ಕೇಳದಿರು ಕಾರಣ!

28 ಸೆಪ್ಟೆಂ 12

ಸಖೀ,

“ನಿನ್ನೊಂದಿಗೆ 
ಮಾತನಾಡಲು
ಕಾರಣವೇ
ಬೇಕಿಲ್ಲ,
ವಿಷಯಗಳೂ
ಬೇಕಿಲ್ಲ”

ಎಂದೆಲ್ಲಾ
ಹೇಳುತ್ತಿದ್ದವಳಿಂದು

“ನಿನ್ನೊಂದಿಗೆ 
ಮಾತಾಡೋಲ್ಲ”
ಅನ್ನುತಿರುವೆಯಲ್ಲಾ?

ಮಾತಿಲ್ಲದಿದ್ದರೆ 
ಬೇಡ ಬಿಡು,
ಕಾರಣವೇನೆಂದು
ಹೇಳಿ ಬಿಡು!

“ಮಾತಿಗೆ
ಕಾರಣವಿರಲಿಲ್ಲ,
ಈಗ ಮೌನಕ್ಕೂ
ಕಾರಣವಿಲ್ಲ,

ಸ್ವಲ್ಪ ಹೊತ್ತಾದರೂ
ನನ್ನನ್ನು ಹೀಗೆಯೇ,
ನನ್ನೊಂದಿಗಷ್ಟೇ
ಇರಲು ಬಿಟ್ಟು ಬಿಡು!”
***********


ಅಭಿಲಾಷೆ!

27 ಸೆಪ್ಟೆಂ 12

ಸಖೀ,
ನೀನು
ಒಲ್ಲೆ ಒಲ್ಲೆ
ಒಲ್ಲೆ ಒಲ್ಲೆ
ಅನ್ನುವಾಗ
ನನಗೊಳ್ಳೇ
ತಮಾಷೆ,

ನಿನ್ನ ಈ
ಬೇಡಗಳೇ
ಬೇಕೆಂಬ
ಅರ್ಥನೀಡಿ
ಹೆಚ್ಚಿಸುತ್ತವೆ
ಈ ಮನದ
ಅಭಿಲಾಷೆ!
******


ಅತ್ತಿದ್ದರೇ?

27 ಸೆಪ್ಟೆಂ 12

ಸಖೀ,
ಕಾವೇರಿ
ನೀರಿಗಾಗಿ
ಬೀದಿಗಿಳಿದು
ಕಾದಾಡಿದರೆ
ಹರಿಯುವುದು
ಅಮಾಯಕರ
ನೆತ್ತರೇ,

ಅವಕಾಶ
ಸಿಕ್ಕಗಲೆಲ್ಲಾ
ತಮ್ಮ ಬೇಳೆ
ಬೇಯಿಸಿಕೊಂಬ
ಈ ನಾಯಕರು
ನಿಸ್ವಾರ್ಥರಾಗಿ
ಎಂದಾದರೂ
ಅತ್ತಿದ್ದರೇ?
*****


ಕಲ್ಲು ಹೃದಯ!

27 ಸೆಪ್ಟೆಂ 12

ಸಖೀ,
ಒಂದೇ 
ಒಂದು
ಬಾರಿ
ಮಂದಿರ 
ಪ್ರವೇಶಿಸುವ 

ಕಲ್ಲಿನ
ವಿಗ್ರಹ
ದೇವರೆಂದು
ಕರೆಸಿಕೊಳ್ಳುತ್ತದೆ;

ಆದರೆ,
ದಿನ ಪ್ರತಿ ದಿನ 
ಮಂದಿರಕ್ಕೆ 
ಹೋಗುವ 
ಮಾನವನ 
ಹೃದಯವೇಕೆ 
ಕಲ್ಲಾಗಿಯೇ 
ಉಳಿಯುತ್ತದೆ?
********


ಅಪಾಯಕಾರಿ!

27 ಸೆಪ್ಟೆಂ 12

ಸಖೀ,
ನಗರದಲ್ಲಿನ
ವಾಹನದಟ್ಟಣೆಯ
ಹಾಗೆಯೇ ಇಲ್ಲಿನ
ಜನಸಂದಣಿಯೂ
ಬಲು ಅಪಾಯಕಾರಿ;

ಕೆಲವರು ನಮ್ಮ
ಮನಕ್ಕಿಟ್ಟರೆ ಲಗ್ಗೆ,
ಇನ್ನು ಕೆಲವರು
ಹಾಕುತ್ತಾರೆ ನಮ್ಮ
ಜೇಬಿಗೇ ಕತ್ತರಿ!
*********


ಹೂಂ… ಅರಿವಾಯ್ತು!

27 ಸೆಪ್ಟೆಂ 12

ಆತ ಹಠಾತ್ತಾಗಿ
ಆಕೆಯನ್ನು ಕೇಳಿದ
“ನೀ ನನ್ನನ್ನು
ಪ್ರೀತಿಸ್ತಿದೀಯಾ?”

ಆಕೆ ಒಮ್ಮೇಗೇ 

ಮೌನಿಯಾದಳು
ಉತ್ತರಿಸದೇ
ಎದ್ದುಹೋದಳು

ಆಕೆಯ ಗೆಳತಿ
“ನೀನ್ಯಾಕೆ
ಉತ್ತರಿಸಲಿಲ್ಲ?”

ಆಕೆ ಅಂದಳು
“ಏನ್ ಹೇಳ್ಬೇಕೋ
ಗೊತ್ತಾಗ್ಲಿಲ್ಲ!”

“ಪ್ರೀತಿ ಕಣೆ,
ಇಲ್ಲ ಅಂದ್ರೆ ಇಲ್ಲ,
ಇದೆ ಅಂದ್ರೆ ಇದೆ 
ಅನ್ನಬೇಕಾಗಿತ್ತು”

“ಅದಷ್ಟು ಸುಲಭ
ಆಲ್ಲವಾಗಿತ್ತು!”

“ಹೂಂ… ನಿಜ,
ಪ್ರೀತಿ ಇಲ್ಲವಾಗಿದ್ರೆ
ಸುಲಭವಾಗಿರ್ತಿತ್ತು
ನನಗೂ ಈಗ
ಅರಿವಾಯ್ತು!”
******


ನೆನಪು ನೆನಪಾಗದೇ?

27 ಸೆಪ್ಟೆಂ 12

ಸಖೀ,
ನೆನಪು
ನೆನಪಾಗದೇ 
ಇದ್ದರೆ 
ನೆನಪು ನೆನಪೆಂದು 
ಅನಿಸಿಕೊಳ್ಳುವುದು 
ಹೇಗೆ?

ನೆನಪು
ಹಳೆಯದಾಗದೇ 
ಇದ್ದರೆ ಆ ನೆನಪು 
ಅತ್ಯಮೂಲ್ಯವೆಂದು 
ಅನಿಸಿಕೊಳ್ಳುವುದು 
ಹೇಗೆ?
****

ಹೆಜ್ಜೆಗುರುತುಗಳು!

27 ಸೆಪ್ಟೆಂ 12

ಸಖೀ,
ನೀನು
ಬಾರದಿದ್ದರೆ,
ನಿನ್ನ ಸುದ್ದಿಯೇ 
ಇರುವುದಿಲ್ಲ
ಒಮ್ಮೊಮ್ಮೆ,
ದಿನ ವಾರ
ತಿಂಗಳು;

ಬಂದರೆ, 
ಒಮ್ಮೆಗೇ ಒಂದರ 
ಮೇಲೊಂದರಂತೆ
ನನ್ನ ಬರಹಗಳ
ಕೆಳಗೆ ಸಾಲಾಗಿ 
ನೀ ಬಿಟ್ಟು ಹೋದ
ಮೆಚ್ಚುಗೆಯ
ಗುರುತುಗಳು,
ನನ್ನ ಪಾಲಿಗೆ
ಅವುಗಳೇ ನಿನ್ನ
ಹೆಜ್ಜೆಗುರುತುಗಳು!
*********


ವಾಸ್ತವಕ್ಕೂ ಮೀರಿ!

27 ಸೆಪ್ಟೆಂ 12

ಸಖೀ,
ಕೇವಲ
ವಾಸ್ತವವನ್ನೇ
ಅಪ್ಪಿಕೊಂಡು,
ಇದ್ದುದನ್ನೇ
ಒಪ್ಪಿಕೊಂಡು,
ಬದುಕುತ್ತಿದ್ದರೆ
ಎಂತಿರಬಹುದು
ಹೇಳು ನಮ್ಮ
ಈ ಜೀವನ?

ಆಗಾಗ,
ನಮ್ಮದೇ
ಕಲ್ಪನಾಲೋಕದಲ್ಲಿ,
ಅದ್ಯಾವುದೋ
ಕನಸಿನ ಲೋಕದಲ್ಲಿ,
ಸುತ್ತಾಡಿಕೊಂಡು,
ಮಾತಾಡಿಕೊಂಡು,
ಬರುತ್ತಾ ಇದ್ದರಷ್ಟೇ
ಈ ಬಾಳು ಆಗಬಹುದು
ಅಭಿರುಚಿಭರಿತ
ಜೀವನ!
*******


ಕವಿಗೇನಂತೆ?

27 ಸೆಪ್ಟೆಂ 12

ಕವಿತೆಯನು
ಅಳೆಯಲಾಗದಾಗ
ಕವಿಯನ್ನು
ಅಳೆಯುವರು

ಕವಿತೆಯಾಳಕ್ಕೆ
ಇಳಿಯಲಾಗದಾಗ
ಕವಿಯನ್ನೇ
ಇಳಿಸುವರು

ಉತ್ತುಂಗಕ್ಕೆ
ಏರಿಸುವವರೂ
ಅವರೇ,

ಕವಿಯನ್ನು
ಇಳಿಸುವವರೂ
ಅವರೇ

ಕವಿಗೇನಂತೆ,
ಕವಿ ಬರೆಯುತ್ತಲೇ 
ಇರುವನಂತೆ,

ಹಿಂದಿನಂತೆ
ಅವನು
ಎಂದಿನಂತೆ!
*******