನಾ ನೋಡಲು ಏನಿದೆ ಅಲ್ಲಿ.”“ದೇವರಿಗೆ ಕೈಮುಗಿದು ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿ ಆಗುತ್ತದೆ. ನಿನಗೆ ಏನು ಬೇಕು ಅನ್ನೋದನ್ನು ನೀನು ಕೇಳಬೇಕು ತಾನೇ?”“ದೇವರಿಗೆ ಎಲ್ಲಾ ಗೋತ್ತಾಗುತ್ತದೆ ಭಟ್ರೇ… ನನಗೆ ಏನು ಬೇಕು ಅಂತ ನನ್ನೊಂದಿಗಿರುವ ದೇವರಿಗೆ ಗೊತ್ತಿರೋಲ್ವಾ? ದೇವರು ನಮ್ಮ ತಾಯಿ- ತಂದೆ ತರಹ ಅಂತಾರಲ್ಲಾ…? ಹಾಗಾದರೆ ಮಕ್ಕಳಿಗೆ ಏನು ಬೇಕು ಅಂತ ಅವರ ತಾಯಿ – ತಂದೆಯರಿಗೆ ಗೊತ್ತಾಗುವುದಿಲ್ವಾ? ನಾನು ಓದದೇ ಪರೀಕ್ಷೆಯಲ್ಲಿ ಪಾಸ್ ಮಾಡು ಅಂದ್ರೆ ಮಾಡ್ತಾನಾ ಆ ದೇವರು? ನಾನು ಪ್ರಯತ್ನ ಮಾಡಿದ್ರೆ ನನಗೆ ಏನು ಕೊಡಬೇಕೋ ಅದನ್ನು ಕೊಟ್ಟೇ ಕೊಡ್ತಾನೆ. ಬೇಡೋದು ಗೀಡೋದ್ ಎಲ್ಲಾ ಸುಮ್ಮನೇ ಭಟ್ರೇ… ನನ್ನ ದೋಸ್ತಿಗಳು ಬಂದ್ರು… ಶಾಲೆಗೆ ಹೊತ್ತಾಯ್ತು ಬರ್ತೀನಿ” “ನೀನು ಆ ಅಪ್ಪನ ಮಗನೇ ಬಿಡು…ಸರಿ ಸರಿ ನಡಿ…”***** “ಅಪ್ಪಾ, ಬ್ರಾಹ್ಮಣನೋರ್ವ ತನ್ನ ಜೀವಮಾನದಲ್ಲಿ ತಾನು ಬ್ರಾಹ್ಮಣ ಎಂದು ಎಷ್ಟು ಬಾರಿ ಹೇಳಿಕೊಳ್ಳುತ್ತಿರುತ್ತಾನೋ, ಅದಕ್ಕೆ ಸಾವಿರಪಟ್ಟು ಜಾಸ್ತಿ ಬಾರಿ, ಬ್ರಾಹ್ಮಣೇತರನೋರ್ವ, ತಾನು “ಓರ್ವ ಬ್ರಾಹ್ಮಣೇತರ” ಎಂದು ಹೇಳಿಕೊಳ್ಳುತ್ತಾನೆ, ಅಲ್ಲವೇ?”“ಹೂಂ ಅದೂ ನಿಜಾನೇ… ಯಾವುದನ್ನು ಹೇಳಿಕೊಂಡರೆ ಯಾರಿಗೆ ಲಾಭವೋ ಅದನ್ನು ಹೆಚ್ಚು ಹೆಚ್ಚು ಬಾರಿ ಹೇಳಿಕೊಳ್ಳುತ್ತಾರೆ ಕಣೋ ಮಗಾ”.
*****
“ನಿನಗ್ಯಾಕೆ ಮಾರಾಯಾ ಅಷ್ಟೊಂದು ಸಿಟ್ಟು? ನಾನು ನಿನ್ನನ್ನು ಹೊಗಳುತ್ತಿರುವುದು. ನಿನ್ನನ್ನು ಮೆಚ್ಚಿ ಮಾತಾಡುತ್ತಿರುವುದು. ಅರ್ಥ ಮಾಡ್ಕೊಳ್ಳು. ಸುಮ್ಮನೇ ಸಿಟ್ಟಾಗಬೇಡ”
“ಇಲ್ಲ ಅಪ್ಪಾ, ನನಗ್ಯಾಕೋ ಮುಖಸ್ತುತಿ ಹಿಡಿಸುವುದೇ ಇಲ್ಲ. ನನ್ನನ್ನು ನನ್ನ ಮುಂದೆ ಹೊಗಳುವುದರಿಂದ, ಹೊಗಳುವವರಿಗೆ ಲಾಭ ಇದೆಯೆಂದು ಯೋಚಿಸಿ ಹೊಗಳುತ್ತಾರೇನೋ ಅನ್ನುವ ಅನುಮಾನ ನನ್ನ ಮನದಲ್ಲಿ ಮೂಡುತ್ತದೆ. ಆ ಅನುಮಾನದಿಂದಾಗಿ, ಅದ್ಯಾಕೋ ಕೋಪ ಬರುತ್ತದೆ ನನಗೆ”
“ನೀನೊಬ್ಬ ವಿಚಿತ್ರ ಮನುಷ್ಯ. ಎಲ್ಲರಿಗೂ ಹೊಗಳಿಕೆ ಇಷ್ಟ. ಅಂತಾರೆ, ನಿನಗ್ಯಾಕೆ ಹೀಗೆ?”
“ಅಪ್ಪಾ ನಾನು ಮೂರ್ತಿಪೂಜೆ ಒಪ್ಪುವವನಲ್ಲ. ಕೂತು ಭಜನೆ ಮಾಡುವ ಜಾಯಮಾನದವನಲ್ಲ. ಹಾಗೆಯೇ ಯಾರಾದರೂ ನನ್ನನ್ನು ಕೂರಿಸಿಕೊಂಡು ಹೊಗಳುವ ಮಾತನ್ನಾಡಿದರೂ ಇಷ್ಟವಾಗುವುದಿಲ್ಲ. ದೊಡ್ಡ ದೊಡ್ಡ ಫಲಕಗಳಲ್ಲಿ ಪ್ರಕಟವಾಗುವ ರಾಜಕೀಯ ನೇತಾರರ ಭಾವಚಿತ್ರಗಳನ್ನು ಕಂಡಾಗಲೂ ನನಗೆ ಹೀಗೆಯೇ ಅನಿಸುತ್ತದೆ. ಹೊಗಳು ಭಟರು ಎಲ್ಲಾ ಕಡೆ, ಹೊಗಳಿಕೆಗೆ ಕಾಯುವವರು ಒಂದು ಕಡೆ. ನಾನು, ನಿಮ್ಮ ಮಗ, ಹಾಗಾಗ ಬಾರದಲ್ವಾ ಅಪ್ಪಾ? ಸತ್ಯ ಹೇಳಿ”
“ಕೇಳಿದ್ಯೇನೇ ನಿನ್ನ ಮಗ ಆಡುತ್ತಿರುವ ಮಾತು. ಈತ ಎಲ್ಲೋ ಹುಟ್ಟಬೇಕಾದವನು, ಅಪ್ಪಿ ತಪ್ಪಿ, ಈ ಹಳ್ಳಿಯಲ್ಲಿ, ಈ ನಮ್ಮ ಮನೆಯಲ್ಲಿ ಹುಟ್ಟಿದ್ದಾನೆ ಕಣೇ”
“ಮತ್ತೆ ಶುರು ಮಾಡಿದ್ರಾ…ಅಪ್ಪಾ?”
*****
“ಸ್ವಂತಕ್ಕೆ ಏನಾದರೂ ಆಸ್ತಿಪಾಸ್ತಿ ಮಾಡಿಕೊಂಡಿದ್ದೀಯೋ ಅಥವಾ ಸಂಪಾದಿಸಿದ್ದನ್ನೆಲ್ಲಾ ಅಪ್ಪ, ಅಮ್ಮ, ತಮ್ಮಂದಿರು ಅಂತ ಖರ್ಚು ಮಾಡ್ತಾ ಇದ್ದೀಯಾ?”
ಪಕ್ಕದ ಮನೆಯ ಅಜ್ಜಿ ಕೇಳ್ತಾರೆ, ದೂರದ ಊರಿನಲ್ಲಿ ಸರಕಾರಿ ನೌಕರಿಯಲ್ಲಿದ್ದು, ರಜೆಯಲ್ಲಿ ಊರಿಗೆ ಬಂದಿದ್ದ ಅವಿವಾಹಿತ ಯುವಕನನ್ನು.
”ಅಕ್ಕಾ… ನನಗೆ ಆಸ್ತಿ ಪಾಸ್ತಿ ಮಾಡಿಕೊಳ್ಳುವ ಆಸೆ ಇಲ್ಲ. ಆ ದೇವರಿಗೇ ಗೊತ್ತು, ನನಗೆ ಏನು ಯಾವಾಗ ಬೇಕು ಅಂತ”. ಆತನ ಉತ್ತರ.
ಅವರು ಆತನಿಗೆ ಸಂಬಂಧದಲ್ಲಿ ಅಜ್ಜಿಯಾದರೂ ಆತ ಅವರನ್ನು ಕರೆಯುತ್ತಿದ್ದುದು ಅಕ್ಕ ಅಂತಾನೇ.
”ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ… ನಿನ್ನ ಅಪ್ಪನೂ ಏನೂ ಆಸ್ತಿ ಮಾಡಿಲ್ಲ. ನೀನೂ ಅಷ್ಟೇ, ಅವನ ತರಹಾನೇ ಮಾತಾಡ್ತಿದ್ದೀ, ಅವನ ತರಹನೇ ಬದುಕ್ತಾ ಇದ್ದೀ”
“ಅದರಲ್ಲೇನು ಅನುಮಾನ, ನಾನು ನನ್ನ ಅಪ್ಪನವರ ತರಹ ಬೆಳೆಯದೇ, ನೆರೆಹೊರೆಯವರ ತರಹ ಇರಬೇಕಾಗಿತ್ತಾ, ಇರಲು ಆಗುತ್ತಾ? ನಮ್ಮ ಅಮ್ಮ ಪತಿವ್ರತೆ ಅಲ್ಲವೇ ಅಕ್ಕಾ… ?”
*****
”ಅಪ್ಪಾ, ನೀನು ನಿನ್ನ ಯೌವನದ ದಿನಗಳಿಂದ ಈ ಸಮಾಜದ ವಿರುದ್ಧ ಯುದ್ಧ ಸಾರುತ್ತಲೇ ಬಂದವನು. ಒಂದು ತರಹದಲ್ಲಿ ಸಮಾಜದ ವಿರೋಧಿ ಎಂದೇ ಗುರುತಿಸಿಕೊಂಡು ಬಂದವನು. ಆದರೆ ನೀನು ಸಾಧಿಸಿದ್ದೇನು? ಇಂದಿಗೂ ನೀನು ಆ ಸಮಾಜದಿಂದ ದೂರವೇ ಉಳಿದಿರುವೆ. ನಿನ್ನನ್ನು ಗುರುತಿಸುವ ಗುಂಪುಗಳು ನಿನ್ನವೇ ಆಗಿವೆ. ನಿನ್ನಂತೆಯೇ ಆ ಗುಂಪುಗಳಿಗೂ ಬೇರೇಯದೇ ಹೆಸರುಗಳನ್ನಿಟ್ಟು ಕರೆಯುತ್ತಿದ್ದಾರೆ. ನಿಜ ಹೇಳು ನನಗೆ ನೀನು ಬಳುವಳಿಯಾಗಿ ನೀಡುತ್ತಿರುವುದೇನು? ನಾನು ಹೇಗಿರಬೇಕೆಂದು ಬಯಸುವವನು ನೀನು?”
“ಮಗನೇ, ಯೌವನದ ಬಿಸಿರಕ್ತ ನಮ್ಮನ್ನು ಈ ಸಮಾಜದಿಂದ, ಸಾಮಾನ್ಯಕ್ಕಿಂತ ವಿಭಿನ್ನವಾದ ಒಂದು ಗುಂಪಿನೊಂದಿಗೆ ಗುರುತಿಸಿಕೊಳ್ಳಲು ಹುಮ್ಮಸ್ಸು ನೀಡುತ್ತದೆ. ಅಲ್ಲಿ ಸೇರಿಕೊಂಡು, ಅಲ್ಲಿಯವರ ಪ್ರಶಂಸೆಗೆ ಪಾತ್ರರಾಗಿ, ಅದಕ್ಕೇ ಒಗ್ಗಿಕೊಂಡುಬಿಡುತ್ತೇವೆ. ನಾವು ಆ ಅನುಭವವನ್ನು ಸುಖಿಸಲು ಆರಂಭಿಸುತ್ತೇವೆ. ವಯಸ್ಸಾದಂತೆ, ಸತ್ಯದ ಅರಿವಾಗಿ, ಅಲ್ಲಿರುವುದು ಅಸಹನೀಯವಾದರೂ, ನಮ್ಮಿಂದ ಹೊರಬರಲಾಗುವುದೇ ಇಲ್ಲ. ಏಕೆಂದರೆ ನಾವು ಒಂದು ಬ್ರಾಂಡ್ ಆಗಿಬಿಟ್ಟಿರುತ್ತೇವೆ. ನಾವು ಅದನ್ನು ಸದಾ ಜೀವಂತವಾಗಿ ಇರಿಸಬೇಕಾಗುತ್ತದೆ. ನಮ್ಮ ಗುರುತು ಸುಲಭವಾಗಿ ಸಿಗಲು ಸಹಕಾರಿಯಾಗಲು, ನಮ್ಮದೇ ಆದ ಭಾಷೆ ಬಳಸುತ್ತೇವೆ, ದಿನಕ್ಕೊಂದು ಬಾರಿಯಾದರೂ ಖಂಡತುಂಡವಾಗಿ ಮಾತನಾಡುತ್ತೇವೆ. ಸಂಪ್ರದಾಯವನ್ನು ಹಳಿಯುತ್ತೇವೆ”.
”ಅದೆಲ್ಲಾ ನಿನ್ನ ಕತೆಯಾಯ್ತು ಅಪ್ಪಾ, ನಾನೇನು ಮಾಡಬೇಕು ಹೇಳು”
“ನನ್ನ ಜೀವನದ ಸೋಲುಗೆಲುವುಗಳನ್ನು ಅರಿತುಕೊಳ್ಳು. ನನ್ನ ಜೀವನವನ್ನು ನೀನೊಮ್ಮೆ ವಿಮರ್ಶಿಸಿ ಮುಂದಡಿಯಿಡು. ಈ ಬಿರುದು ಬಾವಲಿಗಳು ನನ್ನ ಜೀವನದ ಆಶಯಗಳಾಗಿರಲಿಲ್ಲ. ನನ್ನ ಆಶಯಗಳೇ ಬೇರೆಯವಾಗಿದ್ದವು. ನನಗೆ ಈ ಜೀವನದಿಂದ ದಕ್ಕಿದ್ದೇ ಬೇರೆ. ನನ್ನನ್ನು ಎಲ್ಲರೂ ಅವರವರ ಉಪಯೋಗಕ್ಕಾಗಿ ಬಳಸಿಕೊಂಡರು. ನಾನು ಹೆಚ್ಚಿನೆಡೆಯಲ್ಲಿ ಅವರಿಗೆ ಶೋಭೆ ತರುವ ಉತ್ಸವದ ಮೂರ್ತಿಯಾಗಿದ್ದೆ. ಈ ಸನ್ಮಾನ, ಪ್ರಶಸ್ತಿ, ಬಿರುದುಗಳು ಈ ಆತ್ಮಕ್ಕೆ ತೃಪ್ತಿ ನೀಡಿದ್ದೇ ಇಲ್ಲ. ನನ್ನ ಆತ್ಮದ ಆಶಯಗಳು ಬೇರೆಯೇ ಆಗಿದ್ದವು. ಇಂದೂ ಆಗಿವೆ. ಆದರೆ ಅವುಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಮುಂದಡಿಯಿಡಲು ನಮ್ಮದೇ ಪರಿಧಿಯೊಳಗೆ ಬಂಧಿಯಾಗಿರುವ ನನಗೆ ಎಂದೂ ಸಾಧ್ಯವಾಗಲೇ ಇಲ್ಲ. ನನ್ನವರು ಬಿಡಲೇ ಇಲ್ಲ. ನಾನು ಹೀಗೆಯೇ ಇರಬೇಕು, ಹೀಗೆಯೇ ಗುರುತಿಸಿಕೊಳ್ಳಬೇಕು ಎಂದು ನನ್ನನ್ನು ಸದಾ ಬಂಧಿಸಿಟ್ಟರು.
ಮಗನೇ, ನಿನ್ನ ಬಾಳು ಹಾಗಾಗದಿರಲಿ. ನಿನ್ನದೇ ಸಿದ್ಧಾಂತಗಳಿರಲಿ. ನಿನ್ನದೇ ನಿಲುವುಗಳಿರಲಿ. ನಿನ್ನದೇ ಶೈಲಿಯಿರಲಿ. ಕೆಟ್ಟದ್ದನ್ನು ಕೆಟ್ಟದೆನ್ನುವ ಕೆಚ್ಚೆದೆಯಿರಲಿ. ಆದರೆ, ಕೆಟ್ಟದ್ದನ್ನೂ ಒಳ್ಳೆಯ ಮಾತುಗಳಿಂದ ಖಂಡಿಸುವ ಸಂಸ್ಕೃತಿ ಇರಲಿ. ನನ್ನ ಮಗನಾಗಿ ನೀನು ಪ್ರಸಿದ್ಧಿ ಹೊಂದದಿರು, ನಾನು ನಿನ್ನ ಅಪ್ಪನೆಂಬುದಕ್ಕೆ ಹೆಮ್ಮೆ ಪಡುವಂತೆ ಮಾಡು. ನೀನು ಸದಾ ನನ್ನ ಮಗನಾಗಿಯೇ ಉಳಿದರೆ, ಮತ್ತೆ ಅವೇ ಗುಂಪುಗಳು ನಿನ್ನನ್ನು ಸುತ್ತುವರೆಯುತ್ತವೆ. ನಾವೂ ನಮ್ಮ ತಾತಂದಿರು ಇದ್ದ ಸ್ಥಿತಿಯಲ್ಲಿಯೇ ಉಳಿದುಬಿಡಬಾರದು. ನಾವು ಬದಲಾಗುವುದು ಮುಖ್ಯ. ಸಮಾಜದಲ್ಲಿನ ಒಳಿತನ್ನು ಮೈಗೂಡಿಸಿಕೊಂಡು ಬೆಳೆಯೋಣ. ಕೆಟ್ಟದ್ದನ್ನು ಖಂಡಿಸೋಣ. ಆದರೆ, ಅವನ್ನು ನಮ್ಮ ಮೈಗಂಟಿಸಿಕೊಂಡು ಬಾಳದಿರೋಣ. ಅವುಗಳಿಂದ ನಮ್ಮ ಗುರುತು ಹಿಡಿಯದಂತೆ ಬಾಳೋಣ. ನಾನು ನಾನಾಗಿ ಬಾಳಲಾಗಿಲ್ಲ. ನೀನಾದರೂ ನೀನಾಗು. ನೀನಾಗಿ ಬಾಳು. ಅಷ್ಟೇ ಸಾಕು”
*****
“ನಮ್ಮ ಸಂಪರ್ಕದಲ್ಲಿರುವವರು ಯಾರಾದರೂ ಅಸ್ವಾಭಾವಿಕವಾಗಿ ಮರಣ ಹೊಂದಿದರೆಂಬ ಸುದ್ದಿ ಸಿಕ್ಕರೆ ನನಗೆ ನಿಜವಾಗಿಯೂ ತುಂಬಾ ಭಯವಾಗುತ್ತದೆ ಕಣ್ರೀ.ಪೋಲೀಸರು ಈಗ ಮೊದಲು ಹುಡುಕುವುದೇ ಮರಣ ಹೊಂದಿದವರ ಮೊಬೈಲ್ ಪೋನನ್ನು.ಆ ನಂಬರಿಗೆ ಕರೆ ಮಾಡಿದವರ ಅಥವಾ ಅದರಿಂದ ಹೋಗಿರುವ ಕರೆಗಳ ಪಟ್ಟಿಯಲ್ಲಿ ನಮ್ಮ ಹೆಸರೇನಾದರೂ ಇದ್ದರೆ, ಕಡಿಮೆ ಅಂದರೂ ಎರಡು ದಿನಗಳ ಮಟ್ಟಿಗಾದರೂ ನಾವು ಪೋಲೀಸರ ಅತಿಥಿಗಳಾಗುವುದು ಖಂಡಿತ.ಮನುಜನ ಭಯಗಳಲ್ಲಿ ಈಗ ಇದೂ ಒಂದು ಸೇರಿಕೊಂಡಿದೆ ಅಂತ ಅನಿಸುತ್ತಿದೆ.ಹಾಗಾಗಿ ಪ್ರತಿ ರಾತ್ರಿ ಮಲಗುವ ಮೊದಲು ಈಗೀಗ ದೇವರಲ್ಲಿ ಬೇಡಿಕೊಳ್ಳುವುದೊಂದೇ, ನನ್ನವರಾರಿಗೂ ಅಸ್ವಾಭಾವಿಕ ಮರಣ ನೀಡದಿರು ದೇವಾ, ಅವರ ಸಾವಿನಿಂದಾಗಿ ನಮ್ಮ ಬಾಳು ದುಸ್ತರವಾಗದಿರಲಿ”.
*****
“ದಿನಬೆಳಗಾದರೆ ಈ ಚರ್ಚೆ, ವಾದ, ವಿವಾದ, , ಸತ್ಯ – ಸುಳ್ಳು, ವಿಮರ್ಶೆ, ಅದು – ಇದು, ಇದೆ – ಇಲ್ಲ, ಅಂತ ತಲೆಕೆಡಿಸಿಕೊಂಡು ನಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು, ದಿನಗಳನ್ನು ವ್ಯರ್ಥ ವ್ಯಯಿಸುವುದರ ಬದಲು, ಅಂದಿದ್ದುದ್ದನ್ನು ನೆನೆಯುತ್ತಾ, ಇಂದಿದ್ದುದನ್ನು ಸವಿಯುತ್ತಾ, ಮುಂದೆ ಬರುವುದಕ್ಕಾಗಿ ಸ್ವಾಗತಕೋರಲು ತಯಾರಾಗುತ್ತಾ ಬಾಳೋದೇ ಸರಿ ಅನ್ಸುತ್ತೆ ಅಲ್ವೇನ್ರೀ…?”
*****
ದ್ವಂದ್ವ:
ನಡುವಯಸ್ಸಿಗೂ ಮೊದಲೇ ಜೀವನದ ಬಗ್ಗೆ ಜಿಗುಪ್ಸೆ ತುಂಬಿಕೊಂಡು, ಭೌತಿಕ ವಸ್ತುಗಳ ಬಗ್ಗೆ ಒಂದು ತೆರನಾದ ನಿರಾಸಕ್ತಿ ತುಂಬಿಕೊಂಡು, ಯಾವುದೇ ಮಹತ್ವಾಕಾಂಕ್ಷೆ ಇಲ್ಲದೆ ಬಾಳುತ್ತಿರುವವನಿಗೆ, ಜೀವನದ ಬಗ್ಗೆ ಅದ್ಯಾಕೋ ಅತೀವವಾದ ಪ್ರೀತಿ ಇದೆ ಕಣ್ರೀ!
ಈ ಹೃದಯದೊಳಗೂ ತಮ್ಮ ಅಮೂಲ್ಯ ಪ್ರೀತಿ ತುಂಬಿ, ಈ ಜೀವನವನ್ನು ಪ್ರೀತಿಸುವಂತೆ ಪ್ರೇರೇಪಿಸುವ, ಪ್ರೀತಿ ಪಾತ್ರರನ್ನು, ಪ್ರೀತಿಸುವವರನ್ನು, ಒಮ್ಮಿಂದೊಮ್ಮೆಗೇ ಬಿಟ್ಟುಹೋಗೋದು ಅದ್ಯಾಕೋ ತುಂಬಾ ಕಷ್ಟ ಅನಿಸುತ್ತದೆ ಅಲ್ವೇನ್ರೀ!*****
“ನಮ್ಮ ಅಪ್ಪಯ್ಯನವರ ಪರಿಚಯ ಈ ಬೆಂಗಳೂರಿನ ಜನಕ್ಕೆ ಆಗದಿದ್ದುದೇ ಒಳೇದಾಯ್ತು ಕಣ್ರೀ.
ಇಲ್ಲಾಂದ್ರೆ, ಅವರ ಮಗ ಅಂತಾನೇ ಗುರುತಿಸುತ್ತಾ ಇದ್ದರು ಜನರು ನನ್ನನ್ನೂ.
ಅಪ್ಪಯ್ಯನವರ ಮೇಲಿನ ಮೆಚ್ಚುಗೆಯಿಂದ ನನ್ನ ಮೇಲೂ ಮೆಚ್ಚುಗೆ ವ್ಯಕ್ತಪಡಿಸಿ ನನ್ನನ್ನು ಬೆಳೆಯುವುದಕ್ಕೇ ಬಿಡ್ತಾ ಇರಲಿಲ್ಲ.
ಈಗ ಒಂದು ಖುಷಿ ಅಂತೂ ಇದೆ ನನಗೆ.
ಅದೇನು ಅಂದ್ರೆ, ನಮ್ಮ ಅಪ್ಪಯ್ಯನ ಪರಿಚಯ ಇಲ್ದೇ ಇರೋ ನಾಲ್ಕು ಜನಕ್ಕೆ ನನ್ನ ಪರಿಚಯ ಆಗೋ ತರಹ ಬಾಳುತ್ತಾ ಇದ್ದೇನೆ.
ಅಲ್ಲದೇ, ನನ್ನ ಮೂಲಕ ನನ್ನ ಅಪ್ಪಯ್ಯನವರ (ಮಾತಾಪಿತರ) ಪರೋಕ್ಷ ಪರಿಚಯ ಜನರಿಗೆ ಆಗ್ತಾ ಇದೆ.
ನಿಜ ಹೇಳಬೇಕು ಅಂದರೆ, ಒಂದು ಹಂತದವರೆಗೆ ಮಾತಾಪಿತರ ಮೂಲಕ ಮಕ್ಕಳ ಪರಿಚಯ ಆಗಬೇಕು. ಆನಂತರ, ಮಕ್ಕಳ ಮೂಲಕ ಮಾತಾಪಿತರ ಪರಿಚಯ ಆಗಬೇಕು ಈ ಸಮಾಜಕ್ಕೆ ಅಲ್ವೇನ್ರೀ?”*****
ಬರೆಯಲು ವಿಧಾನ ಏನೂ ಇಲ್ಲ.
ಮನದ ಮಾತುಗಳನ್ನು, ಭಾವನೆಗಳಿಗೆ ಅಕ್ಷರ ರೂಪ ಕೊಡಿ.
ಆಮೇಲೆ ತಿದ್ದಬಹುದು.
chennagide, nanu nanna bhavanegalannan baribeku anta aase ide but bareyu vidhana gotagtila. any suggestion ?