ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು!!!

29 ಮೇ 09
ಸಖ,

ಈ ರೀತಿಯ ಮರುಳು ಮಾತ ನೀ ಮರೆತು ಬಿಡು
ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು

ಅಂದಿನಿಂದಲೂ ನೀನು ಬರೆದುದೆಲ್ಲಾ ನಿನಗಾಗಿ
ಅಲ್ಲವಾದರೆ ಅವು ಆಗಿದ್ದವು ಈ ನಿನ್ನ ಸಖಿಗಾಗಿ

ಮತ್ತೀಗ ಹೇಳು ನಿಜದಿ ನಿನಗೆ ಈ ದುಗುಡವೇಕೆ
ನನ್ನ ನಿನ್ನ ಬಗ್ಗೆ ಅನ್ಯರೇನನ್ನುವರೆಂಬ ಚಿಂತೆ ಏಕೆ

ಕವಿತೆಗಳ ಬರೆಯುವುದು ನಿನ್ನ ಜಾಯಮಾನ
ಅದ ಬಿಟ್ಟಿರಲು ಎಂತು ಒಪ್ಪುವುದು ನಿನ್ನ ಮನ

ಜನರ ಗೋಜಿಗೇ ನೀನಿನ್ನೆಂದೂ ಹೋಗದಿರು
ಬರೆದುದನ್ನು ಇನ್ನಾರಿಗೂ ನೀ ತೋರಿಸದಿರು

ಅಲ್ಲಿ ಇಲ್ಲಿ ಎಲ್ಲೆಂದು ಬರಿದೆ ಬರೆದು ಇಡಬೇಡ
ಜನರು ಏನನ್ನುವರೆನ್ನುವ ಚಿಂತೆಯೂ ಬೇಡ

ನೋಡಿಲ್ಲಿ ತೆರೆದಿಟ್ಟಿರುವೆ ನನ್ನೀ ಹೃದಯವನು
ಬರೆ ನೀನಿಲ್ಲಿ ನಿರ್ಭಯನಾಗಿ ನಿನ್ನ ಕವಿತೆಗಳನು

ನೀನು ಬರೆದಷ್ಟನ್ನೂ ನಾನು ಪ್ರೀತಿಯಿಂದ ಓದುವೆನು
ಸಂಭಾವನೆಯಾಗಿ ನನ್ನ ಹೃದಯವನ್ನೇ ನೀಡುವೆನು

ನನ್ನ ಜೀವ ವೃಕ್ಷಕ್ಕೆ ಬೇಕು ನಿನ್ನ ಕವಿತೆಗಳ ನೀರು
ಅವು ಇಲ್ಲವಾದರೆ ನಿಲ್ಲಬಹುದು ಈ ನನ್ನ ಉಸಿರು

ಆದಕೇ ಬೇಡುತಿರುವೆ ನಿನ್ನನ್ನು ಎನ್ನ ಸಖ
ಈ ರೀತಿಯ ಮರುಳು ಮಾತ ನೀ ಮರೆತು ಬಿಡು
ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು
*************************


ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ!!!

28 ಮೇ 09
ಸಖೀ,

ಕೊನೆಯ ಬಾರಿಗೆ ನೀನು ಬಾ ಒಮ್ಮೆ ಇಲ್ಲಿ
ನಾ ಹೇಳುವುದನೆಲ್ಲಾ ಕಿವಿಗೊಟ್ಟು ಕೇಳಿಲ್ಲಿ

ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ
ನಿನ್ನನೆಂದೂ ಬಾಯ್ಬಿಟ್ಟು ಕರೆಯುವುದಿಲ್ಲ

ನನಗೆ ಸಂತಸವಾದರೆ ನನಗೆ ನಾನೇ ನಗುತ್ತೇನೆ
ಅಳಬೇಕೆಂದಾಗ ಮನಸಾರೆ ಅತ್ತುಬಿಡುತ್ತೇನೆ

ದುಗುಡ ದುಮ್ಮಾನಗಳನ್ನೆಲ್ಲಾ ಬಚ್ಚಿಟ್ಟುಕೊಳ್ಳುತ್ತೇನೆ
ಎಲ್ಲಾ ಚಿತ್ರ ಹಿಂಸೆಗಳನೂ ಮೌನವಾಗಿ ಸಹಿಸುತ್ತೇನೆ

ನನ್ನ ಮೌನವನೂ ಅರ್ಥೈಸಿಕೊಂಬ ಜಾಣ್ಮೆಯಿರುವ ನೀನು
ನನ್ನ ಮನದ ಭಾವನೆಗಳನೆಲ್ಲಾ ಅರಿಯದಿರುವೆ ಏನು

ನಾನಿನ್ನು ಬರೆದು ಸಾಧಿಸುವುದಾದರೂ ಏನಿದೆ
ಓದಿದವರು ತಿರುಗಿ ನನಗೆ ಹೇಳಲಾದರೂ ಏನಿದೆ

ಕವಿತೆಗಳನೋದಿದವರು ಸೃಜನ ಶೀಲತೆಯ ಗುರುತಿಸಲಿಲ್ಲ
ನಾ ವ್ಯಕ್ತ ಪಡಿಸಲೆಳಸಿರುವ ಆಶಯಗಳ ಅರಿಯಲೇ ಇಲ್ಲ

ಆ ನನ್ನ ಕವಿತೆಗಳ ಭಾವಾರ್ಥ ಯಾರಿಗೆ ಬೇಕಂತೆ
ಎಲ್ಲರಿಗೂ ಕವಿತೆಯಲಿರುವ ಸಖಿ ನೀನಾರೆಂಬ ಚಿಂತೆ

ಕಾಲ್ಪನಿಕ ಸಖಿಯ ನಿಜ ಜೀವನದಲಿ ಹುಡುಕುತಿಹರೆಲ್ಲ
ನಾ ಮಾತಿಗಿಳಿದ ಹೆಣ್ಣುಗಳಲಿ ನಿನ್ನ ಕಾಣುತಿರುವರೆಲ್ಲಾ

ನಿನ್ನ ಯೋಗ್ಯತೆಯ ಅರಿತಿರುವ ನನಗಷ್ಟೇ ಗೊತ್ತು
ನಿನ್ನಷ್ಟು ಯೋಗ್ಯ ಹೆಣ್ಣು ಬೇರೊಂದು ಸಿಗದು ಈ ಹೊತ್ತು

ಸಿಕ್ಕವರಲ್ಲೆಲ್ಲಾ ಜನ ನಿನ್ನ ಹುಡುಕಿದರೆ ಅಸಹ್ಯವೆನಗೆ
ನನ್ನ ಮನ ಪಡದಿರದೆ ನಿಜಕ್ಕೂ ಬೇಸರ ಒಳಗೊಳಗೆ

ನಿನ್ನ ಪರಿಚಯ ಬರೇ ನನಗಾದದ್ದಷ್ಟೇ ಸಾಕು
ಅನ್ಯರಿಗೆ ನೀ ಹೇಳು ಸಖೀ ಅದೇಕಾಗಬೇಕು

ನೀನ್ಯಾವ ಮಟ್ಟದವಳೆಂದು ಜನ ಅರಿಯದಿದ್ದರೇನು
ಕಂಡ ಕಂಡವರ ಮಟ್ಟಕ್ಕೆ ಜನ ನಿನ್ನ ಇಳಿಸಬೇಕೇನು

ಅದಕೇ ಸಖೀ,
ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ
ನಿನ್ನನೆಂದೂ ಬಾಯ್ಬಿಟ್ಟು ಕರೆಯುವುದಿಲ್ಲ!!!

*-*-*-*-*-*-*-*-*-*-*-*-*


ಅನಿರೀಕ್ಷಿತ!!!

28 ಮೇ 09
ಸಖೀ,
ಕಲ್ಪನಾ ಲೋಕದಲಿ
ಅದೆಷ್ಟೋ ಬಾರಿ
ನಿನ್ನಂದವನು
ಕಣ್ತುಂಬ ಕಂಡು
ಮನತುಂಬಾ ಸವಿದು
ನಿನ್ನೊಡನೆ
ನಕ್ಕು ನಲಿದಿದ್ದೆ ನಾನು
ಇಂದೀಗ
ನೀನು ಹಠಾತ್ತನೇ
ನನ್ನ ಕಣ್ಮುಂದೆ ನಿಂದು
ಕೈನೀಡಿ ಕರೆವಾಗ
ನನ್ನ ಕಣ್ಣುಗಳನ್ನೇ
ನಂಬಲಾಗದೇ
ನಿನ್ನ ಕರೆಗೆ
ಓಗೊಡಲಾಗದೇ
ಕಣ್ಣಿದ್ದೂ ಕುರುಡನಾಗಿ
ಬಾಯಿಯಿದ್ದೂ ಮೂಕನಾಗಿ
ಕೈಕಾಲುಗಳಿದ್ದೂ ಹೆಳವನಾಗಿ
ಜೀವವಿದ್ದೂ ನಿರ್ಜೀವಿಯಾಗುತ್ತಿದ್ದೇನೆ
ಇದೇನೀ ಅವಸ್ಥೆ?
ಸಖೀ, ಇದೇಕೆ ಹೀಗೆ?!
***********

ಬೂದಿಯಾಗುವವರು!!!

27 ಮೇ 09

ಸಖೀ,
ಕಂಡಿರಬಹುದು
ನೂರಾರು ಬಗೆಯ
ನಗುವ ಹೂಗಳನು ನೀನು;
ಆದರೆ,
ಆ ನಗೆಯ ಹಿಂದಡಗಿರುವ
ನೋವ ನೀ ಅರಿತಿರುವೆಯೇನು?

ಅವುಗಳೊಳಗೂ ಇವೆ ಬಯಕೆಗಳು,
ಅಸಹಾಯಕತೆಯಿಂದಾಗಿ
ಸುಡುತ್ತಿರುವ ಬೇಗೆಗಳು;

ದೇಗುಲದಿ ಹರಿಯ ಪಾದ
ಸೇರಿ ಮುಕ್ತರೆನಿಸಿಕೊಂಬ
ಬಯಕೆಗಳಿರುವಂತೆಯೇ,
ಮುತ್ತೈದೆಯರ ಮುಡಿಯೇರಿ
ಹೆಮ್ಮೆ ಪಡಬೇಕೆಂಬ
ಬಯಕೆಗಳೂ ಇವೆ.

ಆದರೆ,
ದೇಗುಲವ ಸೇರಿದವುಗಳೆಷ್ಟೋ?
ಶವಗಳ ಜೊತೆ ಸೇರಿ
ಚಿತೆಯೇರಿದವುಗಳೆಷ್ಟೋ?
ರಾಜಕೀಯ ಪುಡಾರಿಗಳ
ಕೊರಳ ಬಳಸಿ,
ಉಸಿರುಗಟ್ಟಿಸಿಕೊಂಡು
ಸತ್ತವುಗಳೆಷ್ಟೋ?
ಮದುವೆ – ಸಮ್ಮಾನ
ಸಮಾರಂಭಗಳಲಿ,
ಜನರ ಕಾಲಡಿಯಲಿ ಬಿದ್ದು
ನರಳಾಡಿದವುಗಳೆಷ್ಟೋ?
ಇನ್ನು, ಇದ್ದಲ್ಲೇ ಇದ್ದು,
ಬಿಸಿಲ ಬೇಗೆಯಲಿ ಉರಿದು
ಬೂದಿಯಾದವುಗಳೆಷ್ಟೋ?

ಅಂತೆಯೇ ನಾವೂ ಕೂಡ,
ನಮ್ಮೆಲ್ಲಾ ಬಯಕೆಗಳ
ಬಚ್ಚಿಟ್ಟುಕೊಂಡು
ನಮ್ಮ ಅಸಹಾಯಕತೆಯಿಂದಾಗಿ
ಒಳಗೊಳಗೆ ನೊಂದು,
ಬಡತನದ ಬೇಗೆಯಲಿ ಬೆಂದು,
ಬೂದಿಯಾಗುವವರೇ
ಮುಂದೊಂದು ದಿನ.

ಆದರೂ, ನೋವ ಮರೆತು
ನಗುತಿರುವ ಆ ಹೂಗಳಂತೆ,
ನಗುತಿರಬಾರದೇ
ನಾವೂ, ದಿನ – ಪ್ರತಿದಿನ?
*-*-*-*-*-*-*-*


ನನ್ನಾಕೆ ಇಲ್ಲದಾಗ ಮತ್ತೆ ಬರುವಿರಂತೆ ಈಗ ಹೊರಡಿ!!!

26 ಮೇ 09
ಜ್ವರ ಬಂದು ಹೋದ ಮೇಲೆ ಕೆಮ್ಮು ಈಗ ಉಳಿದಿದೆ
ತಲೆ ನೋವು ಕಾಡುತಿಹುದು ಮೂಗು ಮೋರಿ ಆಗಿದೆ
 
ಮೈಕೈ ಎಲ್ಲಾ ನೋವು ಯಾರೋ ಹಿಡಿದು ಗುದ್ದಿರುವಂತಿದೆ
ತುಂಬಿದ ಸಿಟಿ ಬಸ್ಸಲ್ಲಿ ನಿಂತೇ ಪಯಣ ಮುಗಿಸಿ ಇಳಿದಂತಿದೆ
 
ಬೆಂಗಳೂರ ಹವಾಮಾನದಲ್ಲಿ ಏರು ಪೇರು ಸಾಮಾನ್ಯಾನೇ
ಎಲ್ಲಾ ದಿನವೂ ಒಂದೇ ತೆರನಿರದು ಭಾವನೆಗಳೂ ಹಾಗೇನೇ
 
ವಿಷಯ ನೂರಾರು ಇದ್ದರೂ ಈಗ ಬರೆಯಲೇನೂ ತೋಚದು
ಮಾತು ಹೊರಬರುವ ಮೊದಲೇ ಕೆಮ್ಮು ಮಾತನೇ ತಡೆವುದು
 
ಶೀತ, ಜ್ವರ, ಕೆಮ್ಮು ಇವೆಲ್ಲಾ ಜೊತೆಜೊತೆಗೆ ಅಲ್ಲ ಬೇರೆ ಬೇರೆ
ಕೆಮ್ಮಗಿನ್ನು ನಾಲ್ಕುದಿನ ಮತ್ತದರ ದಾರಿ ಬೇರೆ ನಂದೇ ಬೇರೆ
 
ಒಂಟಿಯಾಗಿ ಬಾಳಲಾರ ಎಂದು ನನ್ನವಳಿಗೆ ತಿಳಿಸಲೇನೋ
ಆಕೆ ಇಲ್ಲದಾಗಲೇ ಕಾಡುವರು ನನ್ನ ಮೇಲೆ ವೈರವೇನೋ
 
ತವರಿಂದ ಆಕೆ ಮರಳಿ ಬಂದಾಯ್ತು ಇನ್ನಾದರೂ ಬಿಟ್ಟುಬಿಡಿ
ನನ್ನಾಕೆ ಇಲ್ಲದಾಗ ಮತ್ತೆ ಬರುವಿರಂತೆ ಈಗ ನೀವು ಹೊರಡಿ

ಕೇಂದ್ರ ಮಂತ್ರಿಗಳ ಕ್ಯಾತೆ!!!

25 ಮೇ 09
ಲಾಲೂ ಪ್ರಸಾದ ಓಡಿಸಿದ ರೈಲಿಗಿನ್ನು ಮಮತಾ ಬ್ಯಾನರ್ಜಿ ಚಾಲಕಿ
ತೋರಿಸಬೇಕಿದೆ ಲಾಭ ತರುತ್ತಿದ್ದ ಲಾಲೂನಂತೆ ತಾನೂ ಚಾಲಾಕಿ

ಬೇಡ ಬೇಡ ಎಂದರೂ ಚಿದಂಬರಂ ಕೈಯಲ್ಲೇ ಇನ್ನು ಗೃಹಖಾತೆ
ಬಟ್ಟೆ ಬದಲಿಸುವ ಮೊದಲು ವಹಿಸಬೇಕಾಗುತ್ತದೆ ಆತ ಜಾಗ್ರತೆ

ಬಾಂಬು ಬಿದ್ದಾಗ ಬಟ್ಟೆ ಬದಲಿಸಿ ಕುಖ್ಯಾತನಾಗಿದ್ದ ಆ ಶಿವರಾಜ
ನೀನೂ ಹಾಗೆ ಮಾಡಿದರೆ ನಿನ್ನನ್ನೂ ಬಿಡಲಾರರಲ್ಲೋ ರಾಜ

ಹಿಂದೆ ನಡೆಸಿದ ಕೃಷಿಯ ಮುಂದುವರಿಸಬೇಕಿದೆ ಶರದ ಪವಾರ್
ಕ್ರಿಕೆಟ್ಟಷ್ಟೆ ಅಲ್ಲ ನೋಡಬೇಕಿದೆ ರೈತ ಸಮುದಾಯದ ಕಾರುಬಾರ್

ಹಲವೊಮ್ಮೆ ತೋರಿದ್ದ ಇತ್ತೆಂದು ಪ್ರಧಾನಿಯಾಗುವತ್ತ ತನ್ನ ಚಿತ್ತ
ಪ್ರಣವ ಮುಖರ್ಜಿ ತೆಪ್ಪಗಿರಬೇಕಾಯ್ತು ಮಗದೊಮ್ಮೆ ಪಡೆದು ವಿತ್ತ

ವಿದೇಶೀ ಶೈಲಿಯ ದಿರಿಸು ವಿದೇಶೀ ನುಡಿ ನಮ್ಮೂರ ಕೃಷ್ಣನದು
ಅದಕ್ಕೆ ಇರಬೇಕು ಇನ್ನು ಮುಂದೆ ವಿದೇಶ ವ್ಯವಹಾರ ಅವನದು

ಪದೇ ಪದೇ ತಲೆ ಸುತ್ತು ಬಂದು ಬೀಳುವ ಆಂಟನಿಯ ಆರೋಗ್ಯ
ಈ ದೇಶದ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರೆ ನಮ್ಮ ಭಾಗ್ಯ


ನನ್ನವಳು ನನ್ನ ಜೊತೆಗಿಲ್ಲ ಎಂದರಿತು ಬಂದೆಯಾ?!

22 ಮೇ 09
ಸೀತಾ ಸೀತಾ ಸೀತಾ ಬಾಯ್ಬಿಟ್ಟು ಹೇಳೇ ಸೀತಾ
ನೀನ್ಯಾಕೆ ನನ್ನ ಈ ತರಹ ಸತಾಯಿಸ್ತೀಯಂತಾ
 
ನನ್ನವಳು ನನ್ನ ಜೊತೆಗಿಲ್ಲ ಎಂದರಿತು ಬಂದೆಯಾ
ನನ್ನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದಿರುವೆಯಾ
 
ನನ್ನ ತಲೆ ಭಾರವಾಗುತಿದೆ, ಕಣ್ಣುಗಳು ಉರಿಯುತಿವೆ
ನಿನ್ನಿಂದಾಗಿ ನನಗೆ ಈಗ ಉಸಿರುಗಟ್ಟುವಂತಾಗುತಿದೆ
 
ನಿನ್ನ ನಾ ಕರೆಯದೇ ನೀನ್ಯಾಕೆ ಬಂದೆನ್ನ ಕಾಡುತಿಹೆ
ನನ್ನ ಮೇಲೆ ನಿನ್ನದೇ ಅಧಿಕಾರವೆಂಬಂತೆ ಆಡುತಿಹೆ
 
ನಿನ್ನಿಂದಾಗಿಯೇ ನಾ ಬಯಸಿದ್ದನೆಲ್ಲಾ ತಿನಲಾಗುತ್ತಿಲ್ಲ
ದಿನಾ ಹೋಟೇಲಿನಲ್ಲಿ ಏನೇನನ್ನೆಲ್ಲಾ ತಿನ ಬಯಸಿದ್ದೆನಲ್ಲ
 
ನನ್ನ ನೆಮ್ಮದಿಯ ಅನಗತ್ಯವಾಗಿ ಈ ರೀತಿ ಕೆಡಿಸದಿರು
ನನಗೂ ಮನಬಂದ ತಿಂಡಿಗಳ ತಿನ್ನುವಂತೆ ಬಿಟ್ಟುಬಿಡು
 
ನನ್ನೆದೆ ಗೂಡಿನಿಂದ ಒಮ್ಮೆಗೇ ಜಿಗಿದು ಬಿಡು ಹೊರಗೆ
ೂಗಿನಿಂದ ತೊಲಗಿ ಬಿಟ್ಟುಬಿಡು ನನ್ನನ್ನು ನನ್ನ ಪಾಡಿಗೆ
 
ನಿನ್ನ ಉಪದ್ರವದಿಂದಾಗಿ ನಿನ್ನನ್ನೇ ಶೀತವೆಂದು ಕೂಗಲಾಗದೇ
ಸೀತಾ ಸೀತಾ ಸೀತಾ ಎಂದು ಈ ರೀತಿ ಬೊಬ್ಬಿಡುವಂತಾಗಿದೆ

ಗಾಳಿ ತಂಗಾಳಿಯಾದೀತು!!!

21 ಮೇ 09

ಸಖೀ,
ಇಂದು ನಿನ್ನ
ದರುಶನವಾಗಿಲ್ಲವೆಂಬ
ಮುನಿಸು ನನಗಿದ್ದಷ್ಟೇ
ಆ ಸೂರ್ಯನಿಗೂ
ಇದೆ ನೋಡು,
ಅದಕ್ಕೇ ಮರೆಯಾಗಿ
ಕೂತಿದ್ದಾನೆ
ಕೋಪಿಸಿಕೊಂಡು;

ನೀನಿಂದು ಎರಡು
ಸವಿಮಾತ ಆಡಿಲ್ಲವೆಂಬ
ಬೇಸರ ನನಗಿದ್ದಷ್ಟೇ
ಬೀಸುತ್ತಿರುವ ಗಾಳಿಗೂ ಇದೆ,
ನ್ನುಸಿರು ಬಿಸಿಯಾಗಿರುವಂತೆ
ಆ ಗಾಳಿಯಲೂ ಇಂದು
ಎಂದಿಲ್ಲದ ರೋಷವಿದೆ
ಕಂಡಿಲ್ಲದ ಬಿಸಿ ಇದೆ;

ಸಖೀ,
ಬಂದು ಬಿಡು
ಸೂರಿನಡಿಯಿಂದಾಚೆಗೆ,
ನಿನ್ನ ಕಂಡ ನಾನು
ತೃಪ್ತಿ ಪಡುವಂತೆ,
ಬಂದಾನು ಮುನಿಸ ಮರೆತು
ಸೂರ್ಯನೂ ಮೋಡಗಳ
ಮರೆಯಿಂದಾಚೆಗೆ;

ನೀ ನುಡಿದರೆ ನನ್ನ
ಕಿವಿಗಳಲಿ ಒಂದೆರಡು
ಸವಿಮಾತನಿಂದು,
ಈ ನನ್ನ ಮನವೂ ತಣಿದೀತು,
ಮಾತ ಕೇಳಿಸಿಕೊಂಡ
ಆ ಗಾಳಿಯೂ ತಣಿದು
ತಂಗಾಳಿಯಾದೀತು!
*-*-*-*-*-*-*-*


ಇರಬೇಕಲ್ಲವೇ ನಾನಾಗ?

20 ಮೇ 09
ಸಖೀ,
ಹೀಗಾಗಬೇಕಿತ್ತು, ಆಗಿದೆ ಅಷ್ಟೆ,
ಆಗಬಾರದ್ದೇನೂ ಆಗಿಲ್ಲವಷ್ಟೆ?
ಮೇಲಕ್ಕೇರಿದವರು ಕೆಳಗಿಳಿಯಲೇ ಬೇಕು,
ಇದು ಲೋಕ ನಿಯಮ;
ಆದರೇನು ಮಾಡೋಣ, ಇದ ಅರಿಯುವಷ್ಟು
ನಮಗಿಲ್ಲ ಸಂಯಮ.
ಅಂದು ನನ್ನ ಪ್ರತಿಯೊಂದು ಮಾತಿಗೂ
ಹೊಸ ಹೊಸ ಅರ್ಥವ ನೀಡಿ,
ನನ್ನನ್ನೇ ನಿನ್ನ ಪಾಲಿನ ದೇವರೆಂದು
ಮೇಲಕ್ಕೇರಿಸಿದೆ ನೀನು,
ಇಂದು ನನ್ನ ಮಾತುಗಳ ಹಿಂದಡಗಿರುವ
ನನ್ನ ಭಾವನೆಗಳ, ಆಶಯಗಳ
ನಿನ್ನಿಂದ ಅರಿಯಲಾಗದೆ,
ಆ ಮಾತುಗಳೆಲ್ಲಾ ಅಪಾರ್ಥಗೊಂಡಾಗ,
ಒಮ್ಮೆಲೇ ನಿನ್ನ ದೃಷ್ಟಿಯಿಂದ ನನ್ನ
ಕೆಳಗಿಳಿಸಿದೆ ನೀನು.
ಅಂದು ನಾನೇ ನೀನಾಗಿ, ನೀನೇ ನಾನಾಗಿದ್ದಾಗ,
ದಿನವೂ ಬರೇ ನನ್ನ ಜೊತೆಗಿನ ಆ ಮಧುರ
ಕ್ಷಣಗಳಿಗಾಗಿ ನನ್ನ ದಾರಿ ಕಾಯುತ್ತಿದ್ದವಳು ನೀನು,
ಇಂದು ನನ್ನ ನಿಜರೂಪದ ಹಿಂದೆ
ಇನ್ನೊಂದು ರೂಪ ಅಡಗಿದೆ ಎಂಬ
ಭ್ರಮೆಯಿಂದ ಅಸಹ್ಯಗೊಂಡು,
ನನ್ನಿಂದ ಆದಷ್ಟು ದೂರವಿರಲು
ಬಯಸುತಿರುವೆ ನೀನು.
ನನ್ನಲ್ಲಿ ಯಾವ ಸಬೂಬುಗಳೂ ಇಲ್ಲ ಸಖೀ,
ನನ್ನ ಒಳಗು ಹೊರಗುಗಳನ್ನೆಲ್ಲಾ ಸಂಪೂರ್ಣ
ಅರಿತಿರುವ ನಿನಗೆ ಇನ್ನು ಹೇಳಲೇನೂ ಉಳಿದಿಲ್ಲ.
ನಿಜ ಹೇಳಲೇ ಸಖೀ,
ಇನ್ನು ನನ್ನ ಬಾಳಲೇನೂ ಉಳಿದೇ ಇಲ್ಲ.
ಆದರೂ ಕಳೆಯಲಾಗದು ಈ ಜೀವವನು,
ಹೋಗಲಾರದು ದೂರ ತೊರೆದು ನಿನ್ನನು.
ನಿನ್ನ ಮನವ ಮುಸುಕಿರುವ ಈ ಭ್ರಮೆಯ ಮೋಡ
ಮರೆಯಾದಾಗ, ನಾಳೆ ನನಗಾಗಿ ಹುಡುಕಾಡಿ,
ಎಲ್ಲಿರುವೆ, ಓ ಗೆಳೆಯಾ ಎಂದು, ನೊಂದು
ನೀ ಕರೆವಾಗ, ಓ ಗೊಡಲು, ಇರಬೇಕಲ್ಲವೇ
ನಿನ್ನ ಇದಿರಲ್ಲೇ ನಾನಾಗ?!
*-*-*-*-*-*-*-*-*-*

ಥಟ್ ಅಂತ ಕವನ!!!

20 ಮೇ 09

ಥಟ್ ಅಂತ ಕವನ ಬರೆಯುವ ಸ್ಪರ್ಧೆ ಇದ್ದರೆ
ನನಗೂ ಹೇಳಿ ಬರುತ್ತೇನೆ ನಾ ಪುರುಸೊತ್ತಿದ್ದರೆ

ನನಗಿನ್ನೇನೂ ಬೇಕಾಗಿಲ್ಲ ಪುರಸ್ಕಾರ ಪ್ರಶಸ್ತಿ
ಅನ್ನುತ್ತೀದ್ದೀರಲ್ಲಾ “ಆಶು ಕವಿ” ನನಗಿದೇ ಜಾಸ್ತಿ

ಪದ್ಯರೂಪದಲಿ ಬರೆಯುವ ರೂಡಿಯಾಗಿ ಬಿಟ್ಟಿದೆ
ಲೇಖನಗಳ ಸಂಖ್ಯೆ ಏರದೇ ಅಲ್ಲಿಗಲ್ಲಿಗೇ ನಿಂತಿದೆ

ಓದುಗರ ಮನಮುಟ್ಟಿ ಸಂತಸ ನೀಡಿದರೆ ಕವನ
ನನಗಾತ್ಮ ತೃಪ್ತಿ ದೇವರಿಗೆ ಮಾಡಿದಂತೆ ಹವನ

ಹೊಗಳಿ ಹೊಗಳಿ ನನ್ನನ್ನು ಏರಿಸಿದರೆ ನೀವು ಮೇಲೆ
ನಿಮ್ಮ ನಿರೀಕ್ಷೆಯ ಮಟ್ಟವೂ ಏರಬಹುದು ಆಮೇಲೆ

ಹತ್ತು “ಗೋಲು” ಉಳಿಸಿದ “ಗೋಲಿ”ಯ ಹೊಗಳುವರೆಲ್ಲಾ
ಒಂದು “ಗೋಲು” ತಪ್ಪಿದರೆ ಎಲ್ಲರೂ ಉಗಿಯುವರಲ್ಲಾ…!