ಬೆಸೆಯಬೇಡಿ ನಂಟು!

26 ಏಪ್ರಿಲ್ 13

 

ಬೆಸೆಯಬೇಡಿ ಕವಿತೆ-ಕವಿಯ ನಡುವೆ ನಂಟು
ಕವಿತೆ ಬರಿಯ ಕಾಲ್ಪನಿಕ ಭಾವನೆಗಳ ಗಂಟು:

ಎಲ್ಲಾ ಕವಿತೆಗಳಲೂ ಕವಿಯನೇ ಕಂಡೀರಾದರೆ
ಕವಿಯ ಜೀವನ ದುಸ್ತರ, ಓದುಗರಿಗೂ ತೊಂದರೆ!


ಸುರಿ ಜೇನ!

26 ಏಪ್ರಿಲ್ 13

ಸಖೀ,
ನೋಡು ಈ ಬೇಸಿಗೆಯಲ್ಲಿ  ಬಿರುಕುಬಿಡುತ್ತಿವೆ ಈ ಅಧರಗಳು
ಬರಪೀಡಿತ ಪ್ರದೇಶಗಳಲ್ಲಿ ಬಿರುಕುಬಿಡುವಂತೆ ಹೊಲಗಳು;

ಬಿರುಕುಗಳ ಮುಚ್ಚಲು ಧೈರ್ಯ ನಿನಗಲ್ಲದಿನ್ನಾರಿಗಿದೆಯಂತೆ
ಸುರಿ ಜೇನ, ಕೃಪೆದೋರಿ ವರುಣ, ಮಳೆಯ ಸುರಿಸುವಂತೆ!


ಕಲ್ಲೆಸೆದರೆ!

25 ಏಪ್ರಿಲ್ 13

 

ಸಖೀ,
ಕೊಳದ ಪ್ರಶಾಂತ
ನೀರಿಗೆ ಕಲ್ಲೆಸೆದು
ನಾ ನೋಡಿದೆ,
ಅಲೆಗಳುಂಗುರಗಳು
ಈ ಮನಕೆ ಮುದ
ನೀಡಲು , ಒಂದಷ್ಟು
ಹೊತ್ತು ಮೈಮರೆತೆ;

ನನ್ನೀ ಮನದಲ್ಲಿನ
ಪ್ರಶಾಂತ ಕೊಳಕ್ಕೆ
ಅಸಂಬದ್ಧವಾದ
ವಿಷಯವೊಂದನ್ನು
ನಾನೆಸೆದು ಕೂತೆ
ಈ ಮನದಲ್ಲೆಲ್ಲಾ
ಕಿರಿಕಿರಿ, ದಿನವಿಡೀ
ಶಾಂತಿಯ ಕೊರತೆ!


ರಾಕ್ಷಸರು!

25 ಏಪ್ರಿಲ್ 13

 

ಸಖೀ,
ಆಗ ದಪ್ಪನೆಯ ಮೀಸೆ
ಮತ್ತಂತಹದೇ ಹುಬ್ಬುಗಳು
ಭಯಾನಕ ಕೆಂಗಣ್ಣುಗಳು
ಉದ್ದುದ್ದ ಕೋರೆಹಲ್ಲುಗಳು
ಸಹಕಾರಿಯಾಗುತ್ತಿದ್ದವು
ನಮಗೆ ಗುರುತಿಸಲು
ರಾಕ್ಷಸರನ್ನು ಚಿತ್ರಗಳಲ್ಲಿ
ಪೌರಾಣಿಕ ಕತೆಗಳಲ್ಲಿ;

ಈಗ ಹಾಗಲ್ಲ ನೋಡು
ನಮ್ಮ ನಡುವೆ ಇರುವ
ನಮ್ಮಂಥವನೇ ನಮ್ಮ
ಮುಗ್ಧ ಹೆಣ್ಮಕ್ಕಳಿಗೆ ಸಿಹಿ
ನೀಡಿ ಮರುಳುಗೊಳಿಸಿ
ತಾನು ರಾಕ್ಷಸನೆಂದು
ಸಾಬೀತುಗೊಳಿಸುತ್ತಾನೆ
ಗಂಟೆ ಒಂದೆರಡರಲ್ಲಿ!


ಕೇಳರೀ ಪ್ರಶ್ನೆ!

25 ಏಪ್ರಿಲ್ 13

 

“ಸಖೀ,
ನನ್ನ ಮನದ
ಮಾತುಗಳಿಗೆ
ಸದಾ ಕಿವಿಯಾಗಿ
ಇರುವ ನೀನು
ಎಂದೂ ಏನನ್ನೂ
ನುಡಿಯುವುದಿಲ್ಲ
ಏಕೆಂಬುದೇ 
ನನ್ನ
ಓದುಗರ ಪ್ರಶ್ನೆ”;

“ನೀನು ಸದಾ ಇಲ್ಲಿ
ಬರೆಯುತ್ತಿರುವುದು
ನನ್ನ ಮನದೊಳಗಿನ
ನಿನ್ನ ಮನದ
ಮಾತನ್ನೇ ಎಂದು
ಅರಿತರಾದರೆ
ಆ ಓದುಗರೆಂದೂ
ಕೇಳರೀ ಪ್ರಶ್ನೆ!”


ನಾನಿಲ್ಲವೇನು?

25 ಏಪ್ರಿಲ್ 13

 

 

ಸಖೀ,
ಭಾವನಾತ್ಮಕವಾಗಿ
ಬಂಧಿಸದ
ಬಂಧ
ಸಂಬಂಧಗಳು
ನೂರಿದ್ದರೇನು?
ನನ್ನ
ಮನವನರಿತು
ಮನದೊಳಗೆ
ಮನೆ
ಮಾಡಿರುವ
ನೀನಿಲ್ಲವೇನು
ನಿನಗೆ
ನಾನಿಲ್ಲವೇನು?


ಅರ್ಥವಾಗದೇ ವ್ಯರ್ಥ!

24 ಏಪ್ರಿಲ್ 13

 

ಸಖೀ,
ನೀನು ನನ್ನನ್ನು
ಅರ್ಥೈಸಿಕೊಳ್ಳಲು
ನಾನು ಪುಟಗಳಷ್ಟು
ಬರೆಯಲೇಬೇಕಾದ
ಅಗತ್ಯಯಿದೆಯೆಂದಾದರೆ,
ನಾನು ನಿನ್ನನ್ನು ಅರ್ಥ
ಮಾಡಿಕೊಂಡಿರುವುದು
ಅತ್ಯಲ್ಪ ಎಂದಷ್ಟೇ ಅರ್ಥ,
ಆ ಬರವಣಿಗೆಯೂ ವ್ಯರ್ಥ!

ಬದಲಾವಣೆ ಸಹಜ!

24 ಏಪ್ರಿಲ್ 13

 

ಸಖೀ,
ನಿಸರ್ಗದಲ್ಲಿ ಆಗುವ ಬದಲಾವಣೆಯಂತೆಯೇ ಮನುಜನೊಳಗೂ ಸಹಜ
ಮಳೆ ಸುರಿವಾಗ ಕೊಡೆ, ಬಿಸಿಲೇರಿದಾಗ ನೆರಳ ಹುಡುಕುವನು ಮನುಜ;
ಅನ್ಯರ ಮನಸ್ಥಿತಿಯ ಏರುಪೇರಿನ ಬಗ್ಗೆ ವ್ಯರ್ಥ ಅನುಮಾನಗಳು ಬೇಡ
ಎಲ್ಲಾ ದಿನ ಎಲ್ಲರೂ ಒಂದೇ ತೆರನಾಗಿ ಇರಲೇಬೇಕೆಂಬ ನಿರೀಕ್ಷೆ ಬೇಡ!

ಆರಿಸಿಕೊಳ್ಳು!

23 ಏಪ್ರಿಲ್ 13

ಕಟ್ಟಿಹಾಕಿ ಸಾಕಿದರೂ ನಾವು ಆಕಳನ್ನು
ನೀಡುವುದದು ನಮಗೆ ಸದಾ ಹಾಲನ್ನು

ನೀನು ನನ್ನನ್ನು ಅದೆಷ್ಟೇ ತಡೆದರೂ
ಮುಂದುವರಿಸುವೆ ಬರೆಯುವುದನ್ನು;

ನಿನ್ನ ಇಷ್ಟಾನಿಷ್ಟಗಳ ಗೊಡವೆ  ಇಲ್ಲ
ನನಗಿಲ್ಲವೇ  ಇಲ್ಲ  ಅವುಗಳ  ಅಗತ್ಯ

ನಿನ್ನ ಆಯ್ಕೆಗೆ ಬಿಡುವೆ ಆರಿಸಿಕೊಳ್ಳು
ನಿನಗೆ ಯಾವುದನಿಸುವುದೋ ಪಥ್ಯ!


ಜೊತೆ ಸಾಕು!

21 ಏಪ್ರಿಲ್ 13

 

ಸಖೀ,
ನಿನ್ನ ಮನದಲ್ಲೇನೋ ಅನುಮಾನವಿರುವಂತೆ
ನೀನು ನನ್ನನ್ನೀಗ ದೂರ ಮಾಡುತಿರುವಂತೆ
ಸದಾ ಕಾಡುತಿಹುದು ಈ ಭಾವ ನನ್ನನ್ನು ಏಕೆ?
ನನಗೇನೂ ಬೇಕಿಲ್ಲ ನಿನ್ನ ಜೊತೆಯಷ್ಟೇ ಸಾಕೆ!