ಬಣ್ಣ ಕಳಚಿದಾಗ!

23 ಜೂನ್ 13

 

ಸಖೀ,
ಒಂದಷ್ಟು ದೂರ ಜೊತೆಜೊತೆಗೆ ನಡೆಯಬೇಕು
ಬಿಸಿಲು ಮಳೆ ಎರಡರ ಅನುಭವವೂ ಆಗಬೇಕು
ಮಳೆಗೆ ಬಣ್ಣ ಕಳಚಿಕೊಂಡಾಗಲೇ ಅರಿವಾಗುತ್ತದೆ
ನಂತರ ನಮ್ಮವರ ಜೊತೆಯಷ್ಟೇ ಉಳಿಯುತ್ತದೆ!

Advertisements

ಕೆಡಿಸದಿರಲಿ!

23 ಜೂನ್ 13

 

ನಮ್ಮವರೆಂದು ಕೈಹಿಡಿದು ನಡೆಸಹೋದರೆ
ನನ್ನಿಂದ ಕೈಬಿಡಿಸಿಕೊಂಡು ಕೊಂಡೊಯ್ದರು 
ಪರವಾಗಿಲ್ಲ ನಿನಗವರೂ ಒಳಿತ ಮಾಡಿದರೆ,
ಕೆಡಿಸಿದರಾದರೆ ನನ್ನ ನೋವ ಯಾರರಿವರು?


ಹೆಜ್ಜೆ ಹೆಜ್ಜೆಯಲೂ ಪಾಠ!

23 ಜೂನ್ 13

ಸಖೀ,
ನಿಜ ನಮ್ಮ ಮಕ್ಕಳು ಹೇಗೆ ಆಡಿದರೂ ನಮಗೆ ಚಂದ
ಅವರನ್ನು ಹಾಗೆಯೇ ಬಿಟ್ಟರೆ, ಅವರ ಬಾಳೇನು ಅಂದ
ಪಾಠ ಜೀವನದ ಪ್ರತಿ ಹೆಜ್ಜೆಯಲಿ ದೊರೆತರೊಳ್ಳೆಯದು
ಶಾಲೆಯಂತೆ ಸೀಮಿತವಾಗಿಬಿಟ್ಟರೆ ಬಾಳಿಗೆ ಕೆಡುಕದು!


ಸತ್ಯ ಬೇಕಿಲ್ಲ!

23 ಜೂನ್ 13

ಸಖೀ,
ದಂಡೆತ್ತಿಕೊಂಡ್ಡು ಬರುತ್ತಾರೆ, ನಿಜದಿ ಭಯವಾಗುತ್ತದೆ
ಸತ್ಯವಾದ ನುಡಿಯ ಆಡುವುದೂ ಈಗ ಕಷ್ಟವಾಗುತ್ತಿದೆ
ಸುಳ್ಳಿನ ಜಾತ್ರೆಯಲ್ಲಿ ಸತ್ಯವೀಗ ಬೇಡಿಕೆ ರಹಿತ ಸರಕು
ಉಚಿತವಾಗಿ ದೊರಕಿದರೂ ಸತ್ಯ ನಮಗ್ಯಾಕೆ ಬೇಕು?


ಅಪ್ಪಯ್ಯನವರ ದಿನ!

16 ಜೂನ್ 13

 

ಅಪ್ಪಯ್ಯಾ,
ನೀವು ಇದ್ದಷ್ಟು ದಿನ ನಿಮ್ಮದೇ ಅಧಿಪತ್ಯ
ನನ್ನ ಪಾಲಿಗೆ ನಿಮ್ಮದೇ ದಿನ ಪ್ರತಿನಿತ್ಯ
ಈಗ ನನ್ನಲೊಂದಾಗಿ ನೀವು ಇರುವಂತೆ
ನನ್ನ ದಿನಗಳೆಲ್ಲವೂ ನಿಮ್ಮ ದಿನಗಳಂತೆ!


ಒಲವೆಷ್ಟೆಂದು ಅರಿತಿಲ್ಲ!

16 ಜೂನ್ 13

 

ನಿನ್ನ ಮೇಲಿರುವ ಒಲವೆಷ್ಟೆಂದು ನಾನೂ ಅರಿತಿಲ್ಲ
ಆದರೆ ನಿನ್ನನ್ನಗಲಿ ನನ್ನಿಂದ ಬಾಳಲೂ ಆಗುತ್ತಿಲ್ಲ

ವಿರಹದ ಬೇನೆಯನ್ನೂ ಸಹಿಸುತ್ತಾರಂತೆ ಮಂದಿ
ಜೀವನವನ್ನು ಹೇಗೆ ನಿಭಾಯಿಸುತ್ತಾರೋ ಮಂದಿ
ಒಂದೊಂದು ದಿನವೂ ವರುಷಗಳಂತೆ ನನಗೀಗ
ನನಗಿರುವ ನಿರೀಕ್ಷೆ ಎಷ್ಟೆಂದು ನಾನೂ ಅರಿತಿಲ್ಲ
ಆದರೆ ನಿನ್ನನ್ನಗಲಿ ನನ್ನಿಂದ ಬಾಳಲೂ ಆಗುತ್ತಿಲ್ಲ

ನಿನ್ನ ಮೇಲನ್ಯರ ದೃಷ್ಟಿ ಬಿದ್ದರೆ ಉರಿಯುತ್ತದೆ ಹೃದಯ
ಬಲುಕಷ್ಟದಿಂದ ತನ್ನನ್ನು ಸಂಭಾಳಿಸಿಕೊಳ್ಳುತ್ತದೆ ಹೃದಯ
ನಿನ್ನ ಬಗ್ಗೆ ನನಗಿರುವ ಕಾಳಜಿಯರಿವು ನಿನಗಿಲ್ಲವೇ ಇಲ್ಲ
ಈ ಮನದ ತುಮುಲಗಳು ಅವೆಷ್ಟೆಂದು ನಾನೂ ಅರಿತಿಲ್ಲ
ಆದರೆ ನಿನ್ನನ್ನಗಲಿ ನನ್ನಿಂದ ಬಾಳಲೂ ಆಗುತ್ತಿಲ್ಲ


ನನ್ನ ಮನದಿ ನಿನ್ನ ಚಿತ್ರ!

16 ಜೂನ್ 13

 

ನನ್ನ ಮನದಿ ನಿನ್ನ ಚಿತ್ರ ಬರೆದಂದಿನಿಂದ
ನಿನ್ನನ್ನು ಜೊತೆಯಾಗಿಸಿಕೊಂಡಂದಿನಿಂದ
ಹೊಸ ಬಣ್ಣ ತುಂಬಿಕೊಂಡು ಈ ಬಾಳಲ್ಲಿ
ಸಾಗುತ್ತಿಹೆ ನಾನು ನನ್ನ ಸ್ವಪ್ನ ಲೋಕದಲ್ಲಿ

ನೀನು ನನಗೆ ನನ್ನ ಹಣೆಯ ಬೊಟ್ಟಿನಂತೆ
ನಿನ್ನ ನೋವು ನನ್ನ ಕಣ್ಣ ಕಾಡಿಗೆಯಂತೆ
ನಿನ್ನ ಕಣ್ಗಾವಲಿನಲ್ಲೇ ಸದಾ ನಿನ್ನ ಬೆನ್ನಲೇ
ಸಾಗುತಿರುವೆವೆ ನಾನನ್ನ ಗುರಿಯೆಡೆಗೆ

ನಮ್ಮ ನೋಟಗಳು ಒಂದಾದಂದಿನಿಂದ
ನೀನಡಿಯಿಟ್ಟಲ್ಲೇ ನನ್ನ ಈ ಹೃದಯವು
ನೀನು ನಿನ್ನ ಕಣ್ತೆರೆದ ಕಡೆಯೇ
ನೀ ಕೇಶರಾಶಿ ಹರಡಿದೆಡೆಯೇ
ಸದಾ ಆಗಿರಲಿ ನನ್ನ ತಾವು

ಜಗವು ಬಿರುಗಾಳಿ ಎಬ್ಬಿಸಿದರೇನು
ನಮ್ಮ ಈ ಪಯಣ ನಿಲ್ಲುವುದೇನು
ನಮ್ಮ ನೋಟಗಳು ಒಂದಾಗುವುದಲ್ಲಿ
ಈ ಜ್ಯೋತಿಯು ಸದಾ ಬೆಳಗುವುದಲ್ಲಿ
ನಮ್ಮ ಮಿಲನದ ಸ್ಥಾನದಲ್ಲಿ!