ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ…!

24 ಡಿಸೆ 10

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ಈ ಗೂಡು ತನ್ನದು, ಇದರಲ್ಲಿ ತನ್ನ ಬೆವರು ಬೆರೆತಿದೆ,
ತನ್ನ ಪರಿಶ್ರಮದ ಸಾಕ್ಷಿಯಾಗಿ ಇನ್ನೂ ಸುಭದ್ರವಾಗಿಯೇ ಅದು ಉಳಿದಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ಹಕ್ಕಿ ಹೊಸ ನೆಲೆಯ ಹುಡುಕಿ ಹೊರಡಬೇಕಾಗಿದೆ,
ಇಂದಿಗೆ ತೀರಿತು ಇಲ್ಲಿಯ ಋಣ, ಎಂದು ಇನ್ನು ಹೊಸಗೂಡು ಕಟ್ಟಬೇಕಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ತಾನು ತನ್ನದೆಂಬ ಭಾವುಕತೆಗೆ ಅಂಟಿರಲಾಗದಾಗಿದೆ,
ಭೌತಿಕ ವ್ಯಾಮೋಹ ತೊರೆದು ಮೈಕೊಡವಿ ಎದ್ದು ಹೊರನಡೆಯಬೇಕಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ವಿಷಜಂತುಗಳ ಜೊತೆಗೆ ಕಾಲಹರಣ ವ್ಯರ್ಥವಾದುದಾಗಿದೆ,
ಮನವೊಲಿಸಿ ತನ್ನದನ್ನು ಉಳಿಸಿಕೊಂಬ ವ್ಯರ್ಥ ಪ್ರಯತ್ನ ಇನ್ನು ಬೇಡವಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,,
ಇದ್ದಲ್ಲೇ ಒಳಗೊಳಗೇ ಮರುಗಿ ಬೇಯುವುದು ಬೇಡವಾಗಿದೆ,
ಹಾವಿನ ಸಹವಾಸವ ತೊರೆದು ಸ್ವಚ್ಛಂದ ಬಾನಿನಲ್ಲಿ ತಾನೀಗ ಹಾರಾಡಬೇಕಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ನಂಬಿದ ತತ್ವಗಳ ಇಂದು ಒರೆಗೆಹಚ್ಚಿ ಪರೀಕ್ಷಿಸಬೇಕಾಗಿದೆ,
ತಾನು ಸರ್ವಸಮರ್ಥ ಎಂಬುದ ಈ ಜಗದ ಮುಂದೆ ಸಾಬೀತುಪಡಿಸಬೇಕಾಗಿದೆ;

ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ತಲೆಯೆತ್ತಿ, ಎತ್ತ ದೈವಚಿತ್ತವೋ ಅತ್ತ ನಡೆದುಬಿಡಬೇಕಾಗಿದೆ,
ಹೊಸದೊಂದು ಸ್ಥಾನದಲ್ಲಿ ಹೊಸ ಅಸ್ಥಿತ್ವವನ್ನು ಸ್ಥಾಪಿಸಿ ಬೆಳೆಸಿಕೊಳ್ಳಬೇಕಾಗಿದೆ!
*********************


ನನಗೇನು ಬೇಕು ಎಂಬುದ ನಾ ಅರಿತರೆ…!

22 ಡಿಸೆ 10

ನಿನ್ನ – ನನ್ನ ಭೇಟಿಗೆ ತೊಡಕುಗಳು ಕಂಡು ಬಂದಾಗ
ನನ್ನ ಈ ಮನ ನೊಂದು ಮುದುಡಿ ಹೋಗಿದ್ದೂ ಇದೆ

ಛೇ! ಇದೆಂಥಾ ಜೀವನವಪ್ಪಾ! ಎಂದು ಜಿಗುಪ್ಸೆ ಮೂಡಿ
ನಾ ಒಳಗೊಳಗೇ ಮರುಗುತ್ತಾ ಕೂತುಬಿಟ್ಟಿದ್ದೂ ಇದೆ

ಆದರೂ ನನ್ನೊಳಗಿನ ನಿನ್ನ ನೆನಪು ಮರೆಯಾಗಿರಲಿಲ್ಲ
ನಿನ್ನನ್ನು ನೋಡುವ ಹಂಬಲ ಕಡಿಮೆಯಾದದ್ದೇ ಇಲ್ಲ

ತೊಡಕುಗಳ ಪರಿಹಾರಕ್ಕೆ ಹೊಸ ಹೊಸ ಹಾದಿಗಳ
ಕಂಡುಕೊಳ್ಳುವ ಪ್ರಯತ್ನವನ್ನು ನಾ ನಿಲ್ಲಿಸಿರಲೇ ಇಲ್ಲ

ನಿನ್ನ ಮುಖ ದರುಶನವಾಗದ ದಿನಗಳು ನನಗೆ ರೂಢಿ
ಆಗುತ್ತಿದೆ ಎಂದೆನಿಸಿದಾಗ ಸಿಡಿದೆದ್ದೆ ನಾ ಸೈನಿಕನಂತೆ

ಏನೇ ಗಂಡಾಂತರ ಬಂದರೂ ಎದುರಿಸೋಣ ಎಂದು
ಉಪಾಯವ ಕಂಡು ಹಿಡಿದು ನಕ್ಕೆ ವಿಜಯಶಾಲಿಯಂತೆ

ಅವರಿವರ ಅವಲಂಬಿಸಿ ಕೂತರೆ ನನ್ನ ಸಮಸ್ಯೆಗೆ ನಾ
ಪರಿಹಾರ ಕಂಡುಕೊಳ್ಳಲಾಗದೆಂಬುದರ ಅರಿವಾಯ್ತು

ನನಗೇನು ಬೇಕೆಂಬುದ ಅರಿತು ನಾ ಯತ್ನವ ಮಾಡಿ
ಮುನ್ನುಗ್ಗಿದರಷ್ಟೇ ನನ್ನೀ ಜೀವನವೂ ಸಫಲ ಆದೀತು
*****************************


ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ!

21 ಡಿಸೆ 10

ಕಾಲಗರ್ಭದಲಿ ಮರೆಯಾಗುತಿಹುದು ಈಗ ಮತ್ತೊಂದು ವರುಷ,
ನೋವು ಇದ್ದಿದ್ದರೂ, ತಂದಿತ್ತು ನಮ್ಮ ಬಾಳಲ್ಲಿ ಬಹಳಷ್ಟು ಹರುಷ;

ಆರ್ಥಿಕ ಹಿಂಜರಿತ ಹೋಗಿ, ತೂಗತೊಡಗಿತು ಸಂತಸದ ತೊಟ್ಟಿಲು,
ವೈದ್ಯೆಯಾಗುತ್ತಿರುವ ಮಗಳು ಏರಿಹಳು ಈಗ ಎರಡನೇ ಮೆಟ್ಟಿಲು;

ಅಲ್ಲಿ ಅಮ್ಮನವರ ಆರೋಗ್ಯ ಏರುಪೇರಿಲ್ಲದೇ ಒಂದೇ ಸಮನಾಗಿದೆ,
ಸದ್ಯಕ್ಕೆ ಮನೆಯಲ್ಲಿ, ಆರೋಗ್ಯ ನೆಮ್ಮದಿ ಮನೆ ಮಾಡಿರುವಂತೆ ಇದೆ;

ನ್ಯಾಯವಾದಿ ತಮ್ಮ, ನೋಟರಿಯಾಗಿ ಮೂಡಿಸಿದ ಈ ಮನದಿ ಹೆಮ್ಮೆ,
ಮಗನಿಲ್ಲದೆನಗೆ ಮಗನಲ್ಲವೇ ಆತ, ಎಂಬ ಭಾವನೆ ನನ್ನಲ್ಲಿ ಒಮ್ಮೊಮ್ಮೆ;

ಹೊಸ ಸಂಬಂಧ ಸೇರಿಕೊಂಡಿಲ್ಲ, ಕಳಚಿಕೊಂಡವು ಒಂದೆರಡು ಸದ್ಯ,
ಸ್ನೇಹಿತರ ಸಂಖ್ಯೆ ಹೆಚ್ಚಾಗಿ, ಅದರಲ್ಲಿ ಆಪ್ತರಾದರು ಹಲವರು ಈ ಮಧ್ಯ;

ಸಮಾಜ ಲಗಾಮಿಲ್ಲದೇ, ದಿನದಿಂದ ದಿನಕ್ಕೆ ಹದಗೆಡುತ್ತಲೇ ಸಾಗುತ್ತಿದೆ,
ಭ್ರಷ್ಟಾಚಾರ ಎನ್ನುವುದೇ ರಾಜಕೀಯಕ್ಕೆ ಪರ್ಯಾಯ ಪದವಾಗಿಬಿಟ್ಟಿದೆ;

ವರುಷದ ಬಹುಪಾಲು ನಮ್ಮ ನಾಡು, ಕಳೆಯಿತು ಅರಾಜಕತೆಯಲ್ಲಿಯೇ,
ಭ್ರಷ್ಟ ರಾಜಕಾರಣಿಗಳಲ್ಲೀಗ, ದುಸ್ತರವಾಗಿದೆ ನಿಷ್ಠಾವಂತರ ಆಯ್ಕೆಯೇ;

ಕಾಂಗ್ರೇಸಿನ ಅವಿವಾಹಿತ ಗೂಳಿ, ದೇಶದುದ್ದಕ್ಕೂ ಧೂಳೆಬ್ಬಿಸಿ ಸೋತಿತು,
ದೇಶೀಯರ ದೂಷಿಸಿ, ತಾನೊಬ್ಬ ವಿದೇಶಿ ಎಂಬುದ ಸಾಬೀತು ಪಡಿಸಿತು;

ದಿಲ್ಲಿಯಲಿ ಆಟ ಆಡಿಸಲು ನಿಂತವರೂ, ಕೋಟಿ ಕೋಟಿ ಕೊಳ್ಳೆ ಹೊಡೆದರು,
ಚೀನಾದಲಿ ಚಿನ್ನದ ಬೇಟೆಯಾಡಿ ಮರಳಿದರು, ಕನ್ನಡನಾಡಿನ ಕುವರಿಯರು;

ಎಲ್ಲರದೂ ಮುಖವಾಡ, ಹೇಳುವುದೊಂದಾದರೆ ಮಾಡುವುದು ಮತ್ತೊಂದು,
ಮಾಧ್ಯಮದವರು ಗುದ್ದಿದರು ಜನರನ್ನು, ದಿನವೂ ನೀಡಿ ಸುದ್ದಿ ಹೊಸತೊಂದು;

ಸತ್ಯಾಸತ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳಲು, ಅವಕಾಶವೇ ಇಲ್ಲವಾಗಿದೆ ಇಲ್ಲಿ,
ಒಂದರ ಹಿಂದೆ ಇನ್ನೊಂದು ಸುದ್ದಿ, ಸ್ಫೋಟಗೊಳ್ಳುತ್ತಲೇ ಇರುತ್ತದೀ ನಾಡಲ್ಲಿ;

ನಿತ್ಯಾನಂದ ಸ್ವಾಮಿಯ ಕಾಮಕಾಂಡದ ಮೇಲಿಂದ ಸರಿಯಿತು ಪರದೆ ಮೆಲ್ಲಗೆ,
ಪತ್ನಿ-ಮಿತ್ರನ ಅಕ್ರಮ ಸಂಬಂಧ, ಹಾದಿಯಾಯ್ತು ಅತ್ತ ಕೋಟಿಗಟ್ಟಲೆ ಸುಲಿಗೆಗೆ;

ಕನ್ನಡ ಪತ್ರಿಕೋದ್ಯಮದಲ್ಲಿ, ಸುಂಟರಗಾಳಿಯೇ ಬೀಸಿದಂತಾಯ್ತು ಒಮ್ಮೆಗೇ,
ಓದುಗರಿಗೂ ಬೇಸರವಾಯ್ತು,  ಭಟ್ಟರ ತಂಡ ವಿಕದಿಂದ ತೆರಳಿದಾಗ ಹೊರಗೆ;

ಸುಳ್ಳು ಅಪವಾದಕ್ಕೆ ಗುರಿಯಾದ, ಬೆತ್ತಲೆ ಜಗತ್ತಿನ ಸಿಂಹ ನೋಡ ನೋಡುತ್ತಲೇ,
ನೀತಿಯ ಪಾಠ ಮಾಡುತ್ತಿದ್ದ ರವಿಯ ಕಾಮ ಕಥೆ ಬಯಲಾಗಿ, ಆತನಾದ ಬೆತ್ತಲೆ;

ಹೊಸ ವರುಷ, ಹೊಸ ಹರುಷ ತರಲಿ, ನಮ್ಮೆಲ್ಲರ ಬಾಳಿನಲ್ಲೆಂಬುದೇ ಆಶಯ,
ಭ್ರಷ್ಟರ ದುಷ್ಟರ ಅರಾಜಕತೆ ಮುಗಿದು, ಜನ ಕಾಣುವಂತಾಗಲಿ ನೆಮ್ಮದಿಯ!

*************************************


ನನ್ನೀ ಬಾಳು ಖಾಲಿ ಹಾಳೆ…!

20 ಡಿಸೆ 10

ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ:

ನನ್ನೀ ಬಾಳು ಖಾಲಿ ಹಾಳೆ
ಖಾಲಿಯಾಗೇ ಉಳಿದಿದೆ
ಬರೆದದ್ದೆಲ್ಲಾ…
ಬರೆದದ್ದೆಲ್ಲಾ…
ಕಣ್ಣೀರಿನ…
ಜೊತೆಗೇ ಹರಿದಿದೆ!

ಒಮ್ಮೆ ಗಾಳಿ ಬೀಸಿದಾಗ…
ಒಮ್ಮೆ ಗಾಳಿ ಬೀಸಿದಾಗ…
ಬಿದ್ದು ಹೋಯಿತು ಹೂ…
ಬಿದ್ದು ಹೋಯಿತು ಹೂ…
ಗಾಳಿಯದ್ದಲ್ಲಾ…
ಹೂದೋಟದ್ದಲ್ಲಾ…
ಯಾರದ್ದಿತ್ತೀ ತಪ್ಪು…
ಯಾರದ್ದಿತ್ತೀ ತಪ್ಪು…
ಗಾಳಿಯಲ್ಲಿ…
ಗಾಳಿಯಲ್ಲಿ…
ಗಂಧ ಬೆರೆತು ಉಳಿಯಲಿಲ್ಲ ಏನೂ

ನನ್ನೀ ಬಾಳು ಖಾಲಿ ಹಾಳೆ
ಖಾಲಿಯಾಗೇ ಉಳಿದಿದೆ
ಬರೆದದ್ದೆಲ್ಲಾ…
ಬರೆದದ್ದೆಲ್ಲಾ…
ಕಣ್ಣೀರಿನ…
ಜೊತೆಗೇ ಹರಿದಿದೆ!

ಹಾರೋ ಹಕ್ಕಿಗೆ ಮನೆಯೆಲ್ಲಿದೆ…
ಹಾರೋ ಹಕ್ಕಿಗೆ ಮನೆಯೆಲ್ಲಿದೆ…
ನನಗೂ ಇಲ್ಲ ಮನೆ…
ನನಗೂ ಇಲ್ಲ ಮನೆ…
ಊರುಕೇರಿ ಒಂದೂ ಇಲ್ಲ…
ಹೋಗಲೆಲ್ಲಿಗೆ ನಾ…
ಹೋಗಲೆಲ್ಲಿಗೆ ನಾ…
ಕನಸಿನಂತೆ…
ಕನಸಿನಂತೆ…
ನನ್ನ ಸಖಿಯ ಬಳಿಯೆ ಉಳಿದೆ ನಾ…

ನನ್ನೀ ಬಾಳು ಖಾಲಿ ಹಾಳೆ
ಖಾಲಿಯಾಗೇ ಉಳಿದಿದೆ
ಬರೆದದ್ದೆಲ್ಲಾ…
ಬರೆದದ್ದೆಲ್ಲಾ…
ಕಣ್ಣೀರಿನ…
ಜೊತೆಗೇ ಹರಿದಿದೆ!
*********

ಮೂಲ ಗೀತೆಯ ಗಾಯಕರು: ಕಿಶೋರ್ ಕುಮಾರ್

ಮೂಲ ಗೀತೆ:

ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಜೋ ಲಿಖಾತಾ ಆಂಸೂವೋಂ ಕೇ ಸಂಗ್ ಬೆಹ್ ಗಯಾ
ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ

ಎಕ್ ಹವಾ ಕಾ ಝೋಕಾ ಆಯಾ
ಎಕ್ ಹವಾ ಕಾ ಝೋಕಾ ಆಯಾ,
ಟೂಟಾ ಡಾಲೀ ಸೇ ಫೂಲ್
ಟೂಟಾ ಡಾಲೀ ಸೇ ಫೂಲ್ನ ಪವನ್ ಕೀ ನ ಚಮನ್ ಕೀ
ಕಿಸಿ ಕೀ ಹೈ ಯೆಹ್ ಭೂಲ್
ಕಿಸಿ ಕೀ ಹೈ ಯೆಹ್ ಭೂಲ್
ಖೋ ಗಯೀ
ಖೋ ಗಯೀ ಖುಶ್‍ಬೂ ಹವಾ ಮೆ…
ಕುಚ್ ನ ರೆಹ್ ಗಯಾ

ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಜೋ ಲಿಖಾತಾ ಆಂಸೂವೋಂ ಕೇ ಸಂಗ್ ಬೆಹ್ ಗಯಾ

ಉಡ್‍ತೇ ಪಂಛೀ ಕಾ ಠಿಕಾನಾ
ಉಡ್‍ತೇ ಪಂಛೀ ಕಾ ಠಿಕಾನಾ
ಮೇರಾ ನ ಕೋಯೀ ಜಹಾಂ
ಮೇರಾ ನ ಕೋಯೀ ಜಹಾಂ
ನ ಡಗರ್ ಹೈ ನ ಖಬರ್ ಹೈ
ಜಾನಾ ಹೈ ಮುಝ್‍ಕೋ ಕಹಾಂ
ಜಾನಾ ಹೈ ಮುಝ್‍ಕೋ ಕಹಾಂ
ಬನ್‍ಕೇ ಸಪ್ನಾ ಬನ್‍ಕೇ ಸಪ್ನಾ
ಹಮ್‍ಸಫರ‍್ ಕಾ ಸಾಥ್ ರೆಹ್ ಗಯಾ

ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಜೋ ಲಿಖಾತಾ ಆಂಸೂವೋಂ ಕೇ ಸಂಗ್ ಬೆಹ್ ಗಯಾ
****************************


ಎಲ್ಲವೂ ರೂಢಿಯಾಗುತ್ತಿದೆ…!

14 ಡಿಸೆ 10

ಎಲ್ಲವೂ ರೂಢಿಯಾಗುತ್ತದೆ
ಇಂದಿನ ತನಕ ಏನೂ ಅಲ್ಲದ್ದು ನಾಳೆ ಜೀವಕ್ಕಿಂತ ಹೆಚ್ಚಾಗುತ್ತದೆ
ಇಂದಿನ ತನಕ ಜೀವವೇ ಆಗಿದ್ದದ್ದು ನಾಳೆ ಬರಿಯ ನೆನಪಾಗಿ ಉಳಿದು ಬಿಡುತ್ತದೆ

ಎಲ್ಲವೂ ರೂಢಿಯಾಗುತ್ತಿದೆ
ಜೊತೆಜೊತೆಗೆ ನಡೆದಿದ್ದ ಹಾದಿಯಲ್ಲೀಗ ಒಂಟಿಯಾಗಿ ಸಾಗಬೇಕಿದೆ
ದಿನವೆಲ್ಲಾ ಮಾತನಾಡುತ್ತಿದ್ದ ನಾವೀಗ ಮೌನಕ್ಕೆ ಶರಣಾಗಿ ಸುಮ್ಮನಿರಬೇಕಾಗಿದೆ

ಎಲ್ಲವೂ ರೂಢಿಯಾಗುತ್ತಿದೆ
ಬಿಟ್ಟು ಬದುಕುವುದೇ ಕಷ್ಟ ಎಂದೆಣಿಸಿದ್ದ ನಾವೂ ದೂರವಾಗಿರಬೇಕಾಗಿದೆ
ನೆನಪುಗಳು ನೋವಾಗಿ ಕಾಡುತ್ತಿದ್ದರೂ, ಆ ನೋವಿನೊಂದಿಗೇ ಬಾಳಬೇಕಾಗಿದೆ

ಎಲ್ಲವೂ ರೂಢಿಯಾಗುತ್ತಿದೆ
ಹೃದಯವನ್ನು ಕಲ್ಲಾಗಿಸಿ ಬಾಳುವುದೂ ನಮಗೀಗ ರೂಢಿಯಾಗುತ್ತಿದೆ
ಸಂಬಂಧಗಳ ಮೇಲಿನ ನಂಬಿಕೆಯ ತೊರೆದು ಬಾಳುವುದೂ ನಮಗೀಗ ರೂಢಿಯಾಗುತ್ತಿದೆ

ಎಲ್ಲವೂ ರೂಢಿಯಾಗುತ್ತಿದೆ
ಬದಲಾವಣೆಯೇ ಜಗದ ನಿಯಮ ಎಂಬ ಮಾತೆಮಗೆ ರೂಢಿಯಾಗುತ್ತಿದೆ
ಹೊಸ ಹೊಸತರ ನಡುವೆ ಹಳೆಯದನ್ನು ಕಳೆದುಕೊಳ್ಳುವುದೂ ನಮಗೀಗ ರೂಢಿಯಾಗುತ್ತಿದೆ

ಎಲ್ಲವೂ ರೂಢಿಯಾಗುತ್ತಿದೆ
ಏನೂ ಇಲ್ಲದ ಬಾಳಿನಲಿ ಬಂದ ನೀನೇ ನನ್ನ ಜೀವನವಾಗಿದ್ದಿದೆ
ಜೊತೆ ಇಲ್ಲದಿದ್ದರೂ ಒಬ್ಬರೊಳಗೊಬ್ಬರು ಇರುವೆವೆಂಬ ಭ್ರಮೆಯೊಂದಿಗೀ ಜೀವನ ಸಾಗುತ್ತಿದೆ
**************


ಹುಚ್ಚು ಹುಡುಗಿ…!

03 ಡಿಸೆ 10

 

ಹುಚ್ಚು ಹುಡುಗಿ
ಏನೇನೋ ಕೇಳುತ್ತಿರುತ್ತಾಳೆ
ಪ್ರಶ್ನೆಗಳ ಸುರಿಮಳೆಗೈಯುತ್ತಿರುತ್ತಾಳೆ
ನನ್ನ ಬಾಯ್ಕಟ್ಟಿಸಿ ತಾನು ನಗುತ್ತಾ ಇರುತ್ತಾಳೆ!

ಹುಚ್ಚು ಹುಡುಗಿ
ವಯಸ್ಸಾಗಿಲ್ಲ ನನ್ನ ಅರ್ಧದಷ್ಟೂ
ತಲೆ ತುಂಬಾ ತುಂಬಿಕೊಂಡಂತಿದೆ ಬೆಟ್ಟದಷ್ಟು
ಹೊಗಳುತ್ತಿರುತ್ತಾಳೆ ನನ್ನನ್ನು ಅಷ್ಟೊಂದು ಇಷ್ಟಪಟ್ಟು!

ಹುಚ್ಚು ಹುಡುಗಿ
ಮನದ ನೋವ ಮರೆ ಮಾಚುತ್ತಾಳೆ
ನಗುವಿನ ಮುಖವಾಡ ಹೊತ್ತು ನಗುತ್ತಿರುತ್ತಾಳೆ
ನನ್ನ ಅರಿವಿಗೆ ತಾರದಿರಲು ಯತ್ನಿಸಿ ಸೋಲುತ್ತಿರುತ್ತಾಳೆ!

ಹುಚ್ಚು ಹುಡುಗಿ
ನನಗೇ ಪಾಠ ಮಾಡುತ್ತಿರುತ್ತಾಳೆ
ನನ್ನ ಜೀವನದ ಅನುಭವ ಏನೂ ಅಲ್ಲ ಅನ್ನುತ್ತಾಳೆ
ತನ್ನ ಮುಂದೆ ನನ್ನನ್ನು ಕಿರಿದಾಗಿಸಿ ತಾನು ಹಿರಿಯಳಾಗುತ್ತಾಳೆ!
*****************


ನನ್ನವರೆಂದು ಯಾರಾದರೂ ಇರಲೆಂಬಾಸೆ…!

02 ಡಿಸೆ 10

ಇನ್ನೊಂದು ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದದ ಪ್ರಯತ್ನ.

ನಾ ನನ್ನವರೆಂದು ಕರೆಯುವುದಕೆ  ಯಾರಾದರೂ ಇರಲೆಂಬಾಸೆ |
ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ ||

ಕಂಗಳಲ್ಲಿ ಈಗ ನಿದ್ದೆಯ ಸುಳಿವೇ ಇಲ್ಲ, ಅಲ್ಲಿ ಕಣ್ಣೀರಿನದೇ ಈಜಾಟ |
ಕನಸುಗಳ ಲೋಕದಲ್ಲಿಯೇ ನನ್ನದು ಈಗ ರಾತ್ರಿಯೆಲ್ಲಾ ಅಲೆದಾಟ |
ನನ್ನ ನೋವುಗಳನ್ನೂ ತನ್ನದೆಂಬ ಒಡನಾಡಿ ನನಗಿರಲಿ ಎಂಬಾಸೆ ||

ನಾ ನನ್ನವರೆಂದು ಕರೆಯುವುದಕೆ  ಯಾರಾದರೂ ಇರಲೆಂಬಾಸೆ |
ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ ||

ಹಳೆಯ ದಿನಗಳ, ಮರೆತ ಮಾತುಗಳ ನೆನಪುಗಳದೇ ತೊಳಲಾಟ |
ಬೈಗು ಬೆಳಗಿನ ನಡುವೆ ನನಗೆ, ಪದೇ ಪದೇ ಈ ಏಕಾಂತದ ಕಾಟ |
ನೋವನು ಅರಿತು ಸಾಂತ್ವನ ನೀಡಲು ಜೊತೆಯೊಂದಿರಲೆಂಬಾಸೆ ||

ನಾ ನನ್ನವರೆಂದು ಕರೆಯುವುದಕೆ  ಯಾರಾದರೂ ಇರಲೆಂಬಾಸೆ |
ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ ||
*****

ಚಿತ್ರ : ಮೇರೇ ಅಪ್ನೇ
ಸಂಗೀತ : ಸಲಿಲ್ ಚೌಧುರಿ
ಮೂಲ ಸಾಹಿತ್ಯ : ಎಸ್. ಎಸ್. ಗುಲ್ಜಾರ್
ಹಾಡುಗಾರರು : ಕಿಶೋರ್ ಕುಮಾರ್

Koi Hota Jisko Apna
Hum Apana Keh Lete Yaaron
Paas Nahin To Door Hee Hota
Lekin Koi Mera Apna

Aakhon Mein Neend Na Hoti
Aansoo Hi Tairte Rehte

Khwabon Mein Jaagte Hum Raat Bhar
Koi To Gham Apnataa
Koi To Saathi Hota

Koi Hota Jisko Apna
Hum Apana Keh Lete Yaaron
Paas Nahin To Door Hee Hota
Lekin Koi Mera Apna

Bhoola Hua Koi Waada
Beeti Huyi Kuchh Yaadein
Tanahai Dohraati Hain Raatbhar
Koi Dilasa Hota
Koi To Apna Hota

Koi Hota Jisko Apna
Hum Apana Keh Lete Yaaron
Paas Nahin To Door Hee Hota
Lekin Koi Mera Apna