ಸ್ವಗತ!

24 ಜುಲೈ 12

ಸಖೀ,
ಹಗಲಿಡೀ
ನಿನ್ನೊಡನೆ
ನಾ ನಡೆಸಿದ್ದ
ಸಂಭಾಷಣೆ
ಬರಿಯ 
ಸ್ವಗತವಾಗಿತ್ತಷ್ಟೇ
ಅನ್ನುವುದರ 
ಅರಿವು 
ನನಗಾದದ್ದು
ನನ್ನ
ಚರದೂರವಾಣಿ
ನಿನ್ನ ಕರೆಯಿಂದ
ರಿಂಗಣಿಸಿದಾಗಲಷ್ಟೇ!
****


ಪರಾವಲಂಬನೆ!

22 ಜುಲೈ 12

ಅಪ್ಪಯ್ಯ ಹೇಳಿದ್ದ ಕತೆ – ೦೬

ಒಂದು ಊರಿನಲ್ಲಿ ಒಬ್ಬರು ಆಯುರ್ವೇದ ವೈದ್ಯರಿದ್ದರು. ಅವರ ಮನೆಯ ಆವರಣದಲ್ಲೇ, ಬೀದಿಯ ಕಡೆಗೆ ತೆರೆದಿರುವ ಕೋಣೆಯಲ್ಲಿ ತಮ್ಮ ಚಿಕಿತ್ಸಾಲಯವನ್ನು ಹೊಂದಿದ್ದರು. ಮನೆಯಲ್ಲಿಯೇ ಆಯುರ್ವೇದ ಕಷಾಯಗಳ, ಲೇಹಗಳ ತಯಾರಿ ನಡೆಯುತ್ತಿತ್ತು. ಅವರ ಈ ಎಲ್ಲಾ ಕೆಲಸಗಳಲ್ಲಿ ಹಾಗೂ ಮನೆಯ ಇನ್ನಿತರ ಕೆಲಸಗಳಲ್ಲಿ ಅವರಿಗೆ ಸದಾ ಸಹಕಾರಿಯಾಗಿ ಇರುತ್ತಿದ್ದವನು ಆ ವೈದ್ಯರ ಚಿಕ್ಕಮ್ಮನ ಮಗ. ವಯಸ್ಸಿನಲ್ಲಿ ಹತ್ತು ಹನ್ನೆರಡು ವರುಷ ಕಿರಿಯನಾದ ಆತ ಎಲ್ಲದರಲ್ಲೂ ನಿಸ್ಸೀಮ. ಚಿಕಿತ್ಸಾಲಯದ ಕೆಲಸವಾಗಲೀ, ಮನೆಯೊಳಗಿನ ಹಾಗೂ ಅಡುಗೆ ಮನೆಯಲ್ಲಿನ ಕೆಲಸವಾಗಲೀ, ಏನೇ ಆದರೂ ಅಚ್ಚುಕಟ್ಟಾಗಿ ಮಾಡುವವನಾಗಿದ್ದ. ಮಾಂಸಾಹಾರಿಗಳಾದ ಅವರ ಮನೆಯಲ್ಲಿ ಮೀನು ಕೋಳಿಯ ಅಡುಗೆ ಆಗಬೇಕಾದರೂ, ತನ್ನ ಅತ್ತಿಗೆಗೆ, ಎಲ್ಲಾ ತಯಾರಿ ಮಾಡಿಕೊಡುತ್ತಿದ್ದದು ಆತನೇ. ಕೋಳಿಯ ಪುಕ್ಕಗಳನ್ನು ತೆಗೆದು, ಕತ್ತರಿಸಿ, ತಯಾರಿ ಮಾಡಿಕೊಡುವುದೂ ಆತನ ಕೆಲಸವಾಗಿತ್ತು. ತನ್ನ ಕೆಲಸ ಕಾರ್ಯಗಳಿಂದ ತನ್ನ ಅಣ್ಣನ ಮೆಚ್ಚುಗೆಗೂ ಪಾತ್ರನಾಗಿದ್ದ. ಎಲ್ಲದಕ್ಕೂ ಮಿಗಿಲಾಗಿ ಈರ್ವರಲ್ಲೂ ವಿಮರೀತ ಹಾಸ್ಯ ಪ್ರಜ್ಞೆ ಇತ್ತು. ಅದು ಅವರೀರ್ವರನ್ನು ಯಾವುದೇ ಭಿನ್ನಭಿಪ್ರಾಯಗಳಿಗೆ ಆಸ್ಪದ ಮಾಡಿಕೊಡದಂತೆ ಆಪ್ತ ಬಂಧದಲ್ಲಿ ಕಟ್ಟಿಹಾಕಿದಂತಿತ್ತು.

ಆದರೆ, ಒಂದು ವಿಷಯ ಮಾತ್ರ ತಮ್ಮನ ಮನಸ್ಸನ್ನು ಯಾವಾಗಲೂ ಕೊರೆಯುತ್ತಿತ್ತು. “ನನ್ನ ಈ ಅಣ್ಣ, ಎಲ್ಲದಕ್ಕೂ ನನ್ನನ್ನೇ ಅವಲಂಬಿಸಿರುತ್ತಾನಲ್ಲಾ? ನಾಳೆ ನಾನು ವಿವಾಹವಾಗಿ, ಬೇರೆ ಮನೆಮಾಡಿಕೊಂಡು, ಹೋದರೆ ಏನು ಮಾಡಿಯಾನು? ಈತ ಇಷ್ಟೊಂದು ಪರಾವಲಂಬಿ ಆಗಿರುವುದು ಒಳ್ಳೆಯಯದಲ್ಲ. ಈತನಿಗೆ ಒಂದು ಪಾಠ ಕಲಿಸಬೇಕು” ಎಂದು ನಿರ್ಧರಿಸುತ್ತಾನೆ.

ಒಂದು ದಿನ ಸಾಯಂಕಾಲದ ಸಮಯ ಆ ವೈದ್ಯರು ತಮ್ಮ ಚಿಕಿತ್ಸಾಲಯದಲ್ಲಿ ಕೂತಿರುವಾಗ, ಅವರ ಚಿಕಿತ್ಸಾಲಯದ ಮುಂದಿನ ಬೀದಿಯಲ್ಲಿ ಒಂದು ಕೋಳಿ ಅತ್ತಿಂದ ಇತ್ತ, ಇತ್ತಿಂದ ಅತ್ತ ತಿರುಗಾಡುತ್ತಾ ಇರುವುದನ್ನು ನೋಡುತ್ತಾರೆ. ನೋಡಿದವರು, ಮತ್ತೆ ಮತ್ತೆ ಕೋಳಿಯನ್ನೇ ನೋಡುತ್ತಾರೆ. ಕೂಡಲೇ ತನ್ನ ತಮ್ಮನನ್ನು ಕರೆದು “ಏನೋ ಇದು? “ಡ್ರೆಸ್” ಮಾಡಿದ ಕೋಳಿಯ ಫ್ಯಾಷನ್ ಪರೇಡ್ ನಡೀತಿದೆ ಇಲ್ಲಿ, ಇದು ನಿನ್ನದೇ ಕೆಲಸ ಇರಬೇಕು ಅಂತ ನನಗೆ ಚೆನ್ನಾಗಿ ಗೊತ್ತು, ಏನಿದು? ಆ ಕೋಳಿಯ ಮೈಮೇಲೆ ಒಂದು ಪುಕ್ಕವೂ ಇಲ್ಲ. ಹೀಗೆ ಜೀವಂತ ಕೋಳಿಯ ಪುಕ್ಕ ತೆಗೆದು ಬಿಟ್ಟಿರುವುದಾದರೂ ಏಕೆ?” ಎಂದು ಕೇಳುತ್ತಾರೆ.  

ಆಗ ಅವರ ತಮ್ಮ ನಗುತ್ತಾ “ಹೂಂ… ಅಣ್ಣಾ… ಅದು ನಾನೇ ಮಾಡಿರೋದು. ಒಂದು ವೇಳೆ ನಾನು ಮನೆಯಲ್ಲಿ ಇಲ್ಲದಾಗ, ನಿಮಗೆ ಕೋಳಿ ಪಲ್ಯ ತಿನ್ನಬೇಕು ಅಂತ ಮನಸ್ಸಾದರೆ, ಇರಲಿ ಅಂತ ಕೋಳಿಯ ಪುಕ್ಕಗಳನ್ನೆಲ್ಲಾ ತೆಗೆದು ತಯಾರು ಮಾಡಿ ಇಟ್ಟಿದ್ದೇನೆ. ಪುಕ್ಕಗಳನ್ನು ತೆಗೆಯುವ ಕೆಲಸವೇ ಇರುವುದಿಲ್ಲ ನಿಮಗೆ” ಅನ್ನುತ್ತಾನೆ.

ತನ್ನ ತಮ್ಮನ ಮೇಲೆ ಕಿಂಚಿತ್ತೂ ಕೋಪಗೊಳ್ಳದ ಆ ವೈದ್ಯರು ನಗುತ್ತಲೇ “ಬಹಳ ಘಾಟಿ ಕಣೋ ನೀನು, ನಿನ್ನಿಂದ ಒಳ್ಳೆಯ ಪಾಠ ಕಲಿತು ಬಿಟ್ಟೆ ನಾನು, ಸರಿ ಅತ್ತಿಗೆಗೆ ಹೇಳಿ ಕೋಳಿ ಸಾರು ಮಾಡಿಸು, ಇನ್ನು ಮುಂದೆ ನಾನೂ ಸಹಕರಿಸುತ್ತೇನೆ ಅಂತ ಹೇಳು ಅತ್ತಿಗೆಗೆ” ಎಂದು ಮೆಚ್ಚುಗೆಯಿಂದ ಸೂಚಿಸುತ್ತಾರೆ.  

ನಾವು ಎಂದಿಗೂ ಸಂಪೂರ್ಣವಾಗಿ ಅನ್ಯರ ಮೇಲೆ ಅವಲಂಬಿತರಾಗಿರಬಾರದು. ಅಲ್ಲದೇ ಯಾವನೇ ಒಬ್ಬ ವ್ಯಕ್ತಿ, ತಾನು ಇಲ್ಲದೇ ಇದ್ದರೆ, ಇಲ್ಲಿ ಯಾವ ಕೆಲಸವೂ ನಡೆಯದು, ಅನ್ನುವ ಅಹಂ ಕೂಡಾ ಹೊಂದಿರಬಾರದು. ಈ ಎರಡೂ ಕೂಡ ಮಾನವನಿಗೆ ಕೇಡನ್ನೇ ಉಂಟು ಮಾಡುತ್ತವೆ.
*****


ಇರಲು ಬಿಡು ಇನ್ನಷ್ಟು ದಿನ ವರುಷ!

16 ಜುಲೈ 12

 

 

 

 

 

 

 

 

 

 

ಏರಿದಷ್ಟೇ ಮೆಟ್ಟಿಲುಗಳನ್ನು ನಾ ಇಳಿಯಲೂ ಬಿಡು ದೇವ
ಏರಿದಷ್ಟೇ ಸಾವಕಾಶವಾಗಿ ನಾ ಇಳಿಯಲೂ ಬಿಡು ದೇವ

ನನಗೆ ಕಿಂಚಿತ್ತೂ ಇಲ್ಲ ತರಾತುರಿ ನಿನಗಿರಬಹುದೇನೋ
ನನ್ನ ಆಟವ ಮುಗಿಸೋ ತಯಾರಿ ನಡೆಸಿರಬಹುದೇನೋ

ನನ್ನದೇನಿಲ್ಲ ಇಲ್ಲಿ ಅರಿತಿರುವೆ ಎಲ್ಲವೂ ನಿನ್ನದೇ ದೇವಾ
ಆದರೂ ಹಚ್ಚಿಕೊಂಡಾಗಿದೆ ಬಿಡಲಾಗದು ಸುಲಭದಿ ಜೀವ

ಐವತ್ತಾಯಿತು ಹರಸು ಆಶೀರ್ವದಿಸಿ ಇದು ನೂರಾಗುವಂತೆ
ಮನದೊಳಿರುವ ಯೋಜನೆಗಳೆಲ್ಲಾ ಕೈಗೂಡಿಸಲಾಗುವಂತೆ

ಇರಲು ಬಿಡು ಇನ್ನಷ್ಟು ದಿನ ವರುಷ ಹಿಂದಿನಂತೆಯೇ ಇಲ್ಲಿ
ಕರೆದುಕೋ ನಿನ್ನ ಮರೆತು ಮೆರೆಯ ತೊಡಗಿದರೆ ನಾನಿಲ್ಲಿ
**********************************


ನಮಗೇನು ಬೇಕು?

15 ಜುಲೈ 12

ಅಪ್ಪಯ್ಯ ಹೇಳಿದ್ದ ಕತೆ ೦೫

ಹೆಚ್ಚಾಗಿ ಮಾವಿನ ಮರಗಳಲ್ಲಿ ಹಾಗೂ ಗೇರು ಮರಗಳಲ್ಲಿ, ತಿಳಿಯಾದ ಕೆಂಪು-ಕೇಸರಿ ಬಣ್ಣದ ಹಾಗೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ ಇರುವೆಗಳು ಅಡ್ಡಾಡುತ್ತಿರುತ್ತವೆ. ಅವುಗಳು ನಮ್ಮ ಮೈಮೇಲೆ ಹರಿದಾಡಿದರೆ, ನಮ್ಮನ್ನು ಕಡಿಯದೇ ಇರುವುದಿಲ್ಲ. ಕಡಿದರೆ ವಿಪರೀತ ಉರಿತ. ಅವುಗಳಿಗೆ ನಾವು “ತಬುರು” ಎಂದು ಕರೆಯುತ್ತಿದ್ದೆವು. ಬಹುಶಃ ಅದು ತುಳು ಭಾಷೆಯ ಪದವಾಗಿರಬಹುದು. ಕನ್ನಡದಲ್ಲಿ ಏನನ್ನುತ್ತಾರೋ ಗೊತ್ತಿಲ್ಲ. ನಮ್ಮನ್ನು ಕಡಿವ ಆ ತಬುರುಗಳನ್ನು ನಾವು ಹಿಸುಕಿ ಹಾಕುವುದು ಸರ್ವೇ ಸಾಮಾನ್ಯವಾಗಿತ್ತು.

ಇದೇಕೆ ಹೀಗೆ? ಎಂದು ನಾವು ಬಾಲ್ಯದಲ್ಲಿ ಒಮ್ಮೆ ನಮ್ಮ ಅಪ್ಪಯ್ಯನವರನ್ನು ಕೇಳಿದ್ದಾಗ ಅವರು ಹೇಳಿದ್ದ ಮಾತುಗಳಿವು.

ಒಮ್ಮೆ ಈ ತಬುರುಗಳೆಲ್ಲಾ ಒಂದು ಸಭೆ ನಡೆಸಿದವು. “ನಮ್ಮನ್ನು ಮನುಜರು ಹಿಸುಕಿ ಹಿಸುಕಿ ಸಾಯಿಸುತ್ತಿದ್ದಾರೆ. ಇದನ್ನು ತಡೆಯಲು ನಾವು ದೇವರ ಮೊರೆ ಹೋಗೋಣ. ತಪಸ್ಸು ಮಾಡಿ ದೇವರಲ್ಲಿ ವರ ಬೇಡೋಣ” ಎಂದು ನಿರ್ಧರಿಸಿದವು. ಒಂದು ಸುಮುಹೂರ್ಥದಲ್ಲಿ, ಎಲ್ಲಾ ತಬುರುಗಳೂ ತಪಸ್ಸಿಗೆ ಕೂತು ಬಿಟ್ಟವು. ಕೊನೆಗೂ ದೇವರು ಪ್ರತ್ಯಕ್ಷರಾಗಿ “ನಿಮ್ಮ ಸಮಸ್ಯೆ ಏನು? ಏನು ಬೇಕಾಗಿದೆ? ಒಂದು ವರ ನೀಡುತ್ತೇನೆ. ಬೇಡಿಕೊಳ್ಳಿ” ಅಂದರು. ಆಗ ಆ ತಬುರುಗಳೆಲ್ಲಾ ನಾನು ಕೇಳುತ್ತೇನೆ, ನಾನು ಕೇಳುತ್ತೇನೆ ಎಂದು ಹಾರಾಡತೊಡಗಿದವು. ಇದನ್ನು ಕಂಡ ದೇವರು “ನಿಮ್ಮಲ್ಲಿ ಯಾರಾದರೂ ಒಬ್ಬರು, ಒಂದು ವರ ಕೇಳಿ, ನೀಡುತ್ತೇನೆ” ಅನ್ನುತ್ತಾರೆ.

ಆಗ ಒಂದು ತಬುರು, “ಸುಮ್ಮನಿರಿ ನಾನು ಕೇಳುತ್ತೇನೆ” ಎಂದು ಅನ್ಯ ತಬುರುಗಳನ್ನೆಲ್ಲಾ ಸುಮ್ಮನಿರಿಸಿ “ದೇವರೇ, ನಮ್ಮ ಸಮಸ್ಯೆ ಏನೆಂದರೆ, ನಾವು ಯಾವ ಮನುಜರನ್ನು ಕಡಿಯುತ್ತೇವೆಯೋ, ಆ ಮನುಜರು ನಮ್ಮನ್ನು ಹಿಸುಕಿ ಹಿಸುಕಿ ಸಾಯಿಸುತ್ತಿದ್ದಾರೆ. ಹಾಗಾಗಿ ’ಕಡಿದ ಕೂಡಲೇ ಸಾಯುವಂತೆ ವರ ನೀಡಿ ನಮಗೆ’’’ ಎಂದು ಬೇಡಿಕೆ ಸಲ್ಲಿಸುತ್ತದೆ. ಕೂಡಲೇ ದೇವರು “ತಥಾಸ್ತು” ಎಂದು ನುಡಿದು ಅದೃಶ್ಯರಾಗುತ್ತಾರೆ.

ಆ ತಬುರುಗಳೆಲ್ಲಾ ಸಂತೋಷದಿಂದ, “ಇನ್ನು ಕಡಿದ ಕೂಡಲೇ ಸಾವು, ಕಡಿದ ಕೂಡಲೇ ಸಾವು” ಎಂದು ಹಾಡುತ್ತಾ ಮರಳುತ್ತವೆ.

ಆಗ ನಾವು “ಆದರೆ ಇಂದಿಗೂ ಮನುಜ ಆ ತಬುರುಗಳು ಕಡಿದ ಕೂಡಲೇ, ಅವುಗಳನ್ನು ಹಿಸುಕಿ ಸಾಯಿಸುತ್ತಿದ್ದಾನೆ. ಮನುಜರು ಯಾರೂ ಆ ತಬುರುಗಳು ಕಡಿದ ಕೂಡಲೇ ಸಾಯಿತ್ತಿಲ್ಲವಲ್ಲಾ? ದೇವರಲ್ಲಿ ವರ ಪಡೆದು ಏನು ಪ್ರಯೋಜನವಾಯ್ತು?” ಎಂದು ಕೇಳಿದೆವು. ನಮ್ಮ ಈ ಪ್ರಶ್ನೆಗಳಿಗೆ ಅಪ್ಪಯ್ಯ ಉತ್ತರಿಸಿದ್ದು ಹೀಗೆ.

“ದೇವರು ವರ ಬೇಡಿಕೊಳ್ಳಿ ಅಂದಾಗ, ತಮಗೆ ಏನು ಬೇಕು ಅನ್ನುವುದನ್ನು ಅರಿತುಕೊಂಡು, ಒಂದಿಷ್ಟೂ ಅಪಾರ್ಥ ಅಥವಾ ಅನರ್ಥಗಳಿಗೆ ಎಡೆಮಾಡಿಕೊಡದಂತೆ, ಸ್ಪಷ್ಟವಾಗಿ, ಬೇಡಿಕೊಳ್ಳಬೇಕಿತ್ತು. ಆದರೆ, ಹಾಗೆ ಮಾಡುವ ಬದಲು ’ಕಡಿದ ಕೂಡಲೇ ಸಾಯುವಂತೆ ವರ ನೀಡಿ’ ಎಂದು ಬೇಡಿಕೊಂಡು, ಮೋಸ ಹೋಯಿತು.  ಹಾಗೆಯೇ, ನಮ್ಮ ಜೀವನದಲ್ಲಿ ನಮಗೆ ಏನು ಬೇಕು ಅನ್ನುವುದರ ಅರಿವು ನಮಗೆ ಚೆನ್ನಾಗಿ ಇರಬೇಕು. ಅದಿಲ್ಲವಾದರೆ, ನಮಗೆ ಒದಗುವ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳದೇ, ಅವು ನಮ್ಮ ಕೈತಪ್ಪಿಹೋಗುತ್ತವೆ”

*****


ಅತಿಥಿ ಸತ್ಕಾರ!

08 ಜುಲೈ 12

ಅಪ್ಪಯ್ಯ ಹೇಳಿದ್ದ ಕತೆ – ೦೪

ಬಹು ದಿನಗಳ ಹಿಂದೆ ಓರ್ವ ಹರಿದಾಸರು ಇದ್ದರು. ಅವರಿಗೆ ತಮ್ಮದೇ ಆದ ಯಾವು ಬಂಧು ವರ್ಗಗಳಿರಲಿಲ್ಲ. ಹಾಗಾಗಿ ಒಂದೂರಿನಿಂದ ಇನ್ನೊಂದು ಊರಿಗೆ ಪಯಣಿಸುತ್ತಾ, ಆ ಊರ ಶಾಲೆಗಳಲ್ಲೋ, ದೇವಸ್ಥಾನಗಳಲ್ಲೋ ಹರಿಕಥಾ ಕಾಲಕ್ಷೇಪ ನಡೆಸಿಕೊಡುತ್ತಿದ್ದರು. ಆಯಾ ಊರಿನ ಹಿರಿಯ ಗೃಹಸ್ಥರ  ಮನೆಗಳವರು ನೀಡುವ ಊಟೋಪಾಚಾರಗಳನ್ನು  ಸ್ವೀಕರಿಸುತ್ತಿದ್ದರು.

ಹತ್ತೂರುಗಳನ್ನು ಪದೇ ಪದೇ ಸುತ್ತಾಡುವ ಆ ಹರಿದಾಸರಿಗೆ, ತಮ್ಮ ಆದರಾತಿಥ್ಯ ಮಾಡುವ  ಅಂಥ ಪ್ರತಿ ಮನೆಯವರೊಂದಿಗೂ ಪರಿಚಯ ಬೆಳೆದುಬಿಟ್ಟಿತ್ತು. ಆದರೆ, ಒಂದು ಊರಿನ ಗೃಹಸ್ಥರ ವರ್ತನೆ ಅನ್ಯರ ಮನೆಯವರ ವರ್ತನೆಗಿಂತ ತುಂಬಾ ಭಿನ್ನವಾಗಿ ಕಂಡುಬರುತ್ತಿತ್ತು. ಎಲ್ಲಾ ಮನೆಗಳವರೂ ಊಟೋಪಚಾರ ನೀಡಿ ಕಳುಹಿಸುತ್ತಿದ್ದರಾದರೂ, ಆ ಮನೆಯವರೆಲ್ಲರ ಪರಿಚಯ ಹೆಚ್ಚಾಗಿ ಆಗುತ್ತಿರಲಿಲ್ಲ. ಅದರೆ ಆ ಒಂದು ಗೃಹಸ್ಥರ ಮನೆಯಲ್ಲಿ ಎಲ್ಲರ ಪರಿಚಯವೂ ಆಗಿಬಿಟ್ಟಿತ್ತು. ಅದಕ್ಕೆಲ್ಲಾ ಆ ಗೃಹಸ್ಥರೇ ಕಾರಣರಾಗಿದ್ದರು.

ಹರಿದಾಸರು ಆ ಗೃಹಸ್ಥರ ಮನೆಯೊಳಗೆ ಕಾಲಿಟ್ಟರೆ ಸಾಕು, ಆ ಗೃಹಸ್ಥರು ಮನೆಯ ಸದಸ್ಯರನ್ನೆಲ್ಲಾ ಕರೆದು ಪರಿಚಯ ಮಾಡಿಕೊಡುತ್ತಿದ್ದರು. ಅವರಲ್ಲಿ ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ಹರಿದಾಸರ ಊಟೋಪಚಾರಗಳಲ್ಲಿ ನೆರವಾಗುವಂತೆ ಆದೇಶ ನೀಡುತ್ತಿದ್ದರು. ಓರ್ವ ಸದಸ್ಯ ನೀರು ನೀಡಿದರೆ, ಇನ್ನೋರ್ವ ಒರೆಸುವ ಬಟ್ಟೆ ನೀಡಬೇಕಾಗುತ್ತಿತ್ತು, ಹೀಗೆ ಅತಿಥಿ ಸತ್ಕಾರದಲ್ಲಿ, ಆಲ್ಲಿ ಎಲ್ಲರಿಗೂ ಒಂದೊಂದು ಕೆಲಸ ಇದ್ದೇ ಇರುತ್ತಿತ್ತು. ಹರಿದಾಸರು ಮನೆಯಿಂದ ಹೊರಡಲು ತಯಾರಾಗಿ ನಿಂತಾಗ, ಆ ಗೃಹಸ್ಥರು ಮತ್ತೆ ಆ ಮನೆಯ ಸದಸ್ಯರನ್ನೆಲ್ಲಾ ಕರೆದುಕೊಂಡು, ಹರಿದಾಸರ ಜೊತೆಗೆ ಬೀದಿಯ ಕೊನೆಯ ತನಕ ನಡೆದು ಬಂದು, ನಮಸ್ಕರಿಸಿ ಬೀಳ್ಕೊಡುತ್ತಿದ್ದರು. ಹರಿದಾಸರಿಗೆ ನಮಸ್ಕಾರ ಮಾಡುವಂತೆ ಎಲ್ಲರಿಗೂ ಸೂಚಿಸುತ್ತಿದ್ದರು. ಅವರಲ್ಲಿ ಒಂದು ಮೂರು ವರುಷದ ಚಿಕ್ಕ ಮಗು ಕೂಡ ಇರುತ್ತಿತ್ತು. ಆ ಮಗು ಕೂಡ ಈ ನಿಯಮವನ್ನು ಪಾಲಿಸಬೇಕಾಗುತ್ತಿತ್ತು.

ಈ ವರ್ತನೆ ಬೇರೆ ಯಾರ ಮನೆಯಲ್ಲೂ ಕಾಣ ಸಿಗದೇ ಇದ್ದುದರಿಂದ, ಹರಿದಾಸರ ತೀರ ಕುತೂಹಲಕ್ಕೆ ಕಾರಣವಾಗಿತ್ತು. ಒಂದು ದಿನ ಹೀಗೆಯೇ ಬೀದಿಯ ಕೊನೆಯಲ್ಲಿ ಎಲ್ಲರಿಂದಲೂ ಬೀಳ್ಕೊಳ್ಳುವ ಸಂದರ್ಭದಲ್ಲಿ, ಆ ಗೃಹಸ್ಥರನ್ನು ಪ್ರಶ್ನಿಸುತ್ತಾರೆ. “ಮಹನೀಯರೇ, ತಾವು ಪ್ರತಿ ಬಾರಿಯೂ ನಾನು ಬಂದಾಗ ಎಲ್ಲರಿಗೂ ಪರಿಚಯಿಸುವುದು, ಹಾಗೂ ಎಲ್ಲರಿಂದಲೂ ನನ್ನ ಉಪಚಾರ ಮಾಡಿಸುವುದು ಮತ್ತು ಕೊನೆಗೆ ಎಲ್ಲರಿಂದಲೂ ನಮಸ್ಕಾರ ಮಾಡಿಸಿ ಬೀಳ್ಕೊಡುವುದು, ಇವೆಲ್ಲದರ ಹಿಂದಿನ ಉದ್ದೇಶವೇನು, ಮರ್ಮವೇನು ಎಂದು ನಾನು ಅರಿಯಬಹುದೇ?”

ಆಗ ಆ ಗೃಹಸ್ಥರು, “ಸ್ವಾಮೀ, ತಾವು ನಮ್ಮ ಅತಿಥಿಗಳು. ಅತಿಥಿಗಳು ದೇವರಿಗೆ  ಸಮಾನ ಅನ್ನುವುದನ್ನು ನಮ್ಮ ಹಿರಿಯರು ನಮಗೆ ಬೋಧಿಸಿದ್ದಾರೆ. ಆ ನಿಟ್ಟಿನಲ್ಲಿ,  ಅತಿಥಿಗಳ ಉಪಚಾರ ಮಾಡುವುದು  ನಮ್ಮ ಮನೆಯ ಸದಸ್ಯರೆಲ್ಲರ ಕರ್ತವ್ಯವಲ್ಲವೇ? ಇನ್ನು ಈ  ಚಿಕ್ಕ ಮಗುವನ್ನೂ ಬಿಡದೇ ಎಲ್ಲರನ್ನೂ ಈ ಬೀದಿಯುದ್ದಕ್ಕೂ ಕರೆದುಕೊಂಡು ಬರುವುದಕ್ಕೆ ಕಾರಣವೂ ಕೂಡ ಅದೇ ಆಗಿದೆ. ಮನೆಗೆ ಬಂದ ಅತಿಥಿಗಳನ್ನು, ಎಲ್ಲರೂ ಒಂದೇ ಮನಸ್ಸಿನಿಂದ, ಸ್ವಾಗತಿಸಿ, ಉಪಚರಿಸಿ, ಬೀಳ್ಕೊಡುವ ಅಗತ್ಯ ಇದೆಯೆನ್ನುವುದನ್ನು ನಾನು ನನ್ನ ಮನೆಯ ಸದಸ್ಯರೆಲ್ಲರಿಗೂ ಕಲಿಸಿಕೊಡಬೇಕಾದುದು ನನ್ನ ಕರ್ತವ್ಯ.  ನನ್ನ ಹಿರಿಯರು ನನಗೆ ಕಲಿಸಿದುದನ್ನು, ನಾನು ನನ್ನ ಕಿರಿಯರಿಗೆ ಕಲಿಸಿಕೊಡಬೇಕಾಗಿದೆ. ಹಾಗಾಗಿಯೇ ಈ ಪರಿಪಾಠ ಇಟ್ಟುಕೊಂಡು ಅದನ್ನು ಪಾಲಿಸುತ್ತಿದ್ದೇನೆ. ಮುಂದೆ ಅವರ ಜೀವನದಲ್ಲಿ ಅವರು ಇದೇ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿಕೊಂಡು, ಬೆಳೆಸಿಕೊಂಡು, ತಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುತ್ತಾ ಸಾಗಬೇಕಲ್ಲವೇ?” ಅಂದರು.

ಹರಿದಾಸರಿಗೆ ಅತೀವ ಆನಂದವಾಯ್ತು. “ಮಹನೀಯರೇ, ತುಂಬಾ ಸಂತಷವಾಯ್ತು.  ತಮ್ಮ ಈ ನೀತಿ ಪಾಠವನ್ನು ಇನ್ನು ಮುಂದೆ ನನ್ನ ಹರಿಕಥೆಗಳ  ಮುಖಾಂತರ ಈ ಹತ್ತೂರ ಜನರಿಗೆ ತಲುಪಿಸುತ್ತೇನೆ” ಎಂದು ನುಡಿದು, ನಮಸ್ಕರಿಸಿ, ಬೀಳ್ಕೊಂಡು, ಮುಂದಿನೂರಿಗೆ ಸಾಗಿದರು.

*****

 


ಒಂದೆರಡು ದಿನಗಳ ಕವಿ ನಾನು!

06 ಜುಲೈ 12

||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||

ನನಗಿಂತಲು ಮೊದಲೂ ಎಷ್ಟೊಂದು ಕವಿಗಳು ಬಂದು ಹೋಗಿಹರು
ಗೀತೆಗಳನು ಹಾಡಿ ಹೋಗಿಹರು ಮನಗಳ ಮುದಗೊಳಿಸಿ ತೆರಳಿಹರು
ಅವರೂ ಅರೆಗಳಿಗೆಯ ಕತೆಯಂತೆ, ನಾನೂ ಈ ಗಳಿಗೆಯ ಕತೆಯಂತೆ
ನಾಳೆ ನಿಮ್ಮನೇ ನಾನು ಅಗಲುವೆನು, ಆದರಿಂದು ನಿಮ್ಮವನೇ ನಾನು!

||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||

 

ನಾಳೆ ಇನ್ನಾರೋ ಬರಬಹುದು ಕವಿತಾ ಸುಮಗಳನ್ನಾರಿಸುವವರು
ನನಗಿಂತಲೂ ಚೆನ್ನ ನುಡಿವವರು ನಿಮಗಿಂತಲೂ ಚೆನ್ನಾಲಿಸುವವರು
ನಾಳೆ ಯಾರೆನ್ನಾ ನೆನೆಯುವರು ಯಾರೇಕೆ ನನ್ನಾ ನೆನೆಯುವರು
ಬಿಡುವಿಲ್ಲದ ಮಂದಿ ನನಗಾಗಿ ತಮ್ಮ ಸಮಯವ ವ್ಯರ್ಥ ವ್ಯಯಿಸುವರು?

 

||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||


ಮನುಜ ಮನಸ್ಸು ಮಾಡಿದರೆ…!

01 ಜುಲೈ 12

ಅಪ್ಪಯ್ಯ ಹೇಳಿದ್ದ ಕತೆ – ೦೩

ಒಂದು ರಾಜ್ಯದ ರಾಜನಿಗೆ ಸುಂದರಿಯಾದ ಒಬ್ಬಳೇ ಒಬ್ಬಳು ಮಗಳಿದ್ದಳು. ಆಕೆಯ ಮೇಲೆ ರಾಜನಿಗೆ ತುಂಬಾ ಪ್ರೀತಿ. ಆಕೆ ಕೇಳಿದ್ದನ್ನೆಲ್ಲಾ ಆತ ಕೊಡಿಸುತ್ತಿದ್ದ. ಆಕೆ ಧರಿಸುವಂತಹ ಯಾವುದೇ ಒಡವೆ, ಉಡುಗೆ ತೊಡುಗೆಗಳನ್ನು, ತನ್ನ ರಾಜ್ಯದಲ್ಲಿ ಇನ್ನಾರೂ ಧರಿಸಿರಬಾರದು ಎನ್ನುವ ಬಯಕೆ ಆತನದ್ದಾಗಿತ್ತು. ಹಾಗಾಗಿ ಆಕೆಗಾಗಿ ಒಡವೆ ಅಥವಾ ಉಡುಗೆಗಳನ್ನು ಖಾಸಗಿ ಚಿನಿವಾರರ ಹಾಗೂ ದರ್ಜಿಗಳಿಂದಲೇ ತಯಾರಿಗೊಳಿಸುತ್ತಿದ್ದ.

ಆದರೂ ಒಮ್ಮೊಮ್ಮೆ ಆತನ ರಾಜಕುಮಾರಿ ಧರಿಸಿದ ಒಡವೆ ಅಥವಾ ಉಡುಗೆ ತೊಡುಗೆಗಳ ತರಹದ್ದೇ ಒಡವೆ ಅಥವಾ ಉಡುಗೆಗಳನ್ನು ಆ ನಾಡಿನಲ್ಲಿ ಇನ್ನಾರೋ ಧರಿಸಿಕೊಂಡು ಅಡ್ಡಾಡುತ್ತಿರುವುದು ಆತನ ಕಣ್ಣಿಗೆ ಬೀಳುತ್ತಿತ್ತು. ಈ ಬಗ್ಗೆ ಬಹಳಷ್ಟು ಯೋಚಿಸಿದ ರಾಜ, ತನ್ನ ಮಂತ್ರಿಯನ್ನು ಕರೆದು ಇದಕ್ಕೆ ಕಾರಣ ಹಾಗೂ ಪರಿಹಾರವನ್ನು ಸೂಚಿಸುವಂತೆ ಕೇಳುತ್ತಾನೆ. ಆಗ ಮಂತ್ರಿ, “ಮುಂದಿನ ಬಾರಿ ನಮ್ಮ ರಾಜಕುಮಾರಿಗೆ ಉಡುಗೆಯನ್ನು ತಯಾರಿಗೊಳಿಸುವಾಗ, ಆ ಉಡುಗೆ ತಯಾರಾಗುವ ತನಕ ದರ್ಜಿಯನ್ನು ಅರಮನೆಯಲ್ಲಿಯೇ ಉಳಿಸಿಕೊಂಡು, ಆತ ತನ್ನ ಮನೆಗೆ ಹೋಗದಿರುವಂತೆ ಮಾಡೋಣ” ಎಂದು ಸೂಚಿಸುತ್ತಾನೆ. ಅದಕ್ಕೆ ರಾಜ ಒಪ್ಪಿಗೆ ನೀಡುತ್ತಾನೆ.

ಮುಂದೊಂದು ದಿನ ರಾಜಕುಮಾರಿಗಾಗಿ ಹೊಸ ಉಡುಗೆ ತಯಾರಿಸಬೇಕಾದಾಗ, ಖಾಸಗಿ ದರ್ಜಿಯನ್ನು ಅರಮನೆಗೆ ಕರೆಸಿ, ಆತನಿಗೆ ಬಟ್ಟೆ ನೀಡಿ, ರಾಜಕುಮಾರಿಯ ಉಡುಗೆ ತಯಾರಾಗುವ ತನಕ, ಆತ ತನ್ನ ಮನೆಗೆ ಹೋಗಬಾರದೇಂದು ಅಪ್ಪಣೆ ಮಾಡುತ್ತಾರೆ. ಆತನ ಊಟ ಮತ್ತು ವಿಶ್ರಾಮದ ವ್ಯವಸ್ಥೆಯನ್ನು ಅರಮನೆಯ ಆವರಣದಲ್ಲಿ ಬಿಗಿ ಬಂದೋಬಸ್ತಿನೊಂದಿಗೆ ಮಾಡಲಾಗಿರುತ್ತದೆ. ದರ್ಜಿಗೆ ಇದೆಲ್ಲಾ ಏಕೆ ಎನ್ನುವುದು ಅರಿವಾಗಿತ್ತು. ಕಳೆದ ಬಾರಿ ರಾಜಕುಮಾರಿಯ ಉಡುಗೆ ತಯಾರಿಸಿ ಉಳಿದ ಬಟ್ಟೆಯಿಂದ, ಅಂತಹದೇ ಉಡುಗೆಯನ್ನು ತನ್ನ ಚಿಕ್ಕ ಮಗಳಿಗೂ ತಯಾರಿಸಿ ಕೊಟ್ಟಿದ್ದ ಆತ. ಈ ಬಾರಿ ಅದು ಸಾಧ್ಯವಿಲ್ಲ ಎನ್ನುವುದೂ ಅರಿವಾಗಿತ್ತು.

ಐದಾರು ದಿನಗಳು ಕಳೆದ ನಂತರ, ಆ ದರ್ಜಿಯ ಪತ್ನಿ ತನ್ನ ಆ ಕಿರಿಮಗಳನ್ನು ಯಾವುದೋ ಕಾರಣಕ್ಕೆ ಬೈದು ಮನೆಯಿಂದ ಹೊರಗಟ್ಟಿ, ಹೋಗಿ ನಿನ್ನ ಅಪ್ಪನೊಂದಿಗೇ ಇರು ಅನ್ನುತ್ತಾಳೆ. ಅಕೆ ಅಳುತ್ತಾ ಅರಮನೆಯತ್ತ ಹೆಜ್ಜೆ ಹಾಕುತ್ತಾಳೆ. ತನ್ನ ಮಗಳು ಬರುತ್ತಿರುವುದನ್ನು ಕಿಟಕಿಯಿಂದಲೇ ನೋಡಿದ ದರ್ಜಿ, ಇತ್ತ ಕಡೆ ಬರಬೇಡ ಎಂದು ಗದರುತ್ತಾನೆ. ಆತ ಎಷ್ಟು ಗದರಿದರೂ ಆಕೆ ಕೇಳದಿದ್ದಾಗ, ತನ್ನ ಬೂಡ್ಸುಗಳನ್ನು ಒಂದಾದ ಮೇಲೆ ಒಂದರಂತೆ ಆಕೆಯತ್ತ ಎಸೆದು ಮನೆಗೆ ಹೋಗುವಂತೆ ಹೇಳುತ್ತಾನೆ. ತನ್ನ ತಂದೆಯ ಕೋಪವನ್ನು ಮನಗಂಡ ಆ ಬಾಲಕಿ ಮರಳಿ ತನ್ನ ಮನೆಯತ್ತ ಹೆಜ್ಜೆ ಹಾಕುತ್ತಾಳೆ.

ರಾಜಕುಮಾರಿಯ ಉಡುಗೆ ತಯಾರಾದ ಮೇಲೆ ಆ ದರ್ಜಿಯನ್ನು ಅರಮನೆಯಿಂದ ತನ್ನ ಮನೆಗೆ ಹೋಗಲು ಅನುಮತಿ ನೀಡುತ್ತಾರೆ. ಮುಂದೊಂದು ದಿನ, ರಾಜಕುಮಾರಿಯ ಸಖಿಯರಲ್ಲಿ ಯಾರೋ ರಾಜಕುಮಾರಿಗೆ ಒಂದು ಸುದ್ದಿ ಮುಟ್ಟಿಸುತ್ತಾರೆ. ಅದೇನೆಂದರೆ, ರಾಜಕುಮಾರಿಯ ಹೊಸ ಉಡುಗೆಯ ತರಹದೇ ಆದ ಉಡುಗೆಯನ್ನು ಆ ದರ್ಜಿಯ ಕಿರಿಯ ಮಗಳು ಧರಿಸಿಕೊಂಡು ಅಡ್ಡಾಡುತ್ತಿದ್ದುದನ್ನು ಆ ಸಖಿಯರು ನೋಡಿರುತ್ತಾರೆ. ರಾಜಕುಮಾರಿ ರಾಜನಿಗೆ ದೂರು ಸಲ್ಲಿಸುತ್ತಾಳೆ.

ರಾಜ ಆ ದರ್ಜಿಯನ್ನು ದರ್ಬಾರಿಗೆ ಕರೆಸಿ ವಿಚಾರಣೆ ನಡೆಸುತ್ತಾನೆ. “ಅರಮನೆಯಲ್ಲಿ ಬಂಧನದಲ್ಲಿ ಇದ್ದಾಗಲೂ ನಿನ್ನಿಂದ ಆ ಬಟ್ಟೆಯನ್ನು ಹೊರ ಸಾಗಿಸಲು ಅದು ಹೇಗೆ ಸಾಧ್ಯವಾಯಿತು” ಎಂದು ಕೇಳುತ್ತಾನೆ. ಆಗ ಆ ದರ್ಜಿ, “ಮಹಾರಾಜರೇ, ಒಂದು ದಿನ ನನ್ನ ಕಿರಿ ಮಗಳು ಅಳುತ್ತಾ ಅರಮನೆಯತ್ತ ಬಂದಿದ್ದಳು, ಆಕೆಯನ್ನು ಗದರಿಸುತ್ತಾ ನಾನು ನನ್ನೆರಡೂ ಬೂಡ್ಸುಗಳನ್ನು ಆಕೆಯತ್ತ ಎಸೆದಿದ್ದೆ. ಆ ಬೂಡ್ಸಿನೊಳಗೆ ನಾನು ಬಟ್ಟೆಯನ್ನೂ ಮನೆಗೆ ರವಾನಿಸಿದ್ದೆ” ಎಂದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ.

ಆಗ ರಾಜ “ಮಂತ್ರಿಗಳೇ, ಈತನಿಗೆ ಯಾವ ಶಿಕ್ಷೆಯನ್ನು ನೀಡಬೇಕು?” ಎಂದು ತನ್ನ ಮಂತ್ರಿಯ ಸಲಹೆಯನ್ನು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಮಂತ್ರಿ “ಮಹಾರಾಜರೇ, ಈ ದರ್ಜಿಗೆ ಬಹುಮಾನ ಕೊಟ್ಟು ಕಳಿಸಬೇಕು, ಏಕೆಂದರೆ ಈತ ನಮಗೊಂದು ಪಾಠ ಕಲಿಸಿದ್ದಾನೆ. ಅದೇನೆಂದರೆ, ಮನುಷ್ಯ, ಮನಸ್ಸು ಮಾಡಿದರೆ, ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ, ತಾನು ಅಂದುಕೊಂಡುದನ್ನು ಸಾಧಿಸಿ ತೋರಿಸಬಲ್ಲ”. ಮಹಾರಾಜನು ಈ ಉತ್ತರದಿಂದ ಸಂತುಷ್ಟಗೊಂಡು, ಆ ದರ್ಜಿಗೆ ಬಹುಮಾನ ನೀಡಿ ಕಳಿಸುತ್ತಾನೆ.

*****