ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!

28 ಏಪ್ರಿಲ್ 11

 

ಎಷ್ಟೇ ಎತ್ತರಕ್ಕೆ ಏರಿದರೂ,
ಎಷ್ಟೇ ಹಾರಾಡಿದರೂ,
ಎಷ್ಟೇ ಆರ್ಭಟಿಸಿದರೂ,
ಎಷ್ಟೇ ವಿಜೃಂಭಿಸಿದರೂ,
ಏನು ಏನೆಲ್ಲಾ ಆಟ ಆಡಿದರೂ,
ಯಾರು ಯಾರನ್ನೆಲ್ಲಾ ಆಡಿಸಿದರೂ,ಕೊನೆಗೂ ಈ ದೇಹ ಹೋಗಿ ಸೇರುವುದು
ಈ ಭೂಮಿ ತಾಯಿಯ ಮಡಿಲನ್ನೇ…
ಭಸ್ಮವಾಗಿ… ಅಥವಾ…
ಮಣ್ಣಲ್ಲಿ ತಾನೂ ಮಣ್ಣಾಗಿ!ಆದರೆ,
ಈ ಆತ್ಮಕ್ಕೆ ತುಕ್ಕು ಹಿಡಿಯದಿರಲಿ,
ಈ ಆತ್ಮ ಮಣ್ಣಲ್ಲಿ ಮಣ್ಣಾಗದಿರಲಿ,
ಈ ಆತ್ಮವನ್ನು ಆ ಪರಮಾತ್ಮನಲ್ಲಿ
ಲೀನವಾಗಿಸುವತ್ತ ಯತ್ನ ಸಾಗುತ್ತಲೇ ಇರಲಿ!
***********************


ಯೋಜನೆಗಳ ಮುಂದುವರಿಕೆಯೇ ಸತ್ಯಸಾಯಿಬಾಬಾರಿಗೆ ನಿಜವಾದ ಶ್ರದ್ಧಾಂಜಲಿ!

26 ಏಪ್ರಿಲ್ 11

“…ಯಾವ ಸರಕಾರವೂ ಮಾಡಲಾಗದ ಸಾಧನೆ ಮಾಡಿದ್ದ ಮಹಾನ್ ಮನುಷ್ಯ, ಆತ ಮನುಷ್ಯನೇ ಅಲ್ಲ ಆತನೋರ್ವ ಮಹಾನ್ ಸಂತ.  ಅವರಿಂದ ನಾವು ಮತ್ತು ಈ ಸಮಾಜ ಕಲಿಯಲಿಕ್ಕೆ ಬಹಳಷ್ಟಿದೆ. ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ…”.

ಪುಟ್ಟಪರ್ತಿಯ ಶ್ರೀ ಸತ್ಯಸಾಯಿಬಾಬಾ ತನ್ನ ಇಹಲೋಕದ ಪಯಣವನ್ನು ಮೊಟಕುಗೊಳಿಸಿ (೯೬ ವರುಷ ಬದುಕುತ್ತೇನೆ ಅಂತ ಅವರೇ ಹೇಳಿದ್ದರಂತೆ, ಹಾಗಾಗಿ ಮೊಟಕುಗೊಳಿಸಿದರೇನೋ ಎನ್ನುವ ಅನುಮಾನ ನನಗೆ) ಪರಲೋಕದತ್ತ ಮುಖಮಾಡಿ ಹೊರಟು ಹೋದ ಮೇಲೆ, ಅವರ ನಿಧನಕ್ಕೆ ಸಂತಾಪ ಸೂಚಿಸಲು ಕ್ಯಾಮೆರಾ ಮುಂದೆ ನಿಂತ ರಾಜಕಾರಣಿಗಳೆಲ್ಲಾ ನುಡಿದ ಮಾತುಗಳಲ್ಲಿ ನನಗೆ ಅದೇಕೋ ಏಕತಾನತೆ ಕಂಡುಬಂದಿತ್ತು.

ನಿಜ, ಈ ಲೋಕದಿಂದ ಮರಳುವ ಯಾವೊಬ್ಬ ವ್ಯಕ್ತಿಯ ಸ್ಥಾನವನ್ನೂ ಇನ್ನೊರ್ವ ವ್ಯಕ್ತಿ ತುಂಬಲು ಸಾಧ್ಯವಿಲ್ಲ. ಆದರೆ, ಸತ್ಯ ಸಾಯಿಬಾಬಾ ಮಾಡಿದ ಜನೋಪಯೋಗಿ ಕೆಲಸಗಳನ್ನು ಯಾವುದೇ ಸರಕಾರವೂ ಮಾಡಲಾಗದು ಅನ್ನುವುದೇಕೆ. ಮಾಡಲಾಗಿಲ್ಲ ನಿಜ. ಏಕೆ ಮಾಡಲಾಗಿಲ್ಲ ಎಂದು ಯೋಚಿಸಬಾರದೇಕೆ? ಏಕೆಂದರೆ, ಮಾಡಬೇಕೆಂಬ ಇಚ್ಛಾಶಕ್ತಿ ಇದ್ದಿರಲೇ ಇಲ್ಲ. ಹಳ್ಳಿಯ ಮನೆಯೊಂದರಲ್ಲಿ ಮಲಗಿ ರಾತ್ರಿ ಕಳೆದು ತಾನು ಮಹಾನ್ ಸಾಧನೆಗೈದೆ ಎಂದು ಹೇಳಿಕೆಯನ್ನು ನೀಡುವ ರಾಜಕಾರಣಿ ನಾಯಕ, ತನ್ನ ಒಂದು ದಿನದ ವಾಸ್ತವ್ಯಕ್ಕಾಗಿ, ಹಳ್ಳಿಗಳಿಗೆ ನಗರದಿಂದ ವಿದ್ಯುತ್ ಬೀಸಣಿಗೆ (ಫ್ಯಾನ್) ಮತ್ತು ಕಕ್ಕಸುಗಳನ್ನೇ ಹೊತ್ತುಕೊಂಡು ಹೋಗಿರುತ್ತಿದ್ದ. ಹಳ್ಳಿಯ ಬಡಜನರ ಸಮಸ್ಯೆಗಳನ್ನು ಪರಿಹರಿಸುವತ್ತ ಯಾವುದೇ ಗಮನ ಹರಿಸದೇ, ವೈಯಕ್ತಿಕ ಲಾಭದ ಲೆಕ್ಕ ಮಾತ್ರ ಹಾಕುವ ನಮ್ಮ ರಾಜಕಾರಣಿಗಳು ಸಾಯಿಬಾಬಾರ ನಿಧನಕ್ಕೆ ಕಣ್ಣೀರು ಸುರಿಸಿ ಸಂತಾಪ ವ್ಯಕ್ತಪಡಿಸುವಾಗ ನನಗೇಕೋ ನಗುಬರುತ್ತಿತ್ತು.

ಕಾಡುಗಳ್ಳ ವೀರಪ್ಪನ್ ರಾಜಕುಮಾರರನ್ನು ಅಪಹರಿಸಿದ ಘಟನೆಯ ಹಿಂದಿನ ಸತ್ಯವನ್ನೇ ಈ ನಾಡಿನ ಜನತೆಯಿಂದ ಮರೆಮಾಚಿದ ಮಾಜೀ ಮುಖ್ಯಮಂತ್ರಿಯೋರ್ವರು, ಮೊನ್ನೆ ಸತ್ಯ ಸಾಯಿಬಾಬಾರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದುದನ್ನು ಕಂಡಾಗ, ಶ್ರೀ ಸತ್ಯ ಸಾಯಿಬಾಬಾರ ಹೆಸರಿನಲ್ಲಿನ “ಸತ್ಯ” ಎಂಬ ಪದದ ಅರ್ಥವೇನೆಂದು ಯೋಚಿಸತೊಡಗಿದ್ದೆ.

ಅತಿವೃಷ್ಟಿಯಲ್ಲಿ ಮನೆಕಳೆದುಕೊಂಡವರಿಗೆ ಎರಡು ವರುಷಗಳಾದರೂ ಮನೆಕಟ್ಟಿಸಿಕೊಡಲಾಗದ, ರಾಜ್ಯದ ರಾಜಧಾನಿಯಲ್ಲಿ ಪ್ರತಿ ಮಳೆಗೂ ಮೋರಿಯಲ್ಲಿ ಕೊಚ್ಚಿಹೋಗುವ ಮಕ್ಕಳ ಪ್ರಾಣವನ್ನು ಉಳಿಸಲಾಗದ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಶ್ರೀ ಸತ್ಯ ಸಾಯಿಬಾಬಾರ ನಿಧನಕ್ಕೆ ಮರುಗಿದ್ದನ್ನು ಕಂಡಾಗ ಮೈಪರಚಿಕೊಳ್ಳುವಂತಾಗಿತ್ತು.

ಪ್ರತೀ ವರುಷ ಪ್ರಶಾಂತಿನಿಲಯಕ್ಕೆ ಭೇಟಿ ನೀಡಿ ವಾಪಾಸಾಗುತ್ತಿದ್ದ ರಾಜಕಾರಣಿಗಳಲ್ಲಿ, ಸಾಯಿಬಾಬಾರ ಸಂದೇಶಗಳಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟು ನಿಷ್ಠೆಯಿಂದ ಜನಸೇವೆಗೈದವರು ಎಷ್ಟು ಮಂದಿ ಇದ್ದಾರೆ? ಆತನ ಕಾಲಿಗೆ ನಮಸ್ಕರಿಸಿ, ಅತನ ಆಶೀರ್ವಾದ ಪಡೆದು ಬಂದಿದ್ದೇವೆ ಎಂದು ಸುದ್ದಿಮಾಧ್ಯಮಗಳ ಮುಂದೆ ತನ್ನ ಬಾಬಾ ಭಕ್ತಿಯನ್ನು ಪ್ರದರ್ಶಿಸಿದವರು ಆತನ ಮನೋಧರ್ಮಕ್ಕೆ ಅಥವಾ ಸಿದ್ಧಾಂತಗಳಿಗೆ ವಿರುದ್ಧವಾಗಿಯೇ ಬದುಕಲು ಅದು ಹೇಗೆ ಸಾಧ್ಯವಾಗುತ್ತದೆ? ಸುಳ್ಳು, ಕಪಟ, ಭ್ರಷ್ಟಾಚಾರ, ಅತ್ಯಾಚಾರ ಎಲ್ಲವನ್ನೂ ಮೈಗೂಡಿಸಿಕೊಂಡು, ತನ್ನ ಅಧಿಕಾರದ ಕಾಲಾವಧಿಯಲ್ಲಿ ತನಗಾದಷ್ಟು ಸಂಪತ್ತನ್ನು ಕ್ರೋಡೀಕರಿಸಿಕೊಳ್ಳಬೇಕು ಎನ್ನುವ ಬರೀ ಒಂದಂಶದ ಕಾರ್ಯಕ್ರಮವನ್ನೇ ನಡೆಸುವ ಈ ರಾಜಕಾರಣಿಗಳು, ಈ ನಾಡಿಗೆ ಪ್ರೇಮದ ಸಂದೇಶ ನೀಡಿದ ಆ ಸತ್ಯಸಾಯಿಬಾಬಾರ ನಿಧನಕ್ಕೆ ಅದ್ಯಾವ ಮುಖ ಹೊತ್ತು ಸಂತಾಪ ಸೂಚಿಸುತ್ತಾರೆ?

ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಆತ್ಮಹತ್ಯೆಗೆ ಯತ್ನಿಸಿದ್ದ ಚಿತ್ರ ನಿರ್ದೇಶಕನೋರ್ವ ಬಾಬಾ ನಿಧನರಾದಂದು ಸುದ್ದಿವಾಹಿನಿಯೊಂದರಲ್ಲಿ ದಿನವಿಡೀ ಆ ಬಾಬಾರನ್ನು ಕೊಂಡಾಡಿದ ಪರಿ, ನಿಜಕ್ಕೂ ವಾಕರಿಕೆ ಬರಿಸುತ್ತಿತ್ತು. ಜೀವನವನ್ನು ಏನೆಂದೇ ಅರ್ಥಮಾಡಿಕೊಳ್ಳದೇ, ಓರ್ವ ಹೇಡಿಯಂತೆ ಆತ್ಮಹತ್ಯೆಗೆ ಯತ್ನಿಸಿದ್ದಾತ, ತಾನು  ಬಾಬಾರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡವನು ಎಂದರೆ ಯಾರು ನಂಬುತ್ತಾರೆ ಹೇಳಿ. ಜೀವನದಲ್ಲಿ ಸಮಸ್ಯೆ ಎದುರಾದಾಗ ಆತ ಪುಟ್ಟಪರ್ತಿಗೇಕೆ ಹೋಗಿ ಬಾಬಾರಿಂದ ಪರಿಹಾರ ಕೇಳಿರಲಿಲ್ಲ? ತಾನು ಆಡುವ ನುಡಿಗೂ ತನ್ನ ನಡೆಗೂ ಅಂತರ ಇರದಂತೆ ಬಾಳಿದರೆ ಮಾತ್ರ ಜನರು ನಂಬಿಯಾರು ಮತ್ತು ಮೆಚ್ಚಿಕೊಂಡಾರು. ಹಣೆಯೊಳಗೂ ಬರಿಯ ಬೂದಿಯೇ ಇರುವುದೆಂದಾದರೆ, ಹಣೆಯ ಮೇಲೆಲ್ಲಾ ವಿಭೂತಿ ಮೆತ್ತಿಕೊಂಡರೆ ಏನು ಪ್ರಯೋಜನ?

ನಾನು ಸಾಯಿಬಾಬಾರನ್ನು ಪೂಜಿಸುವುದಿಲ್ಲ. ಆದರೆ, ಸಾಯಿಬಾಬಾರ ಮಾತುಗಳನ್ನು ಅವರ ಪುಸ್ತಕಗಳಲ್ಲಿ ಓದಿದ್ದೇನೆ. ಅವರ ಸಂದೇಶಗಳನ್ನು ಮೆಚ್ಚಿಕೊಂಡಿದ್ದೇನೆ. ನನಗೆ ವ್ಯಕ್ತಿ ಮುಖ್ಯವಾಗುವುದಿಲ್ಲ. ಯಾವುದೇ ವ್ಯಕ್ತಿ ನೀಡಿದ ಸಂದೇಶಗಳಷ್ಟೇ ಮುಖ್ಯವಾಗುತ್ತವೆ. ಸಾಯಿಬಾಬಾ ತೋರಿಸುತ್ತಿದ್ದ ಪವಾಡಗಳನ್ನು ನಾನು ಒಪ್ಪುವುದಿಲ್ಲ. ಜನ ಮರುಳೋ ಜಾತ್ರೆ ಮರುಳೋ ಅನ್ನುತ್ತಾರೆ. ಹಾಗೆಯೇ, ವಿಭೂತಿ, ಲಿಂಗ, ಚಿನ್ನದ ಸರ, ಇಂತಹ ವಸ್ತುಗಳನ್ನು ಬಾಬಾ ಗಾಳಿಯಲ್ಲಿ ಸೃಷ್ಟಿಸಿ ನೀಡಿದಾಗ ಆತನನ್ನು ಪೂಜಿಸಲು ಆರಂಭಿಸಿದರೇ ವಿನಾ ಸಾಯಿಬಾಬಾರ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಹೆಚ್ಚಿನವರು ನಡೆಸಲೇ ಇಲ್ಲ.

ತಾನು ಇಂತಹವರ ಭಕ್ತ, ತಾನು ಇಂತಹವರ ಅನುಯಾಯಿ ಎನ್ನುವುದರ ಪ್ರದರ್ಶನಕ್ಕೆ ನೀಡಿದಷ್ಟು ಪ್ರಾಮುಖ್ಯ ತಾನು ಏನು ಎಂಬುದರ ಬಗ್ಗೆ ನೀಡುವುದೇ ಇಲ್ಲ ಹೆಚ್ಚಿನವರು. ಮಾತಾಪಿತರ ಮೇಲಿನ ಪ್ರೀತಿ ಮತ್ತು ಗೌರವವನ್ನು ಮೆರೆದ ಶ್ರೀರಾಮನ ಭಕ್ತರೆಂದು ಕರೆಸಿಕೊಳ್ಳುವವರ ಮನೆಗಳಲ್ಲಿ ಮುದಿ ಮಾತಾಪಿತರು ಮಕ್ಕಳ ಆರೈಕೆಗಾಗಿ ಹಾತೊರೆಯುತ್ತಲೇ ಇದ್ದರೆ, ಆ ಮನೆಯೊಳಗೆ ಸಹೋದರರು ಪರಸ್ಪರರ ವಿರುದ್ಧ ಕತ್ತಿ ಮಸೆಯುತ್ತಾ ಇರುವುದು ನಮ್ಮ ಕಣ್ಣಿಗೆ ಬಿದ್ದರೆ ಆಶ್ಚರ್ಯವಿಲ್ಲ. ಹಬ್ಬ ಹರಿದಿನಗಳಲ್ಲಿ, ಮುಂಜಾನೆ ದೇವಸ್ಥಾನಗಳಿಗೆ ಸುತ್ತು ಹಾಕಿ ಕಛೇರಿಗೆ ನಿಯಮಿತ ಸಮಯಕ್ಕಿಂತ ಒಂದೆರಡು ಘಂಟೆ ತಡವಾಗಿ ತಲುಪುವುವವರನ್ನು ನನ್ನಂತೆ ನೀವೂ ಕಂಡಿರಬಹುದು. ತನ್ನ ವೃತ್ತಿಧರ್ಮವ ಮರೆತು ಮಾಡಿದ ಪೂಜೆ ಅದ್ಯಾವ ದೇವರಿಗಿಷ್ಟವೋ ನಾನರಿಯೆ. ರಾಮನವಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ವಿನಾಯಕ ಚೌತಿಗಳನ್ನು  ತಪ್ಪದೇ ಆಚರಿಸುವ ನಮಗೆ, ನಮ್ಮ ಕುಟುಂಬದಲ್ಲಿ ಒಂದು ಪೀಳಿಗೆಯ ಹಿಂದಿನವರ ಜನ್ಮದಿನಾಂಕಗಳು ನೆನಪಿವೆಯೇ?

ನಾವು ಯಾರ ಭಕ್ತರು, ಯಾರ ಹಿಂಬಾಲಕರು, ಯಾರನ್ನು ಪೂಜಿಸುತ್ತೇವೆ ಅನ್ನುವುದು ಎಳ್ಳಷ್ಟೂ ಪ್ರಾಮುಖ್ಯವಲ್ಲ. ನಾವು ಯಾರ ಸಂದೇಶಗಳನ್ನು, ನೀತಿ ಪಾಠಗಳನ್ನು, ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತಿದ್ದೇವೆ, ನಮ್ಮ ಜೀವನದಿಂದ ನಮ್ಮ ಕಿರಿಯರಿಗೆ ನಾವು ನೀಡುತ್ತಿರುವ ಸಂದೇಶಗಳೇನು ಅನ್ನುವುದಷ್ಟೇ ಪ್ರಾಮುಖ್ಯವಾಗಬೇಕು.

ಸತ್ಯ ಸಾಯಿಬಾಬಾ ಅಥವಾ ಅಂತಹ ಓರ್ವ ವ್ಯಕ್ತಿಯ ಸಾವಿನಿಂದ ಆತನ ಅನುಯಾಯಿಗಳಿಗೆ, ಆತನ ನೀತಿಪಾಠವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಾಳುವವರಿಗೆ ಹೆಚ್ಚಿನ ನಷ್ಟವೇನೂ ಆಗಲಾರದು. ಆದರೆ ಪ್ರತಿ ವರುಷ ಪುಟ್ಟಪರ್ತಿಗೆ ಭೇಟಿ ನೀಡಿ ಸಾಯಿಬಾಬಾರ ಪಾದಗಳಿಗೆ ನಮಸ್ಕರಿಸಿ, ಅದರ ಪ್ರಚಾರವನ್ನು ನಾಲ್ಕು ಊರುಗಳಲ್ಲಿ ಮಾಡಿ ಬರುತ್ತಿದ್ದವರಿಗೆ ನಿಜವಾಗಿಯೂ ತುಂಬಲಾರದ ನಷ್ಟವಾಗಿರಬಹುದು.

ಸಾಯಿಬಾಬಾರ ಯೋಜನೆಗಳನ್ನು ಈಗಿನ ಗತಿಯಲ್ಲೇ  ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಅಲ್ಲಿನ “ಟ್ರಸ್ಟ್”ನ ಮೇಲೆ ಇದೆ. ಆ “ಟ್ರಸ್ಟ್” ತನ್ನ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗಲು ವಿಫಲವಾದರೆ ಅಥವಾ ಬಾಬಾ ಕ್ರೋಡೀಕರಿಸಿರುವ ಆ ಅಪಾರ ಸಂಪತ್ತನ್ನು ಒಂದುವೇಳೆ ಲೂಟಿಮಾಡಿ ತಮ್ಮ ಸ್ವಂತಕ್ಕೆ ಬಳಸುವ ಕೆಟ್ಟ ಮನಸ್ಸು ಮಾಡಿದರೆ, ಆಗ ಸಾಯಿಬಾಬಾರ ಅಗಲಿಕೆಯಿಂದ, ಸಾಯಿಬಾಬಾರ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದ ಜನ ಸಾಮಾನ್ಯರಿಗೆ ನಷ್ಟವಾದೀತು, ಬಡಬಗ್ಗರಿಗೆ ನಷ್ಟವಾದೀತು.

ಮಹಾಮಾತೆ ತೆರೆಸಾ ಅಳಿದ ನಂತರ ಆ ಮಿಷನರಿಗಳ ಬಗ್ಗೆ ಈಚಿನ ದಿನಗಳಲ್ಲಿ ಹೆಚ್ಚಿನ ಸುದ್ದಿಯೇ ಕೇಳಿಬರುತ್ತಿಲ್ಲ. ಹಾಗಾಗಿಯೇ ಓರ್ವ ವ್ಯಕ್ತಿಯಷ್ಟೇ ಪ್ರಾಮುಖ್ಯನಾಗಿಬಿಟ್ಟು, ಆತನ ಅಗಲಿಕೆಯ ನಂತರ ಆತನ ಎಲ್ಲಾ ಯೋಜನೆಗಳೂ ಹಳಿತಪ್ಪಿದಂತಾಗಬಾರದು. ಸಾಯಿಬಾಬಾ ಅಳಿದರೇನಂತೆ, ಆತನ ಸಂದೇಶಗಳು ಆತನ ಅನುಯಾಯಿಗಳಿಗೆ ಸನ್ನಡತೆಯಿಂದ, ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ದಾರಿದೀಪವಾಗಿ ಕಾಪಾಡುತ್ತಿರಲಿ.

ಸಾಯಿಬಾಬಾರ ದೌರ್ಬಲ್ಯಗಳೇನೇ ಇದ್ದಿದ್ದರೂ, ಸಾಮಾಜಿಕ ಸೇವೆಯ ವಿಭಿನ್ನ ಕ್ಷೇತ್ರಗಳಲ್ಲಿ ನಿಸ್ವಾರ್ಥಿಯಾಗಿ ಆತ ಗೈದ ಸಾಧನೆಗಳನ್ನು ಅಲ್ಲಗಳೆಯಲಾಗದು. ಆ ಎಲ್ಲಾ ಯೋಜನೆಗಳನ್ನೂ ಕಿಂಚಿತ್ತೂ ಲೋಪವಾಗದಂತೆ, ಕಿಂಚಿತ್ತೂ ಅನುಮಾನಕ್ಕೆ ಎಡೆಮಾಡಿಕೊಡದಂತೆ, ಪಾರದರ್ಶಕ ರೀತಿಯಲ್ಲಿ, ಮುಂದುವರಿಸಿಕೊಂಡು ಹೋಗಲು ಸಾಯಿಬಾಬಾ “ಟ್ರಸ್ಟ್”ನ ಸದಸ್ಯರು ಪಣತೊಟ್ಟರೆ, ಅಗಲಿದ ಆತ್ಮಕ್ಕೆ ನಾವೆಲ್ಲರೂ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎನಿಸುವುದು.
**********

ಈ ಲೇಖನ ಇಂದು ಉದಯವಾಣಿಯ ಮಣಿಪಾಲ ಮತ್ತು ಮುಂಬಯಿ ಆವೃತ್ತಿಗಳಲ್ಲಿ ಪ್ರಕಟವಾಗಿರುತ್ತದೆ.


ನಿನ್ನ ರೂಪದಲ್ಲಿ ಪುನರ್ಜನ್ಮ ಪಡೆಯುವೆ ನಾನಂದು!

21 ಏಪ್ರಿಲ್ 11

ನನಗೆ ಬಲು ಇಷ್ಟವಾದ ಇನ್ನೊಂದು ಹಿಂದೀ ಚಿತ್ರಗೀತೆಯ ಭಾವಾನುವಾದದ ಯತ್ನ ಇಲ್ಲಿದೆ.
ಆದರೆ ಮೂಲ ಧಾಟಿಯನ್ನು  ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ.

 

ನೀ ಸೂರ್ಯನೋ ಇಲ್ಲಾ ಚಂದ್ರ
ನೀ ದೀಪವೋ ಯಾ ನಕ್ಷತ್ರ
ನನ್ನ ಹೆಸರನು ಬೆಳಗುವೆ ನೀ ಜಗದಿ
ಓ ನನ್ನ ರಾಜಕುಮಾರಾ

ಅದೆಂದಿನಿಂದಲೋ ನಾ ಕಾಯುತ್ತಲಿದ್ದೆ
ಈ ಅಂಗಳದಿ ಕಂದನಾಡಲೆಂದು
ನಿನ್ನೀ ಮುಗುಳ್ನಗುವಿನ ಬದಲು
ನೀಡುವೆ ಸರ್ವಸ್ವವನೇ ಇಂದು
ನನ್ನೀ ಬಾಹುಗಳಲ್ಲಿ ತೂಗುತಿಹುದು
ಮೂರು ಲೋಕವೇ ನಿನ್ನೊಡನಿಂದು 

ನನ್ನ ಹೆಸರನು ಬೆಳಗುವೆ ನೀ ಜಗದಿ
ಓ ನನ್ನ ರಾಜಕುಮಾರಾ
ನೀ ಸೂರ್ಯನೋ ಇಲ್ಲಾ ಚಂದ್ರ
ನೀ ದೀಪವೋ ಯಾ ನಕ್ಷತ್ರ
ನನ್ನ ಹೆಸರನು ಬೆಳಗುವೆ ನೀ ಜಗದಿ
ಓ ನನ್ನ ರಾಜಕುಮಾರಾ

ನಿನ್ನ ಬೆರಳ ಹಿಡಿದು ನಾ ನಿನಗೆ
ನಡೆಯಲು ಕಲಿಸುತಿಹೆನು ಇಂದು
ನನ್ನ ಕೈಯ ಹಿಡಿದು ನಡೆಸು ನೀ
ನಾಳೆ ಮುದುಕನಾದಂದು
ಹೊಸ ಆಸರೆ ಪಡೆದೆ ನಿನ್ನಿಂದ
ಈ ಜೀವನದಲಿ ನಾನು ಇಂದು 

ನನ್ನ ಹೆಸರನು ಬೆಳಗುವೆ ನೀ ಜಗದಿ
ಓ ನನ್ನ ರಾಜಕುಮಾರಾ
ನೀ ಸೂರ್ಯನೋ ಇಲ್ಲಾ ಚಂದ್ರ
ನೀ ದೀಪವೋ ಯಾ ನಕ್ಷತ್ರ
ನನ್ನ ಹೆಸರನು ಬೆಳಗುವೆ ನೀ ಜಗದಿ
ಓ ನನ್ನ ರಾಜಕುಮಾರಾ

ನಾನಳಿದ ಮೇಲೂ ಜಗದಲ್ಲಿ
ನನ್ನ ಹೆಸರಾಗುವುದು ಅಮರ
ನಿನ್ನ ನೋಡಿದ ಎಲ್ಲಾ ಜನರೂ
ನೆನೆಯುವರು ನನ್ನಯ ಹೆಸರ
ನಿನ್ನ ರೂಪದಲ್ಲಿಯೇ ನಾನು
ಮರುರ್ಜನ್ಮವ ಪಡೆಯುವೆನಂದು 

ನನ್ನ ಹೆಸರನು ಬೆಳಗುವೆ ನೀ ಜಗದಿ
ಓ ನನ್ನ ರಾಜಕುಮಾರಾ
ನೀ ಸೂರ್ಯನೋ ಇಲ್ಲಾ ಚಂದ್ರ
ನೀ ದೀಪವೋ ಯಾ ನಕ್ಷತ್ರ
ನನ್ನ ಹೆಸರನು ಬೆಳಗುವೆ ನೀ ಜಗದಿ
ಓ ನನ್ನ ರಾಜಕುಮಾರಾ
****************

ಮೂಲ ಗೀತೆ:
ಚಿತ್ರ: ಏಕ್ ಫೂಲ್ ದೋ ಮಾಲಿ
ಗೀತೆ ರಚನೆ: ಪ್ರೇಮ್ ಧವನ್
ಸಂಗೀತ: ರವಿ

ತುಝೆ ಸೂರಜ್ ಕಹೂಂ ಯಾ ಚಂದಾ
ತುಝೆ ದೀಪ್ ಕಹೂಂ ಯಾ ತಾರಾ
ಮೇರಾ ನಾಮ್ ಕರೇಗಾ ರೋಶನ್
ಜಗ್ ಮೇ ಮೇರಾ ರಾಜ್ ಗುಲ್ಹಾರಾ

ಮೈ ಕಭ್ ಸೇ ತರಸ್ ರಹಾ ಥಾ,
ಮೇರೆ ಆಂಗನ್ ಮೆ ಕೋಯೀ ಖೇಲೆ
ನನ್ಹೀ ಸೀ ಹಂಸೀ ಕೆ ಬದ್‍ಲೇ,
ಮೇರೇ ಸಾರೀ ದುನಿಯಾ ಲೇಲೆ
ತೇರೆ ಸಂಗ್ ಝೂಲ್ ರಹಾ ಹೈ,
ಮೇರೇ ಬಾಹೋಂ ಮೆ ಜಗ್ ಸಾರಾ

ಮೇರಾ ನಾಮ್ ಕರೇಗಾ ರೋಶನ್
ಜಗ್ ಮೇ ಮೇರಾ ರಾಜ್ ಗುಲ್ಹಾರಾ

ತುಝೆ ಸೂರಜ್ ಕಹೂಂ ಯಾ ಚಂದಾ
ತುಝೆ ದೀಪ್ ಕಹೂಂ ಯಾ ತಾರಾ
ಮೇರಾ ನಾಮ್ ಕರೇಗಾ ರೋಶನ್
ಜಗ್ ಮೇ ಮೇರಾ ರಾಜ್ ಗುಲ್ಹಾರಾ

ಆಜ್ ಉಂಗ್‍ಲೀ ಥಾಮ್ ಕೇ ತೇರೀ,
ತುಝೆ ಮೈ ಚಲ್‍ನಾ ಸಿಖ್ ಲಾವೂಂ
ಕಲ್ ಹಾತ್ ಪಕಡ್‍ನಾ ಮೇರಾ,
ಜಬ್ ಮೈ ಬುಢಾ ಹೋ ಜಾವೂಂ
ತು ಮಿಲಾ ತೋ ಮೈನೇ ಪಾಯಾ,
ಜಿನೇ ಕಾ ಸಯಾ ಸಹಾರಾ

ಮೇರಾ ನಾಮ್ ಕರೇಗಾ ರೋಶನ್
ಜಗ್ ಮೇ ಮೇರಾ ರಾಜ್ ಗುಲ್ಹಾರಾ

ತುಝೆ ಸೂರಜ್ ಕಹೂಂ ಯಾ ಚಂದಾ
ತುಝೆ ದೀಪ್ ಕಹೂಂ ಯಾ ತಾರಾ
ಮೇರಾ ನಾಮ್ ಕರೇಗಾ ರೋಶನ್
ಜಗ್ ಮೇ ಮೇರಾ ರಾಜ್ ಗುಲ್ಹಾರಾ

ಮೇರೇ ಬಾದ್ ಭೀ ಇಸ್ ದುನಿಯಾ ಮೆ,
ಜಿಂದಾ ಮೇರಾ ನಾಮ್ ರಹೇಗಾ
ಜೋ ಭೀ ತುಝ್‍ಕೋ ದೇಖೇಗಾ,
ತುಝೆ ಮೇರಾ ಲಾಲ್ ಕಹೇಗಾ
ತೇರೆ ರೂಪ್ ಮೆ ಮಿಲ್ ಜಾಯೇಗಾ,
ಮುಝ್ ಕೋ ಜೀವನ್ ದೊ ಬಾರಾ

ಮೇರಾ ನಾಮ್ ಕರೇಗಾ ರೋಶನ್
ಜಗ್ ಮೇ ಮೇರಾ ರಾಜ್ ಗುಲ್ಹಾರಾ

ತುಝೆ ಸೂರಜ್ ಕಹೂಂ ಯಾ ಚಂದಾ
ತುಝೆ ದೀಪ್ ಕಹೂಂ ಯಾ ತಾರಾ
ಮೇರಾ ನಾಮ್ ಕರೇಗಾ ರೋಶನ್
ಜಗ್ ಮೇ ಮೇರಾ ರಾಜ್ ಗುಲ್ಹಾರಾ

******************


ಜೀ ಕನ್ನಡ ವಾಹಿನಿ ಮುಖ್ಯಸ್ಥರಿಗೊಂದು ಬಹಿರಂಗ ಆಗ್ರಹ ಪತ್ರ

21 ಏಪ್ರಿಲ್ 11

 

 

ಮಾನ್ಯರೆ,ಈ ಪತ್ರವನ್ನು ಅತ್ಯಂತ ನೋವು, ವಿಷಾದ, ಕಳವಳದಿಂದ ನಿಮಗೆ ಬರೆಯುತ್ತಿದ್ದೇವೆ. ಪತ್ರ ಓದಿದ ನಂತರವಾದರೂ ನೀವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತೀರೆಂಬ ನಂಬಿಕೆ ಇದೆ. ಲಕ್ಷ-ಕೋಟಿ ಜನರನ್ನು ತಲುಪುವ ಮೀಡಿಯಾಗಳು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಕಾನೂನಿನ ಪರಿಭಾಷೆಗಳಿಗೆ ಮಾತ್ರ ಒಳಪಡುವ ವಿಷಯ ಎಂದು ಯಾರೂ ಭಾವಿಸಬೇಕಾಗಿಲ್ಲ, ಕಾನೂನನ್ನೂ ಮೀರಿದ ನೈತಿಕತೆ, ಮಾನವೀಯತೆಯ ಹೊಣೆಗಾರಿಕೆಯನ್ನೂ ಒಪ್ಪಿ ಅನುಸರಿಸಬೇಕಾಗುತ್ತದೆ. ತಾವು ಇಡೀ ಪತ್ರವನ್ನು ಓದಿ, ಸೂಕ್ತ, ಅತ್ಯಗತ್ಯ, ಸಕಾಲಿಕ ನಿರ್ಧಾರಕ್ಕೆ ಬರುವಿರೆಂಬ ನಂಬುಗೆ ನಮಗಿದೆ.ನಮ್ಮ ತಕರಾರು, ಸಿಟ್ಟು, ಆತಂಕ ಇರುವುದು ನಿಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮದ ಕುರಿತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀ ನರೇಂದ್ರ ಬಾಬು ಶರ್ಮ ಎಂಬುವವರು. ಇವರು ನಿಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಮುನ್ನ ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ, ಅದಕ್ಕೂ ಮುನ್ನ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ಸ್ವರೂಪದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಬಹಳಷ್ಟು ಜನರಿಗೆ ಗೊತ್ತಿರುವ ಪ್ರಕಾರ ತೀರಾ ಇತ್ತೀಚಿನವರೆಗೆ ನರೇಂದ್ರ ಶರ್ಮ ಅವರು ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದವರು.ನರೇಂದ್ರ ಶರ್ಮ ಅವರು ಕಸ್ತೂರಿ ವಾಹಿನಿ ಹಾಗು ಸುವರ್ಣ ವಾಹಿನಿಗಳಲ್ಲಿ ಬ್ರಹ್ಮಾಂಡ ನಡೆಸುತ್ತಿದ್ದಾಗಲೇ ಅವರು ಬಳಸುವ ಭಾಷೆ, ಹೇಳುವ ಹಸಿಹಸಿ ಸುಳ್ಳುಗಳು ಮಾನವಂತರ, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರನ್ನು ವಿನಾಕಾರಣ ನಿಂದಿಸುವುದು-ಅವಹೇಳನ ಮಾಡುವುದು, ಕೆಳಜಾತಿಯ ಜನರನ್ನು ಗುರಿಪಡಿಸಿ ತಿರಸ್ಕಾರದಿಂದ ಮಾತನಾಡಿ ಅಪಮಾನಿಸುವುದು, ಜ್ಯೋತಿಷ್ಯದ ಹೆಸರಿನಲ್ಲಿ ಸುಳ್ಳುಗಳ ಕಂತೆ ಕಟ್ಟಿ ಜನರನ್ನು ಬೆದರಿಸುವುದು ಇವರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕೆಲಸ. ಅದನ್ನು ಅವರು ನಿಮ್ಮ ಜೀ ವಾಹಿನಿಯಲ್ಲೂ ಮಾಡುತ್ತಿದ್ದಾರೆ ಹಾಗು ಅದು ಈಗ ಅತಿರೇಕಕ್ಕೆ ತಲುಪಿದೆ.

ನಿಮ್ಮ ಜೀ ವಾಹಿನಿಯ ವೇದಿಕೆಯನ್ನು ಬಳಸಿಕೊಂಡು ನರೇಂದ್ರ ಶರ್ಮ ಏನೇನು ಮಾತನಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಒದಗಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಓದಬೇಕಾಗಿ ವಿನಂತಿ.

೧. ನಾನು ಜಗನ್ಮಾತೆಯ ಪುತ್ರ. ಆಕೆ ಮೇ.೧೨ರಂದು ಭೂಮಿಗೆ ಬರುತ್ತಿದ್ದಾಳೆ. ಬಂದವಳು ಭೂಮಿಯನ್ನು ನಾಶಪಡಿಸುತ್ತಾಳೆ. ನಾನು ಇದನ್ನು ಘೋಷಿಸಿರುವುದರಿಂದ, ಜಗನ್ಮಾತೆ ನನ್ನ ಮಾತು ಉಳಿಸುವ ದೃಷ್ಟಿಯಿಂದಲಾದರೂ ಪ್ರಳಯ ನಡೆಸುತ್ತಾಳೆ.

೨. ಕರ್ನಾಟಕದ ಯಾವ ದೇವಸ್ಥಾನಗಳಲ್ಲೂ ದೇವರಿಲ್ಲ. ಕರ್ನಾಟಕದಲ್ಲಿ ಸಾಧು ಸಂತರು ಮಾತ್ರ ಇದ್ದಾರೆ. ದೇವರು ಇರುವುದೆಲ್ಲ ತಮಿಳುನಾಡಿನಲ್ಲಿ. ಅಲ್ಲಿನ ಧರ್ಮಕ್ಷೇತ್ರಗಳಲ್ಲಿ. ಹಾಗಾಗಿ ನಾನು ತಮಿಳುನಾಡಿನ ದೇವಸ್ಥಾನಗಳಿಗೆ ಹೋಗುವಂತೆ ಭಕ್ತರಿಗೆ ಹೇಳುತ್ತೇನೆ.

೩. ಹೆಣ್ಣು ಮಕ್ಕಳು ನೈಟಿ ತೊಡಬಾರದು. ಸಲ್ವಾರ್ ಕಮೀಜ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ರಾತ್ರಿ ಗಂಡನ ಜತೆ ಮಲಗಿ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು. ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಲಕ್ಷಣ. ಅಗಲವಾದ ಬಿಂದಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಬೂಬಮ್ಮಗಳ ಹಾಗೆ ಕಾಣುತ್ತೀರಿ. (ಬೂಬಮ್ಮ ಎಂದರೆ ಮುಸ್ಲಿಂ ಹೆಂಗಸು)

೪. ಬೆಳಿಗ್ಗೆ ಎದ್ದ ಕೂಡಲೇ ಪೊರಕೆಯನ್ನು, ಹಜಾಮರ ಮುಖವನ್ನು ನೋಡಬಾರದು. ನೋಡಿದರೆ ಕೆಟ್ಟದಾಗುತ್ತದೆ.

೫. ಇಡೀ ಜಗತ್ತು ಮುಳುಗಿ ಹೋಗುತ್ತದೆ, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿದುಕೊಳ್ಳುತ್ತದೆ. ಪಾಪಿಗಳು ಮಾಡಿದ ತಪ್ಪಿಗಾಗಿ ಪಾಪಿಗಳಲ್ಲದವರೂ ನಾಶವಾಗುತ್ತಾರೆ.

೬. ಹಾವು ಎಂದರೆ ದೇವರು. ಜಪಾನ್ ದೇಶದವರು ಹಾವು ತಿನ್ನುತ್ತಾರೆ, ಅದಕ್ಕೆ ಸುನಾಮಿ ಬಂದಿದ್ದು.

ಇವು ಕೆಲವು ಸ್ಯಾಂಪಲ್‌ಗಳು ಮಾತ್ರ. ಈತನ ಇನ್ನಷ್ಟು ಭಯಾನಕ ಉಪದೇಶಗಳ ಕುರಿತು ಈ ಹಿಂದೆ ಇದೇ ಬ್ಲಾಗ್ ನಲ್ಲಿ ಪ್ರಸ್ತಾಪಿಸಿದ್ದೇವೆ. ಒಮ್ಮೆ ಓದಿ ನೋಡಲು ವಿನಂತಿ.  ಈ ಬಗೆಯ ದುರ್ಬೋಧನೆಗಳನ್ನು ನೀಚಾತಿನೀಚರಷ್ಟೆ ಸಮರ್ಥಿಸಿಕೊಳ್ಳಬಹುದು. ಹೀಗಾಗಿ ನೀವು ಇವುಗಳನ್ನೆಲ್ಲ ಒಪ್ಪಲಾರಿರಿ ಎಂದು ನಮ್ಮ ನಂಬಿಕೆ. ನರೇಂದ್ರ ಶರ್ಮ ಬಳಸುವ ಭಾಷೆ ಎಷ್ಟು ಕೊಳಕಾಗಿದೆಯೆಂದರೆ ಆತ ಪದೇಪದೇ ಮುಂಡೇವು, ಮುಂಡೆ (ಗಂಡ ಸತ್ತ ಹೆಂಗಸು), ಕಳ್ ನನ್ ಮಕ್ಕಳು, ಗೂಬೆ, ಗುಗ್ಗು, ದರಿದ್ರದವು.. ಇತ್ಯಾದಿ ಪದಗಳನ್ನೇ ಬಳಸುತ್ತಾರೆ. ವೇದೋಪನಿಷತ್ತುಗಳನ್ನು ಓದಿದ ವ್ಯಕ್ತಿ ಇಷ್ಟು ಅಸಭ್ಯವಾದ ಭಾಷೆಯಲ್ಲಿ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವೇ?

ಕಪಟ ಜ್ಯೋತಿಷಿಗಳು ಹರಡುವ ಮೂಢನಂಬಿಕೆಗಳ ಕುರಿತು ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದರು:

 ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ….. ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು….. ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ…. ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.

ಇವತ್ತು ನಿಮ್ಮ ಚಾನಲ್ ಮೂಲಕ ನರೇಂದ್ರ ಶರ್ಮ ಅವರು ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಯತ್ನಿಸುತ್ತಿದ್ದಾರೆ. ಅಮೆರಿಕದ ಕೆಲವು ಸ್ವತಂತ್ರ ಕ್ರಿಶ್ಚಿಯನ್ ಗುಂಪುಗಳು ಹರಡುತ್ತಿರುವ ಪ್ರಳಯದ ಥಿಯರಿಗಳನ್ನೇ (http://www.coffetoday.com/the-doomsday-is-on-may-21-2011/907618/
http://www.ebiblefellowship.com/may21/
http://en.wikipedia.org/wiki/Harold_Camping
http://www.allvoices.com/contributed-news/8599025-worlds-doomsday-fixed-for-6-pm-on-21st-may-2011)  ಕದ್ದು ತಂದು, ಅವುಗಳನ್ನು ಜಗನ್ಮಾತೆಯ ಹೆಸರಿನಲ್ಲಿ ಬದಲಾಯಿಸಿ, ಈ ವರ್ಷವೇ ಪ್ರಳಯವಾಗುತ್ತದೆ ಎಂದು ಭೀತಿ ಸೃಷ್ಟಿಸುತ್ತಿದ್ದಾರೆ. ಪ್ರಳಯವನ್ನು ತಪ್ಪಿಸಲು ಸಾಧ್ಯವಿರುವುದು ನನಗೆ ಮಾತ್ರ, ಹೀಗಾಗಿ ನಾನು ಹೇಳಿದಂತೆ ಕೇಳಿ ಎಂದು ಜನರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.ಹಿಂದೆ ಕಸ್ತೂರಿ ವಾಹಿನಿಯಲ್ಲಿದ್ದಾಗ ಸಹ ಲೋಕ ಕಲ್ಯಾಣ, ಇತ್ಯಾದಿ ಬೊಗಳೆ  ಮಾತುಗಳನ್ನು ಹೇಳಿ ಅರಮನೆ ಮೈದಾನದಲ್ಲಿ ದೊಡ್ಡ ಯಾಗವೊಂದನ್ನು ನಡೆಸಿದ ನರೇಂದ್ರ ಶರ್ಮ ಅವರು ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಮುಗ್ಧ, ಅಮಾಯಕ ಜನಸಾಮಾನ್ಯರಿಂದ ಪಡೆದಿದ್ದರು. ಎಷ್ಟು ಹಣ ಪಡೆದಿದ್ದೀರಿ, ಸ್ವಲ್ಪ ಲೆಕ್ಕ ಕೊಡಿ ಎಂದು ಪತ್ರಕರ್ತರು ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದಾಗ ನರೇಂದ್ರ ಶರ್ಮ ಗೋಷ್ಠಿಯನ್ನೇ ನಿಲ್ಲಿಸಿ ಹೊರಟುಹೋಗಿದ್ದರು. ನರೇಂದ್ರ ಶರ್ಮ ಅವರು ಸಾರ್ವಜನಿಕರ ದೇಣಿಗೆ ಪಡೆಯಲೆಂದೇ ಎರಡು ಟ್ರಸ್ಟ್‌ಗಳನ್ನು ರಚಿಸಿಕೊಂಡಿದ್ದಾರೆ. ಈ ಟ್ರಸ್ಟ್‌ಗಳಿಗೂ ನಿಮ್ಮ ಚಾನಲ್‌ಗಳಿಗೂ ಯಾವ ಸಂಬಂಧವಿರುವುದಿಲ್ಲ. ಪ್ರಚಾರಕ್ಕೆ ನಿಮ್ಮ ಚಾನಲ್‌ಗಳು, ಹಣ ವಸೂಲಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಟ್ರಸ್ಟ್‌ಗಳು! ಈ ದುರ್ ವ್ಯವಹಾರ ನಿಲ್ಲಿಸಲು ನೀವು ಹೇಳಿದರೆ, ಅವರು ಚಾನಲ್ ಬದಲಾಯಿಸುತ್ತಾರೆ.  ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ, ಬೃಹತ್ ಬ್ರಹ್ಮಾಂಡ ಆಯಿತು, ಇನ್ನು ಸೂಪರ್ ಬ್ರಹ್ಮಾಂಡ ಸೃಷ್ಟಿಯಾಗಬಹುದು ಅಷ್ಟೆ.ಇಂಥ ಕಾರ್ಯಕ್ರಮ ಬೇಕೆ ಎಂದು ನೀವು ಯೋಚಿಸಲೇಬೇಕಾದ ಸಮಯವಿದು. ನಿಜ, ಈ ಕಾರ್ಯಕ್ರಮದಿಂದ ನಿಮಗೆ ಟಿಆರ್‌ಪಿ ಹೆಚ್ಚಾಗಿರಬಹುದು. ಆದರೆ ಜನ ಹೆಚ್ಚು ನೋಡುತ್ತಾರೆ ಎಂಬ ಕಾರಣಕ್ಕೆ ಅದು ಶ್ರೇಷ್ಠವಾದ ಕಾರ್ಯಕ್ರಮ ಎಂದು ಭಾವಿಸುವುದು ಮೂರ್ಖತನ. ಬೀದಿಯಲ್ಲಿ ಒಬ್ಬ ಹುಚ್ಚ ವಿಚಿತ್ರವಾಗಿ ಮಾತನಾಡುತ್ತ, ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದರೆ ಆತನನ್ನು ಎಲ್ಲರೂ ನೋಡುತ್ತಾರೆ. ಮಾಮೂಲಿಯಂತೆ ಓಡಾಡುವ ನಮ್ಮ, ನಿಮ್ಮನ್ನು ಯಾರೂ ಗಮನಿಸುವುದಿಲ್ಲ. ಎಲ್ಲರೂ ನೋಡುತ್ತಾರೆ ಅನ್ನುವ ಕಾರಣಕ್ಕೆ ಬೆತ್ತಲೆ ಹುಚ್ಚನನ್ನು ಪ್ರೋತ್ಸಾಹಿಸುವುದು ಸರಿಯೇ? ಬೆತ್ತಲೆ ಓಡಾಡುವ ಹುಚ್ಚನಿಗೆ ಬಟ್ಟೆ ಕೊಡಿಸಿ, ಯಾವುದಾದರೂ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕೇ ಹೊರತು, ಹುಚ್ಚನೇ ಶ್ರೇಷ್ಠ ಎಂದು ಭಾವಿಸಬೇಕಾಗಿಲ್ಲ. ಒಬ್ಬ ಹುಚ್ಚನನ್ನು ಸಹಿಸಿಕೊಂಡ ಪರಿಣಾಮ ಈಗ ಬೀದಿ ತುಂಬ ಹುಚ್ಚರು ಸೇರಿಬಿಡುತ್ತಾರೆ. ಆ ಅಪಾಯವನ್ನೂ ನಾವು ಎದುರಿಸುತ್ತಿದ್ದೇವೆ.ಇದೆಲ್ಲವನ್ನೂ ಗಮನಿಸಿ ತಾವು ದಯಮಾಡಿ ನರೇಂದ್ರ ಶರ್ಮ ಅವರ ಬ್ರಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಈಗಿಂದೀಗಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಕಾರ್ಯಕ್ರಮ ಅನೈತಿಕ, ಅಪ್ರಜಾಸತ್ತಾತ್ಮಕ, ಮಾನವ ವಿರೋಧಿಯಾಗಿದೆ.

ಇದನ್ನು ನಾವು ನಿಮ್ಮ ಬೇಡಿಕೆ ಎಂದು ಹೇಳುತ್ತಿಲ್ಲ, ಆಗ್ರಹ ಎಂದೇ ಹೇಳುತ್ತಿದ್ದೇವೆ. ಯಾಕೆಂದರೆ ಇದು ಕಾನೂನು ಪ್ರಕಾರವೂ ಅಪರಾಧ. ನೀವು ಹಾಗು ನರೇಂದ್ರ ಶರ್ಮ ಸರ್ಕಾರ ರಚಿಸಿರುವ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ.

ನಿಮಗೆ ಚೆನ್ನಾಗಿ ಗೊತ್ತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ನೀವು ತಪ್ಪದೇ ಪಾಲಿಸಬೇಕು. ಮಾರ್ಗಸೂಚಿಗಳನ್ನು ಅಲಕ್ಷ್ಯ ಮಾಡಿದ ಎಂಟಿವಿ, ಟಿವಿ೫ ಮುಂತಾದ ಚಾನಲ್‌ಗಳನ್ನು ಶಿಕ್ಷಿಸಲಾಗಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಒಟ್ಟು ೧೩ ವಿವಿಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ತಮಗೆ ಕಾನೂನಿನ ಹೊಣೆಗಾರಿಕೆಯೂ ಇದೆ. ಅವುಗಳನ್ನು ನಿಮಗೆ ನೆನಪಿಸಲು ಯತ್ನಿಸುತ್ತೇವೆ.

ಕಾಯ್ದೆಗಳು ಹೀಗಿವೆ.

1. Cable Television Network (Regulation) Act, 1995 and Certification Rules there under.
2. Drugs and Cosmetics Act, 1940.
3. Emblems and Names (Prevention of Improper Use) Act, 1950.
4. Drugs (Control) Act 1950.
5. Drugs and Magic Remedies (Objectionable Advertisements) Act, 1954.
6. Prevention of Food & Adulteration Act, 1954.
7. Prize Competitions Act, 1955.
8. Indecent Representation of Women (Prohibition) Act, 1986.
9. Trade and Merchandise Marks, Act 1999.
10. Copyright Act, 1957.
11. Cigarette and other Tobacco Products Act 2003.
12. Consumer Protection Act, 1986.
13. The Prevention of Cruelty to Animals Act, 1960

ಪ್ರಸಾರ ವೇಳೆ ಕಾನೂನು ಉಲ್ಲಂಘನೆಯನ್ನು ಮೂರು ಹಂತದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಮೂರನೆ ಹಂತದಲ್ಲಿ ಸರಕಾರ ನೇಮಿಸಿದ ಸಮಿತಿ ಚಾನೆಲ್ ಮುಖ್ಯಸ್ಥ ತಪ್ಪಿತಸ್ಥ ಎಂದು ಕಂಡುಬಂದರೆ, ಪ್ರಸ್ತುತ ಕಾರ್ಯಕ್ರಮವನ್ನು ಪ್ರಸರಣ ಮಾಡದಂತೆ ನಿರ್ದೇಶಿಸಬಹುದು, ಕ್ಷಮಾಪಣೆಯನ್ನು ಬಿತ್ತರಿಸುವಂತೆ ಹೇಳಬಹುದು ಹಾಗೂ ದಂಡ ವಿದಿಸಬಹುದು. ಈ ಪ್ರಕ್ರಿಯೆಗೆ ದೂರು ದಾಖಲಿಸುವುದು ಮುಖ್ಯ.ಮಾರ್ಗಸೂಚಿ ಸ್ಪಷ್ಟ ಮಾತುಗಳಲ್ಲಿ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ ಭಾಷೆ, ಜಾತಿ ನಿಂದನೆ, ಮೂಢನಂಬಿಕೆ ವೈಭವೀಕರಣ ಹಾಗೂ ಜನರನ್ನು ದಿಕ್ಕುತಪ್ಪಿಸುವುದನ್ನು ಖಂಡಿಸುತ್ತದೆ.

ಕಂಟೆಂಟ್ ಸರ್ಟಿಫಿಕೇಷನ್ ನಿಯಮಾವಳಿ ೨೦೦೮ ಪ್ರಕಾರ ಯಾವುದೇ ನಿರ್ದಿಷ್ಟ ಜಾತಿ, ಕೋಮು ಅಥವಾ ನಂಬಿಕೆ ವಿರುದ್ಧ ಮಾತನಾಡುವುದು ಅಪರಾಧ. ಜೊತೆಗೆ ಯಾವುದೇ ಒಂದು ಆಚರಣೆಯನ್ನು ಶ್ರೇಷ್ಠ ಅಥವಾ ಕನಿಷ್ಟ ಎಂದು ಬಿಂಬಿಸುವಂತಿಲ್ಲ. ಹಾಗೆಯೇ ಲಿಂಗ ಅಸಮಾನತೆಯನ್ನು ಹೇಳುವಂತಿಲ್ಲ.

ನಿಮ್ಮ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ಈ ಎಲ್ಲ ಕಾಯ್ದೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ. ಈ ಕಾರ್ಯಕ್ರಮ ಸ್ತ್ರೀಯರನ್ನು ಕೆಟ್ಟದಾಗಿ ಚಿತ್ರಿಸುತ್ತದೆ. ಹಜಾಮರನ್ನು ನೋಡಬಾರದು ಎನ್ನುವ ಮೂಲಕ ಅಸ್ಪೃಶ್ಯತೆಯನ್ನು ಪ್ರಚಾರ ಮಾಡುತ್ತಿದೆ. ಜನರಲ್ಲಿ ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿದೆ. ಮಾಂಸಾಹಾರಿಗಳನ್ನು ಈತ ಕೀಳಾಗಿ ನಿಂದಿಸುವ ಮೂಲಕ ಜನಾಂಗೀಯ ನಿಂದನೆಯನ್ನು ಈ ಕಾರ್ಯಕ್ರಮ ಪೋಷಿಸುತ್ತಿದೆ.

ಭಾರತದ ಸಂವಿಧಾನವು ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು ಎನ್ನುತ್ತದೆ. ಆಧುನಿಕ ಕಾಲಘಟ್ಟದಲ್ಲಿ ನಾವು ಇನ್ನೂ ಕಂದಾಚಾರಗಳ ನರಕದಲ್ಲೇ ಕೊಳೆಯುತ್ತಿದ್ದೇವೆ. ಈ ಕೆಟ್ಟ ಬೆಳವಣಿಗೆಯನ್ನು ಟಿವಿ ಚಾನಲ್ ಗಳು ನಿರಂತರವಾಗಿ ಪೋಷಿಸುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಚಾನಲ್ ಸೇರಿದಂತೆ ಎಲ್ಲ ಚಾನಲ್ ಗಳು ಟಿಆರ್ಪಿ ಆಸೆಗೆ ಬಲಿಬೀಳದೆ ಕಾಲದ ಅಗತ್ಯಕ್ಕೆ ತಕ್ಕಂಥ, ಮನುಷ್ಯರನ್ನು ಎಲ್ಲ ಮೌಢ್ಯಗಳಿಂದ ಬಿಡುಗಡೆಗೊಳಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಅಗತ್ಯವಿದೆ.

ಈ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕೆಂದು ಮತ್ತೊಮ್ಮೆ ಆಗ್ರಹಪಡಿಸುತ್ತೇವೆ. ಒಂದು ವೇಳೆ ನಿಲ್ಲಿಸದೇ ಹೋದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರು ಸಲ್ಲಿಸುವುದೂ ಸೇರಿದಂತೆ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಧನ್ಯವಾದಗಳು.

ಓದುಗರಿಗೊಂದು ಮನವಿ: ದಯಮಾಡಿ ಈ ಪತ್ರದ ಧಾಟಿಯ ಪತ್ರಗಳನ್ನು ಅಥವಾ ಇದೇ ಪತ್ರವನ್ನು ನಿಮ್ಮ ಐಡಿಗಳಿಂದ  ಈ feedbackzeekannada@zeenetwork.com  ಇಮೇಲ್ ಅಥವಾ ಜೀ ಕನ್ನಡ, ನಂ.೩೯, ಯುನೈಟೆಡ್ ಮ್ಯಾನ್ಷನ್, ಮೂರನೇ ಮಹಡಿ, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕಾಗಿ ವಿನಂತಿ. ಸಾಧ್ಯವಾಗುವುದಾದರೆ ಈ ಅಭಿಯಾನವನ್ನು ಬೆಂಬಲಿಸುವ ಬ್ಲಾಗರ್‌ಗಳು ಈ ಪತ್ರವನ್ನು ಯಥಾವತ್ತಾಗಿ ತಮ್ಮ ಬ್ಲಾಗ್‌ಗಳಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ. ಹಾಗೆಯೇ ಇದನ್ನು ಫೇಸ್‌ಬುಕ್ ಹಾಗು ಇತರ ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ಶೇರ್ ಮಾಡಲು ವಿನಂತಿಸುತ್ತೇವೆ.

 
 

ಮೌನವೇ ರೂಢಿಯಾದರೆ…?!

20 ಏಪ್ರಿಲ್ 11

 

“ಸಖೀ,
ನೀನು
ಎಲ್ಲಿಯತನಕ
ಮೌನಿಯಾಗಿರಲು
ಬಯಸುವೆಯೋ
ಅಲ್ಲಿಯತನಕ
ನಾನು ನಿನ್ನನ್ನು
ಮಾತನಾಡಿಸಲಾರೆ,

ಆದರೂ,
ನಿನ್ನ ಮೌನಕ್ಕೆ
ಕಾರಣವೇನೆಂದು
ಒಮ್ಮೆಯಾದರೂ
ಮೌನ ಮುರಿದು
ಹೇಳಿಬಿಡು ಬಾರೆ”

“ಗೆಳೆಯಾ,
ಈ ಮೌನ
ಕೋಪದಿಂದಲ್ಲ,
ಮಾತು
ಮನ ಕೆಡಿಸಿತು,
ಮೌನ
ಮನ ಗೆದ್ದಿತು,
ಅದ್ಯಾಕೋ
ಇಂದು
ಮೌನವೇ
ಮಾತಿಗಿಂತ
ಪರಿಶುದ್ಧವೆನಿಸಿತು”

“ಮಾತಿನಿಂದ
ಕೆಡುವುದಕ್ಕೆ
ಮನವೇನು
ಕರೆದು
ತೆರೆದಿಟ್ಟ
ಹಾಲಲ್ಲವಲ್ಲಾ?
ಮಾತುಗಳು
ಎಂತಿದ್ದರೇನು
ಶುದ್ಧವಾದ
ಮನವದು
ಕೆಡಬಾರದಲ್ಲಾ?

ಮೌನ
ಶುದ್ಧವೆಂಬ
ಮಾತು ಸುಳ್ಳಲ್ಲ,
ಆದರೂ
ಸಂವಾದವಿಲ್ಲದೇ
ಬರಿಯ ಮೌನ
ಅದೆಷ್ಟು ಪರಿಶುದ್ಧ
ಆಗಿದ್ದರೇನು?

ಅಲ್ಲದೇ,
ಈ ಮೌನ
ಹೀಗೆಯೇ
ನಮ್ಮಿಬ್ಬರಿಗೂ
ರೂಢಿಯಾಗಿ
ಬಿಟ್ಟರೆ
ನಿಜಹೇಳು
ನಾವು ಸಹಿಸ
ಬಲ್ಲೆವೇನು?!”
**********

 


ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ

18 ಏಪ್ರಿಲ್ 11

 

ಮುಂಜಾನೆ ಗಂಟೆ ಏಳೂಕಾಲು. ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಮಗು ಇನ್ನೂ ಸುಖ ನಿದ್ದೆಯಲ್ಲಿದೆ. ತಾಯಿ ಹೋಗಿ ಮಗನನ್ನು ಎಬ್ಬಿಸುತ್ತಾಳೆ. “ಏಳು ಮಗಾ, ಶಾಲೆಗೆ ಹೋಗ್ಬೇಕು, ತಡ ಮಾಡಿದ್ರೆ ಶಾಲೆಯ ಬಸ್ಸು ಹೋಗಿ ಬಿಡುತ್ತದೆ, ಬೇಗ ಏಳು… ಬೇಗ ಏಳು”. ಮಗ ಏಳುವ ಲಕ್ಷಣವೇ ಕಾಣುತ್ತಿಲ್ಲ. ತಾಯಿ ಮೆಲ್ಲಗೇ ಆತನ ಕಿವಿಯಲ್ಲಿ ಉಸುರುತ್ತಾಳೆ, “ನಿನಗೆ ಇಷ್ಟವಾದ ತಿಂಡಿ ಮಾಡಿದ್ದೇನೆ. ಜೊತೆಗೆ ಎರಡು ಚಾಕಲೇಟು ಕೂಡ ಕೊಡ್ತೇನೆ. ಜಾಣ ಮರಿ ಬೇಗ ಏಳು”. ಚಾಕಲೇಟಿನ ಹೆಸರು ಕಿವಿಗೆ ಬೀಳುತ್ತಲೇ ಮಗನ ಮುಖದಲ್ಲಿ ನಸು ನಗು. ಕೂಡಲೇ ಎದ್ದು ಕುಳಿತು, “ಮೊದಲು ಚಾಕಲೇಟು ಕೊಡು, ಆಮೇಲೆ ಬರ್ತೇನೆ” ಅಂತಾನೆ. ತಾಯಿ ಕೂಡಲೇ ಚಾಕಲೇಟುಗಳನ್ನು ನೀಡ್ತಾಳೆ. ಮಗ ಎದ್ದು ಬೇಗ ಬೇಗನೇ ಪ್ರಾತಃವಿಧಿಗಳನ್ನು ಪೂರೈಸಿ ಶಾಲೆಗೆ ಶಾಲಾ ವಾಹನದಲ್ಲಿಯೇ ಹೋಗುತ್ತಾನೆ.

ಸಾಯಂಕಾಲ ಶಾಲೆಯಿಂದ ಮರಳುವ ಮಗ, ಶಾಲೆಯಲ್ಲಿ ಹೇಳಿರುವ ಮನೆಗೆಲಸಗಳನ್ನು ಮಾಡಲು ಉದಾಸೀನ ತೋರಿದಾಗ ಮತ್ತೆ ಅದೇ ತಾಯಿ, “ಹಣ್ಣಿನ ರಸ ಕೊಡುತ್ತೇನೆ, ತಂಪು ಪಾನೀಯ ಕೊಡ್ತೇನೆ, ಬಾ ಏನೆಲ್ಲಾ ಮನೆಗೆಲಸ ಕೊಟ್ಟಿದ್ದಾರೋ ಎಲ್ಲಾ ಮಾಡಿ ಮುಗಿಸು” ಅಂತಾಳೆ. ಮಗ ನಗುನಗುತ್ತಾ ಒಪ್ಪಿಕೊಳ್ತಾನೆ. ಹಾಗಲ್ಲವಾದರೆ, ಒಮ್ಮೊಮ್ಮೆ ಆ ತಾಯಿಯೇ ತನ್ನ ಮಗನ ಮನೆಗೆಲಸಗಳನ್ನೆಲ್ಲಾ ಮಾಡಿಮುಗಿಸಿ ಕೊಟ್ಟುಬಿಡುತ್ತಾಳೆ.

ಇದು ಒಂದು ಮನೆಯ ಕಥೆಯಲ್ಲ, ಒಂದು ದಿನದ ಕಥೆಯೂ ಅಲ್ಲ. ಇದು ಹೆಚ್ಚಿನ ಎಲ್ಲಾ ಮನೆಗಳಲ್ಲೂ ಹೆಚ್ಚಿನೆಲ್ಲಾ ದಿನಗಳಲ್ಲೂ ನಡೆಯುವ ಕಥೆ. ಅಲ್ಲದೆ, ಇದು ಮನೆಯೊಳಗಿನ ಭ್ರಷ್ಟಾಚಾರದ ಒಂದು ನಿದರ್ಶನ ಅಷ್ಟೇ.

ಸಾಮಾನ್ಯವಾಗಿ ಗಮನಿಸಿದಾಗ ನಮಗೆ ಇದರಿಂದೇನೂ ಅನಿಸದು. ತೀರ ಸಾಮಾನ್ಯ ವಿಷಯವಾಗಿಯೇ ಕಂಡುಬರುವುದು. ಆದರೆ ವಿಮರ್ಶಾತ್ಮಕವಾಗಿ ನೋಡಿದಾಗ, ನಮಗೆ ಕಂಡುಬರುವುದೇ ಬೇರೆ. ಪುಟ್ಟ ಪುಟ್ಟ ಮಕ್ಕಳಿಗೆ ಲಂಚ ತಿನ್ನುವ ಅಭ್ಯಾಸವನ್ನು ನಾವು ಆಗಲೇ ಕಲಿಸಿಯಾಗಿರುತ್ತದೆ. ಇನ್ನು ಮಕ್ಕಳ ವಯಸ್ಸು ಬದಲಾಗುತ್ತಾ ಹೋದಂತೆ, ಮಕ್ಕಳಿಗೆ ನೀಡುವ ಲಂಚವೂ ಬದಲಾಗುತ್ತಾ ಹೋಗುತ್ತದೆ.  ಆ ಅಭ್ಯಾಸ ಕಾಲ ಕಳೆದಂತೆ ಬೆಳೆಯುತ್ತಾ ಹೋಗುತ್ತದೆ. ಇಂದು ಗಿಡನೆಟ್ಟು ಪೋಷಿಸುವ ನಾವು, ನಾಳೆ ಆ ಮರಗಳ ಕೊಂಬೆಗಳನ್ನು ಎಷ್ಟೇ ಕಡಿದರೂ, ಅದರ ಬೇರನ್ನು ಕಿತ್ತೊಗೆಯಲು ನಮ್ಮಿಂದ ಸಾಧ್ಯವಾಗುವುದಿಲ್ಲ.

ನಾವು ನಮ್ಮ ಮಕ್ಕಳಿಗೆ, ನಮ್ಮ ಕಿರಿಯರಿಗೆ, ಮಾರ್ಗದರ್ಶಕರಾಗಬೇಕು. ಅವರ ಕೆಲಸಗಳಿಗೆ ನಾವೇ ಬದಲೀ ವ್ಯವಸ್ಥೆಯಾಗಿ ಮಾರ್ಪಡಬಾರದು. ಅವರ ಕೆಲಸಗಳನ್ನು ಅವರೇ ಮಾಡುವಂತೆ ಸದಾ ಹುರಿದುಂಬಿಸಬೇಕು. ಸಮಯ ಪಾಲನೆಯ ಬಗ್ಗೆ, ಕರ್ತವ್ಯ ನಿಷ್ಠೆಯ ಬಗ್ಗೆ ಸರಿಯಾದ ಅರಿವು ಮೂಡಿಸಬೇಕು. ಇವುಗಳಿಂದ ದೂರವುಳಿದಾಗ ಅವರಿಗೆ ಬಾಳಿನಲ್ಲಿ ಆಗುವ ನಷ್ಟದ ಅರಿವು ಅವರಿಗೆ ಮನದಟ್ಟಾಗುವಂತೆ ವಿವರಿಸಬೇಕು. ಅವರ ವಿದ್ಯಾಭ್ಯಾಸವೋ, ಜೀವನವೋ, ಇನ್ನೊಂದೋ ಅದೇನೇ ಇದ್ದರೂ ಅದು ಅವರಿಗಾಗಿ, ನಮಗಾಗಿ ಅಲ್ಲ. ಮಾತಾಪಿತರಿಗಾಗಿ ಅಲ್ಲ. ಅವರು ಅವುಗಳಿಂದ ವಿಮುಖರಾದರೆ ಮಾತಾಪಿತರಿಗಾಗುವ ನೋವಿಗಿಂತಲೂ, ಅಧಿಕವಾಗಿ ಅವರಿಗೇ ನಷ್ಟವಾಗುತ್ತದೆ, ನೋವುಂಟಾಗುತ್ತದೆ, ಸೋಲುಂಟಾಗುತ್ತದೆ ಎನ್ನುವುದನ್ನು ಚಿಕ್ಕಂದಿನಲ್ಲೇ ಮನದಟ್ಟು ಮಾಡಿಕೊಡಬೇಕು. ಇದರಿಂದ ಮಕ್ಕಳು ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳುವತ್ತ ಮಾರ್ಗದರ್ಶನ ನೀಡಿದಂತಾಗುತ್ತದೆ ಅಲ್ಲದೆ, ಅವರು ಭ್ರಷ್ಟರಾಗದಂತೆ ತಡೆದಂತೆಯೂ ಆಗುತ್ತದೆ.

ಲಂಚ ಪಡೆಯುವುದನ್ನಷ್ಟೇ ಭ್ರಷ್ಟಾಚಾರ ಎನ್ನಲಾಗದು. ಓರ್ವ ವ್ಯಕ್ತಿ ತನ್ನ ವಯಸ್ಸು, ವೃತ್ತಿ ಮತ್ತು ಸ್ಥಾನಕ್ಕೆ ಸರಿಯಾದ ನೈತಿಕ ಕರ್ತವ್ಯದಿಂದ ವಿಮುಖನಾದರೆ, ತನ್ನ ವೃತ್ತಿ ಧರ್ಮ, ಸ್ಥಾನ ಧರ್ಮ ಅಥವಾ ವಯಸ್ಸಿನ ಧರ್ಮಕ್ಕೆ ವಿರುದ್ಧವಾದ ಯಾವುದೇ ಕೆಲಸ ಮಾಡಿದನಾದರೂ ಆತ ಭ್ರಷ್ಟನೆನಿಸಿಕೊಳ್ಳುತ್ತಾನೆ. ಈ ದೃಷ್ಟಿಕೋನದಿಂದ ನೋಡುವಾಗ ಪ್ರತಿಯೊಂದು ಮನೆಯಲ್ಲೂ ಪ್ರತಿಯೊಂದು ಮನದಲ್ಲೂ ಭ್ರಷ್ಟಾಚಾರ ಮನೆ ಮಾಡಿದೆ ಎನ್ನುವುದರ ಅರಿವು ನಮಗಾಗುತ್ತದೆ.

ಹಾಗಾಗಿ ನಮ್ಮೆಲ್ಲರ ಮನ ಮನೆಗಳಿಂದ ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೊಗೆಯಲು ನಾವೆಲ್ಲರೂ ಪಣತೊಡಬೇಕಾಗಿದೆ.. ಈ ಪ್ರಸ್ತುತ ಜನಾಂಗಕ್ಕಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಗಾಗಿಯಾದರೂ ಒಂದು ಭ್ರಷ್ಟಾಚಾರ ಮುಕ್ತ ಸುಂದರ ಸಮಾಜವನ್ನು ಬಿಟ್ಟುಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ.

ನಮ್ಮೆಲ್ಲರ ಮನಗಳಲ್ಲೂ ಈ ಭ್ರಷ್ಟಾಚಾರದ ವಿರುದ್ಧ ಸಮರ ಸಾರಬೇಕೆಂಬ ಇಚ್ಛೆ ಇದ್ದೇ ಇದೆ.  ಏಕೆಂದರೆ ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಭ್ರಷ್ಟಾಚಾರದ ಪಿಡುಗಿಗೆ ಬಲಿಯಾದವರೇ. ಬಿಡುವಿಲ್ಲದ ದಿನಚರಿಯ ನಡುವೆ ಸಮಯದ ಅಭಾವದಿಂದಾಗಿಯೋ, ನೈತಿಕ ಬೆಂಬಲದ ಕೊರತೆಯಿಂದಾಗಿಯೋ, ಹೋರಾಡುವ ಚೈತನ್ಯ ಮತ್ತು ಶಕ್ತಿಯ ಕೊರತೆಯಿಂದಾಗಿಯೋ, ಒಲ್ಲದ ಮನಸ್ಸಿನಿಂದ, ನಮ್ಮ ಸಿಟ್ಟನ್ನು ಅಸಹಾಯಕರಾಗಿ ಒಳಗೊಳಗೇ ನುಂಗಿಕೊಳ್ಳುತ್ತಾ  ಭ್ರಷ್ಟಾಚಾರವನ್ನು ಸಹಿಸುತ್ತಾ ಬಂದಿದ್ದೇವೆ. ಅಥವಾ ಭ್ರಷ್ಟಾಚಾರದಲ್ಲಿ ನಾವೂ ಪಾಲುದಾರರಾಗಿದ್ದೇವೆ.

ಇಂದು ದೂರದ ನಾಡಿನಲ್ಲಿ ಅಣ್ಣಾ ಹಜಾರೆ ಎನ್ನುವ ಅಪರಿಚಿತ ವ್ಯಕ್ತಿ ಸೆಟೆದು ನಿಂತಾಗ, ಯಾರೋ ನಮ್ಮ ಮನದ ಬೇಗುದಿಯನ್ನು ಹೊರಹಾಕಲು ನಮಗೆ ಸಹಾಯ ಮಾಡಲು ನಿಂತಂತೆ ಕಂಡು ಬರುತ್ತಾರೆ. ಹಾಗಾಗಿ, ನಾವು ನಮ್ಮ ಬೇಸತ್ತ ಅಸಹಾಯಕ ಮನದ ದುಗುಡಗಳನ್ನು, ಘೋಷಣೆಗಳ ಮೂಲಕ, ಚರವಾಣಿ ಸಂದೇಶಗಳ ಮೂಲಕ, “ಫೇಸ್ ಬುಕ್, ಟ್ವಿಟ್ಟರ್‍‍ಗಳಂತಹ” ಮಾಧ್ಯಮಗಳ ಮೂಲಕ ಹೊರಹಾಕಲು ಧೈರ್ಯತಾಳುತ್ತೇವೆ.  ನಮಗೆ ಆ ವ್ಯಕ್ತಿ ಅಷ್ಟೊಂದು  ಮುಖ್ಯವಾಗುವುದಿಲ್ಲ. ಆತನ ನಿಸ್ವಾರ್ಥ ಧೋರಣೆ ನಮಗೆ ಮುಖ್ಯವಾಗುತ್ತದೆ ಮತ್ತು ಆಪ್ತವಾಗುತ್ತದೆ. ಈ ದೇಶದ ಜನತೆಯಲ್ಲಿ ದೈರ್ಯ ತುಂಬಿ, ಜನತೆಯನ್ನು  ಮನ್ನಡೆಸಿಕೊಂಡು ಹೋಗಬಲ್ಲ ನಿಸ್ವಾರ್ಥಿ ನಾಯಕನೊಬ್ಬನ ಕೊರತೆಯನ್ನು ನೀಗಿಸಬಲ್ಲ ವ್ಯಕ್ತಿ ಅದು ಯಾರೇ ಆದರೂ ಅವರು ಸ್ವಾಗತಾರ್ಹರೇ. ಈಗ ಅಣ್ಣಾ ಹಜಾರೆ ಆ ಕೊರತೆಯನ್ನು ನೀಗಿದ್ದಾರೆ. ಹಾಗಾಗಿ ಅವರು ಸ್ವಾಗತಾರ್ಹರು. ನಮ್ಮ ಸಂಪೂರ್ಣ ಬೆಂಬಲಕ್ಕೆ ಅರ್ಹರು, ಭಾಜನರು.

ಬಹುಶಃ ಮಹಾತ್ಮಾ ಗಾಂಧಿಯವರ ನಂತರ ಈ ದೇಶ ಕಂಡ ಪ್ರಥಮ ರಾಷ್ಟ್ರೀಯ ನಾಯಕ ಅಣ್ಣಾ ಹಜಾರೆ ಎಂದರೆ ಅತಿಶಯೋಕ್ತಿಯೆನಿಸದು. ೧೯೭೦ರ ದಶಕದ ಉತ್ತರಾರ್ಧದಲ್ಲಿ, ಆಗಿನ ಪ್ರದಾನಿ ದಿ. ಇಂದಿರಾ ಗಾಂಧಿಯವರು ದೇಶದಲ್ಲಿ  ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ ಸರ್ವಾಧಿಕಾರ ನಡೆಸಿದ್ದರು. ಆಗ ಆಕೆಯ  ವಿರುದ್ದ ಸಮರ ಸಾರಿದ್ದ ಜಯಪ್ರಕಾಶ್ ನಾರಾಯಣ್ ಕೂಡ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಷ್ಟೊಂದು ಸಫಲರಾಗಿರಲಿಲ್ಲ.  ಅವರ ನಾಯಕತ್ವ ಉತ್ತರ ಭಾರತದ ರಾಜ್ಯಗಳಿಗಷ್ಟೇ ಸೀಮಿತವಾಗಿ ಬಿಟ್ಟಿತ್ತು. ಮಾರ್ಚ್ ೧೯೭೭ರಲ್ಲಿ  ನಡೆದ ಮಹಾಚುನಾವಣೆಯಲ್ಲಿ ದಕ್ಷಿಣದ ರಾಜ್ಯಗಳಿಂದ ಕಾಂಗ್ರೇಸ್ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿಜಯ ಗಳಿಸಿದ್ದರು.

ಆದರೆ, ಈಗ ಪ್ರಕಟವಾಗಿರುವ ರಾಷ್ಟ್ರವ್ಯಾಪಿ ಬೆಂಬಲದಿಂದಾಗಿ ಇಂದು ಅಣ್ಣಾ ಹಜಾರೆಯವರಲ್ಲಿ ನಾವು ಓರ್ವ ರಾಷ್ಟನಾಯಕನನ್ನು ಕಾಣಲು ಸಾಧ್ಯವಾಗಿದೆ ಎಂದು ಅನಿಸುತ್ತಿದೆಯಾದರೆ ಅದರಲ್ಲಿ ತಪ್ಪೇನಿಲ್ಲ. ಇದುವರೆಗೆ ಇದ್ದ ರಾಷ್ಟ್ರೀಯ ನಾಯಕತ್ವದ ಕೊರತೆ ನೀಗಿದೆ ಎಂದು ನಮಗೀಗ ಅನಿಸುತ್ತಿದೆ. ಅಣ್ಣಾ ಹಜಾರೆಯವರು ಯಾವುದೇ ರಾಜಕೀಯ ಪಕ್ಷದತ್ತ ವಾಲದೇ, ಯಾವುದೇ ಪಟ್ಟ ಭದ್ರ ಹಿತಾಸಕ್ತಿಗಳ ಕೈವಶವಾಗದೇ, ತನ್ನ ಇಂದಿನ ಧೋರಣೆಗಳನ್ನೇ ಉಳಿಸಿಕೊಂಡು ಇದ್ದಷ್ಟು ದಿನ ನಾವು ಅವರನ್ನು ಕಣ್ಣು ಮುಚ್ಚಿಕೊಂಡು, ತುಂಬು ಮನದಿಂದ ಹಿಂಬಾಲಿಸಬಹುದು.

ಇನ್ನೇನು ಬೇಕು ನಮಗೆ? ಇನ್ನು ಕಾಯುವುದೇಕೆ? ಈ ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಎಲ್ಲರೂ ಒಂದಾಗಿ ಮುನ್ನಡೆಯೋಣ. ಮನೆ ಮನೆಯಲ್ಲೂ, ಮನ ಮನದಲ್ಲೂ, ಭ್ರಷ್ಟಾಚಾರ ವಿರೋಧೀ ಬೀಜವನ್ನು ಬಿತ್ತೋಣ ಮತ್ತು ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ,  ನೈತಿಕತೆಯ ನೀರು ಮತ್ತು ಧಾರ್ಮಿಕತೆಯ ಗೊಬ್ಬರ ನೀಡುತ್ತಾ ಪೋಷಿಸೋಣ. ನಮ್ಮ ಮುಂದಿನ ಪೀಳಿಗೆಗೆ ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಾಣಗೊಳಿಸೋಣ. ಬದಲಾವಣೆ ಕಾಣಬೇಕಾಗಿರುವ ಹತ್ತು ಹಲವು ಕ್ಷೇತ್ರಗಳಲ್ಲಿ, ನಿಧಾನವಾಗಿ ಬದಲಾವಣೆಗಳನ್ನು ತರೋಣ. ನಮ್ಮ ನಿಮ್ಮೆಲ್ಲರ ಬೆಂಬಲ ಇಲ್ಲದೇ ಅಣ್ಣಾ ಹಜಾರೆಯಂಥ ನಾಯಕರದೂ ಒಂಟಿ ದನಿಯಾದೀತು. ಅರಣ್ಯ ರೋದನವಾದೀತು. ಹಾಗಾಗಿ ನಾವೆಲ್ಲರೂ ಮನದೊಳಗಿನ ಸುಪ್ತ ಇಚ್ಛಾಶಕ್ತಿಯನ್ನು ಜಾಗೃತಗೊಳಿಸೋಣ.

ಬರಿಯ ಜನ ಲೋಕಪಾಲ ಮಸೊದೆಯೊಂದೇ ಸಾಧಿಸದು ಏನನ್ನೂ, ಪ್ರತಿ ಭಾರತೀಯನೂ ಮೆರೆಯದೇ ಇದ್ದರೆ ತನ್ನ ಇಚ್ಛಾಶಕ್ತಿಯನ್ನು.
*****

ಉದಯವಾಣಿಯ ಮಣಿಪಾಲ ಮತ್ತು ಮುಂಬಯಿ ಆವೃತ್ತಿಗಳಲ್ಲಿ ಶನಿವಾರ (೧೬ ಎಪ್ರಿಲ್ ೨೦೧೧) ದಂದು ಪ್ರಕಟವಾಗಿರುವ ಲೇಖನ! (ಅದನ್ನು ನೇರವಾಗಿ ವೀಕ್ಷಿಸಲು ಈ ಕೊಂಡಿಯನ್ನು ಬಳಸಿ)

ಇದೇ ಲೇಖನ ಈ ವಾರದ “ನಿರಂತರ ಕರ್ನಾಟಕ” ವಾರಪತ್ರಿಕೆಯಲ್ಲಿ ಹಾಗೂ ಉದಯವಾಣಿಯ ಬೆಂಗಳೂರು ಮತ್ತು ಹುಬ್ಬಳ್ಳಿ  ಆವೃತ್ತಿಗಳಲ್ಲಿ ಬುಧವಾರ, ೨೦ ಎಪ್ರಿಲ್ ೨೦೧೧ರಂದು ಪ್ರಕಟವಾಗಿದೆ.


ಕಾದಿಹೆವು ನೋಡು, ಬಾಬಾ ಸಾಹೇಬ!

14 ಏಪ್ರಿಲ್ 11

ಪ್ರತಿ ರಾಜಧಾನಿಯ
ಶಾಸನ ಭವನದ
ಮುಂದೆ ಕರಿಕೋಟು
ತೊಟ್ಟು, ಮಳೆ
ಬಿಸಿಲು ಚಳಿ ಗಾಳಿಗೆ
ಮೈಯೊಡ್ಡಿ ನಿಂತು
ನೀ ಕೈನೀಡಿ ತೋರುವ
ಅದ್ಯಾವುದೋ ದಾರಿಯತ್ತ,
ಅದ್ಯಾವುದೋ ದಾರಿಯಲ್ಲಿ
ಇಂದು ಎಲ್ಲೂ ಯಾರೂ
ಸಾಗುತ್ತಲೇ ಇಲ್ಲವಾದರೂ,
ನಿನ್ನ ಹೆಸರಿನಲ್ಲಿ ಪ್ರತಿ
ವರುಷದಲ್ಲೂ ಒಂದು
ದಿನದ ರಜೆಯನ್ನು
ಭರ್ಜರಿ ಮಜಾದಲ್ಲೇ
ಕಳೆಯುತ್ತಾರೆ ನೋಡು;

ನೀನು ಹುಟ್ಟಿ ಬೆಳೆದು,
ನಂತರ ತೊರೆದ ಜಾತಿಯ
ಬಾಂಧವರಿಗೆ ಏನು ಕಷ್ಟ
ಎದುರಾದಾಗಲೂ ಅದು
ನಿನಗಾದ ಅವಮಾನವೆಂದು
ಹೋರಾಡುತ್ತಾರೆ ನೋಡು;

ನೀನು ಶ್ರಮಪಟ್ಟು ತಯಾರಿಸಿ
ನಮಗೆ ನೀಡಿದ ಸಂವಿಧಾನಕ್ಕೆ
ಪ್ರತಿ ನಿಮಿಷವೂ ಅವಹೇಳನ
ಮಾಡುತ್ತಾ ಶಾಸನ ನಡೆಸುವ
ನಾಯಕರು ತಮ್ಮ ತಿಜೋರಿಯ
ತುಂಬಿಕೊಳ್ಳುವುದರಲ್ಲೇ ಸದಾ
ಮಗ್ನರಾಗಿ ಇರುತ್ತಾರೆ ನೋಡು;

ನೀನಾದರೋ ಪ್ರಬುದ್ಧನಾದೆ
ಬುದ್ಧನ ಅನುಯಾಯಿಯಾದೆ
ಇಲ್ಲಿನ ಜಂಜಾಟಗಳಿಂದ ಬಲು
ಬೇಗ ಅದೆಂತೋ ಮುಕ್ತನಾದೆ
ನನ್ನಂಥ ಅಪ್ರಬುದ್ಧರ ಪಾಡೇನು
ಅಸಹಾಯಕ ಒಳಕೂಗಿಗೇನು
ನಮ್ಮ ಸಮಸ್ಯೆಗಳಿಗೆ ನೀನೇ
ಹೇಳು ಇನ್ನು ಪರಿಹಾರವೇನು
ಎಲ್ಲದಕ್ಕೂ ದಿವ್ಯ ನಿರ್ಲಕ್ಷ್ಯವನೇ
ತೋರುತ್ತಾ ಬುದ್ಧನಂತಾಗುವುದೇ?
ಸಂಸಾರವನೇ ತೊರೆದು ಕಾವಿ
ತೊಟ್ಟು ವೈರಾಗಿಯಾಗುವುದೇ?
ಹೇಳು ಹೇಳು ನಿನ್ನ ಸಂದೇಶಕ್ಕಾಗಿ
ನಾನು ನನ್ನೊಂದಿಗೆ ನನ್ನಂಥವರು
ಕಾತರದಿ ಕಾದಿಹೆವು ನೋಡು!
***************


ಮುಂಗುರುಳ ಮೆರವಣಿಗೆ!

13 ಏಪ್ರಿಲ್ 11

 

ಸಖೀ,
ಅಪರಾತ್ರಿಯಲ್ಲ್ಲಿ
ಸುಖನಿದ್ದೆಯಲ್ಲಿದ್ದ
ನನ್ನ ನಗ್ನ ಕೈಗಳ
ಮೇಲೆ ನಿನ್ನ
ಮುಂಗುರುಳ
ಮೆರವಣಿಗೆಯ
ಅನುಭವವಾಯ್ತು

ಮನ ಮುದಗೊಂಡು
ಸುಖಾನುಭವಕ್ಕೆ
ತಾ ಅನುವಾಯ್ತು

ಬಲಗೈಯನ್ನು
ಕೆಳಗಿನಿಂದ
ಮೇಲಕ್ಕೆ ಕ್ರಮಿಸಿ
ಸಂಪೂರ್ಣ

ನನ್ನ ಕತ್ತಿಗೊಂದು
ಸುತ್ತು ಹಾಕಿ
ಎಡಗೈಯ ಮೇಲೆ
ನಡೆಯಿತು
ಕೆಳಮುಖ ಪಯಣ

ಮೊಣಗೈ ದಾಟಿ
ಮೆಲ್ಲನೆ ಕೆಳಗಿಳಿದು
ಅಂಗೈಗೆ ಕಚಗುಳಿ
ಇಟ್ಟಂತಾದಾಗ
ನಸು ನಕ್ಕು ಥಟ್ಟನೇ
ಹಿಡಿದು ನನ್ನ ಭದ್ರ
ಮುಷ್ಟಿಯಲಿ ಬಂಧಿಸಿದೆ

ನಿಧಾನವಾಗಿ ಕಣ್ಣು
ತೆರೆದು ಮುಷ್ಟಿಯ ಕೊಂಚ
ಕೊಂಚವೇ ಬಿಡಿಸಲು
ಅಲ್ಲಿ ಇಹ-ಪರದ ನಡುವೆ
ಒದ್ದಾಡುತ್ತಲಿದ್ದ ದೊಡ್ಡ
ಗಾತ್ರದ ಜಿರಳೆಯ
ಕಂಡು ನಾ ಕಂಪಿಸಿದೆ!
***********


ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!

12 ಏಪ್ರಿಲ್ 11

ಬೆಳ್ಳಿ ಮೋಡಗಳ
ಹೊದಿಕೆಯಡಿಯಲ್ಲಿ
ಬೆಚ್ಚಗೆ ಮಲಗಿ
ನನ್ನದೇ ಕನಸು
ಕಾಣುತಿರುವೆಯೇನೊ
ನೀನು…ಎಂಬ
ಭ್ರಮೆಯಲ್ಲಿಹೆ
ಕಣೇ ನಾನು!

ಗಾಳಿಯದು ಜೋರಾಗಿ
ಬೀಸಿದಾಗ ಆ ಹೊದಿಕೆ
ಸರಿದು ನಿನ್ನ ಚಿನ್ಮಯ
ಮುಖಾರವಿಂದಕ್ಕೆ
ಭಾಸ್ಕರನ ಕಿರಣಗಳು
ಕಚಗುಳಿಯಿಡುವಾಗ,
ಕನಸಿನ ಲೋಕದಿಂದ
ವಾಸ್ತವಕ್ಕಿಳಿಯಲಾಗದ,
ಆ ಕಚಗುಳಿಯನ್ನೂ
ಸಹಿಸಲಾಗದ,
ನಿನ್ನ ಆ ಮುಗ್ಧ
ಚಡಪಡಿಕೆಯ
ಕಾಯುವಿಕೆಯಲ್ಲಿ
ಇಹೆನೀಗ ನಾನು!
*********

 

ಚಿತ್ರ ಕೃಪೆ: ಛಾಯಾ ಚಿತ್ತಾರ

ಪ್ರಕಾಶ ಹೆಗಡೆಯವರ ಛಾಯಾ ಚಿತ್ತಾರದಲ್ಲಿನ ಈ ಚಿತ್ರವನ್ನು ಕಂಡಾಗ ಹೊರಹೊಮ್ಮಿದ ಮಾತುಗಳು!


ಭ್ರಷ್ಟಾಚಾರದ ವಿರುದ್ಧ ಸಮರ! Fight Corruption!

08 ಏಪ್ರಿಲ್ 11