ಹೇಳು ಹೀಗೇನಾ?

30 ಜುಲೈ 15

ಸಖೀ,
ಅನಿಸಿದೆ ನೀನು ನೆನಪಿಸಿದಂತೆ
ನನ್ನ ಹೆಸರ ಕರೆಯುತಿರುವಂತೆ,

ದೂರದಿಂದಲೇ ಮಾತಿಗೆಳೆದಂತೆ
ಮೌನದಿ ಸಂವಾದ ನಡೆಸಿದಂತೆ

ಕಣ್ಣಿದಿರಿಲ್ಲದಿದ್ದರೂ ಇದ್ದಿರುವಂತೆ
ಅಲ್ಲಿದ್ದರೂ ಮನದೊಳಿರುವಂತೆ

ಈ ಅನಿಸಿಕೆ ಈಗ ನನಗಷ್ಟೇನಾ
ನಿಜ ಹೇಳು ನಿನಗೂ ಹೀಗೇನಾ?


ಹೋರಾಟ ಬುವಿಯಲ್ಲಿ!

29 ಜುಲೈ 15

ಸಖೀ,
ಅಪರಾಧ ಶಿಕ್ಷೆ ಇವೆರಡೂ ಬರಿದೇ
ವಿಧಿಯಾಟ ಅಲ್ಲದೇ ಬೇರೇನಿಲ್ಲ,
ಎಲ್ಲಾ ಅಪರಾಧಿಗಳಿಗೂ ಶಿಕ್ಷೆಯು
ದಕ್ಕಿಯೇ ದಕ್ಕುವುದು ಎಂದೇನಿಲ್ಲ;

ಆತನ ಲೆಕ್ಕಾಚಾರದೊಳಗೆ ಸಿಲುಕಿ
ಚಡಪಡಿಸುವರು ಮನುಜರೆಲ್ಲರಿಲ್ಲಿ,
ಲೆಕ್ಕಾಚಾರದಿಂದ ಹೊರಗುಳಿದರೂ
ಅನುಭವಿಸಲು ಉಳಿದಿರಬಹುದಲ್ಲಿ;

ಸಾವು ಮನುಜನ ಪ್ರಸಕ್ತ ಜೀವನದ
ಒಂದು ಅಂತ್ಯ ಅಷ್ಟೇ ವಾಸ್ತವದಲ್ಲಿ,
ಮತ್ತೊಂದು ಜನ್ಮಕ್ಕೆ ನಾಂದಿಯೂ
ಅಡಗಿಹುದು ಇಲ್ಲಿನ ಈ ಸಾವಿನಲ್ಲಿ;

ಅವನದೆನ್ನ ತಪ್ಪು, ನನ್ನ ತಪ್ಪು ಇನ್ನು
ಯಾರದೋ ಕಣ್ಕುಕ್ಕುವುದು ಸುಳ್ಳಲ್ಲ,
ತಪ್ಪು ಒಪ್ಪುರಹಿತ ಜೀವನ ನಮ್ಮದು
ಆದರಿದು ಜೀವನವೆಂದನಿಸುವುದಿಲ್ಲ;

ಇಂದಿರುವ ನಾನು ನಾಳೆ ಇದ್ದೇನೆಂಬ
ನಂಬಿಕೆ ಇಲ್ಲವೇ ಇಲ್ಲ ಈ ಗಳಿಗೆಯಲ್ಲಿ,
ಆದರೆ ಸಾವಿಲ್ಲದವರ ಬಾಳಿನಂತೆಯೇ
ಹೋರಾಟ ನನ್ನದೂ ಈ ಬುವಿಯಲ್ಲಿ!


ನನಗೇನಕ್ಕು?

23 ಜುಲೈ 15

ಸಖೀ,
ನೀನು ನಕ್ಕು ನುಡಿದರೂ ಅಕ್ಕು
ನೀನು ಬೈದು ನುಡಿದರೂ ಅಕ್ಕು
ನಾನಂದಾಗಿದೆ “ನೀನೇ ನನಗಕ್ಕು”
ಇನ್ನು ನೀನೇನಂದರೂ ನನಗೇನಕ್ಕು?


ಕೊಲ್ಲಬಾರದೇ?

22 ಜುಲೈ 15

ಸಖೀ,
ಮಾತಿನಿಂದ ಬೇಸರಗೊಂಡವಳು
ಮೌನದಿಂದ ತಿವಿಯುತ್ತಿರುವುದು ಏಕೆ?
ಎರಡು ಮಾತುಗಳನ್ನಾದರೂ ಆಡಿ
ಅವುಗಳಿಂದಲೇ ನನ್ನ ಕೊಲ್ಲಬಾರದೇಕೆ?


ಚಿಂತೆಯಂತೆ!

22 ಜುಲೈ 15

ಸಖೀ,
ಕೆಲವು ಕ್ಷಣಗಳೇ ಹಾಗೆ ಕಣೇ
ನಮ್ಮವರನ್ನು ಮಾತಿಗೆಳೆದು
ಕುಳಿತರೂ ಮಾತೇ ಬರದಂತೆ;

ಮಾತಾಡದೆ ಉಳಿದರೆ ಅವರು
ಅದೆಲ್ಲಿ ಹೊರಟುಬಿಡುವರೋ
ಅನ್ನುವುದೇ ಚಿಂತೆ ಮನಕಂತೆ!


ನೋಡಬೇಕಾಗಿದೆ!

21 ಜುಲೈ 15

ಸಖೀ,
ನನ್ನಿದಿರು ನಡೆದುಕೊಂಡು ಮುಂದೆ ಮುಂದೆ
ಸಾಗುತ್ತಿದ್ದಾಕೆಯ,
ನಿನ್ನುಡುಗೆಯನೇ ಹೋಲುವ ಉಡುಗೆಯನು
ಧರಿಸಿದ್ದಾಕೆಯ,
ಕಂಡು ನೀನೇ ಎಂದಂದುಕೊಂಡು ನಾ ಮೋಸ
ಹೋದೆನಲ್ಲೇ;

ನಾ ಭರದಿಂದ ಮುಂದೆ ಸಾಗಿ ನಿಂತು ಹಿಂದಿರುಗಿ
ನೋಡಿದರೆ ನೀನಲ್ಲ,
ಸದಾ ಮುಖವನ್ನೇ ನೋಡುತ್ತಿರುವ ನಾನಿನ್ನ
ಹಿಂದೆಂದೂ ನೋಡಿಲ್ಲ,
ಇನ್ನಾದರೂ ಕೊಂಚ ಹಿಂದೆ, ಅಕ್ಕ ಪಕ್ಕವೂ
ನೋಡಬೇಕಿದೆಯಲ್ಲೇ!


ಜವಾಬ್ದಾರ!

21 ಜುಲೈ 15

ಸಖೀ,
ಮನನೊಂದು ಕುಳಿತಾಗ
ನನಗೆ ನೆನಪಾಗುವುದು ಬರೀ ನೀನೇ
ಈ ಮನ ಮುದಗೊಂಡು
ನಲಿಯುವಾಗ ನೆನಪಾಗುವುದೂ ನೀನೇ
ನೀನು ನೆನಪಿಸುತ್ತೀಯೋ
ನನ್ನನ್ನು ಇಲ್ಲವೋ ನಾನರಿತೇ ಇಲ್ಲ ಕಣೇ
ನನ್ನ ಕ್ರಿಯೆಗಳಿಗೆ ನಾನಷ್ಟೇ
ಜವಾಬ್ದಾರ ನೀನು ಅಲ್ಲವೇ ಅಲ್ಲ ಕಣೇ!


ದೇವರೊಂದಿಗೆ ಸೆಲ್ಫೀ!

18 ಜುಲೈ 15

ಮುಂಜಾನೆ ಧ್ಯಾನಕ್ಕೆ ಕುಳಿತಿದ್ದೆ.

ಮನಸ್ಸು ಪರಮಾತ್ಮನಲ್ಲೇ ಕೇಂದ್ರೀಕೃತವಾಗಿತ್ತು.

ಸ್ವಲ್ಪ ಸಮಯದಲ್ಲಿ, ಕಣ್ಮುಂದೆ ಪರಮಾತ್ಮ ಬಂದು ನಿಂತ ಅನುಭವವಾಯ್ತು.

ಮೊದಲಬಾರಿಗೆ ದೇವರ ದರ್ಶನಭಾಗ್ಯದ ಆ ಅನುಭವವನ್ನು ತಮ್ಮೊಂದಿಗೆಲ್ಲಾ ಹಂಚಿಕೊಳ್ಳುವ ಬಯಕೆ ಆಯ್ತು.

ಬೇಡ ಸುಮ್ನಿರು ಅಂತ ನನಗೆ ನಾನೇ ಅಂದೆ.

ಮತ್ತದೇ ಬಯಕೆ.

ಮತ್ತದೇ ನಿಯಂತ್ರಣ.

ಬಯಕೆ ಉತ್ಕಟಗೊಳ್ಳುತ್ತಾ ಹೋಯ್ತು.

ಕಣ್ಣುಬಿಟ್ಟರೆ ಪರಮಾತ್ಮ ಅದೃಶ್ಯರಾಗಬಹುದು ಅನ್ನುವ ಭಯದಿಂದ,
ಕಣ್ಮುಚ್ಚಿಕೊಂಡೇ ಮೊಬೈಲ್ ಎತ್ತಿಕೊಂಡು ಪರಮಾತ್ಮನ ಬಳಿನಿಂತು ಒಂದು ಸೆಲ್ಫೀಫೋಟೋ ಕ್ಲಿಕ್ಕಿಸಿದೆ.

“ತುಂಬಾ ತುಂಬಾ ಧನ್ಯವಾದಗಳು ದೇವರೇ” ಎಂದು ಹೇಳಿ “ಹೋ… ” ಎಂದು ಜೋರಾಗಿ ಕಿರುಚಾಡಿದೆ.

ನನ್ನ ಮೈದಡವಿದ ನನ್ನ ಹೆಂಡತಿ,

“ಏನ್ರೀ ವಾಕಿಂಗ್ ಹೋಗಲಿಕ್ಕಿಲ್ವಾ ಇವತ್ತು? ಅಲಾರ್ಮ್ ಆಗಿ ಐದು ನಿಮಿಷಗಳಾಗಿವೆ”.

“ಉಫ್ … ಇದೇನು ಕನಸಾ …? ಸರಿ ಹೋಗ್ತೇನೆ ಕಣೇ…!

ಎಂದು ವಟಗುಟ್ಟುತ್ತಾ ಎದ್ದು ಹೊರಟೆ.


ದೂರವಿರುವೆ!

18 ಜುಲೈ 15

ಸಖೀ,
ನನ್ನ ಪ್ರೀತಿಯೇ ನಿನ್ನ ಮನದ
ಶಾಂತಿಗೆಡಿಸುವುದಾದರೆ,
ನನ್ನ ಅಕ್ಕರೆಯೇ ನಿನ್ನಾರೋಗ್ಯಕ್ಕೆ
ವಿಷವಾಗುವುದಾದರೆ,
ನಾನಿರುತ್ತೇನೆ ನನ್ನೊಳಗೆಲ್ಲವನೂ
ಅದುಮಿಟ್ಟುಕೊಂಡು
ನೀನೂ ಇದ್ದುಬಿಡು ನನ್ನನ್ನೇ ಮರೆತು
ನಗುತುಂಬಿಕೊಂಡು!


ಇದ್ದೇನೆ!

18 ಜುಲೈ 15

ಸಖೀ,
ಮರೆತಿಲ್ಲ ನಾನು
ಮೈಮರೆತಿಲ್ಲ ನಾನು
ಇದ್ದೇನೆ ನಿನ್ನಿದಿರಲ್ಲೇ ಇದ್ದೇನೆ
ನನಸಲ್ಲೂ ಕನಸಿನಲೋಕದಲ್ಲಿದ್ದೇನೆ
ನನಸಿನಲೋಕದ ಎಲ್ಲಾ ಬಂಧನಗಳನ್ನು
ಮುರಿದದರ ಸೀಮೆಯಾಚೆಗೆ ನಿನ್ನೊಂದಿಗಿದ್ದೇನೆ!