ತನು ಚಂದನವು, ಚಂಚಲ ಮನವು…!

30 ನವೆಂ 10

ಇನ್ನೊಂದು ಬಹುಪ್ರಸಿದ್ಧ ಹಿಂದೀ ಚಲನಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ:

ಚಿತ್ರ: ಸರಸ್ವತೀ ಚಂದ್ರ
ಗಾಯಕರು: ಮುಕೇಶ್

ತನು ಚಂದನವು, ಚಂಚಲ ಮನವು
ಬಲುಮೋಹಕ ನಿನ್ನೀ ಮುಗುಳ್ನಗು
ದೋಷಿ ನಾನೆಂದು ಹಳಿಯದಿರಿ
ನಾನಾದರೆ ಹುಚ್ಚ, ಪ್ರೀತಿಯಲಿ

ನಿನ್ನ ಹುಬ್ಬು ಕಾಮನಬಿಲ್ಲಂತೆ
ರೆಪ್ಪೆಗಳಂಚಿನಲಿ ಕಾಡಿಗೆಯಂತೆ
ಹಣೆಯ ಕುಂಕುಮ ಸವಿತಾರೂಪ
ನಿನ್ನ ತುಟಿಗಳಲಿ ಈ ಬಿಸಿ ತಾಪ
ನಿನ್ನ ನೆರಳು ಸೋಕಿದರೆ ಸಾಕು 
ಬರಡಾಗಿಹ ಹೃದಯ ಅರಳುವುದು

||ತನು ಚಂದನವು ಚಂಚಲ ಮನವು||

ತನು ಸುಂದರ ಮನವೂ ಸುಂದರ
ನೀನೇ ಸೌಂದರ್ಯದ ಮೂರುತಿಯು
ಇನ್ನಾರಿಗೂ ನೀನು ಬೇಡಾದರೂ
ನನಗಿದೆ ನಿನ್ನಯ ಬಲು ಹಂಬಲವು
ಈ ಮೊದಲೇ ಪರಿ ಪರಿ ನೊಂದಿಹುದು
ನೀನೂ ನೋಯಿಸದಿರೀ  ಮನವನ್ನು

||ತನು ಚಂದನವು ಚಂಚಲ ಮನವು||
*****************

 

ಮೂಲ ಹಿಂದೀ ಸಾಹಿತ್ಯ:

Chandan Saa Badan Chanchal Chitawan
dheere Se Teraa Ye Musakaanaa
muze Dosh Naa Denaa Jagawaalon
ho Jaaoo Agar Main Deewaanaa

ye Kaam Kamaan Bhawe Teree
palako Ke Kinaare Kajaraare
maathepar Sindooree Suraj
hothhon Pe Dahakate Angaare
saayaa Bhee Jo Teraa Pad Jaaye
aabaad Ho Dil Kaa Wiraanaa

tan Bhee Sundar, Man Bhee Sundar
too Sundarataa Kee Murat Hai
kisee Aaur Ko Shaayad Kam Hogee
muze Teree Bahot Jarurat Hai
pahale Bhee Bahot Dil Tarasaa Hai
too Aaur Naa Dil Ko Tarasaanaa


ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ…!

25 ನವೆಂ 10

ಹಿಂದೀ ಚಲನಚಿತ್ರ ಗೀತೆಯೊಂದರ ಭಾವಾನುವಾದದ ಪ್ರಯತ್ನ:

ನಾ ನಿನ್ನ ನೋಡುತ್ತಿದ್ದರೆ ನನಗನ್ನಿಸುತಿದೆ ಹೀಗೆ
ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ

ನೀನು ಸಾಗರವಾದರೆ ಬಾಯಾರಿದ ನದಿ ನಾನು
ಸುರಿವ ಸೋನೆಯಾದರೆ ಸುಡುತಿಹ ಹೂವು ನಾನು
ನೀನು ಸಾಗರದಂತೆ..

ನನ್ನ ನಿದ್ದೆ, ನೆಮ್ಮದಿಯ ಮರಳಿಸು ನನಗೆ ನೀನು
ಸುಂದರ ಕನಸುಗಳ ರಾತ್ರಿಯೊಂದ ನೀಡು ನೀನು
ಈ ಮಾತನ್ನು ನಾನು ಹಿಂದೆಯೂ ನುಡಿದಿರುವೆ
ಆ ಮಾತನ್ನೇ ಇಂದು ಮರು ನುಡಿಯುತಿರುವೆ
ನೀನು ಸಾಗರದಂತೆ..

ನಿನ್ನ ಸ್ಪರ್ಷಿಸಿದ ಧೂಳು ಕ್ಷಣದಲ್ಲಿ ಚಂದನವಾಯ್ತು
ಆ ಗಂಧದಿಂದೀ ತನುವೂ ಕಂಪ ಸೂಸುವಂತಾಯ್ತು
ಬರಸೆಳೆದು ನನ್ನನ್ನೊಮ್ಮೆ ಅಪ್ಪಿಕೋ, ಸಖ, ನೀನು
ನಿನ್ನಿಂದ ಬೇರಿನ್ನೇನನ್ನೂ ಬಯಸುತ್ತಲೇ ಇಲ್ಲ ನಾನು

ಎತ್ತಿಕೋ ನನ್ನನ್ನೊಮ್ಮೆ ಕೊಳಲೆಂದು ತಿಳಿದು ನೀನು
ಒಂದೇ ಒಂದು ಬಾರಿ ಆ ತುಟಿಗಳಲ್ಲಿರಿಸಿಕೋ ನೀನು
ನನ್ನ ಎದೆ ಬಡಿತಗಳೂ ಹೊಮ್ಮಿಸಲಿ ಸ್ವರವೊಂದನ್ನು
ನನ್ನ ಸ್ವರಗಳಿಂದಲೇ ಮುನಿದು ದೂರವಾಗಿಹೆ ನಾನು
*********

ಮೂಲ ಗೀತೆ:

ಚಿತ್ರ : ತುಮ್ಹಾರೇ ಲಿಯೇ
ಸಂಗೀತ : ಜಯದೇವ್
ಮೂಲ ಸಾಹಿತ್ಯ :  ನಕ್ಷ್ ಲಾಯಲ್‍ಪುರಿ
ಹಾಡುಗಾರರು : ಲತಾ ಮಂಗೇಶ್ಕರ್

ತುಮ್ಹೇಂ ದೇಖ್ತೀ ಹೂಂ ತೋ ಲಗ್ತಾ ಹೈ ಐಸೇ |
ಕಿ ಜೈಸೇ ಯುಗೋಂ ಸೇ ತುಮ್ಹೇಂ ಜಾನ್ತಿ ಹೂಂ ||

ಅಗರ್ ತುಂ ಹೋ ಸಾಗರ್ ಮೈ ಪ್ಯಾಸೀ ನದೀ ಹೂಂ |
ಅಗರ್ ತುಂ ಹೋ ಸಾವನ್ ಮೈ ಜಲ್ತೀ ಕಲೀ ಹೂಂ |
ಪಿಯಾ ತುಂ ಹೋ ಸಾಗರ್… ||

ಮುಝೇ ಮೇರೀ ನೀನ್ದೇಂ ಮೇರಾ ಚೈನ್ ದೇ ದೋ |
ಮುಝೇ ಮೇರೀ ಸಪ್ನೋಂ ಕೀ ಏಕ ರೈನ್ ದೇ ದೋ ನಾ |
ಯೆಹೀ ಬಾತ್ ಪೆಹಲೇ ಭೀ ತುಂ ಸೇ ಕಹೀ ಥೀ  |
ವೋಹೀ ಬಾತ್ ಫಿರ್ ಆಜ್ ದೊಹ್ರಾ ರಹೀ ಹೂಂ |
ಪಿಯಾ ತುಂ ಹೋ ಸಾಗರ್ ||

ತುಮ್ಹೇಂ ಛೂಕೇ ಪಲ್ ಮೇಂ ಬನೀ ಧೂಲ್ ಚನ್ದನ್ |
ತುಮ್ಹಾರೀ ಮೆಹಕ್ ಸೇ ಮೆಹಕನೇ ಲಗೇ ತನ್ |
ಮೇರೇ ಪಾಸ್ ಆವೋ ಗಲೇ ಸೇ ಲಗಾವೋ |
ಪಿಯಾ ಔರ್ ತುಂ ಸೇ ಮೈ ಕ್ಯಾ ಚಾಹತೀ ಹೂಂ ||

ಮುರಲಿಯಾ ಸಮಝ್ ಕರ್, ಮುಝೇ ತುಂ ಉಠಾ ಲೋ |
ಬಸ್ ಏಕ ಬಾರ್ ಹೋಠೋಂ ಸೇ ಅಪ್ನೇ ಲಗಾ ಲೋ ನಾ |
ಕೋಯೀ ಸುರ್ ತೋ ಜಾಗೇ ಮೇರೀ ಧಡ್ಕನೋಂ ಮೇಂ |
ಕಿ ಮೈ ಅಪ್ನೀ ಸರ್ಗಂ ಸೇ ರುಠೀ ಹುಯೀ ಹೂಂ ||

ತುಮ್ಹೇಂ ದೇಖ್ತೀ ಹೂಂ ತೋ ಲಗ್ತಾ ಹೈ ಐಸೇ |
ಕಿ ಜೈಸೇ ಯುಗೋಂ ಸೇ ತುಮ್ಹೇಂ ಜಾನ್ತಿ ಹೂಂ ||


ಪ್ರಭಾವಿತ ಸಾಹಿತ್ಯ ಕೃಷಿ…!

23 ನವೆಂ 10

ಕತೆ ಕವಿತೆ ಕಾವ್ಯವೆಂಬ ಸಾಹಿತ್ಯ ಕೃಷಿಯೆಂಬುದು
ವಾಹನ ಚಲಾಯಿಸಿದಂಥೆ ಎಂದೆಂಬ ಮಾತುಗಳನ್ನು ಕೇಳಿರುವೆನು ನಾನು

ವಾಹನ ಚಲಾಯಿಸಲು ತರಬೇತಿ ಪಡೆದರಷ್ಟೇ
ಉತ್ತಮ ಚಾಲಕರಾಗಬಲ್ಲರು ಎಂದೆಂಬ ಉದಾಹರಣೆಗೂ ಕಿವಿಯಾದೆ ನಾನು

ಅನ್ಯರು ಬರೆದುದೆಲ್ಲವ ಓದುತ್ತಾ ಇದ್ದು ಸಾಹಿತ್ಯ ಕೃಷಿ
ನಡೆಸಿದರಷ್ಟೇ ಉತ್ತಮ ಚಾಲಕರಂಥೆ ಉತ್ತಮ ಬರಹಗಾರರಾಗಬಲ್ಲರಂತೆ

ರಸ್ತೆ ಬದಿಯಲಿ ನಿಂತು ಓಡುವ ವಾಹನಗಳನ್ನು ನೋಡುತ್ತಾ
ವಾಹನ ಚಲಾಯಿಸಲು ಕಲಿಯಲಾದೀತೇ ಎಂಬುದೇ ನನ್ನನ್ನು ಕಾಡುವ ಚಿಂತೆ

ವಾಹನ ಚಲಾಯಿಸಲು ತರಬೇತಿ ಪಡೆದರೆ ತಪ್ಪಲ್ಲ ಬಿಡಿ
ಆದರೆ ತರಬೇತಿ ಪಡೆಯದವರೂ ಸುಕ್ಷೇಮವಾಗಿ ವಾಹನ ಚಲಾಯಿಸಬಲ್ಲರಲ್ಲಾ?

ಸಾಹಿತ್ಯ ಕೃಷಿಗೂ ತರಬೇತಿ ಪಡೆದರೆ ನಿಜಕ್ಕೂ ಶ್ರೇಷ್ಟ
ಆದರೆ ತರಬೇತಿ ಪಡೆಯದವರ ಸೃಜನಶೀಲ ಬರವಣಿಗೆ ಕೀಳೆಂದೂ ಅಲ್ಲವೇ ಅಲ್ಲ

ಅವರಿವರ ಓದಿ ಪ್ರಭಾವಿತಗೊಂಡು ಬರೆದರಷ್ಟೇ ಸಾಹಿತ್ಯ
ತನ್ನ ಮಟ್ಟವನ್ನು ಏರಿಸಿಕೊಂಡೀತು ಎಂಬ ಮಾತು ನಿಜದಿ ಹಾಸ್ಯಾಸ್ಪದವೇ ಸರಿ

ಅವರಿವರ ಸಾಹಿತ್ಯದ ಪ್ರಭಾವಕ್ಕೆ ಒಡ್ಡದೇ ತಮ್ಮದೇ ಛಾಪು
ಮೂಡಿಸಿ ಹೋದವರೇ ಈ ಕ್ಷೇತ್ರದಲಿ ದಿಗ್ಗಜರೆನಿಸಿಕೊಂಡಿಹರೆಂಬುದೂ ಅಲ್ಲವೇ ಸರಿ?
***********


ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ …!

19 ನವೆಂ 10

ಇದು ’ಕಭೀ ಕಭೀ” ಹಿಂದೀ ಚಲನಚಿತ್ರದ, ಬಹು ಪ್ರಚಲಿತ ಗೀತೆಯ ಭಾವಾನುವಾದದ ಪ್ರಯತ್ನ.

ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ (೨)
ಅದೇನೆಂದರೆ ನಿನ್ನ ಸೃಷ್ಟಿ ಮಾಡಿರುವುದು ಕೇವಲ ನನಗಾಗಿ (೨)
ನೀನು ಅದಾವ ತಾರೆಗಳ ಲೋಕದಲ್ಲಿ ಇದ್ದೆಯೇನೋ ಅಡಗಿ (೨)
ನಿನ್ನನ್ನು ಈ ಭೂಮಿಗೆ ಕರೆ ತಂದಿರುವುದು ಸಖೀ ನನಗಾಗಿ (೨)

ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ
ನಿನ್ನೀ ಮೈಮಾಟ ಮತ್ತೀ ನೋಟ ಇವು ಇರುವುದೇ ನನಗಾಗಿ (೨)
ಈ ಕೇಶರಾಶಿಯ ಕರಿ ನೆರಳೂ ಇರುವುದೇ ನನ್ನ ಸಲುವಾಗಿ
ನಿನ್ನೀ ಅಧರ ಮತ್ತೀ ತೋಳುಗಳ ಸೌಭಾಗ್ಯವೂ  ನನಗಾಗಿ (೨)

ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ
ಈ ಹಾದಿಯಲ್ಲಿ ಶಹನಾಯಿಯ ಧ್ವನಿ ಕೇಳಿಬರುತಿರುವಂತೆ (೨)
ಮೊದಲ ರಾತ್ರಿ ನಿನ್ನ ಮುಖದ ಮುಸುಕ ನಾ ಸರಿಸುತಿರುವಂತೆ (೨)
ನೀ ನಾಚಿ ನನ್ನೀ ತೋಳುಗಳಲ್ಲಿ ಹುದುಗಿ ಹೋಗುತಿರುವಂತೆ (೨)

ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ
ನಿನ್ನ ಜೀವನದುದ್ದಕ್ಕೂ ನನ್ನನ್ನೇ ಬಯಸುತ್ತಾ ಇರುಬಹುದೆಂದು
ಈ ಕಂಗಳು ಸದಾ ಈ ಪ್ರೀತಿಯ ನೋಟ ಬೀರುತಿರಬಹುದೆಂದು
ನೀನು ನನ್ನವಳಲ್ಲ ಎಂದು ನಾನರಿತಿದ್ದರೂ ಸಖೀ, ಹೀಗೇಯೆ (೨)
ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ (೨)

Hindi Lyrics

kabhee kabhee mere dil me khayal aata hai – (2)
kee jaise tujhko banaya gaya hai mere liye – (2)
too abse pehle sitaro me bas rahee thee kahee – (2)
tujhe jamin pe bulaya gaya hai mere liye – (2)

kabhee kabhee mere dil me khayal aata hai
kee yeh badan yeh nigahe meree amanat hain – (2)
yeh gesuo kee ghanee chhaon hain meree khatir
yeh honth aur yeh baahe meree amanat hain – (2)

kabhee kabhee mere dil me khayal aata hai
kee jaise bajatee hain shehnaiya see raaho me – (2)
suhag rat hain ghunghat utha raha hu mai – (2)
simat rahee hai too sharma ke apni baaho me – (2)

kabhee kabhee mere dil me khayal aata hai
kee jaise too mujhe chahegee umrr bhar yu hee
uthegee meree taraf pyar kee najar yu hee
mai janta hu kee too gair hai magar yu hee – (2)
kabhee kabhee mere dil me khayal aata hai – (2)


ನನ್ನಿಂದಾಗೇ ಇಷ್ಟೆಲ್ಲಾ ಆಗಿದ್ದು…!

17 ನವೆಂ 10

ಅಂದೂ ಕೂಡ ಎಂದಿನಂತೆ ಮುಂಜಾನೆ ಐದು ಘಂಟೆಗೆ ನನ್ನ ಚರದೂರವಾಣಿಯಲ್ಲಿ ಎಚ್ಚರಿಕೆಯ ಘಂಟೆ ಹೊಡೆದುಕೊಂಡಾಗಲೇ ನಿದ್ದೆಯಿಂದ ಎದ್ದಿದ್ದೆ.

ಎರಡು ಲೋಟ ನೀರನ್ನು ಬಿಸಿಮಾಡಿ ಕುಡಿದು, ಹಲ್ಲುಜ್ಜಿ, ಮುಖ ತೊಳೆದುಕೊಂಡು, ಎಂದಿನಂತೆ ಮುಂಜಾನೆಯ ನಡಿಗೆಗೆ ಹೊರಡುವಾಗ ಸರಿಯಾಗಿ ಐದೂ ಇಪ್ಪತ್ತೈದು.

ಮಾಮೂಲಿನಂತೆ, ದಾರಿಯಲ್ಲಿ ಸಿಕ್ಕ ಪರಿಚಯಸ್ತರಿಗೆ ಮುಗುಳ್ನಗೆ ನೀಡುತ್ತಾ, ನಮಸ್ಕಾರ ಮಾಡುತ್ತಾ, ನಡಿಗೆ ಮುಗಿಸಿ, ಮನೆಗೆ ಬರುವಾಗ ಆರೂವರೆಗಿನ್ನೂ, ಐದು ನಿಮಿಷ ಬಾಕಿ.

ಆ ನಂತರವೂ ಮಾಮೂಲಿನ ದಿನಚರಿಯೇ. “ಗ್ರೀನ್ ಟೀ” ಸೇವನೆ, ಅಂದು ತೊಡುವ ಬಟ್ಟೆಗಳಿಗೆ ಇಸ್ತ್ರಿ, ಮುಖಕ್ಷೌರ, ಸ್ನಾನ, ದೂರದರ್ಶನದ ಕನ್ನಡ ಸುದ್ದಿವಾಹಿನಿಗಳಲ್ಲಿ ಅಂದಿನ ಪ್ರಮುಖ ಸುದ್ದಿಗಳನ್ನು ಕೇಳುತ್ತಾ, ವಿಜಯಕರ್ನಾಟಕದ ಪ್ರಮುಖ ತಲೆಬರಹಗಳನ್ನು ಓದುತ್ತಾ, ತಿಂಡಿ ಮುಗಿಸಿ ಎದ್ದೆ.

ಬಟ್ಟೆ ಧರಿಸಿ, ಇನ್ನೇನು ನನ್ನ “ಹೆಲ್ಮೆಟ್” ಕೈಗೆತ್ತಿಕೊಳ್ಳಬೇಕು ಅನ್ನುವಾಗ ಯಾರೋ ಬಾಗಿಲಾಚೆಯಿಂದ ಕರೆದಂತಾಯ್ತು.

ಬಾಗಿಲು ತೆರೆದರೆ,  ತನ್ನ ಬೆನ್ನ ಹಿಂದೆ ಚೀಲ ನೇತಾಡಿಸಿಕೊಂಡಿದ್ದ, ಓರ್ವ ಸ್ಪುರದ್ರೂಪಿ ಯುವಕ ನಿಂತಿದ್ದ.

“ಯಾರಪ್ಪಾ ಏನ್ ಬೇಕಾಗಿತ್ತು?” ಅಂದೆ,

ಅದಕ್ಕೆ “ಸಾರ್ ನಾನು ವಿಜಯ್ ಕುಮಾರ್ ಅಂತ. ನಿಮ್ ಜೊತೆ ಸ್ವಲ್ಪ ಮಾತಾಡ್ಬೇಕಿತ್ತು… ನೀವು ಈ ಕಂಪನಿಯಲ್ಲಿ ಕೆಲಸ ಮಾಡೋದಲ್ವಾ?”  ಅಂದವನು, ನಾನು ಕೆಲಸ ಮಾಡುವ ಕಂಪನಿಯ ಹೆಸರನ್ನೂ ಹೇಳಿದ.

“ಹೌದು … ಹೌದು ಏನ್ ಕೆಲ್ಸಾ …? ” ಕೇಳಿದೆ.

“ಸರ್  ಒಳಗೆ ಬರಬಹುದಾ?” ಆತ ಕೇಳಿದ.

“ಹೂಂ ಬನ್ನಿ.. ಬನ್ನಿ… ಕೂತ್ಕೊಳ್ಳಿ ಏನ್ ವಿಷಯ..?” ಅಂದೆ.

“ಸಾರ್… ನಂದೊಂದು ಕೆಲಸ ಇದೆ, ನಿಮ್ಮಿಂದ ಸಹಾಯ ಆಗ್ಬೇಕು. ಆಗೋದಿಲ್ಲ ಅಂತ ಅನ್ಬೇಡಿ…” ಅಂದ.

“ಸರಿ ಹೇಳಿ … ಬೇಗ ಹೇಳಿ… ಆದ್ರೆ ಮಾಡೋಣ…ಏನ್ ಕೆಲ್ಸಾ…?”

“ಈ ಪ್ಯಾಕೆಟ್ಟನ್ನು ನಿಮ್ ಆಫೀಸಿನಲ್ಲಿ ರಾಮ್ ಕುಮಾರ್ ಅಂತ ಇದಾರಲ್ವಾ ಅವರಿಗೆ ತಲುಪಿಸ್ಬೇಕು ಸರ್…”

“ಯಾರು ರಾಮ್ ಕುಮಾರ್ ನಂಗೊತ್ತಿಲ್ಲಲ್ವಾ… ಯಾವ ಟೀಂ ನವರು…?”

“ನಿಮಗೆ ಗೊತ್ತಿರೋಕೆ ಸಾಧ್ಯ ಇಲ್ಲಾ ಸಾರ್…ಅವರು ಹೊಸದಾಗಿ ಸೇರಿಕೊಂಡಿರೋರು … ನಾನ್  ಅವರಿಗೆ ಫೋನ್ ಮಾಡ್ತೀನಿ … ಅವರೇ ಬಂದು ತಗೋತಾರೆ ಸಾರ್…” ಅಂದ.

ನಾನು ಜಾಸ್ತಿ ಯೋಚನೆ ಮಾಡಲಿಕ್ಕೇ ಹೋಗದೇ  “…ಸರಿ ಸರಿ.. ಅವ್ರಿಗೆ ಹೇಳಿಬಿಡು ನನ್ನ ಬಳಿಯಿಂದ ತೆಗೆದುಕೊಂಡು ಹೋಗೊದಕ್ಕೆ .” ಅಂತ ಹೇಳಿದವನೇ, ಆ ಪ್ಯಾಕೆಟ್ಟನ್ನು ತೆಗೆದುಕೊಂಡು, ನನ್ನ ಮೋಟಾರ್ ಸೈಕಲ್ ಏರಿ ಹೊರಟುಬಿಟ್ಟೆ.

ಆತ ತನ್ನ ಮೋಟಾರ್ ಸೈಕಲ್ಲಿನತ್ತ ಹೋಗ್ತಾ ಇದ್ದ.

ನಾನು ಎಂದಿನಂತೆ ಕಛೇರಿಯ ಒಳಗೆ ಹೋದವನೇ, ನನ್ನ ಡೆಸ್ಕಿನ ಮೇಲೆ ಆ ಪ್ಯಾಕೆಟ್ಟನ್ನು ಇಟ್ಟು, ನನ್ನ ಲ್ಯಾಪ್‍ಟಾಪ್ ಹೊರತೆಗೆದು ಆನ್ ಮಾಡಿದೆ.

ಅಷ್ಟರಲ್ಲಿ ನನ್ನ ಚರವಾಣಿ ಗಂಟೆ ಬಡಿದುಕೊಳ್ಳತೊಡಗಿತು.

ನೋಡಿದ್ರೆ ನನ್ನ ಹೆಂಡತಿಯ ಕರೆ. “ಏನು?” ಅಂದೆ.

“ಅವರು ಮತ್ತೆ ಬಂದಿದ್ದಾರೆ… ನಿಮ್ಮ ಹತ್ತಿರ ಮಾತಾಡ್ಬೇಕಂತೆ…”

“ಮತ್ತೆ ..? ಮತ್ತೆ ಯಾಕೆ ಮನೆಗೆ ಬಂದ ಆತ …? ಸರಿ… ಕೊಡು ಆತನಿಗೆ…..ಹಲೋ…ಹಲೋ…”

“ಸರ್… ನಾನ್ ವಿಜಯ್ ಕುಮಾರ್ ಸರ್…”

“ಹೂಂ.. ಗೊತ್ತಾಯ್ತು … ಏನ್ ಕೆಲ್ಸ ರಾಮ್ ಕುಮಾರಿಗೆ ಹೇಳಿದ್ರಾ…?” ಅಂದೆ

“ಸರ್… ಆತ ಇಂದು ಕಛೇರಿಗೆ ಬರ್ತಾ ಇಲ್ವಂತೆ… ಒಂದು ಕೆಲ್ಸ ಮಾಡಿ ಸರ್… ನಿಮ್ಮ ಡೆಸ್ಕ್ ಮೇಲೇ ಇಟ್ಟು ಕೊಳ್ಳಿ … ನಾಳೆ ತೆಗೆದುಕೊಳ್ತಾರೆ ಅವರು… ” ಅಂದ

“ಇದು ಸ್ವಲ್ಪ ಜಾಸ್ತಿ ಆಯು ಕಣ್ರೀ… ಏನೋ ಉಪಕಾರ ಮಾಡೋಣ ಅಂತ ನೋಡಿದ್ರೆ…ಇದೊಳ್ಳೇ ತಲೆನೋವು ನನಗೆ…”

“ತಲೆನೋವು ಮಾಡ್ಕೋಬೇಡಿ ಸಾರ್… ನಾನ್ ನಿಮ್ಮ ಮನೆ ಒಳಗೆ ಇದ್ದೇನೆ… ಮನೆಯ ಬಾಗಿಲು ಮುಚ್ಚಿದೆ…ನಿಮ್ ಹೆಂಡತಿ ನನ್ನ ಎದುರು ಸೋಫಾ ಮೇಲೆ ಕೂತಿದ್ದಾರೆ … ನನ್ ಕೈಯಲ್ಲಿ ಗನ್ ಇದೆ…ನಾನ್ ಹೇಳಿದಷ್ಟು ಮಾಡಿ… ನಿಮ್ ಡೆಸ್ಕಿನ ಮೇಲೆ ಇಟ್ಟು … ಜೀವದ ಆಸೆ ಇದ್ರೆ … ಹಾಗೇ ಅರ್ಧ ಘಂಟೆಯಲ್ಲಿ…ಮನೆಗೆ ವಾಪಸ್ ಬಂದು ಬಿಡಿ… ಸರಿಯಾಗಿ ಇನ್ನು ನಲವತ್ತೈದು ನಿಮಿಷಕ್ಕೆ ಅದರಲ್ಲಿರೋ ಬಾಂಬ್  ಬ್ಲಾಸ್ಟ್ ಆಗುತ್ತೆ… ರಿಮೋಟ್ ಕಂಟ್ರೋಲರಿನಿಂದ ಸಿಡಿಸುತ್ತಾರಂತೆ… ನೀವು ವಾಪಸ್ ಬರದಿದ್ರೆ ನೀವೂ ಹೋಗ್ತೀರಿ… ನಂಬಿಕೆ ಬರದಿದ್ರೆ ನಿಮ್ ಹೆಂಡ್ತೀನಾ ಕೇಳಿ… ಮೇಡಮ್ ತಗೋಳ್ಳಿ …ನಿಮ್ ಯಜಮಾನ್ರಿಗೆ ಸ್ವಲ್ಪ ಹೇಳಿ…”

ನನ್ನ ದೇಹವೆಲ್ಲಾ ಕಂಪಿಸುವುದಕ್ಕೆ ಶುರು ಆಯ್ತು

“ಹಲೋ…ಹಲೋ… ಏನೇ ಇದು ..”

“ರೀ… ಹೌದು … ನೀವು ಬೇಗ ವಾಪಾಸ್ ಬಂದ್ ಬಿಡಿ… ಬನ್ನಿ… ನನಗೆ ಭಯ ಆಗ್ತಾ ಇದೆ…ಜಾಸ್ತಿ ಮಾತಾಡಬೇಡಿ… ಆತ ಏನ್ ಬೇಕಾದ್ರೂ ಮಾಡಬಹುದು… ” ಆಕೆ ಅಳುವುದಕ್ಕೆ ಶುರುಮಾಡಿ ಆಗಿತ್ತು.

“ಸರಿ ಬರ್ತೀನಿ ಕಣೇ…ಬರ್ತೀನಿ…”

ಅಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಲು ಆಗಲಿಲ್ಲ. ಹತ್ತೇ ನಿಮಿಷದಲ್ಲಿ ಸೀದಾ ಮನೆ ಕಡೆ ಹೊರಟೆ. ಮನೆಯನ್ನು ತಲುಪುವಾಗ ಆತ ಹೇಳಿದ ಅವಧಿ ಪೂರ್ತಿ ಆಗುತ್ತಾ ಬಂದಿತ್ತು.

ಮನೆಯ ಬಾಗಿಲು ಮುಚ್ಚಿತ್ತು. ಕರೆಗಂಟೆ ಬಾರಿಸಿದೆ. ಆತನೇ ಬಾಗಿಲು ತೆರೆದ.

“ಸಾರ್… ನನ ಕೆಲ್ಸ ಮುಗೀತು… ಸಾರಿ ಸಾರ್…ನನ್ನ ಅಮ್ಮ ನಿನ್ನೆಯಿಂದ ಇನ್ಯಾರದೋ ಬಂಧಿಯಾಗಿ ನಮ್ಮ ಮನೆಯಲ್ಲಿ ಕೂತಿದ್ದಾರೆ ಸಾರ್… ನನಗೆ ಕೊಟ್ಟಿರುವ ಕೆಲಸ ಮಾಡದೇ ಹೋದರೆ ನನ್ನ ಅಮ್ಮನ ಪ್ರಾಣ ತೆಗೀತಾರೆ…. ನನ್ನ ಕೆಲಸ ಮುಗೀತು… ಈ ಪ್ಯಾಕೆಟಿನಲ್ಲಿ ನಿಮ್ಮ ಪಾಲಿನ ಹಣ ಇದೆ… ಇದನ್ನು ನಿಮಗೆ ಕೊಟ್ಟು ಬರಲು ಹೇಳಿದಾರೆ. ನಾನಿನ್ನು ಬರ್ತೀನಿ … ನಾನು ನನ್ನ ಅಮ್ಮನನ್ನು ಬಿಡಿಸಿಕೊಳ್ಳಬೇಕು …”  ಅಂದವನೇ ಆತನ ಬೈಕ್ ಏರಿ ಹೊರಟೇ ಬಿಟ್ಟಿದ್ದ.

ನನ್ನ ಪತ್ನಿ ಬಿಟ್ಟ ಕಣ್ಣು ಬಿಟ್ಟುಕೊಂಡೇ ಕೂತಿದ್ದಾಳೆ … ಕಣ್ಣೀರು ಧಾರಾಕಾರವಾಗಿ ಹರಿಯುತ್ತಿದೆ….

ನನಗೇನು ಮಾಡಬೇಕೆಂದೇ ತೋಚುತ್ತಿಲ್ಲ…

ಸಮಯ ಮೀರಿ ಹೋಗಿದೆ. ಆ ಬಾಂಬ್ ಈಗಾಗಲೇ ಸಿಡಿದು … ನಮ್ಮ ಕಛೇರಿಯ ಕಟ್ಟಡ ಕುಸಿದು ಹೋಗಿರಬಹುದು…

ಟಿವಿ ಹಾಕಿ ಟಿವಿ೯ನಲ್ಲಿ ಏನು ಬರ್ತಾ ಇದೆ ಅಂತ ನೋಡಿದ್ರೆ…

ಕೆಂಪು ಅಕ್ಷರಗಳಲ್ಲಿ ಬ್ರೇಕಿಂಗ್…ನ್ಯೂಸ್… ಬರ್ತಾ ಇದೆ.

ನಗರದ ಪ್ರತಿಷ್ಟಿತ ಐಟಿ ಕಂಪನಿಯೊಂದರಲ್ಲಿ ಬಾಂಬ್ ಸ್ಫೋಟ….ಬಹುಮಹಡಿ ಕಟ್ಟಡ ಕುಸಿತ … ೫೦ ಕ್ಕೂ ಹೆಚ್ಚು ಸಾವು…

ನಾನು ಸೋಫಾದ ಮೇಲೆ ಕುಕ್ಕರಿಸಿದವನೇ ತಲೆ ಮೇಲೆ ಕೈಹೊತ್ತು…ನನ್ನ ಅಸಹಾಯಕತೆಗಾಗಿ ಮರುಗಿದೆ….

“ನನ್ನಿಂದಾಗೇ ಇಷ್ಟೆಲ್ಲಾ ಆಗಿದ್ದು.. ಎಷ್ಟು ಮಂದಿ ಹೋದ್ರು ಕಣೇ… ಏನೇ ಮಾಡ್ಲೀ ನಾನು…ಅಯ್ಯೋ ದೇವ್ರೆ…”

“ರೀ…ರೀ… ನಿಮ್ ಮೊಬೈಲ್  ಅಲಾರ್ಮ್ ಹೊಡ್ಕೋತಾ ಇದೆ… ಏಳೋಲ್ವಾ… ಇವತ್ತು ವಾಕಿಂಗ್… ಹೋಗೋಲ್ವಾ…?”
*****************


ನಮಗಿಷ್ಟು ಶಕ್ತಿಯ ನೀಡು ಓ ಧಾತಾ…!

10 ನವೆಂ 10

ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ…
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ…

ಅಪರಾಧಗಳಿಂದ ಆವರಿಸಿಕೊಂಡು ಅಸಹಾಯಕನಾಗಿರುವ ಮನುಜನಿಗೆ ಉಸಿಗಟ್ಟಿಸುವಂತಿದೆ
ಹೆಚ್ಚುತಲೇ ಇರುವ ಪಾಪದ ಭಾರವನ್ನು ಹೊತ್ತ ಈ ಭೂಮಿ ಅದು ಹೇಗೋ ಇನ್ನೂ ಉಳಿದಿದೆ
ಆ ಎಲ್ಲಾ ಭಾರವನ್ನೂ ನೀನೇ ಹೊತ್ತು, ನಿನ್ನ ಸೃಷ್ಟಿಯನ್ನು ಈಗ ನೀನೇ ಕಾಪಾಡಿಕೊಳ್ಳಬೇಕಿದೆ
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ…

ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ…

ಅಂಧಕಾರದಲ್ಲಿರುವ ನಮಗೆ ಬೆಳಕ ನೀಡು ದೇವಾ, ವೈರತ್ವದಲಿ ನಮ್ಮನ್ನೇ ಕಳೆದುಕೊಳ್ಳದಂತೆ
ನಮ್ಮ ಅಪರಾಧಗಳಿಗೆ ಶಿಕ್ಷೆ ಅನುಭವಿಸಲೂ ಸಿದ್ಧ, ಸಾವೇ ನಿರ್ಧರಿತವಾದರೂ ಸಂತೋಷವಂತೆ
ಕಳೆದ ನಿನ್ನೆಗಳು ಮತ್ತೆ ಮರುಕಳಿಸದಿರಲಿ, ಬರುವ ಎಲ್ಲಾ ನಾಳೆಗಳು ನಿನ್ನೆಗಳಂತಿಲ್ಲದಿರಲಂತೆ
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ…

ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ…

ಜ್ಞಾನದ ಬೆಳಕನ್ನು ನೀಡು ನೀನು ನಮಗೆ, ಅಜ್ಞಾನದ ಕತ್ತಲ ದೂರ ಸರಿಸುವಂತೆ
ನಮಗೆ ಒಂದೊಳ್ಳೆಯ ಜೀವನವ ನೀಡು, ಕೆಟ್ಟದ್ದಲ್ಲೆದ್ದರಿಂದ ಬಚಾವಾಗಿ ಇರುವಂತೆ
ಮನಗಳಲ್ಲಿ ಹಗೆಯ ಭಾವ ಮೂಡದಂತೆ, ಯಾರಿಗಾರ ಮೇಲೂ ವೈರತ್ವವಿರದಂತೆ,
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ, ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ…

ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ…

ನಮಗೇನು ದೊರೆತಿದೆ ಎಂದು ಯೋಚಿಸದೇ, ನಾವೇನನ್ನು ಅರ್ಪಿಸಿದ್ದೇವೆ ಎಂದು ಯೋಚಿಸುವಂತೆ
ಎಲ್ಲರಿಗೂ ಸಂತಸದ ಸುಮಗಳನು ಹಂಚುತ್ತಾ, ಎಲ್ಲರ ಜೀವನವನ್ನೂ ಮಧುವನವನ್ನಾಗಿಸುವಂತೆ
ನಿನ್ನ ಕರುಣಾರಸವನ್ನು ನೀ ಹರಿಯಬಿಡು, ಪ್ರತೀ ಮನದ ಮೂಲೆ ಮೂಲೆಯೂ ಪಾವನವಾಗುವಂತೆ
ನಾವು ಸದಾ ಸನ್ಮಾರ್ಗದಲ್ಲೇ ಸಾಗುವಂತೆ,  ತಪ್ಪಿಯೂ ನಮ್ಮಿಂದಾವಾ ತಪ್ಪೂ ಆಗದಂತೆ…

ನಮಗಿಷ್ಟು ಶಕ್ತಿಯ ನೀಡು ಓ ಧಾತಾ, ಈ ಮನದ ವಿಶ್ವಾಸ ಕ್ಷೀಣಿಸದೇ ಇರುವಂತೆ…

*****


ಸದ್ದು ಗದ್ದಲ ಬೇಡ ಬರೀ ದೀಪಗಳ ಬೆಳಕಿರಲಿ!

04 ನವೆಂ 10

 

ಸದ್ದು ಗದ್ದಲ ಬೇಡ ಬರೀ ದೀಪಗಳ ಬೆಳಕಿರಲಿ
ಮಾತು ಮಾತಿನಲೂ ಪ್ರೀತಿಯಾ ಸೆಲೆಯಿರಲಿ
 
ಪಟಾಕಿ ಸುಡುಮದ್ದುಗಳಿಗೆ ಬೇಡ ಬೇಡಾ ಅನ್ನಿ
ವಾಯು-ಶಬ್ದ ಮಾಲಿನ್ಯಕ್ಕೆಮ್ಮ ಅಸಹಕಾರ ಅನ್ನಿ
 
ಅಲ್ಲಿ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರ ಗೋಳು
ಇಲ್ಲಿ ಸದ್ದುಗದ್ದಲದಿಂದೀ ಕಿವಿಗಳಾಗುತ್ತವೆ ಹಾಳು
 
ಇದರಲ್ಲಿ ಗುಣಾತ್ಮಕ ವಿಷಯಗಳೇ ಇಲ್ಲವಿದು ಸತ್ಯ
ಅವುಗಳಿಂದ ಆಗುವ ನಷ್ಟಗಳ ಮಾತು ಅಲ್ಲ ಮಿಥ್ಯ
 
ನಮ್ಮ ಮನೆಯಲ್ಲಿ ದೀಪಾವಳಿಗೆ ಬರೀ ದೀಪಗಳೇ
ಪಟಾಕಿ ಬೇಡ ಅನ್ನಲು ಬೆಂಬಲಿಸುವಳೆಮ್ಮ ಮಗಳೇ
 
ಒಂದು ದೀಪದಿಂದ ಇನ್ನೊಂದು ದೀಪವನು ಹಚ್ಚಿದರೆ
ನೋಡಿ ಬೆಳಕಿನಿಂದ ಹೇಗೆ ಝಗಮಗಿಸುವುದು ಈ ಧರೆ
 
ಒಂದು ಹೃದಯದಿಂದ ಇನ್ನೊಂದು ಹೃದಯಕ್ಕೆ ಪ್ರೀತಿ
ಹರಿಯುತ್ತಿದ್ದರೆ ಜಗದಲ್ಲೆಲ್ಲೂ ಸ್ಥಾಪನೆಯಾದೀತು ಶಾಂತಿ!
****


Please say a BIG NO to crackers!

04 ನವೆಂ 10

 

 

Let there be no smokes and no sounds,
Let there only be lots of love in words,

Friends, please say a BIG NO to crackers,
No contribution to air and noise pollutions,

Child labourers suffer in the cracker factories,
Alwasy in danger here, are, our eyes and ears,

There is not many positive aspects in this,
On the ill effects, I’m sure, none disagrees,

I celebrate this festival only with the lights,
My family extends all support to my thoughts,

If we light a lamp with the help of another lamp,
This whole world could easily be lightened up,

When love flows from one heart to another,
Peace would prevail and faces glow brighter!

********


ಹೆಬ್ರಿ ಸಮೀಪದ ಕಾಡಿನಲ್ಲಿ ನಕ್ಸಲ್ ಹೆಣ್ಣಿನ ಆತ್ಮಹತ್ಯೆ!

03 ನವೆಂ 10

ಹೆಬ್ರಿಯಿಂದ  ಕಬ್ಬಿನಾಲೆಗೆ ಹೋಗುವ ದಾರಿಯಲ್ಲಿ, ರಸ್ತೆಯಿಂದ ಅನತಿ ದೂರದಲ್ಲಿ, ಕಾಡಿನ ಮಧ್ಯೆ  ಇದ್ದ,  ಆ ದೊಡ್ಡ ಮರದ  ಗೆಲ್ಲಿನಿಂದ  ನೇತಾಡುತ್ತಿದ್ದ ಹೆಣ್ಣಿನ ಶವವನ್ನು ಕೆಳಗಿಳಿಸಿ ಪಂಚನಾಮೆ ನಡೆಸಲಾಯಿತು. ಶವವಾಗಿ ಮಲಗಿದ್ದ ಆ ಹೆಣ್ಣಿನ ಪರಿಚಯ ಅಲ್ಲಿ ಎಲ್ಲರಿಗೂ ಇದ್ದಂತಿತ್ತು. ಆಕೆ ಕಬ್ಬಿನಾಲೆಯ ಬಡ ರೈತ ವಾಸು ನಾಯ್ಕ ಮತ್ತು ಗಿರಿಜ ದಂಪತಿಗಳ ಹಿರಿಯ ಮಗಳಾದ ಜಯಂತಿ ಎಂದೂ, ಅಲ್ಲದೇ, ಹೆಬ್ರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಆಕೆ, ಈಗ್ಗೆ ಏಳೆಂಟು ತಿಂಗಳಿಂದ ಕಾಣೆಯಾಗಿದ್ದಳೆಂದೂ, ಅಲ್ಲಿ ನೆರೆದಿದ್ದ ಜನರು ಗುಸು ಗುಸು ಮಾತಾಡಿಕೊಳ್ಳುತ್ತಿದ್ದರು. ಮರಣೋತ್ತರ ಪರೀಕ್ಷೆಗೆ  ಶವವನ್ನು ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಗೆ ಸಾಗಿಸಲಾಯಿತು. ಆ ಶವವನ್ನು  ಕೆಳಗಿಳಿಸುವಾಗ, ಶವದ ಕೈಯಲ್ಲಿ ಭದ್ರವಾಗಿದ್ದ ಆ ಮರಣ ಪತ್ರ  ಪೋಲೀಸ್ ಅಧಿಕಾರಿಗೆ ದೊರೆತಿತ್ತು. ಹೆಬ್ರಿ ಠಾಣೆಗೆ ಮರಳಿದ  ಪೋಲೀಸ್  ಅಧಿಕಾರಿ ಆ ಪತ್ರವನ್ನು ಬಿಡಿಸಿದಾಗ ಕಂಡಿದ್ದು,   ಮುದ್ದಾದ ಅಕ್ಷರಗಳಿಂದ ಬರೆದಿರುವ, ಬರೋಬರಿ ಎರಡೂವರೆ ಪುಟಗಳ, ಸುದೀರ್ಘ ಪತ್ರ.

“ನಾನು ಬಹಳಷ್ಟು ಆಲೋಚಿಸದ ನಂತರವೇ ಈ ನಿರ್ಧಾರಕ್ಕೆ ಬಂದಿರುತ್ತೇನೆ. ನನಗೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟರೆ ಬೇರಾವ ಉಪಾಯಗಳೇ ಹೊಳೆಯುತ್ತಿಲ್ಲ. ಅಲ್ಲದೇ  ಬೇರೆ ಉಪಾಯ ಇದೆಯೆಂದೂ ನನಗೆ ಈಗ ಅನಿಸುತ್ತಿಲ್ಲ ಕಣೋ. ನಿನಗೇನು ಗೊತ್ತು, ನಿನಗೆ ಹೇಗೆ ಗೊತ್ತಾಗಬೇಕು ಮಹರಾಯ. ನನ್ನ ಕಷ್ಟ  ನನಗೊಬ್ಬಳಿಗೆ ಗೊತ್ತು. ಯಾರಲ್ಲಿ ಹೇಳಿಕೊಳ್ಳಲಿ ನಾನು? ಈಗ ಹಿಂದಿನ ಎಲ್ಲಾ ಘಟನೆಗಳೂ ನೆನಪಾಗುತ್ತಿದೆ ನನಗೆ.

ಹೆಬ್ರಿ ಪದವಿ ಪೂರ್ವ ಕಾಲೇಜಿಗೆ ಸೇರಿದ ಮೊದಲ ದಿನವೇ, ಚಿಗುರು ಮೀಸೆಯ ಹಿಂದಿನ ನಿನ್ನ ಆ ಮೋಹಕ ನಗೆ, ನನ್ನ ಮೇಲೆ ಅದ್ಯಾವ ಮೋಡಿ ಮಾಡಿತ್ತೋ ಆ ದೇವರೇ ಬಲ್ಲ. ದಿನ ಕಳೆದಂತೆ ನಾನು ನಿನ್ನನ್ನು ಆರಾಧಿಸಲೇ ಶುರು ಮಾಡಿಬಿಟ್ಟಿದ್ದೆ. ಒಂದು ದಿನವೂ ನಿನ್ನನ್ನು ನೋಡದೇ ಇದ್ದಿರಲು ಆಗುತ್ತಿರಲಿಲ್ಲ. ನಾನು ಕಬ್ಬಿನಾಲೆಯಿಂದ ಹೆಬ್ರಿಗೆ ಬರುತ್ತಿದ್ದ ಬಸ್ಸಿಗೇ ನೀನೂ ಅರ್ಧದಾರಿಯಲ್ಲಿ  ಹತ್ತುತ್ತಿದ್ದೆ. ನೀನು ಆ ಬಸ್ಸಿಗೆ ಬರುವ ತನಕ ನಾನು ಅದೆಷ್ಟು ಕಾತರತೆಯಿಂದ ಕಾಯುತ್ತಿದ್ದೆ ಗೊತ್ತಾ. ನೀನು ಬಂದ ಮೇಲೆ ನಾವು ನಮ್ಮ ಕಣ್ಣುಗಳಿಂದಲೇ ನಡೆಸುತ್ತಿದ್ದ ಸಂಭಾಷಣೆ ಬೇರಾರ ಅರಿವಿಗೂ ಬರುತ್ತಿರಲಿಲ್ಲವೆಂದೇ, ನಾವಿಬ್ಬರೂ ತಿಳಿದಿದ್ದೆವು. ಒಂದೊಂದು ದಿನ ಮನೆಯಿಂದ ಹೊರಡುವಾಗ ತಡವಾಗಿ, ಆ ಬಸ್ ಏನಾದರೂ ತಪ್ಪಿಹೋದರೆ, ನನಗಾಗುತ್ತಿದ್ದ ತಳಮಳ ಅಷ್ಟಿಷ್ಟಲ್ಲ.

ಆ ಎರಡು ವರುಷ ನಿನ್ನ ಸಾಮಿಪ್ಯದಲ್ಲಿ ನನಗಾದ ಆ ರೋಮಾಂಚನಕಾರಿ ಅನುಭವಗಳು ಬಣ್ಣನೆಗೇ ನಿಲುಕದ್ದು. ಅವುಗಳನ್ನು ಅನುಭವಿಸಿದವರಿಗಷ್ಟೇ ಅದರ ಅರಿವಾದೀತು. ಪ್ರೀತಿಸುವವರನ್ನು ಈ ಸಮಾಜ ಎಷ್ಟೇ ಕೀಳು ದೃಷ್ಟಿಯಿಂದ ನೋಡಿದರೂ, ಹೀಗಳೆದರೂ, ಪ್ರೀತಿಯ ಅನುಭವ ಆದವರಿಗಷ್ಟೇ ಗೊತ್ತು ಕಣೋ, ಪ್ರೀತಿ ಅಂದರೆ ಏನು ಅನ್ನೋದು. ಜೀವನದಲ್ಲಿ ನಿಸ್ವಾರ್ಥ ನಿಷ್ಕಲ್ಮಶ ಪ್ರೀತಿಯನ್ನು ಅನುಭವಿಸದವನ ಬಾಳು ನಿಜಕ್ಕೂ ವ್ಯರ್ಥವೇ ಸರಿ. ನಾವಿಬ್ಬರು ಹಂಚಿಕೊಳ್ಳದ ವಿಷಯಗಳೇ ಇದ್ದಿರಲಿಲ್ಲ. ಏನೇ ವಿಷಯ ಇದ್ದರೂ ಮೊಟ್ಟ ಮೊದಲು ಅದನ್ನು ನಿನಗೆ ತಿಳಿಸಬೇಕು. ನಿನಗೂ ಅಷ್ಟೇ, ನಿಮ್ಮ ಮನೆಯಲ್ಲಿನ ಮತ್ತು ನಿನ್ನ ಗೆಳೆಯರ ನಡುವಣ ಅದೆಷ್ಟೋ ವಿಷಯಗಳನ್ನು ನಿಸಂಕೋಚವಾಗಿ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ. ಮನೆಯಲ್ಲಿ ಏನಾದರೂ ವಿಶೇಷ ತಿಂಡಿ ಮಾಡಿದ್ದರೆ, ಕಟ್ಟಿಕೊಂಡು ಬಂದು ಒಬ್ಬರಿಗೊಬ್ಬರು ನೀಡುತ್ತಿದ್ದೆವು. ಹಂಚಿಕೊಂಡು ತಿನ್ನದಿದ್ದರೆ, ಇಬ್ಬರಿಗೂ ಸಮಾಧಾನವೇ ಇರುತ್ತಿರಲಿಲ್ಲ. ದಿನದ ಇಪ್ಪತ್ತನಾಲ್ಕು ಘಂಟೆಯೂ, ನೀನು ನನ್ನ ಜೊತೆಗಿದ್ದಾಗಲೂ ಅಥವಾ ಇಲ್ಲದೇ ಇದ್ದಾಗಲೂ, ನಿನ್ನೊಂದಿಗಿನ ನನ್ನ ಸಂವಾದ ನಿರಂತರವಾಗಿ ಸಾಗುತ್ತಲೇ ಇರುತ್ತಿತ್ತು. ಹಗಲಲ್ಲೂ ಕನಸು ಕಾಣುತ್ತಿರುವಂತೆ, ಕನಸಿನಲ್ಲೂ ನನಸಿನಲ್ಲಿ ನಡೆಯುತ್ತಿರುವಂತೆ, ನಿರಾತಂಕವಾಗಿ ಸಾಗುತ್ತಿತ್ತು.

ಕಾಲೇಜಿನ ವಾರ್ಷಿಕ ಸಮಾರಂಭದಲ್ಲಿ ಏರ್ಪಡಿಸಿದ್ದ ನಾಟಕ ಪ್ರದರ್ಶನದಲ್ಲೂ ನಾವಿಬ್ಬರೂ ಜೊತೆ ಜೊತೆಯಾಗಿ ಅಭಿನಯಿಸುವ ಅವಕಾಶ ದೊರೆತದ್ದು ನಮ್ಮಿಬ್ಬರ ಸೌಭಾಗ್ಯವೇ ಆಗಿತ್ತು. ಅಬ್ಬಾ  ನಾಟಕದ ಆ ಸಂಭಾಷಣೆಗಳನ್ನು ಅಷ್ಟೊಂದು ಜನರ ಮುಂದೆ ವೇದಿಕೆಯಲ್ಲಿ ನುಡಿಯುತ್ತಿರುವಾಗ ನಾನು ನನ್ನ ಹೃದಯವನ್ನೇ ಬಿಚ್ಚಿಟ್ಟ ಅನುಭವವಾಗಿತ್ತು. ಆ ಊರಿನ ಜನತೆಯ ಮುಂದೆ ನಮ್ಮ ಪ್ರೀತಿಯನ್ನು ಬಹಿರಂಗ ಪಡಿಸಿ ಬಿಡುತ್ತಿದ್ದೇವೇನೋ ಎನ್ನುವ ಅನುಮಾನ ಬಂದಿತ್ತು ನನಗೆ. ಆ ಸಂಭಾಷಣೆಗಳು ಹಾಗಿದ್ದವು. ಆದರೆ, ಅದರ ಒಳಗುಟ್ಟು ನಮ್ಮಿಬ್ಬರಿಗಷ್ಟೇ ಗೊತ್ತಿತ್ತು. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಆ ಪಾತ್ರಗಳಿಗೆ ಜೀವ ತುಂಬಿದ್ದ ನಾವು, ಒಳ್ಳೆಯ ನಟನೆಗಾಗಿ ಬಹುಮಾನಗಳನ್ನೂ ಪಡೆದಿದ್ದೆವು. ನೆನಪಿದೆಯಾ? ದ್ವಿತೀಯ ವರುಷದ ಪರೀಕ್ಷೆ ಮುಗಿದ ನಂತರ ರಜೆ ಶುರು ಆಯ್ತು ಅನ್ನುವಾಗ, ನಾವಿಬ್ಬರೂ ಜೊತೆಯಾಗಿ ಕಳೆದ ಆ ಎರಡು ಘಂಟೆಗಳ ನೆನಪು ಹೇಗೆ ಮಾಸಿಹೋದೀತು ಹೇಳು. ಅಂದೇ ಅಲ್ಲವೇನೋ ನಾವು, ನಮ್ಮ ಭವಿಷ್ಯದ ಬಗ್ಗೆ, ನೌಕರಿ, ಮದುವೆ, ಮನೆ, ಮಕ್ಕಳು ಇವೆಲ್ಲದರ ಬಗ್ಗೆ ನಿಖರವಾಗಿ ಯೋಜನೆ ರೂಪಿಸಿಕೊಂಡು ಮಾತನಾಡಿದ್ದು? ಆದರೆ ಯಾವುದಕ್ಕೂ ತರಾತುರಿ ಬೇಡ ಅಂದಿದ್ದೆ ನೀನು. ಕಾಲೇಜು ವಿದ್ಯಾಭ್ಯಾಸ ಮುಗಿಸಿ, ನೌಕರಿ ಪಡೆದು ನಮ್ಮ ಕಾಲಿನ ಮೇಲೆ ನಾವು ನಿಂತ ಮೇಲೆಯೇ ಮುಂದಿನ ಯೋಜನೆ ಕಣೇ ಅಂದಿದ್ದೆ. ಅದಕ್ಕೆ ನಾನೂ ಒಪ್ಪಿದ್ದೆ. ನಿನ್ನ ಮಾತುಗಳೆಂದರೆ ನನಗೆ ವೇದ ವಾಕ್ಯಗಳಂತೆ. ನೀನು ಏನೇ ನುಡಿದರೂ, ಯೋಚಿಸಿಯೇ ನುಡಿದಿರುತ್ತೀ ಎನ್ನುವ ನಂಬಿಕೆ ನನ್ನದಾಗಿತ್ತು.

ಆದರೆ ಆ ರಜೆಯಲ್ಲಿ ನೀನು ಹಠಾತ್ ಕಾಣೆಯಾಗಿ ಬಿಟ್ಟಿದ್ದೆ ಅಂತ ಸುದ್ದಿ ಹರಡಿತ್ತು ಊರಲ್ಲೆಲ್ಲಾ. ರಜೆ ಮುಗಿದು ಫಲಿತಾಂಶ ಬಂದರೂ ನಿನ್ನ ಸುಳಿವಿರಲಿಲ್ಲ. ನಾನು ಬಿ.ಎ.ಗೆ ಹೆಬ್ರಿ ಪದವಿ ಕಾಲೇಜಿನಲ್ಲಿ ಸೇರಿಕೊಂಡ ಮೇಲೂ ನಿನ್ನ ಪತ್ತೆಯೇ  ಇರಲಿಲ್ಲ. ನನಗೆ ಹುಚ್ಚು ಹಿಡಿಯುವುದೊಂದು ಬಾಕಿ ಇತ್ತು. ಯಾರನ್ನು ಕೇಳಿದರೆ ನಿನ್ನ ಸುದ್ದಿ ಸಿಗಬಹುದು ಎನ್ನುವುದೇ ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ ಕಾಲೇಜಿಗೆ ಹೋಗದೇ ಇರುವುದು ನನ್ನಿಂದ ಸಾಧ್ಯ ಇರಲಿಲ್ಲ. ಹೋಗಲೇ ಬೇಕಾಗಿತ್ತು. ಕಾಲೇಜು ಆರಂಭವಾಗಿ ಎರಡು ವಾರಗಳು ಕಳೆದಿರಬಹುದೇನೋ. ಒಂದು ದಿನ ನಾನು ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದೆ. ಅದೆಲ್ಲಿಂದಲೋ ಓರ್ವ ಹುಡುಗ ಅಲ್ಲಿ ಪ್ರತ್ಯಕ್ಷನಾಗಿದ್ದ. ಬಂದವನೇ ನನ್ನ ಕೈಗೆ ನಿನ್ನ ಪತ್ರವನ್ನು ತಲುಪಿಸಿ, ನನ್ನ ಬೆನ್ನ ಹಿಂದಿನ ಆ ದಟ್ಟ ಕಾಡಿನ ಮರಗಳ ನಡುವೆ ಮರೆಯಾಗಿದ್ದ. ಪತ್ರವನ್ನು ಓದಿದವಳಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ನನ್ನ ಕನಸಿನ ಗೋಪುರಗಳೆಲ್ಲಾ ಒಮ್ಮೆಗೇ ಚೂರು ಚೂರಾಗಿ  ನೆಲಸಮವಾಗಿತ್ತು. ಕಾಲೇಜಿಗೆ ಹೋಗಲಾರದೇ, ಮನೆಗೆ ಹಿಂದಿರುಗಿದ್ದೆ. ಹೊಟ್ಟೆ ನೋವು ಎಂದು ಅಮ್ಮನಿಗೆ ಸುಳ್ಳು ಹೇಳಿ, ನನ್ನ ಕೋಣೆಗೆ ಹೋದವಳು, ದಿಂಬಿನಲ್ಲಿ ನನ್ನ ಮುಖವನ್ನು  ಹುದುಗಿಸಿಕೊಂಡು ಗಂಟೆಗಟ್ಟಳೆ ಅಳುತ್ತಾ ಬಿದ್ದಿದ್ದೆ.

ವಿದ್ಯಾವಂತರಾಗಿ, ಒಂದೊಳ್ಳೆಯ ಕೆಲಸ ಹುಡುಕಿಕೊಂಡು, ಮದುವೆಯಾಗಿ ಸಂಸಾರ ಮಾಡುವ ಅನ್ನುವ ಯೋಜನೆ ಹಾಕಿದ್ದ ನೀನು, ನನ್ನನ್ನು ಕನಸಿನ ಲೋಕಕ್ಕೆ ಕರೆದೊಯ್ದಿದ್ದು ನೆನಪೇ ಹೋಯ್ತೇನೋ ನಿನಗೆ? ಅದು ಹೇಗೆ ನೀನು ಆ ನಕ್ಸಲರ ಹೇಳಿಕೆಗಳನ್ನು ನಂಬಿಕೆಂಡು ಅವರ ಹಿಂಬಾಲಕನಾಗಿ ಹೊರಟು ಬಿಟ್ಟೆ? ನನ್ನ ನೆನಪೇ ಬಂದಿರಲಿಲ್ಲವೇ ನಿನಗೆ?  ಅವರೆಲ್ಲಾ ಯಾವ ರೀತಿ ಮಂಕು ಬೂದಿ ಎರಚಿಬಿಟ್ಟರು ನಿನ್ನ ಬುದ್ಧಿಗೆ? ನೀನು ಸೇರಿದ್ದೂ ಅಲ್ಲದೇ ನನಗೂ ಆಹ್ವಾನ  ನೀಡಿಬಿಟ್ಟಿದ್ದೀಯಲ್ಲಾ?

ಏನು ಮಾಡಲಿ ಹೇಳು. ನಿನ್ನ ಪ್ರೀತಿಯಲ್ಲಿ ಸಂಪೂರ್ಣವಾಗಿ ಹುಚ್ಚಿಯಾಗಿದ್ದ ನನಗೆ, ನಿನ್ನ ಮಾತಿನಂತೆ, ಮನೆ ಬಿಟ್ಟು ನಿನ್ನನ್ನು ಸೇರಿಕೊಳ್ಳುವುದು ಕಷ್ಟವೇ ಆಗಿರಲಿಲ್ಲ. ನಕ್ಸಲರ ಧ್ಯೇಯೋದ್ದೇಶಗಳನ್ನು ನಾನು ಮತ್ತು ನಮ್ಮ ಮನೆಯವರು ಯಾರೂ ಒಪ್ಪುವುದಿಲ್ಲ. ಆದರೂ ನನಗೆ ನೀನು ಮುಖ್ಯ. ನನಗೆ ನಿನ್ನ ಮಾತುಗಳೇ ವೇದವಾಕ್ಯ. ಹಾಗಾಗಿ ನೀನು ಸೂಚಿಸಿದ್ದ ನಿರ್ದಿಷ್ಟ ಸ್ಥಳಕ್ಕೆ  ಖಾಲಿ ಕೈಯಲ್ಲಿ ಬರುವಂತೆ ನೀನು ತಿಳಿಸಿದಂತೆ ಬಂದು ನಿಂತಿದ್ದೆ. ಬಟ್ಟೆಬರೆ ತಂದರೆ ಅನುಮಾನ ಬಂದೀತು ಎನ್ನುವ ಮುನ್ನೆಚ್ಚರಿಕೆ ನಿನ್ನದು. ಅಲ್ಲಿಂದ ಯೋಜನೆಯಂತೆಯೇ ನೀನು ನನ್ನನ್ನು ಕಾಡಿನೊಳಕ್ಕೆ ಕರೆದೊಯ್ದಿದ್ದೆ. ಸಂಜೆಯೊಳಗೆ ನನಗೆ ಬೇಕಾದ ಉಡುಗೆ ತೊಡುಗೆಗಳ ವ್ಯವಸ್ಥೆ ಮಾಡಿಬಿಟ್ಟಿದ್ದೆಯಲ್ಲಾ…

ಆ ಹದಿನೈದು ಹುಡುಗರ ಗುಂಪಿನಲ್ಲಿ ನಾನೋಬ್ಬಳೇ ಹೆಣ್ಣು. ಆ ಒಂದು ತಿಂಗಳಲ್ಲಿ, ಎಷ್ಟು ಕಷ್ಟ ಪಟ್ಟಿದ್ದೆ ನಾನು. ಕೋವಿ ಹಿಡಿಯಲು, ಗುರಿ ಇಡಲು, ಗುಂಡು ಹಾರಿಸಲು, ಚೂರಿ ಬಳಸಲು, ಮರ ಹತ್ತಲು, ಬಚ್ಚಿಟ್ಟುಕೊಳ್ಳಲು, ಓಡಲು, ಹೀಗೆ ಒಂದಲ್ಲ ಎರಡಲ್ಲ, ನಾನು ನಿನ್ನಿಂದ ಕಲಿತಿದ್ದ ವಿದ್ಯೆಗಳು. ತಿಂಗಳು ಎರಡಾಗುವಷ್ಟರಲ್ಲಿ ನಾನು ನಿಮ್ಮೆಲ್ಲರಿಗೆ  ಸರಿಸಾಟಿಯಾಗಿ ನಿಂತುಬಿಟ್ಟಿದ್ದೆ. ಗುಂಪಿನ ಎಲ್ಲಾ ಸದಸ್ಯರಿಗೂ ಖುಷಿಯಾಗಿತ್ತು. ಮುಂದಿನ ಆರೇಳು ತಿಂಗಳು ನಾವು ನಡೆಸಿದ ಕಾರ್ಯಾಚರಣೆಗಳು ನನ್ನ ಮನಸ್ಸಿಗೆ  ಹಿಡಿಸುತ್ತಿರಲಿಲ್ಲವಾದರೂ, ನಿನ್ನ ಸಾಂಗತ್ಯದಲ್ಲಿ ನನಗೆಲ್ಲವೂ ಕೌತುಕಮಯವಾಗಿದ್ದವು. ನಿನಗಾಗಿ ನಾನೆಲ್ಲಾ ನೋವನ್ನೂ ಸಹಿಸಿಕೊಂಡು ನಗು ನಗುತ್ತಾ ಇದ್ದೆ. ಅಂದು ಆ ಭುಜಂಗ ಶೆಟ್ರ ಮನೆಯವರನ್ನು ಹೆದರಿಸಿ ದೋಚಿಕೊಂಡು ಬಂದಿದ್ದ ಚಿನ್ನಾಭರಣಗಳನ್ನು ಆಂಧ್ರಕ್ಕೆ ಕೊಂಡುಹೋಗಿ ಮಾರಿಬರುವ ಮುನ್ನ, ನನಗೆ ತೊಡಿಸಿ, ಫೋಟೋ ತೆಗೆದು ಆನಂದಿಸಿದ್ದಿ ನೀನು. ಹುಡುಗರೆಲ್ಲಾ ನಮ್ಮಿಬ್ಬರನ್ನು ಏಕಾಂತದಲ್ಲಿ ಬಿಟ್ಟು ಹೋದಾಗ, ನನ್ನನ್ನು ನೀನು ರಮಿಸುತ್ತಿದ್ದಾಗ ನಾನು ಅನುಭವಿಸಿದ ಆ ಆನಂದ ಹೇಗಿತ್ತೆಂದು ಬಣ್ಣಿಸಲಿ. ಆದರೆ, ಎಂದೂ ಎಲ್ಲೆ ಮೀರಿದವನಲ್ಲ ನೀನು. ನಾವು ಮುಂದೆ ಮದುವೆಯಾಗುವವರು. ಹಾಗಾಗಿ ನಮ್ಮ ಮದುವೆಯಾಗುವ ತನಕ ದೈಹಿಕ ಸಂಬಂಧ ಬೆಳೆಸಬಾರದು ಎನ್ನುವ ಕಟ್ಟುಪಾಡು ನೀನೇ ಹಾಕಿಕೊಂಡಿದ್ದೆ. ನಿಜವಾಗಿಯೂ ಆ ಕಾರಣದಿಂದ ನಾನು ನಿನ್ನನ್ನು ಇನ್ನೂ ಹೆಚ್ಚು  ಮೆಚ್ಚಿದ್ದೆ ಕಣೋ…

ಅಲ್ಲಿ ನಮ್ಮ ಗುಂಪಿನ ನಾಯಕನಾಗಿದ್ದ ಮುದ್ರಾಡಿಯ ರಾಜೀವ ನಾಯ್ಕ ಪೋಲೀಸರ ಗುಂಡಿಗೆ ಬಲಿಯಾದ ನಂತರ ನೀನೇ ನಮ್ಮ ಗುಂಪಿಗೆ ನಾಯಕನಾಗಿದ್ದೆ. ಹಾಗಾಗಿ ನನ್ನ ಮಾತಿಗೂ ಗುಂಪಿನಲ್ಲಿ ಬೆಲೆ ಇರುತ್ತಿತ್ತು. ನಿನ್ನ ನಾಯಕತ್ವದಲ್ಲಿ ನಾವು ನಡೆಸಿದ ಆ ನಾಲ್ಕಾರು ಮಹಾನ್ ಕಾರ್ಯಾಚರಣೆ ಇಡೀ ನಾಡಿನಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿಬಿಟ್ಟಿತ್ತು. ಕಮ್ಮರಡಿ ಬಳಿ ಸರಕಾರಿ ಬಸ್ಸು ಸುಟ್ಟು ಹಾಕಿದ ಪ್ರಸಂಗ ಮತ್ತು ಮೇಗರವಳ್ಳಿಯ ಬಳಿ ಪೋಲೀಸ್ ವಾಹನವನ್ನು ಅಡ್ಡಕಟ್ಟಿ, ನಾಲ್ಕು ಮಂದಿ ಪೋಲೀಸರನ್ನು ಅಧಿಕಾರಿಯ ಸಮೇತ ಹತ್ಯೆಗೈದು, ಅವರ  ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಘಟನೆ ನಮ್ಮ ರಾಜ್ಯದ ಗೃಹ ಸಚಿವರ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿತ್ತು. ವಿಧಾನಸಭೆಯಲ್ಲೂ ನಿನ್ನ ಹೆಸರಿನ ಉಲ್ಲೇಖವಾಗಿತ್ತು.

ಪೋಲೀಸ್ ಇಲಾಖೆಯ ಮೊದಲ ವೈರಿಯಾಗಿಬಿಟ್ಟಿದ್ದೆ ನೀನು. ಪೋಲೀಸರು ಎಷ್ಟೇ ಪ್ರಯತ್ನಮಾಡಿದರೂ, ನಿನ್ನ ಚಾಣಾಕ್ಷ್ಯತನಕ್ಕೆ ಸಾಟಿಯಾಗಲು ಕಷ್ಟಕರವಾಗಿತ್ತು. ಇನ್ನೇನು  ಸಿಕ್ಕಿಬಿದ್ದೆವು ಅನ್ನುವಾಗ ಅದ್ಯಾವ ಮಾಯದಿಂದ ನೀನು ನಮ್ಮನ್ನೆಲ್ಲಾ ಪಾರುಮಾಡಿಬಿಡುತ್ತಿದ್ದೆ ಹೇಳು. ಅಬ್ಬಾ.. ಒಮ್ಮೊಮ್ಮೆ  ನನಗೆ ನಿನ್ನ ಮೇಲೆ ಅನುಮಾನ ಮೂಡುತ್ತಿತ್ತು. ಇವನು ನನ್ನನ್ನು ಪ್ರೀತಿಸುವ ಅವನೇನಾ ಅಂತ. ವೀರ ಸೈನಿಕರ ಆ ಚಾಕಚಕ್ಯತೆಯನ್ನೆಲ್ಲಾ ನೀನು ಎಲ್ಲಿ ಕಲಿತಿದ್ದೆ ಹೇಳು. ನೀನೇನಾದರೂ ಸೈನ್ಯಕ್ಕೆ ಸೇರಿದ್ದರೆ, ಬಹುಶಃ ವೀರಚಕ್ರವನ್ನೋ, ಶೌರ್ಯಚಕ್ರವನ್ನೋ ಗಿಟ್ಟಿಸಿಕೊಳ್ಳುತ್ತಿದ್ದೆ. ಆಗ ಅನಿಸುತ್ತಿತ್ತು ನನಗೆ, ಈ ದೇಶದ ಯುವಜನಾಂಗದ ಶಕ್ತಿಯೆಲ್ಲಾ ಹೇಗೆ ವ್ಯರ್ಥವಾಗಿ ಹೋಗುತ್ತಿದೆ ಎಂದು.

ಅದೊಂದು ದಿನ ಕೆಟ್ಟ ಗಳಿಗೆಯಲ್ಲಿ ನಮ್ಮ ಗುಂಪಿನ ರಮೇಶ, ದಕ್ಷಿಣ ಕನ್ನಡದ ಗಡಿಯ (ಎಸ್ ಕೆ ಬಾರ್ಡರ್) ಸಮೀಪ ನಡೆದ ಪೋಲೀಸರ ಅನಿರೀಕ್ಷಿತ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದ. ಆತ್ಮಹತ್ಯೆ ಮಾಡಿಕೊಳ್ಳಲೂ ಸಮಯಾವಕಾಶ ಸಿಗಲಿಲ್ಲ ಆತನಿಗೆ. ಆ ಘಟನೆ ನಮ್ಮ ಗುಂಪಿನಲ್ಲಿ ಭಯಹುಟ್ಟಿಸಿತ್ತು. ನೀನು ಹತ್ತು ಹಲವು ಬಾರಿ ಆ ಬಗ್ಗೆ ನನ್ನಲ್ಲಿ ನುಡಿದಿದ್ದೆ. ರಮೇಶ ಬಾಯಿ ಬಿಟ್ಟರೆ ನಾವೆಲ್ಲಾ ಬಲಿಯಾಗ್ತೇವೆ ಕಣೇ ಅಂತ. ಆದರೂ ಎರಡು ಮೂರು ತಿಂಗಳು ನಾವು ಸದ್ದಿಲ್ಲದೇ ತಣ್ಣಗೇ ಇದ್ದು ಬಿಟ್ಟಿದ್ದರಿಂದ ಬಚಾವಾಗಿದ್ದೆವು.

ಆದರೆ, ಕೈ ಖಾಲಿಯಾಗಿದೆಯೆಂಬ ಅರಿವು ನಿನಗಾದಾಗ, ಹಣದ ತುರ್ತು ಆವಶ್ಯಕತೆ ಉಂಟಾದಾಗ, ಕನ್ನ ಹಾಕಲೇ ಬೇಕಿತ್ತು ನಾವು. ಅಂದು ರಾತ್ರಿ ನಾವು ತಿಂಗಳೆಯ ಸಮೀಪದ  ನಾರಾಯಣ ಹೆಗ್ಡೇರ ಮನೆಗೆ ಹೋಗುವುದೆಂದು ನಿರ್ಧರಿಸಿದುದರ ಸುಳಿವು ಹೇಗೆ ಪೋಲೀಸರಿಗೆ ತಿಳಿದು ಹೋಯ್ತೋ ದೇವರೇ ಬಲ್ಲ. ಬಹುಶಃ ನಮ್ಮ ಗುಂಪಿನಲ್ಲೇ ಯಾರೋ ಪೋಲೀಸರ ದೂತರು ಇದ್ದಿರಬೇಕು. ಕತ್ತಲಲ್ಲಿ ಹೆಗ್ಡೇರ ಮನೆಯ ಸುತ್ತಾ ನಮಗಾಗಿ ಇಡೀ ದಂಡನ್ನೇ ಬಿಟ್ಟಿದ್ದರು. ನಾವು ಮನೆಯೊಳಗೆ ಹೋಗಿ ಮನೆಯಲ್ಲಿದ್ದವರನ್ನೆಲ್ಲಾ ಒಂದು ಕಡೆ ಕೂಡಿಹಾಕಿ, ಇನ್ನೇನು ಹಣಾಭರಣಗಳನ್ನು ದೋಚಿಕೊಳ್ಳಬೇಕು, ಅನ್ನುವಾಗ ಹೊರಗಿನಿಂದ, ಧ್ವನಿವರ್ಧಕದಲ್ಲಿ ಪೋಲೀಸ್ ಅಧಿಕಾರಿಯ ಸ್ವರ ಕೇಳಿಸಿತ್ತು. ಮನೆಯಿಂದ ಹೊರಬರುವಷ್ಟರಲ್ಲಿ, ಗುಂಡಿನ ದಾಳಿ ಶುರು ಆಗಿತ್ತು. ನಮ್ಮನ್ನೆಲ್ಲಾ ಹಿಂದಿನ ಕತ್ತಲಿನ ಹಾದಿಯಲ್ಲಿ ಓಡಿಹೋಗಲು ತಿಳಿಸಿದ, ನೀನು ಪ್ರತಿದಾಳಿಗೆ ನಿಂತಿದ್ದೆ. ಅದೇ ಕೊನೆ. ಮತ್ತೆ ನಿನ್ನ ಮುಖ ದರ್ಶನವೇ ಆಗಿಲ್ಲ. ನಮ್ಮನ್ನೆಲ್ಲ ಬದುಕುಳಿಸಿದ ನೀನು ಪೋಲೀಸರ ಗುಂಡಿಗೆ ಬಲಿಯಾಗಿ ಬಿಟ್ಟಿದ್ದೆ. ಮರುದಿನ ಎಲ್ಲ ಪತ್ರಿಕೆಗಳಲ್ಲೂ ನೀನು ಕೊಲೆಯಾದ ಸುದ್ದಿಯೇ ಪ್ರಮುಖವಾಗಿತ್ತು. ನನಗೆ ಅಳಬೇಕೋ ಬೇಡವೋ ಅನ್ನುವುದೇ ಗೊತ್ತಾಗಿರಲಿಲ್ಲ. ಏಕೆಂದರೆ, ಮುಂದೊಂದು ದಿನ ನಮ್ಮ ಗತಿ ಅದೇ ಎನ್ನುವ ಕಠು ಸತ್ಯದ ಅರಿವು ನಮಗೆ ಮೊದಲಿನಿಂದಲೂ ಇತ್ತು ತಾನೇ…

ಅಲ್ಲಿಂದ ರಾತ್ರಿಯಿಡೀ ಪಯಣಿಸಿದ್ದ ನಾವು ಅತೀ ದೂರದ ದಟ್ಟಾರಣ್ಯದಲ್ಲಿ ಅಡಗಿ ಕೂತಿದ್ದೆವು. ನಾನೊಬ್ಬಳೇ ಪೇಟೆಗೆ ಹೋಗಿ ತಿಂಡಿ ತಿನಿಸುಗಳನ್ನು ಕಟ್ಟಿಸಿಕೊಂಡು ಬರುತ್ತಿದ್ದೆ. ಹೆಣ್ಣಿನ ಮೇಲೆ ಯಾರಿಗೂ ಅನುಮಾನ ಬಾರದು ಎನ್ನುವ ನಂಬಿಕೆ ನಮ್ಮದಾಗಿತ್ತು. ದಿನಗಳು ಕಳೆದಂತೆ ನಮ್ಮ ಗುಂಪಿನಲ್ಲಿ ಒಡಕು ಮೂಡತೊಡಗಿತು. ಸಶಕ್ತ ನಾಯಕತ್ವದ ಕೊರತೆ ಎದ್ದುಕಾಣುತ್ತಿತ್ತು. ನೀನಿಲ್ಲದ ನಾನು ಈ  ಗುಂಪಿನಲ್ಲಿ ಜೀವನ ಸಾಗಿಸುವುದಾದರೂ ಹೇಗೆ? ಒಂಟಿ ಹೆಣ್ಣಾಗಿದ್ದ ನನ್ನನ್ನು ಗುಂಪಿನ ಹುಡುಗರು ಕೆಟ್ಟ ದೃಷ್ಟಿಯಿಂದ ನೋಡಲು ಶುರು ಮಾಡಿದರು. ದಿನಗಳು ಕಳೆದಂತೆ ಆ ಹುಡುಗರು ನನ್ನ ಮಾನಹರಣ ಮಾಡುವುದಂತೂ ಖಂಡಿತ ಎನ್ನುವ ಅರಿವು ನನಗಾಗಿತ್ತು. ಅಲ್ಲದೆ, ಇಲ್ಲಿ ಇದ್ದು ನಾನು ಸಾಧಿಸಲೇನೂ ಇಲ್ಲ. ನನಗೆ ಈ ನಕ್ಸಲರ ಉದ್ದೇಶವೇ ಇನ್ನೂ ಮನದಟ್ಟಾಗಿಲ್ಲ. ಹಿಂಸೆಯಿಂದಲೇ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕೆಂಬ ಮಾರ್ಗ ನನಗೇಕೋ ಹಿಡಿಸಲೇ ಇಲ್ಲ. ನಾನು ಇಲ್ಲಿ ಇದ್ದಿದ್ದು ಬರೀ ನಿನಗಾಗಿ ಅಷ್ಟೇ. ನನಗೆ ಇನ್ಯಾವುದರಲ್ಲೂ ಆಸಕ್ತಿಯೇ ಇದ್ದಿರಲಿಲ್ಲ.

ನನಗೆ ಅಲ್ಲಿ ನೆಮ್ಮದಿ ಇರಲಿಲ್ಲ ಕಣೋ. ಹಾಗಾಗಿ, ಆ ಗುಂಪಿನಿಂದ ಓಡಿ ಹೋಗಬೇಕೆಂಬ ಯೋಚನೆ ಬರತೊಡಗಿತು. ಆದರೆ ಎಲ್ಲಿಗೆ ಹೋಗಲಿ?  ಪೋಲೀಸರಿಗೆ ಶರಣಾದರೆ ಅಥವಾ ಮನೆಗೆ ಹಿಂದಿರುಗಿದರೆ, ನನಗಂತೂ ಜೀವಾವಧಿ ಶಿಕ್ಷೆಯೋ, ಮರಣದಂಡನೆಯೋ ಕಟ್ಟಿಟ್ಟ ಬುತ್ತಿ ಎನ್ನುವುದು ಗೊತ್ತಿತ್ತು. ಅಥವಾ, ಪೋಲೀಸರೇ  ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಂದು ಬಿಸಾಕಿ, “ಎನ್ ಕೌಂಟರ್” ಕೊಲೆ ಎಂದು ಸುದ್ದಿ ಹರಡಿಸಬಹುದು. ಇಲ್ಲೇ ಇದ್ದರೂ ನನಗೆ ಉಳಿಗಾಲವಿರಲಿಲ್ಲ. ಅತ್ತ ಕಣಿವೆ ಇತ್ತ ಹುಲಿ ಎಂಬಂಥ ಪರಿಸ್ಥಿತಿ ನನ್ನದಾಗಿತ್ತು.

ಹಾಗಾಗಿ ಬೇರೆ ದಾರಿ ಕಾಣದೇ, ನಾನು ಸಾಯಲು ನಿರ್ಧಾರ ಮಾಡಿಬಿಟ್ಟೆ. ಹಾಗೆ ಮಾಡಿಯಾದರೂ ನೀನು ಸೇರಿದ ಲೋಕವನ್ನು ಸೇರಿಕೊಳ್ಳಬಹುದು ಎನ್ನುವ ಯೋಚನೆ ನನ್ನದಾಗಿದೆ. ಆದರೆ, ಸಾಯೋದಾದರೂ, ಅದೇಕೋ ನಮ್ಮೂರಿನ ಬಳಿಯೇ ಸಾಯಬೇಕು ಎಂಬ ಇಚ್ಛೆ ಕಣೋ ನನಗೆ.  ನನ್ನ ಹೆಣವಾದರೂ ನಮ್ಮ ಮನೆಯವರ ಕೈಸೇರಲಿ ಎಂಬ ಆಸೆ ಇದ್ದಿರಬೇಕು ಒಳಮನದಲ್ಲಿ. ಹಾಗಾಗಿ ನಮ್ಮ ಗುಂಪಿನವರಿಗೆ ಏನೇನೊ ಕಾರಣ ನೀಡಿ, ಒತ್ತಾಯ ಮಾಡಿ ಇತ್ತ ಕರೆದುಕೊಂಡು ಬಂದಿದ್ದೇನೆ.

ಈಗ ಎಲ್ಲರೂ ಗಾಢವಾದ ನಿದ್ರೆಯಲ್ಲಿದ್ದಾರೆ. ಒಬ್ಬ ಮಾತ್ರ ಕಾವಲಿಗಾಗಿ ಅತ್ತಿಂದಿತ್ತ ಸುತ್ತುತ್ತಿದ್ದಾನೆ. ನಾನು ಈ ಪತ್ರ ಬರೆಯುವುದನ್ನು ನೋಡಿದ ಆತ  “ಹೇ ಏನದು? ಯಾರಿಗೆ ಕಾಗದ ಬರೀತಿದ್ದೀ?” ಅಂದ. “ಕಾಗದ ಅಲ್ಲ ಮಾರಾಯ, ಅವನ ನೆನಪಿನಲ್ಲಿ ಕವಿತೆ ಬರೀತಿದ್ದೇನೆ” ಅಂದಿದ್ದೆ.  “ನಿನಗೆ ತುಂಬಾ ಬೇಜಾರು ಅಲ್ವಾ… ಬರಿ ಬರಿ, ಬರೆದಾದ ಮೇಲೆ ನಂಗೂ ತೋರಿಸು ಆಯ್ತಾ?”  ಅಂದಿದ್ದಕ್ಕೆ ಸರಿ ಅಂದಿದ್ದೆ. ಕಾಗ್ದ ಬರೆದು ಮುಗಿಸಿ ನಾನು ಮೂತ್ರವಿಸರ್ಜನೆಯ ನೆಪಹೇಳಿ, ಸ್ವಲ್ಪ ಕಾಡಿನೊಳಕ್ಕೆ ಹೋಗ್ತೇನೆ. ಅಲ್ಲಿ ಇರುವ ಆ ದೊಡ್ಡ ಮರದ ಗೆಲ್ಲಿಗೆ ನೇಣು ಬಿಗಿದು ನಿನ್ನನ್ನು ಸೇರಿಕೊಳ್ಳಲು ಬಂದು ಬಿಡ್ತೇನೆ. ಆ ಮರವೇ ಏಕೆ ಅನ್ನೋದು ನಿನಗೂ ಗೊತ್ತು. ಆ ಮರದ ಕೆಳಗೆ ಕೂತೇ ಅಲ್ಲವೇ ನಾವು ನಮ್ಮ ಸುಖಕ್ಷಣಗಳನ್ನು ಕಳೆಯುತ್ತಿದ್ದುದು? ಈಗ ಇನ್ನೇನು ಮಾಡಲೂ ನನಗೆ ತೋಚುತ್ತಿಲ್ಲ. ಇದೊಂದೇ ದಾರಿ ಉಳಿದಿರೋದು ನನ್ನ ಪಾಲಿಗೆ. ಇನ್ನೆರಡು ದಿನಗಳಲ್ಲಿ, ನಾವು ಚಿಕ್ಕಂದಿನಿಂದ ಓದುತ್ತಿದ್ದ ನಮ್ಮ ನೆಚ್ಚಿನ ಉದಯವಾಣಿಯಲ್ಲಿ, “ಹೆಬ್ರಿ ಸಮೀಪದ ಕಾಡಿನಲ್ಲಿ ನಕ್ಸಲ್ ಹೆಣ್ಣಿನ  ಆತ್ಮಹತ್ಯೆ!” ಎಂಬ ತಲೆಬರಹದೊಂದಿಗೆ ನನ್ನ ಆತ್ಮಹತ್ಯೆಯ ಸುದ್ದಿಯೂ ಪ್ರಕಟವಾಗುತ್ತದೆ.

ಬರ್ತಾ ಇದ್ದೇನೆ ಕಣೋ ನಾನು… ಸ್ವಾಗತಿಸಲು ತಯಾರಾಗಿರು ಆಯ್ತಾ… ಇಂತೀ ನಿನ್ನವಳಾಗದೇ ಉಳಿದು, ಈಗ ನಿನ್ನವಳಾಗಲು ಹೊರಟವಳು… ಜಯಂತಿ”

***************************************************************

(ಇದೊಂದು ಕಾಲ್ಪನಿಕ ಕತೆ, ಅಷ್ಟೇ!)


ನುಡಿಸಿರಿಯಲ್ಲಿ ಭಾಗಿಯಾಗದ ಕನ್ನಡಿಗ ದುರ್ದೈವಿ!

02 ನವೆಂ 10

ಆಳು ಕಾಳುಗಳಿದ್ದೂ, ಇನ್ನಾವ ಆಳುವವರೂ, ಮಾಡಿರದ ಮಹತ್ಕಾರ್ಯ
ಡಾ. ಮೋಹನ ಆಳ್ವರು ಮಾಡಿ ತೋರಿಸುತ್ತಿದ್ದಾರಲ್ಲಿ ಕನ್ನಡದ ಕೈಂಕರ್ಯ

ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡದ ಸಿರಿಯೆಮ್ಮ ಮೈಮನ ತುಂಬುವುದು
ರೋಮಾಂಚನಗೊಳಿಸುವ ಹೊಸ ಹೊಸ ಅನುಭವ ನಮಗಾಗುವುದು

ಮೂಡಬಿದರೆಯ ವಿದ್ಯಾಗಿರಿಗೆ ಕಾಲಿಟ್ಟ ಕ್ಷಣದಿಂದ ಭಾವನಾ ಲೋಕದಲ್ಲಿ
ತಂತಾನೇ ಸಾಗಿ ಭಾವ ಬಂಧನದಲ್ಲಿ ಬಂಧಿಯಾಗುವರು ಎಲ್ಲರೂ ಅಲ್ಲಿ

ಮೂರು ದಿನಗಳಲ್ಲಿ ಹತ್ತಿಪ್ಪತ್ತು ಗ್ರಂಥಗಳ ಓದಿದಂತಹ ಅನುಭವ ನಮಗೆ
ಯಾವುದೋ ಸೆಳೆತಕ್ಕೊಳಗಾಗಿ ಎತ್ತಲೋ ಸಾಗುತ್ತಿರುವನುಭವ ನಮಗೆ

ಕರಾವಳಿಯ ಕಲೆಗಳಾದ ಯಕ್ಷಗಾನ, ಭೂತಾರಾಧನೆ, ಡೋಲು ವಾದನ
ಇವೆಲ್ಲದರ ನಡುವಿನ ಸಾಹಿತ್ಯ ಲೋಕದಲ್ಲಿ ಅರಳುವುದು ಅಲ್ಲಿ ಎಲ್ಲರ ಮನ

ಯಾವುದೂ ಅತಿಯಲ್ಲ ಯಾವುದಕ್ಕೂ ಮಿತಿಯಿಲ್ಲ ಅನ್ನುವ ವಿಶಿಷ್ಟ ಶೈಲಿಯಲಿ
ಸಂಯೋಜನೆಗೊಂಡ ಈ ಹಬ್ಬ ಬೇರೆ ಎಲ್ಲೂ ನಡೆದಿರಲಾರದು ಈ ನಾಡಿನಲಿ

ಅಚ್ಚುಕಟ್ಟಿನ ನಿರ್ವಹಣೆಯೇ ಎಲ್ಲಾ  ಕಾರ್ಯಕ್ರಮಗಳಲ್ಲೂ ಪ್ರಮುಖಾಕರ್ಷಣೆ
ಎಲ್ಲೂ ಯಾರ ಮನದಲ್ಲೂ ಬೇಸರ ಮೂಡಿಸದ ತೆರದಿ, ಇದೆ ಸಂಯೋಜನೆ

ನೂರು ರೂಪಾಯಿಗಳಿಗೆ ಮೂರು ದಿನವೂ ವಾಹನ ವಸತಿ ಊಟೋಪಚಾರ
ಆ ಮೂರು ದಿನಗಳಲ್ಲೂ ಅಲ್ಲಿ ಯಾರೂ ತೋರಿದ್ದೇ ಇಲ್ಲ ಕಿಂಚಿತ್ತೂ ತಿರಸ್ಕಾರ

ಜೋಗವ ಮರೆತರೂ ಪರವಾಗಿಲ್ಲ, ಆಳ್ವಾಸ್ ನುಡಿಸಿರಿಯಲಿ ಭಾಗಿಯಾಗಿ ಬನ್ನಿ
ಆಳ್ವಾಸ್ ನುಡಿಸಿರಿಯಲ್ಲಿ ಭಾಗಿಯಾಗದ ಕನ್ನಡಿಗ ನಿಜಕ್ಕೂ ದುರ್ದೈವಿಯೇ ಅನ್ನಿ
********