ಕತ್ತಲೆ!

30 ಜನ 13

ಸಖೀ,
ನಿನ್ನ ಕಣ್ಣುಗಳಲ್ಲಿ
ಬಾರದಿರಲಿ ಕಣ್ಣೀರು
ನಾನಿರುವಾಗ ನಿನ್ನ
ಹೃದಯದ ಒಳಗೆ;

ಈ ಕತ್ತಲೆ ಕಳೆದು
ಹೋಗಲಿ ನಾವಿಬ್ಬರೂ
ಕಣ್ಣುಗಳನ್ನು ಮುಚ್ಚಿ
ತೆರೆಯುವುದರೊಳಗೆ!
***********


ತಪ್ಪಿಲ್ಲ!

29 ಜನ 13

ಸಖೀ,
ಅನುಭವಿಗಳ ಮಾತುಗಳನ್ನು
ಒಪ್ಪಿ ಪಾಲಿಸುವುದರಲ್ಲಿ ತಪ್ಪಿಲ್ಲ
ಎಲ್ಲರೂ ಬಿಸಿನೀರಿಗೆ ಕೈಹಾಕಿ
ತಮ್ಮ ಕೈ ಸುಟ್ಟುಕೊಳ್ಳಬೇಕಿಲ್ಲ!


ಛೇ … ಹೀಗಾಗಬಾರದಿತ್ತು!

29 ಜನ 13

ಸಖೀ,
ಆಕೆಗೆ ತಾಜಮಹಲ್ ಕಟ್ಟುವ ಯೋಜನೆ
ಹ್ನೆಾಕಿದ್ದರಾತ ಯಶಸ್ವಿಯಾಗಬಹುದಿತ್ತು

ಪ್ರಿಯತಮೆಗಾಗಿ ಹೊಸ ಪಕ್ಷ ಸ್ಥಾಪಿಸಲು 
ಹೋದವನಿಗೆ ಛೇ ಹೀಗಾಗಬಾರದಿತ್ತು!


ಪ್ರೀತಿಯಲಿ ಮಕ್ಕಳಂತೆ!

29 ಜನ 13

ಸಖೀ,
ನನ್ನ ಇರುವಿನೊಳಗೆ ನಿನ್ನಿರುವು
ನಿನ್ನ ಇರುವಿನೊಳಗೆ ನನ್ನಿರುವು
ಮಕ್ಕಳಾದೆವಿಂದು ಜಗವ ಮರೆತು
ಕಷ್ಟವಾದೀತಿದು ಹೋದರೆ ನಿಂತು!


ಇದ್ದುಬಿಡು!

29 ಜನ 13

ಸಖೀ,
ಇದ್ದುಬಿಡು ಸದಾ ನೀನಿಲ್ಲೇ
ಜಗ ನಿಂತುಬಿಡಲಿ ನಿಂತಲ್ಲೇ
ಮಾತಿಗೊಂದು ಮಾತನಾಡಿ
ತಳ್ಳುತಿರೋಣ ಸ್ನೇಹದ ಗಾಡಿ!


ಸುರಿಯದಿರು!

29 ಜನ 13

ಸಖೀ,
ಸುರಿಯದಿರು ಅಷ್ಟೊಂದು 
ಪ್ರೀತಿಯ ನನ್ನ ಮೇಲಿಂದು
ಏರಿದರೆನಗೀ ಪ್ರೀತಿಯ ನಶೆ
ಕಾಣದಾದೀತು ದಿಕ್ಕು ದಿಶೆ!


ಸ್ಪೂರ್ತಿ ಸಾಕು!

28 ಜನ 13

ಸಖೀ,
ಅವರಿವರ ಬರಹಗಳನ್ನು ಓದಿ ನಾನು ಬರೆದರೂ 
ಪರವಾಗಿಲ್ಲ ಕಣೇ ಪಡೆದು ಕೊಂಚ ಭಾವಸ್ಪೂರ್ತಿ;

ನನ್ನ ದೌರ್ಬಲ್ಯ ಎನಿಸುವುದದು ನಕಲಿಸಿದರೆ ನಾ
ಪದಗಳ ಜೊತೆಗೆ ಬರಹದ ಶೈಲಿಯನೂ ಪೂರ್ತಿ!


ಖಾಲಿ ಖಾಲಿ!

28 ಜನ 13

ಸಖೀ,
ಮಗಳು ಮನೆಯಲ್ಲಿದ್ದಷ್ಟು ದಿನ
ಮನೆಯ ಜೊತೆಗೆ ಮನಗಳೂ
ಸದಾಕಾಲ ತುಂಬಿರುವವಂತೆ;

ರಜೆ ಮುಗಿಸಿ ಮರಳಿದ ಮೇಲೆ 
ಮನೆಯ ಜೊತೆಗೆ ನಮ್ಮ ಈ
ಮನಗಳೂ ಖಾಲಿಯಾದಂತೆ!


ನೆನಪಾದರೆ ನೀನು ಅಳಬೇಡ!

28 ಜನ 13

ನಾ ತೊರೆದು ನಡೆವೆ ಈ ಕೂಟವನೇ
ನೆನಪಾದರೆ ನೀನು ಅಳಬೇಡ
ಸಂತೈಸು ನೀ ನಿನ್ನ ಮನಸನ್ನೇ
ಭಯವಾದರೆ ನೀನು ಅಳಬೇಡ

||ನಾ ತೊರೆದು ನಡೆವೆ ಈ ಕೂಟವನೇ
ನೆನಪಾದರೆ ನೀನು ಅಳಬೇಡ||

ಕನಸೊಂದನು ನಾನು ಕಂಡಿದ್ದೆ
ಕಣ್ತೆರೆದಾ ಕ್ಷಣವೇ ಮುರಿದೋಯ್ತು
ಕಣ್ತೆರೆದಾ ಕ್ಷಣವೇ ಮುರಿದೋಯ್ತು
ನಿನ್ನನ್ನೀ ಒಲವು ಕನಸಾಗಿ
ಕಾಡಿದರೆ ನೀನು ಅಳಬೇಡ

||ನಾ ತೊರೆದು ನಡೆವೆ ಈ ಕೂಟವನೇ
ನೆನಪಾದರೆ ನೀನು ಅಳಬೇಡ||

ನೀನನ್ನ ಯೋಚನೆಯಲ್ಲೇ ಕಳೆದೋಗಿ
ಹಾಳಾಗಿಸದಿರು ನಿನ್ನಾ ಬಾಳನ್ನು
ಸಖಿಯರು ನಿನ್ನಲ್ಲಿ ಅರಿವು
ಮೂಡಿಸಿದರೆ ನೀನು ಅಳಬೇಡ

||ನಾ ತೊರೆದು ನಡೆವೆ ಈ ಕೂಟವನೇ
ನೆನಪಾದರೆ ನೀನು ಅಳಬೇಡ||

ಬಾಳಿನ ಪಯಣದಲಿ ಒಂಟಿತನ
ನನ್ನನ್ನು ಉಳಿಸದು ಜೀವಂತ
ನನ್ನ ಸಾವಿನ ಸುದ್ದಿ ನನ್ನೊಲವೇ
ನಿನ್ನ ತಲುಪಿದರೆ ನೀ ಅಳಬೇಡ

||ನಾ ತೊರೆದು ನಡೆವೆ ಈ ಕೂಟವನೇ
ನೆನಪಾದರೆ ನೀನು ಅಳಬೇಡ||

ಇದು ಭಾವಾನುವಾದದ ಯತ್ನ:

ಮೂಲ:
ಗಾಯಕರು: ಮುಕೇಶ್ 
ಚಿತ್ರ: ಜೀ ಚಾಹತಾ ಹೈ
ಸಾಹಿತಿ: ಹಸ್ರತ್ ಜೈಪುರಿ
ಸಂಗೀತ: ಕಲ್ಯಾಣ್ ಜೀ ಆನಂದ್ ಜೀ

HUM CHHODH CHALE HAIN MEHFIL KO 
YAAD AAYEN KABHI TO MAT RONA
ISS DIL KO TASALLI DE DENA
GHABRAYE KABHI TO MAT RONA 
HUM CHHODH CHALE…

EK KHWAB SA DEKHA THA HUMNE
JAB AANKH KHULI TO TOOT GAYA
YEH PYAAR TUMHE SAPNA BANKAR
TADPAYE KABHI TO MAT RONA
HUM CHHODH CHALE…

TUM MERE KHAYALON MEIN KHOKAR
BARBAD NA KARNA JEEVAN KO
JAB KOI SAHELI BAAT TUMHE
SAMJHAYE KABHI TO MAT RONA
HUM CHHODH CHALE…

JEEVAN KE SAFAR MEIN TANHAI
MUJHKO TO NA ZINDA CHHODHEGI
MARNE KI KHABAR AYE JAANE JIGAR
MIL JAYE KABHI TO MAT RONA
HUM CHHODH CHALE…


ಕಳಚಿಕೊಳ್ಳವು!

26 ಜನ 13

ಸಖೀ,
ಹಳೆಯ ಬಂಧಗಳು 
ಸುದೃಢವಾಗಿದ್ದರೆ 
ಕಳಚಿಕೊಳ್ಳುವುದಿಲ್ಲ
ಹೊಸ ಸಂಬಂಧಗಳ 
ನಡುವೆ ಸುಲಭದಲ್ಲಿ;

ಕಳಚಿಕೊಳ್ಳುವಂಥ 
ಸಂಬಂಧಗಳವೆಷ್ಟೇ
ಇದ್ದರೂ ನಿಜವಾಗಿ 
ಅವು ಇರದಂತೆಯೇ 
ನಮ್ಮ ಬಾಳಿನಲ್ಲಿ!
***********