ಮರೆಯಲಾಗದು ನಿನ್ನ!

29 ಜೂನ್ 10

ಸಖೀ,

ನಿನಗಾಗಿ ನಾನು

ನನ್ನತನವನೇ

ತೊರೆಯಬಹುದು,

ಆರಾಮ-ಆಹಾರ

ಎರಡನ್ನೂ ಬಿಡಬಹುದು,

ನೀ ಕುಡಿಸಿದರೆ

ನಾ ವಿಷವನ್ನೇ

ಕುಡಿಯಬಹುದು,

ನೀ ಮರೆಯಾಗೆಂದರೆ

ಈ ಜಗವನೇ ತೊರೆದು

ಕಣ್ಮರೆಯಾಗಬಹುದು,

ಆದರೆ,

ಗೆಳೆಯಾ, ನೀ ತೊರೆದು ಬಿಡು,

ನನ್ನ ನೀ ಮರೆತು ಬಿಡು ಎಂದರೆ,

ನನ್ನಿಂದಾಗದು,

ನಿನ್ನ ನಾ ತೊರೆಯಲಾಗದು

ಎಂದಿಗೂ ಮರೆಯಲಾಗದು!

****************


ಉದಯವಾಣಿಯ “ನಿಸ್ತಂತು ಸಂಸಾರ”ದಲ್ಲಿ!

28 ಜೂನ್ 10

ತಮ್ಮ ವಾರದ ಅಂಕಣ “ನಿಸ್ತಂತು ಸಂಸಾರ”ದ ಮೂಲಕ ಇಂದು (ಸೋಮವಾರ, ೨೮ ಜೂನ್ ೨೦೧೦)     “ಆಸುಮನ”ವನ್ನು “ಉದಯವಾಣಿ” ಓದುಗರಿಗೆ, ಅಂಕಣಕಾರ,  ಅಶೋಕ್ ಕುಮಾರ‍್   ತಮ್ಮ ಮೆಚ್ಚುಗೆಯ ನುಡಿಗಳೊಂದಿಗೆ ಪರಿಚಯಿಸಿರುತ್ತಾರೆ.

ಸಹೃದಯಿ ಅಶೋಕ್ ಕುಮಾರ್ ರಿಗೆ  ನನ್ನ ಹೃಪೂರ್ವಕ ಅಭಿವಂದನೆಗಳು.


ಮಾನ್ಯ ಯಡ್ಯೂರಪ್ಪನವರಿಗೆ ದೊಡ್ಡ ನಮಸ್ಕಾರ!

28 ಜೂನ್ 10

ಮಾನ್ಯ ಯಡ್ಯೂರಪ್ಪನವರೇ,

ನಿಮಗೊಂದು ದೊಡ್ಡ ನಮಸ್ಕಾರ, ಅಲ್ಲದೇ ನಾನು ಹೃದಯನೊಂದು ತುಂಬಿ ಸಲ್ಲಿಸುತ್ತಿರುವ ಧನ್ಯವಾದಗಳು.

ನಮ್ಮ ಮನೆಯೊಳಗೇ ಸ್ವಾತಂತ್ರ್ಯಯೋಧರಾದ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಸದಸ್ಯರಾಗಿದ್ದ ನಮ್ಮ ತಾತನವರು ಇದ್ದಿದ್ದ್ದರೂ, ಒಂಭತ್ತು ಹತ್ತು ವರುಷದ ಹುಡುಗನಾಗಿದ್ದ ನನಗೆ ಜನಸಂಘದ ದೀಪದ ಗುರುತಿನ ಮೇಲೆ ಅದೇಕೋ ಅವ್ಯಕ್ತ ಪ್ರೇಮ. ಮಾನ್ಯ ಡಾ. ವಿ. ಎಸ್. ಆಚಾರ್ಯರ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಬರಿಗಾಲಿನಲ್ಲೇ ಓಡಾಡಿ ನಮ್ಮದೇ ಕೊಡುಗೆ ನೀಡಿದ್ದ ನೆನಪು ಈಗಲೂ ಇದೆ. ಅದು ಸಾವಿರದ ಒಂಭೈನೂರ ಎಪ್ಪತ್ತರ ದಶಕದ ಆದಿ.

ಶ್ರೀಮತಿ ಇಂದಿರಾಗಾಂಧಿಯವರು ಮಣಿಪಾಲಕ್ಕೆ ಭೇಟಿ ನೀಡಿದಾಗ ಹೋಗಿ ಭಾಷಣ ಕೇಳಿಬಂದಿದ್ದರೂ, ಕಾಂಗ್ರೇಸ್ ನನಗೆ ಅದೇಕೋ ಹಿಡಿಸಿರಲಿಲ್ಲ. ವಾಜಪೇಯಿಯವರ, ಜಾರ್ಜ್ ಫೆರ್ನಾಂಡಿಸರ, ಮೊರಾರ್ಜಿ ದೇಸಾಯಿಯವರ, ಆಡ್ವಾಣಿಯವರ, ಭಾಷಣಗಳಿಗೆ ನಾನೂ ಕಿವಿಯಾಗಿದ್ದೆ ಆ ದಶಕದ ಉತ್ತರಾರ್ಧದ ದಿನಗಳಲ್ಲಿ. ಅದೇಕೋ ಏನೋ ನೆಹರೂರವರಿಂದಲೇ ಉತ್ತಮ ಭಾಷಣಕಾರ ಎಂದು ಹೊಗಳಿಸಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿಯವರನ್ನು ಒಮ್ಮೆ ಪ್ರಧಾನಿಯಾಗಿ ನೋಡಬೇಕೆಂಬ ಆಸೆ ಅಂದಿನ ದಿನಗಳಿಂದಲೇ ಮನದಲ್ಲಿ ಹುದುಗಿಹೋಗಿತ್ತು. ಅದರೊಂದಿಗೆ, ನಮ್ಮ ರಾಜ್ಯದಲ್ಲೂ ಭಾರತೀಯ ಜನತಾ ಪಕ್ಷದ ಸರಕಾರ ಅಧಿಕಾರ ನಡೆಸುವುದನ್ನು ನೋಡಬೇಕೆಂಬ ಆಸೆಯೂ ಕೂಡ. ವಾಜಪೇಯಿಯವರು ಪ್ರಧಾನಿಯೂ ಆದರು, ನೇಪಥ್ಯಕ್ಕೂ ಸರಿದರು.

ಕರ್ನಾಟಕದಲ್ಲಿ ಭಾಜಪ ಅಧಿಕಾರಕ್ಕೆ ಬಂದಾಗ ನನ್ನ ಎರಡನೆಯ ಆಸೆ ಕೈಗೂಡಿದ ಸಂತಸ ನನ್ನ ಮನದಲ್ಲಿ. ಆದರೆ ಕಳೆದು ಹೋದ ಏಳುನೂರ ಮೂವತ್ತು-ನಲವತ್ತು ದಿನಗಳಲ್ಲಿ ದಿನದಿನವೂ ನನಗೆ ಮತ್ತು ನನ್ನ ಸಹಮನಸ್ಕರಿಗೆಲ್ಲಾ ಅಘಾತವನ್ನೇ ನೀಡುತ್ತಾ ಬಂದಿರಿ ನೀವು. ರಾಜಕೀಯದ ಬಗ್ಗೆ ಆಸಕ್ತಿ ತೋರಲು ತೊಡಗಿದ್ದ ವಿದ್ಯಾವಂತ ಯುವಜನಾಂಗವನ್ನು ಮತ್ತೆ ಹಿಂದಕ್ಕಟ್ಟುವಂತೆ ಮಾಡಿಬಿಟ್ಟಿರಿ ನೀವು. ಚುನಾವಣೆಗಳಲ್ಲಿ ಮತದಾನಕ್ಕೆ ಯಾಕೆ ಹೋಗಬೇಕು ಎಂದು ನಮ್ಮನ್ನೇ ನಾವು ಕೇಳಿಕೊಳ್ಳುವಂತೆ ಮಾಡಿದಿರಿ ನೀವು. ಅದಕ್ಕಾಗಿ ಈ ದೊಡ್ಡ ನಮಸ್ಕಾರ ಮತ್ತು ಧನ್ಯವಾದಗಳು. ಇನ್ನು ರಾಜಕೀಯ ಬೇಡ ಸ್ವಾಮೀ … ರಾಜಕೀಯ ಬೇಡವೇ ಬೇಡ ನಮಗೆ.

ಅವರಿವರು ಆಡಿದಂತೆ ನಿಮಗೆ ನಡೆಯಲಾಗದಿದ್ದರೂ ನೀವು ನುಡಿದಂತಾದರೂ ನಡೆದು ತೊರಿಸಿದ್ದರೆ, ಮೆಚ್ಚಿಕೊಳ್ಳಬಹುದಿತ್ತು. ತನ್ನ ಸಂಪುಟದಲ್ಲಿದ್ದ ಇದ್ದ ಏಕೈಕ ಮಹಿಳಾಮಂತ್ರಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಶಸ್ತ್ಯಕೊಡುವ ಯತ್ನದಲ್ಲಿ, ಕಂಡವರ ಕಣ್ಣಿಗೆ ಮುಳ್ಳುಚುಚ್ಚುವಂತೆ ಮಾಡಿದಿರಿ. ನಂತರ ತಮ್ಮ ವಿರೋಧಿಗಳ ಮಾತಿಗೆ ಮನ್ನಣೆ ನೀಡಿ ಆಕೆಯನ್ನೇ ಮನೆಗೆ ಕಳುಹಿಸಿ, ಸಾರ್ವಜನಿಕವಾಗಿ ಕಣ್ಣೀರು ಸುರಿಸಿದಿರಿ. ಅಧಿಕಾರಶಾಹಿಗಳಲ್ಲಿ ಮತ್ತು ಭ್ರಷ್ಟಾಚಾರಿಗಳಲ್ಲಿ ತಮ್ಮ ನಿಯತ್ತನ್ನೇ ಅಡವಿಟ್ಟಂತಿರುವ ನೀವು, ಜನರೆದುರು ಮೊಸಳೆಕಣ್ಣೀರು ಸುರಿಸುವುದನ್ನು ಬಿಟ್ಟು ಬೇರೇನನ್ನೂ ಮಾಡಲಾಗದ, ಪಟ್ಟಭದ್ರಹಿತಾಸಕ್ತಿಯನ್ನು ಹೊಂದಿದ, ಗಾದಿಗೇ ಅಂಟಿಕೊಂಡು ಇರಲು ಬಯಸುವ, ಓರ್ವ ಬಲಹೀನ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸಿದಿರಿ. ತಮ್ಮ ರಾಜಕೀಯ ಜೀವನದ ಶವಪೆಟ್ಟಿಗೆತಯಾರಾಗಿದೆ. ಎಂದು ಪತನಗೊಂಡು ಅದರೊಳಗೆ ಮಲಗುತ್ತೀರೋ ನಿಮಗೇ ಗೊತ್ತು. ಆ ಶವಪೆಟ್ಟಿಗೆಗೆ ಹಲಗೆಗಳ ಮತ್ತು ಮೊಳೆಗಳ ಸರಬರಾಜು ಮಾಡಿದ್ದು ಬೇರಾರೂ ಅಲ್ಲ. ಸ್ವತಃ ನೀವೇ ಅನ್ನುವ ಸತ್ಯದ ಅರಿವು ನಿಮಗಿದೆಯೇ? ಈಗಲೂ ಎಚ್ಚೆತ್ತುಕೊಂಡು ಉಳಿದಿರುವ ಮುಂದಿನ ಮೂರು ವರುಷಗಳಲ್ಲಿ, ತಮ್ಮ ಸುದೀರ್ಘ ರಾಜಕೀಯ ಅನುಭವದ ಶಕ್ತಿಯನ್ನು ಬಳಸಿಕೊಂಡು, ರಾಜಕೀಯ ಭ್ರಷ್ಟಾಚಾರದ ಈ ಜಲಧಾರೆಗೆ ವಿರುದ್ಧವಾಗಿ ಈಜುವ ಮನಸ್ಸುಮಾಡಿ, ಜನರ, ಅದರಲ್ಲೂ ಯುವಜನತೆಯ, ಮನಸ್ಸುಗಳನ್ನು ಗೆಲ್ಲುವ ಪ್ರಯತ್ನ ಮಾಡಿ. ಇಲ್ಲವಾದರೆ ಮೂರು ವರುಷಗಳ  ಅಥವಾ ಅದಕ್ಕೂ ಬಹಳಷ್ಟು ಮೊದಲೇ ಬರಬಹುದಾದ  ಚುನಾವಣೆಯಲ್ಲಿ ನಡೆಯುವ ಮತದಾನ ಶೇಕಡಾ ಮೂವತ್ತರ ಆಸುಪಾಸಿನಲ್ಲೇ ಉಳಿದೀತು. ಮತ್ತು ನೀವು ಖಾಯಂ ಆಗಿ ಮನೆಯಲ್ಲೇ ಉಳಿಯಬೇಕಾದೀತು. ಜನರ ಮನದಲ್ಲಿರುವ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಸಂಪೂರ್ಣ ನಾಶವಾದೀತು ಮತ್ತು ಅದರ ಶ್ರೇಯ ನಿಮಗಷ್ಟೇ.

ಲೋಕಾಯುಕ್ತರಿಂದ ಆಪಾದಿತನಾಗಿದ್ದ ಶಾಸಕ ಸಂಪಂಗಿಯವರನ್ನು ಸದನ ಸಮಿತಿ ನಿರ್ದೋಷಿ ಎಂದು ಸಾರಿದಾಗ, “ಮಾನ್ಯ ಲೋಕಾಯುಕ್ತರೇ ದಯವಿಟ್ಟು ರಾಜೀನಾಮೆ ನೀಡಿ” ಎಂದು ನಾನು ಇಲ್ಲೇ ಬರೆದಿದ್ದೆ. 

ಆದರೆ ಇಂದು ನಿಮ್ಮಲ್ಲಿ ರಾಜೀನಾಮೆ ಬೇಡುತ್ತಿಲ್ಲ. ತಪ್ಪುಗಳನ್ನು ಸರಿಪಡಿಸಿಕೊಂಡು, ಆಡಳಿತ ಶೈಲಿಯಲ್ಲಿ ಬದಲಾವಣೆ ತಂದುಕೊಂಡು ತೋರಿಸಿಕೊಡಿ ನಮ್ಮ ನಾಡಿನ ಜನತೆಗೆ, ಭಾಜಪಕ್ಕೂ ಆಡಳಿತ ನಡೆಸಲು ಬರುತ್ತದೆ ಎಂದು.

ಆಗ ನಾನು ಇಲ್ಲೇ ನಿಮಗೆ ಮತ್ತೊಮ್ಮೆ ದೊಡ್ಡ ನಮಸ್ಕಾರಮಾಡಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

*******************


ಛೇ… ಇಂದೇನೂ ಬರೆಯಲಾಗುತ್ತಿಲ್ಲ!

25 ಜೂನ್ 10

ಛೇ.. ಇಂದೇನೂ ಬರೆಯಲಾಗುತ್ತಿಲ್ಲ!

ಘಂಟೇ ನೋಡಿ ಆಗಲೇ ಹತ್ತಾಯ್ತಲ್ಲಾ!

 

ಓದಿಯಾಯ್ತು ಅವರಿವರು ಬರೆದ ಕತೆ ಕವನ

ಯಾಕೋ ಇನ್ನೂ ಸ್ಪಂದಿಸುತ್ತಿಲ್ಲ ಈ ಆಸುಮನ

 

ಪ್ರತಿಕ್ರಿಯೆಗಳ ಬಾಣಗಳಿಂದ ಮುದುರಿತೇ ಮನ?

ನಾ ಬರೆದದ್ದನ್ನೆಲ್ಲಾ ಮೆಚ್ಚಿಕೊಳ್ಳಲೇ ಬೇಕೇ ಜನ?

 

ಛೇ ಹಾಗಲ್ಲ ಇದು ನಿಜದಿ ನನಗೇನೂ ಹೊಸದಲ್ಲ

ದಿನವಿಡೀ ಜಗ್ಗಾಡಿದ ದಿನಗಳೂ ಎಷ್ಟೋ ಇದ್ದವಲ್ಲಾ?

 

ಪ್ರತಿಕ್ರಿಯೆಗಳಿಗೆ ಸಮಚಿತ್ತದಲಿ ಸ್ವಾಗತ ಎಂದು

ಸಾರಿಯಾಗಿದೆ ಈ ಆಸುಮನ ನಿಮ್ಮೆದುರೇ ಅಂದು

 

ಮತ್ತೇನು ಆಗಿರಬಹುದು ನನ್ನೀ ಮನಕೆ ಇಂದು?

ಯಾಕೆ ಅಕ್ಷರರೂಪ ತಾಳದೆನ್ನ ಭಾವನೆಗಳಿಂದು?

 

ಓಹ್! ಗೊತ್ತಾಯ್ತು ಇಂದು ಮತ್ತೆ ಬಂದಿದೆ ಶುಕ್ರವಾರ

ಅಷ್ಟು ಬೇಗನೇ ಮುಗಿದೇಹೋಯ್ತಲ್ಲ ಈ ವಾರ?

 

ವಾರಾಂತ್ಯದ ರಜೆಗೆ ಮೈಮನಗಳು ಎರಡೂ ಇದೀಗ

ಸಿದ್ಧವಾಗಿ ನನಗನ್ನುತ್ತಿವೆ ನಾವಿಲ್ಲ ನಿನ್ನ ಜೊತೆಗೀಗ!

*************************


ಹೀಗೊಂದು ದುರಾಲೋಚನೆ!

23 ಜೂನ್ 10

 

ದೇವರು ಸದ್ಗುಣಿಗಳನ್ನು

ಸನ್ನಡತೆಯುಳ್ಳವರನ್ನು

ಬೇಗ ಬೇಗನೇ ತನ್ನೆಡೆಗೆ

ಕರೆದುಕೊಳ್ಳುತ್ತಾನೆಂಬರು

 

ಅಂತೆಯೇ ದುರ್ಗುಣಿಗಳನ್ನು

ಈ ಲೋಕದಲ್ಲೇ ಹೆಚ್ಚು

ಹೆಚ್ಚು ಕಾಲ ನರಳುತ್ತಿರಲು

ಬಿಟ್ಟುಬಿಡುತ್ತಾನೆಂಬರು

 

ಅದಕ್ಕೇ ನನ್ನ ಮನಸ್ಸು

ಯೋಚಿಸುತ್ತದೆ ಇಂದು

ಸದ್ಗುಣ ಸನ್ನಡತೆಗಳ

ಬೆಳೆಸಿಕೊಂಡು ನಾ ಬೇಗ ಮರಳಲೇ?

 

ಅಥವಾ

 

ನನ್ನ ಆಯುಷ್ಯವನ್ನು ಇನ್ನೂ

ಹೆಚ್ಚಿಸಿಕೊಳ್ಳುವತ್ತ ನಾನು

ದೃಢಚಿತ್ತದಿಂದ ಇಂದಿನಿಂದಲೇ

ಕಾರ್ಯೋನ್ಮುಖನಾಗಲೇ?

**************


ಕನ್ನಡದ ಕಂಪ ಪಸರಿಸುವಾ…!

22 ಜೂನ್ 10

 

ಕಾಲೆಳೆದು ಕಾಲೆಳೆದು ಪಡಲು ಸಂತೋಷ

ಬಹುಕೃತ ವೇಷ ವ್ಯರ್ಥ ಆವೇಷ

ಕಾಲೆಳೆದು ಕಾಲೆಳೆದು ಸೋತವರೇ ಎಲ್ಲ

ನೆಮ್ಮದಿಯ ಪಡೆದವರು ಯಾರೂ ಇಲ್ಲಿಲ್ಲ

 

ಸಾಹಿತ್ಯ ಲೋಕದಲಿ ಬಂಧುಗಳೇ ನಾವೆಲ್ಲಾ

ಮೇಲು ಕೀಳಾರಿಲ್ಲ ಜಾತಿಯಾ ಹಂಗಿಲ್ಲ

ಎಲ್ಲರನೂ ಸಮನಾಗಿ ಕಾಣುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಪ್ರತಿಕ್ರಿಯೆಗಳು ಬರಹಕ್ಕೇ ಸೀಮಿತವಾಗಿರಲಿ

ಬರೆದಾತ ಯಾರೆಂಬ ಗೋಜಿಲ್ಲದಿರಲಿ

ಎಲ್ಲರಲೂ ಒಂದಾಗಿ ಬೆರೆಯುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಕನ್ನಡದ ಭಾಷೆಯನು ಶ್ರೀಮಂತಗೊಳಿಸಿ

ಬೆರೆತಿರುವ ಕಳೆಯನ್ನು ಒಂದಾಗಿ ಅಳಿಸಿ

ಎಲ್ಲರೂ ಒಂದಾಗಿ ಶ್ರಮಿಸುವಾ….

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಕನ್ನಡಕೆ ಕನ್ನಡವೇ ಸಾಟಿ ತಾನೆಂದು

ಜಗಕೆಲ್ಲಾ ತೋರಿಸಲು ಪಣತೊಡುವ ಇಂದು

ಕನ್ನಡದ ಕಂಪ ಪಸರಿಸುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

*****************************


ಸಂಗಾತಿ!

22 ಜೂನ್ 10

 

ಸಖೀ

 

ನನ್ನ ಈ

ಒಂಟಿ ಜೀವನದಲ್ಲಿ

ನನ್ನ ಜೊತೆಯಾಗಿರುವ

 

ನನ್ನನ್ನು ನನ್ನ ಮನಸ್ಸನ್ನು

ನನಗಿಂತ ಚೆನ್ನಾಗಿ ಅರಿತಿರುವ

 

ನಾನು ಬಾಯ್ಬಿಡುವ ಮೊದಲೇ

ನನ್ನ ಮನದಲ್ಲಿದ್ದದ್ದನ್ನೆಲ್ಲಾ

ಹೊರ ಹೊಮ್ಮಿಸುವ

 

ನನ್ನ ಮತ್ತು ಈ ಪ್ರಪಂಚದ

ನಡುವೆ ದೂತನಂತಿರುವ

 

ನನ್ನ ಎಂದೆಂದಿನ

ನಲ್ಮೆಯ ಸಂಗಾತಿ

ನನ್ನ ಈ ಒಂದೂವರೆ

ರೂಪಾಯಿಯ ಲೇಖನಿ!

*-*-*-*-*-*-*

(ಕೀಲಿಮಣೆಯ ಸಹಾಯದಿಂದ ಕವನ ಬರೆಯಲು ಆರಂಭಿಸುವುದಕ್ಕೆ ಮೊದಲು, ಅಂದರೆ ೬ ದಶಂಬರ ೧೯೮೪ರಂದು ಬರೆದ ಕವನ ಇದು)


ಭಿನ್ನತೆಗೆ ಬೆಲೆ!

18 ಜೂನ್ 10

ಸಖೀ

ತರವಲ್ಲ ನಿಜದಿ ನಮಗೆ

ಈ ಪರಿಯ ಚಿಂತೆ

ಹೇಗಿರಬಹುದು ಹೇಳು

ಎಲ್ಲರೂ ನಾವೆಣಿಸಿದಂತೆ?

 

ಏಕೆಮಗೆ ಎಲ್ಲರನೂ

ನಮ್ಮ ಹಾದಿಯಲೇ

ಒಯ್ಯಬೇಕೆಂಬ ಛಲ?

ಅವರಿಗೂ ಇರಬಹುದು

ತಮ್ಮ ಹಾದಿಯ ತಾವೇ

ಆರಿಸಿಕೊಂಬ ಹಂಬಲ

 

ಒಮ್ಮೆ ಕೈನೀಡಿ ಕರೆದು

ಹಾದಿಯ ತೋರುವುದು

ಅದು ನಮ್ಮ ಶಿಷ್ಟಾಚಾರ

ಬರಲಾರೆವು ಜೊತೆಗೆ, ನಮ್ಮ

ಹಾದಿಯೇ ನಮಗೆ ಎಂದರೆ

ಬಿಡು, ಅದವರ ಗ್ರಹಚಾರ

 

ಎಲ್ಲರೂ ನನ್ನಂತೆಯೇ

ಇದ್ದೊಡೆ, ಎಲ್ಲಿ ಕೊಡುತ್ತಿದ್ದೆ

ನನಗೆ ನೀನಿಷ್ಟು ಬೆಲೆ?

ಭಿನ್ನರಾಗಿರುವುದರಿಂದಲೇ

ಜಗದಿ, ಎಲ್ಲರೂ ಮೆರೆಸಿ

ಕೊಳುತಿಹರು ತಮ್ಮೊಳಗಿನ ಕಲೆ!

*-*-*-*-*-*-*-*-*-*


ಸ್ವಾತಂತ್ರ್ಯ!

17 ಜೂನ್ 10

 

ಸಖೀ

ಆಗಸದಲಿ ತೇಲುತಿರುವ

ಚಂದಿರನ ಕಂಡಾಗ

ನಿನಗೇನನಿಸಿತ್ತೋ

ನಾನರಿಯೆ

ಆದರೆ ನನಗನ್ನಿಸಿದ್ದಿಷ್ಟು

 

ಕೋಟಿ ನಕ್ಷತ್ರಗಳ ನಡುವೆ

ಪ್ರಕಾಶಮಾನನಾಗಿ

ನಗುತಿದ್ದರೂ ತನ್ನ

ಪ್ರಭೆಯನ್ನು ಕಳೆದುಕೊಳ್ಳುವ

ಭಯ ಸದಾ ಇದೆ ಆತನಲ್ಲಿ

 

ಯಾರದೋ ಬೆಳಕಿಗೆ

ಕನ್ನಡಿ ಹಿಡಿಯುವ ಆತನಿಗೆ

ತನ್ನ ಸ್ವಂತದ್ದೇನಿಲ್ಲವೆಂಬ

ಕೀಳರಿಮೆಯೂ ಇದೆ

 

ಭೂಮಿಯ ಸುತ್ತ ಸದಾ

ಗಾಣದ ಎತ್ತಿನಂತೆ

ಸುತ್ತುತ್ತಿರುವ ಆತನಲ್ಲಿ

ಸ್ವಾತಂತ್ರ್ಯ ಹೀನತೆಯ

ಕೊರಗೂ ಇದೆ

 

ಅಂತೆಯೇ

ನಮ್ಮ ಬಾಳೂ ಕೂಡ

ಇನ್ನೊಬ್ಬರು ಕಟ್ಟಿಕೊಟ್ಟ

ಬುತ್ತಿಯನು ಹೊತ್ತು

ನಡೆವ ನಮಗೆಲ್ಲಿದೆ

ಸ್ವಾತಂತ್ರ್ಯ?

 

ಸ್ವತಂತ್ರರಾಗಿರಲು

ನಕ್ಷತ್ರಗಳಿಗೆ ಸ್ವಂತ

ಪ್ರಭೆ ಇರುವಂತೆ

ಮನುಜನಿಗೆ ಸ್ವಂತ

ಪ್ರತಿಭೆ ಇರಬೇಕು!

***********


ಬೆಳೆಯುವುದೆಂತು?

16 ಜೂನ್ 10

ಸಖೀ

ಒಳ್ಳೆಯ ಬೀಜ

ಮೊಳಕೆಯೊಡೆದು

ಬೆಳೆಯಲು

ನೆಲ-ಜಲ-ಗೊಬ್ಬರ

ಎಲ್ಲವೂ ಇರಬೇಕು

ಸರಿತೂಕದಲಿ

ನೀ ನೋಡು

 

ಕೆಟ್ಟದ್ದು ಹಾಗಲ್ಲ

ಸೊಕ್ಕೆದ್ದು ಬೆಳೆಯುವುದು

ಎಲ್ಲೆಂದರಲ್ಲಿ

ಇದ್ದರೂ ಕಾಡು ಮೇಡು

 

ಅಂತೆಯೇ

ಬೆಳೆಯುತ್ತವೆ ನಮ್ಮೊಳಗೆ

ತಂತಾನೇ ಬುದ್ಧಿಗಳು

ಹಾಳು – ಕೀಳು

 

ಒಳ್ಳೆಯದನು ಬೆಳೆಸಲು

ಅನವರತ ಶ್ರಮಬೇಕು

ಅದಕಾಗಿ

ಈ ಜೀವನವನೇ

ತಪಸ್ಸಾಗಿಸಬೇಕು

ನೀ ಕೇಳು!

*-*-*-*-*