ಸಾಕು ದೇವರೇ ಇನ್ನು ಸದ್ಯಕ್ಕೆ ಯಾರ ಸಾವೂ ಬೇಡ!!!

30 ಡಿಸೆ 09

ಗಾನ ಗಾರುಡಿಗನಿಗಾಗಿ ಅತ್ತು ಕನ್ನಡಿಗರಿನ್ನೂ ಕಣ್ಣೊರೆಸಿಕೊಂಡಿಲ್ಲ
ಆಗಲೇ ಸಾಹಸಸಿಂಹನ ನಿಧನದ ವಾರ್ತೆ ಹೀಗೆ ಕಿವಿಗಪ್ಪಳಿಸಿತಲ್ಲ

ಗಾಯಕ ಅಶ್ವತ್ಥರಿಗಿನ್ನೂ ನಾ ಶ್ರದ್ಧಾಂಜಲಿ ಬರೆದು ಮುಗಿಸಲಾಗಿಲ್ಲ
ಅಷ್ಟರಲ್ಲೇ ನನ್ನ ಮೆಚ್ಚಿನ ನಟನ ಬಗ್ಗೆ ನಾ ಬರೆಯಬೇಕಾಗಿ ಬಂತಲ್ಲ

ಅರಿತಿಹೆ ನಾನಿಲ್ಲಿ ಯಾರೂ ಚಿರಂಜೀವಿಗಳಾಗಿ ಇರುವುದು ಅಸಾಧ್ಯ
ಆದರೂ ವಿಷ್ಣುವರ್ಧನರ ಅಕಾಲಿಕ ನಿಧನ ನಂಬಲೆನಗೆ ಕಷ್ಟ ಸಾಧ್ಯ

ವಿಷ್ಣು ಆಗಿಲ್ಲದಿರಬಹುದು ರಾಜಕುಮಾರರ ಮಟ್ಟವನ್ನು ಏರಿದ ನಟ
ಆದರೆ ಈತನ ಸಾವಿನಿಂದ ಆಗಿದೆ ಆ ಸಾವಿಗಿಂತಲೂ ಹೆಚ್ಚಿನ ನಷ್ಟ

ನಿವೃತ್ತರಾದವರು ಸತ್ತರಾಗುವ ನಷ್ಟ ಕುಟುಂಬದ ಆಪ್ತ ಬಂಧುಗಳಿಗೆ
ಸಕ್ರಿಯ ಕಲಾವಿದರ ಅಗಲಿಕೆಯ ನಷ್ಟ ಉದ್ದಿಮೆ ಅಭಿಮಾನಿ ಎಲ್ಲರಿಗೆ

ವಿಷ್ಣುವರ್ಧನರ ಅತ್ಯುತ್ತಮ ಚಿತ್ರ ಇನ್ನು ಮುಂದೆ ಬರಬಹುದಿತ್ತೇನೋ
ಇನ್ನೂ ಹತ್ತಿಪ್ಪತ್ತು ವರುಷ ಅವರು ನಟಿಸುತ್ತಲೇ ಇರಬಹುದಿತ್ತೇನೋ

ಯೌವನದ ಕೆಚ್ಚನ್ನು ಇನ್ನೂ ಜೀವನವಾಗಿರಿಸಿಕೊಂಡಿದ್ದ ಧೀಮಂತ
ನಟನಾ ಕೌಶಲ್ಯದಲ್ಲಿ ಆತ ನಿಜಕ್ಕೂ ಸರಿಸಾಟಿಯಿಲ್ಲದ ಶ್ರೀಮಂತ

ದುರಭ್ಯಾಸ, ರಾಜಕೀಯ, ಗುಮಾನಿಗಳಿಂದ ದೂರ ಇದ್ದ ಮನುಷ್ಯ
ಭೇದ ಭಾವ ಇಲ್ಲದಂತೆ ಕಲಾವಿದರೊಂದಿಗೆ ಬೆರೆಯುತ್ತಿದ್ದ ಮನುಷ್ಯ

ಅಗಲಿದ ಆತ್ಮಕ್ಕೆ ಭಗವಂತ ಚಿರ ಶಾಂತಿಯನ್ನು ಕರುಣಿಸಲೆನ್ನುವೆ
ಸಾಕು ದೇವರೇ ಇನ್ನು ಸದ್ಯಕ್ಕೆ ಯಾರ ಸಾವೂ ಬೇಡ ಎಂದೆನ್ನುವೆ

– ಆತ್ರಾಡಿ ಸುರೇಶ ಹೆಗ್ಡೆ.

Advertisements

ಈಗ ಮೂರೂ ಬಿಟ್ಟವರೇ ಅಧಿಕಾರದಲ್ಲಿರುವವರು!!!

24 ಡಿಸೆ 09

 

 

ಸ್ವಾಮೀ ನಾವೆತ್ತ ಸಾಗುತ್ತಿದ್ದೇವೆ ಅನ್ನುತ್ತಿರುವಿರೇಕೆ?

ನಾವೆಲ್ಲಿದ್ದೇವೆ ಈಗ ಎಂದು ನೀವು ಕೇಳ ಬಾರದೇಕೆ

 

ಅವರಿಗೆ ಮತದಾರನ ನೆನಪು ಚುನಾವಣೆ ಬಂದಾಗ

ಅಲ್ಲದೆ ಮತದಾರನೂ ಮರೆತಿರುವನು ಎಲ್ಲವನು ಆಗ

 

ಮತ ಹಾಕಿ ಪಡೆದು ಸರಕಾರವನ್ನು ಬೈಯುವ ಹಕ್ಕು

ಮುಂದೆ ಸರಕಾರದ ವಿರುದ್ಧ ಬಾಯಿಗೆ ಬಂದದ್ದನ್ನು ಕಕ್ಕು

 

ಮತ್ತೆ ಮತ ಹಾಕು, ಯಾಕೆಂದರೆ ಹಾಕದಿರುವುದಪರಾಧ

ಮತ ಗಿಟ್ಟಿಸಿಕೊಂಡವರು ಸದಾ ಮಾಡುತ್ತಿರಲಿ ಅಪರಾಧ

 

ಭ್ರಷ್ಟಾಚಾರ ಮತ್ತು ರಾಜಕೀಯ ಇವು ಎರಡು ಮುಖಗಳು

ನಾಣ್ಯ ಒಂದೇ ನಾಣ್ಯದ ಸಂಪಾದನೆಗೆ ಭಿನ್ನ ತಂತ್ರಗಳು

 

ಹೆಣ್ಣು ಹೊನ್ನು ಮಣ್ಣು ಇವು ಮೂರೂ ಈಗ ಚಾಲ್ತಿಯಲ್ಲಿವೆ

ಅವು ಇರುವಾಗ ಮತದಾರನ ನೆನಪಿಲ್ಲಿ ಹೇಳಿ ಯಾರಿಗಿದೆ

 

ಎಲ್ಲೇ ನೋಡಿ ಮೂರೂ ಬಿಟ್ಟವರೇ ಅಧಿಕಾರದಲ್ಲಿರುವವರು

ಮಾತೆತ್ತಿದರೆ ಜನಸೇವೆಗಾಗೆಂದು ದೇವರಾಣೆ ಹಾಕುವರು

**************************************


ಸಿಮಿ ಬಂದಿದ್ದಾಳೆ ಇಂದು ಮುಂಜಾವಿನಲಿ!!!

24 ಡಿಸೆ 09

ಸಖೀ,

ಅಬ್ಬಬ್ಬಾ ಅಂತೂ ಇಂತೂ ೨೦೦೯ರ ವರುಷ

ಮುಗಿಯಿತಲ್ಲಾ ಎನ್ನುವುದಕೇ ನಮಗೆ ಹರುಷ

 

ಆರ್ಥಿಕ ಹಿಂಜರಿತದಿಂದ ಬೆನ್ನಿಗೆ ಬಿದ್ದ ಪೆಟ್ಟು

ತಿಂದು ನಡೆಯುತ್ತಿದ್ದೆವಲ್ಲಾ ನಾವು ಕಷ್ಟಪಟ್ಟು

 

ವರುಷದ ಮೊದಲ ನಾಲ್ಕು – ಐದು ತಿಂಗಳು

ಕಾಡಿದವು ಮಗಳ ಪರೀಕ್ಷೆ – ಫಲಿತಾಂಶಗಳು

 

ಆಕೆ ಭರ್ಜರಿ ಫಲಿತಾಂಶ ಪಡೆದು ಗೆದ್ದುಬರಲು

ಮನೆ ಮನಗಳ ತುಂಬೆಲ್ಲಾ ಹರುಷದ ಹೊನಲು

 

ಆಕೆಯನು ದೂರದೂರಿಗೆ ಕಳುಹಿಸಿ ನೊಂದು

ಮೆತ್ತಗೆ ಚೇತರಿಸಿ ಕೊಂಡೆವು ನಾವಿಬ್ಬರಂದು

 

ನೆನೆದು ಬೇಸರಿಸಿದರೂ ಮನದಲ್ಲಿ ಸಂತೃಪ್ತಿ

ದಿನವೂ ಮಾತನಾಡಿಸಿದರಷ್ಟೇ ನಮಗೆ ತೃಪ್ತಿ

 

ಆ ನೂರ ಇಪ್ಪತ್ತೇಳು ದಿನಗಳಲಿ ನಮ್ಮ ಮನೆ

ಚಂದ್ರನಿಲ್ಲದ ಬಾನು ನಾ ಹೇಳುತ್ತಿಲ್ಲ ಸುಮ್ಮನೆ

 

ಒಂದು ದಿನ ಕರೆ ಮಾಡಲಾಗದೇ ನೊಂದಾಗ

ನನಗಾ ಮಾತಾಪಿತರ ನೋವಿನರಿವಾಯ್ತಾಗ

 

ನನ್ನನ್ನು ಸಾವಿರ ಮೈಲಿ ದೂರ ಕಳಿಸಿದ್ದರವರು

ಪತ್ರಗಳಿಗೆ ವಾರ ವಾರ ಕಾಯುತ್ತಿದ್ದವರವರು

 

ಎಂತಹ ನೋವ ನುಂಗಿ ಹರಸಿರಬಹುದು ನನ್ನ

ದೂರವಿದ್ದರೂ ದೂರ ಮಾಡಲೇ ಇಲ್ಲ ಅವರೆನ್ನ

 

ಅದು ಅಂದಿನ ಮಾತು ಕೇಳು ನೀ ಇಂದಿನದನು

ಇದಿರು ನೋಡುತ್ತಿದ್ದೆವು ನಾವು ಈ ಸುದಿನವನು

 

ಇಂದು ಮತ್ತೀಗ ನಮ್ಮ ಮನೆ ತುಂಬಿದೆ ನಲಿವಿನಲಿ

ಸಿಮಿ ಬಂದಿದ್ದಾಳೆ ಮಂಗ್ಳೂರಿಂದೀ ಮುಂಜಾವಿನಲಿ!!!

*********************************


೨೦೧೨ರ ಪ್ರಳಯ ಮತ್ತು ಒಬಾಮಾಗೆ ನೋಬೆಲ್!!!

18 ಡಿಸೆ 09

ಇನ್ನು ಮೂರು ವರುಷಗಳಲ್ಲಿ ಜಗದಿ ಆಗುವುದು ಪ್ರಳಯವಂತೆ

ಈ ಬಾರಿ ಸುಳ್ಳಲ್ಲ ಇದು ನಡೆಯುವುದಂತೂ ನಿಶ್ಚಯವಂತೆ

 

ತಮ್ಮ ತಮ್ಮ ಪತ್ರಿಕೆ, ಜ್ಯೋತಿಷ್ಯ, ಚಲನ ಚಿತ್ರ ಎಲ್ಲವುದರ

ಬೇಡಿಕೆಯನು ಹೆಚ್ಚಿಸಿಕೊಳ್ಳಲು ಎಲ್ಲರದು ನಾಟಕ ಅರಿತಿರಾ

 

ನಿಜವಾಗಿಯೂ ಇದನ್ನು ನಂಬಿದವನಿಲ್ಲಿ ಸಿಗಲಾರ ಒಬ್ಬನೂ

ನಂಬಿದ್ದರೆ ಹಾಕಲಾರ ಹತ್ತೈವತ್ತು ವರ್ಷಗಳ ಯೋಜನೆಗಳನು

 

ಯಡ್ಡಿ ರೆಡ್ಡಿಗಳಿಗೆ ಕರ್ನಾಟಕದಲ್ಲಿ ಇನ್ನೈವತ್ತು ವರ್ಷ ಆಳುವಾಸೆ

ಸೋನಿಯಾಳಿಗೆ ಮುಂದಿನ ಬಾರಿ ರಾಹುಲನನು ಏರಿಸುವಾಸೆ

 

ಆಡ್ವಾಣಿಗೆ ಮುಂದಿನ ಬಾರಿ ಗೆದ್ದು ಪ್ರಧಾನ ಮಂತ್ರಿ ಆಗುವಾಸೆ

ಇಸ್ರೋಗೆ ಚಂದ್ರನನು ದಾಟಿ ಮತ್ತೂ ಮುಂದುವರಿಯುವ ಆಸೆ

 

ರಾಧಿಕಾ ಗಂಡು ಹೆತ್ತರೆ ಮಗುವಿನಜ್ಜನಿಗೆ ಶುಕ್ರ ದೆಸೆಯಂತೆ ನಿಜಕ್ಕೂ

ಎಲ್ಲರ ಯೋಜನೆಗಳೂ ಬೆಳೆಯುತ್ತಲೇ ಇವೆ ಇಲ್ಲಿ ಉದ್ದ ಉದ್ದಕ್ಕೂ

 

ಎಲ್ಲವನ್ನೂ ಮರೆತು ಪ್ರಳಯದತ್ತ ಯೋಚಿಸುವ ಒಂದು ಪ್ರಾಣಿಯಿಲ್ಲ

ತಾನು ನಂಬದೇ ಇದ್ದರೂ ಪರರ ನಂಬಿಸುವ ಪ್ರಯತ್ನವೇ ಇಲ್ಲೆಲ್ಲಾ

 

ಆದರೆ ಅನಿಸುತ್ತೆ ಇದನ್ನು ನಂಬಿದವರು ನೋಬೆಲ್ ನೀಡುವವರೊಬ್ಬರೇ

ಅದಕ್ಕೇ ಕಾರ್ಯ ಸಾಧಿಸುವ ಮೊದಲೇ ಒಬಾಮಾಗೆ ಪ್ರಶಸ್ತಿ ನೀಡಿದರೇ?

******************************************************

(ನವಂಬರ್‍ನಲ್ಲಿ ಪ್ರಕಟವಾಗಿದ್ದ ಈ ಪುಟ ಅದೇಕೋ ಕಾಣೆಯಾಗಿತ್ತು. ಹಾಗಾಗಿ ಮತ್ತೆ ಸೇರಿಸಿದೆ ಇಂದು) 


ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ ಕನ್ನಡದ ಬೆಳವಣಿಗೆಯನ್ನು!!!

15 ಡಿಸೆ 09

 

 

ಕೆಲವಾರು ಅಂಗ್ಲಪದಗಳು ಕನ್ನಡವೇನೋ ಎಂದನಿಸುವಷ್ಟು ಹತ್ತಿರ

ಇನ್ನು ಕೆಲವು ಕನ್ನಡ ಪದಗಳು ಉಚ್ಛರಿಸಲೇ ಆಗದಂತಿವೆ ಭಯಂಕರ

 

ಪರರಿಗೆ ಅರ್ಥವಾಗುವ ಭಾಷೆಯೇ ಇರಬೇಕು ನಮ್ಮ ಸಂಭಾಷಣೆಯಲ್ಲಿ

ಸೋತಂತೆ, ನಾವು ಮಾತನಾಡಿದಾಗ ಅರ್ಥವಾಗದಂತಹ ಭಾಷೆಯಲ್ಲಿ

 

ಕನ್ನಡದಲಿ ಅನ್ಯಭಾಷಾ ಪದಗಳೇ ಬೇಡ ಎಂಬ ಮಡಿವಂತಿಕೆ ಬೇಕಿಲ್ಲ

ಆದರೆ ಎಲ್ಲಾ ಆಂಗ್ಲ ಪದಗಳನ್ನೂ ಕಂಗ್ಲೀಷಿಕರಿಸ ಬೇಕೆಂದೇನೂ ಇಲ್ಲ

 

ಅಭಿಯಂತರ ಇಂಜಿನೀಯರ್ ಆಗಿ ಉಳಿದರೆ ನಿಜಕ್ಕೂ ಎರಡು ಮಾತಿಲ್ಲ

ಆದರೆ ಗುತ್ತಿಗೆದಾರ  ಕಂಟ್ರಾಕ್ಟರ್ ಆಗಿಯೇ ಉಳೀಬೇಕಾದ ಅಗತ್ಯ ಇಲ್ಲ

 

ಆಂಗ್ಲ ಪರಭಾಷಾ ಪದಗಳಿಂದ ಸಂಪದ್ಭರಿತವಾಗಿರುವ ಮಾತಂತಿರಲಿ

ತನ್ನತನವನ್ನೇ ಕಳೆದುಕೊಂಡು ಪಡೆವ ಸಂಪತ್ತು ನಿಜದಿ ದೂರವಿರಲಿ

 

ಇಂತಹ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು

ಕನ್ನಡವನ್ನು ಸಾರಾಸಗಟಾಗಿ ಆಂಗ್ಲಕ್ಕಡವಿಡದಂತೆ ನೋಡಿಕೊಳ್ಳಬೇಕು

 

ಅಗತ್ಯ ಮತ್ತು ಅನಿವಾರ್ಯತೆಗಳೇ ನಿರ್ಧರಿಸಲಿ ಕನ್ನಡದ ಬೆಳವಣಿಗೆಯನ್ನು

ಒಟ್ಟಾರೆ ತಂದು ಸೇರಿಸದಿರೋಣ ಕನ್ನಡದಲಿ ಕನ್ನಡೇತರ ಭಾಷಾಪದಗಳನ್ನು


ಮೆಳ್ಳೆಗಣ್ಗಳ ಓ ನನ್ನ ಗೆಳತೀ!!!

10 ಡಿಸೆ 09

 

“ಗೆಳತೀ ನಿನ್ನಾ ಮೆಳ್ಳೆಗಣ್ಗಳ ಬಗ್ಗೆ ಅರ್ಧ ಕವನ ಬರೆದಿಟ್ಟಿರುತ್ತೇನೆ

ಪೂರ್ತಿ ಆದಾಗ ನಿನಗದನು ತೋರಿಸಿ ಮತ್ತೆ ಅಲ್ಲಿ ಪ್ರಕಟಿಸುತ್ತೇನೆ”

 

ಅರೇ, ನನ್ನನ್ನೇ ಕೇಳದೆ ನನ್ನ ಬಗ್ಗೆ ಅದು ಹೇಗೆ ಬರೆದೆ ನೀನು

ನೀನು ಬರೆದುದನೆಲ್ಲಾ ಕಣ್ಮುಚ್ಚಿಕೊಂಡು ಒಪ್ಪಬೇಕೇನು ನಾನು”

 

“ನಿನ್ನನ್ನು ಕೇಳದೇ ನಿನ್ನ ಮೆಳ್ಳೆಗಣ್ಗಳ ಬಗ್ಗೆ ಬರೆದಿದ್ದರೂ ಗೆಳತೀ

ನಿನ್ನ ಕೇಳಿಯೇ ಅದನು ಪ್ರಕಟಿಸುತ್ತೇನಂದೆನಲ್ಲ ಮಹರಾಯಿತೀ

 

ನಿನ್ನ ಭೇಟಿ ಆಗಬೇಕೆಂಬ ಇಚ್ಛೆ ಆದಾಗಲೆಲ್ಲಾ ನಾನಿನ್ನ ಬೇಡುತ್ತಿದ್ದೆ

ಪ್ರತಿ ಬಾರಿಯೂ ನೀನಾ ಮೆಳ್ಳಗಣ್ಗಳ ನೆಪಹೇಳಿ ಹೆದರಿಸುತಲಿದ್ದೆ”

 

“ಮೆಳ್ಳಗಣ್ಗಳು ನೆಪ ಅಲ್ಲ ಮತ್ತೆ ಆ ಮಾತು ಬರಿದೆ ಹೆದರಿಸಲೂ ಅಲ್ಲ

ನೀನೆಂದಾದರೂ ಭೇಟಿ ಆದಾಗ ನಿನಗೆ ನಿರಾಸೆಯಾಗಬಾರದಲ್ಲಾ

 

ಕಣ್ಗಳ ವಾಸ್ತವ ನಿನಗೆ ಗೊತ್ತಿರಲೆಂಬುದಷ್ಟೇ ನನ್ನೀ ಮನದ ಇಚ್ಛೆ

ನನ್ನನ್ನು ಭೇಟಿ ಆಗಲೇ ಬೇಕೆಂದು ನೀ ಹಿಡಿಯದಿರು ಹೀಗೆ ರಚ್ಚೆ”

 

“ನಿನ್ನನ್ನು ನಾ ಭೇಟಿ ಆದಾಗ ನನಗಾವ ನಿರೀಕ್ಷೆಯೂ ಇದ್ದಿರುವುದಿಲ್ಲ

ನಿರೀಕ್ಷೆಯೇ ಇಲ್ಲದಿದ್ದಲ್ಲಿ ನಿರಾಸೆಯ ಮಾತೂ ಅಲ್ಲಿ ಉಳಿದಿರುವುದಿಲ್ಲ

 

ನಿನ್ನ ನಿರ್ಮಲ ಸ್ನೇಹದ ಆಕಾಂಕ್ಷಿ ನಾನು ಬೇರೇನೂ ಬಯಸುವವನಲ್ಲ

ಭೇಟಿ ಆಗುವ ಇಚ್ಛೆ ಇದೆ ಸುಳ್ಳೇಕೆ ನಾನದನು ಮುಚ್ಚಿಡ ಬಯಸುವುದಿಲ್ಲ

 

ಭೇಟಿ ಆಗಲೇ ಬೇಕೆಂದೇನೂ ಇಲ್ಲ ಅದ ಒಪ್ಪುವುದು ಬಿಡುವುದು ನಿನ್ನಿಚ್ಛೆ

ದೇವರಲಿ ಭಕ್ತ ಬೇಡುವನು ವರ ನೀಡುವುದು ಬಿಡುವುದು ಅದು ದೈವೇಚ್ಛೆ”

 

“ಭೇಟಿ ಆಗಲೇ ಬೇಕೆಂದಿದ್ದರೆ ನಮ್ಮ ಭೇಟಿ ಆಗಿಯೇ ಆಗುವುದು ಸುಳ್ಳಲ್ಲ”

“ಭೇಟಿಯ ಬೇಡದೇ ಸುಮ್ಮನೆ ಕೂರುವವನು ಈ ನಿನ್ನ ಗೆಳೆಯನೂ ಅಲ್ಲ

 

ಪ್ರೀತಿ ಮತ್ತು ಭಕ್ತಿ ಇವೆರಡೂ ಸಮಾನ ಎಂದು ಭಾವಿಸುವವನು ನಾನು

ಸ್ನೇಹಿತರ ನಡುವೆ ನಿರ್ಮಲ ಪ್ರೀತಿ ಇದೆಯೆಂದು ನಂಬುವವನು ನಾನು”

 

“ಸ್ನೇಹವೆಂದರೇ ಅದು ನಿರ್ಮಲತೆ ಎಂದು ಸದಾ ನಂಬಿದವಳು ನಾನು

ನಿನ್ನಂತೆಯೇ ನಮ್ಮ ಭೇಟಿಗಾಗಿ ನಿಜದಿ ಹಾರೈಸುತ್ತಿರುತ್ತೇನೆ ನಾನೂ”

*********************************************


ಸಖೀ, ನನ್ನೀ ತಲೆಯೊಳಗೆ ಸಮಸ್ಯೆಗಳ ಸಂತೆ!!!

09 ಡಿಸೆ 09

“ಸಖೀ,

ನನ್ನೀ ತಲೆಯಲ್ಲೀಗ ನೂರೆಂಟು ಸಮಸ್ಯೆಗಳ ಸಂತೆ

ನನಗೋ ವಾರದಿಂದ ಏನೂ ಬರೆದಿಲ್ಲವೆಂಬ ಚಿಂತೆ”

 

“ಹೀಗೆಯೇ ಬರೆದು ಬಿಡು ನೂರೆಂಟು ಸಮಸ್ಯೆಗಳ ಸಂತೆ

ಅದರಿಂದಾಗಿ ನಿನಗೀಗ ಏನೂ ಬರೆದಿಲ್ಲ ಎಂಬಾ ಚಿಂತೆ”

 

“ನೋಡೀಗ ತಯಾರಾಗುತ್ತದೆ ಕವನ ಓದಿ ಹೇಳುವಿಯಂತೆ”

“ನೀನು ಬರೆದರೆ ಓದಲು ತಯಾರಾಗಿ ನಾ ಕೂತಿರುವೆನಂತೆ”

 

“ನೀನೆನ್ನ ಜೊತೆಗಿದ್ದು ನನ್ನ ಮೆದುಳ ಹೀಗೆ ಚಿವುಟುತಿರಲು

ಹರಿದು ಬರಬಹುದು ಸರಾಗವಾಗಿ ಇಲ್ಲಿ ಪದಪುಂಜಗಳು”

 

“ಗೊತ್ತಾಯಿತು ಗೊತ್ತಾಯಿತೆಂದೀ ಸಖಿಯು ಹೇಳುತಿಹಳು

ನಿನ್ನೀ  ಹೊಸ ಕವನದ ನಿರೀಕ್ಷೆಯಲಿಲ್ಲಿ ಕಾದು ಕೂತಿಹಳು”

 

“ದಿನವೂ ಒಂದೆರಡು ಮಾತ ನೀ ಆಡಿದರೆ ಎನ್ನೊಡನೆ ಸಖಿ

ನಂಬು ನನ್ನ ನಿಜಕೂ ನನಗಿಂತ ಜಗದಲ್ಲಿ ಇನ್ನಾರಿಲ್ಲ ಸುಖಿ”

 

🙂

 

“ನಕ್ಕು ಚಂದಿರನಂತೆ ಸುಮ್ಮನಿರಬೇಡ ಆಡು ಎರಡು ಮಾತ

ಚಂದಿರ ಮಾತಾಡ ಏಕೆಂದರೆ ಮಾತು ಬರದ ಮೂಕನಾತ”

 

🙂

 

“ಈ ಸಾಲುಗಳನ್ನೇ ಎತ್ತಿ ಹಾಕಿ ಬಿಡ್ತೇನೆ ನಾನೆನ್ನ ಬ್ಲಾಗಿನಲ್ಲಿ”

“ಜನರೆಲ್ಲಾ ಓದಿ ಪ್ರತಿಕ್ರಿಯಿಸಲಿ ಖುಷಿಪಡುತ್ತಿರೋಣ ನಾವಿಲ್ಲಿ!!!”

*****************************************