ಯುಗಾದಿಯಂದು ಸಮೋಸಗಳ ವಿನಿಮಯ!!!

28 ಮಾರ್ಚ್ 09

ನಿನ್ನೆ ಯುಗಾದಿಯಂದು ಎಲ್ಲರೂ ಸಮೋಸಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾಗ ನಾನು ನನ್ನದೇ ಶೈಲಿಯಲ್ಲಿ ಈ ನಾಲ್ಕು ಸಾಲುಗಳನ್ನು ಎಲ್ಲರಿಗೂ ರವಾನಿಸಿದ್ದೆ.

ಕಹಿ ಇರಲಿ
ಆ ಕಹಿಯ ಮರೆಸುವ
ಸಿಹಿ ಇರಲಿ

ನೋವಿರಲಿ
ಆ ನೋವ ಮರೆಸುವ
ನಲಿವಿರಲಿ

ಬೇವಿರಲಿ
ಆ ಬೇವಿಗೆ ಬೆಲ್ಲದ
ಸಿಹಿ ಇರಲಿ

ವಿರೋಧಿ ಇದು
ಸಂವತ್ಸರದ ನಾಮವಷ್ಟೇ
ಆಗಿರಲಿ
ವರುಷವಿಡೀ ಹರುಷ,
ಸುಖ, ನೆಮ್ಮದಿ ಇವು
ಸ್ನೇಹದಿಂದ ನಿಮ್ಮ
ಸನಿಹದಲೇ ಇರಲಿ!!!

ಇದಕ್ಕೆ ನನ್ನ ತಮ್ಮ, ಆತ್ರಾಡಿ ಪೃಥ್ವಿರಾಜ್ ಹೆಗ್ಡೆಯಿಂದ ಬಂದ ಕವನ ರೂಪದ ಸಮೋಸ:

ನಿನ್ನ ಕವನ ಬಂದು
ಇಂದು ಹೇಳಿತೆನಗೆ
ಯುಗಾದಿಯೆಂದು

ಮನವ ಸೆಳೆದು
ಹೃದಯ ಬಡಿದು
ತೋರಿತೆನೆಗೆ
ಅಮೃತ ಸಿಂಧು,

ಎಚ್ಚರಾಯ್ತು ನಿನ್ನ
ಕವನ ಬಂದ ಸದ್ದಿಗೆ

ಮನವು ಶುಭ್ರವಾಯ್ತು
ಭಾವಪೂರ್ಣ ವಿಷಯ
ನೀಡಿ ಬುದ್ಧಿಗೆ.

ಕವನ ಹುಟ್ಟುವಡೆವ
ಸೃಷ್ಟಿಗೈವ ಬ್ರಹ್ಮಶಕ್ತಿ
ನಿನ್ನ ಕವನಕೆ

ಬರುವ ಯುಗಾದಿವರೆಗೆ
ನಿನ್ನ ನೆನಪ ಹೊತ್ತು
ನಡೆವ ಯೋಗ ಎನ್ನ
ಕಾವ್ಯ ಚರಣಕೆ!!!

ಸಮೋಸ: ಸರಳ ಮೊಬೈಲ್ ಸಂದೇಶ.

Advertisements

ರಂಭ ಚಿಕ್ಕಮ್ಮನಿಗೆ ವಿದಾಯ!

28 ಮಾರ್ಚ್ 09
chikkamma01
ಶ್ರೀಮತಿ ರಂಭ ವಿಠಲ ಶೆಟ್ಟಿ
(ಪಯಣ: 12 ಡಿಸೆಂಬರ್ 1932 ರಿಂದ 17 ಮಾರ್ಚ್ 2009ರ ವರೆಗೆ)
 
 ಹೊರಟು ಬಿಟ್ಟಿರಾ ಚಿಕ್ಕಮ್ಮ ತಮ್ಮ ಕರ್ತವ್ಯ ಮುಗಿಯಿತೆಂದು
ನಮ್ಮಮ್ಮ ಕೇಳುತ್ತಿದ್ದಾರೆ ನನ್ನ ಮುದ್ದಿನ ತಂಗಿ ಎಲ್ಲಿ ಎಂದು
 
ಹೋದೆಯಾದರೂ  ಮರಳಿ ಬಂದು ಬಿಡು ತಂಗೀ ಬೇಗ
ನೀನು ನನಗೆ ಅಕ್ಕನಾಗು ನಾ ನಿನಗೆ ತಂಗಿಯಾಗುವೆ ಆಗ 
 
ಬಾ ತಂಗಿ ಆಡೋಣ ಬಾಲ್ಯದ ಆಟಗಳನು ನಾವು ಜೊತೆಯಾಗಿ
ಎಂದು ಕರೆಯುತ್ತಿದ್ದರೂ ಕೇಳದೇ ನೀವು ಮಲಗಿದ್ದಿರಿ ಅಂದು ಶವವಾಗಿ
 
ನಿಮ್ಮ ಅಂದಿನ ಅತಿಥಿ ಸತ್ಕಾರದ ಶೈಲಿಯ ಮೆಚ್ಚಿ ಹೊಗಳದವರಿಲ್ಲ
ಅದಕ್ಕೇ ನಮ್ಮಪ್ಪಯ್ಯ ನಿಮಗೆ ಅನ್ನಪೂರ್ಣೆ ಎಂಬ ಹೆಸರನ್ನಿಟ್ಟಿದ್ದರಲ್ಲ
 
ನಿಮ್ಮ ಆತ್ಮಕ್ಕೆ ಆ ಪರಮಾತ್ಮನಲ್ಲಿ  ಶಾಂತಿಯನು ಕೋರುವೆ
ಮತ್ತೆ ಹುಟ್ಟಿದರೆ ನಮಗೆಲ್ಲ ಒಂದೇ ಮನೆಯಂಗಳವ ಬೇಡುವೆ.

ತೀರ್ಥರೂಪರ ಸ್ಮರಣೆಯಲ್ಲಿ!

28 ಮಾರ್ಚ್ 09
appayya
ಡಾ. ಯು. ಚಂದ್ರಶೇಖರ್
ಪಯಣ: ಶುಕ್ರವಾರ, ೧೧ ಮಾರ್ಚ್ ೧೯೨೭ ರಿಂದ 
ಶುಕ್ರವಾರ, ೨೮ ಮಾರ್ಚ್ ೨೦೦೩ರ ವರೆಗೆ.
 
ನೀವು ನಮ್ಮನ್ನಗಲಿ ಇಂದಿಗೆ ಆರು ವರುಷಗಳು ಕಳೆದರೂ ಎಲ್ಲವೂ ನಿನ್ನೆ ಮೊನ್ನೆ ನಡೆದಂತೆ ಅನ್ನಿಸುತ್ತಿದೆ.
ನಿಮ್ಮ ಅಂದಿನ ನುಡಿಗಳೇ ಇಂದಿಗೂ ಹೆಜ್ಜೆ ಹೆಜ್ಜೆಗೂ ನನಗೆ ಮಾರ್ಗದರ್ಶನ ನೀಡುತ್ತಿವೆ.
ನೀವು ನಮ್ಮನ್ನಗಲಿದ ಮೂರು ದಿನದ ನಂತರ ನಾನು ಬರೆದ ಕವನ ಇಲ್ಲಿದೆ. ಓದ ಬಲ್ಲಿರಾ ಅಲ್ಲಿಂದಲೇ?
ಓದಿ ನನ್ನಿಚ್ಛೆಯನ್ನು ನಡೆಸಿಕೊಡಬಲ್ಲಿರಾ?
ನಿಮ್ಮ ಮೊಮ್ಮಗ ಕೃಷ್ಣರಾಜ ಬಿಡಿಸಲೆತ್ನಿಸಿದ ನಿಮ್ಮ ಚಿತ್ರವೂ ಇಲ್ಲಿದೆ.
appu 
 
ಬನ್ನಿ ಅಪ್ಪಯ್ಯ, ನನ್ನಲೊಂದಾಗಿ!
 
ಅಪ್ಪಯ್ಯಾ,
ಹಿಂದೆ ಎಲ್ಲಿಗೆ ಹೊರಡುವಾಗಲೂ ನೀವು,
ನಮ್ಮನ್ನೆಲ್ಲಾ ಕರೆದು, ನೀವಿಲ್ಲದಾಗ ನಾವು,
ಇಲ್ಲಿ ಮನೆಯಲ್ಲಿ ಹೇಗಿರಬೇಕೆಂದು ತಿಳಿಸಿ
ಬಸ್ಸು ಹತ್ತುತ್ತಿದ್ದವರು ನಮ್ಮೆಲ್ಲರ ಹರಸಿ;
 
ಇಂದು ಕಿವಿಗೊಟ್ಟು ನಿಲ್ಲದೇ ನಮ್ಮ ಕೂಗಿಗೆ,
ಇನ್ನೆಂದಿಗೂ ಮರಳಿ ಬಾರದ ದೂರದೂರಿಗೆ;
ಹೊರಟೇ ಹೋದಿರಲ್ಲಾ ಅಪ್ಪಯ್ಯಾ ನೀವು,
ಎಂತಿರಬೇಕು ನಿಮನ್ನಗಲಿ ಇಲ್ಲಿ ನಾವು?
 
ಕಾಣ ಸಿಕ್ಕಿರಬಹುದು ನಿಮಗಲ್ಲಿ ನಿಮ್ಮಮ್ಮ-ಅಪ್ಪ,
ನಮ್ಮ ಮುದ್ರಾಡಿಯಜ್ಜ, ಮತ್ತೆ ‘ಗುಡ್‌ಗುಡ್’ ದೊಡ್ಡಪ್ಪ;
ಸಿಕ್ಕಿರಬಹುದು ನಿಮಗೆ ನಿಮ್ಮ ಮೆಚ್ಚಿನ ಕವಿ ಕುವೆಂಪು,
ಕೇಳಿ ಬಂದಿರಬಹುದು ಬೇಂದ್ರೆಯವರ ಹಾಡಿನ ಇಂಪು;
 
ಬರಿನೆಲದಿ ಮುಸುಕೆಳೆದು ಮಲಗಿದ್ದ ನಿಮ್ಮತ್ತ, 
ನೋಡಲೆನಗೆ ಧೈರ್ಯ ಸಾಲಲಿಲ್ಲ, ಇದು ಸತ್ಯ;
ಮತ್ತೆ ಅಂದುಕೊಂಡೆ, ನಿಮ್ಮ ಮಗನಲ್ಲವೇ ನಾನು,
ಹೇಡಿಯಾದರೆ, ಅದು, ನಿಮಗೇ ಕಡಿಮೆಯಲ್ಲವೇನು?
 
ನಾನಳುವುದ ಕಂಡು ನೀವು ಒಳಗೊಳಗೆ ನಕ್ಕಂತೆ,
ಅನ್ನಿಸಿತ್ತು ನನಗೆ ನೀವೆನ್ನ ಗದರಿಸುತಿರುವಂತೆ;
‘ಸತ್ತಮೇಲೆ ನಮ್ಮ ತಲೆ ಎತ್ತಾದರೇನಂತೆ’,
ನಂಬಿದ್ದೆ ಇದುವರೆಗೆ ನಾನೂ ನಿಮ್ಮಂತೆ;
 
ನನ್ನ ಮಾತಿಗಿನ್ನು ಇಲ್ಲಿ ಕಿವಿಗೊಡುವವರಾರು?
ಸಂಪ್ರದಾಯಗಳ ಮೀರಲೆನ್ನ ಬಿಡುವವರಾರು?
ಹೌದು ಅಪ್ಪಯ್ಯಾ, ಅರಿವಾಗುತಿದೆ ನನಗಿಂದು,
ನೀವಿಲ್ಲದೆ ನಾನೊಂದು ಯಃಕಶ್ಚಿತ್ ಬಿಂದು;
 
ಆಡನ್ನು ಹಿಂಬಾಲಿಸಿ ನಡೆವ ಕುರಿಯಂತೆ,
ನಾನೂ ಆಡಿದೆ ಜನರಿಂದು ಆಡಿಸಿದಂತೆ;
ಜೀವ ಪಕ್ಷಿಯೇ ಇಲ್ಲದ ನಿರ್ಜೀವ ಗೂಡಿಗೆ,
ಶೃಂಗಾರ ಮಾಡಿ ನಡೆಸಿದೆವು ಮೆರವಣಿಗೆ;
 
ನನ್ನ ಹೊಡೆದರೂ ತಾನೇ ನೊಂದು ನನಗಿಂತ ಹೆಚ್ಚು,
ಮರುಗುತ್ತಿದ್ದ ಜೀವಕ್ಕೆ ನಾನೇ ಇಟ್ಟೆ ಇಂದು ಕಿಚ್ಚು;
ನಾಲ್ಕು ದಶಕಗಳ ನಮ್ಮ ಸಂಬಂಧದ ಕೊಂಡಿ, 
ಕಳಚಿಕೊಂಡು ಗಳಿಗೆಯಲಿ ಭಸ್ಮವಾಯಿತು ನೋಡಿ;
 
ನೀವಿದ್ದಾಗ ಇಣುಕಿ ನೋಡಿ ಕೇಳದೇ ಸುಖ ಕಷ್ಟ,
ಇಂದು ಆಡುತ್ತಿದ್ದರು ತಮಗಾದಂತೆ ಭಾರೀ ನಷ್ಟ;
ನಾನು ಕಂಡಂತೆ ಅವರ, ಗೊತ್ತು, ಕಂಡಿದ್ದೀರಿ ನೀವೂ,
ಇವರ ಡಂಬಾಚಾರಕ್ಕೆ ಬರಿದೆ ನಗಬೇಕಲ್ಲವೇ ನಾವು?
 
ಆತ್ಮಸಾಕ್ಷಿಯೇ ಇಲ್ಲದೇ ನಾಟಕವಾಡುವವರು,
ಇಲ್ಲಿ ನಿಂತು ನಿಮ್ಮಾತ್ಮಕ್ಕೆ ಶಾಂತಿ ಕೋರುವವರು;
ಅವರ ಬಡಿದು ನಗ್ನರನ್ನಾಗಿಸಬೇಕೆಂಬ ಆಸೆ ಇತ್ತಲ್ಲಿ,
ಆದರೆ ಬೆನ್ನು ತಟ್ಟಿ ‘ಭೇಷ್’ ಎನ್ನಲು ಇರಲಿಲ್ಲ ನೀವಲ್ಲಿ;
 
ಏನ ಮಾಡಿ ಯಾರ ಮೆಚ್ಚಿಸಬೇಕಾಗಿದೆ ನಾನಿನ್ನು?
ನೀವಲ್ಲದೆ ಯಾರಾದರೂ ನನ್ನ ಏಕೆ ಮೆಚ್ಚಬೇಕಿನ್ನು?
ಚಿಕ್ಕಂದಿನಿಂದಲೂ ನಿಜದಿ ಇತ್ತೆನಗೆ ನಿಮ್ಮ ಮೆಚ್ಚಿಸುವಾಸೆ,
ಆದರೆ ತೃಪ್ತರಾಗದೇ, ನಿಮಗೆ, ನನ್ನನ್ನಿನ್ನೂ ಬೆಳೆಸುವಾಸೆ;
 
ನಿಮ್ಮ ಅತೃಪ್ತಿಗೂ ನನ್ನ ಛಲಕ್ಕೂ ಸತತ ಪೈಪೋಟಿ,
ಹಾಗಾಗಿ ಅಪ್ಪಯ್ಯಾ ಇಂದು ನಿಜದಿ ನನಗಾರಿಹರು ಸಾಟಿ?
ನಡೆ ನುಡಿಗಳಲಿಂದು ಅಪ್ಪನಂತಹ ಮಗನೆನಿಸಿಕೊಂಡೆ,
ನಿಮ್ಮ ಮಗನಾದುದಕೆ ನಾನಿಂದು ಧನ್ಯನೆನಿಸಿಕೊಂಡೆ;
 
ಇನ್ನು ನನ್ನ ತಪ್ಪುಗಳ ಹುಡುಕಿ ಹೇಳುವವರಾರು?
ಹತ್ತಿರ ಕರೆದು ನನ್ನ ಗದರಿಸಿ ಬೆದರಿಸುವವರಾರು?
ನನ್ನ ಮೊಂಡುತನಕ್ಕೆ ಸವಾಲೆಸೆಯುವವರಾರು?
ಹಾಗಲ್ಲ ಮಗಾ ಹೀಗೆಂದು ನನ್ನ ತಿದ್ದುವವರಾರು?
 
ನಿಮ್ಮ ಕನಸುಗಳ ನನಸಾಗಿಸಬೇಕೆಂಬ ಬಲವಾದ ಇಚ್ಚೆ
ನನ್ನಲ್ಲಿ ಇರುವಾಗ ಬರುವ ಕಷ್ಟಗಳು ನನಗೆ ಹೆಚ್ಚೆ?
ಯಾರು ಏನೆಂದರೇನು, ಇರಲೆನಗೆ ನಿಮ್ಮ ಶ್ರೀರಕ್ಷೆ,
ನಿಮ್ಮ ಹಾದಿಯಲೇ ನಡೆಯಲಿಂದು ತೊಡುತ್ತೇನೆ ದೀಕ್ಷೆ;
 
ಬನ್ನಿ ಅಪ್ಪಯ್ಯ ನನ್ನಲೊಂದಾಗಿ, ನಾನೇ ನೀವಾಗಿ,
ಜೀವನ ಪಥದಲ್ಲಿ ನನ್ನ ಮನೋರಥಕ್ಕೆ ಸಾರಥಿ ಆಗಿ;
ನಿಮ್ಮ ಅಪೂರ್ಣ ಕಾರ್ಯಗಳ ಮುಗಿಸೋಣ ಬನ್ನಿ,
ನಿಮ್ಮೆಲ್ಲ ಶಕ್ತಿಯನೂ ನನಗಿಂದು ಧಾರೆಯೆರೆದು ತನ್ನಿ!
*-*-*-*-*-*-*-*-*-*-*-*-*–*-*-*-*
೩೧ ಮಾರ್ಚ್ ೨೦೦೩, ಸೋಮವಾರ, ೭.೦೦ ಘಂಟೆ, ಸಾಯಂಕಾಲ.

ಸಾವಂತಳ ತಂಡ ನರ್ತಿಸಬಹುದು ಬಿಚ್ಚಿ ಬಟ್ಟೆ ಬರೆ!!

26 ಮಾರ್ಚ್ 09
ರಾಜಕೀಯದಿಂದ ಈ ಮೊದಲೇ ಕುಲಗೆಟ್ಟ ಆಟ
ಕ್ರಿಕೆಟ್ಟಿಗೆ ಈಗ ನೋಡಿದರೆ ಉದ್ಯಮಿಗಳ ಕಾಟ
 
ಚಿಂತಿಲ್ಲ ನಮ್ಮೂರಲ್ಲಾಟ ನಡೆಯಗೊಡದಿದ್ದರೂ
ನಡೆಸಲೇ ಬೇಕೆಂಬ ಹಟ ಪರದೇಶದಲ್ಲಾದರೂ
 
ಆಟಗಾರರ ಮನದಿಚ್ಛೆಗೆ ಇಲ್ಲಿ ಎಳ್ಳಷ್ಟೂ ಇಲ್ಲ ಬೆಲೆ
ಬೆಲೆ ಕಟ್ಟಿ ಕೊಂಡುಕೊಂಡಾಗಿದೆ ಅವರೆಲ್ಲರ ತಲೆ
 
ಆಟ ಹೇಗಿದ್ದರೂ ಚಿಂತಿಲ್ಲ ಆಟ ನಡೆಯಲೇ ಬೇಕು
ಗೆಲುವು ಮುಖ್ಯ ಅಲ್ಲ ಜಾಹೀರಾತು ಭರ್ಜರಿ ಬೇಕು
 
ಐದು ದಿನಗಳ ಆಟ ಆಗಲೇ ದಿನವೊಂದಕ್ಕೆ ಇಳಿದಿತ್ತು
ಒಂದು ದಿನದಿಂದ ಈಗ ಎರಡು ಘಂಟೆಗೂ ಬಂತು
 
ಹೀಗೆಯೇ ಮುಂದುವರೆದರೆ ನಿಜಕೂ ಒಂದು ದಿನ
ಆಟ ನೋಡಲು ಬರಲೇ ಬೇಕೆಂದೇನಿಲ್ಲ ಅಲ್ಲಿ ಜನ
 
ನಾಣ್ಯವನು ಚಿಮ್ಮಿಸಿಯೇ ನಿರ್ಧರಿಸಿ ಬಿಡಬಹುದು
ಅಂಬಾನಿಯೋ ಮಲ್ಯನೋ ಅಲ್ಲಿ ಗೆದ್ದು ಬಿಡಬಹುದು
 
ಶೆಟ್ಟಿ ಶಾರೂಖ ಝಿಂಟಾ ಸೇರಿ ಚಪ್ಪಾಳೆ ತಟ್ಟಿದರೆ
ಸಾವಂತಳ ತಂಡ ನರ್ತಿಸಬಹುದು ಬಿಚ್ಚಿ ಬಟ್ಟೆ ಬರೆ

ಆರ್ಥಿಕ ಹಿಂಜರಿತ!!!

25 ಮಾರ್ಚ್ 09
ಎಲ್ಲಿ ಕೇಳಿದರೂ ಈಗ ಬರಿಯ ಹಿಂಜರಿತದ ಮಾತು
ಎರಡಡಿ ಮುಂದಿಟ್ಟು ಒಂದು ಹಿಂದಕ್ಕಿಡುವ ಮಾತು
 
ಅಮೇರಿಕದಲ್ಲೆಲ್ಲೋ ಭೂಕಂಪ ಆದರೆ ನಮಗಿಲ್ಲಿ ನಡುಕ
ಹೊಂದಾಣಿಕೆಯ ಬಾಳ್ವೆಗೆ ಉದಾಹರಣೆ ಬೇರೆ ಬೇಕಾ
 
ಪ್ರತೀ ಸಲದಂತೆ ವರ್ಷದ ಅಂತ್ಯದಲಿ ಏರಿಸಿದ್ದ ಸಂಬಳ
ಈ ಹಿಂಜರಿತದಿಂದ ಹಿಂಪಡೆದು ತಂದರಲ್ಲಾ ತಳಮಳ
 
ಏರಿಸಿದ್ದ ಅಷ್ಟಕ್ಕೂ ಮತ್ತಷ್ಟನ್ನು ಕೂಡಿಸಿ ಹಿಂದೆ ಪಡೆದರು
ಬಳೆ ತೊಡಿಸ ಬಂದವರು ನಮ್ಮ ಹಸ್ತವನೇ ನುಂಗಿದರು
 
ಮನೆಯ ಪರಿಸ್ಥಿತಿ ಕೇಳಿದರೆ ಹೇಳಲೇನಿಲ್ಲ ಕತೆ ಬೇರೆ
ಮುಂಜಾವಿನ ಕಾಫಿಯ ಬದಲಿಗೆ ಈಗ ಅಲ್ಲಿ ಬಿಸಿ ನೀರೆ
 
ಅಕ್ಕಿಯ ಬದಲಿಗೆ ಈಗ ಬರಿಯ ರಾಗಿ ಗೋಧಿಯ ತಿಂಡಿ
ರುಚಿ ಸತ್ತ ನಾಲಗೆಗೆ ದಿನವೂ ತಿಂದಂತಾಗುತ್ತಿದೆ ಹಿಂಡಿ
 
ಪೇಟೆಯಲ್ಲಿರುವ ಹೋಟೇಲುಗಳ ಬೋರ್ಡು ಓದಿಕೊಂಡು
ಬಂದರಿಲ್ಲಿ ನಮಗೆ ಗಂಜಿ ಜೊತೆಗೆ ಉಪ್ಪಿನಕಾಯಿ ತುಂಡು 
 
ಇನ್ನೆಷ್ಟು ದಿನ ಸಹಿಸಬೇಕಿದೆಯೋ ಹಿಂಜರಿತದ ಈ ಬವಣೆ
ಹೀಗೆಯೇ ಮುಂದುವರೆದರೆ ಾಳೆ ಹೇಗೋ ಏನೋ ಕಾಣೆ

ಹೀಗೊಂದು ಕವಿತಾ “ಜುಗಲ್ ಬಂಧಿ”

25 ಮಾರ್ಚ್ 09

ಜೀವನವೇ ಒಂದು ಜೋಕಾಲಿ
ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ
ಅವಳಿಲ್ಲದೆ ನೀ ಬದುಕುವುದ ಕಲಿ

ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು
ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು

ಪ್ರೀತಿಯ ಕೊಳದಲ್ಲಿ ಹೆಣ್ಣಿನ ಆಂತರ್ಯವ ಹುಡುಕದಿರು
ನೆನಪುಗಳ ಕೆದಕಿ ಕೆದಕಿ ಕೊರಗದಿರು ನೀ ಮರುಗದಿರು

ಹಗಲು ಇರುಳು ಅವಳ ನೆನಪಲ್ಲೇ ಕಾಲ ಕಳೆದೆ ಗೆಳೆಯ
ಆ ನೆನಪುಗಳ ಚಕ್ರವ್ಯೂಹದಿಂದ ಹೊರಗೆ ಬಾ ಆತ್ಮೀಯ

ನೀ ನೋಡಬೇಕಿರುವುದು ಸಾಕಷ್ಟಿದೆ ಕಣ್ತೆರೆದು ನೋಡೆಯ
ನೀ ಸಾಧಿಸಬೇಕಿರುವುದು ಬೇಕಾದಷ್ಟಿದೆ ಮನಸಿಟ್ಟು ಮಾಡೆಯ
– Vರ ( Venkatesha ರಂಗಯ್ಯ )

ಹೃದಯ ಖಾಲಿ ಖಾಲಿ ಎನ್ನುವೆ ನಿಜ ಗೆಳೆಯಾ
ಖಾಲಿ ಹೃದಯದೊಂದಿಗೆ ಬದುಕ ಕಲಿ ಎನ್ನುವೆಯಾ?

ಕೈಕೊಟ್ಟು ಹೋದವಳ ಬಗ್ಗೆ ಚಿಂತಿಸದಿರಬಹುದು
ಮನಸ ಕದ್ದು ಹೋದವಳ ಹೇಗೆ ಮರೆಯಬಹುದು

ಮೂರು ದಿನದ ಪ್ರೀತಿಯಾದರೂ ಅದು ಹುಸಿಯಲ್ಲ ನನಗೆ
ಮೂರು ದಿನಗಳಲೇ ಮೂರು ಜನ್ಮದ ಅನುಭವ ಆಯ್ತೆನಗೆ

ಪ್ರೀತಿಯ ಕೊಳದಲ್ಲಲ್ಲ ನನ್ನಂತರ್ಯದಲಿ ನಾನವಳ ಹುಡುಕುತಿರುವೆ
ಕೊರಗದಿರಲು ಮರುಗದಿರಲು ನಾನೀಗ ನಾನಾಗಿ ಎಲ್ಲಿ ಉಳಿದಿರುವೆ

ಕಣ್ತೆರೆದು ನೋಡಲು ನನಗೆ ಕಾಣುವುದು ಹಗಲಿರುಳು ಅವಳದೇ ರೂಪ
ಸಾಧಿಸಲು ಬಹಳಷ್ಟಿರಬಹುದು ಯಾರಿಗಾಗಿ ಸಾಧನೆ ಹೇಳು ನೀ ಸ್ವಲ್ಪ
-ಆಸು ಹೆಗ್ಡೆ

ಮೋಸ ಮಾಡಲೆಂದೇ ಪ್ರೀತಿಯ ನಾಟಕ ಆಡಿದಳಾಕೆ
ಹುಸಿ ಪ್ರೀತಿ ಕೊಟ್ಟವಳ ನೆನೆಯುವುದೇಕೆ
ನೆನೆದು ನೆನೆದು ಅವಳ ನೆನಪಲ್ಲೇ ಕೊರಗುವುದೇಕೆ

ಜನ್ಮ ಜನ್ಮದ ಗೆಳತಿ ಎಂದೆನೆಸಿ ಕೊಟ್ಟೆ ನಿನ್ನ ಮನಸು
ಕೈ ಕೊಟ್ಟಳೆಂದು ಅರಿತ ಮೇಲೆ ಬೇಕೇ ಅರ್ಥವಿಲ್ಲದ ಮುನಿಸು

ಅವಳ ಮೂರು ದಿನದ ಪ್ರೀತಿ ಮೂರು ಜನ್ಮಕ್ಕೆಂದು ಅರಿಯದಿರು
ಈ ಸುಳ್ಳು ಸುಳ್ಳು ಭ್ರಮೆಗೆ ತಲೆ ಬಾಗದೆ ಮುನ್ನುಗ್ಗುತಿರು

ಅವಳಿಂದಾಗಿ ನಿನ್ನ ಬಾಳ ನೌಕೆ ನಡೆಯುತಿರಲಿಲ್ಲ ಗೆಳೆಯ
ನಿನ್ನ ನೌಕೆಯಲ್ಲಿ ಅವಳು ಅಲ್ಪಕಾಲದ ಪ್ರಯಾಣಿಕಳು ಅಷ್ಟೇ ತಿಳಿಯ
– Vರ ( Venkatesha ರಂಗಯ್ಯ )

ಮೋಸದಾಟದ ಪ್ರೀತಿ ಅವಳದಾಗಿದ್ದಿರಬಹುದು ಬಿಡು
ನನ್ನ ಪ್ರೀತಿ ನಿಜವಾಗಿದ್ದಿರಲು ಹೇಗನ್ನಲಿ ಬಿಟ್ಟು ಬಿಡು

ಹುಸಿ ಪ್ರೀತಿ ಕೊಟ್ಟವಳ ನಾನು ಇಂದು ನೆನೆಯುವುದಲ್ಲ
ನಾ ಪ್ರೀತಿಸಿದ ನನ್ನವಳ ನನ್ನಿಂದ ಮರೆಯಲಾಗುವುದಿಲ್ಲ

ನೆನೆ ನೆನೆದು ಅವಳ ನೆನಪಲ್ಲೆ ನಾ ಕೊರಗುತಿರುವುದಲ್ಲ
ಪ್ರೀತಿಯ ಆ ಕ್ಷಣಗಳೇ ನನ್ನ ಎಡೆಬಿಡದೆ ಕಾಡುತಿಹುದಲ್ಲ

ಮನಸ ಕೊಡುವಾಗ ಏನೋಂದನೂ ನಾ ಎಣಿಸಿರಲೇ ಇಲ್ಲ
ಅಳೆದು ಎಣಿಸಿ ಕೊಡಲು ಅದು ವ್ಯಾಪಾರವಾಗಿರಲೇ ಇಲ್ಲ

ಮುನಿಸಿಲ್ಲ ನನ್ನ ಮನದಿ ಇಂದು ಇಹುದು ಬರಿದೆ ಪರಿತಾಪ
ನಿಸ್ವಾರ್ಥ ಪ್ರೀತಿಯ ಮರೆಯೆ ಆಕೆಗೆ ತಟ್ಟದಿಹುದೇ ಶಾಪ

ಅವಳಲ್ಲ ನಾನು ಅನುಭವಿಸಿದೆ ಮೂರು ಜನುಮದ ಪ್ರೀತಿ
ಭ್ರಮೆಯಲ್ಲ ನೋಡು ನನ್ನನ್ನು ಇಲ್ಲಿ ಚುಚ್ಚಿ ಕೊಲ್ಲುತಿಹ ರೀತಿ

ನನ್ನ ಬಾಳ ನೌಕೆಗೆ ಅವಳಲ್ಲ ನಾವಿಕಳು ನಿಜದಿ ನನಗೆ ಗೊತ್ತು
ಎಳೆಯ ಬಹುದಿತ್ತು ಜೀವನದಬಂಡಿ ಆಗಿ ನಾವು ಜೋಡಿ ಎತ್ತು
-ಆಸು ಹೆಗ್ಡೆ

ಕಳೆದುಕೊಂಡಿರುವ ಪ್ರೀತಿಯ ನೆನೆಯುವುದರಲಿ ಪ್ರತಿಫಲ ಇಲ್ಲ
ಎಷ್ಟೇ ಅತ್ತರು, ಎಷ್ಟೇ ನೊಂದರು ಅವಳೇನು ಮರಳಿ ಬರುವುದಿಲ್ಲವಲ್ಲ
ಅವಳ ನೆನಪಲ್ಲೇ ಕೊರಗುವುದರಲ್ಲಿ ಅರ್ಥವಿಲ್ಲ
– Vರ ( Venkatesha ರಂಗಯ್ಯ )

ನೆನೆಯುವುದು ನೆನೆಯದಿರುವುದು ಎರಡೂ ನಮ್ಮ ಕೈಯಲ್ಲಿಲ್ಲ
ಸಾಂತ್ವನದ ನುಡಿ ಬೇಕು, ಆದರೆ ಕಾಲವೇ ಮದ್ದು ಅದಕ್ಕೆಲ್ಲ
-ಆಸು ಹೆಗ್ಡೆ.

ಇದು ನಡೆದದ್ದು ನಿನ್ನೆ ಸಂಪದದಲ್ಲಿ (http://sampada.net/blog/veeravenki/24/03/2009/18289)

ಒಂದೇ ಕಡೆ ಇರಲಿ ಅಂತ ಇಲ್ಲಿ ತಂದೆ, ಅಷ್ಟೆ.


ಭವ್ಯ ಭವಿಷ್ಯದ ಕನಸು ಕಾಣ ಬಾರದೇಕೆ?

24 ಮಾರ್ಚ್ 09

ರಸ್ತೆಗಿಳಿದಿದೆ ನೋಡಿ ಟಾಟಾದವರ
ಹೊಸ ಚಿಕ್ಕ ಕಾರು ನಾನೋ
ಕಾರೊಳಗೆ ಕೂತ್ಕೊಳ್ಳೋದು ಯಾರು
ನೀನೋ ನಾನೋ?

ಲಕ್ಷದ ಕಾರು ಬಂದಾಗಿದೆ ಈಗ ಎಲ್ಲರ
ಲಕ್ಷ್ಯವೂ ಇತ್ತಕಡೆ
ಬೇರೆ ಕಾರುಗಳ ಬೆಲೆ ಇಳಿದರೆ ನಾವು
ವಾಲಬಹುದು ನೋಡಿ, ಅತ್ತಕಡೆ.

ಕಾರಿನ ಬೆಲೆ ಇಳಿಸಿ ಜಗತ್ತನ್ನೇ ಬೆರಗು
ಗೊಳಿಸಿದರಿಂದು ಟಾಟಾ
ಭ್ರಷ್ಟಾಚಾರದಿಂದಾಗಿ ನೇತಾರರು ಇಡೀ
ದೇಶಕ್ಕೆ ಕೊಡುತಿಹರು ಕಾಟ

ಹೇಳಿದ್ದನ್ನು ಸಾಧಿಸಿ ತೋರಿಸುವುದು
ಅದೇಕೋ ಉದ್ಯಮಿಗಷ್ಟೇ ಆಗಿದೆ ಸಾಧ್ಯ
ರಾಜಕೀಯದ ಧುರೀಣರಿಗೆ ತಮ್ಮ ಮಾತ
ಉಳಿಸಿಕೊಳ್ಳಲು ಯಾಕಾಗುತಿದೆ ಅಸಾಧ್ಯ

ಕಾರು ಬರಬಹುದು ನಮ್ಮ ನಿಮ್ಮ ಎಲ್ಲರ
ಮನೆಯಲ್ಲೂ ಮಂದಿಗೆ ಒಂದರಂತೆ
ಆದರೆ ಸುಂದರ ರಸ್ತೆಗಳಿರಬಹುದೇ ನಾವು
ಆ ಕಾರುಗಳಲಿ ಸವಾರಿ ಮಾಡುವಂತೆ

ಟಾಟಾ ಅಂಬಾನಿ ಮೂರ್ತಿಗಳನು ದೇಶದ
ಗದ್ದುಗೆಯಲಿ ಕೂರಿಸಿ ನೋಡಬಾರದೇಕೆ
ಅವರ ಮುಂದಾಳುತನದಲಿ ಈ ದೇಶದ
ಭವ್ಯ ಭವಿಷ್ಯದ ಕನಸು ಕಾಣ ಬಾರದೇಕೆ