ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!

30 ಮಾರ್ಚ್ 11

ನಿನ್ನೆಯ ಸುದ್ದಿ ರಾತ್ರಿ ಮೊಹಾಲಿಯಲ್ಲಿ
ಸುರಿಯುತ್ತಾ ಇತ್ತಂತೆ ತುಂತುರು ಮಳೆ
ಇಂದು ಅಲ್ಲಿ ಕಂಡು ಬರಲಿ ಬರಿ ನಮ್ಮ
ದಾಂಡಿಗರ ಓಟಗಳ ಭರ್ಜರಿ ಸುರಿಮಳೆ

ಸಿಡಿಲು ಮಿಂಚುಗಳಂತೆ ಆರ್ಭಟಿಸಲೊಮ್ಮೆ
ಸೆಹವಾಗ, ತೆಂಡೂಲ್ಕರ್ ಮತ್ತು ಯುವರಾಜ
ಮಳೆಯನ್ನೇ ಸುರಿಸಲಿ ಗಂಭೀರ, ವಿರಾಟ,
ರೈನಾ ಹಾಗೂ ಧೋನಿ ಎಂಬ ಮಹಾರಾಜ

ಹರಭಜನ ಜಹೀರರ ಎಸೆತಗಳಿಗೆ ನುಚ್ಚು
ನೂರಾಗಿ “ಶಹೀದ”ರಾಗಲಿ ಆಫ್ರಿದಿ ಪಡೆ
ಪ್ರತಿಯೊಬ್ಬ ಭಾರತೀಯನೂ ನುಡಿಯಲಿ
“ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ”

ಆಟ ನೋಡಲು ಬಂದಿಹ ನೆರೆಮನೆಯವರೆಲ್ಲಾ
ಶಾಂತಚಿತ್ತರಾಗಿ ತಮ್ಮ ತವರಿಗೆ ಮರಳಿಬಿಡಲಿ
ಇಲ್ಲೆಲ್ಲೊ ಅವಿತು ಕೂತು ಮುಂದೊಮ್ಮೆ ನಮ್ಮ
ಮನೆಯ ಶಾಂತಿಯನ್ನು ಕದಡದೇ ಇರಲಿ!


ಸಂಗಾತಿಯೇ!

22 ಮಾರ್ಚ್ 11

ಸಂಗಾತಿಯೇ ನೀನಿಲ್ಲದೇ ಬದುಕೇ ಇಲ್ಲಾ
ಹೂವಲ್ಲಿ ಮೊಗ್ಗಲ್ಲಿ ಕನಸಿನ ನಾಡಲ್ಲಿ
ನೀನಿಲ್ಲದೇ ಏನೇನೂ ಇಲ್ಲ

ಹೇಗೋ ಏನೋ ನೆಲೆಯೂರಿಹರು ಯಾರೋ ನನ್ನೀ ತಪ್ತ ಮನದಿ
ನನ್ನದೆಲ್ಲಾ ಕಳೆದುಕೊಂಡೆ ಹುಚ್ಚುಮನದ ಹುಚ್ಚುತನದಿ
ಈ ಮನದ ಒಳಕತೆಯ ನೀ ಬಲ್ಲೆ ನಾ ಬಲ್ಲೆ ಇನ್ನಾರೂ ಅರಿಯರಿದನಾ
ನೀನಿಲ್ಲದೇ ಬದುಕೇ ಇಲ್ಲಾ

ಪ್ರತಿ ಮಿಡಿತದಲೂ ನಿನ್ನದೇ ತುಡಿತ ಉಸಿರಲ್ಲೂ ಇದೆ ನಿನ್ನದೇ ಕಂಪು
ಭೂಮಿಯಿಂದ ಆಗಸದೊರೆಗೂ ಕಾಣುವುದೆನಗೆ ನಿನ್ನದೇ ರೂಪು
ಈ ಪ್ರೀತಿ ಅಳಿಯದಂತೆ, ನೀನೆಂದೂ ಮುನಿಯದಂತೆ, ಜೊತೆಯಲ್ಲೇ ನಾವಿರೋಣಾ
ನೀನಿಲ್ಲದೇ ಬದುಕೇ ಇಲ್ಲಾ

ಜೋಗಿನಿಯಂತೆ ನೀನಿರದ ರಾತ್ರಿ, ಅಲೆಮಾರಿಯಂತಿವೆ ನನ್ನೀ ದಿನಗಳು
ಉರಿಯುತಲಿಹುದು ನನ್ನೀ ಬಾಳು, ಕರಗುತಾ ಸಾಗಿವೆ ನನ್ನ ಕನಸುಗಳು
ನೀನಿಲ್ಲದೇ ನನ್ನ, ನಾನಿಲ್ಲದೇ ನಿನ್ನ, ಬಾಳು ಏನೇನೂ ಅಲ್ಲಾ
ನೀನಿಲ್ಲದೇ ಬದುಕೇ ಇಲ್ಲಾ
***********************

ಹಿಂದೀ ಚಲನ ಚಿತ್ರ ಗೀತೆಯ ಭಾವಾನುವಾದ

ಮೂಲ ಗೀತೆ

ಚಿತ್ರ: ಮುಕದ್ದರ್  ಕಾ ಸಿಖಂದರ್
ಗಾಯಕರು: ಕಿಶೋರ್ ಕುಮಾರ್ ಹಾಗೂ ಆಶಾ ಭೋಸ್ಲೇ (ಪ್ರತ್ಯೇಕವಾಗಿ)
ಸಂಗೀತ: ಕಲ್ಯಾಣ್ ಜೀ ಆನಂದ್ ಜೀ

ಓ ಸಾಥಿರೇ ತೇರೇ ಭಿನಾ ಭೀ ಕ್ಯಾ ಜೀನಾ
ಫೂಲೋಂ ಮೆ ಕಲಿಯೋಂ ಮೆ, ಸಪ್ನೋಂ ಕಿ ಗಲಿಯೋಂ ಮೆ
ತೇರೇ ಭಿನಾ ಕುಚ್ ಕಹೀಂ ನಾ

ಜಾನೇ ಕೈಸೆ ಅಂಜಾನೇ ಹೀ ಆನ್ ಬಸಾ ಕೋಯೀ ಪ್ಯಾಸೆ ಮನ್ ಮೆ
ಅಪ್ನಾ ಸಬ್ ಕುಛ್ ಖೋ ಬೈಠೇ ಹಮ್ ಪಾಗಲ್ ಮನ್ ಕೇ ಪಾಗಲ್‍ಪನ್ ಮೆ
ದಿಲ್ ಕೇ ಅಫ್ ಸಾನೇ ಮೈ ಜಾನೂ ತೂ ತಾನೇ ಔರ್ ಯೆ ಜಾನೇ ಕೊಯೀ ನಾ

ಹರ್ ದಢ್‍ಕನ್ ಮೆ ಪ್ಯಾಸ್ ಹೈ ತೇರೀ ಸಾಸೋಂ ಮೆ ತೇರೀ ಖುಷ್ ಬೂ ಹೈ
ಇಸ್ ಧರ್ತೀ ಸೆ ಉಸ್ ಅಂಬರ್ ತಕ್, ಮೇರಿ ನಝರ್ ಮೆ ತೂ ಹೀ ತೂ ಹೈ
ಪ್ಯಾರ್ ಯೆ ಟೂಟೇ ನಾ, ತೂ ಮುಝ್ ಸೇ ರೂಠೇ ನಾ ಸಾಥ್ ಯೆ ಛೂಠೇ ಕಭೀ ನಾ

ತುಝ್ ಭಿನ್ ಜೋಗನ್ ಮೇರೀ ರಾತೇ, ತುಝ್ ಭಿನ್ ಮೇರೆ ದಿನ್ ಬಂಜಾರೇ
ಮೇರಾ ಜೀವನ್ ಜಲ್‍ತೀ ಧೂನೀ, ಬುಜೆ ಬುಜೆ ಮೇರೇ ಸಪ್ನೆ ಸಾರೆ
ತೇರೇ ಭಿನಾ ಮೇರೀ, ಮೇರೇ ಭಿನಾ ತೇರೀ, ಯೆ ಜಿಂದಗೀ ಜಿಂದಗೀ ನಾ


ತಪ್ಪು ಒಪ್ಪುಗಳ ವಿಮರ್ಶೆ ಮಾಡಿಕೊಂಡು ಕಲಿಯಬೇಕಿಲ್ಲಿ!

21 ಮಾರ್ಚ್ 11

 

ನಮ್ಮ ಜೀವನದುದ್ದಕ್ಕೂ ನಮಗೆ ಕಲಿಯಲು ಇದೆಯಿಲ್ಲಿ
ಈ ಜೀವನವೇ ಪಾಠಶಾಲೆ ಎಂಬ ಮಾತೂ ಇದೆಯಿಲ್ಲಿ

ಆದರೆ, ಕಲಿಸಲು ಬರುವವರಲ್ಲಿ ಎಲ್ಲರೂ ಕಲಿತವರಲ್ಲ
ಅಲ್ಲದೆ, ಕಲಿತವರೆಲ್ಲಾ ಮನಬಿಚ್ಚಿ ಕಲಿಸುವುದೂ ಇಲ್ಲ

ಕಲಿಸಿದ್ದನೆಲ್ಲಾ ಶ್ರದ್ಧೆಯಿಂದ ಕಲಿಯುವವರೂ ಬಹಳಿಲ್ಲ
ಕಲಿಯುವ ಬಗೆ ಹೇಗೆಂಬುದನು ಎಲ್ಲಾ ಅರಿತಿರಬೇಕಲ್ಲ

ಎಲ್ಲರೂ ಎಲ್ಲವನೂ ಎಲ್ಲರಿಗೂ ಕಲಿಸಲಾಗದು ನಿಜದಿ
ಕಲಿಸುವವರೆಲ್ಲಾ ಕಲಿಸುವುದನು ಅರಿತಿಹರೇ ಜಗದಿ?

ಕಲಿಯುವ ಇಚ್ಛೆ ನಮ್ಮ ಮನದೊಳಗೆ ಇದ್ದರದು ಸಾಕು
ಕಣ್ಗಿವಿಗಳ ತೆರೆದಿಟ್ಟುಕೊಂಡು ಸ್ವೀಕರಿಸುವ ಬುದ್ಧಿ ಬೇಕು

ತಪ್ಪು ಒಪ್ಪುಗಳ ವಿಮರ್ಶೆ ಮಾಡಿಕೊಂಡು ಕಲಿಯಬೇಕಿಲ್ಲಿ
ಹಾಗಿದ್ದರೆ, ಪ್ರತಿಯೊಂದು ಹೆಜ್ಜೆಯಲೂ ಕಲಿಯಲಿದೆ ಇಲ್ಲಿ!
                               ********


ಭಾಷೆಯ ಕಲಿಕೆಗೆ, ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು!

18 ಮಾರ್ಚ್ 11

ಕನ್ನಡಿಗರು ಅನ್ಯ ಭಾಷಿಗರ ಜೊತೆಗೆ ಮಾತನಾಡುವಾಗ ಮಾತೃಭಾಷೆಯನ್ನು ಬಳಸದೇ, ಅನ್ಯರ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ ಅನ್ನುವ ಅಪವಾದ ಇದೆ. ಆದರೆ, ಇದು ಬೆಂಗಳೂರಿನಂತಹ ನಗರ ಪ್ರದೇಶಗಳಿಗೇ ಮಾತ್ರ ಸೀಮಿತ. ಹಳ್ಳಿಗಳಲ್ಲಿ, ಅಥವಾ ಚಿಕ್ಕ ಪಟ್ಟಣಗಳಲ್ಲಿ ಇದು ಹೆಚ್ಚಾಗಿ ಕಂಡುಬರುವುದಿಲ್ಲ.

ನಗರ ಪ್ರದೇಶಗಳಲ್ಲಿ ವಾಸಿಸುವ ನಾವು ಕನ್ನಡಿಗರು ಯಾವ ಪರಭಾಷಿಗರೊಂದಿಗೆ ಇದ್ದರೂ, ಅವರೊಂದಿಗೆ ವ್ಯವಹರಿಸಲು ಬೇಕಾದ ಭಾಷೆಯನ್ನು ಬಳಸುತ್ತೇವೆ. ಇದಕ್ಕೆ ಕಾರಣವೇನೆಂದರೆ ನಗರ ಪ್ರದೇಶಗಳಲ್ಲಿ ವಾಸಿಸುವ ಹೆಚ್ಚಿನ ಕನ್ನಡಿಗರು ಪರಭಾಷೆಗಳನ್ನು ಕಲಿಯುವುದರಲ್ಲಿ ನಿಸ್ಸೀಮರು. ಅಲ್ಲದೇ, ಅನ್ಯಭಾಷಿಗರು ನಮ್ಮ ಮಾತೃಭಾಷೆಯನ್ನು ಆಡಲು ಹೋಗಿ, ಅದರ ಮೇಲೆ ಅತ್ಯಾಚಾರ ನಡೆಸುವುವುದನ್ನು ತಪ್ಪಿಸಲು, ಕನ್ನಡಿಗರು ಅವರದೇ ಭಾಷೆಯಲ್ಲಿ ಮಾತಾಡುವ ಯತ್ನ ಮಾಡಿ ತಮ್ಮ ವ್ಯವಹಾರವನ್ನು ಅದಷ್ಟು ಬೇಗ ಮುಗಿಸುವ ಮನಸ್ಸು ಮಾಡುತ್ತೇವೆ. ನಾವು ಅನ್ಯ ಭಾಷೆಯ ಮೇಲೆ ಅತ್ಯಾಚಾರ ನಡೆಸಿದರೂ ಪರವಾಗಿಲ್ಲ, ಆದರೆ, ಅನ್ಯರು ನಮ್ಮ ಭಾಷೆಯ ಮೇಲೆ ಅತ್ಯಾಚಾರ ನಡೆಸುವುದನ್ನು ನಾವು ಸಹಿಸುವುದಿಲ್ಲ, ಎಂದೂ ಹೇಳಬಹುದು.

ಯೋಚಿಸಿ ನೋಡಿದರೆ ಹೆಚ್ಚಿನ ಸಂದರ್ಭಗಳಲ್ಲಿ ಆಗುವುದೇ ಹೀಗೆ. ಇದನ್ನು ನಾನು ಸರಿಯೆಂದೂ ಅಥವಾ ನಾನು ಕೂಡ ಎಲ್ಲಾ ಸಂದರ್ಭಗಳಲ್ಲೂ ಇದನ್ನೇ ಮಾಡುತ್ತೇನೆ ಎಂದೂ ಅನ್ನಲಾರೆ. ಆದರೆ, ಮನುಜನ ಮಾನಸಿಕ ಸ್ಥಿತಿಯನ್ನು ವಿಭಿನ್ನ ದೃಷ್ಟಿಕೋನದಿಂದ ಅರಿಯುವ ಯತ್ನ ಮಾಡಿದ್ದೇನೆ ಅಷ್ಟೇ. ಹೀಗಾಗುವುದಕ್ಕೆ ನಮಗೆ ನಮ್ಮ ಮಾತೃಭಾಷೆಯ ಮೇಲಿರುವ ಪ್ರೇಮವೇ ಕಾರಣವಾಗಿರಬಹುದು ಅನ್ನುವುದು ನನ್ನ ಅನಿಸಿಕೆ. ಇದನ್ನು ಮಾತೃಭಾಷೆಯ ಮೇಲಿನ ಪ್ರೇಮದ ಕೊರತೆ ಅನ್ನುವವರೂ ಇದ್ದಾರೆ. ಆದರೆ, ನನಗೆ ಹಾಗನಿಸದು.

ಇನ್ನು ಕೆಲವೊಮ್ಮೆ, ಇಬ್ಬರು ಕನ್ನಡಿಗರು, ಪರಸ್ಪರರೊಂದಿಗೆ ಕನ್ನಡೇತರ ಭಾಷೆಯಲ್ಲಿ ವ್ಯವಹರಿಸುತ್ತಾರಾದರೆ, ಅಲ್ಲಿ, ಅವರೀರ್ವರಿಗೂ ಮಾತೃಭಾಷೆಯ ಮೇಲಿನ ಪ್ರೇಮದ ಕೊರತೆ ಇದೆ ಅಥವಾ ಕೀಳರಿಮೆಯೇ ಕಾರಣ ಎಂದು ನನ್ನ ಅನಿಸಿಕೆ. ಮಾತೃಭಾಷೆಯಲ್ಲಿ ಮಾತನಾಡಿದರೆ, ಅಕ್ಕಪಕ್ಕದವರು ತಮ್ಮನ್ನು ಅವಿದ್ಯಾವಂತರೆಂದು ಪರಿಗಣಿಸಬಹುದೆನ್ನುವ ಅಳುಕೂ ಇರಬಹುದೇನೋ.

ನಿನ್ನೆ ಅಂತರ್ಜಾಲದ ಸ್ನೇಹಿತರೋರ್ವರು ಕನ್ನಡನಾಡಿನಲ್ಲಿ ಕನ್ನಡದ ಬೆಳವಣಿಗೆಗಾಗಿ ಏನು ಮಾಡಬಹುದು? ಎನ್ನುವ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಬಹುಷ: ಈ ಪ್ರಶ್ನೆಗೆ ಇರುವ ಒಂದೇ ಒಂದು ಉತ್ತರವನ್ನು ರಾಷ್ಟ್ರಕವಿ ಕುವೆಂಪುರವರು ದಶಕಗಳಷ್ಟು ಹಿಂದೆಯೇ ನೀಡಿದ್ದಾರೆ. “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀನು ಕನ್ನಡವಾಗಿರು” ಎನ್ನುವ ಆ ಕವಿವಾಣಿಯೇ ಸಾರ್ವಕಾಲಿಕ ಸತ್ಯವಾದ ಸೂಕ್ತಿ.   ಕನ್ನಡಿಗ ತನ್ನ ಒಳಗೂ ಹೊರಗೂ ಸದಾ ಕನ್ನಡಿಗನಾಗಿ ಇದ್ದರೆ ಮತ್ತು ಯಾವುದೇ ಕೀಳರಿಮೆ ಹೊಂದಿರದೇ, ಕನ್ನಡವನ್ನು ಬಳಸುತ್ತಾ ಇದ್ದರೆ, ಅಷ್ಟೇ ಸಾಕು. ಕನ್ನಡವನ್ನು ಬಳಸೋಣ, ಕನ್ನಡವನ್ನು ಬೆಳೆಸೋಣ, ಕನ್ನಡವನ್ನು ಉಳಿಸೋಣ ಹಾಗೂ ಸಾಧ್ಯವಾದರೆ ಅನ್ಯರಿಗೂ ಕನ್ನಡವನ್ನು ಕಲಿಸೋಣ ಎಂಬೀ ಮಾತುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು. ಕನ್ನಡ ಅಳಿಯುವುದಿಲ್ಲ. ಕನ್ನಡಿಗರೂ ಅಳಿಯುವುದಿಲ್ಲ.

ಸರಕಾರೀ ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಹೆಚ್ಚಿನವರು ಬಡವರು. ಆ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ನಡೆಸಿದರೆ, ಖಾಸಗೀ ಶಾಲೆಗೆ ಹೋಗುವ ಶ್ರೀಮಂತರ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ನಡೆಸುತ್ತಾರೆ. ಇದು ಬಡ ಯುವ ಜನತೆಯಲ್ಲಿನ ಕೀಳರಿಮೆಗೆ ಕಾರಣವಾಗುತ್ತದೆ ಹಾಗೂ ಯುವ ಸಮಾಜದಲ್ಲಿನ ಧ್ರುವೀಕರಣಕ್ಕೆ ಕಾರಣವಾಗುತ್ತದೆ. ಇದನ್ನು ಹೋಗಲಾಡಿಸುವತ್ತ ಸರಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ.

ಸರಕಾರೀ ಶಾಲೆಗಳಲ್ಲೂ ಖಾಸಗೀ ಶಾಲೆಗಳಲ್ಲಿ ದೊರೆಯುವ ಶಿಕ್ಷಣ ಮಟ್ಟವನ್ನು ಕಾಯ್ದುಕೊಂಡರೆ, ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಜನವಾದೀತು. ಪ್ರೌಢ ಶಾಲೆಯವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ನಡೆಸಿದವರು ಕನ್ನಡ ಸಾಹಿತ್ಯವನ್ನು ಓದಿ ಅರಗಿಸಿಕೊಳ್ಳಬಲ್ಲರೆಂಬ ಖಾತ್ರಿ ಏನಿಲ್ಲ. ಅದೇ ಮಾತು ಆಂಗ್ಲ ಮಾಧ್ಯಮದಲ್ಲಿ  ಪ್ರೌಢ ಶಿಕ್ಷಣವನ್ನು ಪಡೆದವರ ಬಗ್ಗೆ ಮತ್ತು ಆಂಗ್ಲ ಸಾಹಿತ್ಯದ ಬಗ್ಗೆಯೂ ಹೇಳಬಹುದು. ಭಾಷೆಯಲ್ಲಿ, ಸಾಹಿತ್ಯದ ಓದಿನಲ್ಲಿ ಪ್ರೌಢಿಮತೆ ಸಾಧಿಸಲು, ಮಕ್ಕಳಲ್ಲಿ ಓದಿನ ಪರಿಪಾಠವನ್ನು ಬೆಳೆಸುವ ಪದ್ಧತಿ ಶಾಲೆಗಳಲ್ಲಿ ಇರಬೇಕು. ಸಾಹಿತ್ಯ ರಚನೆಗಳನ್ನು ಓದಿಸುವ, ಅರ್ಥೈಸಿ ಹೇಳುವ ಪರಿಪಾಠವನ್ನು ಪಠ್ಯೇತರ ಚಟುವಟಿಕೆಯಾಗಿ ಎಲ್ಲಾ ಶಾಲೆಗಳಲ್ಲಿ ಅಳವಡಿಸಿಕೊಳ್ಳಬೇಕು.

ಇನ್ನೊಂದು ಮಾತು. ಅಂಗ್ಲ ಮಾಧ್ಯಮದಲ್ಲಿ ಕಲಿತ ಮಕ್ಕಳ ಕನ್ನಡ ಭಾಷಾ ಜ್ಞಾನ ಸಾಮಾನ್ಯವಾಗಿ ಉತ್ತಮವಾಗಿರುವುದಿಲ್ಲ, ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳ ಆಂಗ್ಲ ಭಾಷಾ ಜ್ಞಾನ ಉತ್ತಮವಾಗಿರುವುದಿಲ್ಲ. ಇತರ ಎಲ್ಲಾ ವಿಷಯಗಳಿಗೆ ನೀಡುವಷ್ಟೇ ಸಮಾನ ಪ್ರಾಧಾನ್ಯವನ್ನು ಭಾಷಾ ವಿಷಯಗಳಿಗೊ ನೀಡಬೇಕು. ಯಾವ ಮಾಧ್ಯಮದಲ್ಲಿ ಕಲಿತಿದ್ದೇವೆ ಅನ್ನುವುದಕ್ಕಿಂತಲೂ, ನಮ್ಮ ಭಾಷೆಯ ಅಭ್ಯಾಸ ಯಾವ ಮಟ್ಟದಲ್ಲಿ ಇತ್ತು ಅನ್ನುವುದು ಪ್ರಾಮುಖ್ಯವಾಗುತ್ತದೆ. ಬಾಷಾ ಕಲಿಕೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಮಹತ್ಕಾರ್ಯಗಳು ನಡೆಯಬೇಕಾಗಿದೆ.  ಈ ಕಾರ್ಯದಲ್ಲಿ ಭಾಷಾ ಅಧ್ಯಾಪಕರುಗಳ ಜವಾಬ್ದಾರಿ ಪ್ರಾಮುಖ್ಯವಾದುದು. ತಮ್ಮದು ಬರಿಯ ನೌಕರಿಯಾಗಿರದೇ, ಒಂದು ಭಾಷೆಯ ಬೆಳವಣಿಗಾಗಿ ತಾವು ನೀಡುತ್ತಿರುವ ಕೊಡುಗೆ ಎಂದು ಪರಿಗಣಿಸಿ, ತಮ್ಮನ್ನು ತಾವು ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.

ಮಾತೃಭಾಷೆಯಾದ ಕನ್ನಡ ಮತ್ತು ವ್ಯಾವಹಾರಿಕವಾಗಿ ಅನಿವಾರ್ಯವಾಗಿರುವ ಆಂಗ್ಲ ಭಾಷೆ ಇವೆರಡರಲ್ಲೂ  ಪ್ರೌಢಿಮತೆ ಸಾಧಿಸುವ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿತರೂ ಪರವಾಗಿಲ್ಲ. ಮಾಧ್ಯಮದ ಆಯ್ಕೆಯನ್ನು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಬಿಟ್ಟರೆ ಅನಾಹುತವೇನೂ ಆಗದು. ಆದರೆ ಯಾವುದೇ ಮಾಧ್ಯಮದ ಶಾಲೆಗಳಲ್ಲಿ, ಮಾತೃಭಾಷೆಯನ್ನು ಒಂದು ವಿಷಯವಾಗಿ ಸಮಾನ ಪ್ರಾಧಾನ್ಯ ನೀಡಿ ಕಟ್ಟುನಿಟ್ಟಾಗಿ ಕಲಿಸುವ ಬಗ್ಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ರಿಯಾಯಿತಿ ನೀಡಬಾರದು. ಒಂದು ಭಾಷೆಯ ಕಲಿಯುವಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು.

*****

 

ನಿರಂತರ ಕರ್ನಾಟಕ ವಾರಪತ್ರಿಕೆಯಲ್ಲಿ ಈ ವಾರ ಪ್ರಕಟವಾಗಿರುವ ಲೇಖನ

 

 


ನಮ್ಮಲ್ಲಿ ಈ ಅಸಹನೆ ಏಕೆ ಮನೆಮಾಡಿದೆ?

14 ಮಾರ್ಚ್ 11

 

ಚಿತ್ರನಟಿ ಹೇಮಾಮಾಲಿಯವರನ್ನು ರಾಜ್ಯಸಭೆಗೆ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಕ್ರಮವನ್ನು ವಿರೋಧಿಸಿತ್ತಾ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಗಿರೀಶ್ ಕಾರ್ನಾಡ್ ಅವರು ಆಕೆಯನ್ನು ರಾಜಕೀಯರಂಗದಲ್ಲಿ ಹೆಡ್ಡಿ ಎಂದು ಕರೆದರು. ಅದಕ್ಕೂ ತೀವ್ರ ಟೀಕೆಗಳು ಹೊರಬಂದವು. ಟೀಕೆಗಳಷ್ಟೇ ಬಂದಿದ್ದರೆ ಒಪ್ಪಬಹುದಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆಯೆಂದು ಸ್ವೀಕರಿಸಬಹುದಿತ್ತು. ಆದರೆ ಆದದ್ದೇನು? ಕಾರ್ನಾಡರ ಹೇಳಿಕೆಯನ್ನು ವಿರೋಧಿಸಲು ಹೊರಟವರು, ಅವರು ಹಿರಿಯ ಸಾಹಿತಿ ಎಂಬುದನ್ನೇ ಮರೆತು, ಅವರ ಪೂರ್ವಾಪರವನ್ನೆಲ್ಲಾ ಜಾಲಾಡಿದರು.

ಇನ್ನು ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಯ ಜವಾಬ್ದಾರಿಯನ್ನು ಇನ್ಫೋಸಿಸ್ ಸ್ಥಾಪಕ ಶ್ರೀ ನಾರಾಯಣ ಮೂರ್ತಿಯವರಿಗೆ ವಹಿಸಿಕೊಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಪ್ರಕಟಗೊಂಡ ದಿನದಿಂದ, ಕನ್ನಡ ಸಾರಸ್ವತ ಲೋಕದಲ್ಲಿ ಅದೇಕೋ ಅಲ್ಲೋಲ ಕಲ್ಲೋಲ,   ಕಾರ್ಗಿಲ್ ಗಡಿಯಲ್ಲಿ ಪಾಕಿಸ್ತಾನೀ  ಪಡೆಗಳು ಲಗ್ಗೆ ಇಟ್ಟಾಗ ಉಂಟಾದ ಸಂಚಲನ ನಾಡಿನುದ್ದಗಲಕ್ಕೂ ಕಂಡುಬಂತು.

ಆದರೆ ಆದದ್ದೇನು ಮತ್ತು ಅದಕ್ಕೆ ಕಾರಣಗಳೇನು ಎಂದು ಯೋಚಿಸುವಾಗ, ಮೇಲ್ಮಟ್ಟಕ್ಕೆ ತೋರಿಬರುವುದು ನಮ್ಮ ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿರುವ ಅಸಹನೆ. ಈ ಅಸಹನೆ, ತಮ್ಮ ದೈನಂದಿನ ಖಾಸಗಿ ಜೀವನಕ್ಕೆ ಸಂಬಂಧಪಟ್ಟಿರುವುದಲ್ಲ. ಇದು ಸಮಾಜದಲ್ಲಿ ತಮಗಿರುವ ವೈಯಕ್ತಿಕ ಪ್ರತಿಷ್ಠೆಗಾಗಿ ಹೋರಾಡುತ್ತಿರುವವರ ಅಸಹನೆ. ವೈಚಾರಿಕ ಭಿನ್ನಾಭಿಪ್ರಾಯ ಮಾತ್ರ  ಎನ್ನುವ ಸೋಗಿನಲ್ಲಿ, ಕನ್ನಡನಾಡಿನ ಜನತೆ ತಮ್ಮಲ್ಲಿನ ಒಗ್ಗಟ್ಟಿನ ಕೊರತೆಯನ್ನು ಮೇಲಿಂದ ಮೇಲೆ ಹೊರಗೆಡಹುತ್ತಿದೆ.

ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ನಾವು ನೀಡುವ ಸಮ್ಮತಿ ದಾನವೇ, ಎಲ್ಲಾ ದಾನಗಳಿಗಿಂತಲೂ ದೊಡ್ಡದಾದ ದಾನವೆಂದು ನುಡಿಯುತ್ತಿದ್ದ ನನ್ನ ತಂದೆಯವರ ಮಾತು ನನಗೆ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. ಈ ಸಮ್ಮತಿ ದಾನದ ಕೊರತೆ ಈಗೀಗ ಹೆಚ್ಚು ಹೆಚ್ಚಾಗಿ ಕಂಡು ಬರುತ್ತಿದೆ. ಯಾವುದೇ, ಸಭೆ, ಸಮಾರಂಭ, ಅಭಿವೃದ್ಧಿ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನ, ಏನೇ ಒಂದು ಕಾರ್ಯಕ್ರಮ ಆಯೋಜನೆಗೊಂಡಿರಲಿ. ಅಲ್ಲಿ ಸದಭಿಪ್ರಾಯ ವ್ಯಕ್ತಪಡಿಸಿ, ಭಾಗವಹಿಸಿ, ಶುಭಕೋರುವವರ್ ಇರುವಂತೆಯೇ, ತಮ್ಮದು ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಸಾಮಾಜಿಕ ಜವಾಬ್ದಾರಿ ಎನ್ನುವ ಸೋಗಿನಲ್ಲಿ, ವಿರೋಧದ ಕಿಚ್ಚು ಹಚ್ಚುವವರೂ ಕಂಡು ಬರುವುದು ಸಾಮಾನ್ಯವಾಗಿಬಿಟ್ಟಿದೆ. ಈ ಕಿಚ್ಚು ಹಚ್ಚುವವರು, ಕಿಚ್ಚು ಹಚ್ಚಿ ತಮ್ಮ  ಕೆಲಸವಾಯಿತು ಎಂದು ಸುಮ್ಮನಾಗುತ್ತಾರೆ, ಮುಂದಿನ ದಿನಗಳಲ್ಲಿ, ಪರ ವಿರೋಧಿ ಬಣಗಳ ನಡುವೆ ವಾಕ್ಸಮರಗಳು, ವಾದ ವಿವಾದಗಳು ನಡೆಯುತ್ತವೆ. ಆದರೆ,  ಯಾವುದೇ ನಿಷ್ಕರ್ಷೆಗೆ ತಲುಪದೆ ತಣ್ಣಗಾಗಿಬಿಡುತ್ತವೆ. ಮುಂದೆ ಇನ್ನಾವುದೋ ಕಾರ್ಯಕ್ರಮ ಬಂದಾಗ, ಮತ್ತದೇ ಪುನರಾವರ್ತನೆ.

ಈ ನಡುವಿನ ದಿನಗಳಲ್ಲಿ, ಮೂರಾಬಟ್ಟೆಯಾಗುವುದು ಗಣ್ಯರ ಖಾಸಗಿ ಜೀವನ. ಅವರು ಎಂದೋ, ಯಾವುದೋ ಸಂದರ್ಭದಲ್ಲಿ, ಯಾವುದೋ ಅರ್ಥದೊಂದಿಗೆ ಮಾತನಾಡಿದ ಪದಗಳಿಗೆ ಇಂದು ಅರ್ಥ, ಅನರ್ಥ, ಅಪಾರ್ಥ ಎಲ್ಲವನ್ನೂ ನೀಡಲಾಗುತ್ತದೆ. ಗಾಳಿಸುದ್ದಿಗಳಿಗೆಲ್ಲಾ ರೆಕ್ಕೆಪುಕ್ಕ ಕಟ್ಟಿ ಸಂಶಯದಾಗಸದಲ್ಲಿ ಹಾರಲು ಬಿಡಲಾಗುತ್ತದೆ. ಸಾಮಾಜಿಕ ಜವಾಬ್ದಾರಿಯ ಗುತ್ತಿಗೆ ಪಡೆದುಕೊಂಡಿದ್ದೇವೆ ಎಂದು ತಿಳಿದುಕೊಂಡವರು, ಗಣ್ಯ ವ್ಯಕ್ತಿಗಳ ಚಾರಿತ್ರ್ಯಹರಣಕ್ಕೆ ಇಳಿದುಬಿಡುತ್ತಾರೆ. ವಿಷಯಾಂತರವಾಗುತ್ತದೆ. ಮಾತುಗಳು, ವಾದ ವಿವಾದಗಳು ಹಾದಿ ತಪ್ಪುತ್ತವೆ. ಮೂಲ ವಿಷಯ ಅಥವಾ ಮೂಲ ಘಟನೆ ಮರೆತು ಹೋಗಿರುತ್ತದೆ. ಅಲ್ಲಿ ಸಂಬಂಧಪಟ್ಟ ಮೂಲ ವ್ಯಕ್ತಿ ಮೂಕ ಪ್ರೇಕ್ಷಕರಾಗಿ ಉಳಿದುಬಿಡುತ್ತಾರೆ. ಮುಂದೆ ನಡೆಯುವುದು ವಾದ ಪ್ರತಿವಾದ ಮಂಡಿಸುವವರ ನಡುವಿನ ಪ್ರತಿಷ್ಟೆ ಮಾತ್ರ.  ಜನರನ್ನು ಓದುಗರನ್ನು ಎಲ್ಲಿಂದ ಎಲ್ಲಿಗೋ ಒಯ್ದುಬಿಡುವ ವಾದ ವಿವಾದಗಳು ಯಾವುದೇ ರೀತಿಯ ಅಂತಿಮ ತೀರ್ಪನ್ನು ನೀಡುವುದೇ ಇಲ್ಲ. ಏಕೆಂದರೆ ಅಲ್ಲಿ ಯಾವೊಬ್ಬ ತೀರ್ಪುಗಾರನೂ    ಇರುವುದಿಲ್ಲ. ಅಲ್ಲದೆ, ಅಷ್ಟರಲ್ಲಿ, ಮತ್ತೊಂದು ಘಟನೆ, ಮತ್ತೋರ್ವ ವ್ಯಕ್ತಿ ವಿವಾದದ ಸುಳಿಗೆ ಸಿಕ್ಕಿ ಪತ್ರಿಕೆಗಳ ಮುಖಪುಟವನ್ನು ಅಲಂಕರಿಸಿಯಾಗಿರುತ್ತದೆ. ಮತ್ತದೇ ಘಟನೆಗಳ ಪುನರಾವರ್ತನೆ. ಅದೇ ಅಂತ್ಯವಿಲ್ಲದ ವಾದ ವಿವಾದಗಳು.

ಅಭಿವಕ್ತಿ ಸ್ವಾತಂತ್ರ್ಯ ಎನ್ನುವ ಅಸ್ತ್ರದ ಬಳಕೆ ಈಗ ಮಾಮೂಲಾಗಿ ಬಿಟ್ಟಿದೆ. ಆ ಅಸ್ತ್ರವನ್ನು ಬಳಸಲು ತನಗಿರುವ ಅರ್ಹತೆ ಏನು? ತಾನು ಆ ಅಸ್ತ್ರವನ್ನು ಯಾರ ವಿರುದ್ಧವಾಗಿ, ಯಾವುದರ ವಿರುದ್ಧವಾಗಿ ಬಳಸುತ್ತಿರುವೆನೋ, ಆ ವ್ಯಕ್ತಿ ಅಥವಾ ವಿಷಯದ ಬಗ್ಗೆ ತನಗಿರುವ ಜ್ಞಾನ ಎಷ್ಟು, ತಾನು ಬಳಸುವ ಮಾತುಗಳಿಂದ, ಪರರಿಗೆ ಯಾವ ರೀತಿ ಅವಮಾನವಾಗುತ್ತಿದೆ ಎನ್ನುವುದರ ಗೋಜಿಗೇ ಹೋಗದೇ, ತಾನು ಸುಮ್ಮನಿರುವುದೇ ಮಹಾಪರಾಧ ಎನ್ನುವ ಒಂದೇ ಭಾವದೊಂದಿಗೆ, ಯದ್ವಾ ತದ್ವಾ ಹೇಳಿಕೆಗಳನ್ನು ನೀಡುತ್ತಾರೆ. ಬರಹಗಳನ್ನು ಬರೆದು ಪ್ರಕಟಿಸುತ್ತಾರೆ. ಪ್ರಸ್ತುತ ವಿಷಯದ ಪರಿಧಿಯಿಂದ ಹೊರಗೆ ಅಪ್ರಸ್ತುತವಾದ ವಿಷಯಗಳ ಮೇಲೆ  ಕೈಯಾಡಿಸಿ, ಗಣ್ಯ ವ್ಯಕ್ತಿಗಳ ಮಾನ ಜಾಲಾಡುವ ಯತ್ನಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಪರಿಪಾಠ ಒಮ್ಮೊಮ್ಮೆ ನೈತಿಕತೆಯ ಚೌಕಟ್ಟನ್ನೂ ಮೀರಿ ಬೆಳೆದು ಬಿಡುತ್ತದೆ ಎನ್ನುವುದು ಶೋಚನೀಯ ವಿಚಾರ.

ಪತ್ರಿಕೆಗಳು ತಮ್ಮ ವ್ಯಾಪಾರೀ ಧೋರಣೆಗಳಿಂದಾಗಿ ಇಂಥ ಘಟನೆಗಳಿಗೆ ಒತ್ತು ನೀಡುತ್ತಾ ಬಂದಿವೆ. ಲೇಖನಗಳನ್ನು, ವಾದ ವಿವಾದಗಳನ್ನು ಯಾವುದೇ ತಿದ್ದುಪಡಿ ಇಲ್ಲದೇ ಪ್ರಕಟಿಸಿ, “ಇಲ್ಲಿ ಇರುವವು ಲೇಖಕರ ವೈಯಕ್ತಿಕ ಅನಿಸಿಕೆಗಳು, ಅವುಗಳಿಗೆ ಪತ್ರಿಕೆ ಅಥವಾ ಸಂಪಾದಕರು ಜವಾಬ್ದಾರರಲ್ಲ” ಅನ್ನುವ ಟಿಪ್ಪಣಿ ನೀಡಿ ಕೈತೊಳೆದುಕೊಂಡುಬಿಡುತ್ತವೆ.

ವಾಹನ ಚಲಾಯಿಸುವ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿರುವಾತ, ಒಂದು ದಿನ ಅಪಘಾತಮಾಡಿದಾಗ, ಆತನ ಹಿಂದಿನ ಎಲ್ಲಾ ಸಾಧನೆಗಳನ್ನು ನಗಣ್ಯವಾಗಿಸಿ, ಆತನೋರ್ವ ಸಮಾಜವಿರೋಧಿ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತದೆ. ಇದು ಯಾವ ನ್ಯಾಯ? ಅಪಘಾತ ನಡೆಸಿದ ತಪ್ಪಿಗೆ ಶಿಕ್ಷೆಯಾಗಬೇಕು, ಅನ್ನುವುದು ಸರಿ. ಆದರೆ, ಆತನ ಜನ್ಮ ಜಾಲಾಡಿ, ಚಾರಿತ್ರ್ಯಹನನ ಮಾಡುವ ಆವಶ್ಯಕತೆ ಇರುವುದಿಲ್ಲ. ಅತ ಎಂದೋ, ಯಾವುದೋ ಹಳ್ಳಿಯ  ಯಾವುದೋ ರಸ್ತೆಯ ಬದಿಯಲ್ಲಿ ಬಹಿರ್ದೆಶೆಗೆ ಕೂತಿದ್ದ ಅನ್ನುವಂಥ ಕ್ಷುಲ್ಲಕ ವಿಷಯಗಳಿಗೆ ಪ್ರಾಮುಖ್ಯ ನೀಡಿ ಪ್ರಕಟಿಸಿ, ಹೇಳಿಕೆಗಳನ್ನು ನೀಡಿ, ಆ ವ್ಯಕ್ತಿಯನ್ನು ಜೀವಂತ ಶವವಾಗಿಸುವ ಅನಗತ್ಯ ಯತ್ನಗಳು ಏಕೆ ನಡೆಯಬೇಕು ಅನ್ನುವುದೇ ಅರ್ಥವಾಗುವುದಿಲ್ಲ.

ನಮ್ಮಲ್ಲಿ ಈ ಅಸಹನೆ ಏಕಿದೆ? ಯಾವುದೇ ಘಟನೆಗಳಿಗೆ ವಸ್ತುನಿಷ್ಠ ಪ್ರತಿಕ್ರಿಯೆ ನೀಡುವಲ್ಲಿ ನಾವು ವಿಫಲರಾಗುತ್ತಿರುವುದೇಕೆ? ಯಾವು ಯಾವುದೋ ಘಟನೆಗಳಿಗೆ ಗಂಟು ಹಾಕಿ, ತುಲನೆ ಮಾಡಿ, ತಿರಸ್ಕರಿಸಿಬಿಡುವುದೇಕೆ? ಶಾಂತಚಿತ್ತದಿಂದ ಪ್ರತಿಸ್ಪಂದಿಸುವುದು ಮತ್ತು ಪ್ರತಿಕ್ರಿಯಿಸುವುದು ನಮಗೆ ಅಸಾಧ್ಯವಾಗುತ್ತಿರುವುದೇಕೆ?

ಇವಕ್ಕೆಲ್ಲಾ ಕಾರಣ ನಮ್ಮ ಆಹಾರ ಪದ್ಧತಿಯೇ ಇರಬಹುದೇ? ನಮ್ಮ ಜೀವನ ಪದ್ಧತಿಯೇ ಇರಬಹುದೇ? ಸ್ವಪ್ರತಿಷ್ಠೆ, ಅಸಹಾಯಕತೆ ಅಥವಾ ಸಂಕುಚಿತ ಮನೋಭಾವ ಕಾರಣವಾಗಿರಬಹುದೇ? ಅಥವಾ ಅನ್ಯರ ಏಳಿಗೆಯನ್ನು ಕಂಡಾಗ, ಪರೋಕ್ಷವಾಗಿ ಪ್ರಕಟಗೊಳ್ಳುವ ನಮ್ಮೊಳಗಿನ ಹೊಟ್ಟೆಕಿಚ್ಚು ಇದಾಗಿರಬಹುದೇ? ವಾಸ್ತವವನ್ನು ಸ್ವೀಕರಿಸಲು ಅಸಮರ್ಥರಾಗಿರುವುದರ ಸೂಚನ ಇದಾಗಿರಬಹುದೇ?  ಜೀವನದಲ್ಲಿ ಯಾವುದೋ ಮರೀಚಿಕೆಯ ಹಿಂದೆ ಓಡುತ್ತಿರುವಾಗ, ನಮಗೆ ಆಗಾಗ ಅಗುವ ಸೋಲಿನ ಅನುಭವವನ್ನು ನಮ್ಮೊಳಗೆ ಅದುಮಿಡುತ್ತಾ, ಆಂತರಿಕ ಒತ್ತಡವನ್ನು, ಇನ್ನಾವುದೋ ರೀತಿಯಲ್ಲಿ ಹೊರಹಾಕಲು ಕಂಡುಕೊಂಡ ಪರೋಕ್ಷ ಮಾರ್ಗವೇ? ಖಾಸಗಿ ಜೀವನದಲ್ಲಿನ ನೆಮ್ಮದಿಯ ಕೊರತೆ, ಸಾರ್ವಜನಿಕವಾಗಿ ಸದಾ ಸುದ್ದಿಯಲ್ಲಿ ಇರಬೇಕೆನ್ನುವ ಅಪೇಕ್ಷೆಯಾಗಿ ಮಾರ್ಪಟ್ಟಿರಬಹುದೇ?

ಈ ನಿಟ್ಟಿನಲ್ಲಿ ಚಿಂತನೆ ನಡೆಸುವ ಅಗತ್ಯ ಇದೆ. ಎಲ್ಲದಕ್ಕೂ ಒಂದೇ ಅಸ್ತ್ರವನ್ನು ಬಳಸುವ ಬದಲು, ಸಂದರ್ಭೋಚಿತವಾಗಿ ಸ್ಪಂದಿಸುವ ಮತ್ತು ಪ್ರತಿಕ್ರಿಯಿಸುವ ಅಗತ್ಯ ಇದೆ. ಇದೆಯಲ್ಲವೇ?

******

“ನಿರಂತರ ಕರ್ನಾಟಕ” ವಾರಪತ್ರಿಕೆಯಲ್ಲಿ ಈ ವಾರ ಪ್ರಕಟವಾಗಿರುವ ಲೇಖನ


ಶುಭ ಹಾರೈಕೆಗಳು!

08 ಮಾರ್ಚ್ 11

 

ಅಜ್ಜಿಯಾಗಿ
ದೊಡ್ಡಮ್ಮನಾಗಿ
ಅಮ್ಮನಾಗಿ
ಚಿಕ್ಕಮ್ಮನಾಗಿ
ಅತ್ತೆಯಾಗಿ
ಅತ್ತಿಗೆಯಾಗಿ
ಅಕ್ಕನಾಗಿ
ತಂಗಿಯಾಗಿ
ಶಿಕ್ಷಕಿಯಾಗಿ
ಸಹಪಾಠಿಯಾಗಿ
ಸಹೋದ್ಯೋಗಿಯಾಗಿ
ಗೆಳತಿಯಾಗಿ
ಮಡದಿಯಾಗಿ
ನಾದಿನಿಯಾಗಿ
ಮಗಳಾಗಿ
ಸೋದರ ಸೊಸೆಯಾಗಿ
ಕಂಡರಿಯದ ಸ್ನೇಹಿತೆಯಾಗಿ
ಕೆಲವೊಮ್ಮೆ ಏನೂ ಅಲ್ಲವಾಗಿ
ಹಲವೊಮ್ಮೆ ಎಲ್ಲವೂ ಆಗಿ
ಬಹುರೂಪದಲಿ
ನನ್ನೀ ಮನದಲಿ
ಮನೆಮಾಡಿ ಅವಿತು ಕೂತ
ಅಸಂಖ್ಯಾತ ಮಹಿಳೆಯರನೆಲ್ಲಾ
ಮನದಲಿಂದು ನೆನೆಯುತ್ತಾ
ಅವರೆಲ್ಲರಿಗೂ ಮನದುಂಬಿ
ಶುಭ ಹಾರೈಸುವೆನು ನಾನೀ
ಮಹಿಳಾದಿನಾಚರಣೆಯ
ಸುಸಂದರ್ಭದಲ್ಲಿ!
********