ಮಧುಚಂದ್ರ ಮುಗಿದ ಮೇಲೆ…!

30 ಆಗಸ್ಟ್ 10

ಕೆಲವು
ಬಾಂಧವ್ಯಗಳೇ
ಹೀಗೆ,

ಮಧುಚಂದ್ರ
ಮುಗಿದ ಮೇಲೆ
ಬಾಳು ಒಮ್ಮೆಗೇ
ನೀರಸವೆನಿಸುವ
ಹಾಗೆ;

ಮೊದಲ
ಭೇಟಿಯ
ಆ ಮೊದಲ
ಮಾತಿನಿಂದಲೇ
ಮೋಡಿಗೊಳಗಾಗುವರು,

ತನ್ನ ಯಾವುದೋ
ಸದಭಿಪ್ರಾಯದ
ಮಾತುಗಳಿಗೆ
ಸಹಮತ
ವ್ಯಕ್ತಪಡಿಸಿದ್ದಕ್ಕೇ
ಮೆಚ್ಚಿ ಕೊಂಡಾಡುವರು;

ಬರಸೆಳೆದು
ಆಲಿಂಗನ ನೀಡಿ
ಬೆನ್ನು ತಟ್ಟಿ
ನೀವೆನಗೆ
ಹತ್ತಿರದವರೆಂದು
ಮುಖಸ್ತುತಿ ಮಾಡುವರು,

ದಾರಿಯಲಿ
ಹೋಗುವವನ
ಮನೆಗೆ ಕರೆದು
ಯಾವುದೋ ಜನ್ಮದ
ಬಂಧುವೆಂದು
ಸತ್ಕರಿಸಿ
ಸಂತಸಪಡುವರು;

ನಾಲ್ಕಾರು ದಿನ
ವಾರಗಳಾದಾಗ,
ವಸ್ತುನಿಷ್ಟ ಅಭಿಪ್ರಾಯಗಳು
ಬರಲು ಆರಂಭಿಸಿದಾಗ,
ಆ ಮೊದಲ ಮಾತನೇ
ಮರೆಸುವ ಮಾತುಗಳು
ನೂರಾರು ಬಂದಾಗ,
ಬಂಧು ಎಂದವನನೇ
ಅಳೆಯುವುದಕೆ
ಆರಂಭಿಸುವರು,

ತಿಂಗಳು
ಕಳೆಯುವಷ್ಟರಲ್ಲಿ
ಅಸಡ್ದೆ
ತೋರಿಸತೊಡಗಿ
ಸಂಪೂರ್ಣವಾಗಿ
ನಿರ್ಲಕ್ಷಿಸಲು
ಪ್ರಾರಂಭಿಸುವರು;

ತಮ್ಮದೇ
ತಪ್ಪುಗ್ರಹಿಕೆಗೆ
ತಾವೇ
ಬಲಿಯಾಗುವರು,

ಅನ್ಯರ
ಪಾಲಿಗೆ ಬರಿ ಒಂದು
ದುಃಸ್ವಪ್ನವಾಗಿ
ಕಾಡಿ ಹೋಗುವರು;

ಇವರು ತಮ್ಮೆಲ್ಲಾ
ಮಾತುಗಳಿಗೆ
ಹೂಂಗುಟ್ಟುವವರ
ಅರಸುತಿರುವವರು,

ತಮ್ಮ ಸಂಗಡ
ಗುರುತಿಸಿಕೊಳ್ಳಲು
ಮಂದಿ ಬೇಕೆಂದು
ಹಾತೊರೆಯುವವರು;

ಇಂಥವರು
ನಮ್ಮ ಬಾಳಲ್ಲಿ
ಇದ್ದರೆಷ್ಟು?
ಇಲ್ಲದಿದ್ದರೆಷ್ಟು?

ಬಲು ನಿಧಾನದಿ
ಮನದ ಬಾಗಿಲ
ತೆರೆದು ಹೃದಯವನೇ
ಸೇರಿಕೊಂಬವರು
ಈಗ ಇದ್ದಾರೆಷ್ಟು?

ಕೆಲವು
ಬಾಂಧವ್ಯಗಳೇ
ಹೀಗೆ,

ಮಧುಚಂದ್ರ
ಮುಗಿದ ಮೇಲೆ
ಬಾಳು ಒಮ್ಮೆಗೇ
ನೀರಸವೆನಿಸುವ
ಹಾಗೆ!
****


ಸಖೀ, ಹೊಗಳದಿರು ನೀನೀ ಪರಿ!

30 ಆಗಸ್ಟ್ 10

ಸಖೀ,
ನನ್ನನ್ನು ಎಂದಿಗೂ
ಹೊಗಳದಿರು
ನೀನೀ ಪರಿ
ಅನ್ಯರ ಮುಂದೆ,

ಮತ್ಸರದ ಬೀಜ
ಮೊಳಕೆಯೊಡೆಯೆ
ಹುಟ್ಟಿಕೊಳ್ಳುವರು
ನನ್ನ ವೈರಿಗಳು
ನಿನ್ನ ಕಣ್ಮುಂದೆ;

ನನ್ನ
ನೀನರಿತಿರುವೆ
ನನಗದಷ್ಟೇ
ಸಾಕು,

ನಿನ್ನ
ಹೊಗಳಿಕೆಯ
ಮಾತುಗಳು
ನನಗೇಕೆ ಬೇಕು?

ನೀನು
ನನ್ನವಳಾದಂತೆ
ಎಲ್ಲರವಳಾಗಬೇಕೆಂಬ
ಆಸೆ ಜನರ ಮನದಲ್ಲಿ,

ನೀನು ನನ್ನನ್ನು
ಹೊಗಳುವಂತೆ
ಅವರನ್ನೂ ಹೊಗಳಲಿ
ಎಂಬಾಸೆ ತುಂಬಿದೆಯವರಲ್ಲಿ;

ನೀನು
ನನ್ನನ್ನು
ಸಾರ್ವಜನಿಕವಾಗಿ
ಹೊಗಳಿ
ಪ್ರಖ್ಯಾತನನ್ನಾಗಿಸದಿದ್ದರೂ
ಪರವಾಗಿಲ್ಲ ಬಿಡು,

ನೂರಾರು
ವೈರಿಗಳು ಈ ರೀತಿ
ಹುಟ್ಟುಕೊಳ್ಳುವುದಕ್ಕಿಂತ
ನೀನೊಬ್ಬಳೇ
ನನಗೆ ಸಾಕು ನೋಡು!
***********


ಕೊಡುವಾತ ಸೋಲುವುದಿಲ್ಲ…!

27 ಆಗಸ್ಟ್ 10

ಬಾವಿಗೇ
ಬಾಯಾರಿಕೆಯಾದಾಗ
ಎಂಬ ಆಸುಮನದ
ಕಲ್ಪನೆಯ ಮಾತುಗಳ
ಓದಿ ಮೆಚ್ಚಿದ, ಓದುಗ
ಮಹಾಶಯಯರು,

“ಮೋಡಗಳಿಗೇ
ಬಾಯಾರಿಕೆಯಾದರೆ?”
ಎಂಬ ಪ್ರಶ್ನೆಯನ್ನು ಈ
ಆಸುಮನದಲ್ಲಿ ಬಿತ್ತಿ
ಹೋಗಿರುವರು;

ಬಾವಿ
ಕಾವೇರಿದಾಗ
ಬತ್ತಿ ಬಾಯಾರಿದಾಗ
ನೀರ ಬೇಡಿಕೆ ಸಲ್ಲಿಸಿ
ಕಾಯುವುದು ದಿನವೆಲ್ಲಾ,

ಮೋಡಗಳರಾಶಿಗೆ
ಕಾವೇರಿದಾಗ,
ರಾಶಿ ರಾಶಿಯಾಗಿ
ಸಾಲು ಸಾಲಾಗಿ
ಇನ್ನೂ ಹಗುರಾಗಿ
ಮೇಲೇರುತ್ತವೆ,
ಅವುಗಳಿಗೆಂದೂ
ನೀರಡಿಕೆಯೇ ಇಲ್ಲ;

ಮನುಜನೀ
ಮರ್ತ್ಯಲೋಕದಲಿ
ತನ್ನ ಬೇಡಿಕೆಗಳ
ಪಟ್ಟಿಯನ್ನು
ಬೆಳೆಸುತ್ತಲೇ
ಇರುವನು,
ಹಗಲಿರುಳೂ
ಬೇಡೀಕೆಗಳ
ಸಲ್ಲಿಸುತ್ತಲೇ
ಇರುವನು,

ಮೇಲಿರುವ
ಕೊಡುವಾತ,
ಎಂದಿಗೂ
ಕೈಸೋಲದೇ
ನೀಡುತ್ತಲೇ
ಇರುವನು,
ಆತ ಸೋಲುವುದಿಲ್ಲ
ಸೋತು ನಿಲ್ಲುವುದಿಲ್ಲ
ಆತನೆಂದಿಗೂ ಅನ್ಯರಿಂದ
ಬೇಡದೇ ತೃಪ್ತನಾಗೇ
ಇರುವನು;

ಬೇಡುವವರು
ಸದಾ ಅತೃಪ್ತರಾಗಿ
ಬೇಡುತ್ತಲೇ
ಇರುವರು,

ನೀಡುವವರು
ತೃಪ್ತಮನದಿ
ಸದಾ ನೀಡುತ್ತಲೇ
ಇರುವರು!
*****


ನಸುಕಿನಲ್ಲಿ ಹೊರಟಾಗ…!

27 ಆಗಸ್ಟ್ 10

 

ದಿನವೂ ನಸುಕಿನಲ್ಲಿ,
ಮುಂಜಾವಿನ ನಡಿಗೆಗಾಗಿ
ಮನೆಯಿಂದ ಹೊರಟಾಗ,

ಒಂದು ಕಡೆ,
ಕಸದ ರಾಶಿಯಿಂದ
ಪ್ಲಾಸ್ಟಿಕ್ ಆಯುತಿರುವ,
ನಸುಕಿನ ನಿದ್ದೆಯನು
ಮರೆತು ಬಂದಿರುವ
ಹುಡುಗರ ಬಾಳು;

ಇನ್ನೊಂದು ಕಡೆ,
ತಮ್ಮ ಆಸ್ತಿಗೆ ಕನ್ನ
ಹಾಕುತ್ತಿದ್ದೀರೆಂದು,
ಬೊಗಳಿ, ಓಡಿಸಲು
ಯತ್ನಿಸುತ್ತಿರುವ ಬೀದಿ
ನಾಯಿಗಳ ಗೋಳು;

ದೂರದಿಂದ ನನ್ನ
ಕಣ್ಣುಗಳಿಗೆ, ಅವು
ಸಾಲು ಸಾಲಾಗಿ,
ತಲೆಕೆಳಗಾಗಿಸಿದ,
ತುಂಬಿದ
ಗೋಣಿ ಚೀಲಗಳು

ಹತ್ತಿರವಾದಾಗ
ಅಂಗಳವೇ ಇಲ್ಲದ ತಮ್ಮ
ಮನೆಗಳ ಮುಂದೆ
ರಸ್ತೆಗೇ ನೀರು ಸಿಂಪಡಿಸಿ
ರಂಗೋಲಿ ಬಿಡಿಸಲು
ಸಜ್ಜಾಗುತ್ತಿರುವ,
“ನೈಟೀ”ಧಾರೀ
ನಾರೀಮಣಿಗಳು!
********


ಸುಖಾಂತ್ಯ ಕಂಡ ರಕ್ಷಾಬಂಧನದ ಎಡವಟ್ಟು!

25 ಆಗಸ್ಟ್ 10

 

ನಿನ್ನೆ
ರಕ್ಷಾಬಂಧನದ
ದಿನದಂದು,
ನಾ ರವಾನಿಸಿದ್ದ
ಸಂದೇಶ ಕಂಡು,
ಉರಿದು ಕೆಂಪಾಗಿ,
ಕರೆಮಾಡಿ ಬೈಗುಳದ
ಸುರಿಮಳೆಗೈದು,
ನನ್ನ ಭೇಟಿಗಾಗಿ
ಕಾಯುತ್ತಿದ್ದಳಾಕೆ;

ಸಂಜೆ ನಾನು ನನ್ನೆಲ್ಲಾ
ಜಾಣ್ಮೆಯನ್ನು ಒರೆಗೆ ಹಚ್ಚಿ,
ಹೊಸ ಹೊಸ ಕಥೆಗಳನ್ನು
ಮನದಲ್ಲೇ ಹೆಣೆದುಕೊಂಡು,
ಅಂಜುತ್ತಲೇ ಆಕೆಯ
ಮುಂದೆ ಹೋಗಿ ನಿಂತಾಗ,
ಹುಸಿಗೋಪವನೂ ತೋರದೇ
ಬಿಸಿ ಬಿಸಿ ಕಾಫಿಯೊಂದಿಗೆ
ಸಿಹಿತಿಂಡಿಯನೂ ನೀಡಿದಾಗ,
ನನ್ನ ಕಣ್ಣುಗಳನ್ನೇ
ನಾನು ನಂಬದವನಾದೆ;

ನಾನು ಮಾತನಾಡಲು
ಬಾಯ್ಬಿಡುವ ಮೊದಲೇ,
“ತಪ್ಪಾಯ್ತು ಕಣ್ರೀ
ಏನೇನೋ ಬೈದ್ ಬಿಟ್ಟೆ,
ನೀವೇನು ಅಂತ ನನಗೆ
ಗೊತ್ತಿಲ್ಲಂತೀರಾ…
ನೀವು ಬೇಕಾದ್ರೆ ಇನ್ನೂ
ನೂರಾರು ಹೆಣ್ಣುಗಳನ್ನು
ಸಹೋದರಿಯರನ್ನಾಗಿ
ಸ್ವೀಕರಿಸಿಕೊಂಡು,
ಅವರೆಲ್ಲರಿಂದ ನೀವು
ರಾಖಿ ಕಟ್ಟಿಸಿಕೊಂಡರೂ
ಪರವಾಗಿಲ್ಲರೀ ನನಗೆ,
ಆದರೆ,
ದಯವಿಟ್ಟು ಇನ್ನಾರನ್ನೂ
“ಸಖೀ” ಎಂದು ಕರೆಯದಿರಿ,
ನನಗದಷ್ಟೇ ಸಾಕು…”

ಹೇಳಿ ನನಗಿನ್ನೇನು ಬೇಕು…?
***************


ಬಾವಿಗೇ ಬಾಯಾರಿಕೆಯಾದಾಗ!

25 ಆಗಸ್ಟ್ 10

 

ಊರಿನವರೆಲ್ಲಾ
ನೀರು ಪಡೆಯುತ್ತಿದ್ದ
ಊರ ಬಾವಿಗೆ
ಅಂದು ಎಲ್ಲಿಲ್ಲದ
ಬಾಯಾರಿಕೆ,
ಅದು ಬೇಸರದಿಂದ
ಮೇಲೆ ನೋಡುತ್ತಾ
ಬಾನಿಗೆ ಸಲ್ಲಿಸಿತು
ತಾನು ಕೋರಿಕೆ;

ಬಾನು ಭಾನುವನ್ನು
ಕರೆದು ವಹಿಸಿತು
ಇದರ ಜವಾಬ್ದಾರಿ,
ಉರಿಯುವ ಭಾನುವಿಗೆ
ಏನು ಮಾಡಲೂ
ತೋಚದಾಯಿತು ದಾರಿ;

ವಾಯುವನು
ಪುಸಲಾಯಿಸಿ
ಬಿನ್ನವಿಸಿಕೊಂಡ
ತೋರಲು ಪರಿಹಾರ,
ವಾಯು ಕೂಡಲೇ
ಎಲ್ಲಿಂದಲೋ ಭರದಿಂದ
ಅಟ್ಟಿಸಿಕೊಂಡು ಬಂದ
ಮೇಘಗಳ ಮಹಾಪೂರ;

ಭಾನು ತನ್ನ ಉರಿ ತಗ್ಗಿಸಿ
ಮೇಘಗಳಿಗೆ ತಂಪು ನೀಡಿ
ತನ್ನ ಕೆಲಸ ಆಯಿತೆಂದ,
ಮೇಘಗಳು ಧಾರಾಕಾರ
ಮಳೆಸುರಿಸಿ ಆ ಬಾವಿಗೆ
ನೀಡಿದವು ಮಹದಾನಂದ;

ಬಾವಿಯ ಬಾಯಾರಿಕೆ
ಪೂರ್ಣ ತಣಿದಿದೆ ಈಗ,
ಎಲ್ಲರೂ ನೀರು ಪಡೆಯುವರು
ತಮಗೆ ಬೇಕೆನಿಸಿದಾಗ!
***********


ನನಗಿಂದು ರಕ್ಷಣೆ ಬೇಕು!

24 ಆಗಸ್ಟ್ 10

 

“ರಕ್ಷಾಬಂಧನದ
ಈ ಶುಭ ದಿನದಂದು
ಹಾರ್ದಿಕ
ಶುಭ ಹಾರೈಕೆಗಳು,
ದೇವರು ಸದಾ
ಹೀಗೆಯೇ
ಹರಸುತ್ತಿರಲಿ”

ಇಂದು ಮುಂಜಾನೆ
ನನ್ನ ಪ್ರೀತಿಯ
ಸಹೋದರಿಯರಿಗೆಲ್ಲಾ
ನನ್ನ ಜಂಗಮ
ದೂರವಾಣಿಯ ಮೂಲಕ
ಈ ಶುಭ ಸಂದೇಶಗಳನ್ನು
ರವಾನಿಸಿ ಮುಗಿಸಿದ್ದೆನಷ್ಟೇ,
ಅತ್ತಕಡೆಯಿಂದ ಕರೆ ಬಂತು,

ನೋಡಿದ್ರೆ, ಆಕೆಯದು,
ಏನಿರಬಹುದು ವಿಶೇಷ
ಎಂಬ ಆಶ್ಚರ್ಯದಿಂದಲೇ
ಉತ್ತರಿಸಿದೆ,
ನಾನು “ನಮಸ್ಕಾರ”
ಅನ್ನುವ ಮೊದಲೇ
ಬೈಗುಳದ ಸುರಿಮಳೆ
“ಹೆಂಗಿದೆ ಮೈಗೆ
ತಲೆಗಿಲೆ ಕೆಟ್ಟಿದೆಯಾ?
ಇಷ್ಟು ದಿನ ಸಖೀ,
ಸಖೀ ಅಂತ ಕವನ
ಬರೀತಿದ್ದವರು
ಈದಿನ ರಾಖಿ, ರಾಖಿ
ಅಂತಿದೀರಲ್ರೀ
ಏನಾಗಿದೆ ನಿಮಗೆ?
ಯಾವಾಗ ಸಿಗ್ತೀರಾ
ಮಾತಾಡ್ಬೇಕು ನಿಮ್ಜೊತೆ…
……. …….. …..
……. …….. …..
……. …….. …..”

ಏನೋ ಎಡವಟ್ಟು ಆಗಿದೆ,
ಎಲ್ಲೋ ಕಥೆ ಕೆಟ್ಟಿದೆ,
ಎಂಬುದರ ಅರಿವಾಗಲು
ಹಿಡಿಯಲಿಲ್ಲ ಹೆಚ್ಚು
ಸಮಯ ನನಗೆ,
“ಹಲೋ… ಹಲೋ…
ಸ್ವಲ್ಪ ಇರು, ಆಮೇಲೆ
ನಾನೇ ಕರೇ ಮಾಡ್ತೀನಿ…”
ಅಂತ ಮಾತು ಮುಗಿಸಿದೆ.

ನನ್ನಿಂದ ರವಾನೆಯಾದ
ಸಂದೇಶಗಳ ಪಟ್ಟಿ
ನೋಡಿದಾಗ ಅರಿವಾಯ್ತು,
ನನ್ನೆಲ್ಲಾ ಸಹೋದರಿಯರ
ಜೊತೆಗೇ, ನನ್ನ
ಸಹೊದರಿಯ ಹೆಸರಿನ
ಸಾಮ್ಯತೆ ಇರುವ
ಆಕೆಗೂ ನನ್ನಿಂದ,
ಅನಾಮತ್ತಾಗಿ ಈ ದಿನ,
ರಕ್ಷಾಬಂಧನದ ಸಂದೇಶ
ರವಾನೆಯಾಗಿ ಬಿಟ್ಟಿತ್ತು!

ಸಂಜೆ ಭೇಟಿ ಆದಾಗ,
ಸಮಜಾಯಿಷಿ ನೀಡಬೇಕು,
ರಮಿಸಬೇಕು, ನನ್ನಲ್ಲಿರುವ
ಸಹನಶೀಲತೆಯನ್ನು
ಇಂದು ನಾ ಒರೆಗೆ ಹಚ್ಚಬೇಕು;

ಅದಕ್ಕಾಗಿ, ನನಗೆ
ನಿಮ್ಮೆಲ್ಲರ ಬೆಂಬಲ ಬೇಕು
ಶುಭ ಹಾರೈಕೆಗಳು ಬೇಕು
ರಕ್ಷಾಬಂಧನದ ಈ ದಿನದಂದು
ನನಗೆ ರಕ್ಷಣೆ ಬೇಕು
ನೀವೆಲ್ಲಾ ನನ್ನನ್ನು
ಹರಸುವಿರಲ್ಲಾ?
*********


ಅಮೇರಿಕಾದ ನೆರಳಿನಡಿ ಸ್ವಾತಂತ್ರ್ಯೋತ್ಸವ ಆಚರಿಸೋಣ!

20 ಆಗಸ್ಟ್ 10

 

ಎಲ್ಲಾ ವಿಷಯಗಳಲ್ಲೂ ಭಾರತ ದೇಶ
ಆಗಿರುವಾಗ ಅಮೇರಿಕಾ ದೇಶದ ಬಂಧಿ

ಅಮೇರಿಕಾದ ಹೆಣ್ಣೊಬ್ಬಳನ್ನು ಕರೆದು ಇಲ್ಲಿ
ಕೊಟ್ಟುಬಿಡುವ ಆಕೆಗೂ ಹೆಸರು ಗಾಂಧಿ

ವಿದೇಶೀ ಹೆಣ್ಣು ಮಕ್ಕಳು ನಮಗೆ ಇಷ್ಟ
ಬೆಳ್ಳಗಿದ್ದರಂತೂ ಎರಡು ಮಾತೇ ಇಲ್ಲ

ಸರಕಾರಕ್ಕೆ ಸಲಹೆ ನೀಡಲು ಆಕೆಯೂ
ಇರಲಿ, ಈಗ ಇಟಲಿಯ ಪ್ರಜೆಯಿದ್ದಾಳಲ್ಲಾ?

ಪದೇ ಪದೇ ಇಲ್ಲಿಂದ ಅಮೇರಿಕ್ಕಾಕ್ಕೆ
ಕರೆಮಾಡಿ ಸಲಹೆ ಕೇಳುವ ಅಗತ್ಯ ಇಲ್ಲ

ಇಲ್ಲೇ ಕೂತು, ಆಕೆಯೇ ನಡೆಸಲಿ ಬಿಡಿ
ಆಡಳಿತ, ನಮಗೇನೂ ಅಭ್ಯಂತರ ಇಲ್ಲ

ಪಾಕಿನ ಬಗ್ಗೆ ನೀತಿ ಏನಾಗಿರಬೇಕೆಂದು
ಅಮೇರಿಕಾನೇ ಹೇಳಬೇಕು ನಮಗೆ

ಭೋಪಾಲ ದುರಂತದ ದಾವೆಯ ಬಗ್ಗೆ
ಅಮೇರಿಕಾ ನೀಡುವುದು ಸಲಹೆ ನಮಗೆ

ಭಯೋತ್ಪಾದನೆ ತಡೆಗಟ್ಟಲು ನಾವು ಕ್ರಮ
ಕೈಗೊಳ್ಳುವುದು ಅಮೇರಿಕಾವನೇ ಕೇಳಿ

ಎಲ್ಲಾ ಅವರ ಇಚ್ಛೆಯಲೇ ನಡೆಯುತ್ತಿರಲು
ನಮ್ಮದೇನು ಉಳಿದಿದೆ ಇನ್ನು ಇಲ್ಲಿ ಹೇಳಿ

ಹಾಗಾಗಿ ಇನ್ನೊಂದು ಬಿಳೀ ತೊಗಲಿನ
ಗಾಂಧಿಯನು ಆಮದು ಮಾಡಿಕೊಳ್ಳೋಣ

ಅಮೇರಿಕಾದ ನೆರಳಿನಡಿ ನಾವು ನಮ್ಮ
ಸ್ವಾತಂತ್ರ್ಯೋತ್ಸವಾಚರಣೆ ಮಾಡೋಣ!!!
***********************


ಸುಷ್ಮಾ .. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಮ್ಮಾ…!

20 ಆಗಸ್ಟ್ 10

 

“ಅಮ್ಮಾ
ಬಾರಮ್ಮಾ,
ಸುಷ್ಮಾ
ಬಾರಮ್ಮಾ,
ಬಳ್ಳಾರಿ
ಜನತೆಗೆ
ನಗುಮುಖವ
ತೋರಮ್ಮಾ…”

ಹೀಗೆಂದು ಹಾಡಿ,
ಆ ಬಳ್ಳಾರಿಯ
ರೆಡ್ಡಿ ಸಹೋದರರು
ಮತ್ತು ಶ್ರೀರಾಮುಲು
ನಿಮ್ಮನ್ನು
ಸ್ವಾಗತಿಸಿದರೆ,
ನನಗೆಳ್ಳಷ್ಟೂ
ಚಿಂತೆ ಇಲ್ಲ ನಿಜದಿ;

ಅವರು
ಸಮರ್ಪಿಸುವ
ಲಕ್ಷ್ಮಿಯ ಜೊತೆಗೆ
ದಿಲ್ಲಿಗೆ ಮರಳುವ
ಮೊದಲು, ನಿಮ್ಮ
ಆ ನಾಲ್ಕು ಮಕ್ಕಳಿಗೆ
ಸ್ವಲ್ಪ ಬುದ್ಧಿ ಹೇಳಿ
ಎಂಬಾಶಯ ಈ ಮನದಿ;

ಕರ್ನಾಟಕದ
ಮಂತ್ರಿಗಳವರು,
ಬರೀ ಬಳ್ಳಾರಿಯ
ದಂಡನಾಯಕರಲ್ಲ,
ಅಭಿವೃದ್ಧಿ ಪಡಿಸಲಿ
ಈ ನಾಡನ್ನೂ, ಬರೀ
ಬಳ್ಳಾರಿಯಷ್ಟನ್ನೇ ಅಲ್ಲ;

ನಾಡಿನುದ್ದಗಲಕ್ಕೂ
ಅಮಾಯಕ ಜನರು,
ಡೆಂಗಿ ಮತ್ತು ಹಂದಿ
ಜ್ವರದಿಂದ ನರಳಿ,
ಸಾಯುತ್ತಿದ್ದಾರೆ
ಸಾಮೂಹಿಕವಾಗಿ,
ಆದರೆ ಅತ್ತ
ಆ ಆರೋಗ್ಯಮಂತ್ರಿ
ಪೌರೋಹಿತ್ಯ
ವಹಿಸಿಕೊಂಡು,
ವಿವಾಹ ನಡೆಸುತ್ತಿದ್ದಾರೆ
ಸಾಮೂಹಿಕವಾಗಿ;

ಆಗಲೇ ಎರಡು
ವರ್ಷಗಳಾದವು,
ಇನ್ನಾದರೂ ಬಳ್ಳಾರಿಯ
ಬಿಟ್ಟು ಹೊರಬರಲು ಹೇಳಿ,
ನಾಲ್ಕಾರಾದರೂ ಸರಕಾರೀ
ಆಸ್ಪತ್ರೆಗಳ ಹೆಸರುಗಳನ್ನು
ಕಂಠಪಾಠಮಾಡಿಕೊಂಬಂತೆ
ಆತನಿಗೆ ಬುದ್ಧಿಮಾತು ಹೇಳಿ;

ಬಳ್ಳಾರಿಯ ಹೊರಗೂ
ಕರ್ನಾಟಕವಿದೆ ಇನ್ನೂ,
ಬಳ್ಳಾರಿಯ ಹೊರಗೂ
ನಿಮ್ಮ ಮತದಾರರು
ಇದ್ದಾರೆ ಇನ್ನೂ,

ಹೀಗೇಯೇ ಮುಂದುವರೆದರೆ,
ಮುಂದೊಂದು ದಿನ ಸೋಲಿನ
ರುಚಿ ಕಾಣಬೇಕಾಗಬಹುದು,
ಭಾರತೀಯ ಜನತಾ ಪಕ್ಷ,
ಬಳ್ಳಾರಿ ಜನತಾ ಪಕ್ಷವಾಗಿ
ಬಹಳ ಹಿಂದುಳಿದುಬಿಡಬಹುದು,
ಸುಷ್ಮಾ ನಿಮ್ಮ ಪಾಲಿಗೆ ಇದು
ಸ್ವರಾಜವಾಗಿ ಉಳಿಯದೇ
ಪರರಾಜ್ಯವಾಗಿ ಬಿಡಬಹುದು!
***************


ಹಾದಿ ಎಂತಿದ್ದರೇನು?

19 ಆಗಸ್ಟ್ 10

ಸಖೀ,
ನಮ್ಮ
ಹಾದಿ
ಸುಗಮವಾಗಿ
ಕಂಡುಬಂದಲ್ಲಿ,
ಅದು
ನಮ್ಮನ್ನು
ಎಲ್ಲಿಗೆ
ಕೊಂಡೊಯ್ಯುತ್ತದೆ
ಎಂದು
ಕೇಳಿ
ನೋಡೋಣ;

ಆದರೆ,
ನಮ್ಮ
ಗುರಿಯೇ
ಸುಂದರವಾಗಿದೆ
ಎಂಬ
ಅರಿವಿದ್ದಲ್ಲಿ,
ನಮ್ಮನ್ನು

ಗುರಿಯೆಡೆಗೆ
ಕೊಂಡೊಯ್ಯುವ
ಹಾದಿ
ಎಂತಿದ್ದರೂ
ಚಿಂತಿಸದಿರೋಣ!
********