ಹಂದರ – ಕಂದರ!

30 ಏಪ್ರಿಲ್ 10

ಅಂದು ನೀನಾರೋ ನಾನಾರೋ 

 

ಆಕಸ್ಮಿಕವಾಗಿ ಆಯಿತು ನಮ್ಮಾ ಭೇಟಿ

ಭೇಟಿಗಳಿಂದ ಬೆಳೆಯಿತು ಪರಿಚಯ

ಪರಿಚಯದಿಂದ ಮೂಡಿತು ಆತ್ಮೀಯತೆ 

ಆತ್ಮೀಯತೆಯಿಂದ ಚಿಗುರಿತು ಪ್ರೀತಿ

 

ಪ್ರೀತಿಯಿಂದ ವ್ಯಾಪಿಸಿತು ಅಧಿಕಾರ

ಅಧಿಕಾರದಿಂದಾಗಿ ಹೆಚ್ಚಿದ ನಿರೀಕ್ಷೆ

ನಿರೀಕ್ಷೆ ಸುಳ್ಳಾದಾಗ ಅಸಮಾಧಾನ

ಅಸಮಾಧಾನದಿಂದಾಗಿ ಅನುಮಾನ

ಅನುಮಾನದೊಂದಿಗೆ ಬಿಗುಮಾನ

 

ಇದರಿಂದ ಮರೆಯಾಯಿತು ಸರಸ

ನಮ್ಮ ಮನಗಳನಾವರಿಸಿತು ವಿರಸ

 

ಅಂದು ಎಲ್ಲೆಲ್ಲೂ ಒಲವಿನ ಹಂದರ

ಇಂದು ನಮ್ಮ ನಡುವಿದೆ ಈ ಕಂದರ

 

ಇಂದು ಮತ್ತೆ ನೀನಾರೋ ನಾನಾರೋ!

 *****


ಕಷ್ಟ ಬರಬಹುದೆಂದು ಸತ್ಯ ನನಗನಿಷ್ಟವೆಂದೆನ್ನಲೇ

29 ಏಪ್ರಿಲ್ 10

 

 

ಕ್ಷಮೆಯೊಂದೇ ಧರೆಯೊಳಗೇ ಪರಮವೆಂದು ಅಂದರೇ ಎಲ್ಲ

ಕ್ಷಮೆಯನ್ನು ಯಾಚಿಸದವನಿಗೆ ಧರೆಯೊಳಗೆ ಕ್ಷಮೆಯೇ ಸಲ್ಲ

 

ತಪ್ಪನ್ನು ತಪ್ಪೆಂದರುಹದೊಡೆ ಆ ತಪ್ಪನ್ನು ನಾಮಾಡಿದಂತೆ

ಬಾಯ ತೆರೆಯದಿದ್ದೊಡೆ ಅನಾಹುತಕ್ಕೆ ನಾ ಕಾರಣನಾದಂತೆ

 

ದುರ್ಜನರ ಸಹವಾಸವದು ಹಾವಿನೊಂದಿಗಿನ ಸರಸದಂತೆ

ಯಾವಾಗ ಎಲ್ಲಿ ಕಡಿಯುವುದೇನೋ ನಮಗೇ ಅರಿಯದಂತೆ

 

ಸಂಬಂಧಗಳ ನೆಪದಲ್ಲಿ ಆತ್ಮ ವಂಚನೆ ಮಾಡಿಕೊಳ್ಳಲೇಕೆ

ಎಲ್ಲರ ಮೇಲೆಳೆದುಕೊಂಡು ಮೈಯೆಲ್ಲಾ ಪರಚಿಕೊಳ್ಳಲೇಕೆ

 

ಅವರಿವರನ್ನು ಮೆಚ್ಚಿಸುತ್ತಾ ಬಾಳಲಾಗದು ಜೀವನದುದ್ದಕ್ಕೂ

ದೇವರು ಮೆಚ್ಚದಿದ್ದರೆ ಈ ಆತ್ಮಕ್ಕೆ ಗೋಳೇ ಬಾಳಿನುದ್ದಕ್ಕೂ

 

ಜನರು ಮೂರ್ಖರು ಅವರ ದೇವರೇ ಕ್ಷಮಿಸಲಿ ಎಂದೆನ್ನಲೇಕೆ

ತನ್ನತನವನೇ ಮರೆತು ನಪುಂಸಕನಾಗಿ ನಾನಿಲ್ಲಿ ಬಾಳಲೇಕೆ

 

ನನಗೆ ಕಷ್ಟ ಬರಬಹುದೆಂದು ಸತ್ಯ ನನಗೆ ಅನಿಷ್ಟವೆಂದೆನ್ನಲೇ

ಅಸತ್ಯವನೇ ಮೆರೆದು ದೇವನಿಗೇ ಇಷ್ಟವಿಲ್ಲದವನಂತಾಗಲೇ

************************************


ಪ್ರಕೃತಿಯ ಮುಂದೆ ನಿಸ್ಸಹಾಯಕ ಮನುಜ!

22 ಏಪ್ರಿಲ್ 10

 

ಧೂಮಪಾನಿಗಳಲ್ಲಿ ಅರಿವು ಮೂಡಿಸಿದರೆ

ಧೂಮಪಾನಕ್ಕೆ ಹಾಕಬಹುದು ಕಡಿವಾಣ

 

ವಾಹನಗಳ ಬಳಕೆಯನ್ನು ಕಡಿತಗೊಳಿಸಿ

ನಿಯಂತ್ರಿಸಲೂಬಹುದು ವಾಯುಮಾಲಿನ್ಯ

 

ಪ್ರಕೃತಿಗೆ ತಾನೆಷ್ಟು ಸಹಕಾರಿ ಎಂಬುದನು

ತೋರಿಸಿಕೊಳ್ಳುತ್ತಿದ್ದರೂ ಈಗ ಈ ಮನುಜ

 

ಪ್ರಕೃತಿ ತನ್ನ ವಿಕೋಪವನು ತೋರಿಸದೇ

ಬಿಡುವುದಿಲ್ಲ ಅನ್ನುವ ಮಾತೂ ಈಗ ನಿಜ

 

ಕೆಡಿಸಿದ ವಾತಾವರಣವನ್ನು ಸರಿಪಡಿಸಿ ಈಗ

ನೆಮ್ಮದಿಯ ಹೊಂದಲು ಬಿಡೆನೆಂದು ನಗುತಿದೆ

 

ಧೂಮಪಾನಿಯಂತೆ ತಾನೇ ಹೊಗೆಯುಗುಳಿ

ಲಕ್ಷಾಂತರ ಜನರ ಮನಶಾಂತಿಯ ಕೆಡಿಸಿದೆ

 

ಮನುಜ ಏನ ಸಾಧಿಸಿದರೂ ಪ್ರಕೃತಿಯ ಮುಂದೆ

ಸದಾಕಾಲ ನಿಸ್ಸಹಾಯಕನಾಗಿಯೇ ಇರುವ ನಿಜದಿ

 

ಗಾಳಿ ಮಳೆಗೆ ಧರೆಗುರುಳುವ ಮರಗಳ ಲೆಕ್ಕವಿಲ್ಲಿಲ್ಲ

ಉದ್ಯಾನವನದ ಮರ ಉಳಿಸಿದರೂ ನಮ್ಮ ಮಂದಿ

**********

(ಇಂದು ಭೂದಿನಾಚರಣೆ ನಡೆಯುತ್ತಿದೆ. ಐಸ್‍ಲ್ಯಾಂಡಿನ ಜ್ವಾಲಾಮುಖಿ ಹೊರಗುಗುಳಿದ ಹೊಗೆಯಿಂದ ವಿಮಾನಯಾನ ಸ್ಥಬ್ಧವಾಗಿ ಲಕ್ಷಾಂತರ ಜನರು ಪಟ್ಟ ಬವಣೆಯ ಬಗ್ಗೆ ಓದಿ, ಕೇಳಿದಾಗ, ಆಸುಮನದಲ್ಲಿ ಮೂಡಿದ ಮಾತುಗಳಿವು)

 


ನಿತ್ಯ ರೋದನ!

21 ಏಪ್ರಿಲ್ 10

 

ಸತ್ತು ಅಗಲಿದವರಿಗಾಗಿ

ನಾವು ಮರುಗಿ

ಕಣ್ಣೀರಿಡುವುದು

ಬರೀ ಒಂದೆರಡು ದಿನ,

 

ಆದರೆ,

ಎಲ್ಲಾ ಸಂಬಂಧಗಳ

ಮುರಿದುಕೊಂಡು

ನಮ್ಮ ನಡುವೆ ಇದ್ದೂ

ಸತ್ತಂತೆ ಇರುವ ನಮ್ಮ 

ಕೆಲವು ಬಂಧುಗಳಿಗಾಗಿ

ಅದ್ಯಾಕೋ ನಿತ್ಯ ರೋದನ! 

*****

 


ಶ್ರದ್ಧಾಂಜಲಿ

20 ಏಪ್ರಿಲ್ 10

 

 

ಶ್ರೀಮತಿ ಪ್ರೇಮಲತಾ ಹರ್ಷವರ್ಧನ ಶೆಟ್ಟಿ

ಪಯಣ: ೧೮ ಜೂನ್ ೧೯೬೦ ರಿಂದ ೧೫ ಎಪ್ರಿಲ್ ೨೦೧೦ರ ವರೆಗೆ

 

ಕಳೆದ ಗುರುವಾರ ಮುಂಬಯಿಯಲ್ಲಿ ಸ್ವರ್ಗಸ್ಥರಾದ ನಮ್ಮ ಅತ್ತೆ

(ನಮ್ಮ  ಸೋದರಮಾವ ಆತ್ರಾಡಿ ಹರ್ಷವರ್ಧನ ಶೆಟ್ಟಿಯವರ ಪತ್ನಿ)

ಯವರ  ಆತ್ಮಕ್ಕೆ ಸದ್ಗತಿಯನ್ನು ಕರುಣಿಸುವಂತೆ 

 ಆ ಭಗವಂತನಲ್ಲಿ ನನ್ನ ಪ್ರಾರ್ಥನೆ.

 


ಕಾಡದಿರಲಿ ಭೂತ ಭವಿಷ್ಯದ ಚಿಂತೆ!

16 ಏಪ್ರಿಲ್ 10

 
ಆ ಸೂರ್ಯ ಮರೆಯಾದ ಪಡುವಣದ ಕಡಲಲ್ಲಿ

 ನಾನಿಲ್ಲಿ ಸೆರೆಯಾದೆ ನಿನ್ನೀ ಬಾಹು ಬಂಧನದಲ್ಲಿ

 

ನಮ್ಮದೇ ಲೋಕದಲ್ಲಿ ಒಂದಾಗಿ ವಿಹರಿಸೋಣ ಬಾ

ದಿನದ ನೋವುಗಳನ್ನೆಲ್ಲಾ ನಾವು ಮರೆಯೋಣ ಬಾ

 

ಕೊಂಡೊಯ್ಯಲಿ ನಮ್ಮನ್ನುಂತ್ತುಂಗಕ್ಕೆ ಸುಖದ ಮತ್ತೇರಿ

ನೋಡುತ್ತಿರು ಬೀಳದಂತೆ ನಿನ್ನ ತೆಕ್ಕೆಯಿಂದ ನಾ ಜಾರಿ

 

ಹುಣ್ಣಿಮೆಯ ಚಂದಿರನು ನಗುವಂತೆ ಆ ಬಾನಂಗಳದಲ್ಲಿ

ತುಂಬಿ ತುಳುಕುತ್ತಿರಲಿ ನಲಿವು ನಮ್ಮೀ ಮನದಂಗಣದಲ್ಲಿ

 

ಮೂಡಣದಿ ನಾಳೆ ಮತ್ತೆ ಮೇಲೇರಿ ಬಂದಾಗ ಆ ನೇಸರ

ಕಾಯಕದ ಮೇಲೆ ನಾ ಹೊರಟರೆ ಪಡಬೇಡ ನೀ ಬೇಸರ

 

ಎಂದಿಗೂ ಸಾಗುತ್ತಿರಲಿ ನಮ್ಮ ಜೀವನ ಚಕ್ರ ಇಂತೆಯೇ

ನಮ್ಮನೆಂದಿಗೂ ಕಾಡದಿರಲಿ  ಭೂತ ಭವಿಷ್ಯದ ಚಿಂತೆಯೇ

*****

 


ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!

15 ಏಪ್ರಿಲ್ 10

ನಮ್ಮ ಕಷ್ಟ ಹೇಳಿಕೊಳ್ಳುವುದಕೆ ಯಾವ ದೇವರಾದರೇನು?
ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?

ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರುಂಟೇನು?
ನಮ್ಮ ಸಂಪಾದನೆಯ ಹಣಕ್ಕೆ ಯಾವುದೇ ಜಾತಿ ಉಂಟೇನು?

ಇಲ್ಲಿ ಹುಟ್ಟಿ ದೇವರು ಎನಿಸಿಕೊಂಡವರ ಪೂಜಿಸುವವರೇ ಎಲ್ಲ
ಆದರೆ ಅವರಾಡಿ ಹೋದ ಮಾತನಿಂದು ನೆನೆಸುವವರೇ ಇಲ್ಲ

ರಾಮ, ಕೃಷ್ಣ, ಅಲ್ಲಾಹ್, ಯೇಸು, ಎಲ್ಲರದೂ ಆಗಿತ್ತು ಒಂದೇ ಉಕ್ತಿ
ಪ್ರೀತಿಯಿಂದ ಬಾಳಿದರೆ ನಿಜದಿ ಅದುವೇ ಆ ದೇವರ ಮೇಲಿನ ಭಕ್ತಿ

ಯಾವ ದೇವರ ಪೂಜಿಸಿದರೂ ಹೇಳಿ ಬಡತನಕೆ ಅದು ಉತ್ತರವೇ?
ಮತ ಭೇದ ಇಲ್ಲದೆಯೇ ಬಡವರ ಉದ್ಧಾರ ನಿಜಕೂ ಅಸಾಧ್ಯವೇ?

ಇವರ ಹೊಟ್ಟೆ ತುಂಬಿಸುವುದಕ್ಕೆ ಬರೀ ಎರಡು ಹೊತ್ತಿನ ಊಟ
ಅಲ್ಲದೆ ವಿದ್ಯಾವಂತರನ್ನಾಗಿಸಲು ಮಕ್ಕಳಿಗೆಲ್ಲಾ ಪುಕ್ಕಟೆ ಪಾಠ

ನೀಡಿ ನೋಡಿ, ನಾಳೇ ನಿಮ್ಮನ್ನೇ ಪೂಜಿಸುವರಿವರು
ನಾಳೆ ನಮ್ಮೂರಲ್ಲಿ ನಿಜವಾಗಿಯೂ ನೀವೇ ದೇವರು!
******

ಅಮಾಯಕರು ಮತಾಂತರದ ಆಮಿಷಗಳಿಗೆ ಏಕೆ ಬಲಿಯಾಗುತ್ತಾರೆ  ಅನ್ನುವ ಬಗ್ಗೆ ಒಂದು ವಿಭಿನ್ನ ದೃಷ್ಟಿಕೋನದಿಂದ ನೋಡಲು ಯತ್ನಿಸಿದಾಗ ಆಸುಮನದಲ್ಲಿ ಮೂಡಿದ ಮಾತುಗಳು.


ಈ ನರ್ಸಮ್ಮನ ಬಗ್ಗೆ ಮೊದ್ಲಿಂದಾನೂ ಅನುಮಾನ ಇತ್ತು ಕಣ್ರೀ!

14 ಏಪ್ರಿಲ್ 10

 

 ಈ ನರ್ಸಮ್ಮನ ಬಗ್ಗೆ ನನಗೆ ಮೊದ್ಲಿಂದಾನೂ ಅನುಮಾನ ಇತ್ತು ಕಣ್ರೀ**

ಮಾನ ಮರ್ಯಾದೆ ಮೂರಾಬಟ್ಟೆ ಮಾಡಿಕೊಂಡೀಗ ರಾಜೀ ಆಗಿದಾಳಲ್ರೀ

 

ದಾವೆಯಲಿ ಅವಗುಣವಾದರೆ ಸಚಿವರಿಗೆ ಸ್ಥಾನ ಕಳೆದುಕೊಳ್ಳುವ ಸಮಸ್ಯೆ

ನರ್ಸಮ್ಮನಿಗೆ ಮಾನ ಹೋದರೆ ಹೋಗಲಿ ಕಾಸಾದರೂ ಸಿಗಲಿ ಎಂಬಾಸೆ

 

ಮಠಾಧೀಶರು ಹೇಳಿದ ಕೂಡ್ಲೇ ಈ ನರ್ಸಮ್ಮನ ಹೋದ ಮಾನ ಬಂತೇ

ಅಲ್ಲಾ ಅಬಕಾರಿ ಸಚಿವರ ಕಡೆಯಿಂದ ಕೊಟ್ಯಾನುಕೋಟಿ ಕೈವಶವಾಯ್ತೇ

 

ಅಂದು ಜನತೆಯ ಮುಂದೆ ಗೋಳಾಡಿ ಈಗ ಗುಟ್ಟಿನಲ್ಲಿ ರಾಜಿ ಆಗಿದ್ದೇಕೆ

ಸಹಾನುಭೂತಿ ತೋರಿದ್ದ ಜನತೆಗೆ ಸಮಜಾಯಿಷಿ ನೀಡುತ್ತಿಲ್ಲವಲ್ಲ ಏಕೆ

 

ನ್ಯಾಯಾಲಯದಲ್ಲಿ ದಾವೆ ಹೂಡಿ ಈಗ ರಾಜಿ ಆಗುವುದೆಂದರೆ ಅದಕ್ಕೇನರ್ಥ

ದಂಡ ವಿಧಿಸಬಾರದೇ ನ್ಯಾಯಾಲಯದ ಸಮಯ ಮಾಡಿರುವುದಕ್ಕೆ ವ್ಯರ್ಥ

 

ದೂರದರ್ಶನದಲ್ಲಿ ಬಂದು ಕೂಗಾಡಿ ಗುಟ್ಟಲ್ಲಿ ರಾಜೀ ಮಾಡಿಕೊಳ್ಳುವ ಈ ಶೈಲಿ

ಹೊಸದೇನೂ ಅಲ್ಲ ಮೊನ್ನೆ ಮೊನ್ನೆ ಆಡಿದ್ದರು ಐಂದ್ರಿತಾ ರೇ ಮತ್ತು ನಾಗತೀಹಳ್ಳಿ!!!

*************

**ನರ್ಸಮ್ಮ ನಿಂದದ್ಯಾಕೋ ಅತಿಯಾಯ್ತು ಅಲ್ವಾ..?

 

 


ಜ್ಞಾನ – ವಿಜ್ಞಾನ!

14 ಏಪ್ರಿಲ್ 10

 

ನನ್ನ ಜ್ಞಾನ

ನಿನಗನಿಸಿರಬಹುದು

ಅಜ್ಞಾನವೆಂದು

ನಿನ್ನ ಜ್ಞಾನ

ನನಗನಿಸಿರಬಹುದು

ಅಜ್ಞಾನವೆಂದು

 

ಅರಿತಿರುವೆಯಾ ನೀ

ಈ ಜ್ಞಾನ ಅಜ್ಞಾನಗಳ

ಪರಿಧಿಯ ದಾಟಿ

ನಾವು ಅರಿವು

ಮೂಡಿಸಿಕೊಂಡರೆ

ಅದುವೆ ನಮಗೆ

ವಿಜ್ಞಾನವೆಂದು?!

 

*****


ಅದ್ಯಾವುದೋ ಜನುಮದ ಬಾಂಧವರು!

13 ಏಪ್ರಿಲ್ 10

ನೆನಸಲು

ನಾವು

ಬಯಸದೇ

ಇದ್ದರೂ

ಎಳ್ಳಷ್ಟೂ

 

ನೆನಪಾಗಿ

ಕಾಡುತಿಹರು

ಹಗಲಿರುಳೂ

ನಮಗವರು

ಬಹಳಷ್ಟು

 

ನಾವು

ಬಯಸದೇ

ಹಗಲಿರುಳೂ

ನಮಗೆ

ನೆನಪಾಗಿ

ಕಾಡುವವರು

 

ನಿಜವಾಗಿಯೂ

ನಮ್ಮ

ಅದ್ಯಾವುದೋ

ಜನುಮದ

ಬಾಂಧವರು

*****