ನಾನಂತೂ ಗೌಡಾ ಗೌಡಾ ಅನ್ನುತ್ತೇನೆ ನೀವೇನೇ ಅನ್ನಿ!

27 ಫೆಬ್ರ 09
ಅಂದು ಅದ್ಯಾವುದೋ ಪರದೇಶೀ ವಿಶ್ವವಿದ್ಯಾಲಯ ಗೌಡಾ
ನೀಡುತ್ತೇವೆಂದಾಗ ಹಿಂದು ಮುಂದು ನೋಡದೇ ಹೋದವರು
 
ಎಲ್ಲೂ ತುಟಿ ಪಿಟಕ್ಕೆನ್ನದೆ ನಾಲ್ಕಾರು ದಿನ ಹೊರ ದೇಶಗಳ
ಸುತ್ತಾಡಿ ತೆರಿಗೆ ಹಣವ ವ್ಯಯಿಸಿ ಪದವಿ ಸ್ವೀಕರಿಸಿ ಬಂದವರು
 
ಇಂದು ಜನ ಡಾಕ್ಟರ್ ಡಾಕ್ಟರ್ ಎಂದು ಗೌರವ ಪೂರ್ವಕವಾಗಿ 
ಸಂಬೋಧಿಸುತಿರಲು ಬೇಡ ಎಂದು ಅಂಗಲಾಚುತಿರುವುದೇಕೆ
 
ಅಂದೇ ಆ ಪದವಿಯ ತಿರಸ್ಕರಿಸಿ ತೆಪ್ಪಗೇ ಇರುವುದ ಬಿಟ್ಟು
ಯಡ್ಯೂರಪ್ಪ ಇಂದು ಸುಮ್ಮನೇ ಸುದ್ದಿ ಮಾಡುತ್ತಿರುವುದೇಕೆ?
 
ಪದವಿ ಬೇಕು ನನ್ನ ಮನೆಯ ಗೋಡೆಯಲಿ ರಾರಾಜಿಸುತಿರಲು
ಆದರೆ ಜನ ನನ್ನ ಅದರಿಂದ ಗುರುತಿಸಬಾರದು ಅನ್ನುವುದೇಕೆ
 
ಸಾರ್ವಜನಿಕ ವ್ಯಕ್ತಿಗಳ ವೈಯಕ್ತಿಕ ಜೀವನವೂ ಜನಮನವ
ಗೆಲ್ಲುವಂತಿರಬೇಕು, ಇಲ್ಲವಾದರೆ ಜನ ನಿಮ್ಮ ಗೆಲ್ಲಿಸುವುದೇಕೆ
 
ನಾನಂತೂ ನಿಮ್ಮನ್ನು ಗೌಡಾ ಗೌಡಾ ಅನ್ನುತ್ತೇನೆ ನೀವೇನೇ ಅನ್ನಿ
ಇಲ್ಲವಾದರೆ ಹಾಗನ್ನಬಾರದೆಂಬ ಹೊಸ ಕಾನೂನು ಜಾರಿಗೆ ತನ್ನಿ

ಇಂದು ನನ್ನ ಅಪ್ಪಯ್ಯನಿದ್ದಿರಬೇಕಿತ್ತು

27 ಫೆಬ್ರ 09
appayya
ಅಂದು ನನ್ನ ತಲೆಯ ಮೇಲಿದ್ದವು ದಪ್ಪನೇ ಕೂದಲುಗಳು
ಕತ್ತರಿಸಲು ತಡ ಮಾಡಿದರೆ ಸಿಕ್ತಿತ್ತು ಅಪ್ಪಯ್ಯನ ಬೈಗಳು
 
ವಿಚಿತ್ರ ಕ್ರಾಪುಗಳ ಹುಚ್ಚಿತ್ತು ಆಗ ಹುಡುಗನಾಗಿದ್ದ ನನಗೆ
ಹಣೆಯ ಮೇಲೆ ಕೂದಲ ಕಂಡರೆ ಕೋಪ ನನ್ನಪ್ಪಯ್ಯನಿಗೆ
 
ಎಣ್ಣೆ ಕಾಣದ ನಾರು ಕೂದಲು ಉದ್ದುದ್ದ ತಲೆಯ ಹಿಂದೆ
ಇದ್ದೆಲ್ಲಾ ಸಮಯ ವ್ಯಯವಾಗುತ್ತಿತ್ತು ಕನ್ನಡಿಯ ಮುಂದೆ
 
ಹೇಳಿದ್ದನ್ನು ಕೇಳದೇ ಇರುವುದರಲ್ಲಿ ಇತ್ತು ಆಗ ಗಮ್ಮತ್ತು
ಮುಂದೆ ನನ್ನ ತಲೆ ಹೀಗಾಗುತ್ತೆಂದು ಯಾರಿಗೆ ಗೊತ್ತಿತ್ತು
 
ಇಂದು ಕ್ರಾಪು ಮಾಡುವುದಕೆ ತಲೆಯ ಮೇಲೆ ಕೂದಲಿಲ್ಲ
ನನ್ನ ಗದರುವುದಕೆ ಜೊತೆಗೀಗ ನನ್ನ ಅಪ್ಪಯ್ಯನೂ ಇಲ್ಲ
 
ಹೋದ ಕೂದಲಿಗೆ ಇಲ್ಲ ಮರುಕ ಅಪ್ಪಯ್ಯನಿದ್ದಿರಬೇಕಿತ್ತು
ನನ್ನೆಲ್ಲಾ ಬರಹಗಳ ಓದಿ ಈ ಮಗನ ವಿಮರ್ಶಿಸಬೇಕಿತ್ತು
 
ಇದ್ದಾಗ ಅವರ ಮಾತ ಕೇಳದೇ ಸತಾಯಿಸಿದ್ದೆ ನಾನಾಗ
ತಪ್ಪು ಒಪ್ಪುಗಳ ಅರಿವು ಮಾಡಿಸುವವರೇ ಇಲ್ಲ ನನಗೀಗ
 
ಕೂದಲ ಹಿಂತಿರುಗಿಸಲಾಗದಿದ್ದರೆ ಚಿಂತಿಲ್ಲ ದೇವರೆ ನನಗೆ
ಅಪ್ಪಯ್ಯನ ಮರಳಿಸಿದೆಯಾದರೆ ಸಹಸ್ರ ನಮನಗಳು ನಿನಗೆ

ಪ್ರತಾಪ ಸಿಂಹ ಒಳ್ಳೆಯ ಬರಹಗಾರ ಎರಡು ಮಾತಿಲ್ಲ

26 ಫೆಬ್ರ 09
ಪ್ರತಾಪ ಸಿಂಹನ ಲೇಖನ ಓದಿ ಟೆಕ್ಕಿಗಳಿಗೀಗ ಸಿಟ್ಟು
ಇವನ ರಾಗ ಬೇರೆ, ಮೊದಲೇ ಉಣಲು ಇಲ್ಲಿಲ್ಲ ಹಿಟ್ಟು
 
ಜಾಣನಾಗಿದ್ದರೆ ಮುನ್ಸೂಚನೆ ನೀಡಿ ಎಚ್ಚರಿಸಬೇಕಿತ್ತು
ಗಾಯದ ಮೇಲೇಕೆ ಉಪ್ಪು ಸವರಿ ನೋಯಿಸಬೇಕಿತ್ತು
 
ಯಾರೂ ಅರಿತಿಲ್ಲ ಸ್ವಾಮಿ ನಾಳೆ ಏನಾಗುವುದೆಂದು
ನನಗರಿವೇ ಇಲ್ಲ ನಾ ನಾಳೆ ಬೆಳಗ ಕಾಣಬಹುದೆಂದು
 
ನಿನ್ನೆಯದಕೆ ಕೊರಗದಿರು ನಾಳೆಯ ಚಿಂತೆ ಮಾಡದಿರು
ಈ ವೇದವಾಕ್ಯವನು ಇಂದೇಕೆ ಎಲ್ಲರೂ ಮರೆತಿಹರು
 
ಟೆಕ್ಕಿಗಳಷ್ಟೇ ಅಲ್ಲ ಸ್ವಾಮೀ ಮಾಡಿದ್ದು ಖರ್ಚು ದುಬಾರಿ
ಹೊಲಗದ್ದೆ ಮಾರಿದ್ದ ರೈತನಲ್ಲೂ ಇದೆ ಟಾಟಾ ಸಫಾರಿ
 
ಕೈಯಲ್ಲಿ ಹಣವಿದ್ರೆ ಯಾರು ಮಾಡೋಲ್ಲ ಹೇಳಿ ಖರ್ಚು
ಟೆಕ್ಕಿಗಳ ಕಂಡು ಅನ್ಯರಿಗೆ ಆಗಿರಬಹುದು ಹೊಟ್ಟೆಕಿಚ್ಚು
 
ಟೆಕ್ಕಿಗಳ ಖರ್ಚಿನಿಂದ ತುಂಬಿತ್ತು ಅನ್ಯರದೂ ತಿಜೋರಿ
ಈಗ ಏನು ಪ್ರಯೋಜನ ಹೇಳಿ ಟೆಕ್ಕಿಗಳನ್ನಷ್ಟೇ ದೂರಿ
 
ಸಮಸ್ಯೆಗೆ ಪರಿಹಾರ ಒದಗಿಸುವ ಸಲಹೆ ನೀಡಬೇಕು
ಅನ್ಯಥಾ ಏಕೆ ಲೇಖನದಲಿ ಹೀಗೆ ಮೂದಲಿಸಬೇಕು
 
ಪ್ರತಾಪ ಸಿಂಹ  ಒಳ್ಳೆಯ ಬರಹಗಾರ ಎರಡು ಮಾತಿಲ್ಲ
ಸ್ವಲ್ಪ ಎಡವಿದ್ದಾನೆ, ಸರಿ, ಸುಧಾರಿಸಿಕೊಂಡರೆ ಚಿಂತಿಲ್ಲ

ನಮ್ಮ ರೆಹಮಾನ ನಿಜದಿ ಅಪ್ಪಟ ಭಾರತೀಯನಯ್ಯ

25 ಫೆಬ್ರ 09
ನಮ್ಮ ರೆಹಮಾನ ಈತ ನಿಜದಿ ಅಪ್ಪಟ ಭಾರತೀಯನಯ್ಯ
ಈತನನು ಹರಿದು ಹಂಚಿ ಈ ರೀತಿ ಚಿಂದಿ ಮಾಡಬೇಡಿರಯ್ಯ
 
ಮದರಾಸಿನವನೆಂದರೆ ಕೆಲವರು ಮುಂಬಯಿಯವನೆಂಬರು
ಏಕೆ ಮುಕ್ತ ಮನಸ್ಸಿನಿಂದಾತನನು ಭಾರತೀಯನೆಂದೆಂಬರು
 
ಅವನ ಸಂಗೀತಕ್ಕೆ ಕಿವಿಗೊಡುವಾಗ ನಿಮ್ಮಲ್ಲಿತ್ತೇ ಈ ಭಾವ
ಅವನ ತಾಳಕ್ಕೆ ಕುಣಿವಾಗ ಅನಿಸಿದೆಯೇ ಅಲ್ಲಿ ಭೇದ ಭಾವ
 
ಆತನ ಸಂಗೀತಕ್ಕಿಲ್ಲ ಜಾತಿ ಮತ ಪ್ರಾಂತ್ಯಗಳ ಸೀಮೆಗಳು
ಎಲ್ಲೆಂದರಲ್ಲಿ ಕಿವಿಗೆ ಬಿದ್ದಾಕ್ಷಣ ಮುದನೀಡುತ್ತವೆ ಗೀತೆಗಳು
 
ಹೋರಾಟದಲ್ಲಾತನಿಗೆ ಯಾರೂ ತನ್ನವನೆಂದು ಜೊತೆಕೊಟ್ಟಿಲ್ಲ
ಗೆದ್ದ ಎತ್ತಿನ ಬಾಲಹಿಡಿದು ತನ್ನತ್ತ ಜಗ್ಗುವವರೇ ಈಗ ಊರೆಲ್ಲಾ
 
ಭಾರತೀಯನನು ಭಾರತೀಯನಾಗೆ ಉಳಿಸಿಕೊಂಡು ಬಿಡೋಣ
ಯಾವ ಪ್ರಾಂತದವನೆಂಬುದ ಮರೆತಾತನನು ಕೊಂಡಾಣೋಣ
 
ಪ್ರತಿಭೆ ಯಾರದ್ದಾದರೇನು ತಕ್ಕ ಪುರಸ್ಕಾರ ದೊರೆಯಲೇ ಬೇಕು
ಪ್ರತಿಭೆಯ ಕೊಂಡಾಡಲು ಆತನ ವಿಳಾಸದ ಚರ್ಚೆ ಏಕೆ ಬೇಕು
 
ನಮ್ಮ ರೆಹಮಾನ ಈತ ನಿಜದಿ ಅಪ್ಪಟ ಭಾರತೀಯನಯ್ಯ
ಈತನನು ಹರಿದು ಹಂಚಿ ಈ ರೀತಿ ಚಿಂದಿ ಮಾಡಬೇಡಿರಯ್ಯ

Lets save our slums and let us take more awards!

25 ಫೆಬ್ರ 09
I have a new slogan and an appeal to our leaders,
Lets save our slums and let us take more awards;
 
Had there not been, in India, today, so many slums,
How could the film Slumdog, gather so many awards;
 
Only because of our slums, that, there was this realm,
It was liked, for, real scenes were there in the film;
 
Nothing is bad and everything has its own value,
If not today, some other day, all get their due;
 
What if, there are many stories told on Taj Mahal,
People applause only if, we narrate slums in a tale ;
 
I appeal to all our leaders, not to cleanse the slums,
Give chance to our people, to make a few more films;
 
I have a new slogan and an appeal to our leaders,
Lets save our slums and let us take more awards!

ಕೊಳಗೇರಿಗಳ ಉಳಿಸಿ ಬೆಳೆಸಿ ಗಳಿಸಿ ಬಹುಮಾನ!

23 ಫೆಬ್ರ 09
ನನ್ನದು ಇಂದಿನಿಂದ ಕೇಳಿ ಈ ಹೊಸ ಅಭಿಯಾನ
ಕೊಳಗೇರಿಗಳ ಉಳಿಸಿ ಬೆಳೆಸಿ ಗಳಿಸಿ ಬಹುಮಾನ
 
ಕೊಳಗೇರಿಗಳೇ ಇಲ್ಲದಿರುತ್ತಿದ್ದರೆ ಇಂದೇನಾಗುತ್ತಿತ್ತು
ಇಂದು ಇಷ್ಟೊಂದು ಪ್ರಶಸ್ತಿಗಳಲ್ಲಿ ಹೇಗೆ ಸಿಗುತ್ತಿತ್ತು
 
ಕೊಳಗೇರಿಗಳು ಇದ್ದುದಕೇ  ಚಿತ್ರ ನಿರ್ಮಾಣವಾಯ್ತು
ನೈಜತೆ ಹೆಚ್ಚಿದುದುದಕೆ ಜನ ಮೆಚ್ಚುಗೆಯೂ ಆಯ್ತು
 
ಕೆಟ್ಟದ್ದು ಯಾವುದೂ ಇಲ್ಲ ಎಲ್ಲದಕೂ ಇದೆ ಇಲ್ಲಿ ಬೆಲೆ
ಇಂದಲ್ಲದಿದ್ದರೂ ಮುಂದೊಂದು ದಿನ ಸಿಗುವುದು ಬೆಲೆ
 
ಲಾಲ್ ಬಾಗ್, ತಾಜಮಹಲುಗಳ ಕತೆ ಎಷ್ಟಿದ್ದರೇನು
ಜನ ಮೆಚ್ಚುವುದು ಕೊಳಗೇರಿಗಳ ಕತೆಯನಲ್ಲವೇನು
 
ಹಾಗಾಗಿ ನಾಯಕರೇ ಈ ಕೊಳಗೇರಿಗಳ ಅಳಿಸಬೇಡಿ
ನಮ್ಮವರಿಗೇ ಇನ್ನೊಂದು ಚಿತ್ರ ಮಾಡಲವಕಾಶ ನೀಡಿ
 
 
ನನ್ನದು ಇಂದಿನಿಂದ ಕೇಳಿ ಈ ಹೊಸ ಅಭಿಯಾನ
ಕೊಳಗೇರಿಗಳ ಉಳಿಸಿ ಬೆಳೆಸಿ ಗಳಿಸಿ ಬಹುಮಾನ

ಅವಳಾರೆಂದು ನೋಡೋಣ ನೀವೇ ಬಿಡಿಸಿ ಹೇಳಿ!

23 ಫೆಬ್ರ 09
ಇಂದು ಅದೇಕೋ ಆಕೆ ಇಲ್ಲಿ ನನ್ನ ಜೊತೆಗಿಲ್ಲ
ಅದಕೇ ನೋಡಿ ನನಗೀಗ ನೆಮ್ಮದಿಯೇ ಇಲ್ಲ
 
ವಾರಾಂತ್ಯದಲ್ಲಿ ನನ್ನ ಜೊತೆಜೊತೆಗೆ ಇದ್ದವಳು
ಇಂದು ನನ್ನೊಂದಿಗೆ ಬಾರದೇ ಉಳಿದಳವಳು
 
ಅವಳ ನನ್ನ ನಂಟು ಈಗ ಎರಡು ವರುಷಗಳಷ್ಟು
ಅವಳ ನನ್ನ ಸಖ್ಯ ಎಂದಿಗೂ ಬಿಟ್ಟಿರಲಾರದಷ್ಟು
 
ಚಿಕ್ಕವರ ನಾ ನಿರ್ಲಕ್ಷಿಸಿದಷ್ಟೂ ಕಡಿಮೆ ನನ್ನ ಕಷ್ಟ
ದೊಡ್ಡವರತ್ತ ಗಮನ ಹರಿಸುವುದು ಇಂದು ನನಗಿಷ್ಟ
 
ಅವಳಿಲ್ಲದ ಕೊರತೆ ಅರಿವಾಗುತಿದೆ ನನಗೆ ಸ್ಪಷ್ಟ
ಅವಳಿಲ್ಲದೆ ನನ್ನ ಮನಸ್ಸಿಗೆ ಇಂದೆಲ್ಲವೂ ಅಸ್ಪಷ್ಟ
 
ನನ್ನ ಮಾತಿನರ್ಥವ ಅರಿತಿರಾ  ಓದುಗರೇ ಹೇಳಿ
ಅವಳಾರೆಂದು ನೋಡೋಣ ನೀವೇ ಬಿಡಿಸಿ ಹೇಳಿ

ಸಿದ್ಧು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿಹನು!!!

20 ಫೆಬ್ರ 09

ಜಯಲಲಿತಾ ಇಲ್ಲಿ ಮತ್ತೆ ಕೈಯತ್ತ ವಾಲುತಿರೆ
ಮುಲಾಯಮನಲ್ಲಿ ಕಮಲವನ್ನೋಲೈಸುತಿಹನು

ಗೌಡರ ಮನೆಗಲ್ಲಿ ಕಾರಟ್ ದೌಡಾಯಿಸುತಿರೆ
ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು

ಮೊಯಿಲಿಗೆ ಆಂಧ್ರದಲಿ ಇನ್ನಾರೂ ಸಿಗದಿರಲು
ಅಜರುದ್ದೀನನಾಗಮನಕೇ ಖುಷಿ ಪಡುತಿಹನು

ಚುನಾವಣೆ ಬಂತೆಂದರೆ ಸಾಕು ರಾಜಕಾರಣಿ
ಕಟ್ಟಾವೈರಿಯ ಮನೆಯಂಗಳಕೂ ಕಾಲಿಡುವನು


ಮಾಜೀ ಮತ್ತು ಹಾಲಿ, ಇಬ್ಬರೂ ಜಾಲಿ!!!

20 ಫೆಬ್ರ 09

ಮಂಗ್ಳೂರ ಬೆಡಗಿಯ ಮನೆಯ ನಾಗ ಮಂಡಲಕೆ
ತೆರೆದೆದೆಯಲ್ಲಿ ಹಾಜರಾದ ಮಾಜೀ ಮುಖ್ಯಮಂತ್ರಿ

ಕುಮಾರಿ ಮಂತ್ರಿಯ ಸಹೋದರನ ಮದುವೆಯಲಿ
ಗುಟ್ಟಾಗಿ ಹಾಜರಾಗಿದ್ದ ನಮ್ಮ ಹಾಲಿ ಮುಖ್ಯಮಂತ್ರಿ

ಹಾಲಿ ಇರುವತನಕ ಎಲ್ಲರದೂ ಗುಟ್ಟಿನೊಳಗೆ ಗುಟ್ಟು
ಮಾಜಿಯಾದರೆ ಸಾಕು ಎಲ್ಲರ ಗುಟ್ಟೂ ಆಗುತ್ತದೆ ರಟ್ಟು

ಮಡದಿಯನು ರಾಜಕೀಯಕ್ಕಿಳಿಸಿ ಗೆಲ್ಲಿಸಿ ಸಂತೈಸಿದನಾತ
ಆತ್ಮಹತ್ಯೆ ಮಾಡಿಕೊಂಬಷ್ಟು ಪತ್ನಿಯ ಕೊರಗಿಸಿದನೇ ಈತ?


ನನ್ನ ಮನದೊಳಗೆ ಅನುಮಾನಗಳು!!!

19 ಫೆಬ್ರ 09

ಅಮೇರಿಕಾ ಮತ್ತು ಬಿನ್ ಲಾಡೆನ್ ನಡುವೆ
ಒಳ ಒಪ್ಪಂದ ನಡೆದಿರಬಹುದೇನೋ ಅಂತ

ಇಲ್ಲದೇ ಹೋಗಿದ್ದರೆ ಆತನನ್ನು ಬಂಧಿಸಲು
ಇನ್ನೂ ಅಸಾಧ್ಯವಾಗಿರುವುದು ಏಕೆ ಅಂತ

ಅಮೇರಿಕಾದ ಸೈನ್ಯದ ಮುಂಚೂಣಿಯಲ್ಲಿ
ಇದ್ದಂತಿದೆ ನೋಡಿ ಲಾಡೆನನಿಗೆ ಅಧಿಕಾರ

ಲಾಡೆನ ಹೋದ ಕಡೆ ಎಲ್ಲಾ ಅಮೇರಿಕಾ
ಹೋಗಿ ಸ್ಥಾಪಿಸುತ್ತಿದೆ ತನ್ನ ಅಧಿಕಾರ

ಅಫಘಾನಿಸ್ತಾನದಲಿ ತುಂಬಿಕೊಂಡಾಯ್ತು
ಅಮೇರಿಕಾ ಸೈನ್ಯದ ನೂರಾರು ತುಕುಡಿಗಳು

ಪಾಕಿಸ್ತಾನದ ಗಡಿಯೊಳಗೂ ನೋಡಿ ಈಗ
ಮುನ್ನುಗ್ಗಲಿವೆ ಅದೇ ಸೈನ್ಯದ ಗಾಡಿಗಳು

ಅಲ್ಲಿಂದ ಲಾಡೆನನ ಪಡೆ ಬಂದು ಭಾರತದ
ಗಡಿಯೊಳಗೆ ನುಸುಳಿಕೊಳ್ಳಲೂಬಹುದು

ಮುಂದೊಂದು ದಿನ ಅಮೇರಿಕಾ ಸೈನ್ಯವೂ
ಇಲ್ಲಿ ಹೇಳದೇ ಕೇಳದೆ ಬಂದಿಳಿಯಬಹುದು

ಇರಾಕ್ ಜೊತೆ ಯುದ್ಧದಲಿ ಇಸ್ರೇಲಿನ ಜನರೂ
ಕಾರಣವಿಲ್ಲದೇ ಸಾಯಬೇಕಾಯ್ತು ಅಂದು

ಇಲ್ಲಿ ಯುದ್ಧ ನಡೆದರೆ ತಿಳಿಯಿರಿ ನಿಸ್ಸಹಾಯಕ
ಭಾರತೀಯರೂ ಸಾಯಬೇಕಾದೀತೆಂದು

ನನ್ನ ಮನದೊಳಗೆ ತುಂಬಿ ಕೊಂಡಿರುವ
ಅನುಮಾನಗಳನಿಲ್ಲಿ ಬಹಿರಂಗ ಪಡಿಸಿದೆ

ಈ ಅನುಮಾನಗಳು ನಿಜವಾಗದಿರಲೆಂದು
ನನ್ನ ಮನ ಅದರ ಜೊತೆ ಜೊತೆಗೆ ಬೇಡಿದೆ